– ಡಾ.ಅಶೋಕ್ ಕೆ.ಆರ್
ಹೆಂಡತಿ ಗಂಡನಿಗೆ ಹೊಡೆದರೆ ‘ಬ್ರೇಕಿಂಗ್ ನ್ಯೂಸ್’, ಗಂಡ ಹೆಂಡತಿಗೆ ಹೊಡೆದರೆ ‘ಬ್ರೇಕಿಂಗ್ ನ್ಯೂಸ್’, ಪೂನಂ ಪಾಂಡೆ ಬೆತ್ತಲಾದದ್ದು, ಐಶ್ವರ್ಯ ರೈ ದಪ್ಪಗಾಗಿದ್ದು ಮುಖಪುಟ ಸುದ್ದಿ! ಅಧಿಕಾರಿ, ರಾಜಕಾರಣಿ, ಸನ್ಯಾಸಿ ಮಾಡಿದ ತಪ್ಪುಗಳು ‘ಬ್ರೇಕಿಂಗ್ ನ್ಯೂಸ್’ [ofcourse ಯಾವ ವಾಹಿನಿ ವೀಕ್ಷಿಸುತ್ತಿದ್ದೀರೆಂಬುದರ ಮೇಲೆ ಈ ಕೊನೆಯ ಬ್ರೇಕಿಂಗ್ ನ್ಯೂಸ್ ಬದಲಾಗುತ್ತಿರುತ್ತದೆ!]. ಪತ್ರಕರ್ತನೊಬ್ಬ ನೆಲದ ಕಾನೂನಿಗೆ ಗೌರವ ಕೊಡದೆ ನಡೆದುಕೊಂಡಾಗ? ಅದು ಸುದ್ದಿಯೂ ಅಲ್ಲ, ರದ್ದಿಗೆ ಹಾಕುವಂಥ ವಿಷಯ ಎಂಬುದು ನಮ್ಮ ಮುಖ್ಯವಾಹಿನಿ ಮಾಧ್ಯಮಗಳ ನಿಲುವು!
ಪತ್ರಕರ್ತ ಅದರಲ್ಲೂ ಪತ್ರಿಕೆಯೊಂದರ ಸಂಪಾದಕನೆಂದ ಮೇಲೆ ಮಾನನಷ್ಟ ಮೊಕದ್ದಮೆಯ ಆರೋಪಿಯಾಗುವುದು ಸಹಜ. ಕೆಲವೊಮ್ಮೆ ವೈಯಕ್ತಿಕ ದ್ವೇಷದಿಂದ ಸಂಪಾದಕರೇ ಸುಳ್ಳು ಮಾಹಿತಿಯನ್ನು ವೈಭವೀಕರಿಸುತ್ತಾರೆ. ಇನ್ನು ಕೆಲವೊಮ್ಮೆ ನಂಬಿದ ವರದಿಗಾರರೇ ಸುಳ್ಳು ಅಥವಾ ಅರ್ಧ ಸತ್ಯದ ಮಾಹಿತಿಯನ್ನು ನೀಡಿ ಸಂಪಾದಕರ ದಾರಿ ತಪ್ಪಿಸುತ್ತಾರೆ. ಸತ್ಯ ತನ್ನ ಪರವಾಗಿದೆಯೆಂಬ ಧೃಡತೆ ಇರುವ ವ್ಯಕ್ತಿ ಪತ್ರಿಕೆ, ಅದರ ವರದಿಗಾರ-ಸಂಪಾದಕರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತಾರೆ. ವರದಿ ಅಪ್ಪಟ ಸುಳ್ಳಾಗಿದ್ದರೆ ಪತ್ರಿಕೆ ಅಥವಾ ಸುದ್ದಿವಾಹಿನಿಯಲ್ಲಿ ತಪ್ಪೊಪ್ಪಿಗೆ ನೀಡಬೇಕಾಗುತ್ತದೆ. ಮಾನಸಿಕ ಹಿಂಸೆ, ಸಾಮಾಜಿಕ ನೆಲೆಯಲ್ಲಾದ ಅವಮಾನಗಳನ್ನು ಪರಿಗಣಿಸಿ ಪರಿಹಾರ ಕೊಡಿಸುವುದೂ ಉಂಟು. ಜೈಲು ಪಾಲಾಗುವ ಸಾಧ್ಯತೆಯೂ ಇದೆಯಾದರೂ ಅದು ಬಹಳವೇ ಅಪರೂಪ.
ಇವೆಲ್ಲವನ್ನೂ ಹೇಳಲು ಕಾರಣ ಹಾಲಿ ಕನ್ನಡ ಪ್ರಭ ಪತ್ರಿಕೆಯ ಸಂಪಾದಕರೂ, ಸುವರ್ಣ ಸುದ್ದಿ ವಾಹಿನಿಯ ಮುಖ್ಯಸ್ಥರೂ ಆದ ವಿಶ್ವೇಶ್ವರ ಭಟ್ಟರು ಜೂನ್ 27ರಂದು ಬಂಧಿತರಾಗಿ ಮಧ್ಯಾಹ್ನದ ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. 2008ರಲ್ಲಿ ವಿಜಯ ಕರ್ನಾಟಕದ ಸಂಪಾದಕರಾಗಿದ್ದ ಸಮಯದಲ್ಲಿನ ಒಂದು ವರದಿಯ ಕುರಿತಂತೆ ಮಾನನಷ್ಟ ಮೊಕದ್ದಮೆ ಎದುರಿಸುತ್ತಿದ್ದರು. ನ್ಯಾಯಾಲಯದಿಂದ ಪದೇ ಪದೇ ಸಮನ್ಸ್ ಜಾರಿಯಾದಾಗ್ಯೂ ಕೂಡ ಹಾಜರಾಗಲಿಲ್ಲ. ಕೊನೆಗೆ ಬೇಸತ್ತ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿ ಮಾಡಿತು. ಭಟ್ಟರ ಬಂಧನವಾಯಿತು.