ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೆ ಉತ್ತಮ ಭವಿಷ್ಯ ಇಲ್ಲವೇ?
-ರಾವ್ ಎವಿಜಿ
ಇಲ್ಲ ಎಂದು ಬಹುಮಂದಿ ನಂಬಿರುವುದರಿಂದ ತಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಹಿಂಜರಿಯುವ ಜನ್ಮದಾತೃಗಳ ಸಂಖ್ಯೆ ಹೆಚ್ಚುತ್ತಿದೆ. ತತ್ಪರಿಣಾಮವಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವ ಶಾಲೆಗಳು, ವಿಶೇಷತಃ ಸರ್ಕಾರೀ ಶಾಲೆಗಳು ದುಸ್ಥಿತಿಯಲ್ಲಿವೆ. ಈ ಪರಿಸ್ಥಿತಿಗೆ ಕಾರಣ?
ನಾನು ಎಸ್ ಎಸ್ ಎಲ್ ಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ಸರ್ಕಾರೀ ಶಾಲೆಯಲ್ಲಿ ಓದಿದವನು. ಪಿ ಯು ಸಿ ಮತ್ತು ಆನಂತರದ ಶಿಕ್ಷಣ ಪಡೆದದ್ದು ಇಂಗ್ಲಿಷ್ ಮಾಧ್ಯಮದಲ್ಲಿ. ಆಗ ಕೊಡಗಿನಲ್ಲಿ ಎಲ್ಲರೂ ಶಿಕ್ಷಣ ಪಡೆಯುತ್ತಿದ್ದದ್ದೇ ಹೀಗೆ. ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಬೇಕೆಂಬ ಹಂಬಲವೇ ಆಗಲಿ, ಖಾಸಗಿ ಶಾಲೆಗಳು ಸರ್ಕಾರೀ ಶಾಲೆಗಳಿಗಿಂತ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತವೆ ಎಂಬ ನಂಬಿಕೆಯೇ ಆಗಲಿ ಅಂದಿನ ಜನ್ಮದಾತೃಗಳಿಗೆ ಇರಲಿಲ್ಲ. ವಾಸ್ತವವಾಗಿ, ಎಸ್ ಎಸ್ ಎಲ್ ಸಿ ವರೆಗೆ ಇಂಗ್ಲಿಷ್ ಮಾಧ್ಯಮ, ಪಿ ಯು ಸಿ ಮತ್ತು ಆನಂತರದ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಆಗ ಅಲ್ಲಿ ಇರಲೇ ಇಲ್ಲ. (ಎಸ್ ಎಸ್ ಎಲ್ ಸಿ ವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಮೈಸೂರು, ಮಂಗಳೂರು, ಬೆಂಗಳೂರುಗಳಂಥ ದೊಡ್ಡ ನಗರಗಳಲ್ಲಿ ಲಭ್ಯವಿತ್ತಂತೆ) ನನಗೆ ತಿಳಿದ ಮಟ್ಟಿಗೆ ಕೊಡಗಿನಲ್ಲಿ ಆಗ ಇದ್ದದ್ದು ಎರಡೋ ಮೂರೋ ಕ್ರಿಶ್ಚಿಯನ್ ಆಡಳಿತದ ಖಾಸಗಿ ಪ್ರೌಢಶಲೆಗಳು. ಖಾಸಗಿ ಕಾಲೇಜುಗಳು ಇರಲೇ ಇಲ್ಲ. ಈ ಪದ್ಧತಿಯಲ್ಲಿ ಶಿಕ್ಷಣ ಪಡೆದ ನಾನು ಏನಾಗ ಬಯಸಿದ್ದೆನೋ ಅದೇ ಆದೆ. ಈ ಪದ್ಧತಿಯಲ್ಲಿ ಶಿಕ್ಷಣ ಪಡೆದವರು ಎಂಜಿನಿಯರುಗಳೂ ಡಾಕ್ಟರುಗಳೂ ಆಗುತ್ತಿದ್ದರು. ಎಂದೇ, ೧ ನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಆವಶ್ಯಕತೆ ಇದೆ ಎಂದು ಯಾರೂ ತಿಳಿದಿರಲಿಲ್ಲ. ಎಸ್ ಎಸ್ ಎಲ್ ಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ಸರ್ಕಾರೀ ಶಾಲೆಗಳಲ್ಲಿ ವ್ಯಾಸಂಗ ಮಾಡಿದ್ದರಿಂದ ಯಾರ ಭವಿಷ್ಯವೂ ಅಂದು ಹಾಳಾದದ್ದು ನನಗೆ ತಿಳಿದಿಲ್ಲ. ಆಗ ಏಕೆ ಹಾಗಿತ್ತು?