ವಿಷಯದ ವಿವರಗಳಿಗೆ ದಾಟಿರಿ

Archive for

9
ಡಿಸೆ

ಇಂತಹ ಘಟನೆ ಇನ್ಯಾವ ನಾಡಿನಲ್ಲಿ ನಡೆದೀತು.

– ಸಂತೋಷ್ ಪೂಜಾರಿ

ಸಾರ್ವಜನಿಕ ಕಾರ್ಯಕ್ರಮಲ್ಲಿ ಭಾಗವಹಿಸುವ ಆಸಕ್ತಿ ಅಷ್ಟಕಷ್ಟೆ.ತನಗೆ ಯಾರಾದರೂ ಸನ್ಮಾನ ಮಾಡಿದರೇ ಆ ಬಗ್ಗೆ ಅಸಮಧಾನ ವ್ಯಕ್ತಪಡಿಸುತ್ತಿದ್ದ ಭಾರತದ ಪ್ರಪ್ರಥಮ ಮಹಾ ದಂಡನಾಯಕನಾದ ಫೀಲ್ಡ್ ಮಾರ್ಶಲ್ ಕಾರ್ಯಪ್ಪನವರ ಪ್ರತಿಮೆಗೆ ದಿನಾಂಕ ೧೪/೧೧/೨೦೧೧ ರಂದು ಒದಗಿದ ಸ್ಥಿತಿಯಿಂದಾಗಿ ಭಾರತದ ಸೇನಾ ಜಿಲ್ಲೆಯ ವೀರ ಪರಂಪರೆಯ ಜನರು ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ.

 

ಕೊಡಂದೇರ ಮಾದಪ್ಪ  ಕಾರ್ಯಪ್ಪ ೨೮ ಜನರು ೧೮೯೯ ರಂದು ಕೊಡಗಿನ  ಶನಿವಾರ ಸಂತೆಯಲ್ಲಿ ಜನ್ಮತಾಳಿದ ಇವರು ತಮ್ಮ ಪ್ರಾಥಮಿಕ ಹಾಗೂ ಪ್ರೌಡ ವಿಧ್ಯಾಭ್ಯಾಸವು ಮಡಿಕೇರಿಯಲ್ಲಿ ಮುಗಿಸಿ ಕಾಲೇಜು ವಿಧ್ಯಾಭ್ಯಾಸವನ್ನು ಚೆನೈನಲ್ಲಿ ಮುಗಿಸಿತ್ತಾರೆ. ತಮ್ಮ ಕಾಲೇಜು ದಿನಗಳಲ್ಲಿ ಉತ್ತಮ ಕ್ರಿಢಾಪಟುವಾಗಿದ್ದ ಇವರು ಉತ್ತಮ ಹಾಕಿ ಮತ್ತು ಟೆನ್ನಿಸ್ ಆಟಗಾರರಾಗಿದ್ದರು. ನಂತರದಲ್ಲಿ  ಸೈನಿಕ ಸೇರಿದ ಈ ವೀರ ಸೇನಾನಿ ನಂತರ ತಮ್ಮ ಪ್ರಾಮಾಣಿಕತೆ ಶಿಸ್ತು ಹಾಗೂ ತನ್ನ ಕೆಲಸದಿಂದ ಭಾರತ ಮೊದಲ ಮಹಾ ದಂಡನಾಯಕರಾಗಿ ಕಾರ್ಯ ನಿರ್ವಯಿಸಿದ್ದಾರೆ.

ಎರಡನೆ ಪ್ರಪಂಚ ಯುದ್ದದಲ್ಲಿ ಪಾಲ್ಗೊಂಡಿದ್ದ ಎವರು ನಂತರ ೧೯೪೭ ರ ಭಾರತ ಮತ್ತು ಪಾಕಿಸ್ತಾನದ ಯುದ್ಧದಲ್ಲಿ ಭಾರತೀಯ ಸೈನ್ಯವನ್ನು ಮುಂದುವರೆಸಿದರು ಭಾರತದ ಸ್ವತಂತ್ರ ಬಂದ ನಂತರ ಅದರ ಬೆನ್ನ ಹಿಂದೆ ಇಡಿ ಭಾರತಕ್ಕೆ ಆಪತ್ತು ತಂದುಕೊಡುವ ನಮ್ಮ ಬೆನ್ನಿಗೆ ಚೂರಿ ಹಾಕಿದ ಪಾಕಿಸ್ತಾನದ ವಿರುದ್ದ ಯುದ್ದ ಮಾಡಬೇಕಾಯಿತು.ಸ್ವತಂತ್ರ ಭಾರತದ ಮಹಾ ಸೇನಾನಿಯಾದ ಕಾರ್ಯಪ್ಪನವರಿಗೆ ಸ್ವತಂತ್ರ ಬಂದ ತಕ್ಷಣ ಅದರ ಬೆನ್ನಲ್ಲೇ ಮತ್ತೊಂದು ಯುದ್ದವನ್ನು ಎದುರಿಸುವುದು ಮಹಾನ್ ಕಠಿಣ ಸವಾಲಾಗಿತ್ತು ಭಾರತದ ಸ್ವತಂತ್ರ ಆಗ ತಾನೆ ಸಿಕ್ಕ ಕಾರಣ ಸೈನಿಕರಲ್ಲಿ ಶಿಸ್ತು, ಯುದ್ದ ಸಲಕರಣೆಗಳ ಅಲಭ್ಯತೆ ಸೈನಿಕರ ದಕ್ಷತೆ ಇವೆಲ್ಲದರ ಬಗ್ಗೆ ಹೆಚ್ಚಿನ ಗಮನ ಕೊಡಬೇಕಾಯಿತು. ಆದರೆ ಈಗಾಗಲೆ ಎರಡನೇ ಪ್ರಪಂಚ ಯುದ್ದದಲ್ಲಿ ಪಾಲ್ಗೊಂಡ ಅನುಭವವಿದ್ದ ಕಾರ್ಯಪ್ಪನವರಿಗೆ ಸೈನ್ಯವನ್ನು ಮುನ್ನೆಡೆಸುವುದು ಕಠಿಣವಾಗಲಿಲ್ಲ ಅವರು ಅದನ್ನು ಯಶಸ್ವಿಯಾಗಿ ನಿರ್ವಯಿಸಿದರು ಕೊಡ ಯಾವ ದೇಶ ನಮ್ಮ ಜೊತೆಗೆ ಯುದ್ದವನ್ನು ಮಾಡಿ ನಮ್ಮ ಸರ್ವನಾಶ ಮಾಡುವುದರ ಪಣ ತೊಟ್ಟಿತೊ, ಅದೇ ದೇಶ ಮತ್ತೆ ತನ್ನ ಪ್ರಾಣ ಭಿಕ್ಷೆಯನ್ನು ಬೇಡುವ ತರ ಕಾರ್ಯಪ್ಪನವರು ನಮ್ಮ ಹೋರಾಟಾವನ್ನು ಸಂಘಟಿಸಿದರು ಅದು ಅತ್ಯಂತ ಸಣ್ಣದಿನದ ಅಂತರದಲ್ಲಿ ಸುಲಭ ಜಯ ಸಾಧಿಸಿದರು ಭಾರತೀಯರಿಗೆ ಆ ವಿಜಯ ತಂದು ಕೊಟ್ಟಾ ಆತ್ಮ ವಿಶ್ವಾಸ ಇದೆಯಲ್ಲ ಅದು ವರ್ಣಿಸಲು ಸಾದ್ಯವಿಲ್ಲ ಆಲ್ಲಿಂದ ಮುಂದೆ ಭಾರತೀಯರು ಯಾವುದೇ ಯುದ್ದಕ್ಕೆ ಎದರಲಿಲ್ಲ. ಅದೇ ಭಾರಿ ಬೇರೆ ಬೇರೆ ದೇಶಗಳು  ನಮ್ಮ ಮೇಲೆ ಯುದಕ್ಕೆ ಬಂದರೂ ಮೊದಲ ಜಯದ ನೆನಪಿನೊಂದಿಗೆ ಇಂದು ನಮ್ಮ ಸೈನಿಕರು ಯುದ್ದಕ್ಕೆ ತೆರಳುತ್ತಾರೆ.ಅದಕ್ಕೆ ಕಾರಣಿಭೊತರಾಗಿದ್ದ ನಮ್ಮ ಕೊಡಗಿನ ಹೆಮ್ಮೆಯ ಕುಲಪುತ್ರ ಫೀಲ್ಡ್ ಮಾರ್ಶಲ್ ಕಾರ್ಯಪ್ಪ ಅವರು ಭಾರತೀಯ ಸೇನೆಗೆ ಮಾಡಿದ ಸೇವೆಯನ್ನು ಮನ್ಗಂಡು ೧೯೯೬ ರಲ್ಲಿ ಮಡಿಕೇರಿಯಲ್ಲಿ ಸುದರ್ಶನ ವೃತ್ತದಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸಲಾಯಿತು.

ಮತ್ತಷ್ಟು ಓದು »

9
ಡಿಸೆ

ಈ ದೌರ್ಜನ್ಯಗಳಿಗೆ ಕೊನೆ ಎಂದು?

-ವಿಜಯೇಂದ್ರ

ದನಗಳನ್ನು ಕ್ಯಾಂಟರ್‌ನಲ್ಲಿ ಸಾಗಿಸುತ್ತಿದ್ದಲೆನ್ನಲಾದ ಕೃಷ್ಣಪ್ಪ ಎಂಬ ದಲಿತನನ್ನು ಪ್ರಾಣಿ ದಯಾ ಸಂಘಕ್ಕೆ  ಸೇರಿದವರು ಎನ್ನಲಾದ ಹಲವರು ತಡೆದು ಹೊಡೆದು ಸಾವಿಗೀಡು ಮಾಡಿದರು ಎಂದು ಸುದ್ದಿ ಇತ್ತೀಚೆಗಷ್ಟೇ ಗ್ರಾಮೀಣ ಬೆಂಗಳೂರು ವಿಭಾಗದಿಂದ ವರದಿಯಾಗಿದೆ. ಈ ಪ್ರಕರಣವನ್ನು ಮುಚ್ಚಿ ಹಾಕಲು ಸ್ಥಳೀಯ ಪೊಲೀಸರು ಪ್ರಯತ್ನಿಸಿದ್ದು ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಒತ್ತಾಯಿಸಿ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ಸ್ವ್ವಾತಂತ್ರ್ಯ ಬಂದ ಆರು ದಶಕಗಳ ಅನಂತರವೂ ಭಾರತದಲ್ಲಿ ಒಂದು ವರ್ಗದ ಜನತೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಕ್ಷುಲ್ಲಕ ಕಾರಣಗಳಿಗಾಗಿ ಅವರ ಮೇಲೆ ಅತ್ಯಾಚಾರ, ಹಲ್ಲೆ, ಮಾನಭಂಗಗಳಂತಹ ಗಂಭೀರ ಅಫರಾದಗಳನ್ನು ಎಸಗಲಾಗುತ್ತಿದೆ.

೫೦೦೦ ವರ್ಷಗಳ ಕಾಲ ವರ್ಣಾಶ್ರಮ ಪದ್ದತಿಯನ್ನು ಭಾರತ ಅನುಸರಿಸಿಕೊಂಡು ಬಂದ ಫಲವಾಗಿ ಹುಟ್ಟಿಕೊಂಡ ಅಸ್ಪೃಶ್ಯ ಜಾತಿ ಮತ್ತು ವರ್ಗಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಗಿನ್ನೀಸ್ ಧಾಖಲೆಯನ್ನು ಮೀರಿಸುತ್ತದೆ ಎಂದರೆ ತಪ್ಪ್ಪಾಗಲಾರದು.

ಯಾವುದೇ ಧರ್ಮ ಜಾತಿ ಆಧರಿತ ತಾರತಮ್ಯ ಕಾನೂನು ಬಾಹಿರ ಎಂದು ಸಂವಿಧಾನದ ಕಲಂಗಳಲ್ಲಿ ಸಾರಿ ಹೇಳಿದರೂ ಸಮಾಜದ ಒಂದು ಪ್ರಮುಖ ಭಾಗದ ಜನರನ್ನು ನಾವು ನಿರ್ಲಕ್ಷಿಸಿದ್ದೇವೆ. ಅನುಚ್ಚೇದ ೧೭ ರಲ್ಲಿ ಅಸ್ಪೃಶ್ಯ ಆಚರಣೆ ನಿಷೇದವೆಂದು ಸ್ಪಷ್ಟಪಡಿಸಿದ್ದರೂ, ರಾಷ್ಟ್ರದ ಎಲ್ಲಾ ಕಡೆ ದಲಿತರ ಮೇಲೆ ಕೊಲೆ, ಅತ್ಯಾಚಾರ. ದೌರ್ಜನ್ಯ, ಬಹಿಷ್ಕಾರಗಳಂತಹ ಅನಿಷ್ಟ ಕ್ರೂರ ಪದ್ದತಿಗಳು ಮುಂದುವರಿದೇ ಇದೆ. ಮತ್ತಷ್ಟು ಓದು »

9
ಡಿಸೆ

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 14- ಮೈಸೂರಿನವರ ಮನಸೆಳೆದ ಕಲೆ

ನಮ್ಮವನೇ ಆದ ನಾರಾಯಣನ ಮನೆಯಲ್ಲಿ ನಾನು, ಶ್ರೀ ಗೋಪಾಲಕೃಷ್ಣ ಭೇಟಿಯಾದೆವು. ವಿಷಯ ವಿವರ ಚರ್ಚಿಸಿಯಾಯಿತು. ಆದರೂ ಯಕ್ಷಗಾನದ ಪರಿಚಯವಿಲ್ಲದ ಮೈಸೂರು ನಗರಕ್ಕೆ ಮೇಳದ ಜನರನ್ನು ಕಟ್ಟಿಕೊಂಡು ಹೋಗುವುದೆಂದರೆ? ಎಂಬ ಸ್ವರವೆತ್ತಿದೆ. ಕೊನೆಗೆ ಹೇಸಿಗೆ ಕೆಲಸವೆಂದು ಆಗಬಾರದಲ್ಲ ಎಂದೆ.

“ಮೈಸೂರಿನವರು ಎಂದರೆ ಯುರೋಪಿನವರಲ್ಲ. ಅವರೂ ಕನ್ನಡಿಗರೇ. ನಿಮ್ಮ ಕಲೆಯ ಬಗ್ಗೆ ನಿಮಗೇ ಅಳುಕು ಇದೆ ಎಂದಾದರೆ ಪ್ರದರ್ಶನ ವಿಫಲವಾದೀತು. ವಿಶ್ವಾಸವಿದ್ದರೆ ಸಫಲಗೊಂಡೀತು. ಹೊರಡಿ” ಎಂದ. ನಮ್ಮ ಧರ್ಮಸ್ಥಳ ಮೇಳದಲ್ಲೇ ಮೊದಲು ಹಾಸ್ಯಗಾರನಾಗಿ ನನ್ನಿಂದಲೇ ತರಬೇತಿ ಪಡೆದು, ಆಗಲಷ್ಟೇ ಮೂಲ್ಕಿ ಮೇಳವನ್ನು ಆಡಳಿತಕ್ಕಾಗಿ ವಹಿಸಿಕೊಂಡಿದ್ದ ನಾರಾಯಣನೂ “ನಿಮ್ಮ ಜವಾಬ್ದಾರಿಯಲ್ಲಾದರೆ ಹೋಗೋಣ ಮಾವ. ವೇಷಭೂಷಣ ಸಾಮಗ್ರಿಗಳನ್ನು ಮೂಲ್ಕಿಯಿಂದ ಕೇಳಿ ತರಬಹುದು” ಎಂದು ತಿಳಿಸಿದ.

“ಸಂಭಾವನೆ ಎಷ್ಟು ಸಿಗುತ್ತದೆ?” ಎಂದು ಸಹಜವಾಗಿ ಪ್ರಶ್ನಿಸಿದೆ.

“ಬರಿಯ ನೂರು (ಒಂದು ನೂರು) ರೂಪಾಯಿಗಳು ಮಾತ್ರ. ನಿಮ್ಮ ವ್ಯಾನಿನ ಪೆಟ್ರೋಲ್ ಮತ್ತು ಎರಡು ದಿನದ ಕಾಫಿಯ ವೆಚ್ಚಕ್ಕೆ ಸಾಲಬಹುದಷ್ಟೆ. ಅಲ್ಲಿನ ಊಟ-ವಸತಿಗಳ ವೆಚ್ಚಕ್ಕಾಗಿ ಅಲ್ಲಿನ ಪರಿಚಿತರು ಕೆಲವರಿಂದ ವಂತಿಗೆ ಎತ್ತಿದ್ದೇನೆ” ಎಂದು ಹೇಳಿದ ಗೋಪಾಲಕೃಷ್ಣನನ್ನು ಏನೆಂದು ಕರೆಯಲೂ ಶಬ್ದ ಸಾಲದು ಎನ್ನಿಸಿತು.
ಮತ್ತಷ್ಟು ಓದು »

8
ಡಿಸೆ

ಗಾಂಧಿಬಂದ ವಿವಾದ : ಆತ್ಮಾವಲೋಕನೆಗೆ ಸುಸಂದರ್ಭ

-ಪ್ರವೀಣ್. ಟಿ. ಎಲ್

ನಾಗವೇಣಿಯವರ ‘ಗಾಂಧಿಬಂದ’ ಎಂಬ ಕಾದಂಬರಿಯ ಕುರಿತು ಬೇರೆ ಬೇರೆ ಪತ್ರಿಕೆಗಳಲ್ಲಿ ಇಂದು ವಿವಾದ ನಡೆಯುತ್ತಿದೆ. ಇದಕ್ಕೆ ರಾಜೇಂದ್ರ ಚೆನ್ನಿಯವರು 1-12-2011 ರಂದು ತಮ್ಮ ಪತ್ರಿಕೆಯಲ್ಲಿ   ಗಾಂಧಿ ಬಂದ’ ಕೃತಿಯ ನಿಷೇಧಕ್ಕೆ ಒತ್ತಾಯ ತರವಲ್ಲ ಎಂಬ ಶೀರ್ಷಿಕೆಯಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯದ ಹಿನ್ನೆಲೆಯಲ್ಲಿ ನನ್ನ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಅದು ‘ಜಾತಿ ಸಂಸ್ಥೆಗಳು’ ವಿಶ್ವವಿದ್ಯಾನಿಲಯಗಳ ಮೇಲೆ ತರುತ್ತಿರುವ ‘ಅನೈತಿಕ ಒತ್ತಡ’ವಾಗಿದ್ದು, ಅವುಗಳನ್ನು ‘ಲಕ್ಷ’ಕ್ಕೆ ತೆಗೆದುಕೊಳ್ಳಬಾರದೆಂಬ ವಾದವನ್ನು ಮುಂದಿಟ್ಟರು. ಹಾಗೂ ಅವರ ವಾದವು  ಮೇಲ್ನೋಟಕ್ಕೆ ಸಮಂಜಸವಾಗಿ ಕಾಣುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಇದು ಜಾತಿ ಸಂಸ್ಥೆಗಳ ರಾಜಕೀಯ ಎಂಬುದನ್ನು ಗುರುತಿಸಿದಾಗ ಈ ರಾಜಕೀಯದಲ್ಲಿ ಸಾಹಿತ್ಯವು ತಟಸ್ಥ ಪಕ್ಷವಾಗಿ ತನ್ನನ್ನು ಉಳಿಸಿಕೊಂಡಿದೆಯೆ? ಎಂಬ ಪ್ರಶ್ನೆ ಏಳುತ್ತದೆ.

ತಮಗೆ ಪಥ್ಯವಾಗದ ಯಾವುದೋ ವಿಚಾರವನ್ನು ಮಂಡಿಸಿದೆ ಎನ್ನುವ ಕಾರಣಕ್ಕಾಗಿ ಗ್ರಂಥಗಳನ್ನೇ ನಿಷೇಧಿಸಬೇಕೆಂಬ ಹಾಗೂ ಸಂಶೋಧನೆಗಳನ್ನೇ ನಿಲ್ಲಿಸಬೇಕೆಂದು ಒತ್ತಡ ತರುವ ಪೃವೃತ್ತಿಯು ಇತ್ತೀಚೆಗೆ ಹೆಚ್ಚಾಗುತ್ತಿದೆ ಎಂಬುದು ವಿಷಾದಕರ  ಸಂಗತಿ ಹಾಗೂ ಖಂಡನೀಯ. ಇದು ನಮ್ಮ ಸಂಸ್ಕೃತಿಗೆ ತೀರ ಅಸಹಜವಾದ ಒಂದು ಬೆಳವಣಿಗೆ ಎಂಬುದರಲ್ಲಿ ಸಂದೇಹವಿಲ್ಲ. ಏಕೆಂದರೆ ಕೆಲವು ಜಾತಿಯ ಪಾತ್ರಗಳನ್ನು ಹಿಯ್ಯಾಳಿಸುವ, ವ್ಯಂಗ್ಯವಾಡುವ ಹಲವಾರು ಪ್ರದರ್ಶನ ಕಲೆಗಳು ಇಂದಿಗೂ ಯಾವ ‘ಜಾತಿಸಂಸ್ಥೆಗಳ’ ಕೆಂಗಣ್ಣಿಗೂ ಗುರಿಯಾಗದೇ ಮುಂದುವರೆದುಕೊಂಡು ಬರುತ್ತಿರುವುದನ್ನು ನಮ್ಮ ಸಮಾಜದಲ್ಲಿ ನೋಡಲು ಸಾಧ್ಯವಾಗುತ್ತಿದೆ. ಉದಾಹರಣೆಗೆ ಜಾನಪದೀಯ ಕಲೆಗಳಾದ, ‘ಯಕ್ಷಗಾನ’, ‘ತಾಳಮದ್ದಳೆ’, ‘ಶನಿಮಹಾತ್ಮನ ಆಟ’ ಇವುಗಳ ಸಂದರ್ಭದಲ್ಲಿ ಬ್ರಾಹ್ಮಣರಾದಿಯಾಗಿ ಎಷ್ಟೋ ಜಾತಿಗಳ ಪಾತ್ರಗಳನ್ನು(ಮಾಣಿಭಟ್ಟ, ಇತ್ಯಾದಿ) ಹಾಸ್ಯಕ್ಕೆ, ವಿಡಂಬಿಸುವುದಕ್ಕಾಗಿ ಸೃಷ್ಟಿಸಲಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಅದೇ ಜಾತಿಯ ಜನರು ಅಂತಹ ಪ್ರದರ್ಶನಗಳನ್ನು ನೋಡಿ ಸಂತೋಷವನ್ನು ಪಡುತ್ತಾರೆ, ಕಲಾವಿದನ ಪ್ರತಿಭೆಯನ್ನು ಮೆಚ್ಚಿ ಹೊಗಳುತ್ತಾರೆ. ಜೊತೆಗೆ ಅಂತಹ  ಪ್ರದರ್ಶನಗಳು ಪದೇ ಪದೇ ತಮ್ಮ ಊರುಗಳಲ್ಲಿ ನಡೆಯುವಂತೆ ಅಲ್ಲಿನ ಜನರು ಮತ್ತು ಈ ‘ಜಾತಿಸಂಸ್ಥೆಗಳೇ’ ನೋಡಿಕೊಳ್ಳುತ್ತವೆ. ಈ ಸಾಂಪ್ರದಯಿಕ ಕಲೆಯ ಸಂದರ್ಭದಲ್ಲಿ ಕಾಣದ ಪೃವೃತ್ತಿಯು ಆಧುನಿಕ ಸಾಹಿತ್ಯದ ಸಂದರ್ಭದಲ್ಲೇಕೆ ಹುಟ್ಟಿಕೊಳ್ಳಬೇಕು? ಆಧುನಿಕ ಸಾಹಿತ್ಯದ ಸಂದರ್ಭದಲ್ಲೂ ಕೂಡ ಚೆನ್ನಿಯವರು ಹೇಳುವಂತೆ ಈ ಪೃವೃತ್ತಿಯು ಜಾತಿ ರಾಜಕೀಯ ಸಂಸ್ಥೆಗಳಿಂದ ಪ್ರಚೋದಿತವಾದುದನ್ನೇ ಕಾಣುತ್ತೇವೆಯೇ ವಿನಃ ಸಾಮಾನ್ಯ ಓದುಗರಿಂದಲ್ಲ. ಹಾಗಾಗಿ ಈ ಪೃವೃತ್ತಿಗೂ ನಮ್ಮ ಸಾಂಪ್ರದಾಯಿಕ ಸಮಾಜಕ್ಕೂ ಸಂಬಂಧವಿಲ್ಲ ಎಂಬುದು ಸ್ಪಷ್ಟ. ಇದೊಂದು ಭಿನ್ನವಾದ  ಸಾಮಾಜಿಕ ವಾಸ್ತವದಲ್ಲಿ ಹುಟ್ಟಿಕೊಂಡ ಸಮಸ್ಯೆಯಾಗಿದೆ. ಮತ್ತಷ್ಟು ಓದು »

8
ಡಿಸೆ

ಗೆಂದಾಲಾಲ್ ದಿಕ್ಷಿತ್ — ಅಪರೂಪದ ಅಜ್ಞಾತ ಕ್ರಾಂತಿಕಾರಿ..!!!

-ಭೀಮಸೇನ್ ಪುರೋಹಿತ್

ಭಾಳ ಅಂದ್ರೆ ಆ ಹುಡುಗನಿಗೆ 9-10 ವರ್ಷ ವಯಸ್ಸಿರಬಹುದು.. ಅವತ್ತೊಂದಿನ, ಬೆಳಗಿನ ನಸುಕಿನಲ್ಲಿಯೇ ಎದ್ದು, ತನ್ನೂರಿನಲ್ಲಿ ಹರಿಯುತ್ತಿದ್ದ ಯಮುನಾ ನದಿಗೆ ತೆರಳಿ ಸ್ನಾನ ಮಾಡಿ ಶುದ್ಧನಾದ. ಮಿಂದೆದ್ದು ಬಂದವನೇ, ದಡದ ಮೇಲಿದ್ದ ಕಾಳಿಯ ಗುಡಿಯೆಡೆ ಹೊರಟ.. ಪೂಜೆಗೆ ಹೋಗ್ತಾ ಇರಬಹುದೆಂದು ಎಲ್ಲರೂ ಅನ್ಕೊಂಡಿದ್ರು.. ಆದ್ರೆ ಅವನು ಹೋಗ್ತಿದ್ದಿದ್ದು ಪೂಜೆಗಲ್ಲ, ಪ್ರತಿಜ್ಞೆಗೆ..!!!!!!!!

” ತಾಯೆ, ಆಂಗ್ಲರ ದುರಾಡಳಿತದಲ್ಲಿ ನಲುಗುತಿರುವ ದೇಶದ ಸ್ವಾತಂತ್ರ್ಯವೇ ನನ್ನ ಜೀವನದ ಧ್ಯೇಯ.. ನನ್ನ ಕೊನೆ ಉಸಿರಿನವರೆಗೂ, ಕೊನೆ ರಕ್ತದ ಹನಿ ಪುಟಿಯುವವರೆಗೂ ಭಾರತಿಯ ಸೇವೆಗಾಗಿ ನನ್ನ ಬದುಕು ಮುಡಿಪು”, ಅಂತ ಆ ಸಣ್ಣ ಬಾಲಕ ಶಪಥಗೈದಿದ್ದ..!!!!

ಅವನ ಹೆಸರು “ಗೆಂದಾಲಾಲ್ ದಿಕ್ಷಿತ್”. 1888 ರಲ್ಲಿ, ಉತ್ತರಪ್ರದೇಶದ ಆಗ್ರಾ ಜಿಲ್ಲೆಯಲ್ಲಿ ಹಳ್ಳಿಯೊಂದರಲ್ಲಿ  ಜನನ. ಸಣ್ಣವನಿಂದಲೂ ದೇಶಭಕ್ತಿಯನ್ನು ಮೈಗೂಡಿಸಿಕೊಂಡಿದ್ದವ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸಿದ ಮೇಲೆ, DAV ಶಾಲೆಯಲ್ಲಿ ಶಿಕ್ಷಕನಾಗಿ ಸೇರಿಕೊಂಡ..

ಅದು 1905. ‘ಒಡೆದು ಆಳುವ’ ನೀತಿಯನ್ನೇ ಅನುಸರಿಸುತ್ತಿದ್ದ ಆಂಗ್ಲರ ಅಧಿಕಾರಿ “ಲಾರ್ಡ್ ಕರ್ಜನ್” ಬಂಗಾಳವನ್ನು ವಿಭಜಿಸಿದ. ಅವನೇನೋ ಜನರನ್ನು ಒಡೆಯಲು ಹಾಗೆ ಮಾಡಿದ.. ಆದರೆ ಆದದ್ದೇ ಬೇರೆ. ಅವನ ಈ ಕೃತ್ಯಕ್ಕೆ ಇಡೀ ದೇಶವೇ ಎದ್ದು ನಿಂತಿತು. ಎಲ್ಲೆಲ್ಲೂ ಹರತಾಳ, ಮೆರವಣಿಗೆ, ಹೋರಾಟಗಳು ನಡೆದವು. ತಿಲಕರಂತೂ ತಮ್ಮ ಕೇಸರಿ ಪತ್ರಿಕೆಯಲ್ಲಿ ಪ್ರತಿದಿನ, ಬಂಗಾಳ-ವಿಭಜನೆಯ ವಿರುದ್ಧ ಬೆಂಕಿಯ ಬರಹಗಳನ್ನು ಪ್ರಕಟಿಸ್ತಿದ್ರು.. ಅದರ ಕಿಡಿ, ಗೆನ್ದಾಲಾಲನಿಗೂ ಬಡಿಯಿತು. ತಿಲಕರಿಂದ ತುಂಬಾ ಸ್ಫೂರ್ತಿಗೊಂಡ ಗೆಂದಾಲಾಲ್, ಅವರು ಶುರುಮಾಡಿದ ಶಿವಾಜಿ-ಉತ್ಸವ, ಸಾರ್ವಜನಿಕ ಗಣೇಶ-ಉತ್ಸವ ಇದರಿಂದಲೂ ಪ್ರಭಾವಿತನಾದ. ಶಿವಾಜಿಯ ಚರಿತೆಯನ್ನು ಓದಿ, ಆ ಛತ್ರಪತಿಯ ಸಂಘಟನಾ ಕೌಶಲ್ಯ, ಧೈರ್ಯಗಳಿಂದ ಉತ್ತೇಜಿತಗೊಂಡ. ಗೆಂದಾಲಾಲ್ ಸಣ್ಣವನಿದ್ದಾಗ ಮಾಡಿದ್ದ ಪ್ರತಿಜ್ಞೆ ಈಡೇರುವ ಕಾಲ ಆಗ ಬಂದಿತ್ತು.. ಅದರ ಫಲವೇ, ಭಾರತದ ಕ್ರಾಂತಿ ಇತಿಹಾಸದಲ್ಲಿ, ಮತ್ತೊಂದು ಕ್ರಾಂತಿ ಸಂಘಟನೆಯ ಜನನ..

ಮತ್ತಷ್ಟು ಓದು »

8
ಡಿಸೆ

ಸಂಸ್ಕೃತಿ ಸಂಕಥನ – ೧೩ ಬಾಲಗಂಗಾಧರರ ಸೂಕ್ಷ್ಮದರ್ಶಕದಲ್ಲಿ ಕೋಲಾರದ ಘಟನೆ

– ರಮಾನಂದ ಐನಕೈ

ಇತ್ತೀಚೆಗೆ ಕೋಲಾರದ ಭಗವದ್ಗೀತಾ ಅಭಿಯಾನದ ಸಂದರ್ಭದಲ್ಲಿ ಸ್ವರ್ಣವಲ್ಲೀ ಸ್ವಾಮೀಜಿಯವರಿಗೆ ಹಾಗೂ ಭಗವದ್ಗೀತೆಗೆ ಅವಮಾನ ಮಾಡಿದ ಘಟನೆಯ ಹಿಂದೆ ಅನೇಕ ತಪ್ಪು ತಿಳುವಳಿಕೆಗಳು ಕೆಲಸ ಮಾಡಿವೆ. ಮೇಲ್ನೋಟಕ್ಕೆ ನೋಡಿದರೆ ಇದೊಂದು ರಾಜಕೀಯ ಚದುರಂಗದಾಟ ಎಂಬುದು ಸ್ಪಷ್ಟ. ಹಿಂದೆ ಇದೇ ಭಗವದ್ಗೀತಾ ಅಭಿಯಾನ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನಡೆದಿದೆ. ಕಳೆದ ವರ್ಷ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಇಲ್ಲೆಲ್ಲೂ ನಡೆಯದ ಭಯಂಕರ ವಿರೋಧ ಕೋಲಾರದಲ್ಲೇ ಏಕೆ ನಡೆಯಿತು? ಅದನ್ನು ಅರಿತುಕೊಳ್ಳುವ ಅಗತ್ಯ ಇದೆ.

ಕೋಲಾರದಲ್ಲಿ ಕಾರ್ಮಿಕ ವರ್ಗ ಪ್ರಬಲವಾಗಿದೆ. ಹಾಗಾಗಿ ಇಲ್ಲಿ ಕಮ್ಯುನಿಸ್ಟ್ ಪಾರ್ಟಿಯ ಪ್ರಾಬಲ್ಯ ಇದೆ. ಜೊತೆಗೆ ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿ ಹುಟ್ಟು ಹಾಕಿದ ಕೃಷ್ಣಪ್ಪ ಇದೇ ಜಿಲ್ಲೆಯವರು. ದಲಿತ ಹೋರಾಟವೂ ಈ ಜಿಲ್ಲೆಯಲ್ಲಿ ಹೆಚ್ಚು ಜೀವಂತವಾಗಿದೆ. ಈ ಕಾರಣಕ್ಕಾಗಿ ಅವರು ಭಗವದ್ಗೀತಾ ಅಭಿಯಾನವನ್ನು ಭಾರತೀಯ ಜನತಾ ಪಾರ್ಟಿಯ ಪ್ರೊಪಗಾಂಡಾ ಎಂಬಂತೆ ಗ್ರಹಿಸಿರುವ ಸಾಧ್ಯತೆ ಇದೆ. ಇಂದು ಭಾರತೀಯ ಸಮಾಜಶಾಸ್ತ್ರವನ್ನು ನಿರ್ಣಯಿಸುತ್ತಿರುವುದು ಇಂಥ ತಪ್ಪು ತಿಳುವಳಿಕೆಗಳೆ. ಭಗವದ್ಗೀತೆ ಅಂದರೆ ಬ್ರಾಹ್ಮಣರದ್ದು, ಮೇಲ್ವರ್ಗದ್ದು ಎಂಬ ನಂಬಿಕೆ ಇದೆ. ಇತ್ತೀಚೆಗೆ ಎಸ್.ಎಫ್.ಐ. ರಾಜ್ಯ ಉಪಾಧ್ಯಕ್ಷರ ಸಂದರ್ಶನದಲ್ಲೂ ಇದು ಸ್ಪಷ್ಟವಾಗಿದೆ. ಭಾಜಪಾ ಮೇಲ್ವರ್ಗದವರ ಪಕ್ಷ. ಹಾಗಾಗಿ ಭಗವದ್ಗೀತೆಯ ಪ್ರಚಾರದ ಮೂಲಕ ಪಕ್ಷ ಬಲಪಡಿಸುತ್ತಿದ್ದಾರೆಂಬ ತಿಳುವಳಿಕೆಯೂ ಇರಬಹುದು.

ಮತ್ತಷ್ಟು ಓದು »

7
ಡಿಸೆ

ನಮ್ಮ ಯುವಜನತೆಯ ಯೋಚನೆಯ ದಿಕ್ಕು…….???

-ಅರೆಹೊಳೆ ಸದಾಶಿವರಾವ್

ಪ್ರದಕ್ಷಿಣೆ ಎಂಬ ಅಂತರ್ಜಾಲ ಪತ್ರಿಕೆಯೊಂದನ್ನು ಇತ್ತೀಚೆಗೆ ಆರಂಭಿಸಿದ ನಂತರದ ಕೆಲವು ಅನುಭವಗಳು ಒಮ್ಮೊಮ್ಮೆ ಮನಸ್ಸಿಗೆ ತುಂಬಾ ಯೋಚನೆಯ ಸರಕನ್ನು ಒದಗಿಸುತ್ತವೆ. ಇದರಲ್ಲಿ ಮುಖ್ಯವಾದದ್ದು ನಮ್ಮ ಇಂದಿನ ಯುವ ಜನತೆಯ ಆಲೋಚನೆಗಳು.
ಇದಕ್ಕೆ ಪೂರ್ವಭಾವಿಯಾಗಿ ಒಂದೆರಡು ಮಾತುಗಳನ್ನು ನಿಮ್ಮೊಡನೆ ಹೇಳಿಕೊಳ್ಳಲೇ ಬೇಕು. ಅದು ನಮ್ಮ ಬಾಲ್ಯದ ದಿನಗಳು. ಕನಸುಗಳು ಮತ್ತು ಕನಸುಗಳು ಮಾತ್ರವೇ ತುಂಬಿಕೊಂಡಿದ್ದ ಕಣ್ಣುಗಳಿಗೆ ಮನೆಯ ಬಡತನ, ಬೆನ್ನ ಹಿಂದಿರುವ ಸಹೋದರತೆಯ ಬಂಧಗಳು ಅಥವಾ ಆ ಮೂಲಕ ಬಂದೊದಗಿದ ಜವಾಬ್ದಾರಿಗಳು……ಇತ್ಯಾದಿಗಳಾವುವೂ ಹೊರೆ ಅನಿಸುತ್ತಿರಲಿಲ್ಲ. ಅದಕ್ಕೆ ಕಾರಣಗಳು ನಾವು ಬಾಲ್ಯವನ್ನು ಅನುಭವಿಸುತ್ತಿದ್ದ ರೀತಿ. ಮನೆಯಂಗಣದಲ್ಲಿಯೋ, ತೋಟದಲ್ಲಿಯೋ, ಗದ್ದೆಯಲ್ಲಿಯೋ ನಮ್ಮದೇ ಯಕ್ಷಗಾನ, ಪಾಠ ಪುಸ್ತಕಗಳ ನಡುವೆ ಕದ್ದು ಓದುತ್ತಿದ್ದ ಕಾದಂಬರಿ, ಸುಧಾ, ತರಂಗ, ಪ್ರಜಾಮತದಂತಹ ಪತ್ರಕೆಗಳು, ಕಥೆ ಪುಸ್ತಕಗಳು……ಇತ್ಯಾದಿಗಳು, ಮೈಲುಗಟ್ಟಳೆ ದೂರ ನಡೆಯುತ್ತಿದ್ದ ಯಕ್ಷಗಾನಕ್ಕೂ ಕಾಲನಡಿಗೆಯಲ್ಲಿಯೇ ಹೋಗಿ ರಾತ್ರಿ ಇಡೀ ಅರ್ದಂಬರ್ಧ ನೋಡುತ್ತಿದ್ದ ಯಕ್ಷಗಾನ-ನಾಟಕಗಳು, ಶಾಲೆಯಲ್ಲಿ ಪ್ರತೀ  ಶನಿವಾರದಂದು ನಡೆಯುತ್ತಿದ್ದ ನಮ್ಮದೇ ಪ್ರತಿಭಾಪ್ರದರ್ಶನಗಳು, ಪ್ರತೀ ಶುಕ್ರವಾರ ಸಂಜೆ ಶಾಲೆಯಲ್ಲಿ ನಡೆಯುತ್ತಿದ್ದ ಭಜನೆ……ಇತ್ಯಾದಿಗಳೆಲ್ಲಾ ನಮಗೆ ಬದುಕು ಎಂದರೆ ಏನು ಎಂಬುದನ್ನು ತೋರಿಸುವಲ್ಲಿ ಸಹಾಯಕವಾಗುತ್ತಿದ್ದುವು. ಇಂತಹ ಪರಿಸರ ನಮ್ಮನ್ನು ಸಾಕಷ್ಟು ಉಲ್ಲಾಸದಿಂದಿರುವಂತೆ ನೋಡಿಕೊಳ್ಳುತ್ತಿದ್ದುವು. ಹಾಗೆಂದೇ ಸಹಜವಾಗಿ ಮುಂದೆ ಸಾಹಿತ್ಯ, ಕಲೆಗಳತ್ತ ನಮ್ಮ ಆಸಕ್ತಿ ಬೆಳೆಯುವಲ್ಲಿ ಇವುಗಳು ಸಹಾಯಕವಾಗುತ್ತಿದ್ದುವು.
ಈ ಎಲ್ಲಾ ಹಿನ್ನೆಲೆಗಳೂ ಮುಂದೆ ನಮ್ಮ ಪ್ರತೀ ಕೃತಿಯಲ್ಲೂ ಸಹಜವಾಗಿ ಆಶಾವಾದವನ್ನು ಬಿಂಬಿಸುತ್ತಿದ್ದುವು. ಅದಕ್ಕೆಂದೇ ಅಂದಿನ ಆರಂಭದ ಕವಿಗಳು, ಕತೆಗಾರರು ಅಥವಾ ಚಿಂತಕರು ಆಶಾವಾದದ ಮಾತಾಡುತ್ತಿದ್ದರು, ನಮ್ಮ ಸುತ್ತ ಮುತ್ತಲಿನ ಪ್ರಕೃತಿಗಳೇ ಎಲ್ಲದಕ್ಕೂ ಸಮೃದ್ಧ ವಸ್ತುವಾಗಿ, ಪ್ರತೀ ಕೆಲಸದಲ್ಲೂ…ಅದು ಸಾಹಿತ್ಯವಿರಲಿ, ಬದುಕಿರಲಿ ಒಂದು ಉಲ್ಲಾಸದ ಮತ್ತು ಉತ್ಸಾಹದ ವಾತಾವರಣಕ್ಕೆ ಕಾರಣವಾಗುತ್ತಿದ್ದುವು.

ಮತ್ತಷ್ಟು ಓದು »

6
ಡಿಸೆ

ಈ ವೆಬ್ಸೈಟ್ ನಲ್ಲಿ ಕನ್ನಡಕ್ಕಿಲ್ಲ ‘ಆಧಾರ’

-ಪ್ರಶಸ್ತಿ.ಪಿ, ಶಿವಮೊಗ್ಗ

ಪಾಣಿಯಿಂದ ಹಿಡಿದು ಪೋಸ್ಟಾಫೀಸಿನ ಕಡತದವರೆಗೆ ಎಲ್ಲವೂ ನಾಡಭಾಷೆ ಕನ್ನಡದಲ್ಲಿ ಸಿಗುತ್ತಿರುವಾಗ ರಾಜ್ಯ ಸರ್ಕಾರವೇ ಸ್ಥಾಪಿಸಿದ ಮಿಂಬಲೆ(website) http://www.karnataka.gov.in ಯೆಲ್ಲಾ ಇಂಗ್ಲೀಷ್ ಮಯ. .ಹೋಗುತ್ತಿದ್ದ ಹಾಗೆಯೇ ಕನ್ನಡ/ಇಂಗ್ಲೀಷ ಎಂಬ ಆಯ್ಕೆ ಸಿಗುತ್ತದೆ. ನೋಡೋಣ ಎಂದು ಕುತೂಹಲಕ್ಕೆ ಕನ್ನಡವನ್ನು ಆಯ್ಕೆ ಮಾಡಿಕೊಂಡು ಒಳನಡೆದಾಗ ನನಗೆ ಗೋಚರಿಸಿ ಬೇಸರಿಸಿದ್ದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

“ಆಧಾರ್” ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ. ಭಾರತದ ಪ್ರತಿಯೊಬ್ಬ ನಾಗರೀಕನಿಗೂ ಪ್ರತ್ಯೇಕ ಗುರುತಿನ ಚೀಟಿ ನೀಡಬೇಕೆಂಬ ಮಹೋದ್ದೇಶದ್ದು. ಅದು ಈಗಾಗಲೇ ಅಂಚೆ ಕಛೇರಿಗಳ ಮೂಲಕ ಚಾಲನೆಗೆ ಬಂದಿರುವುದು ನಿಮಗೆಲ್ಲಾ ತಿಳಿದೇ ಇದೆ. ಅದೇ ಆಧಾರ ನ ಬಗ್ಗೆ ಕರ್ನಾಟಕದ ಮಿಂಬಲೆಯಲ್ಲಿ ಮಾಹಿತಿ ಪಡೆಯಲು ಹೋದಾಗ ನನಗಾಗಿದ್ದು ಆಘಾತ.

ಅದರ ಹೆಸರೊಂದೇ ನಮ್ಮ ಆಧಾರ್ ಅಂತ. ಬಲಗಡೆ ಬರುವಂತ ಚಿತ್ರ ಪ್ರದರ್ಶನ(Slide Show) ದಲ್ಲಿ ಮಾತ್ರ ನಿಮಗೆ ಕನ್ನಡ ಕಾಣಸಿಗುತ್ತದೆ  ಅಷ್ಟೆ!!!http://www.karnataka.gov.in/nammaaadhaar/home.html..

 ಅದೂ ೮ ಚಾಯಾ ಚಿತ್ರಗಳಷ್ಟೆ.. ಆಧಾರ ಕಾರ‍್ಡನು ಶಾಲೆಗೆ ಸೇರಿಸಲು, ವೃದ್ದಾಪ್ಯ ವೇತನ ಪಡೆಯಲು,  ಉದ್ಯೋಗ ಪಡೆಯಲು, ಬ್ಯಾಂಕ್ ಖಾತೆ ತೆರೆಯಲು,ಸರ್ಕಾರದ ಸೌಲಭ್ಯಗಳನ್ನು ಪಡೆಯಲು, ಆರೋಗ್ಯ ಸೇವೆಗಳ ಲಾಭ ಪಡೆಯಲು, ಅಂತ ಅದಕ್ಕೆ ಸಂಬಂಧಿಸಿದಂತೆ ಇರುವ ಚಿತ್ರಗಳನ್ನು ಹಾಕಲಾಗಿದೆ. ಅದರಲ್ಲಿ “ಆಧಾರ್” ಪಡೆಯಲು  ಏನೇನು ದಾಖಲೆ ಸಲ್ಲಿಸಬೇಕು ಅಂತ ಹೇಳಲಾಗಿಲ್ಲ. ವಿಳಾಸದ ದಾಖಲೆಗಾಗಿ ಸೂಚಿಸಿದ ೨೯ ದಾಖಲೆಗಳ ಮೂಲಪ್ರತಿಯನ್ನು , ಗುರುತಿನ ದಾಖಲೆಗಾಗಿ ಸೂಚಿಸಿದ ದಾಖಲೆಗಾಗಿ ೧೭ರಲ್ಲಿ ಒಂದು , ಹುಟ್ಟು ದಿನಾಂಕದ ದಾಖಲೆಗಾಗಿ ೪ ದಾಖಲೆಗಳಲ್ಲಿ ಒಂದರ ಮೂಲ ಪ್ರತಿ ಸಲ್ಲಿಸಬೇಕು. !! ನೋದಣಿಯ ನಂತರ ಅವುಗಳನ್ನು ಹಿಂತಿರುಗಿಸಲಾಗುವುದು ಅಂತ ಇದೆ. ಆ ೨೯,೧೭,೪ ದಾಖಲೆಗಳು ಏನು . ಎತ್ತ ಎಂಬುದರ ಬಗ್ಗೆ ಮಾಹಿತಿಯಿಲ್ಲ.. ಅದನ್ನು ಆಧಾರ್ ನೊಂದಣಿ ಕೇಂದ್ರದಲ್ಲಿ ಪಡೆಯಬೇಕು  ಆಧಾರ್ ಅನ್ನು ಎಲ್ಲಿ ಪಡೆಯಬಹುದು ಎಂಬ ಸ್ಲೈಡಲ್ಲಿ ಜಿಲ್ಲಾಡಳಿತದಿಂದ ಸ್ಥಾಪಿಸಲ್ಪಟ್ಟ ಆಧಾರ್ ನೊಂದಣಿ ಕೇಂದ್ರಗಳು ಅಂತ ಹಾಕಿದ್ದಾರೆ.. ನಮ್ಮ ಜಿಲ್ಲೆಯಲ್ಲಿ ಆಧಾರ್ ನೊಂದಣಿ ಕೇಂದ್ರ ಎಲ್ಲಿದೆ ಅಂತ ಈ ಸೈಟಿಂದ ಹೇಗೆ ತಿಳಿಯೋಣ ಸ್ವಾಮಿ ?? ಆಧಾರ್ ಕೇಂದ್ರ ಹತ್ತಿರದಲ್ಲಿ ಎಲ್ಲಿದೆ ಅಂತ ತಿಳಿಯೋಕೆ ಆಧಾರ್ ಕೇಂದ್ರಕ್ಕೇ ಹೋಗಬೇಕೇ ?    ಮತ್ತಷ್ಟು ಓದು »

5
ಡಿಸೆ

ಪುನರ್ಜನ್ಮ – ಒಂದು ವಿವೇಚನೆ

– ಗೋವಿಂದ ರಾವ್ ವಿ ಅಡಮನೆ

ಪುನರ್ಜನ್ಮ – ತಥ್ಯವೇ, ಮಿಥ್ಯಾಕಲ್ಪನೆಯೇ? ‘ಅತಿ ಸೂಕ್ಷ್ಮವಾದ ನಯವಾದ ಸದಾ ಚಲಿಸುತ್ತಿರುವ ಕಣಗಳಿಂದ ನಿರ್ಮಿತವಾದ ಆತ್ಮವು ವ್ಯಕ್ತಿ ಸತ್ತಾಗ ಚೆದರಿ ಹೋಗುತ್ತವೆ’, ‘ಪ್ರಾಣ ಿರುವಾಗ ಮಾನವ ಸಂತೋಷವಾಗಿ ಬದುಕಲಿ, ಸಾಲ ಮಾಡಿ ಆದರೂ ತುಪ್ಪ ತಿನ್ನಲಿ, ದೇಹ ಬೂದಿ ಆದ ನಂತರ ಅದು ಹಿಂತಿರುಗುವುದೆಂತು?’  ಎಂದೆಲ್ಲ ಆತ್ಮದ ಶಾಶ್ವತತೆಯನ್ನು ಅಲ್ಲಗಳೆಯುವ ಭೋಗಪ್ರಿಯ ವಾದಗಳನ್ನು ನಂಬೋಣವೇ? ಅಥವ ‘ಒಬ್ಬ ವ್ಯಕ್ತಿ ಜೀರ್ಣವಾದ ವಸ್ತ್ರವನ್ನು ತೊರೆದು ಹೊಸ ವಸ್ತ್ರ ಧರಿಸುವಂತೆ ಆತ್ಮವು ಜೀರ್ಣವಾದ ಶರೀರವನ್ನು ತೊರೆದು ಹೊಸ ಶರೀರವನ್ನು ಧರಿಸುತ್ತದೆ’, ‘ಶರೀರ ರಥ, ಆತ್ಮ ರಥಿ. ರಥ ಮುರಿದಾಗ ರಥಿ ಹೊಸದೊಂದು ರಥವೇರಿ ಪಯಣ ಮುಂದುವರಿಸುತ್ತಾನೆ’ ಎಂದೆಲ್ಲ ಆತ್ಮದ ಶಾಶ್ವತತೆಯನ್ನು ಸಾರುವ ಆಧ್ಯಾತ್ಮಪ್ರಿಯ ವಾದಗಳನ್ನು ನಂಬೋಣವೇ? ಇಂಥ ಪ್ರಶ್ನೆಗಳಿಗೆ ಉತ್ತರ ಹುಡುಕಲು ಪ್ರಯತ್ನಿಸುವುದೇ ಮೂರ್ಖತನವಾದೀತೇ? ಕೆಲವು ಸಂಶಯವಾದಿಗಳು ವಾದಿಸುತ್ತಿರುವಂತೆ ‘ಪುನರ್ಜನ್ಮದ ಪರಿಕಲ್ಪನೆ ನಿಜವಾಗಿರಲು ಸಾಧ್ಯವಿಲ್ಲ, ಆದ್ದರಿಂದ ಅದು ನಿಜವಲ್ಲ’ ಎಂದು ನಾವೂ ಹೇಳೋಣವೇ?

ಅನಾದಿ ಕಾಲದಿಂದಲೂ ನಡೆಯುತ್ತಿರುವ ಈ ಚರ್ಚೆಯ ಕುರಿತು ಆಧುನಿಕ ವಿಜ್ಞಾನಿಗಳ, ವಿಚಾರವಾದಿಗಳ ನಿಲುವೇನು? ಸಮ್ಮೋಹಿತ ನಿವರ್ತನ ತಂತ್ರದಿಂದ ಪುನರ್ಜನ್ಮ ಸ್ಮರಣೆ ಯ ಕುರಿತು ಈಗಾಗಲೇ ಚರ್ಚಿಸಿದ್ದೇನೆ. ಅಧಿಮನಃಶಾಸ್ತ್ರಜ್ಞರು (ಪ್ಯಾರಸೈಕಾಲಜಿಸ್ಟ್ಸ್) ಪುನರ್ಜನ್ಮ ಒಂದು ತಥ್ಯ ಎಂದು ಸಮರ್ಥಿಸಲು ನೀಡುವ ಇತರ ಸಾಕ್ಞ್ಯಾಧಾರಗಳನ್ನೂ ಅವನ್ನು ಅಲ್ಲಗಳೆಯುವ ವಾದಗಳನ್ನೂ ಅವಲೋಕಿಸಿದರೆ ನೀವು ನಿಮ್ಮದೇ ಆದ ತೀರ್ಮಾನ ಕೈಗೊಳ್ಳಲು ಸಾಧ್ಯವಾದೀತು. ಎಂದೇ ಅವುಗಳ ಪಕ್ಷಿನೋಟವನ್ನು ಈ ಲೇಖನದಲ್ಲಿ ನೀಡುತ್ತಿದ್ದೇನೆ.

ಮತ್ತಷ್ಟು ಓದು »

5
ಡಿಸೆ

ಬುವಿಯ ಸುಡುತ್ತವೆಯೇ ಸೌರಜ್ವಾಲೆಗಳು?

-ವಿಷ್ಣುಪ್ರಿಯ

ನಿಜಕ್ಕೂ ಪ್ರಳಯವಾಗುತ್ತದೆಯೇ? ಸೌರಜ್ವಾಲೆಗಳು ಭೂಮಿಯನ್ನು ಸುಡುತ್ತವೆಯೇ? ಸೂರ್ಯನಲ್ಲಿನ ಕಾಂತವಲಯದಲ್ಲಿ ಅತಿಯಾದ ಚಟುವಟಿಕೆಗಳು ಕಾಣಿಸಿಕೊಳ್ಳುವ ಮೂಲಕ ಉತ್ಪತ್ತಿಯಾಗುವಂಥ ಶಕ್ತಿಯುತ ಸೌರಜ್ವಾಲೆಗಳಿಂದ ಭೂಮಿ ಸರ್ವನಾಶವಾಗುತ್ತದೆ ಎಂಬ ಮಾತು ನಿಜವೇ?… ಈ ವಿಚಾರವಾಗಿ ಹುಟ್ಟಿಕೊಳ್ಳುವ ಪ್ರಶ್ನೆಗಳಿಗೆ ಕೊನೆಯಿಲ್ಲ. ಅವಕ್ಕೆ ಸ್ಪಷ್ಟವಾದ ಉತ್ತರಗಳೂ ಇಲ್ಲ.

ಇನ್ನು ಕೆಲವೇ ವಾರಗಳು. 2012ನೇ ಇಸವಿ ಕಾಲಿಡುತ್ತಿದೆ. `2012′ ಎಂಬ ಧ್ವನಿ ಕೆಳಿದ ತಕ್ಷಣ ಬಹಳಷ್ಟು ಜನ ಜೀವನದ ಬಗೆಗಿನ ಎಲ್ಲ ಆಸೆಗಳನ್ನೂ, ಭರವಸೆಗಳನ್ನೂ ಕಳೆದುಕೊಳ್ಳುತ್ತಿದ್ದಾರೆ. ಭೂಮಿಯ ಕಥೆಯೇ ಮುಗಿದು ಹೋಯಿತು; ಪ್ರಳಯ ಆಗುತ್ತೆ; ಸೂರ್ಯ ಉಗುಳಿದ ಸೌರಜ್ವಾಲೆಗಳು ಭೂಮಿಯನ್ನು ಸುಟ್ಟು ಹಾಕುತ್ತವೆ… ಎಂಬೆಲ್ಲ ಸುದ್ದಿಗಳು ಮೇಲಿಂದ ಮೇಲೆ ಪ್ರಸಾರವಾಗಿ ಜನರಲ್ಲಿನ ಭೀತಿಯನ್ನು ಇನ್ನಷ್ಟು ಹೆಚ್ಚಿಸುತ್ತಿವೆ. ಹಲವು ಜನರಲ್ಲಿ ಈ ಎಲ್ಲ ವಿಚಾರಗಳ ಬಗ್ಗೆ ಭೀತಿಯಿದೆ ನಿಜ. ಆದರೆ ಅವರೆಲ್ಲ ಇಂಥದ್ದೇನೂ ಆಗುವುದಿಲ್ಲ ಎಂದು ತಮ್ಮನ್ನು ತಾವೇ ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ.
ಮತ್ತಷ್ಟು ಓದು »