ತಡೆವವರು ಬನ್ನಿರೋ ಹೊಡೆವವರು ಬನ್ನಿರೋ ಎನ್ನುತ್ತಾ ಸಾಗುತ್ತಿದೆ #ಜನರಕ್ಷಾಯಾತ್ರೆ
– ಸಂತೋಷ್ ತಮ್ಮಯ್ಯ
೨೯ ವರ್ಷದ ಹಿಂದೆ ಅವರು ಪಾಲಕ್ಕಾಡಿನಲ್ಲಿ ಸಂಘದ ಶಾರೀರಿಕ್ ಪ್ರಮುಖ್ ಆಗಿದ್ದ ವಿ.ಸುಧಾಕರನ್‌ರನ್ನು ಬಸ್ಸಿನಿಂದೆಳೆದು ಬರ್ಬರವಾಗಿ ಕೊಲೆಮಾಡಿದ್ದರು. ಸುಧಾಕರನ್ ಕೋಯಿಕ್ಕೋಡಿನ ಬಿಜೆಪಿಯ ಕಾರ್ಯಕರ್ತನೆಂಬುದೊಂದೇ ಕಾರಣ. ೨೧ ವರ್ಷದ ಹಿಂದೆ ತ್ರಿಶೂರಿನಲ್ಲಿ ಟಿ.ಎಸ್ ಸಂತೋಷ್ ಎಂಬ ಸಣ್ಣ ವ್ಯಾಪಾರಿಯನ್ನೂ ಕೊಂದರು. ಅದಕ್ಕೂ ಕಾರಣ ಬಿಜೆಪಿ ಕಾರ್ಯಕರ್ತ ಎಂಬುದೊಂದೇ. ೩೯ ವರ್ಷದ ಹಿಂದೆ ಕಣ್ಣೂರು ಜಿಲ್ಲೆಯ ಪನ್ನನೂರ್ ಚಂದ್ರನ್ ಎಂಬವರನ್ನು ಸಂಘ ಸ್ಥಾನದಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಅದಕ್ಕೆ ಕಾರಣ ಕಮ್ಯುನಿಸ್ಟ್ ಗ್ರಾಮದಲ್ಲಿ ಶಾಖೆ ನಡೆಸಿದ ಎಂಬ ಒಂದೇ ಕಾರಣ. ೩೦ ವರ್ಷದ ಹಿಂದೆ ಕೋಯಿಕ್ಕೋಡಿನ ಬಿಎಂಎಸ್ ಕಾರ್ಯಕರ್ತ ಸಿ.ಕೆ ರಾಮಚಂದ್ರನ್ ಅವರನ್ನು ಮುಖದ ಗುರುತು ಕೂಡಾ ಸಿಗದಂತೆ ಕಮ್ಯುನಿಸ್ಟರು ಕೊಂದಿದ್ದರು. ಕಾರಣ, ಕಾರ್ಮಿಕ ಯೂನಿಯನ್ನುಗಳು ಕೇವಲ ಕಮ್ಯುನಿಸ್ಟರ ಸ್ವತ್ತು ಎಂಬ ಮತಾಂಧತೆ. ೧೫ ವರ್ಷದ ಹಿಂದೆ ವೃತ್ತಿಯಲ್ಲಿ ಡ್ರೈವರ್ ಅಗಿದ್ದ ಆರೆಸ್ಸೆಸ್ ಕಾರ್ಯಕರ್ತ ಉತ್ತಮನ್‌ರನ್ನೂ ಕಮ್ಯುನಿಸ್ಟರು ಹೀಗೇ ಕೊಂದಿದ್ದರು. ೧೨ ವರ್ಷಗಳ ಹಿಂದೆ ಕಣ್ಣೂರಿನ ಆರೆಸ್ಸೆಸ್ ಜಿಲ್ಲಾ ಬೌದ್ಧಿಕ್ ಪ್ರಮುಖ್ ಅಶ್ವಿನ್ ಕುಮಾರ್‌ರನ್ನೂ ಕಮ್ಯುನಿಸ್ಟರು ಧಾರುಣವಾಗಿ ಕೊಚ್ಚಿಹಾಕಿದ್ದರು.
೧೯೬೯ರಿಂದ ಕಮ್ಯುನಿಸ್ಟರು ಹೀಗೆ ಕೊಂದ ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಸಂಖ್ಯೆ ೨೮೪. ಈಗಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಕಾರಕ್ಕೆ ಬಂದ ನಂತರ ನಡೆದ ಕೊಲೆಗಳ ಸಂಖ್ಯೆಯೇ ೧೪! ಎಲ್ಲಾ ಕೊಲೆಗಳಿಗೆ ಕಾರಣ ಕೇರಳದಲ್ಲಿ ಕಮ್ಯುನಿಸಮ್ಮಿಗೆ ಹೊರತಾದ ಯಾವುದೂ ಅಸ್ತಿತ್ವದಲ್ಲಿರಬಾರದು ಎಂಬ ಅಸಹನೆ, ರಾಷ್ಟ್ರೀಯತೆಯೆಂಬುದು ಅಳಿಯಬೇಕು, ಸಂಘರ್ಷ ಉಂಟಾಗಬೇಕು, ಮತೀಯ ದಾಹ. ಒಟ್ಟಾರೆ ಬಲಪಂಥೀಯರು ಹೆದರಿ ಮೂಲೆಸೇರಬೇಕು ಎಂಬುದು. ವಿಶೇಷವೆಂದರೆ ಕೇರಳದಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಕೊಲೆಗಳಾದಷ್ಟೂ ಅವೆರಡೂ ಬೆಳೆಯುತ್ತಲೇ ಇವೆ. ಹರಿದ ರಕ್ತವನ್ನೇ ಕಾರ್ಯಕರ್ತರು ಗಂಧದಂತೆ ಹಣೆಗೆ ಹಚ್ಚಿಕೊಂಡಿದ್ದಾರೆ. ವ್ಯಕ್ತಿಗಳ ಕೊಲೆಯಿಂದ ವಿಚಾರವಂತಿಕೆ ಸಾಯುವುದಿಲ್ಲ ಎಂಬುದಕ್ಕೆ ಕೇರಳ ಸಾಕ್ಷಿಯೆಂಬಂತೆ ಕಳೆದ ಹನ್ನೊಂದು ದಿನಗಳಿಂದ ನಡೆಯುತ್ತಿರುವ ಜನರಕ್ಷಾ ಯಾತ್ರೆಯಲ್ಲಿ ರಾಮಚಂದ್ರನ್ ಮಗಳು ದೇವಾಂಗನಾ ವಂದೇ ಮಾತರಂ ಹಾಡುತ್ತಾಳೆ, ತಲಶೇರಿ ಸಂತೋಷ್ ಮಗಳು ವಿಸ್ಮಯಾ ಕಣ್ಣೀರು ಹಾಕುತ್ತಾ ಪಾದಯಾತ್ರೆ ಮಾಡುತ್ತಿದ್ದಾಳೆ, ರಾಧಾಕೃಷ್ಣನ್ ಪತ್ನಿ ವಿಮಲಾ ಮೂಕವಾಗಿ ಪಾದಾಯಾತ್ರೆ ಸಾಗುತ್ತಿದ್ದಾರೆ, ಪಾನೂರು ಚಂದ್ರನ್ ಪತ್ನಿ ಅರುಂಧತಿ ನನ್ನಂಥ ದುಖಃ ಮತ್ತಾರಿಗೂ ಬರಬಾರದೆಂದು ಬಂದಿದ್ದೇನೆ ಎಂದು ಗುಡುಗುತ್ತಾರೆ, ದಿವಂಗತ ಉತ್ತಮನ್ ಅಪ್ಪನೂ, ಮಕ್ಕಳೂ ಯಾತ್ರೆಯಲ್ಲಿ ಪಾಲ್ಗೊಂಡು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಅಶ್ವಿನ್ ಕುಮಾರರ ವೃದ್ದ ತಾಯಿಯ ಮುಖದಲ್ಲಿ ಪುತ್ರಶೋಕಕ್ಕಿಂತಲೂ ಕಮ್ಯುನಿಸ್ಟರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತದೆ. ಅಂದರೆ ಯಾವುದನ್ನು ಸಮೂಲ ನಿರ್ನಾಮ ಮಾಡಬೇಂದು ಕಮ್ಯುನಿಸ್ಟರು ಮತ್ತು ಜಿಹಾದಿಗಳು ರಕ್ತ ಚೆಲ್ಲಿದ್ದರೋ ಆ ಉದ್ದೇಶವಿನ್ನೂ ಕೇರಳದಲ್ಲಿ ಈಡೇರಿಲ್ಲ. ಈಡೇರುವುದೂ ಇಲ್ಲ ಎಂಬುದು ಯಾತ್ರೆಯ ಪ್ರತೀಹೆಜ್ಜೆಯೂ ಸಾರುತ್ತಿದೆ. ಜನರಕ್ಷಾ ಯಾತ್ರೆ ವಿಶೇಷವೆನಿಸುವುದು ಇಷ್ಟಕ್ಕೇ ಮಾತ್ರವಲ್ಲ. ಅದು ರಾಜಕೀಯ ನಡೆಯೂ ಅಲ್ಲ, ಕೇವಲ ಆಕ್ರೋಶದ ಉದ್ದೇಶವೂ ಅಲ್ಲ. ನಿಜಕ್ಕೂ ಅದೊಂದು ವೈಚಾರಿಕ ಸಂಘರ್ಷ.