ಅಂಬೇಡ್ಕರ್ ಅವರ ಮತಪರಿವರ್ತನೆ ಮತ್ತು ಸಮಕಾಲಿನ ಸವಾಲುಗಳು
– ರಘು.ಎಸ್,ಸಂಶೋಧನಾ ವಿದ್ಯಾರ್ಥಿ,
ಕುವೆಂಪು ವಿಶ್ವವಿದ್ಯಾನಿಲಯ,ಜ್ಞಾನ ಸಹ್ಯಾದ್ರಿ ಶಂಕರಘಟ್ಟ.
ಕೆಲವು ದಿನಗಳ ಹಿಂದೆ ಯಾವುದೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಂಬೇಡ್ಕರ್ ಅವರ ಮೊಮ್ಮೊಗರಾದ ಪ್ರಕಾಶ್ ಯಶವಂತ್ ಅಂಬೇಡ್ಕರ್ ಅವರು ಸಾರ್ವಜನಿಕವಾಗಿ ದಲಿತರೆಲ್ಲರೂ ಮತಾಂತರವಾಗಬೇಕು ಎಂದು ಕರೆ ನೀಡುತ್ತಾರೆ. ಇದು ಕೇವಲ ಅಂಬೇಡ್ಕರ್ ಮೊಮ್ಮೊಗ ಅವರ ಕರೆ ಮಾತ್ರ ಅಲ್ಲ. ಇಂದು ದಲಿತ ಸಮಸ್ಯೆಯ ಕುರಿತು ಮಾತನಾಡುವ ಬಹುತೇಕ ಚಿಂತಕರು ತಮ್ಮ ಭಾಷಣಗಳಲ್ಲಿ ಹಾಗೂ ಬರವಣಿಗೆಗಳಲ್ಲಿ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಇದಕ್ಕೆ ಕಾರಣವೇನು? ಅಥವಾ ದಲಿತರು ಏಕೆ ಹಿಂದೂಧರ್ಮವನ್ನು ಬಿಟ್ಟು ಬೇರೆ ರಿಲಿಜನ್ನುಗಳಿಗೆ ಮತಾಂತರವಾಗಬೇಕು? ಎಂದು ಕೇಳಿದರೆ ಅಂಬೇಡ್ಕರ್ ಅವರ ವಾದದ ಹೊರತಾಗಿ ಯಾವ ಹೊಸ ಅಂಶವನ್ನು ಇವರ ಉತ್ತರದಲ್ಲಿ ಗುರುತಿಸಲು ಸಾಧ್ಯವಾಗುವುದಿಲ್ಲ.
ಅಂದರೆ “ಭಾರತದಲ್ಲಿ ಹಿಂದೂಯಿಸಂನ ಅವಿಭಾಜ್ಯ ಅಂಗವಾಗಿರುವ ಜಾತಿವ್ಯವಸ್ಥೆಯು ಶ್ರೇಣಿಕರಣಗೊಂಡಿದ್ದು, ಈ ಶ್ರೇಣಿಕರಣದಲ್ಲಿ ಬ್ರಾಹ್ಮಣ ಪುರೋಹಿತಶಾಹಿಗಳು ಮೇಲ್ವರ್ಗದವರಾದರೆ ದಲಿತರು ಕೆಳವರ್ಗದವರಾಗಿದ್ದಾರೆ. ಈ ಹಿನ್ನಲೆಯಲ್ಲಿ ಭಾರತದಲ್ಲಿ ಸಾವಿರಾರು ವರ್ಷಗಳಿಂದಲೂ ಬ್ರಾಹ್ಮಣ ಪುರೋಹಿತಶಾಹಿಗಳು ಹಾಗೂ ದಲಿತರ ನಡುವೆ ವರ್ಗ ಸಂಘರ್ಷ ನಡೆಯುತ್ತಿದೆ. ಈ ವರ್ಗ ಸಂಘರ್ಷದಲ್ಲಿ ದಲಿತರು ಬದುಕುಳಿಯಲು ಸಾಧ್ಯವಿಲ್ಲ. ಕಾರಣ ದಲಿತರಿಗೆ ಹಣಬಲವಾಗಲಿ, ಜನಬಲವಾಗಲಿ ಅಥವಾ ಬುದ್ಧಿಬಲವಾಗಲಿ ಇಲ್ಲ. ಈ ಕಾರಣಕ್ಕೆ ದಲಿತರು ಹಿಂದೂಯಿಸಂ ಗೆ ಹೊರತಾದ ಬೇರೊಂದು ರಿಲಿಜನ್ನಿಗೆ ಮತಾಂತರವಾಗದ ಹೊರತು ಹಿಂದೂಗಳ ದಬ್ಬಾಳಿಕೆಯಿಂದ ಮುಕ್ತವಾಗಲು ಸಾಧ್ಯವಿಲ್ಲ”ಎನ್ನುವುದು ಅಂಬೇಡ್ಕರ್ ಅವರ ವಾದ. ಇಂದು ಮತಾಂತರದ ಪರವಾಗಿ ಮಾತನಾಡುವ ಚಿಂತಕರು ಕೂಡ ಅಂಬೇಡ್ಕರ್ ಅವರ ಮೇಲಿನ ವಾದವನ್ನೇ ಪುನರುಚ್ಚರಿಸುವುದು ಕಂಡುಬರುತ್ತದೆ. ಆದರೆ ಅಂಬೇಡ್ಕರ್ ಅವರ ವಾದವನ್ನು ಮುಂದೊತ್ತುತ್ತಿದ್ದೇವೆ ಎನ್ನುವ ಪ್ರಸ್ತುತ ಚಿಂತಕರು ತಮಗೆ ಅರಿವಿಲ್ಲದೇ ಅಂಬೇಡ್ಕರ್ ಅವರಿಗೆ ವಿರುದ್ಧವಾಗಿ ನಿಲ್ಲುತ್ತಾರೆ. ಪ್ರಸ್ತುತ ಲೇಖನದಲ್ಲಿ ಇದನ್ನು ಪರಿಶೀಲಿಸಲಾಗುವುದು.
ಭಾರತದಲ್ಲಿ ಹಿಂದೂಯಿಸಂ ಹಾಗೂ ಜಾತಿವ್ಯವಸ್ಥೆಯ ಕಾರಣದಿಂದಾಗಿ ದಲಿತರು ಅನೇಕ ರೀತಿಯ ಸಮಸ್ಯೆಗಳಿಗೆ ಒಳಗಾಗಿದ್ದಾರೆ ಎಂದು ಹೇಳುವ ಅಂಬೇಡ್ಕರ್ ಅವರು, ಹಿಂದೂಯಿಸಂ ಅನ್ನು ತೊರೆಯುವುದೇ ದಲಿತರ ಸಮಸ್ಯೆ ನಿವಾರಣೆಯಾಗಲು ಸೂಕ್ತ ಪರಿಹಾರ ಎಂದು ಹೇಳುತ್ತಾರೆ ಎನ್ನುವುದೇನೋ ನಿಜ. ಆದರೆ ಈ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಪೂರ್ವಭಾವಿಯಾಗಿ ಸಾಕಷ್ಟು ಅಧ್ಯಯನವನ್ನು ನಡೆಸುರುತ್ತಾರೆ. 1935ರಲ್ಲಿ “ಹಿಂದೂವಾಗಿ ಹುಟ್ಟಿದ್ದೇನೆ ಆದರೆ ಹಿಂದೂವಾಗಿ ಸಾಯಲಾರೆ”ಎಂದು ಹೇಳುವ ಅಂಬೇಡ್ಕರ್ ಅವರು ಅಂತಿಮವಾಗಿ 1956ರಲ್ಲಿ ತಮ್ಮ ಲಕ್ಷಾಂತರ ಅನುಯಾಯಿಗಳ ಜೊತೆ ಬೌದ್ಧ ಧರ್ಮವನ್ನು ಸ್ವೀಕರಿಸುತ್ತಾರೆ. ಬೌದ್ಧ ಧರ್ಮವನ್ನೇ ಏಕೆ ಸ್ವೀಕರಿಸಿದರು? ಬಹುಶಃ ಮತಾಂತರದ ಪರವಾಗಿ ಮಾತನಾಡುವ ಪ್ರಸ್ತುತ ಚಿಂತಕರಿಗೆ ಈ ಪ್ರಶ್ನೆ ಹೊಳೆದಿರಲಿಕ್ಕಿಲ್ಲ. ಆದರೆ ಅಂಬೇಡ್ಕರ್ ಅವರ ಬರವಣಿಗೆಗಳ ಕಡೆ ಕಣ್ಣು ಹಾಯಿಸಿದರೆ ಇದಕ್ಕೆ ಸ್ಪಷ್ಟವಾದ ಉತ್ತರ ಸಿಗುತ್ತದೆ. ಅಂದರೆ ದಲಿತರ ಸಮಸ್ಯೆಗೆ ಮತಾಂತರವೇ ಅಂತಿಮ ಪರಿಹಾರ ಎಂದು ಹೇಳುವ ಅಂಬೇಡ್ಕರ್ ಅವರು ಯಾವ ಮತಕ್ಕೆ ಹೋದರೆ ದಲಿತರ ಸಮಸ್ಯೆ ಬಗೆಹರಿಯಲು ಸಾಧ್ಯ ಎನ್ನುವುದರ ಕುರಿತೂ ಚಿಂತನೆ ನಡೆಸುತ್ತಾರೆ.