ವಿಷಯದ ವಿವರಗಳಿಗೆ ದಾಟಿರಿ

Archive for

21
ಆಕ್ಟೋ

ಮತ,ಪಂಥ,ಧರ್ಮ,Religion ಇತ್ಯಾದಿ… ಭಾಗ 1

– ದೇವು ಹನೆಹಳ್ಳಿ,
ಬಾರಕೂರು, ಉಡುಪಿ

 

ಒಂದು ಕಲ್ಲನು ಕಡಿದು ಮತ್ತೊಂದು ಕಲ್ಲಿಗೆ

ಭೋಗವ ಕೊಟ್ಟಿಹೆನೆಂಬ ಅಜ್ಞಾನವಿದೇನೋ?

–  ಅಲ್ಲಮಪ್ರಭು

 

ಲಿಂಗಾಯತ, ವೀರಶೈವ ‘ಸ್ವತಂತ್ರಧರ್ಮ’ ಘೋಷಣೆ, ಮಾನ್ಯತೆ ಇತ್ಯಾದಿಗಳ ಕುರಿತು ವ್ಯಾಪಕ ಚರ್ಚೆ, ಗುದ್ದಾಟಗಳನ್ನು ಪ್ರಸ್ತಾಪಿಸುವ ಮೊದಲು ‘ನಾನು ಯಾರು’ ಎಂಬುದನ್ನು ಸ್ಪಷ್ಟಗೊಳಿಸುವುದು ಅಗತ್ಯ ಮತ್ತು ಒಳಿತು. ಕಳೆದೆರಡು ಸಾವಿರ ವರ್ಷಗಳಿಂದ ‘ನಾನ್ಯಾರು’ ಎಂಬುದು ನನ್ನ ಸಮಸ್ಯೆಯಾಗಿರಲಿಲ್ಲ. ಯಾಕೆಂದರೆ ನಾನು ಅಜ್ಞಾನಿ, ಮೂಢ. ಅದು ಯಾರಿಗೆ ಸಮಸ್ಯೆಯಾಯಿತೋ ಅವರೇ ನೀಡಿದ ವ್ಯಾಖ್ಯೆಗಳನ್ನು ಒಪ್ಪಿಕೊಳ್ಳುತ್ತೇನೆ. ಏಕೆಂದರೆ ಅದು ಅನಿವಾರ್ಯ. ಹೌದು, ನಾನು ಪೇಗನ್,ಕಾಫಿರ, ಹೀದನ್. ಅನಂತರ ಹಿಂದೂ ಎಂದರು. “ಹಿಂದೂ” ಎನ್ನಿಸಿಕೊಳ್ಳುವುದು ಕೂಡಾ ನನ್ನ ಅಗತ್ಯವಾಗಿರಲಿಲ್ಲ, ಕೋರಿಕೆಯಾಗಿರಲಿಲ್ಲ. (ಕುರಿಯನ್ನು ‘ಕುರಿ’ ಎನ್ನುವುದು ಕುರಿಯ ಅಗತ್ಯವೇನೂ ಅಲ್ಲವಲ್ಲ?!) ಆದರೂ ಒಪ್ಪಿಕೊಳ್ಳುತ್ತೇನೆ. ಈಗ ಎಸ್.ಎಂ. ಜಾಮದಾರ್, ಗೊ.ರು.ಚ., ರಂಜಾನ್ ದರ್ಗಾ, ಮಾತೆ ಮಹಾದೇವಿ, ಮೀನಾಕ್ಷಿ ಬಾಳಿ ಮೊದಲಾದ ಶರಣಶರಣೆಯರು, ಅಸಂಖ್ಯ ಮಠಾಧೀಶರು, ಸಿದ್ಧರಾಮಯ್ಯನವರ ಸರಕಾರದ ಮಂತ್ರಿಗಳು, ಚಿಂತಕರು, ಪ್ರಗತಿಪರರು, ಪತ್ರಕರ್ತರು, ವಿಚಾರವಾದಿಗಳು, ಬುದ್ಧಿಜೀವಿಗಳು, liberals ಮುಂತಾದವರು ಒಂದು ಕೈಯಲ್ಲಿ ನನ್ನ ಕತ್ತು ಹಿಡಿದು, ಇನ್ನೊಂದು ಕೈಯಲ್ಲಿ ಕತ್ತಿ ಹಿಡಿದು ‘ಭವಿ’ ಎಂದು ಕರೆಯುತ್ತಿದ್ದಾರೆ. ನಾನು ಅಜ್ಞಾನಿಯಲ್ಲವೇ? ಮಹಾಪ್ರಸಾದವೆಂಬೆನು! (ಭವಿ ಎಂದರೆ ಇಷ್ಟಲಿಂಗವನ್ನು ಪೂಜಿಸದವನು; ಲೌಕಿಕವನ್ನು, ಅಂದರೆ ಭವವನ್ನು ನೆಚ್ಚಿ ಮೋಕ್ಷ ಪಡೆಯಲಾರದವನು; ಪಾಪಿ ಇತ್ಯಾದಿ.)

ಸತ್ಯವೆಂದರೆ ಪೇಗನ್, ಹೀದನ್, ಕಾಫಿರ್, ಹಿಂದೂ, ಭವಿ ಎಂಬೆಲ್ಲಾ ಬಿರುದುಗಳಿಗೂ, ಪಾಪಿ, ಅಜ್ಞಾನಿ, ಅವಿಶ್ವಾಸಿ, ಕಳ್ಳ, ಮೂರ್ತಿಪೂಜೆ ಮಾಡುವ ಮೂರ್ಖ, ಕಂದಾಚಾರಿ, ಮೂಢ, ಅನಾಚಾರಿ, ಮಿಥ್ಯಾರಾಧಕ ಎಂಬೆಲ್ಲಾ ಪದನಾಮಗಳಿಗೂ ಅಂತಹ ವ್ಯತ್ಯಾಸವೇನೂ ಇಲ್ಲ! ಜತೆಗೆ ವೈಯಕ್ತಿಕವಾಗಿ ನಾನು ನಾಸ್ತಿಕ ಮತ್ತು ನಿರೀಶ್ವರಿ. (ನಿರೀಶ್ವರವಾದಿಯಲ್ಲ.) ಅದು ಕೂಡಾ ಕಳೆದ 2-3 ಸಾವಿರ ವರ್ಷಗಳಿಂದ ನಾನು, ನನ್ನಂತಹ ಅಸಂಖ್ಯ ಪೇಗನ್ನರಿಗೆ ಸಮಸ್ಯೆಯಾಗಿರಲಿಲ್ಲ; ಯಾವ ಪೇಗನ್ನರೂ ನನ್ನನ್ನು ಸಾರ್ವಜನಿಕವಾಗಿ ಸುಡಲಿಲ್ಲ.

ನಾವು ನಮ್ಮ ಅಜ್ಞಾನದಲ್ಲಿ ಸುಖವಾಗಿದ್ದರೂ, ನಮಗೆ ಅವು ಸಮಸ್ಯೆಯಾಗಿ ಕಂಡಿಲ್ಲದಿದ್ದರೂ ‘ಇತರರಿಗೆ’ ಯಾಕೆ ಸಮಸ್ಯೆಯಾದವು? ಇವೆಲ್ಲ ಹಲವು ದಿಕ್ಕಿನಿಂದ ಒಂದಾಗಿ, ಒಂದೊಂದಾಗಿ ಆರಂಭಗೊಂಡವು ಎನ್ನಬಹುದು.

ಮತ್ತಷ್ಟು ಓದು »