ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 15, 2017

3

ಮಾಧ್ಯಮಗಳ ಟಿ.ಆರ್.ಪಿ ದಾಹಕ್ಕೆ ಬಲಿಯಾದಳೇ ಸುಹಾನಾ ಸೈಯದ್ ?

‍ನಿಲುಮೆ ಮೂಲಕ

– ಸುರೇಶ್ ಮುಗಬಾಳ್

ಬಹಳಷ್ಟು ಮಂದಿಗೆ ‘ಸುಹಾನಾ ಸೈಯದ್’ ಎಂಬ ಸಂಗೀತ ಪ್ರತಿಭೆಯ ಪರಿಚಯವೇ ಇರಲಿಲ್ಲ. ಶಿವಮೊಗ್ಗ ಜಿಲ್ಲೆಯ ಸಾಗರದ ಯಾವುದೋ ಮೂಲೆಯಲ್ಲಿದ್ದ ಸುಹಾನಾ, ತಾನು ಹಾಡಿದ ಒಂದೇ ಒಂದು ಹಾಡಿನಿಂದ ಇಡೀ ದೇಶದಲ್ಲಿ ಮನೆಮಾತಾಗಿಬಿಟ್ಟಳು. ಅವಳ ಆ ಹಾಡಿನಲ್ಲೇನಿದೆ ಅಂತಹ ವಿಶೇಷತೆ ? ಸಂಗೀತ ಕಲಿತ ಯಾರು ಬೇಕಾದರೂ ಹಾಡಬಲ್ಲರು, ಎಷ್ಟೋ ಸಂಗೀತ ಪ್ರತಿಭೆಗಳು ತಾವು ವಾಸವಿರುವ ಮನೆಯ ಪಕ್ಕದ ಕೇರಿಗೂ ಪರಿಚಯವಿರುವುದಿಲ್ಲ, ಅಂತಹುದರಲ್ಲಿ ಸುಹಾನಾ ಹೇಗೆ ಇಷ್ಟು ಪ್ರಚಾರ ಪಡೆದುಕೊಂಡಳು? ಕಾರಣಗಳಿಷ್ಟೇ; ಅವಳು ಶ್ರೀನಿವಾಸನ ಹಾಡು ಹಾಡಿದಳು, ಅವಳು ಹಿಜಾಬ್ ಧರಿಸಿದ್ದಳು, ಅವಳು ಒಬ್ಬ ಮಹಿಳೆಯಾಗಿದ್ದಳು, ಅವಳು ಸುಂದರ ವದನ ಹೊಂದಿದ್ದಳು ಇದೆಲ್ಲದಕ್ಕಿಂತ ಮುಖ್ಯವಾಗಿ ಅವಳು ಮುಸ್ಲಿಂ ಧರ್ಮೀಯಳಾಗಿದ್ದಳು.

ಸುಹಾನಾ ಒಬ್ಬ ಹಾಡುಗಾರ್ತಿಯಾಗಿ ಶ್ರೀನಿವಾಸನ ಹಾಡನ್ನು ತಾನೇ ಆಯ್ಕೆ ಮಾಡಿಕೊಂಡು ಹಾಡಿದಳೋ ಅಥವಾ ಕಾರ್ಯಕ್ರಮದ ನಿರ್ವಾಹಕರು ಇದೇ ಹಾಡನ್ನು ಹಾಡಬೇಕೆಂದು ಒತ್ತಡ ಹೇರಿದ್ದರೋ ತಿಳಿದಿಲ್ಲ. ಒಂದು ವೇಳೆ ಸುಹಾನ ಆ ಹಾಡನ್ನು ಆಯ್ಕೆ ಮಾಡಿಕೊಂಡು ಹಾಡುವುದರಿಂದ ಧರ್ಮದ ಆಧಾರದಲ್ಲಿ ತನ್ನನ್ನು ಹೀಗೆಲ್ಲಾ ಹೀಯಾಳಿಸಬಹುದು ಎಂದು ತಿಳಿದಿದ್ದರೆ ಬಹುಶಃ ಅವಳು ಆ ಹಾಡನ್ನು ಹಾಡಲು ಒಪ್ಪುತ್ತಿರಲಿಲ್ಲವೇನೋ. ಸಂಗೀತ ತರಗತಿಗಳಲ್ಲಿ ದೇವನಾಮಗಳನ್ನು ಹಾಡುತ್ತಾ ಸಂಗೀತಾಭ್ಯಾಸ ಮಾಡಿದ ಅನುಭವವಿದ್ದಿದ್ದರಿಂದ, ಸುಹಾನಾಗೆ ಆ ಹಾಡು ತನ್ನ ಪ್ರತಿಭೆಯನ್ನು ಒರೆಹೆಚ್ಚುವ ಸಾಧನವಾಗಿತ್ತೇ ಹೊರತು ಶ್ರೀನಿವಾಸನನ್ನೇ ಮೆಚ್ಚಿಸಬೇಕೆಂದು ಹಾಡಿದ್ದಲ್ಲ. ಅವಳ ಮನಸ್ಸಿನಲ್ಲಿದ್ದದ್ದು ತನ್ನ ಹಾಡನ್ನು ಆಲಿಸುತ್ತಿರುವ ತೀರ್ಪುಗಾರರನ್ನು ಮೆಚ್ಚಿಸುವ ಉದ್ದೇಶ ಮಾತ್ರ. ಸುಹಾನಾ ಹಾಡಿ ಮುಗಿಸುತ್ತಿದ್ದಂತೆ ಇತ್ತ ತೀರ್ಪುಗಾರರು ಅವಳ ಹಾಡಿಗೆ ಮನಸೋತು ಎದ್ದು ನಿಂತು ಚಪ್ಪಾಳೆಗಳ ಮೂಲಕ ಅಭಿನಂದಿಸಿದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ “ಸುಹಾನಾ ನೀನು ಮುಸ್ಲಿಂ ಧರ್ಮೀಯಳಾದರೂ ಶ್ರೀನಿವಾಸನ ಹಾಡನ್ನು ಅದ್ಭುತವಾಗಿ ಹಾಡಿದೆ, ನೀನು ಹಿಂದೂ-ಮುಸ್ಲಿಂ ಧರ್ಮಗಳ ನಡುವೆ ಸಂಗೀತದ ಮೂಲಕ ಸೌಹಾರ್ದತೆಯ ಕೊಂಡಿಯಾಗಬಹುದು” ಎಂಬ ಅರ್ಥದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಬಹುಶಃ ಪ್ರತಿಭೆಯನ್ನು ಒರೆಹೆಚ್ಚಬೇಕಿದ್ದ ಸರಿಗಮಪ ರಿಯಾಲಿಟಿ ಷೋ ಕಾರ್ಯಕ್ರಮದಲ್ಲಿ ಸುಹಾನಾಳ ಪ್ರತಿಭೆಯನ್ನು ಧರ್ಮದೊಂದಿಗೆ ತಳಕು ಹಾಕಿ ಒಳ್ಳೆಯ ಮಾತುಗಳನ್ನಾಡಿದ್ದು ಮುಸ್ಲಿಂ ಮೂಲಭೂತವಾದಿಗಳಿಗೆ ಅರಗಿಸಿಕೊಳ್ಳಲಾಗಲಿಲ್ಲವೇನೋ. ಇದರಿಂದ ಜಾಗೃತರಾದ “ಮಂಗಳೂರು ಮುಸ್ಲಿಂ” ಎಂಬ ಫೇಸ್ಬುಕ್ ಪುಟ ನಿರ್ವಾಹಕರಿಂದ ಸುಹಾನಾಳಿಗೆ ಬೆದರಿಕೆಗಳು ಹಾಗೂ ನಿಂದನೆಗಳು ಬರಲಾರಂಭಿಸದವು.
“ಮಂಗಳೂರು ಮುಸ್ಲಿಂ” ಫೇಸ್ಬುಕ್ ಪುಟದ ನಿರ್ವಾಹಕರು ಸುಹಾನಾಳ ಬಗ್ಗೆ ತಮ್ಮ ಮೂಲಭೂತವಾದಿ ಅಭಿಪ್ರಾಯಗಳನ್ನು ಫೇಸ್ಬುಕ್ ಪುಟದಲ್ಲಿ ಬರೆಯುತ್ತಾ “ಪ್ರವಾದಿಯವರ ಕಲ್ಪನೆಯನ್ನು ಕಡೆಗಣಿಸಿ ಅನ್ಯ ಸಮುದಾಯದ ಪುರುಷರ ಮುಂದೆ ನಿನ್ನ ಸೌಂದರ್ಯವನ್ನು ಪ್ರದರ್ಶಿಸಿ ವೇದಿಕೆಯಲ್ಲಿ ನಿಂತು ಸಿನೆಮಾ ಹಾಡುಗಳನ್ನು ಹಾಡಿದ ಮಾತ್ರಕ್ಕೆ ಮಹಾ ಸಾಧನೆಯನ್ನು ಮಾಡಿದ್ದೀ ಎಂದು ಭಾವಿಸಬೇಡ, ಇಂಪಾದ ಶಬ್ದದಿಂದ ಸಿನೆಮಾ ಹಾಡುಗಳನ್ನು ಅನುಕರಿಸಿ ಹಾಡುವುದು ನೀನೆಂದುಕೊಂಡ ಹಾಗೆ ಮಹಾಸಾಧನೆಯಲ್ಲ. ನಿನಗೆ ಜನ್ಮಕೊಟ್ಟವರೇ ನಿನ್ನನ್ನು ಪ್ರೋತ್ಸಾಹಿಸಿ, ಹತ್ತುಜನರಿಗೆ ನಿನ್ನ ಸೌಂದರ್ಯವನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟದ್ದಕ್ಕಾಗಿ ಖಿಯಾಮತ್ ದಿನದಂದು ಒಳಿತು ಕೆಡುಕುಗಳ ಪರಾಮರ್ಶೆ ನಡೆದಾಗ ಸ್ವರ್ಗ ಪ್ರವೇಶಿಸುವ ಅವರಿಗೆ ನೀನು ಅಡ್ಡಗಾಲಾಗಿ ನಿಲ್ಲುತ್ತೀ” ಎಂದು ಟೀಕಿಸಿದ್ದರು. ಹೀಗೆ ಹೇಳಿದ್ದೇ ತಡ, ಸಾಮಾಜಿಕ ತಾಣಗಳಲ್ಲಿ ಸುಹಾನಾಳನ್ನು ನಿಂದಿಸಿದ ಮುಸ್ಲಿಂ ಮೂಲಭೂತವಾದಿಗಳ ವಿರುದ್ಧ ಹಾಗೂ ಅವರ ನಿಲುವಿನ ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬಂದವು. ಬಹಳಷ್ಟು ಮುಸ್ಲಿಂ ಧರ್ಮೀಯರು ಸುಹಾನಾಳ ಪರ ನಿಂತು ಬೆಂಬಲ ಸೂಚಿಸಿದರು. ನಾವೆಲ್ಲಾ ಅವಳ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು, ಧರ್ಮದ ಆಧಾರದಲ್ಲಿ ಅವಳನ್ನು ಬೇರ್ಪಡಿಸಿ ನೋಡುವ ಮನೋಭಾವ ಸರಿಯಲ್ಲ ಅಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಒಂದು ವೇಳೆ ಇದೇ ಸುಹಾನ ಆ ಕಾರ್ಯಕ್ರಮದಲ್ಲಿ ಹಿಜಾಬ್ ಧರಿಸದೆ ಹಾಡು ಹಾಡಿದ್ದರೇ ಅಥವಾ ಅವಳು ಶ್ರೀನಿವಾಸನ ಹಾಡನ್ನು ತನ್ನ ಸಂಗೀತ ಪ್ರತಿಭೆಯನ್ನು ಒರೆಹೆಚ್ಚಲು ಆಯ್ಕೆಮಾಡಿಕೊಳ್ಳದಿದ್ದರೆ ಇಷ್ಟರ ಮಟ್ಟಿಗೆ ವಿವಾದಗಳು ಸೃಷ್ಟಿಯಾಗುತ್ತಿರಲಿಲ್ಲ. ಹಿಜಾಬ್ ಧರಿಸಿ ಅದರಲ್ಲೂ ಶ್ರೀನಿವಾಸನ ಹಾಡು ಹಾಡಿದ್ದು ಮುಸ್ಲಿಂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿತು. ಸರಿಗಮಪ ಕಾರ್ಯಕ್ರಮದ ನಿರ್ವಾಹಕರೇ ಇಂತಹದೊಂದು ತೀರ್ಮಾನ ಕೈಗೊಂಡಿರಬಹುದು ಎಂಬ ಅನುಮಾನಗಳಿಗೂ ಈಗ ರೆಕ್ಕೆ-ಪುಕ್ಕ ಬರತೊಡಗಿವೆ. ಸುಹಾನಾಳನ್ನು ಮುಸ್ಲಿಂ ಯುವತಿ ಎಂದು ಬಿಂಬಿಸುವುದಕ್ಕಾಗಿ ಹಿಜಾಬ್ ಧರಿಸುವಂತೆ ಹೇಳಿ, ‘ಮುಸ್ಲಿಂ ಹುಡುಗಿಯಾದರೂ ಶ್ರೀನಿವಾಸನ ಹಾಡು ಎಷ್ಟು ಚೆನ್ನಾಗಿ ಹಾಡಿದಳಲ್ಲಾ’ ಎಂಬ ಭಾವನೆ ಸಹೃದಯರಲ್ಲಿ ಮೂಡುವಂತೆ ಮಾಡುವ ಮೂಲಕ ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ಸಂಪಾದಿಸುವ ಉದ್ದೇಶ ನಿರ್ವಾಹಕರಿಗೆ ಇತ್ತು ಎಂಬುದು ಇದರಿಂದ ಸ್ಪಷ್ಟವಾದಂತಿದೆ. ಆದರೂ ಹಿಜಾಬ್ ಧರಿಸುವುದು, ಶ್ರೀನಿವಾಸನ ಹಾಡು ಆಯ್ಕೆ ಮಾಡಿಕೊಳ್ಳುವುದು ಸುಹಾನಾಳ ಆಯ್ಕೆಯ ಸ್ವಾತಂತ್ರ್ಯ ಎಂಬುದನ್ನು ಇಲ್ಲಿ ಯಾರೂ ಮರೆಯಬಾರದು. ಸಂವಿಧಾನಾತ್ಮಕವಾಗಿ ಅವಳಿಗೆ ಇದರ ಸ್ವಾತಂತ್ರ್ಯವಿದೆ.
ಸರಿಗಮಪ ಕಾರ್ಯಕ್ರಮ ಇದೇ ಮೊದಲು ವಿವಾದಕ್ಕೀಡಾಗಿದ್ದಲ್ಲ. ಈ ಹಿಂದಿನ ಆವೃತ್ತಿಗಳಲ್ಲಿ ಸಂಗೀತ ಪ್ರತಿಭೆಗಳಾದ ಚಿನಕುರಳಿ ಆಧ್ಯಾ, ನೈಜೀರಿಯನ್ ಪ್ರಜೆ ಅಬ್ದುಲ್ ರವರಂತಹ ಅಪ್ರಬುದ್ಧ ಸಂಗೀತಗಾರರನ್ನು ಹಾಡಿಸುವುದರೊಂದಿಗೆ ಮುಗ್ಧತೆ ಮತ್ತು ಭಾಷೆಯ ಆಧಾರದಲ್ಲಿ ಕಾರ್ಯಕ್ರಮದ ಟಿ.ಆರ್.ಪಿ ಹೆಚ್ಚಳಕ್ಕೆ ಬಳಸಿಕೊಂಡಿದ್ದು ಕಾರ್ಯಕ್ರಮದ ವೀಕ್ಷಕರಿಗೆ ಗೊತ್ತಿರದ ಸಂಗತಿಯೇನಲ್ಲಾ. ಇದೇ ತಂತ್ರವನ್ನು ಸುಹಾನಾಳ ವಿಚಾರದಲ್ಲೂ ಬಳಸಿ ತಮ್ಮ ಎಂದಿನ ಟಿ.ಆರ್.ಪಿ ದಾಹವನ್ನು ತಣಿಸಿಕೊಳ್ಳುವ ಚಾಳಿಗೆ ಕಾರ್ಯಕ್ರಮದ ನಿರ್ವಾಹಕರು ಜೋತುಬಿದ್ದರು. ಕೇವಲ ಸಂಗೀತವನ್ನು ಮಾತ್ರ ಸ್ಪರ್ಧೆಯಲ್ಲಿ ಪರಿಗಣಿಸಿದ್ದರೆ ಮೂಲಭೂತವಾದಿಗಳು ಈ ರೀತಿಯ ನಿಲುವನ್ನು ವ್ಯಕ್ತಪಡಿಸುತ್ತಿರಲಿಲ್ಲ. ಸುಹಾನಾ ತನ್ನ ಸೌಂದರ್ಯವನ್ನು ಪರ ಪುರುಷರ ಮುಂದೆ ಪ್ರದರ್ಶಿಸಿದಳು ಹಾಗೂ ತನ್ನ ಹಾಡುಗಾರಿಕೆಗೆ ಧರ್ಮ ಅಡ್ಡಿಮಾಡಲಾರದು ಎಂಬ ಆಕೆಯ ಹೇಳಿಕೆ ಮೂಲಭೂತವಾದಿಗಳಿಗೆ ಅವಳನ್ನು ವಿರೋಧಿಸಲು ಕಾರಣವಾಯಿತು. ತಮ್ಮ ವಿರೋಧವನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಖುರಾನಿನ ಆಯ್ದ ಭಾಗಗಳನ್ನು ಫೇಸ್ಬುಕ್ ಪುಟದಲ್ಲಿ ಪ್ರಕಟಿಸುತ್ತಾ “ಸತ್ಯವಿಶ್ವಾಸಿಗಳೊಂದಿಗೆ ಹೆಂಗಸರು ತಮ್ಮ ದೃಷ್ಟಿಯನ್ನು ತಗ್ಗಿಸುವಂತೆ ಮತ್ತು ತಮ್ಮ ಗುಪ್ತಾಂಗಗಳನ್ನು ಕಾಪಾಡಿಕೊಳ್ಳುವಂತೆ ಹೇಳಿರಿ, ತಮ್ಮ ಸೌಂದರ್ಯದಿಂದ ಪ್ರಕಟವಾದುದರ ಹೊರತು ಬೇರಾವುದನ್ನೂ ಅವರು ಪ್ರದರ್ಶಿಸದಿರಲಿ, ಅವರು ತಮ್ಮ ಶಿರವಸ್ತ್ರಗಳನ್ನು ತಮ್ಮ ಎದೆಯ ಮೇಲೆ ಎಳೆದುಕೊಳ್ಳಲಿ” ಎಂಬ ಮನುಸ್ಮೃತಿಯನ್ನೇ ಹೋಲುವ ಸಾಲುಗಳನ್ನು ಆಕೆಯ ಸ್ವಾತಂತ್ರ್ಯ ಹರಣಕ್ಕಾಗಿ ಬಳಸಿದರು.
ಸುಹಾನಾಳ ವಿಚಾರವಾಗಿ ಮುಸ್ಲಿಂ ಮೂಲಭೂತವಾದಿಗಳು ಹಾಗೂ ಹಿಂದೂ ಮೂಲಭೂತವಾದಿಗಳ ತದ್ವಿರುದ್ಧ ಅಭಿಪ್ರಾಯಗಳಿಗೆ ಸಹಜವಾಗಿಯೇ ರಾಜಕೀಯ ಬಣ್ಣವನ್ನೂ ಹಚ್ಚಲಾಯಿತು. ಧರ್ಮದ ವಿಚಾರ ಬಂದಾಗಲೆಲ್ಲಾ ರಾಜಕೀಯವು ಮೈಕೊಡವಿಕೊಂಡು ಎದ್ದೇಳುವುದು ಹೊಸತೇನಲ್ಲ. ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಸುಹಾನಾಳನ್ನೇ ಕೈಗೊಂಬೆ ಮಾಡಿಕೊಂಡವರು ಸುಹಾನಾಳ ಪರವಾಗಿ ನಿಂತರು. ಮೂಲಭೂತವಾದಿಗಳ ಈ ತಿಕ್ಕಾಟವು ಹಸಿದ ಬಕಾಸುರನಂತಹ ಸುದ್ದಿ ವಾಹಿನಿಗಳಿಗೆ ಮೃಷ್ಟಾನ್ನ ಬಡಿಸಿಬಿಟ್ಟಿತು. ಇಬ್ಬರು ಮೂಲಭೂತವಾದಿಗಳ ನಡುವೆ ನಡೆಯುತ್ತಿರುವ ತಿಕ್ಕಾಟದ ಸಂಪೂರ್ಣ ಲಾಭ ಪಡೆದ ಸುದ್ದಿ ವಾಹಿನಿಗಳು  ಸುಹಾನಾಳನ್ನು ತಮ್ಮ ಟಿ.ಆರ್.ಪಿ ವಸ್ತುವನ್ನಾಗಿ ಬಳಸಿಕೊಂಡರು. ಅದು ಎಷ್ಟರ ಮಟ್ಟಿಗೆ ಎಂದರೆ, “ಆಕೆಯ ಮೇಲೆ ಇನ್ನೂ ದಾಳಿಗಳು ನಡೆದಿಲ್ಲವೇ?” ಎಂಬ ಪ್ರಚೋದನಾತ್ಮಕ ಪ್ರಶ್ನೆಯು ಸುದ್ದಿ ವಾಹಿನಿಯಲ್ಲಿ ವ್ಯಕ್ತವಾಯಿತು. ಹಾಗಾದರೆ ಸುದ್ದಿ ವಾಹಿನಿಗಳು ಆಕೆಯ ಮೇಲೆ ನಡೆಯಬಹುದಾದ ದಾಳಿಗಾಗಿ ಕಾದಿದ್ದವೇ? ಯಾವ ಚರ್ಚೆಗೂ ಆಸ್ಪದ ನೀಡಬಾರದಿದ್ದ ಸುಹಾನಾಳ ಪ್ರಕರಣ, ರಾಷ್ಟ್ರ ಮಟ್ಟದಲ್ಲಿ ಸುದ್ದಿ ವಾಹಿನಿಗಳಿಗೆ ಆಹಾರವಾಗಿದ್ದು ಮಾತ್ರ ವಿಪರ್ಯಾಸ.
ಸುಹಾನಾಳ ಪ್ರತಿಭೆಯು ಮತ್ತೊಬ್ಬ ಮುಸ್ಲಿಂ ಮಹಿಳೆಗೆ ಪ್ರೇರಣೆಯಾಗಬೇಕು ಎಂದು ಸಾರಬೇಕಿದ್ದ ಮುಸ್ಲಿಂ ಮೂಲಭೂತವಾದಿಗಳು, ಅವಳನ್ನು ಧರ್ಮದ ಆಧಾರದಲ್ಲಿ ನಿಂದಿಸಿದ್ದು ಒಂದು ರೀತಿ ತಾಲಿಬಾನಿ ಮನೋಭಾವವನ್ನು ತೋರಿಸುತ್ತದೆ. ಸ್ವಾತ್ ಕಣಿವೆಯ ಶಾಂತಿದೂತೆ ಮಲಾಲ ಯೂಸಫ್ಜಾಯ್ ಮೇಲೆ ನಡೆದ ಭಯೋತ್ಪಾದಕರ ದಾಳಿಗೂ ಸುಹಾನಾಳ ಮೇಲೆ ನಡೆಯುತ್ತಿರುವ ಮೂಲಭೂತವಾದಿಗಳ ದಾಳಿಗೂ ಅಷ್ಟೇನು ವ್ಯತ್ಯಾಸಗಳೇ ಕಾಣುತ್ತಿಲ್ಲ. ಸರಿಯಾಗಿ ವಿಚಾರಿಸಿ ನೋಡುವುದಾದರೆ ಸುಹಾನಾ ಯಾವುದೇ ತಪ್ಪನ್ನೂ ಮಾಡಿಲ್ಲ. ಬಹುಪಾಲು ಮುಸ್ಲಿಂ ಧರ್ಮೀಯರು ಅವಳ ಪರ ನಿಂತಿರುವುದರಿಂದ ಅವಳು ಯಾವುದೇ ತಪ್ಪನ್ನು ಮಾಡಿಲ್ಲ ಎಂಬುದು ವೇದ್ಯವಾಗುತ್ತದೆ. ಇಲ್ಲಿ ನಿಜವಾಗಿ ತಪ್ಪು ನಡೆದದ್ದು ಮಾಧ್ಯಮಗಳಿಂದ, ಅವರುಗಳ ಟಿ.ಆರ್.ಪಿ. ದಾಹದಿಂದ. ‘ಮಂಗಳೂರು ಮುಸ್ಲಿಂ’ ಪುಟದ ನಿರ್ವಾಹಕರ ಅಪ್ರಬುದ್ಧ ಮಾತುಗಳಿಗೆ ಬೆಲೆಕೊಡದೆ ಇದ್ದಿದ್ದರೆ ಈ ವಿಷಯ ಇಷ್ಟರ ಮಟ್ಟಿಗೆ ಪ್ರಾಮುಖ್ಯತೆಯನ್ನೇ ಪಡೆದುಕೊಳ್ಳುತ್ತಿರಲಿಲ್ಲ. ಸುಹಾನ ತನ್ನ ಪ್ರತಿಭೆಯಿಂದಲೇ ಟೀಕೆಗೆ ಗುರಿಯಾಗುತ್ತಿರಲಿಲ್ಲ.  ಆದಾಗ್ಯೂ, ಸುಹಾನ ಇನ್ನೂ ಸಂಗೀತ ಸ್ಪರ್ಧೆಯಲ್ಲಿ ಉಳಿದಿರುವುದು ಅವಳ ಪ್ರತಿಭೆಗೆ ನೀಡಿದ ಪ್ರೋತ್ಸಾಹವಾಗಿದೆ. ಆಕೆಯ ಇರುವಿಕೆಯನ್ನೇ ಮತ್ತೆ ಟಿ.ಆರ್.ಪಿ. ಬಂಡವಾಳವನ್ನಾಗಿಸಿಕೊಳ್ಳದೆ ಪ್ರತಿಭೆಯನ್ನು ಮಾತ್ರ ಪರಿಗಣಿಸುವುದು ಮಾಧ್ಯಮಗಳ ಜವಾಬ್ದಾರಿ.
3 ಟಿಪ್ಪಣಿಗಳು Post a comment
  1. ಅನಂತ ಹೋರಾಟ's avatar
    ಅನಂತ ಹೋರಾಟ
    ಮಾರ್ಚ್ 17 2017

    “ಸುಹಾನಾಳನ್ನು ಮುಸ್ಲಿಂ ಯುವತಿ ಎಂದು ಬಿಂಬಿಸುವುದಕ್ಕಾಗಿ ಹಿಜಾಬ್ ಧರಿಸುವಂತೆ ಹೇಳಿ, ‘ಮುಸ್ಲಿಂ ಹುಡುಗಿಯಾದರೂ ಶ್ರೀನಿವಾಸನ ಹಾಡು ಎಷ್ಟು ಚೆನ್ನಾಗಿ ಹಾಡಿದಳಲ್ಲಾ’ ಎಂಬ ಭಾವನೆ ಸಹೃದಯರಲ್ಲಿ ಮೂಡುವಂತೆ ಮಾಡುವ ಮೂಲಕ ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ಸಂಪಾದಿಸುವ ಉದ್ದೇಶ ನಿರ್ವಾಹಕರಿಗೆ ಇತ್ತು ಎಂಬುದು ಇದರಿಂದ ಸ್ಪಷ್ಟವಾದಂತಿದೆ.”

    ಹೌದು ನೀವು ಖರೆ ಸತ್ಯವನ್ನೇ ಹೇಳಿದ್ದೀರಿ. ಸುಹಾನ ಒಬ್ಬ ಮುಸ್ಲಿಂ ಹುಡುಗಿ ಎಂಬುದರ ಫಾಯಿದೆಯನ್ನು ಕಾರ್ಯಕ್ರಮ ನಿರ್ವಾಹಕರು ಬಹಳ ಚಾಣಾಕ್ಷತನದಿನದಿಂದ ಮಾಡಿಕೊಂಡಿದ್ದಾರೆ. ಇದು ನಿಜಕ್ಕೂ ನಾಚಿಕೆಗೇಡು. ಟಿವಿ ಚಾನ್ನೆಲ್ಲಿನ ಟಿ ಆರ್ ಪಿ ಜಾಣರಿಗೆ ಶ್ರೀನಿವಾಸನ ಬಗ್ಗೆ ಭಕ್ತಿಯೂ ಇಲ್ಲ, ಮುಸ್ಲಿಂ ಯುವತಿಯರ ಬಗ್ಗೆ ಮಾನವೀಯ ಸಂವೇದನೆಯೂ ಇಲ್ಲ, ಅವರಿಗಿರುವುದು ಜಾಹೀರಾತು ಮೂಲಕ ಬರುವ ಕಾಂಚಾಣದ ಬಗ್ಗೆ ಅಚಲ ನಿಷ್ಠೆ.

    ಉತ್ತರ
    • sudarshana gururajarao's avatar
      sudarshana gururajarao
      ಮಾರ್ಚ್ 18 2017

      ೧೦೦%

      ಉತ್ತರ
  2. ಸುಹಾನಾ ಸಯ್ಯದ್ ಅವರ ಗಾನ ಮಾಧುರ್ಯವು ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದು ಆ ರಿಯಾಲಿಟಿ ಶೋ ನ ತೀರ್ಪುಗಾರರ ಅತಿಯಾದ ಮತ್ತು ಅಸಹ್ಯ ಹುಟ್ಟಿಸುವಷ್ಟು ವಾಕರಿಕೆ ಬರಿಸುವಷ್ಟು ಪ್ರಮಾಣದ್ದಾಗಿತ್ತು.

    ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments