ನಮ್ಮ ಯುವಜನತೆಯ ಯೋಚನೆಯ ದಿಕ್ಕು…….???
-ಅರೆಹೊಳೆ ಸದಾಶಿವರಾವ್
ಪ್ರದಕ್ಷಿಣೆ ಎಂಬ ಅಂತರ್ಜಾಲ ಪತ್ರಿಕೆಯೊಂದನ್ನು ಇತ್ತೀಚೆಗೆ ಆರಂಭಿಸಿದ ನಂತರದ ಕೆಲವು ಅನುಭವಗಳು ಒಮ್ಮೊಮ್ಮೆ ಮನಸ್ಸಿಗೆ ತುಂಬಾ ಯೋಚನೆಯ ಸರಕನ್ನು ಒದಗಿಸುತ್ತವೆ. ಇದರಲ್ಲಿ ಮುಖ್ಯವಾದದ್ದು ನಮ್ಮ ಇಂದಿನ ಯುವ ಜನತೆಯ ಆಲೋಚನೆಗಳು.
ಇದಕ್ಕೆ ಪೂರ್ವಭಾವಿಯಾಗಿ ಒಂದೆರಡು ಮಾತುಗಳನ್ನು ನಿಮ್ಮೊಡನೆ ಹೇಳಿಕೊಳ್ಳಲೇ ಬೇಕು. ಅದು ನಮ್ಮ ಬಾಲ್ಯದ ದಿನಗಳು. ಕನಸುಗಳು ಮತ್ತು ಕನಸುಗಳು ಮಾತ್ರವೇ ತುಂಬಿಕೊಂಡಿದ್ದ ಕಣ್ಣುಗಳಿಗೆ ಮನೆಯ ಬಡತನ, ಬೆನ್ನ ಹಿಂದಿರುವ ಸಹೋದರತೆಯ ಬಂಧಗಳು ಅಥವಾ ಆ ಮೂಲಕ ಬಂದೊದಗಿದ ಜವಾಬ್ದಾರಿಗಳು……ಇತ್ಯಾದಿಗಳಾವುವೂ ಹೊರೆ ಅನಿಸುತ್ತಿರಲಿಲ್ಲ. ಅದಕ್ಕೆ ಕಾರಣಗಳು ನಾವು ಬಾಲ್ಯವನ್ನು ಅನುಭವಿಸುತ್ತಿದ್ದ ರೀತಿ. ಮನೆಯಂಗಣದಲ್ಲಿಯೋ, ತೋಟದಲ್ಲಿಯೋ, ಗದ್ದೆಯಲ್ಲಿಯೋ ನಮ್ಮದೇ ಯಕ್ಷಗಾನ, ಪಾಠ ಪುಸ್ತಕಗಳ ನಡುವೆ ಕದ್ದು ಓದುತ್ತಿದ್ದ ಕಾದಂಬರಿ, ಸುಧಾ, ತರಂಗ, ಪ್ರಜಾಮತದಂತಹ ಪತ್ರಕೆಗಳು, ಕಥೆ ಪುಸ್ತಕಗಳು……ಇತ್ಯಾದಿಗಳು, ಮೈಲುಗಟ್ಟಳೆ ದೂರ ನಡೆಯುತ್ತಿದ್ದ ಯಕ್ಷಗಾನಕ್ಕೂ ಕಾಲನಡಿಗೆಯಲ್ಲಿಯೇ ಹೋಗಿ ರಾತ್ರಿ ಇಡೀ ಅರ್ದಂಬರ್ಧ ನೋಡುತ್ತಿದ್ದ ಯಕ್ಷಗಾನ-ನಾಟಕಗಳು, ಶಾಲೆಯಲ್ಲಿ ಪ್ರತೀ ಶನಿವಾರದಂದು ನಡೆಯುತ್ತಿದ್ದ ನಮ್ಮದೇ ಪ್ರತಿಭಾಪ್ರದರ್ಶನಗಳು, ಪ್ರತೀ ಶುಕ್ರವಾರ ಸಂಜೆ ಶಾಲೆಯಲ್ಲಿ ನಡೆಯುತ್ತಿದ್ದ ಭಜನೆ……ಇತ್ಯಾದಿಗಳೆಲ್ಲಾ ನಮಗೆ ಬದುಕು ಎಂದರೆ ಏನು ಎಂಬುದನ್ನು ತೋರಿಸುವಲ್ಲಿ ಸಹಾಯಕವಾಗುತ್ತಿದ್ದುವು. ಇಂತಹ ಪರಿಸರ ನಮ್ಮನ್ನು ಸಾಕಷ್ಟು ಉಲ್ಲಾಸದಿಂದಿರುವಂತೆ ನೋಡಿಕೊಳ್ಳುತ್ತಿದ್ದುವು. ಹಾಗೆಂದೇ ಸಹಜವಾಗಿ ಮುಂದೆ ಸಾಹಿತ್ಯ, ಕಲೆಗಳತ್ತ ನಮ್ಮ ಆಸಕ್ತಿ ಬೆಳೆಯುವಲ್ಲಿ ಇವುಗಳು ಸಹಾಯಕವಾಗುತ್ತಿದ್ದುವು.
ಈ ಎಲ್ಲಾ ಹಿನ್ನೆಲೆಗಳೂ ಮುಂದೆ ನಮ್ಮ ಪ್ರತೀ ಕೃತಿಯಲ್ಲೂ ಸಹಜವಾಗಿ ಆಶಾವಾದವನ್ನು ಬಿಂಬಿಸುತ್ತಿದ್ದುವು. ಅದಕ್ಕೆಂದೇ ಅಂದಿನ ಆರಂಭದ ಕವಿಗಳು, ಕತೆಗಾರರು ಅಥವಾ ಚಿಂತಕರು ಆಶಾವಾದದ ಮಾತಾಡುತ್ತಿದ್ದರು, ನಮ್ಮ ಸುತ್ತ ಮುತ್ತಲಿನ ಪ್ರಕೃತಿಗಳೇ ಎಲ್ಲದಕ್ಕೂ ಸಮೃದ್ಧ ವಸ್ತುವಾಗಿ, ಪ್ರತೀ ಕೆಲಸದಲ್ಲೂ…ಅದು ಸಾಹಿತ್ಯವಿರಲಿ, ಬದುಕಿರಲಿ ಒಂದು ಉಲ್ಲಾಸದ ಮತ್ತು ಉತ್ಸಾಹದ ವಾತಾವರಣಕ್ಕೆ ಕಾರಣವಾಗುತ್ತಿದ್ದುವು.