ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 16, 2017

3

ಉತ್ತರಕಾಂಡದೊಳಗೆ ಉಳಿದ ಒಂದಷ್ಟು ಪ್ರಶ್ನೆಗಳು.

‍ನಿಲುಮೆ ಮೂಲಕ

– ನರೇಂದ್ರ ಎಸ್ ಗಂಗೊಳ್ಳಿ.

ಎಸ್ ಎಲ್ ಭೈರಪ್ಪನವರ ಬರಹಗಳನ್ನು ದೊಡ್ಡ ನೆಲೆಯಲ್ಲಿ ವಿಮರ್ಶಿಸುವಷ್ಟು ನಾನು ಓದಿಕೊಂಡವನಲ್ಲ. ಇಲ್ಲಿ ಉತ್ತರಕಾಂಡ ಓದಿದ ಬಳಿಕ ಓರ್ವ ಓದುಗನಾಗಿ ನನಗೆ ಅನ್ನಿಸಿದ್ದನ್ನು ತಮ್ಮೊಂದಿಗೆ ಹಂಚಿಕೊಳ್ಳುವ ಒಂದು ಪ್ರಯತ್ನವಿದು.

ನಿಜ ಉತ್ತರಕಾಂಡ ಓದಿದ ಬಳಿಕ ಒಂದು ದೊಡ್ಡದಾದ ನಿಟ್ಟುಸಿರು ಎಂತವರಿಗಾದರೂ ಹೊರಬಾರದಿರದು. ರಾಮಾಯಣದ ಕತೆ ತಿಳಿದಿಲ್ಲದವರಿಗೆ ಇಲ್ಲಿನ ವಿಷಯಗಳು ಬರೀ ಶಬ್ದಗಳಾಗಿಯಷ್ಟೇ ಉಳಿಯುವುದು ಸತ್ಯ. ಆದರೆ ರಾಮಾಯಣವನ್ನು ಅರಿತವರಿಗೆ ಇಲ್ಲಿನ ಸೀತೆಯ ದೃಷ್ಟಿಯಿಂದ ನೋಡಿದಂತಹ ರಾಮಾಯಣದ ದೃಷ್ಟಿಕೋನ ಹೊಸತೇಯಾದ ಅನುಭವವನ್ನು ನೀಡುವುದು ಅಷ್ಟೇ ಸತ್ಯ. ಭೈರಪ್ಪನವರ ಹಿಂದಿನ ಕಾದಂಬರಿ ಪರ್ವಕ್ಕೆ ಹೋಲಿಸಿದರೆ ಕೊಂಚ ನೀರಸ ಎನ್ನಿಸಿದರೂ ಇಡೀ ಕಾದಂಬರಿಯಲ್ಲಿ ಭೈರಪ್ಪನವರು ಕಟ್ಟಿಕೊಡುವ ಊರು, ರಾಜ್ಯ, ಹೊಲ, ದಂಡಕಾರಣ್ಯ, ಅಂತಪುರ, ದಾಸಿಯರು, ಪ್ರಕೃತಿ, ಸಂಬಂಧಗಳು, ಮಾತುಗಳು, ಧರ್ಮ, ಮಕ್ಕಳಾಟ ಹೀಗೆ ಎಲ್ಲದರ ಚಿತ್ರಣವೂ ಒಂದಕ್ಕಿಂತ ಒಂದು ಚೆಂದ ಎನ್ನಿಸುವಂತೆ ಮೂಡಿಬಂದಿದೆ.

ಇಲ್ಲಿನ ರಾಮ ದೇವರಲ್ಲ. ಆದರೆ ಧರ್ಮಪಾಲಕ. ಅವನ ಪ್ರತಿಯೊಂದು ನಡೆಗೂ ಧರ್ಮವೇ ಚಾಲನಾಶಕ್ತಿ. ಹೊಲದಲ್ಲಿ ಸಿಕ್ಕಿದವಳು ಎನ್ನೋ ಕಾರಣಕ್ಕೆ ದಶರಥ ತಿರಸ್ಕರಿಸಿದರೂ ಧರ್ಮಕ್ಕೆ ಕಟ್ಟುಬಿದ್ದು ಸೀತೆಯನ್ನು ಮದುವೆಯಾಗುವ ರಾಮ ತನ್ನ ಏಕ ಪತ್ನಿ ವೃತವನ್ನು ಕೊನೆಯವರೆಗೂ ಕಾಪಿಟ್ಟುಕೊಳ್ಳುತ್ತಾನೆ. ಆದರೆ ಸೀತೆಯ ಮನಸ್ಸನ್ನು ಪೂರ್ತಿಯಾಗಿ ಅರಿಯುವಲ್ಲಿ ಸೋಲುತ್ತಾನೆ. ಉತ್ತರಕಾಂಡ ರಾಮನನ್ನು ಮತ್ತೆ ಮತ್ತೆ ಪ್ರಶ್ನಿಸುತ್ತದೆ.

ಪಿತೃವಾಕ್ಯ ಪರಿಪಾಲನೆಗಾಗಿ ವನವಾಸ ವೃತ ಕೈಗೊಂಡಿದ್ದ ರಾಮ ಅಂದೊಮ್ಮೆ ತಂದೆಯ ಮೇಲಿನ ಅಸಹನೆಯನ್ನು ಸಂಪೂರ್ಣ ಹೇಳಿಕೊಳ್ಳಲಾಗದೆ ಒದ್ದಾಡುವಾಗ ಲಕ್ಷ್ಮಣ ಹೇಳುವ ಮಾತುಗಳು ಪರಿಣಾಮಕಾರಿಯಾದದ್ದು. ಪ್ರಪಂಚದಲ್ಲಿ ಎಲ್ಲವೂ ಧರ್ಮಾಧರ್ಮ ನಿಯಮದಂತೆ ನಡೆಯಲ್ಲ. ಅಂತ ನಿಯಮವನ್ನು ತಮಗೆ ತಾವೇ ಹಾಕಿಕೊಂಡು ನಿನ್ನಂಥ ಕೆಲವರು ನಡೆದು ಅದರ್ಶಪುರುಷರೆನ್ನಿಸಿಕೊಳ್ಳುತ್ತಾರೆ. ನೀನು ಆ ಮಾರ್ಗದಲ್ಲಿ ಹೊರಟಿದ್ದೀಯ. ನಡುವೆ ಯಾಕೆ ಎದೆಗುಂದುತ್ತೀಯಾ? ನೀನೂ ಮನುಷ್ಯನೇ.. ಕುದಿಯನ್ನ ಹೊರಹಾಕಬೇಕೆನ್ನಿಸಿದಾಗ ಹೊರಹಾಕಿಬಿಡು. ಶಮನವಾಗುತ್ತೆ. ಧರ್ಮಾಧರ್ಮ ಜಿಜ್ಞಾಸೆಯಿಂದ ಪ್ರಯೋಜನವಿಲ್ಲ.ತಾನು ಬಾಲಕನಾಗಿದ್ದಾಗ ವ್ಯಭಿಚಾರ ಮಾಡಿದ್ದ ಪತ್ನಿ ಅಹಲ್ಯೆಯನ್ನು ಕ್ಷಮಿಸುವಂತೆ ಅವಳ ಪತಿ ಗೌತಮರ ಮನವೊಲಿಸಿದ್ದ ರಾಮ ಜನಾಪವಾದಕ್ಕೆ ಹೆದರಿ ಪತ್ನಿಯನ್ನು ಪರಿತ್ಯಜಿಸಿದ ಬಗೆಗೆ ಸೀತೆ ಪ್ರಶ್ನಿಸಿದಾಗ ರಾಮ ಹೆಚ್ಚೇನೂ ಮಾತನಾಡುವುದಿಲ್ಲ. ಆದರೆ ಅದಕ್ಕೂ ಮೊದಲು ರಾಮ ಸೀತೆಗೆ ಹೇಳಿದ ಮಾತು ನಮ್ಮನ್ನು ಚಿಂತನೆಗೆ ಹಚ್ಚುತ್ತದೆ – ಉನ್ನತ ಸ್ಥಾನದಲ್ಲಿರುವವರು ಅಷ್ಟೇ ಉನ್ನತವಾದ ತ್ಯಾಗಕ್ಕೆ ಸಿದ್ಧ ಆಗಿರಬೇಕು.

ಹಾಗೆ ನೋಡಿದರೆ ಇಡೀ ಕಾದಂಬರಿಯಲ್ಲಿ ನಾಯಕನೆಂಬಂತೆ ಬಿಂಬಿತವಾಗಿರುವುದು ಲಕ್ಷ್ಮಣನ ಪಾತ್ರ. ಸೀತೆಯ ಕಾಲಿನ ಮುಳ್ಳುಗಳನ್ನು ತೆಗೆಯುವಾಗ, ಕಾಡಲ್ಲಿ ಕುಟೀರಗಳನ್ನು ನಿರ್ಮಿಸುವಾಗ, ಆಹಾರ ಸಂಗ್ರಹಿಸುವಾಗ, ವೈದ್ಯ ಮಾಡುವಾಗ, ಸೀತೆಯ ಅತೀ ಮಾತಿನಿಂದ ಕ್ರೋಧಗೊಂಡು ವರುಷಗಟ್ಟಲೆ ಅವಳ ಜೊತೆ ಮಾತನಾಡದೆ ದೂರವಿರುವಾಗ, ಪಾತಿವೃತ್ಯವನ್ನು ಸಾಬೀತು ಮಾಡಲು ಬೆಂಕಿಗೆ ಹಾರಲು ಸೀತೆ ಅಣಿಯಾದಾಗ ಅವಳನ್ನು ತಡೆಯುವಾಗ, ಕೊನೆಗೊಮ್ಮೆ ಕೃಷಿಕನಾಗಿ ಬದುಕನ್ನು ಸಾಗಿಸುವ ಲಕ್ಷ್ಮಣ ಯಾಕೋ ಇಷ್ಟವಾಗುತ್ತಾ ಹೋಗುತ್ತಾನೆ.

ವನವಾಸದಲ್ಲೊಮ್ಮೆ ಲಕ್ಷ್ಮಣ ಹಲಸಿನ ಬೀಜಗಳನ್ನು ಸುಡುಬೂದಿಯಲ್ಲಿ ಸುಟ್ಟು ರಾತ್ರಿಯ ಹಸಿವನ್ನು ಹಿಂಗಿಸಲಣಿಯಾದಾಗ ರಾಮ ಕೇಳುತ್ತಾನೆ ಇದನ್ನೆಲ್ಲಾ ಎಲ್ಲಿ ಕಲಿತೆ? ಆಗ ಲಕ್ಷ್ಮಣ, ನಾವು ಗುರುಕುಲದಲ್ಲಿ ಓದುತ್ತಿದ್ದಾಗ ಚಿಕ್ಕವಯಸ್ಸಿಗೆ ನೀನು ವೇದ ಧರ್ಮಶಾಸ್ತ್ರಗಳನ್ನೆಡಲ್ಲಾ ಬಾಯಿಪಾಠ ಮಾಡಿ ಮೇಧಾವಿಯಾದೆ. ಭರತ ಶತ್ರುಘ್ನರು ನಿನ್ನಷ್ಟೇ ಮನಸ್ಸಿಟ್ಟು ಅಭ್ಯಾಸ ಮಾಡಿದರೂ ತಲೆಗೆ ಹತ್ತದೆ ಶ್ರದ್ಧಾವಂತ ವಿದ್ಯಾರ್ಥಿಗಳಾದರು. ನಾನು ಪಾಠ ತಪ್ಪಿಸಿ ಗೊಲ್ಲರ ಹುಡುಗರ ಜೊತೆ ಬಿದ್ದು ಕಾಡು ಅಲೆಯುತ್ತಿದ್ದೆ. ಅವರಿಂದ ಇದೆಲ್ಲಾ ತಿಳಿಯಿತು ಎನ್ನುತ್ತಾನೆ. ಆ ಮೂಲಕ ಬದುಕಲು ಕಲಿಸುವ ವಿದ್ಯೆ ಮುಖ್ಯವಾಗುವುದನ್ನು ಲೇಖಕರು ಬಿಂಬಿಸಿರುವುದು ಗಮನಾರ್ಹ.

ಇಡೀ ಕಾದಂಬರಿ ಓದುತ್ತಾ ಹೋದಂತೆ ಹಲವಾರು ಪ್ರಶ್ನೆಗಳು ನಮ್ಮಲ್ಲಿ ಮೊಳಕೆಯೊಡೆಯುತ್ತಾ ಹೋಗುತ್ತವೆ. ರಾಮಾಯಣದಂತಹ ಕತೆಯನ್ನು ಸೀತೆಯ ಮೂಲಕ ಹೇಳಿಸುವಾಗ ಭೈರಪ್ಪನವರು ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿರುವುದನ್ನು ಎಲ್ಲಾ ರೀತಿಯಿಂದಲೂ ಒಪ್ಪಲಾಗದು. ಅಹಲ್ಯೆಯ ಪಾತ್ರವನ್ನು ಅದೇಕೆ ವ್ಯಭಿಚಾರಿಯಂತೆ ಬಿಂಬಿಸಿದರೋ ತಿಳಿಯದು. ಪತಿವ್ರತೆ ತಾರಾಳದ್ದು ಇಲ್ಲಿ ಬೇರೆಯದೇ ವ್ಯಕ್ತಿತ್ವ. ಜಟಾಯುವಿನ ಪ್ರಸ್ತಾಪವನ್ನೇ ಕೈಬಿಟ್ಟಿರುವುದು ನಿಜಕ್ಕೂ ಅಚ್ಚರಿ ತಿರಿಸುತ್ತದೆ.

ಪುಷ್ಪಕ ವಿಮಾನ, ಲಕ್ಷ್ಮಣ ರೇಖೆ, ಲಂಕಾದಹನಗಳಿಗೆ ಇಲ್ಲಿ ಸ್ಥಾನ ಇಲ್ಲ. ಸೀತೆಯನ್ನು ಎಂಟು ಜನ ರಕ್ಕಸರು ಬಂದು ಹೊತ್ತೊಯ್ಯುವಂತೆ ಚಿತ್ರಿಸಲಾಗಿದೆ. ಹನುಮಂತ ಇಲ್ಲಿ ಸಮುದ್ರ ಹಾರವುದಿಲ್ಲ, ಆದರೆ ಸಮುದ್ರ ದಾಟುವ ರೀತಿ ಅವನಿಗೆ ಗೊತ್ತು. ಇಲ್ಲಿ ಎಲ್ಲರನ್ನೂ ಸಾಮಾನ್ಯ ಮನುಷ್ಯರ ಸ್ಥಾನದಲ್ಲಿಡಲಾಗಿದೆ. ಹಾಗಾಗಿ ಅಂತಹ ಸೌಮ್ಯ ಸ್ವಭಾವದ ಸೀತೆಯೂ ರಾವಣನ ದಾಸಿಯರಿಗೆ ಕೆಟ್ಟ ಮಾತನ್ನು ಪ್ರಯೋಗಿಸಿಬಿಡುತ್ತಾಳೆ. ರಾಮಾಯಣದಂತಹ ಮಹಾಕಾವ್ಯವೊಂದನ್ನು ಈ ಪರಿದೃಷ್ಟಿಕೋನದಲ್ಲಿ ವಿಶ್ಲೇಷಿಸುವುದು ಮತ್ತು ಬದಲಾವಣೆಗಳನ್ನು ತಂದುಕೊಳ್ಳುವುದು ಎಷ್ಟು ಸರಿ ಎನ್ನುವ ವಿಚಾರ ನಮ್ಮನ್ನು ಕಾಡುವುದು ಸತ್ಯ. ಇಡೀ ಕಾದಂಬರಿಯಲ್ಲಿ ಕೃಷಿ ಪರ ಚಿಂತನೆಗಳಿರುವುದು, ಮೊಲೆ ಹಾಲಿನ ಮಹತ್ವವನ್ನು ನೀಡಿರುವುದು ನಿಜಕ್ಕೂ ಖುಷಿ ತರುವಂತಹ ವಿಚಾರ.

ಭಯದಿಂದ ದಕ್ಕಿಸಿಕೊಳ್ಳುವ ವಿಧೇಯತೆ ಬಹುಕಾಲ ಉಳಿಯುವುದಿಲ್ಲ. ಹಾದರದ ಕಥೆಗಳಲ್ಲಿ ಜನರಿಗೆ ನಂಬಿಕೆ ಬರುವಷ್ಟು ಬೇರೆ ಯಾವುದರಲ್ಲೂ ಬರುವುದಿಲ್ಲ. ಅತ್ಯಾಚಾರದ ಪಾಪವೂ ಅತ್ಯಾಚಾರಿಗೆ ಮಾತ್ರ ಮೆತ್ತಿಕೊಳ್ಳಬೇಕೆ ಹೊರತು ಬಲಿಯಾದವಳಿಗೆ ಯಾಕೆ ತಗುಲಬೇಕು? ಸಹೋದರಿಯರ ಒಡನಾಟ ಇಲ್ಲದೆ ಬೆಳೆಯುವ ಗಂಡುಮಕ್ಕಳಿಗೆ ಹೆಂಗಸರ ಸೂಕ್ಷ್ಮ ಸಂವೇದನೆಗಳು ಅರ್ಥವಾಗುವುದಿಲ್ಲ ಎನ್ನುವಂತಹ ಕಾದಂಬರಿಯುದ್ದಕ್ಕೂ ಬರುವಂತಹ ವಿವಿಧ ಅರ್ಥಪೂರ್ಣ ವಿಚಾರಗಳು ಉತ್ತರಕಾಂಡವನ್ನು ಕೊನೆಯವರೆಗೂ ಓದಿಸಿಕೊಳ್ಳುತ್ತವೆ.

ಕೊನೆಯಲ್ಲಿ ಧರ್ಮ ಸಭೆ ನಡೆವಾಗ ಸೀತೆ ದೊಡ್ಡ ಸಭೆಯಲ್ಲಿ ಎಲ್ಲರೆದುರೇ ನನ್ನ ಮಕ್ಕಳು ನಿಮ್ಮ ಮಹಾರಾಜನ ಮಕ್ಕಳಲ್ಲ. ಆದ್ದರಿಂದ ಅವರಿಗೆ ವಂಶ ಪಾರಂಪರ್ಯದ ಅಧಿಕಾರವಿಲ್ಲ ಎಂದು ಹೇಳಿದಾಗ ಓದುಗನಿಗೆ ಅಚ್ಚರಿ. ಆ ಬಳಿಕ ಸೀತೆ ಆಡುವ ಮಾತುಗಳಿವೆಯಲ್ಲ ಅದು ಪ್ರತಿಯೊಬ್ಬರ ಸ್ವಾಭಿಮಾನ ಮತ್ತು ಜವಬ್ದಾರಿಯನ್ನು ಎತ್ತಿ ಹಿಡಿಯುವಂತಾದ್ದು. ಅಂದೊಮ್ಮೆ ರಾವಣ ಇಂದ್ರನನ್ನು ಗೆದ್ದು ವಿಜೃಂಭಿಸಲಿ ಎನ್ನುವ ಆಶಯದಿಂದ ನಿನಗೆ ಇಂದ್ರಜಿತು ಎಂದು ಹೆಸರಿಟ್ಟೆ ಎಂದು ಮಗನಿಗೆ ಹೇಳಿದಾಗ ವಿಭೀಷಣ ಪ್ರತಿಕ್ರಿಯಿಸುತ್ತಾ ಇಂದ್ರನಂತಹ ಹಾದರಬಡುಕ ಯಾರೂ ಇಲ್ಲ ಎನ್ನುವ ಕತೆ ಇದೆ. ಆ ಇಂದ್ರನನ್ನು ಮೀರಿಸುವಂತವನಾಗು ಎಂದು ನಿಮ್ಮಪ್ಪ ನಿನಗೆ ಇಂದ್ರಜಿತು ಎಂದು ಹೆಸರಿಟ್ಟ. ಬೇರೆ ಸಂಭಾವಿತ ಅಪ್ಪನಾಗಿದ್ದರೆ ಇಂದ್ರಿಯಗಳನ್ನು ಜಯಿಸುವವನಾಗಲಿ ಅಂತ ಇಂದ್ರಿಯ ಜಿತ ಅಂತ ನಾಮಕರಣ ಮಾಡುತ್ತಿದ್ದ ಎನ್ನುತ್ತಾನೆ. ಇಂತಹ ಮಾತುಗಳು ಕುತೂಹಲ ಮೂಡಿಸುತ್ತವೆ. ಒಟ್ಟಿನಲ್ಲಿ ಉತ್ತರಕಾಂಡದ ಓದು ನಮಗೆ ಜ್ಞಾನದ ಅಗಾಧತೆಯ ಜೊತೆ ಜೊತೆಗೆ ಬದುಕಿನ ವಿವಿಧ ಮುಖಗಳನ್ನು ಪರಿಚಯಿಸುವದರಲ್ಲಿ ಯಶಸ್ವಿಯಾಗಬಲ್ಲುದು.

ಕೊನೇ ಪ್ರಶ್ನೆ: ಭೈರಪ್ಪನವರನ್ನು ಸ್ತ್ರೀ ವಿರೋಧಿ ಎಂದು ಹೇಳಿದವರು ಉತ್ತರಕಾಂಡದಲ್ಲಿ ಸೀತೆ ನಾಯಕಿಯಾದದ್ದನ್ನು ನೋಡಿ ಅದೆಷ್ಟು ಹೊಟ್ಟೆ ಉರಿದುಕೊಂಡರೊ!?

3 ಟಿಪ್ಪಣಿಗಳು Post a comment
  1. ಮಾರ್ಚ್ 16 2017

    ನಾನು ಓದಿದೆ. ಪುಷ್ಪಕ ವಿಮಾನ ಪ್ರಸ್ತಾಪ ಇಲ್ಲ ಅನಿಸುತ್ತದೆ.

    ಉತ್ತರ
  2. ಅವಿನಾಶ್ ಭಟ್
    ಮಾರ್ಚ್ 17 2017

    ಒಳ್ಳೆಯ ವಿಮರ್ಶೆ,
    ಲಕ್ಷ್ಮಣ ರೇಖೆ ವಾಲ್ಮೀಕಿ ರಾಮಾಯಣದಲ್ಲೇ ಇಲ್ಲ. ಇನ್ನು ಲಂಕಾ ದಹನ, ಪುಷ್ಪಕ ವಿಮಾನ ಇವೆಲ್ಲ ಮಾನವಾತೀತ ವಾದದ್ದು, ಹೀಗಾಗಿ ಸೇರಿಸಿಲ್ಲ. ಜಟಾಯುವನ್ನು ಸೇರಿಸಬಹುದಿತ್ತು, ಹಕ್ಕಿಯೊಂದು ಬಂದು ಆ ರಾಕ್ಷಸರನ್ನು ಕುಕ್ಕಿತು ಅಂತ ಸೇರಿಸಿದ್ದಿದ್ದರೆ ಅದರಲ್ಲಿ ಯಾವ ರಸವೂ ಇರ್ತಿರಲಿಲ್ಲವೇನೋ, ಹಾಗಾಗಿ ಬಿಟ್ಟಿರಬಹುದು
    ಮುಖ್ಯವಾಗಿ ಕಾಡುವ ಇನ್ನೊಂದು ಅಂಶ, ರಾಮ ಶೂದ್ರಳಾದ ಶಬರಿಯನ್ನು ನೋಡಿದ ದೃಷ್ಟಿ ಮತ್ತು ಶೂದ್ರ ತಪಸ್ವಿಯನ್ನು ನೋಡಿದ ದೃಷ್ಟಿಯಲ್ಲಿರುವ ವೈರುಧ್ಯ ಮತ್ತು ನೈಜತೆ. ಎಷ್ಟೋ ಬಾರಿ ನಮಗೆ team member ಆಗಿದ್ದಾಗ ಸರಿ ಅನಿಸಿದ್ದು team lead ಆದಾಗ ತಪ್ಪು ಅನಿಸುವುದಿಲ್ಲವೇ, ಹಾಗೆ

    ಉತ್ತರ
  3. ಅನಂತ ಹೋರಾಟ
    ಮಾರ್ಚ್ 17 2017

    ಉತ್ತರಕಾಂಡವನ್ನು ಓದಿ ಮೆಚ್ಚಿದವರು ಪೋಲಂಕಿ ರಾಮಮೂರ್ತಿ ರಚಿತ ಸೀತಾಯಣದ ಬಗ್ಗೆ ಏಕೆ ಏನನ್ನೂ ಹೇಳದೆ ಮೌನವಾಗಿದ್ದಾರೆ?

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments