ಏನ್ ಇವಾಗ? ನಾವ್ ಇರೋದೇ ಹೀಗೆ…
-ಸಾತ್ವಿಕ್ ಎನ್ ವಿ
ಒಮ್ಮೊಮ್ಮೆ ಇಂಥ ಪ್ರಸಂಗಗಳಿಗೆ ಹೇಗೆ ಪ್ರತಿಕ್ರಿಯಿಸುವುದೋ ತಿಳಿಯುವುದಿಲ್ಲ. ನಿನ್ನೆ ನಮ್ಮ ಮೇಡಂ ಒಬ್ಬರು ಕಾಲ್ ಮಾಡಿ ’ಸಾತ್ವಿಕ್ ನಿಮ್ಮ ಕಡೆ ಯಾರಾದ್ರೂ ಹುಡುಗಿಯಿದ್ದರೆ ಹೇಳೋ ಅಂದ್ರು’. ಅದಕ್ಕೆ ತಮಾಷೆಯಿಂದ ’ನಾನು ಒಂದು ವಧುವರರ ಕೇಂದ್ರ ತೆಗೆದ್ರೆ ಒಳ್ಳೆ ಕಲೆಕ್ಷನ್ ಆಗಬಹುದು ಅಲ್ವಾ ಮೇಡಂ’ ಅಂದೆ. ಅವರು ತಮ್ಮ ಮಾತಿನಲ್ಲಿ ಗಂಭೀರತೆಯನ್ನು ಬಿಟ್ಟು ಕೊಡದೇ ’ಹಾಗಲ್ಲ, ನಿನಗೆ ಗೊತ್ತಲ್ಲ. ನಮ್ಮಲ್ಲಿ ಅಬಕ ಜಾತಿಯ ವಧುಗಳು ಸಿಗೋದು ಬಹಳ ಕಷ್ಟ ಆಗಿದೆ. ಹಾಗಾಗಿ ಅನಿವಾರ್ಯವಾಗಿ ಬೇರೆ ಜಾತಿಯ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ’ ಅಂದ್ರು. ನನ್ನ ವಯಸ್ಸಿನ ಯೋಚನೆಗೆ ನಿಲುಕದ ವಿಷಯವಾದ ಕಾರಣ ’ಆಯ್ತು ಮೇಡಂ ಪ್ರಯತ್ನಿಸುತ್ತೇನೆ’ ಅಂತ ಹೇಳಿ ಮಾತನ್ನು ಮುಗಿಸಲು ನೋಡಿದೆ.
ಕುತೂಹಲಕ್ಕೆ ’ವರನ ಮನೆಯ ಕಡೆಯಿಂದ ಏನೇನು ನಿರೀಕ್ಷೆಗಳಿರುತ್ತವೆ’ ಅಂತ ಕೇಳಿದೆ. ’ಅಂಥ ವಿಶೇಷಗಳೇನು ಇಲ್ಲ. ಹುಡುಗಿ ತಕ್ಕ ಮಟ್ಟಿಗೆ ಓದಿದ್ದರೆ ಸಾಕು. ಆದರೆ ಆಕೆ ಹುಟ್ಟಿನಿಂದ ಸಸ್ಯಾಹಾರಿ ಕುಟುಂಬದ ಹುಡುಗಿ ಆಗಿರಬೇಕು. ಮದುವೆಯ ನಂತರ ತನ್ನ ತವರಿನ ಜೊತೆಗಿರುವ ಎಲ್ಲ ಸಂಬಂಧಗಳನ್ನು ಕಡಿದುಕೊಳ್ಳಬೇಕು. ಅಕೆಯ ಮನೆಯವರು ವರನ ಮನೆಗೆ ಬರುವುದಾಗಲಿ ಅಥವಾ ಸಂಪರ್ಕ ಇಟ್ಟುಕೊಳ್ಳುವುದಾಗಲಿ ಮಾಡಬಾರದು. ಇವು ಸದ್ಯ ವರನ ಮನೆಯವರು ನಿರೀಕ್ಷಿಸುತ್ತಿರುವ ಅಗತ್ಯಗಳು’ ಎಂದರು. ಎರಡನೆಯ ಸಂಗತಿಯನ್ನು ಕೇಳಿ ನನಗೆ ಸಖೇದಾಶ್ಚರ್ಯವಾಯಿತು.
ಹೆಣ್ಣು ಮಕ್ಕಳ ಕೊರತೆಯಿರುವ ಬೇರೊಂದು ಜಾತಿಯ ಹೆಣ್ಣು ಮಕ್ಕಳನ್ನು ಮದುವೆಯಾಗಬೇಕಾದ ಪರಿಸ್ಥಿತಿಯಿರುವ ಜನರಿಗೂ ಇಷ್ಟೊಂದು ಕರಾರು ಮತ್ತು ಆಯ್ಕೆಗಳಿರುತ್ತವೆಯೇ? ಕೊಡುವವರಿಗೆ ಆಯ್ಕೆಗಳಿರುತ್ತವೆ. ಆದರೆ ಕೇಳುವವರಿಗೆ? ಮತ್ತಷ್ಟು ಓದು
ಹೇಳುವುದು ಒಂದು……
-ಅಭಿನಂದನ್
ಆದರೆ ಒಂದೊಂದ್ ಸಲ ಅದು ಕೇಳಿಸೋದೇ ಇನ್ನೊಂದು ಥರ!!
ಮೊನ್ನೆ ಟ್ರೈನಿನಲ್ಲಿ ಶಿವಮೊಗ್ಗಕ್ಕೆ ಹೋಗ್ತಾ ಇದ್ದೆ. ಮುಂಜಾನೆ ಮಂಪರು..ಯಥಾ ಪ್ರಕಾರ ಮಲಗಿದ್ದೆ.
“ಮಲ್ಗೋರ್ರಿ..ಮಲ್ಗೋರ್ರಿ….!” ಅಂತ ಕೂಗಿಕೊಂಡು ಹೋದ ನಾಸಿಕ ವಾಣಿಯೊಂದು ಮಲಗಿದ್ದ ನನ್ನನ್ನು ಎಬ್ಬಿಸಿತು. ಯಾರಪ್ಪ pirvate ಆಗಿ ಮಲ್ಗಿರೋದನ್ನ public ಮಾಡ್ತಿದಾರೆ ಅಂತ ಕಣ್ಣು ತೆಗೆದು ನೋಡಿದಾಗ ಗೊತ್ತಾಯ್ತು, ಮಲ್ಲಿಗೆ ಹೂವು ಮಾರುವವ ಅವನ ಸಂಕ್ಷಿಪ್ತ, ಕ್ಷಿಪ್ರ, ಗೌಪ್ಯ ಶೈಲಿಯಲ್ಲಿ, “ಮಲ್ಲಿಗೆ ಹೂವು ರೀ, ಮಲ್ಲಿಗೆ ಹೂವು ರೀ….” ಅಂತಿದ್ರು ಅಂತ. ಅವರ speed ಗೆ ಒದ್ದಾಡಿ ಹೋಗಿ, ಬಾಯಿಂದ ಹೊರಗೆ ಬೀಳೋ ಹೊತ್ತಿಗೆ ಅದು “ಮಲ್ಗೋರ್ರಿ” ಆಗೋಗಿತ್ತು.
ಈ ಆಸಾಮಿ ಎಷ್ಟೋ ಪರವಾಗಿಲ್ಲ. ನಮ್ಮ ಮನೆ ಹತ್ತಿರ ಹೂವು ಮಾರುವವ ಏನು ಹೇಳುತ್ತಾರೋ ಇದುವರೆಗೂ ನಂಗೆ ಗೊತ್ತಾಗಿಲ್ಲ. ಒಟ್ಟಿನಲ್ಲಿ “ನಾನು ಹೂವು ಮಾರುತ್ತಿದ್ದೀನಿ” ಅನ್ನೋದನ್ನ ಅವ ಭಾರೀ effective ಆಗಿ ವರ್ಷಗಳಿಂದ communicate ಮಾಡುತ್ತಾ ಬಂದಿದ್ದಾರೆ…ಅದೂ ಅವರದೇ ಬಾಯಿಂದ.
ಇನ್ನು ಎಳನೀರಿನ ಗತಿಯಂತೂ ಬ್ಯಾಡ್ವೇ ಬ್ಯಾಡ. “ಎನ್ನೀರ್ರು”, “ನ್ನೀರ್ರು”, “ಈರ್ರು”, “…ರ್ರು”…ಅದಕ್ಕೇ ಒಂದು ತತ್ಸಮ ತದ್ಭವ ಗ್ರಂಥ ಬರೀಬೋದೇನೋ.
ಬಸ್ಸಿನಲ್ಲಿ ಕಂಡಕ್ಟರ್ರು “ಓಲ್ಡೈನ್” ಅಂತಿದ್ದಿದ್ದು ನನಗೆ ಚಿಕ್ಕಂದಿನಲ್ಲಿ ಸುಮಾರು ವರ್ಷಗಳ ಕಾಲ ತಲೆ ಕೆಡೆಸಿತ್ತು, ಅದ್ಯಾವ ಭಾಷೆಯಲ್ಲಿ ಅದರ ಅರ್ಥ ಎನು ಅಂತ. ಯಾರೋ ಪುಣ್ಯಾತ್ಮೆ sophisticated ಅಜ್ಜಿ ಒಂದು ದಿನ ಸ್ಟಾಪಿನಲ್ಲಿ ನಿಲ್ಲಿಸದೆ ಮುಂದೆ ಹೋಗುತ್ತಿದ್ದ ಬಸ್ಸಿನಿಂದ ಇಳೀಬೇಕಾದ್ರೆ ದಯನೀಯವಾಗಿ “HOLD ON PLEASE” ಅಂತ ಕೂಗಿದಾಗ್ಲೇ ಗೊತ್ತಾಗಿದ್ದು , ಓಲ್ಡೈನ್ ಎಲ್ಲಿಂದ ದಾರಿ ತಪ್ಪಿ ಬಂತು ಅಂತ.
ರೈಲು, ಬಸ್ಸು ಸ್ಟೇಷನ್ನುಗಳಲ್ಲಿ ಇಡ್ಲೀನ ಹೇಗೆಲ್ಲಾ ಚಿತ್ರಾನ್ನ ಮಾಡಲ್ಲ. “ಯಾರ್ರೀಡ್ಲಿ?”, “ಯಾರ್ಗಿಡ್ಲಿ?”, “ಎಲ್ರೀಡ್ಲಿ?”…
ಅಮೇರಿಕ ಕಡೆ ವಿಮಾನಗಳಲ್ಲಂತೂ orange juice ಅಂದ್ರೆ ಅರ್ಥ ಆಗದೆ ಇರೋ ಅಷ್ಟರ ಮಟ್ಟಿಗೆ ಅದು “onjuce” ಆಗೋಗಿದೆ. ಮತ್ತಷ್ಟು ಓದು
ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 15: ಸಣ್ಣವರು,ದೊಡ್ಡವರು…

ದೊಡ್ಡವರೆನಿಸಿದವರು ಹಲವರಲ್ಲಿ ಕೆಲವರು ಈಗ ಕಣ್ಮರೆಯಾಗಿದ್ದಾರೆ. ಇನ್ನು ಕೆಲವರು ನಿವೃತ್ತರಾಗಿದ್ದಾರೆ. ಸಣ್ಣವರಾಗಿದ್ದವರು ಮೆಲ್ಲಮೆಲ್ಲನೆ ದೊಡ್ಡವರಾಗುತ್ತಲಿದ್ದಾರೆ. ನಾನು ಎಳೆಯ ಕಲಾವಿದರನ್ನು ತರಬೇತಿಗಾಗಿ ನಮ್ಮಲ್ಲಿಗೆ ಎಳೆದು ತಂದಾಗ, ನನ್ನ ಆಯ್ಕೆಯ ಕ್ಷೇತ್ರವನ್ನು ವಿಸ್ತಾರಗೊಳಿಸುವ ಧೈರ್ಯ ನನಗಿರಲಿಲ್ಲ. ಮನೆಯವರಿಂದ ಬೇರ್ಪಡಿಸಿ ಹುಡುಗರನ್ನು ನನ್ನ ಬಳಿಗೆ ಕರೆತರಿಸಿಕೊಳ್ಳುವುದು ಅಷ್ಟು ಸುಲಭದ ಕೆಲಸವೂ ಆಗಿರಲಿಲ್ಲ. ನಮ್ಮ ಮನೆಯ ಸಮೀಪದವರನ್ನಾದರೂ ಕರೆತಂದು ಸೇರಿಸಿಕೊಳ್ಳುವ ಮೊದಲು “ನಿಮ್ಮ ಹುಡುಗನಿಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳುತ್ತೇನೆ.” ಎಂಬ ಭರವಸೆ ಕೊಟ್ಟೇ ಕರೆತರಬೇಕಾಗುತ್ತಿತ್ತು. ಹಾಗೆ ತಂದು ತರಬೇತಿ ಮಾಡಿಸಿದವರಲ್ಲಿ ಹೆಚ್ಚಿನವರು ತಮ್ಮ ರಂಗಪ್ರವೇಶದ ಹಾರೈಕೆಗಳನ್ನು ಸಾರ್ಥಕಗೊಳಿಸಿದ್ದಾರೆ. ಇನ್ನು ಕೆಲವರು ತಾವು ಪರಿಣತರಾದೆವೆಂದು ತಿಳಿದುಕೊಂಡಿದ್ದಾರೆ. ಇನ್ನೂ ಕೆಲವರು, ಜೀವನದ ಇತರ ಜಂಜಾಟಗಳಿಗೆ ಸಿಕ್ಕಿ ತಮ್ಮ ಪ್ರತಿಭೆಯನ್ನು ಕಳೆದುಕೊಳ್ಳುವ ಮಟ್ಟಕ್ಕೂ ಮುಟ್ಟಿದ್ದಾರೆ.
ಎಲ್ಲರೂ ಒಂದೇ ರೀತಿಯಾಗಿರಬೇಕೆಂದು ನಿರೀಕ್ಷಿಸುವುದಾದರೂ ಹೇಗೆ? ಏಕರೂಪದ ಸಾಕಾರವೇ ಸಾಕ್ಷಾತ್ಕಾರವಾಗುವುದಾದರೆ, ಭಗವದ್ ಸೃಷ್ಟಿಯಲ್ಲಿ ವೈವಿಧ್ಯವೇ ಇರಲಾರದಲ್ಲ? ನನ್ನೊಂದಿಗೆ ಸಣ್ಣವರಾಗಿದ್ದು ದೊಡ್ಡವರಾಗುತ್ತಿರುವಾಗಲೇ ವಿಧಿಯ ಕಡೆ ಸೇರಿದವರು ಇಬ್ಬರು-ನಮ್ಮ ದೊಡ್ಡಪ್ಪನ ಮಕ್ಕಳು. ಒಬ್ಬನ ಹೆಸರು ರಾಮ, ಇನ್ನೊಬ್ಬನ ಹೆಸರು ಕೃಷ್ಣ. ರಾಮನ ಹೆಸರು ಅವನು ನಿರ್ವಹಿಸುತ್ತಿದ್ದ ರಾಕ್ಷಸ ಪಾತ್ರಗಳಿಂದಾಗಿ ಮೆರೆದಿತ್ತು. ಕೃಷ್ಣ ಸ್ತ್ರೀ ಪಾತ್ರಗಳಿಗೆ ಹೆಸರಾಗಿದ್ದ. ಅವರಿಬ್ಬರೂ ಪಡೆದು ಬಂದಿದ್ದ ಪ್ರತಿಭೆಯನ್ನು ಮೆರೆಸಲು ಸರಿಯಾದ ಅವಕಾಶ ದೊರೆಯುವ ಮೊದಲೇ ಇಬ್ಬರೂ ಅನಾರೋಗ್ಯಕ್ಕೆ ತುತ್ತಾದರು. ನನ್ನ ಜೊತೆಗೇ- ಅಥವಾ ಒಂದೆರಡು ವರ್ಷಗಳ ಹಿಂದು ಮುಂದಿನ ವ್ಯತ್ಯಾಸದಲ್ಲಿ- ರಂಗಪ್ರವೇಶ ಮಾಡಿ ಇಂದಿಗೂ ತಮ್ಮ ಕಲಾಸೇವೆಯನ್ನು ಸಮರ್ಪಕವಾಗಿ ನಿರ್ವಹಿಸಿಕೊಂಡು ಹೋಗುತ್ತಲಿರುವವರು ಕೆಲವರಿದ್ದಾರೆ. ಅವರೆಲ್ಲರನ್ನೂ ನಾನು ಪ್ರತ್ಯೇಕವಾಗಿ ಹೆಸರಿಸಬೇಕಾಗಿಲ್ಲ.