ವಿಷಯದ ವಿವರಗಳಿಗೆ ದಾಟಿರಿ

ಜನವರಿ 25, 2017

1

ಕಂಬಳ : ಸಂಸ್ಕೃತಿ ಉಳಿಸಲು ಬೇಕು ನಿಮ್ಮ ಬೆಂಬಲ

‍ನಿಲುಮೆ ಮೂಲಕ

– ಡಾ. ಸಂತೋಷ್ ಕುಮಾರ್ ಪಿ.ಕೆ

860897a4867e00f161e4236fd7fe5aeeಕಂಬಳ : ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಡೆಯುವ ಈ ಜಾನಪದ ಶೈಲಿಯ ಕ್ರೀಡೆಯು ಕೇವಲ ಮನೊರಂಜನೆ ಸರಕಾಗಿ ಮಾತ್ರ ಉಳಿದಿರದೆ, ಸಂಸ್ಕೃತಿಯ ಭಾಗವಾಗಿಯೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡುಬಂದಿದೆ. ಜನಮಾನಸದಲ್ಲಿ ಹಚ್ಚಹಸುರಾಗಿ ಉಳಿಯುವ ಹಲವಾರು ಸಂಗತಿಗಳಲ್ಲಿ ಸಂಸ್ಕೃತಿಯ ಭಾಗವಾಗಿರುವ ಇಂತಹ ಕೆಲವಾರು ಸಂಗತಿಗಳು ಎನ್ನಬಹುದು. ಕರ್ನಾಟಕದ ಹಲವಾರು ಭಾಗಗಳಲ್ಲಿ ಇಂತಹ ವಿಶೇಷ ಸಾಂಸ್ಕೃತಿಕ ಆರಣೆಗಳು ಇನ್ನೂ ಅಸ್ತಿತ್ವದಲ್ಲಿವೆ. ಅವುಗಳ ಮೂಲಕವೆ ಆಯಾ ಭಾಗದ ಸಂಸ್ಕೃತಿ ಮೆರುಗು ಪಡೆಯುವ ಜೊತೆಗೆ, ತನ್ನನ್ನು ತಾನು ಬಿಂಬಿಸಿಕೊಳ್ಳುತ್ತದೆ. ಇವುಗಳನ್ನು ಸರಿಯಾದ ಕ್ರಮದಲ್ಲಿ ಅರ್ಥೈಸಿಕೊಂಡರೆ ಭಾರತೀಯ ಸಂಪ್ರದಾಯ ಮತ್ತು ಅದರ ಸತ್ವದ ನೈಜ ಅರಿವು ನಮಗೆ ದೊರಕುತ್ತದೆ. ಆದರೆ, ಆಧುನಿಕರಾಗುವ ಭರದಲ್ಲಿ ಅವುಗಳನ್ನು ಬದಿಗೆ ತಳ್ಳುತ್ತಿರುವ ಸೋ ಕಾಲ್ಡ್ ಆಧುನೀಕರು ಒಂದೆಡೆಯಾದರೆ, ಅದನ್ನು ಶತಾಯಗತಾಯ ಹತ್ತಿಕ್ಕುವ ನಶೆ ಸರ್ಕಾರಗಳಿಗೆ ಮತ್ತು ದಯಾ ಪರಪರ ಸಂಘಗಳಿಗೆ ಏರಿರುವುದು ಮತ್ತೊಂದು ಕಡೆ. ಸಂಪ್ರದಾಯ ಸಂಸ್ಕೃತಿಗಳಿಗೆ ಬಲವಾದ ಪೆಟ್ಟು ನೀಡುವುದು ಬ್ರಿಟೀಷರ ಸರ್ಕಾರದಿಂದ ಹಿಡಿದು ಆಧುನಿಕ ಸರ್ಕಾರ, ನ್ಯಾಯಾಂಗಗಳವರೆಗೂ ಯಾವುದೇ ಅಡೆತಡೆಯಿಲ್ಲದೆ ಬೆಳೆದುಕೊಂಡುಬಂದಿದೆ. ಇದರ ಒಂದು ಝಲಕ್ ಇತ್ತೀಚೆಗೆ ಕಂಬಳದಿಂದ ಪ್ರಾರಂಭವಾಗಿದೆ.

ಬ್ರಿಟೀಷ್ ಕಾನೂನು ವ್ಯವಸ್ಥೆ ಭಾರತದಲ್ಲಿ ಅಸ್ತಿತ್ವಕ್ಕೆ ಬಂದಂತಹ ಸಂದರ್ಭದಲ್ಲಿ ಎಲ್ಲವನ್ನೂ ಸೆಕ್ಯುಲರ್ ಗೊಳಿಸುವ ಹುಮ್ಮಸ್ಸಿನಲ್ಲಿ ಭಾರತೀಯರ ಹಲವಾರು ಸಂಪ್ರದಾಯಗಳನ್ನು ಪ್ರಶ್ನಿಸಲಾಯಿತು. ಸ್ವಾತಂತ್ರ್ಯ, ಸಮಾನತೆ ಎಂದು ಬೊಬ್ಬಿಕ್ಕುವ ಆಧುನಿಕ ವ್ಯವಸ್ಥೆಯ ಸರದಾರರುಗಳೇ ಅವರ ತತ್ವಗಳಿಗೆ ವಿರುದ್ಧವಾಗಿ ನಿಷೇಧ ಕ್ರಮ ಹೇರುವ ಮಟ್ಟಿಗೆ ಅಜ್ಞಾನವನ್ನು ಪ್ರದರ್ಶಿಸಿಬಿಡುತ್ತಾರೆ. ಅದೇನೆ ಇರಲಿ, ಸಂಪ್ರದಾಯ, ಸಂಸ್ಕೃತಿಗಳನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲವೆಂದರೆ, ಏಕೆಂದರೆ ಯಾರೂ ಬೇಕಾದರೂ ಬಾಯಿಗೆ ಬಂದ ಹಾಗೆ ಮಾತನಾಡುವಷ್ಟರ ಮಟ್ಟಿಗೆ ನಮ್ಮ ಸಂಪ್ರದಾಯಗಳು ಮುಕ್ತವಾಗಿವೆ. ಅದೇ ನೆಪವನ್ನಿಟ್ಟುಕೊಂಡು ಹಲವಾರು ಗಂಜಿಗಿರಾಕಿಗಳು ಇಂದು ತಮ್ಮ ಜೀವನನ್ನು ಸುಖವಾಗಿ ನಡೆಸುತ್ತಿದ್ದಾರೆ. ಆದರೆ, ಆಚರಿಸುವವರು ಹಾಗೂ ಆಚರಿಸಿಕೊಳ್ಳುವವರಿಗೆ ಯಾವುದೇ ತೊಂದರೆ ಇಲ್ಲದಿರುವಾಗ ಸುಖಾಸುಮ್ಮನೆ ಅವುಗಳಲ್ಲಿ ಕೈಯಾಡಿಸುವುದು ಯಾವ ಸೀಮೆಯ ನ್ಯಾಯ ಎನ್ನುವುದು ಅರ್ಥವಾಗುವುದಿಲ್ಲ. ಮಡೆಸ್ನಾನದ ವಿಷಯದಲ್ಲಿ ನಡೆದ ಅಷ್ಟೂ ಹೋರಾಟಗಳನ್ನು ನೆನಪಿಸಕೊಂಡರೆ, ಅಲ್ಲಿ ನಡೆದ ಎಲ್ಲಾ ಎಡವಟ್ಟುಗಳು ನಮಗೆ ತಿಳಿದುಬರುತ್ತವೆ. ಕೊನೆಗೂ ಜನರಿಗೆ ಸ್ಪಂದಿಸಿದ ನ್ಯಾಯಾಂಗ ಪಟ್ಟಭದ್ರ ದಡ್ಡರ ಹಿತಾಸಕ್ತಿಗಳನ್ನು ಮೂಲೆಗುಂಪು ಮಾಡಿತು ಎನ್ನುವುದು ಬೇರೆಯ ವಿಚಾರ.

ಭಾರತೀಯ ಸಮಾಜದ ಪರಂಪರೆಯನ್ನು ಉಳಿಸಬೇಕೆಂದು ಭೌದ್ದಿಕವಾಗಿ ಹೋರಾಟವನ್ನು ಕೈಗೊಂಡ ಅನೇಕ ಸಾಹಿತ್ಯಾಸಕ್ತರು ತಮ್ಮನ್ನು ತಾವು ಜಾನಪದ ವಿದ್ವಾಂಸರು ಎಂದು ಗುರುತಿಸಿಕೊಂಡಿದ್ದಾರೆ. ಹಲವಾರು ಬುಡಕಟ್ಟು, ಹಾಗೂ ಪರಿಶಿಷ್ಟ ಪಂಗಡಗಳ ಆಚಾರ ವಿಚಾರಗಳನ್ನು ಅಧ್ಯಯನ ನಡೆಸಿ ರಾಶಿ ರಾಶಿ ಪುಸ್ತಕಗಳನ್ನು ಬರೆದು ಹಾಕಿದ್ದಾರೆ. ಮೇಲ್ನೋಟಕ್ಕೆ ಅವರ ಕಾಳಜಿ ಲಿಖಿತ ರೂಪದಲ್ಲಿಲ್ಲದ ಸಂಸ್ಕೃತಿಯನ್ನು ಉಳಿಸುವುದೇ ಆಗಿದ್ದರೂ, ಅಂತಹ ನಿಚ್ಚಳ ಪ್ರಯತ್ನ ಮಾತ್ರ ಇದುವರೆಗೂ ಕಂಡುಬಂದಿಲ್ಲ. ಸಂಪ್ರದಾಯಗಳನ್ನು ಉಳಿಸಿಕೊಳ್ಳಬೇಕೆಂದು ಕರುಬುವ ವಿದ್ವಾಂಸರು ಅಂತಹ ಪ್ರಯತ್ನದಿಂದ ದೂರ ಉಳಿದಿರುವುದು ವಿಪರ್ಯಾಸವೇ ಸರಿ. ಈ ಪೀಠಿಕೆಯನ್ನು ಹಾಕಲು ಕಾರಣ, ಕಂಬಳವೂ ಸಹ ಅಂತಹ ಸಾಂಪ್ರದಾಯಿಕ ಆಚರಣೆಯ ಒಂದು ಭಾಗವಾಗಿದೆ, ಅದನ್ನು ನಿಷೇಧಿಸಬೇಕೆಂದು ಉಚ್ಚ ನ್ಯಾಯಾಲವು ಆದೇಶಿಸಲು ಹೊರಟಾಗ ಯಾವೊಬ್ಬ ಸೋಕಾಲ್ಡ್ ವಿದ್ವಾಂಸರು ಬಾಯಿ ತೆರೆಯದಿರುವುದು ಅವರ ಹಿಪೋಕ್ರಸಿಗೆ ಹಿಡಿದ ಕೈಗನ್ನಡಿಯಾಗಿದೆ. ಈ ಮೂಲಕ ನಮಗೆ ತಿಳಿದು ಬರುವ ಸಂಗತಿಯೆಂದರೆ, ಇವರು ನಡೆಸುವ ಅಧ್ಯಯನಗಳಾಗಲಿ ಹಾಗೂ ಸರ್ಕಾರ, ನ್ಯಾಯಾಲಯಗಳು ಹೇರುವ ನಿಷೇಧಗಳಾಗಲಿ ನಮ್ಮ ಸಂಪ್ರದಾಯವನ್ನು ಅರ್ಥೈಸಿಕೊಳ್ಳುವಲ್ಲಿ ಅಸಮರ್ಥವಾಗಿವೆ ಎಂಬುದು ಮಾತ್ರ.
ಕಂಬಳವನ್ನು ಯಾವ ಆಧಾರದ ಮೇಲೆ ನಿಷೇಧ ಮಾಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ ಎನ್ನುವುದನ್ನು ಅರ್ಥೈಸಿಕೊಳ್ಳಬೇಕಾಗಿದೆ. ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೇಟಾ) ಸಂಘಟನೆಯು ಪ್ರಾಣಿಗಳಿಗೆ ಹಿಂಸೆಯಾಗುತ್ತಿದೆ ಎನ್ನುವ ಆಧಾರದ ಮೇಲೆ ಕಂಬಳಕ್ಕೆ ನಿಷೇಧವನ್ನು ಹೇರಬೇಕೆಂದು ನ್ಯಾಯಾಲಯದ ಮೊರೆಹೋಗಿದ್ದು ಈಗ ಇತಿಹಾಸ. ಆದರೆ ಆ ಸಂಘಟನೆಯು ಯಾವ ಆಧಾರದ ಮೇಲೆ ನಿಷೇಧ ಹೇರಬೇಕೆಂದು ವಾದಿಸುತ್ತದೆಯೋ ಆ ವಾದದ ಪ್ರಸ್ತುತತೆಯನ್ನು ನಾವು ಗಮನಿಸಬೇಕಾಗುತ್ತದೆ. ನಮ್ಮ ಮನರಂಜನೆಗಾಗಿ ಪ್ರಾಣಿಗಳನ್ನು ಬಳಸಬಾರದು ಎನ್ನುವ ಧ್ಯೇಯವಾಕ್ಯದೊಂದಿಗೆ ಪ್ರಾರಂಭವಾಗಿರುವ ಈ ಸಂಘಟನೆಯು, ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಕಂಬಳ ನಿಷೇಧಿಸುವಂತೆ ಸುತ್ತೋಲೆಯನ್ನು ಕಳುಹಿಸಿತ್ತು. ಅದರ ಪ್ರಕಾರ, ಭಾರತ ಸರ್ಕಾರದ 1960 ರ ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಇದನ್ನು ನಿಲ್ಲಿಸಬೇಕೆಂದು ಮನವಿ ಸಲ್ಲಿಸಲಾಯಿತು. ಪ್ರಾಣಿಗಳು ನಮ್ಮ ಸ್ವತ್ತಲ್ಲ, ಅವುಗಳನ್ನು ಹಿಂಸಿಸಲು, ತಿನ್ನಲು ಹಾಗೂ ನಮ್ಮ ಮನೋರಂಜನೆಗಾಗಿ ಬಳಸಲು ನಮಗೆ ಯಾವುದೇ ಹಕ್ಕಿಲ್ಲ ಎಂದು ಪ್ರತಿಪಾದನೆ ಮಾಡಿತು. ಅದರ ಆಧಾರದ ಮೇಲೆ ಮಧ್ಯಂತರ ನಿಷೇಧಾಜ್ಞೆಯನ್ನು ನ್ಯಾಯಾಲಯ ನೀಡಿತ್ತು. ಈಗ ನಮ್ಮ ಮುಂದೆ ಬರುವ ಪ್ರಶ್ನೆ ಎಂದರೆ, ಪ್ರಾಣಿಗಳ ಹಕ್ಕು ಎಂದು ಮಾತನಾಡುವಾಗ ಏನೆಂದು ಮಾತನಾಡುತ್ತಿದ್ದೇವೆ ಎನ್ನುವುದು? ಖಂಡಿತವಾಗಿ ಇದೊಂದು ಪ್ರಭೇದ ದೋಷವಾಗಿದೆ.

ಸರ್ಕಾರ, ಸಂವಿಧಾನಗಳು ಅಸ್ತಿತ್ವಕ್ಕೆ ಬಂದ ನಂತರ ಮನುಷ್ಯರಿಗೆ ಹಕ್ಕುಗಳು ಪ್ರಾಪ್ತಿಯಾದವು ಎನ್ನುವುದು ಜನಜನಿತವಾದ ಸತ್ಯವಾಗಿದೆ. ಮನುಷ್ಯರಿಗೆ ಇರುವ ಹಕ್ಕುಗಳನ್ನು ಸಮರ್ಥಿಸಿಕೊಳ್ಳಲು ಇರುವ ಮೂಲಭೂತ ತಳಹದಿ ಎಂದರೆ, ಆತ ಪ್ರಾಣಿಗಳಿಗಿಂತ ವಿಭಿನ್ನವಾಗಿದ್ದು, ವೈಚಾರಿಕ ಜೀವಿಯಾಗಿದ್ದಾನೆ, ಆದ್ದರಿಂದ ಆತನಿಗೆ ಹಕ್ಕುಗಳಿರಬೇಕು, ಅದರ ಮೂಲಕ ತನ್ನ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎನ್ನುವುದು ಹಕ್ಕುಗಳ ಪ್ರತಿಪಾದನೆಯ ಹಿಂದಿರುವ ಸಂಗತಿಯಾಗಿದೆ. ಆದ್ದರಿಂದಲೇ ಅದನ್ನು ರಕ್ಷಿಸಲು ಹಲವಾರು ಸುತ್ತಿನ ರಕ್ಷಣಾ ವ್ಯವಸ್ಥೆಯನ್ನು ಸಹ ನಿರ್ಮಿಸಿಕೊಳ್ಳಲಾಗಿದೆ. ಬದುಕಲು ಸೂರು, ದುಡಿಯಲು ಕೆಲಸ, ಹಾಗೂ ಅಗತ್ಯ ವಸ್ತುಗಳನ್ನು ಪಡೆಯಲು ಇರುವ ಅವಕಾಶಗಳನ್ನು ನಿರ್ಮಿಸಿಕೊಳ್ಳುವುದೇ ಹಕ್ಕುಗಳ ಪ್ರಮುಖ ಪ್ರತಿಪಾದನೆಯಾಗಿದೆ. ಇದನ್ನೆ ಈಗ ಪ್ರಾಣಿಗಳಿಗೆ ಅನ್ವಯಿಸಿ ನೋಡುವ? ಪ್ರಾಣಿಗಳು ಮನುಷ್ಯನಂತೆ ಒಂದು ಜೀವಿಯೇ? ಜೀವಶಾಸ್ತ್ರದ ಆದಾರದ ಮೇಲೆ ಕೆಲವೊಂದು ಸಾಮ್ಯತೆ ಮನುಷ್ಯನಿಗೂ ಪ್ರಾಣಿಗೂ ಇದ್ದರೂ ಸಹ ಸೋ ಕಾಲ್ಡ್ ವೈಚಾರಿಕತೆಯ ಆಧಾರದ ಮೇಲೆ ಭಿನ್ನತೆಯನ್ನು ಹೊಂದಿರುವುದು ಮಾತ್ರ ಸತ್ಯ. ಮನುಷ್ಯನಿಗೆ ಇರುವ ಅವಕಾಶಗಳು ಪ್ರಾಣಿಗಳಿಗೆ ಇಲ್ಲ, ಹಾಗೂ ಅದರ ಅಗತ್ಯವೂ ಇದೆಯೋ ಇಲ್ಲವೋ ನಮಗೆ ಗೊತ್ತಿಲ್ಲ, ಆದರೂ ಪ್ರಾಣಿ ಹಕ್ಕು ಪ್ರತಿಪಾದಕರು ಮನುಷ್ಯರಿಗಿರುವ ಹಕ್ಕುಗಳು ಪ್ರಾಣಿಗಳಿಗೂ ಇವೆ ಎನ್ನುವ ಪ್ರಭೇದ ದೋಷವನ್ನು ಮಾಡುತ್ತಿರುವುದು ಮಾತ್ರ ಸ್ಪಷ್ಟವಾಗಿ ಗೋಚರವಾಗುತ್ತದೆ. ಆದ್ದರಿಂದ ಯಾವ ಆಧಾರದ ಮೇಲೆ ಪೇಟಾ ತನ್ನ ವಾದವನ್ನು ಮಂಡಿಸುತ್ತಿದೆಯೋ ಅದರಲ್ಲಿಯೇ ಪ್ರಧಾನವಾಗಿ ದೋಷವಿದೆ ಎನ್ನುವುದು ನನ್ನ ಅನುಮಾನ. ಇನ್ನು ಇದನ್ನೇ ವೇದವಾಕ್ಯ ಎಂಬಂತೆ ಕಂಬಳವನ್ನು ನಿಷೇಧಿಸಬೇಕು ಎನ್ನುವುದು ಅರ್ಥಹೀನ.

ಇವರ ಮತ್ತೊಂದು ವಾದವಾದ ಹಿಂಸೆಯನ್ನು ನೋಡುವ.
ಪ್ರತಿಯೊಂದು ಕಲಿಕೆಯು ತುಂಬಾ ಮೇದುವಾಗಿ ನಡೆಯಬೇಕೆಂದರೆ ಅದು ಕಲಿಕೆಯಾಗದೆ, ಕಲಿಕೆಯ ನಾಟಕವಾಗುತ್ತದೆ. ಮನುಷ್ಯರಾಗಲಿ ಅಥವಾ ಪ್ರಾಣಿಗಳಿಗಾಗಲಿ, ನಿರ್ಧಿಷ್ಟ ವಿಷಯದ ಕುರಿತು ಕಲಿಸುವಾಗ ಅಥವಾ ಆ ಪ್ರಕ್ರಿಯೆಯೊಳಗೆ ಸೇರ್ಪಡಿಸಬೇಕಾದರೆ, ದಂಡಂ ದಶಗುಣಂ ಅಗತ್ಯವಾಗಿರುತ್ತದೆ. ಆಗ ಮಾತ್ರವೆ ಹದ್ದುಬಸ್ತಿಗೆ ಬರಲು ಸಾಧ್ಯವಾಗುತ್ತದೆ. ಕೆಸರು ಗದ್ದೆಯಲ್ಲಿ ಕೋಣಗಳನ್ನು ಓಡಿಸಲು ಚಾಕಚಕ್ಯತೆಯ ಜೊತೆಜೊತೆಗೆ ಪ್ರಾಣಿಗಳನ್ನು ಪಳಗಿಸುವುದು ಅತ್ಯಗತ್ಯ. ಕಲಿಕೆಯ ನಿರಂತರತೆಯು ಪಳಗಿಸುವಿಕೆಯಲ್ಲಿಯೂ ಅಡಿಗಿದೆ ಎಂದರೆ ತಪ್ಪಾಗಲಾರದು. ಆನೆಯನ್ನು ಪಳಗಿಸುವಾಗ ತನ್ನ ಮಾತನ್ನು ಕೇಳಲು ಮಾವುತ ನಿರಂತವಾಗಿ ಕಿವಿಯ ಬಳಿ ಚುಚ್ಚುತ್ತಿರುತ್ತಾನೆ, ಡಾಗ್ ಸ್ಕ್ವಾಡ್ನ ತರಬೇತಿಯಂತೂ ಹೇಳತೀರದು, ಇನ್ನ ಮನುಷ್ಯನೊಂದಿಗೆ ವಾಸಿಸುವ ಬಹುತೇಕ ಪ್ರಾಣಿಗಳು ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಹಿಂಸೆಯ ಪ್ರಕ್ರಿಯೆಗೆ ಒಳಗಾಗುತ್ತಲೇ ಇರುತ್ತವೆ, ಅದರ ಅರ್ಥ ಹಿಂಸೆ ಮಾಡುವುದು ಪಳಗಿಸುವಿಕೆಯ ಅತ್ಯಂತಿಕ ಗುರಿಯಾಗಿರುವುದಿಲ್ಲ, ಬದಲಿಗೆ ಅದೊಂದು ಅಂಶ ಮಾತ್ರ. ಇಂತಹ ಮನುಷ್ಯ ಸಹಜವಾದ ಸಾಮಾನ್ಯ ಜ್ಞಾನವನ್ನೂ ಹೊಂದಿಲ್ಲದೆ ಪಾಂಡಿತ್ಯದ ತರ್ಕ ಮಾಡುವುದು ಎಷ್ಟರ ಮಟ್ಟಿಗೆ ಸರಿ?

ಯಾವುದೇ ಕ್ರೀಡೆಯಲ್ಲಿ ಭಾಗವಹಿಸುವುದು ಎಂದರೆ ಅದಕ್ಕೆ ಅಗತ್ಯ ತಾಲೀಮುಗಳನ್ನು ಮಾಡಿಕೊಂಡಿರಬೇಕು ಎನ್ನುವುದು ಅರ್ಥ. ಅಭ್ಯಾಸವನ್ನು ಮಾಡಬೇಕಾದರೆ, ಮನೆಯಲ್ಲಿನ ಸೋಫಾ ಮೇಲೆ ಕುಳಿತು ಅಥವಾ ಮಂಚದ ಮೇಲೆ ಆರಾಮಾಗಿ ಮಲಗಿಕೊಂಡು ಮಾಡಲು ಸಾಧ್ಯವಿಲ್ಲ. ಬದಲಿಗೆ ಮೈದಾನಕ್ಕೆ ಬಂದು ಅಗತ್ಯವಿರುವ ವ್ಯಾಯಾಮ, ತರಬೇತಿ, ಬೈಗುಳ, ಹೊಡೆತ ಇವೆಲ್ಲವುಗಳನ್ನು ಅನುಭವಿಸಿದ ನಂತರವೆ ಕ್ರೀಡೆಯಲ್ಲಿ ಭಾಗವಹಿಸಲು ಸಾಧ್ಯ. ಖೋ ಖೋ, ಕಬ್ಬಡ್ಡಿ ಆಡಿದ ನೆನಪು ಹಾಗೂ ಅವುಗಳನ್ನು ಕಷ್ಟಪಟ್ಟು ಕಲಿತ ವಿಧಾನ ನನಗಿನ್ನೂ ಹಚ್ಚ ಹಸುರಾಗಿಯೇ ಇದೆ. ಇಂತಹ ಕಲಿಕೆಯ ಪ್ರಕ್ರಿಯೆಯಲ್ಲಿ ದೇಹ ದಂಡನೆಯಾಗದ ಹೊರತು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಸಾವಿರ ಉಳಿಪೆಟ್ಟು ಬಿದ್ದರೆ ಮಾತ್ರ ಒಂದು ಕಲ್ಲು ಶಿಲೆಯಾಗಲು ಸಾಧ್ಯ, ಪೆಟ್ಟು ಬೀಳುವುದೇ ಬೇಡವೆಂದರೆ ಕಲ್ಲು ಕೇವಲ ಕಲ್ಲಾಗಿಯೇ ಉಳಿಯುತ್ತದೆ. ಹಾಗಾಗಿ, ಕ್ರೀಡೆಯಲ್ಲಾಗಲಿ, ಅಥವಾ ಕಲಿಕೆಯಲ್ಲಾಗಲಿ ದೇಹ ದಂಡನೆ ಎನ್ನುವುದು ಅನಿವಾರ್ಯವಾಗಿರುತ್ತದೆ. ಅದರಿಂದ ದೇಹಕ್ಕೆ ಕೊಂಚ ಆಯಾಸ ಎನಿಸಿದರೂ, ಹಿಂಸೆ ಎನಿಸಿದರೂ ಅದನ್ನು ಮಾಡದೆ ವಿಧಿ ಇಲ್ಲ. ಆದ್ದರಿಂದ ಕೋಣಗಳಿಗೆ ಹಿಂಸೆ ನೀಡುತ್ತಾರೆ ಎನ್ನುವುದು ಮನುಷ್ಯ ಸಹಜವಾಗಿರುವ ಸಾಮಾನ್ಯ ಜ್ಞಾನವಿಲ್ಲದೆ ಮುಂದೊತ್ತುತ್ತಿರುವ ವಾದ ಎನ್ನಬಹುದು. ಇದರೊಟ್ಟಿಗೆ ಏಳುವ ಇನ್ನೊಂದು ಪ್ರಶ್ನೆ ಎಂದರೆ, ಪ್ರಾಣಿಗಳನ್ನು ಕೊಂದು ತಿನ್ನುವ ಮಾಂಸಾಹಾರವನ್ನು ನಿಷೇಧಿಸುವ ಬದಲು, ಅವುಗಳನ್ನು ಮನೋರಂಜನೆಗಾಗಿ ಬಳಸಿಕೊಳ್ಳುವುದು ಮಹಾಪಾಪ ಎನ್ನುವಂತ ಬಿಂಬಿಸುವುದು ಪ್ರಾಣಿದಯಾ ಸಂಘಗಳ ಹಿಪಾಕ್ರಸಿಯನ್ನು ಎತ್ತಿ ತೋರಿಸುತ್ತದೆ.

ಇನ್ನು ಕಂಬಳದ ವಿಷಯಕ್ಕೆ ಬಂದರೆ ಅದೊಂದು ಗ್ರಾಮೀಣ ಕ್ರೀಡೆ. ವ್ಯವಸಾಯದ ಚಟುವಟಿಕೆಗಳು ಮುಗಿದ ತರುವಾಯ ಜನರು ಇಂತಹ ಕ್ರೀಡೆಗಳ ಮೂಲಕ ಒಂದೆಡೆ ಸೇರುವುದು, ಭಾಗವಹಿಸುವುದು, ಮನೋರಂಜನೆ ಪಡೆಯುವುದು ಸರ್ವೇಸಾಮಾನ್ಯ. ಅಂದರೆ ಇಂತಹ ಕ್ರೀಡೆಗಳು ಕೇವಲ ಕ್ರೀಡೆಗಳಾಗಿರದೆ, ಅಥವಾ ಮನೋರಂಜನೆಯ ಸರಕುಗಳಾಗಿರದೆ, ಜನರನ್ನು ಒಂದೆಡೆ ಒಗ್ಗೂಡಿಸುವ ಕಾರ್ಯತಂತ್ರವನ್ನೂ ಸಹ ಮಾಡುತ್ತದೆ. ಯಾವುದೂ ಶಾಶ್ವತವಲ್ಲ ಎನ್ನುವ ನಂಬಿಕೆಯ ಹಿನ್ನೆಲೆಯಲ್ಲಿ ಬೆಳೆದು ಬಂದಿರುವ ಭಾರತೀಯ ಸಂಸ್ಕೃತಿ, ಸಾಮಾಜಿಕ ಒಗ್ಗೂಡುವಿಕೆಯನ್ನೂ ಸಹ ತಾತ್ಕಾಲಿಕವಾಗಿಯೇ ಹಲವಾರು ಸಂದರ್ಭಗಳಲ್ಲಿ ರೂಪಿಸಿಕೊಂಡು ಬರುತ್ತಿದೆ. ಶಾಶ್ವತವಾಗಿ ಗುಂಪುಗಳು ಒಗ್ಗೂಡಿದರೆ, ಅವು ಸಾಂಸ್ಥಿಕ ನೆಲೆಗಟ್ಟನ್ನು ಪಡೆದುಕೊಳ್ಳುತ್ತವೆ, ಜಾತಿ ಸಂಘಗಳಾಗಿ, ರಿಲಿಜನ್ ಗಳಾಗಿ ಅವು ಹೊರಹೊಮ್ಮುತ್ತವೆ. ತದನಂತರ ಅವುಗಳ ಸೃಜನಶೀಲತೆ ಕ್ರಮೇಣ ನಾಶವಾಗಿ ಯಾವುದೋ ಒಂದು ತತ್ವನ್ನು ಹಿಂಬಾಲಿಸುವ ಹಿಂಬಾಲಕರಾಗಿ ಉಳಿದುಕೊಂಡುಬಿಡುತ್ತವೆ. ಆದರೆ ಭಾರತದಲ್ಲಿ ಇದಕ್ಕೆ ವಿರುದ್ಧವಾಗಿರುವ ಸಂಸ್ಕೃತಿಯ ಸಾಂಗತ್ಯ ಇರುವುದರಿಂದ ತತ್ವ ಎಲ್ಲೆಗಳನ್ನೂ ಮೀರಿ ಬೆಳೆದುಕೊಂಡು ಬರುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಭೂತಾರಾಧನೆ, ನಾಗಮಂಡಲ, ಕಂಬಳ, ಕೋಳಿಅಂಕ, ಇತ್ಯಾದಿ ಆಚರಣೆಗಳು ಸಂಸ್ಕೃತಿಯೊಂದಿಗಿನ ಒಡನಾಟದಲ್ಲಿ ಬೆಳೆದು ಬಂದಿವೆ. ಅವು ಕೇವಲ ಮನೋರಂಜನೆ ಎಂದು ಪರಿಗಣಿಸಿ ನಿಷೇಧಿಸುತ್ತಾ ಬರುವುದು ನಮ್ಮ ಸಂಸ್ಕೃತಿಯ ಕುರಿತು ಅಜ್ಞಾನವನ್ನು ಪ್ರದರ್ಶನಕ್ಕೆ ಇಟ್ಟಂತೆ ಆಗುತ್ತದೆ ಹಾಗೂ ಇದರ ಪರಿಣಾಮ ಸಂಸ್ಕೃತಿಯ ನಾಶ.

ಒಂದು ಸಂಸ್ಕೃತಿ ಎಂದರೆ ಅದಕ್ಕೆ ಹಲವಾರು ಮಜಲುಗಳಿರುತ್ತವೆ, ಒಂದೊಂದು ಅಂಶವೂ ಸಹ ಆಯಾ ಸಂಸ್ಕೃತಿಯ ಭಾಗವಾಗಿಯೇ ಅಸ್ತಿತ್ವದಲ್ಲಿರುತ್ತದೆ. ಆಧುನಿಕ ಮೌಲ್ಯಗಳು ಸಂಪ್ರದಾಯಗಳನ್ನು ಒಟ್ಟೊಟ್ಟಿಗೆ ತೆಗೆದುಕೊಂಡು ಹೋಗುವ ಬದಲು ಕ್ರಿಶ್ಚಿಯನ್ ಮಿಷನರಿಗಳಂತೆ ತನಗೆ ಅಪಥ್ಯವಾದವುಗಳನ್ನು ನಾಶಮಾಡಿಕೊಂಡು ಹೋಗುತ್ತಿದೆ. ಇದಕ್ಕೆ ಭಾರತೀಯ ಸಮಾಜದಲ್ಲಿ ನಶಿಸುತ್ತಿರವ ನಮ್ಮ ಸಂಪ್ರದಾಯಗಳೇ ಸಾಕ್ಷಿ. ಆದ್ದರಿಂದ ಇದನ್ನು ರಕ್ಷಿಸಿಕೊಳ್ಳಲು ಸಾಂಘಿಕ ಹೋರಾಟದ ಅಗತ್ಯವಂತೂ ಇದ್ದೇ ಇದೆ. ಈ ನಿಟ್ಟಿನಲ್ಲಿ, ಕಂಬಳದ ವಿಚಾರವಾಗಿ ಕರ್ನಾಟದಲ್ಲಿ ಬೃಹತ್ ಹೋರಾಟದ ಅಭಿಯಾನವನ್ನು ಪ್ರಾರಂಭಿಸಿರುವುದು ಉತ್ತಮ ಕಾರ್ಯವಾಗಿದೆ. ನಾವೆಲ್ಲರೂ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳುವಲ್ಲಿ ಹೋರಾಡುವುದು ಅಗತ್ಯವಾಗಿದೆ.

1 ಟಿಪ್ಪಣಿ Post a comment
  1. Pavan Kumar Narayana
    ಜನ 25 2017

    Good article to through light on our culture.. Shall we file a petition on this?
    https://www.change.org/start-a-petition

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments