ವಿಷಯದ ವಿವರಗಳಿಗೆ ದಾಟಿರಿ

Archive for

30
ಜನ

ಜೀವನ ಪ್ರೀತಿಯ ಪ್ರತಿಬಿಂಬ – ಗೋಲ್ಡ್ ಅಂಡ್ ಕಾಪರ್

– ಡಾ ಅಶೋಕ್ ಕೆ ಆರ್

Gold and Copper Movieಸಿನಿಮಾ ಅಂದ್ರೆ ಹೀರೋ ಹೀರೋಯಿನ್ ವಿಲನ್ ಇರಲೇಬೇಕೆಂಬ ಮನೋಭಾವವೇ ಹೆಚ್ಚು. ವಿಲನ್ ಇದ್ದ ಮೇಲೆ ಫೈಟು, ಹೀರೋ ಹೀರೋಯಿನ್ ಇದ್ದ ಮೇಲೆ ಒಂದಷ್ಟು ಸಾಂಗ್ಸು ಕಂಪಲ್ಸರಿ! ಪರದೇಶದ ಚಿತ್ರಗಳನ್ನು ವೀಕ್ಷಿಸಿದಾಗ ಹಾಡುಗಳಿರದೇ ಇದ್ದರೂ ಉಳಿದ ಅಂಶಗಳು ಹೆಚ್ಚು ಕಡಿಮೆ ಇದ್ದೇ ಇರುತ್ತವೆ. ಇವೆಲ್ಲ ಸಿದ್ಧಸೂತ್ರಗಳನ್ನು ತಿರಸ್ಕರಿಸಿ ಹೊಸತೊಂದು ನಿರೂಪಣೆಯ ಚಿತ್ರಗಳು ಅವಾಗಿವಾಗ ನಿರ್ಮಾಣವಾಗುತ್ತವೆ. ಅಂಥದೊಂದು ಇರಾನಿ ಚಿತ್ರ “ಗೋಲ್ಡ್ ಅಂಡ್ ಕಾಪರ್”. ಇಲ್ಲೂ ಹೀರೋ ಇದ್ದಾನೆ ಹೀರೋಯಿನ್ ಇದ್ದಾಳೆ ವಿಲನ್ ಕೂಡ ಇದೆ! ಇದೆ ಯಾಕೆಂದರೆ ವಿಲನ್ ಒಂದು ಖಾಯಿಲೆಯ ರೂಪದಲ್ಲಿ ಹೀರೋನ ಮನಸ್ಸಿನ ರೂಪದಲ್ಲಿ ಇದೆಯೇ ಹೊರತು ವಿಲನ್ ಒಬ್ಬ ವ್ಯಕ್ತಿಯ ರೂಪದಲ್ಲಿಲ್ಲ. ಹೋಮಾಯುನ ಅಸಾದಿಯನ್ (Homayoun Asadian) ನಿರ್ದೇಶನದ ಪರ್ಷಿಯನ್ ಭಾಷೆಯ ಈ ಚಿತ್ರ ಅಪರೂಪದ ಖಾಯಿಲೆಯೊಂದು ಹೇಗೆ ಒಂದು ಇಡೀ ಕುಟುಂಬದ ಜೀವನ ರೀತಿಯನ್ನು ಅಸ್ತವ್ಯಸ್ತಗೊಳಿಸುತ್ತದೆ ಎಂದು ತಿಳಿಸುವುದರ ಜೊತೆಜೊತೆಗೆ ಆ ಮಾರಣಾಂತಿಕ ಖಾಯಿಲೆ ಮನುಷ್ಯನ ಮನದ ಒಳಪದರದಲ್ಲಿ ಕಳೆದುಹೋಗಿದ್ದ ಸೂಕ್ಷ್ಮತೆಯನ್ನು ಹೊರತೆಗೆಯುವುದರಲ್ಲಿಯೂ ಸಹಕರಿಸುತ್ತದೆ!
29
ಜನ

ಜನ ಮನ್ನಣೆ

– ಮಧು ಚಂದ್ರ, ಭದ್ರಾವತಿ 

Image

ಇಂದು ಅತ್ಯಂತ ಪ್ರಸ್ತುತದಲ್ಲಿರುವ ಪದ ಎಂದರೆ ” ಜನ ಮನ್ನಣೆ “. ಅದಕ್ಕಾಗಿ ನಾವು ಏನೆಲ್ಲಾ ಮಾಡುತ್ತೇವೆ. ದಾನ ಮಾಡಿದಾಗ ನಮ್ಮ ಹೆಸರು, ಶಂಕು ಸ್ಥಾಪನೆ ಮಾಡಿದಾಗ ನಮ್ಮ ಹೆಸರು( ಕಾಮಗಾರಿ ಆಗುತ್ತೋ ಇಲ್ಲವೋ), ಕಂಡ ಕಂಡಲೆಲ್ಲ ಹೆಸರು ರಾರಜಿಸುವುದಕ್ಕೆ ಏನೆಲ್ಲಾ ಮಾಡಬಹುದು ಎಲ್ಲಾ ಮಾಡುತ್ತೇವೆ. ಆದರೆ ಅದನ್ನು ಇಂದಿನ ಮಾನವ ಕೇವಲ ಕ್ಷಣಕ್ಕೆ ಮಾತ್ರ ಪರಿಗಣಿಸಿ ನಂತರ ಕಡೆಗಣಿಸುತ್ತಾನೆ. ಅವರಾರು ತಮ್ಮ ಹೆಸರನ್ನು ಕಡೆಯವರೆಗೂ ಉಳಿಸಿಕೊಂಡು ಮನ್ನಣೆ ಪಡೆಯಲು ಸಾಧ್ಯವಾಗದೆ ಅಳಿದು ಹೋಗುತ್ತಾರೆ .ಇಂದು ಸೇವಾ ಮನೋಭಾವವಿಲ್ಲದ ದಾನ ಕೇವಲ ಪ್ರಚಾರಕ್ಕೆ ಮಾತ್ರ ನಿಮಿತ್ತ. ಅಂದರೆ ದಾನಿಗಳು ಇರುವವರೆಗೂ ಮಾತ್ರ, ಅವರಳಿದ ಮೇಲೆ ಅವು ಸಹ ಅಳಿಯುತ್ತದೆ. ಅವು ಎಂದೂ ಜನರ ಮನದಲ್ಲಿ ಉಳಿಯುವುದೇ ಇಲ್ಲ. ಸ್ವಾರ್ಥದ ಸೇವೆ ಎಲ್ಲಿಯೂ ಸಲ್ಲುವುದಿಲ್ಲ. ನಿಸ್ವಾರ್ಥ ಸೇವೆ ಇಂದು ಕಣ್ಮರೆಯಾಗುತ್ತಿದೆ. ನಿಸ್ವಾರ್ಥ ಸೇವೆ ಎನ್ನುವುದು ಎಂದೆಂದಿಗೂ ಶಾಶ್ವತ ಎನ್ನುವುದಕ್ಕೆ ಒಂದು ಚಿಕ್ಕ ಉದಾಹರಣೆ ನಿಮ್ಮ ಮುಂದೆ ನೀಡುತ್ತಿದ್ದೇನೆ. ಆಮೇಲೆ ಸೇವೆ ಎನ್ನುವ ಪದಕ್ಕೆ ಸಮಾನಾರ್ಥಕ ಪದ ನೀವೇ ನಿರ್ಧರಿಸಿ.

ಕನ್ನಂಬಾಡಿ ಆಣೆಕಟ್ಟು ನಿರ್ಮಾಣವಾದ ನಂತರ ಪ್ರತಿದಿನವೂ ದೇಶ ವಿದೇಶಗಳಿಂದ ಜನರು ಭೇಟಿ ನೀಡುತ್ತಿದ್ದರು. ಅ ಸಮಯದಲ್ಲಿ ಕನ್ನಂಬಾಡಿ ಕಟ್ಟೆಯ ನಿರ್ಮಾತರ ಹೆಸರಿನ ಫಲಕಗಳು, ಗುರುತುಗಳು ಸಹ ಇರಲಿಲ್ಲ. ಓಮ್ಮೆ ಆಂಧ್ರದ ಹಳ್ಳಿಯ ರೈತನೊಬ್ಬ ಕನ್ನಂಬಾಡಿ ಆಣೆಕಟ್ಟನ್ನು ಸಂದರ್ಶಿಸಿದನು. ಅಲ್ಲಿದ್ದ ಕಾವೇರಿಯ ಮೂರ್ತಿಗೆ ನಮಸ್ಕರಿಸಿ ಅಣೆಕಟ್ಟಿನ ಸೊಬಗನ್ನು ಸವಿಯುತ್ತಿದ್ದನು. ಹೀಗಿರುವಾಗ ಅಲ್ಲಿಗೆ ಬಂದ ಹಿರಿಯರೊಬ್ಬರು ಅಲ್ಲೇ ಇದ್ದ ಮಕ್ಕಳ ಹತ್ತಿರ ರೈತನಿಗೆ ” ಕನ್ನಂಬಾಡಿ ಆಣೆಕಟ್ಟು ನಿರ್ಮಿಸಿದವರು ಯಾರು ಗೊತ್ತೇ? ” ಎಂದು ಕೇಳಲು ಹೇಳಿದರು.

ಅಗ ರೈತನು ” ಏಮಂಡಿ, ಆ ಮಹಾನುಭಾವಲು ವಿಶ್ವೇಶ್ವರಯ್ಯಗಾರು ಚೆಸಿಂದಿಕಾದ ” (‘ ಏನು ಸ್ವಾಮಿ , ಆ ಮಹಾನುಭಾವ ವಿಶ್ವೇಶ್ವರಯ್ಯನವರು ಕಟ್ಟಿಸಿದ್ದಲ್ಲವೇ ? ‘) ಎಂದು ಉತ್ತರಿಸಿದನು.

ನಿಜವಾದ ಸೇವೆಗೆ ಶಿಲೆಯ ಮೇಲಿನ ಶಾಸನವಾಗಲಿ, ಫ್ಲೆಕ್ಸ್ ಬ್ಯಾನರ್ ಅಗಲಿ ಬೇಕಿಲ್ಲ. ಸೇವೆಯು ನಿರಂತರವಾಗಿ ತಲುಪುವ ಹಾಗಿರಬೇಕು. ಅಗ ಮಾತ್ರ ಜನಮನ್ನಣೆ ಪಡೆದು ಚಿರಸ್ಥಾಯಿಯಾಗಿರುತ್ತದೆ. ನಮ್ಮವರು ಇದರಿಂದ ಕಲಿಯುವುದು ಯಾವಾಗ ಎಂದು ನೀವೇ ಹೇಳಬೇಕು.

***********************************************************************
ಚಿತ್ರ ಕೃಪೆ : ಅಂತರ್ಜಾಲ

28
ಜನ

ನಾಡು-ನುಡಿ: ಮರುಚಿಂತನೆ

ಸಮಾಜ ವಿಜ್ಞಾನದ ಪರಿಭಾಷೆಗಳನ್ನು ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ವಿವರಿಸುವ ಹಾಗೂ ಇದುವರೆಗೂ ಭಾರತೀಯ ಸಮಾಜ ಮತ್ತು ಸಂಸ್ಕೃತಿಯ ಕುರಿತ ಚಿತ್ರಣಗಳನ್ನು ಮರುಪರಿಶೀಲನೆ ಮಾಡುತ್ತಾ, ಭಾರತೀಯರ ಬದುಕನ್ನು ಪ್ರತಿನಿಧಿಸುವ ನೈಜ ವಿವರಣೆಗಳನ್ನು ಕಟ್ಟಲು ಸಾಧ್ಯವೇ ಎಂದು ಕಂಡುಕೊಳ್ಳುವ ಒಂದು ಚಿಕ್ಕ ಪ್ರಯತ್ನದ ಉದ್ದೇಶವನ್ನು ಹೊಂದಿರುವ “ನಾಡು-ನುಡಿ: ಮರುಚಿಂತನೆ” ಅಂಕಣ ನಿಲುಮೆಯ ಓದುಗರಿಗಾಗಿ  – ನಿಲುಮೆ 

Social Science Column Logoಒಂದು ವಿಷಯದ ಕುರಿತು ಸಾಮಾನ್ಯವಾಗಿ ಎರಡು ತರಹದ ಜ್ಞಾನವಿರುತ್ತದೆ. ಒಂದು, ಸಾಮಾನ್ಯ ಜ್ಞಾನ, ಎರಡು, ವಿಶಿಷ್ಟ ಜ್ಞಾನ ಅಥವಾ ಅಧ್ಯಯನದಿಂದ ಮೂಡಿಬರುವ ತಿಳುವಳಿಕೆ. ಸಾಮಾನ್ಯ ಜ್ಞಾನವು ಯಾವುದೋ ಒಂದು ಕಾಲಘಟ್ಟದಲ್ಲಿದ್ದ ವಿಶಿಷ್ಟ ಜ್ಞಾನದ ಪಲಶೃತಿಯೇ ಆಗಿರುತ್ತದೆ. ವಿಶಿಷ್ಟ ಜ್ಞಾನವು ಶೈಕ್ಷಣಿಕ ಕ್ಷೇತ್ರದಿಂದ ಹೊರಗೆ ಹೋಗುವಾಗ ಮತ್ತು ಶ್ರೀಸಾಮಾನ್ಯರ ಬಳಿ ಹರಡುವಾಗ ಅದು ಸಾಮಾನ್ಯಜ್ಞಾನದ ರೂಪವನ್ನು ತಳೆಯುತ್ತದೆ. ಆದರೆ ವಿಶಿಷ್ಟ ಜ್ಞಾನವು ತನ್ನ ಅಸ್ತಿತ್ವದಲ್ಲಿ ಮತ್ತು ಸ್ವಭಾವದಲ್ಲಿ ಸಾಮಾನ್ಯ ಜ್ಞಾನದಂತೆ ಸಾರ್ವಕಾಲಿಕವಾಗಿ ಒಂದೇ ರೀತಿಯಲ್ಲಿ ಇರುವುದಿಲ್ಲ. ಏಕೆಂದರೆ ವಿಶಿಷ್ಟ ಜ್ಞಾನವು ಕಾಲದಿಂದ ಕಾಲಕ್ಕೆ ಪರಿಷ್ಕೃತಗೊಳ್ಳುತ್ತಾ ಹೋಗುತ್ತದೆ. ಆಗ ಮಾತ್ರವೇ ಅದು ವಿಶಿಷ್ಟ ಜ್ಞಾನವಾಗಿ ಉಳಿದುಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲವಾದರೆ ಅದು ಸಾಮಾನ್ಯಜ್ಞಾನವಾಗಿ ಬದಲಾಗುತ್ತದೆ. ಸಾಮಾನ್ಯಜ್ಞಾನವು ಪರಿಷ್ಕರಣೆಗೆ ಒಳಗಾಗದೆ ಯಾವುದೋ ಕಾಲದ ವಿಶಿಷ್ಟ ಜ್ಞಾನವನ್ನೇ ಸಾರ್ವಕಾಲಿಕ ಸತ್ಯ ಎಂಬಂತೆ ಪುನರುತ್ಪಾದಿಸುತ್ತಿರುತ್ತವೆ. ಇದೇ ರೀತಿ, ಭಾರತೀಯ ಸಮಾಜದ ಕುರಿತು ಸಾಮಾನ್ಯ ಜ್ಞಾನ ಹಾಗೂ ವಿಶೇಷ ಜ್ಞಾನಗಳಿಗೆ ವ್ಯತ್ಯಾಸವಿರದ ರೀತಿಯಲ್ಲಿ  ಮಾತನಾಡುವ ಸಂದರ್ಭವೇರ್ಪಟ್ಟಿದೆ. ಇದಕ್ಕೆ ಕಾರಣವೆಂದರೆ ಸಮಾಜದ ಕುರಿತು ಮಾತನಾಡುವವರು ಸಾಮಾನ್ಯಜ್ಞಾನವನ್ನು ಆಧರಿಸಿ ಸಮಾಜವಿಜ್ಞಾನ ಎಂಬಂತೆ ಮಾತನಾಡುತ್ತಿರುತ್ತಾರೆ. ಸಮಾಜದಲ್ಲಿ ಯಾವುದೇ ಘಟನೆಗಳು ಸಂಭವಿಸಿದರೆ ಕೆಲವು ಹಿಂದಿನಿಂದ ಬಂದಂತಹ ತಿಳುವಳಿಕೆಯ ಆಧಾರದ ಮೇಲೆಯೇ ಅವುಗಳಿಗೆ ಸಮಜಾಯಶಿ ಕೊಡಲಾಗುತ್ತಿರುತ್ತದೆ. ನಡೆದ ಘಟನೆಯ ಕುರಿತು ಅಧ್ಯಯನ ನಡೆಸಿ ಮಾತನಾಡುವ ಕ್ರಮವನ್ನು ಸಾಮಾನ್ಯ ಜ್ಞಾನದ ಅರೆ ತಿಳುವಳಿಕೆಯು ಮೂಲೆಗುಂಪು ಮಾಡುತ್ತಿದೆ.

ಮತ್ತಷ್ಟು ಓದು »

27
ಜನ

ಸೃಜನಶೀಲತೆಯಿಲ್ಲದ ಜನರ ಹಟವಿದು – ಡಬ್ಬಿ೦ಗ್ ವಿರೋಧ

– ಗುರುರಾಜ್ ಕೊಡ್ಕಣಿ

Kannada Dubbingಕನ್ನಡ ಚಿತ್ರರ೦ಗದಲ್ಲಿ ಮತ್ತೆ ಡಬ್ಬಿ೦ಗ್ ವಿವಾದದ ಅಲೆ ಭುಗಿಲೆದ್ದಿದೆ.ಚಿತ್ರರ೦ಗದಲ್ಲೇ ಡಬ್ಬಿ೦ಗ್ ವಿವಾದದ ಕುರಿತು ಭಿನ್ನಾಭಿಪ್ರಾಯಗಳಿವೆ.ಹೆಚ್ಚಿನ ಸಿನಿಮಾ ಮ೦ದಿ ಡಬ್ಬಿ೦ಗ್ ವಿರೋಧಿಗಳಾಗಿದ್ದರೆ ,’ಮಠ’ ಸಿನಿಮಾ ಖ್ಯಾತಿಯ ನಿರ್ದೇಶಕ ಗುರು ಪ್ರಸಾದರ೦ಥವರು ಡಬ್ಬಿ೦ಗ್ ಪರವಾಗಿ ನಿ೦ತಿದ್ದಾರೆ.ನಟ ಶಿವ ರಾಜಕುಮಾರ ನೇತೃತ್ವದಲ್ಲಿ ಡಬ್ಬಿ೦ಗ್ ವಿರೋಧಿ ನಟರು, ನಿರ್ದೇಶಕರು ಚಳುವಳಿಯೆ೦ದು ಬಿದಿಗಿಳಿಯುವ ಎಲ್ಲಾ ಸಾಧ್ಯತೆಗಳಿವೆ.ಈ ಮಧ್ಯೆ ಡಬ್ಬಿ೦ಗ್ ಸಮರ್ಥಿಸಿದರು ಎ೦ಬ ಕಾರಣಕ್ಕೆ ಜ್ನಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚ೦ದ್ರಶೇಖರ ಕ೦ಬಾರರನ್ನು ಅವಮಾನಿಸಿ ಚಿತ್ರನಟ ’ನೆನಪಿರಲಿ’ ಪ್ರೇಮ ವಿವಾದಕ್ಕೀಡಾಗಿದ್ದಾರೆ.ಸಧ್ಯಕ್ಕ೦ತೂ ಡಬ್ಬಿ೦ಗ್ ವಿವಾದ ಶೀಘ್ರದಲ್ಲಿ ಮುಗಿಯುವ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ ಡಬ್ಬಿ೦ಗ್ ವಿರೋಧಿಗಳ ವಾದಗಳನ್ನೊಮ್ಮೆ ಗಮನಿಸಿ.ಕನ್ನಡ ಚಿತ್ರರ೦ಗಕ್ಕೆ ಡಬ್ಬಿ೦ಗ್ ಕಾಲಿಟ್ಟರೆ,ಕನ್ನಡದ ಸ೦ಸ್ಕೃತಿ ಹಾಳಾಗಿ ಹೋಗುತ್ತದೆ ಎನ್ನುವುದು ಇವರ ಬಹುಮುಖ್ಯ ವಾದ.ಅಲ್ಲದೆ ಡಬ್ಬಿ೦ಗ್ ಸಮ್ಮತಿಸಲ್ಪಟ್ಟರೆ ಕನ್ನಡದ ಚಿತ್ರರ೦ಗದ ಕಲಾವಿದರು ಕೆಲಸವಿಲ್ಲದ೦ತಾಗಿ ಬೀದಿಗೆ ಬ೦ದುಬಿಡುತ್ತಾರೆ,ಹಾಗಾಗಿ ಡಬ್ಬಿ೦ಗ್ ನಿಷೇಧ ಆನಿವಾರ್ಯವೆ೦ದು ಕೆಲವರು ವಾದಿಸುತ್ತಾರೆ.ಪರಭಾಷಾ ಚಿತ್ರಗಳು ಕನ್ನಡಕ್ಕೆ ಡಬ್ ಆದರೆ,ಆ ಸಿನಿಮಾಗಳಲ್ಲಿನ ಆದ್ಧೂರಿ ಸೆಟ್,ದೃಶ್ಯ ವಿಜೃ೦ಭಣೆಯ ಮು೦ದೆ ಕನ್ನಡದ ಸಿನಿಮಾಗಳು ಪೈಪೋಟಿ ನೀಡಲಾಗದೆ ಸೋತು ಹೋಗಬಹುದೆನ್ನುವುದು ಉಳಿದ ಕೆಲವರ ಅ೦ಬೋಣ.ಒಟ್ಟಾರೆಯಾಗಿ,ಡಬ್ಬಿ೦ಗ್ ವಿರೋಧಿಗಳ ತಿರುಳಿಲ್ಲದ ಈ ವಾದಗಳು ಅವರ ಹತಾಶ ಮನಸ್ಥಿತಿಗೆ ಸಾಕ್ಷಿಯಾಗಬಲ್ಲವೇ ಹೊರತು ಬೇರೆನನ್ನೂ ನಿರೂಪಿಸಲಾರವು.

ಮತ್ತಷ್ಟು ಓದು »

24
ಜನ

ಫೇಸ್ಬುಕ್ ಗ್ರಾಫ್ ಸರ್ಚ್

– ರಾಘವೇಂದ್ರ ಎಂ. ಸುಬ್ರಹ್ಮಣ್ಯ

ಫೇಸ್ಬುಕ್ ಗ್ರಾಫ್ ಸರ್ಚ್ನೀವೆಲ್ಲ ಫೇಸ್ಬುಕ್ಕನ್ನು ಯಾವ ಕಾರಣಕ್ಕಾಗಿ ಬಳಸುತ್ತೀರಿ!? ನಿಮ್ಮ ಸ್ನೇಹಿತರು ಏನು ಮಾಡುತ್ತಿದ್ದಾರೆನ್ನುವುದನ್ನು ತಿಳಿಯಲು, ನಿಲುಮೆಯ ಫೇಸ್ಬುಕ್ಕ್ ಗುಂಪಲ್ಲಿ ತರತರದ ಚರ್ಚೆಗಳನ್ನು ಮಾಡಲು, ನಿಮ್ಮ ಕವನರಚನೆ, ಛಾಯಾಗ್ರಹಣ, ಚಿತ್ರಕಲೆ ಮುಂತಾದ ವಿವಿದ ರೀತಿಯ ಕೌಶಲ್ಯಗಳನ್ನು ಜಗತ್ತಿನೊಂದಿಗೆ ಹಂಚಿಕೊಳ್ಳಲು ಅಲ್ಲವೇ? ಆದರೆ ಯಾರದರೂ ಯಾವುದಾದರೂ ಚರ್ಚೆಯಲ್ಲಿ ‘binomial theorem’ ಅಂದಕೂಡಲೇ, ಅಥವಾ “cervical cancer” ಬಗ್ಗೆ ಮಾತನಾಡಿದಕೂಡಲೇ ನೀವೇನು ಮಾಡುತ್ತೀರಿ? ಇನ್ನೊಂದು ಟ್ಯಾಬ್ ತೆಗೆದು ಅಲ್ಲಿ ಆ ವಿಷಯದ ಬಗ್ಗೆ ‘ಗೂಗಲ್’ನಲ್ಲಿ ಮಾಹಿತಿ ಹುಡುಕುತ್ತೀರಿ.

ಆದರೆ, ಫೇಸ್ಬುಕ್ ತನ್ನದೇ ಆದ ಹುಡುಕುಯಂತ್ರ(search engine)ವನ್ನು ತಂದಿದೆ ಎನ್ನುವ ವಿಚಾರ ಬಹಳ ಜನರಿಗೆ ತಿಳಿದಂತಿಲ್ಲ. ಗ್ರಾಫ್ ಸರ್ಚ್ ಎನ್ನುವ ಈ ಹೊಸ ಕೊಡುಗೆ ನಿಮ್ಮ ಫೇಸ್ಬುಕ್ ಪೇಜಿನಲ್ಲಿ ಅಡಗಿ ಕುಳಿತಿದೆ. ಇದು ಅಂತಿಂತ ಕೊಡುಗೆಯಲ್ಲ. ಬಹಳ ಕಿಲಾಡಿ ಹಾಗೂ ಬಹಳ ಉಪಯುಕ್ತವಾದುದು. ಗೂಗಲ್ ಹೇಗೆ ನಿಮಗೆ ಬೇಕಾದ ಮಾಹಿತಿಯನ್ನು ಅಂತರ್ಜಾಲದಲಿ ಹುಡುಕಿ ತೆಗೆಯುತ್ತದೆಯೋ, ಹಾಗೆಯೇ ಇದನ್ನು ಉಪಯೋಗಿಸಿ ನೀವು ನಿಮ್ಮ ಫೇಸ್ಬುಕ್ ಸ್ನೇಹಿತರು ಏನು ಮಾಡುತ್ತಿದ್ದಾರೆ? ಯಾರು ನಿಮಗೂ ಸಹ ಇಷ್ಟವಾದ ಪುಸ್ತಕಗಳನ್ನು ಓದುತ್ತಿದ್ದಾರೆ? ನಿಮ್ಮತರಹದೇ ಅಭಿರುಚಿ ಇರುವ ಜನರು ಎಲ್ಲಿದ್ದಾರೆ? ಯಾರಿದ್ದಾರೆ? ಎಂದು ಹುಡುಕಬಹುದು. ಇದೊಂದು ಬಹಳ ಸರಳವಾದ ಲಾಕ್ಷಣಿಕ ಹುಡುಕುಯಂತ್ರ(semantic search engine).

ಮತ್ತಷ್ಟು ಓದು »

23
ಜನ

ಬೇಕಾಗಿರುವುದು ರಾಜಕೀಯ ಅಸ್ತಿತ್ವವೇ ವಿನಃ ಕೇವಲ ಭ್ರಷ್ಟಚಾರ ನಿಗ್ರಹವಲ್ಲ

– ನವೀನ್ ನಾಯಕ್          

AAPಅಣ್ಣಾ ನೇತೃತ್ವದ ಜನಲೋಕಪಾಲ ಹೋರಾಟದಿಂದ ಪ್ರಸಿದ್ದರಾದ ಅರವಿಂದ್ ಕೇಜ್ರಿವಾಲ್ ದೆಹಲಿ ಗದ್ದುಗೆಗೇರಿ ಬದಲಾವಣೆಯ ಪರ್ವ ತರಲು ಹೊರಟಿದ್ದಾರೆ. ಸರಕಾರ ರಚಿಸಲು ಜನರ ಅಭಿಪ್ರಾಯ ಸಂಗ್ರಹಿಸಿದ ಕಾರಣಕ್ಕೆ ಹಗಲು ರಾತ್ರಿ ಮಾಧ್ಯಮಗಳು ತಲೆದೂಗಿದ್ದೇ ತೂಗಿದ್ದು. ಎಲ್ಲಾ ಮಾಧ್ಯಮಗಳಲ್ಲಿ ಒಂದೇ ಕೂಗು. ಇದೇ ನೈಜ ಪ್ರಜಾಪ್ರಭುತ್ವ!. ಈ ಮಾಧ್ಯಮಗಳ ಕಣ್ಣಿಗೆ ಮೂರು ರಾಜ್ಯಗಳಲ್ಲಿ ಭರ್ಜರಿ ಜಯಗಳಿಸಿದ ಮತ್ತು ದೆಹಲಿಯಲ್ಲಿ ಮೊದಲ ಸ್ಥಾನ ಪಡೆದ ಬಿಜೆಪಿ ನೈಜ ಪ್ರಜಾಪ್ರಭುತ್ವದಲ್ಲಿ ಗೆದ್ದಿದ್ದಲ್ಲ ! ಪಕ್ಷ ಕಟ್ಟಿ ಒಂದು ವರ್ಷದಲ್ಲೇ ಎರಡನೆಯ ಸ್ಥಾನಕ್ಕೆ ಬರುವುದು ಅಚ್ಚರಿಯೇ, ಅವರ ಪ್ರಯತ್ನಕ್ಕೆ ನಾವು ಶಹಭಾಸ್ ಹೇಳಲೇ ಬೇಕು. ದೇಶದ ಭವಿಷ್ಯಕ್ಕೆ ಉತ್ತಮ ಆಡಳಿತ ನೀಡಲು ಆಪ್ ಪಕ್ಷವೇ ಮುಂಚೂಣಿಗೆ ಬರಬೇಕೆಂಬ ನಿರ್ಧಾರವನ್ನು ಕೇಜ್ರಿವಾಲ್ ಯಶಸ್ವಿಯಾಗಿ ಯುವಕರ ಮನಸ್ಸಲ್ಲಿ ತುಂಬಿದ್ದರು. ರಾಜಕೀಯ ಮಾಡುವುದು ಹೇಗೆ ಅಂತ ನಾವು ಕಲಿಸುತ್ತೇವೆ, ನಮಗೆ ಕೆಂಪು ಗೂಟದ ಕಾರು ಬೇಕಿಲ್ಲ, ನಮಗೆ ಭದ್ರತೆ ಬೇಕಿಲ್ಲ, ಸರಕಾರಿ ಭವ್ಯ ಮನೆಯೂ ಬೇಕಿಲ್ಲ ಹೀಗೆ ಒಂದರ ಮೇಲೊಂದಂತೆ ಘೋಷಿಸತೊಡಗಿದರು. ಯುವಕರ ಉತ್ಸಾಹ ಇಮ್ಮಡಿಯಾಗಿತ್ತು. ತಮ್ಮ ನಾಯಕನಿಗೆ ಈ ಜಗದಲ್ಲಿ ಬೇರಾರು ಸರಿಸಾಟಿ ಇಲ್ಲವೆಂಬತೆ ವರ್ತಿಸತೊಡಗಿದರು. ಅಣ್ಣಾ ಹಜಾರೆಯವರು ಯಾವಾಗ ತನ್ನ ಹೆಸರನ್ನು ರಾಜಕೀಯಕ್ಕೆ ದುರುಪಯೋಗ ಪಡಿಸಿಕೊಳ್ಳಬೇಡಿ ಎಂದರೋ ಕೇಜ್ರಿವಾಲ್ ಅಭಿಮಾನಿಗಳು ಬುಸುಗುಡತೊಡಗಿದರು. ಸಾಲದೇ ಐಎಸಿ ಚಳುವಳಿಯ ಹಣದ ಲೆಕ್ಕ ಕೇಳಿದರೋ ಎಲ್ಲ ಅಭಿಮಾನಿಗಳು ಸಿಡಿದೆದ್ದರು. ಅಣ್ಣಾ ಮುದುಕರಾಗಿದ್ದಾರೆ ಹುಚ್ಚರಂತೆ ವರ್ತಿಸುತಿದ್ದಾರೆ ಎಂಬ ಕ್ಷುಲ್ಲಕ ಮಾತುಗಳನ್ನು ಸಾಮಾಜಿಕ ತಾಣದ ತುಂಬ ಪಸರಿಸತೊಡಗಿದರು. ಯಾರ ಏಳಿಗೆಗೆ ಯಾರು ಕಾರಣರಾಗಿದ್ದರೋ ಅವರು ಮದುಕರಾಗಿದ್ದರು ಹುಚ್ಚರಾಗಿದ್ದರು.

ಮತ್ತಷ್ಟು ಓದು »

22
ಜನ

ನಾಯಕತ್ವದ ಬೆಲೆ

– ಮಧು ಚಂದ್ರ ಎಚ್ ಬಿ ಭದ್ರಾವತಿ

2007041912020501ಇತ್ತೀಚೆಗೆ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ  ವಿಧಾನ ಸಭೆಯ ಅಧಿವೇಶನ ನಡೆಯುತ್ತಿದ್ದ ಸಂಧರ್ಭದಲ್ಲಿ , ಸುವರ್ಣ ವಿಧಾನ ಸೌಧದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ರೈತ ವಿಠ್ಠಲ ಭೀಮಪ್ಪ ಅರಭಾವಿ ಆತ್ಮಹತ್ಯೆ ಮಾಡಿ ಕೊಂಡಿದ್ದು ನಿಮಗೆಲ್ಲ ತಿಳಿದೇ ಇದೆ. ಕಾರಣ ಸಹ ನಿಮಗೆ    ತಿಳಿದೇ ಇದೆ ಸರ್ಕಾರ ರೈತರ ಹೋರಾಟಕ್ಕೆ ಸೂಕ್ತ ಪರಿಹಾರ ಹುಡುಕದೆ , ಸ್ಪಂದಿಸಲು ವಿಳಂಬ ಮಾಡಿತು.ಅದಕ್ಕೆ ಸರ್ಕಾರ  ತೆತ್ತ ಬೆಲೆ ನೇಗಿಲ ಯೋಗಿಯ ಆತ್ಮಹತ್ಯೆ. ಇದು ಕೇವಲ ನಮ್ಮ ರಾಜ್ಯದಲ್ಲಿ ಅಲ್ಲ ಮಾನವರಿರುವ ಪ್ರತಿಯೊಂದು ಸ್ಥಳದಲ್ಲಿ ಸಮಸ್ಯೆ ಇದ್ದೆ ಇದೆ.

ನಮ್ಮಲ್ಲಿ ಸಮಸ್ಯೆಯನ್ನು ಅರಿತು, ಸ್ಪಂದಿಸಿ ಸೂಕ್ತ ಪರಿಹಾರ ಕಂಡು ಹಿಡಿಯುವ ಮಾರ್ಗ ಹುಡುಕುವುದು ದೊಡ್ಡದೊಂದು ಅನಾಹುತವಾದ ಮೇಲೆಯೇ.ಇದಕ್ಕೆ ಎಲ್ಲ ಕಾರ್ಯಕ್ಷೇತ್ರಗಳು, ವರ್ಗ ಮತ್ತು ಪರಿವಾರಗಳು ಬರುತ್ತವೆ. ಇದ್ದಕ್ಕೆ ಮುಖ್ಯ ಕಾರಣ  ನಾಯಕನ ದೂರ ದೃಷ್ಟಿ ಹಾಗು ಸಮಸ್ಯೆ ಬಗೆಹರಿಸುವ ಕಲೆಯ ಕೊರತೆ ಎನ್ನಬಹುದು. ಇಂದು ಕೇವಲ ಅಧಿಕಾರ ಸಿಕ್ಕರೆ ಸಾಕು ಎನ್ನುವ ನಾಯಕರು ಇರುವಾಗ ಇವೆಲ್ಲವೂ ದೂರದ ಮಾತೆ ಸರಿ.

21
ಜನ

ತೆಲಿಯಲೇರು ರಾಮ ಭಕ್ತಿ ಮಾರ್ಗಮುನು

– ಹಂಸಾನಂದಿ

ತ್ಯಾಗರಾಜಇಂದು ಪುಷ್ಯ ಬಹುಳ ಪಂಚಮಿ. 1847ರಲ್ಲಿ ತ್ಯಾಗರಾಜರು ಸಮಾಧಿ ಹೊಂದಿದ ದಿನ.

ಈ ಮೊದಲೂ ತ್ಯಾಗರಾಜರ ಆರಾಧನೆಯ ಸಮಯದಲ್ಲಿ , ಕೆಲವು ಕೃತಿಗಳನ್ನು ಕನ್ನಡಕ್ಕೆ ತಂದಿದ್ದೆ. ಇವತ್ತು ಅದಕ್ಕಾಗೇ ನಾನು ಆಯ್ದುಕೊಂಡಿದ್ದು ‘ತೆಲಿಯಲೇರು ರಾಮ ಭಕ್ತಿಮಾರ್ಗಮುನು’ ಎಂಬ ಧೇನುಕ ರಾಗದ ರಚನೆ. ಈ ರಚನೆಗೆ ನಾನು ಮಾಡಿದ ಕನ್ನಡ ಅನುವಾದ ಇಲ್ಲಿದೆ.

ತಿಳಿಯಲಾರರು ಭಕ್ತಿಮಾರ್ಗವನ್ನು ||ತಿಳಿಯಲಾರರು ||

ತಿರೆಯೆಲ್ಲವ ತಿರುಗುತ್ತ ಕನ
-ವರಿಸುತಿಹರೆಲ್ಲ ರಾಮ || ತಿಳಿಯಲಾರರು ||

ಹಾಸಿಗೆಯಿಂದೆದ್ದು ಮುಳುಗು ಹಾಕಿ ಬೂದಿ
ಪೂಸಿ ತೋರಿಕೆಗೆ ಬೆರಳನೆಣಿಸಿ
ಕಾಸು ಗಳಿಕೆಯಲ್ಲೇ ತಮ್ಮ ಮನವನಿಡುತ
ಲೇಸು ತ್ಯಾಗರಾಜ ವಿನುತನ|| ತಿಳಿಯಲಾರರು ||

ಮತ್ತಷ್ಟು ಓದು »

21
ಜನ

ಮೋದಿ vs. ಕೇಜ್ರಿವಾಲ್ ; ನಾನೇಕೆ ಮೋದಿಯನ್ನು ಬೆಂಬಲಿಸುತ್ತೇನೆ?

ರಾಕೇಶ್ ಶೆಟ್ಟಿ

ಮೋದಿ Vs ಕೇಜ್ರಿವಾಲ್Politics is the last resort for the scoundrels” ಅಂದವನು George Bernard Shaw.ಆತನ ಮಾತಿಗೆ ಪೂರಕವಾಗಿಯೇ ನಮ್ಮ ದೇಶದ ಕೆಲವು ರಾಜಕಾರಣಿಗಳೂ ಮಾಡಿ ತೋರಿಸಿದ ಮೇಲೆ,ಚುನಾವಣೆ ಬಂತೆಂದರೆ ಮತ್ತೊಬ್ಬ ನವಪುಢಾರಿಯ ಜನನ ಅಂದುಕೊಳ್ಳುತ್ತ ನಮ್ಮ ಜನರು, ಅದರಲ್ಲೂ ಮುಖ್ಯವಾಗಿ ನಗರ ಕೇಂದ್ರಿಕೃತ ಮತದಾರರು ಈ ಚುನಾವಣೆ,ರಾಜಕೀಯಗಳಿಂದಲೇ ದೂರವುಳಿಯುತಿದ್ದರು.ರಾಜಕೀಯ ಅಂದರೆ ಗಲೀಜು ಅಂತೆಲ್ಲ ರೇಜಿಗೆ ಪಟ್ಟುಕೊಳ್ಳುವವರೇ ಹೆಚ್ಚಿದ್ದರು.

ಎಲ್ಲ ಕೆಟ್ಟದಕ್ಕೂ ಒಂದು ಅಂತ್ಯವಿದ್ದಂತೆ,ಒಳ್ಳೆಯದಕ್ಕೂ ಆರಂಭವಿರಬೇಕಲ್ಲವೇ? ಇತ್ತೀಚೆಗೆ ಮುಗಿದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿರುವುದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಆರೋಗ್ಯಕರ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ.ಈ ಪಂಚ ರಾಜ್ಯಗಳ ಚುನಾವಣೆಯಲ್ಲಿ ಎಲ್ಲರನ್ನು ಚಕಿತಗೊಳಿಸಿದ ಮತ್ತೊಂದು ಪ್ರಧಾನ ಅಂಶ, ದೆಹಲಿಯಲ್ಲಿ ಕೇಜ್ರಿವಾಲ್ ನೇತೃತ್ವದ ‘ಆಪ್’ ಪಕ್ಷ ೨೮ ಸೀಟುಗಳನ್ನು ಗೆದ್ದು,ಕಡೆಗೆ ಕಾಂಗ್ರೆಸ್ಸ್ ಪಕ್ಷದ ಬಾಹ್ಯಬೆಂಬಲದಿಂದ ಸರ್ಕಾರವನ್ನು ರಚಿಸಿ ಮುಖ್ಯಮಂತ್ರಿ ಗದ್ದುಗೆಯೇರಿದ್ದು. ಎಲ್ಲಾ ರಾಜಕೀಯ ಪಕ್ಷಗಳು ಕಾಂಗ್ರೆಸ್ಸ್ ಹಾಕಿಕೊಟ್ಟ ಹಾದಿಯಲ್ಲೇ ಸಾಗಿ ರಾಜಕಾರಣ ಮಾಡುವಾಗ ಭಿನ್ನ ಹಾದಿಯಿಡಿದು  ‘ಆಪ್’ ಪಕ್ಷ ೨೮ ಸೀಟು ಗೆದ್ದಿದ್ದು ಸಾಮಾನ್ಯ ಸಂಗತಿಯೇನಲ್ಲ.

ಸಹಜವಾಗಿಯೇ ಮೀಡಿಯಾಗಳ ಹೊಸ ಡಾರ್ಲಿಂಗ್ ಆಗಿ ಕೇಜ್ರಿವಾಲ್ ಹೊರಹೊಮ್ಮಿದರು.ಅಲ್ಲಿಯವರೆಗೂ ಮೋದಿಯ ಎದುರಿಗೆ ಯಾರು,ಯಾರು ಅಂದುಕೊಳ್ಳುತಿದ್ದವರಿಗೆ ಎದುರಿಗೆ ನಿಲ್ಲಿಸಲು ಒಬ್ಬ ಸಿಕ್ಕಂತಾಗಿತ್ತು.ಆಗ ‘ಮೋದಿ vs ಕೇಜ್ರಿವಾಲ್’ ಅನ್ನುವ ಹೊಸ ರಾಗ ಶುರುವಿಟ್ಟುಕೊಂಡರು.

ಸತತ ೧೩ ವರ್ಷಗಳ ಕಾಲದಿಂದ ಮುಖ್ಯಮಂತ್ರಿಯಾಗಿದ್ದುಕೊಂಡು,೪ ನೇ ಬಾರಿಗೆ ಗೆದ್ದು,ಗದ್ದುಗೆ ಹಿಡಿದು ತನ್ನ ಅಭಿವೃದ್ಧಿ ಮಂತ್ರದಿಂದಲೇ ದೇಶದ ಗಮನ ಸೆಳೆದು ಇಂದು ‘ಪ್ರಧಾನಿ ಅಭ್ಯರ್ಥಿ’ಯಾಗಿ ನಿಂತ ನಾಯಕನೊಬ್ಬನ ಎದುರಿಗೆ ಒಂದು ವರ್ಷದ ಹಿಂದಷ್ಟೇ ‘ಅಣ್ಣಾ ಹಜಾರೆ’ಯವರ ಹೋರಾಟದ ಗರ್ಭ ಸೀಳಿ, ನಂಬಿದವರಿಗೆ ಮೋಸ ಮಾಡಿಕೊಂಡು ಜನಿಸಿದ ಆಪ್ ಪಕ್ಷದ ಕೇಜ್ರಿವಾಲ್ ಅವರನ್ನು ನಿಲ್ಲಿಸಿ ನೋಡುವುದೇ ಮೊದಲಿಗೆ ಹಾಸ್ಯಾಸ್ಪದವಾದದ್ದು ಎನಿಸುತ್ತದೆ.

ಮತ್ತಷ್ಟು ಓದು »

18
ಜನ

ನಿಮ್ಮ ನಿಲುಮೆಗೆ ನಾಲ್ಕರ ಸಂಭ್ರಮ

ನಿಲುಮೆ - ನಾಲ್ಕರ ಸಂಭ್ರಮದಲ್ಲಿ

“ ನೂರು ಮತದ ಹೊಟ್ಟ ತೂರಿ
ಎಲ್ಲ ತತ್ವದ ಎಲ್ಲೆ ಮೀರಿ
ನಿರ್ದಿಗಂತವಾಗಿ ಏರಿ
ಓ ನನ್ನ ಚೇತನ ಆಗು ನೀ ಅನಿಕೇತನ…

ರಸ ಋಷಿ ಕುವೆಂಪು ಅವರ ಈ ನುಡಿಗಳೆ ನಮಗೆ ಸ್ಪೂರ್ತಿ.ಯಾವುದೇ ಜಾತಿ, ಮತ, ತತ್ವಗಳಿಗೆ ಗಂಟು ಬೀಳದೆ, ಎಡ-ಬಲ ಪಂಥೀಯರ ನಡುವೆ ಸಿಕ್ಕಿಕೊಳ್ಳದೆ, ಯಾವುದೇ ಮತ್ತು ಯಾರದೇ ಮರ್ಜಿಗೇ ಬೀಳದೆ ಅನ್ನಿಸಿದ್ದನ್ನು ನೇರವಾಗಿ ಹೇಳುವ, ಆ ಮೂಲಕ ಯಾವ ಗುಂಪಿಗೂ ಸೇರದೆಯೆ ಸ್ವತಂತ್ರವಾಗಿ ಯೋಚಿಸುವ ಬಯಕೆ ನಮ್ಮದು. ಅಷ್ಟಕ್ಕೂ ’ಸತ್ಯ’ ಅನ್ನುವುದು ಎಡ-ಬಲ ಪಂಥದ ಆಸ್ತಿಯೇನು ಅಲ್ಲವಲ್ಲ. ಅದು ಈ ಇಬ್ಬರ ನಡುವೆಯು ಸಿಲುಕದೆ ತನ್ನ ಪಾಡಿಗದು ಯಾವುದೋ ಮೂಲೆಯಲ್ಲಿ ನಿರ್ಲಿಪ್ತವಾಗಿರುತ್ತದೆ. ಅದನ್ನ ಹುಡುಕುವ ಮುಗ್ಧ ಆಸೆ ನಮ್ಮದು.ನೊಂದ ಜೀವಗಳಿಗೆ ದನಿಯಾಗುವ ಬಯಕೆ ನಮ್ಮದು…”

ಮೇಲಿನ ಮಾತುಗಳು ’ನಿಲುಮೆಯ ನಿಲುವಿನಲ್ಲಿ’ ನಾವು ಬರೆದುಕೊಂಡಿರುವುದು.ನಿಲುಮೆ ಮೂರು ವರುಷ ಪೂರೈಸಿ ನಾಲ್ಕನೇ ವರುಷಕ್ಕೆ ಕಾಲಿಟ್ಟಿರುವ ಈ ಅವಧಿಯಲ್ಲಿ ಮೇಲಿನ ಮಾತುಗಳಿಗೆ ನ್ಯಾಯ ಸಲ್ಲಿಸಿದ್ದೇವೆ ಅನ್ನುವ ಭಾವನೆ ನಮ್ಮದು.ಇದುವರೆಗೂ ನಿಲುಮೆಗೆ ಕಳಿಸಲ್ಪಟ್ಟ ಲೇಖನಗಳನ್ನು, ನಾವು ನಮ್ಮ ವಾದ,ನಂಬಿಕೆ,ಅಭಿಪ್ರಾಯಕ್ಕೆ ವಿರುದ್ಧವಾಗಿದೆ ಅನ್ನುವ ಕಾರಣಕ್ಕೆ ಪ್ರಕಟಿಸದೇ ತಡೆ ಹಿಡಿದವರಲ್ಲ.ವಿಭಿನ್ನ ಸಂಸ್ಕೃತಿ,ಆಚಾರ,ವಿಚಾರ,ನಂಬಿಕೆಗಳನ್ನು ಗೌರವಿಸಬೇಕು ಅನ್ನುವುದು ಕೇವಲ ನಮ್ಮ ಮಾತಲ್ಲ,ಅದನ್ನು ಕಾರ್ಯಗತಗೊಳಿಸಿದ್ದೇವೆ ಕೂಡ.ಆದರೆ ಒಂದು ಮಾತು ನಿಜ.ಕೆಲವೊಂದು ಲೇಖನಗಳು ಯುನಿಕೋಡ್ನಲ್ಲಿರದ ಕಾರಣ, ಇನ್ನು ಕೆಲವು ಸಾಂಧರ್ಭಿಕ ಲೇಖನಗಳನ್ನ ನಾವು ನೋಡುವಷ್ಟರಲ್ಲೇ ತಡವಾಗಿದ್ದರಿಂದ ಕೆಲವು ಪ್ರಕಟವಾಗಿಲ್ಲ.(ನಿಲುಮೆ ನಮ್ಮ ಹವ್ಯಾಸದ ಭಾಗವಾಗಿರುವುದರಿಂದ, ಕೆಲವೊಮ್ಮೆ ಕೆಲಸದ ಒತ್ತಡದಲ್ಲಾಗುವ ತಪ್ಪುಗಳಿವು, ಮನ್ನಿಸಿ).ಇವಿಷ್ಟು ಕಾರಣ ಬಿಟ್ಟರೆ ನಮಗೆ ಕಳಿಸಲ್ಪಟ್ಟ ಎಲ್ಲ ಲೇಖನಗಳನ್ನು ನಾವು ಪ್ರಕಟಿಸಿದ್ದೇವೆ.

೨೦೧೩ ನಿಲುಮೆಯ ಪಾಲಿಗೆ ಗಮನಾರ್ಹವಾಗಿಯೇ ಇತ್ತು.೨೦೧೩ ರಲ್ಲಿ ನಿಲುಮೆಯಲ್ಲಿ ನಡೆದ ಪ್ರಮುಖ ಚರ್ಚೆಗಳು/ಬರಹಗಳಿವು.

೧.ಕಾಮುಕರಿಗೆ ಬಲಿಯಾದ ಉಜಿರೆಯ ಸೌಜನ್ಯಪರವಾಗಿ ಮತ್ತು ದೌರ್ಜನ್ಯಕ್ಕೊಳಗಾದ ಛತ್ತೀಸಗಢದ ಆದಿವಾಸಿ ಮಹಿಳೆ ಸೋನಿ ಸೂರಿಯ ಬಗ್ಗೆ
೨.ವಚನ ಸಾಹಿತ್ಯ ಮತ್ತು ಜಾತಿ ಪದ್ಧತಿ
೩.ಶಂಕರ ಭಟ್ಟರ ಎಲ್ಲರ ಕನ್ನಡ
೪.ಬೌದ್ಧ ಧರ್ಮ ಮತ್ತು ಶಂಕರಚಾರ್ಯ
೫.ಟಿಪ್ಪು ವಿವಿಯ ವಿವಾದ
೬.ಮೂಡನಂಬಿಕೆ ವಿರೋಧಿ ಕರಡು
೭.ಜಮ್ಮು-ಕಾಶ್ಮೀರ ಮತ್ತು ಆರ್ಟಿಕಲ್ ೩೭೦ ಚರ್ಚೆ
೮.ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ
೯.ರಾಜಕೀಯ ಸುದ್ದಿಗಳು

೨೦೧೩ರಲ್ಲಿ ನಡೆದ “ವಚನ ಸಾಹಿತ್ಯ ಮತ್ತು ಜಾತಿ ವ್ಯವಸ್ಥೆ”ಯ ಚರ್ಚೆ ಕರ್ನಾಟಕದ ಬುದ್ದಿಜೀವಿ ವಲಯದಲ್ಲಿ ದೊಡ್ಡ ಸಂಚಲವನ್ನುಂಟು ಮಾಡಿತ್ತು.ರಾಜ್ಯದ ಪ್ರಗತಿಪರ ಪತ್ರಿಕೆಯೊಂದರಲ್ಲಿ ಶುರುವಾದ ಈ ಚರ್ಚೆ ಏಕಮುಖವಾಗಿ ಸಾಗಿ ಒಂದು ಕಡೆಯವರ ಲೇಖನಗಳಿಗೆ ಮಾತ್ರ ಮನ್ನಣೆ ನೀಡಿ ಇನ್ನೊಂದು ಗುಂಪಿನ ವಾದವನ್ನೂ ಆಲಿಸುವ ನಿಲುವನ್ನು ತೋರಿಸದಿದ್ದಾಗ ಸಿ.ಎಸ್.ಎಲ್.ಸಿ ತಂಡದ ಜೊತೆ ನಿಂತು, ನಿಲುಮೆಯ ನಿಲುವಿಗೆ ಬದ್ಧವಾಗಿ ನಡೆದುಕೊಂಡು ನಮ್ಮ ಕರ್ತವ್ಯ ನಿರ್ವಹಿಸಿದ್ದೇವೆ ಅನ್ನುವ ಭಾವ ನಮ್ಮದು.ಆದರೆ, ಈ ಚರ್ಚೆಯ ಅವಧಿಯಲ್ಲಿ ಮತ್ತು ಆ ನಂತರ ಕರ್ನಾಟಕದ ಬುದ್ಧಿಜೀವಿ ವಲಯ ನಡೆದುಕೊಂಡ ರೀತಿ ಆಘಾತಕಾರಿಯಾಗಿತ್ತು. ಹೀಗೆ ಒಂದೇ ರೀತಿಯ ಅಥವಾ ತಮಗೇ ಹೇಗೆ ಬೇಕೋ ಅಂತ ವಾದಗಳಿಗೆ,ಅಂತ ವಾದವನ್ನು ಮುಂದಿಡುವ ಜನರೆಲ್ಲ ಒಂದಾಗಿ ಉಳಿದವರನ್ನು ಅಸ್ಪೃಷ್ಯರನ್ನಾಗಿ ನೋಡುವ ಆರೋಗ್ಯಕರ ಸಮಾಜದ ನಿರ್ಮಾಣ ಮಾಡುವುದಿಲ್ಲ.ದುರಾದೃಷ್ಟವಶಾತ್ ನಮ್ಮಲ್ಲಿ ಈಗ ಇದೇ ರೀತಿಯ ಗುಂಪುಗೂಡುವಿಕೆ ನಡೆಯುತ್ತಿದೆಯೆನ್ನುವುದು.ಭಿನ್ನ ವಾದ,ಅಭಿಪ್ರಾಯಗಳನ್ನು ಹೀಗೆ ದೂರ ಮಾಡಿಕೊಳ್ಳುತ್ತ ನಾವೆಂತ ಸಮಾಜವನ್ನು ಕಟ್ಟಲು ಹೊರಟಿದ್ದೇವೆ ಅನ್ನುವ ಆತ್ಮವಾಲೋಕನ ಮಾಡಿಕೊಳ್ಳುವುದು ಅವಶ್ಯವಾಗಿದೆ ಅನ್ನುವುದು ನಿಲುಮೆಯ ಕಳಕಳಿ.

ಕೆಲವು ಲೇಖನಗಳಿಂದಾಗಿ, ಕೆಲವರು ನಮ್ಮನ್ನು ಬಲಪಂಥೀಯರನ್ನಾಗಿಯೂ ಮಾಡಿದರು. ಆದರೆ,ಎಡಪಂಥೀಯರನ್ನಾಗಿ ಮಾಡಿದ್ದು ಸ್ವಲ್ಪ ಕಡಿಮೆಯೇ ಅನ್ನಬಹುದು.ಇದಕ್ಕೆ ನಿಲುಮೆ ಕಾರಣರಲ್ಲ. “ನಿಲುಮೆ ಅನ್ನುವುದು ಒಂದು ವೇದಿಕೆ” ಎಂದು ನೋಡಿದಾಗ, ಈ ರೀತಿ ಹಣೆಪಟ್ಟಿ ಕಟ್ಟುವುದು ಸರಿಯಲ್ಲ ಅನ್ನುವುದು ತಿಳಿಯುತ್ತದೆ.ನಿಲುಮೆಯ ನಿಲುವಿನಂತೆ ನಾವು ಎಲ್ಲಾ ರೀತಿಯ ಬರಹಗಳಿಗೂ ದನಿಯಾಗಿದ್ದೇವೆ,ದನಿಯಾಗುತ್ತಿದ್ದೇವೆ ಮತ್ತು ದನಿಯಾಗುತ್ತಲೇ ಇರುತ್ತೇವೆ.ಈ ಮೇಲೆ ಹೇಳಿದ ಹಾಗೆ ಬಂದಿದ್ದನ್ನೆಲ್ಲಾ ಯಾವುದೇ ಫಿಲ್ಟರ್ ಇಲ್ಲದೆ ನಿಮ್ಮ ಮುಂದೆ ಇಡುತ್ತಲೇ ಬಂದಿದ್ದೇವೆ. ಇನ್ನೂ ನಮ್ಮನ್ನ ಯಾವ ಪಂಥಕ್ಕೆ ಸೇರಿಸಬೇಕು ಅನ್ನುವುದು ನಿಮಗೇ ಬಿಟ್ಟದ್ದು.ಇದ್ದಿದ್ದು ಇದ್ದ ಹಾಗೇ ಹೇಳಿದ್ದರಿಂದಾಗಿಯೇ, ಕೆಲವು ಜನರ ಪಾಲಿಗೆ ನಾವು ಅಸ್ಪೃಷ್ಯರು ಆಗಿದ್ದೇವೆ, ಹಾಗೆಯೇ ಹಲವು ಜನರ ಸ್ನೇಹವು ನಮಗೆ ಸಿಕ್ಕಿದೆ. ಆ ಮಟ್ಟಿಗಿನ ತೃಪ್ತಿಯು ನಮಗಿದೆ. ಕೆಲವು ಬ್ಲಾಗುಗಳು ನಾವು ಅವರ ಬಗ್ಗೆ ಪ್ರೀತಿಯಿಂದ ಮಾತಾಡಿದ್ದನ್ನು ಪ್ರಕಟಿಸಿದರು. ನೇತ್ಯಾತ್ಮಕ ಅಂಶಗಳನ್ನು ಹೇಳಿದಾಗ ಮನಿಸಿಕೊಂಡಿದ್ದು ಉಂಟು. ಅದು ಅವವರ ಭಕುತಿಗೆ ಬಿಟ್ಟ ವಿಷಯ.ಇನ್ನು, ಇದುವರೆಗೂ ನಿಲುಮೆ ತಂಡದಲ್ಲಿ ಯಾರೆಲ್ಲಾ ಇದ್ದಾರೆ ಅನ್ನುವುದು ಬಹಳಷ್ಟು ಜನರಿಗೆ ಗೊತ್ತಿರಬಹುದು, ಗೊತ್ತಿಲ್ಲದೆಯೂ ಇರಬಹುದು.ಯಾವುದೇ ಹಿಡನ್ ಅಜೆಂಡವನ್ನೇನು ಇಟ್ಟುಕೊಂಡು ಮುಖ ಮುಚ್ಚಿಕುಳಿತಿರುವವರು ನಾವಲ್ಲ. ಅಷ್ಟಕ್ಕೂ ನಿಲುಮೆ ನಡೆಯುತ್ತಿರುವುದು ಕೇವಲ ನಮ್ಮಿಂದ ಅಲ್ಲ,ಅದಕ್ಕೆ ಕಾರಣ ನಾವು ಮೊದಲೇ ಹೇಳಿದಂತೆ ನಮ್ಮ ಲೇಖಕರ ಬಳಗ ಮತ್ತು ಓದುಗ ಮಿತ್ರರು.ಅಡ್ಮಿನ್ ತಂಡವಿಲ್ಲಿ ನಿಮಿತ್ತ ಮಾತ್ರ.

ನಿಲುಮೆ ಮೂರು ವರ್ಷ ಮುಗಿಸಿ ನಾಲ್ಕನೇ ವರ್ಷದ ಶುಭಾರಂಭವನ್ನು ಮಾಡಿದೆ.ಕನ್ನಡ ಯುವ ಸಮುದಾಯದ ವೈಚಾರಿಕ, ಸಾಹಿತ್ಯಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವಿಚಾರಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ವೇದಿಕೆಯ ರೂಪದಲ್ಲಿ ನಿಲುಮೆ ನಿಮ್ಮ ಮುಂದಿದೆ.ನಾಡಿನ ಅನೇಕ ಮಹತ್ವದ ವಿಷಯಗಳನ್ನು ಚರ್ಚಿಸುವಲ್ಲಿ, ಚಿಂತನೆಗಳನ್ನು ರೂಪಿಸುವಲ್ಲಿ ಇನ್ನೂ ಸಕ್ರಿಯವಾಗಿ ಪಾಲ್ಗೊಳ್ಳುವ ಆ ಮೂಲಕ ಸಮಾಜದ ಧನಾತ್ಮಕ ಮೌಲ್ಯಗಳನ್ನು ವೃದ್ಧಿಸುವಲ್ಲಿ ತನ್ನದೇ ಕೊಡುಗೆಗಳನ್ನು ನೀಡುವ ಮತ್ತು ಯಾವುದೇ ಪಂಥ,ವಾದ,ವಿಚಾರಗಳಿಗೆ ಅಂಟಿಕೊಳ್ಳದೇ ಎಲ್ಲ ನಿಲುವಿನ ವಿಚಾರಗಳಿಗೂ ಸಮಾನ ಪ್ರಾತಿನಿಧ್ಯ ನೀಡುತ್ತೇವೆ ಅನ್ನುವುದು ಓದುಗ ದೊರೆಗಳಿಗೆ ನಿಲುಮೆಯ ವಾಗ್ಧಾನ.

ನಿಲುಮೆಗೆ ನಾಡಿನ ಹಿರಿಯರು, ಗಣ್ಯರು ತಮ್ಮ ಸಲಹೆ, ಸಹಕಾರಗಳನ್ನು ನೀಡುತ್ತಾ ಬಂದಿದ್ದಾರೆ. ಅಷ್ಟರಮಟ್ಟಿಗೆ ನಿಲುಮೆಯು ಬೆಳೆದುನಿಂತಿದೆ. ಆದರೆ ತಲುಪಬೇಕಾದ ಗಮ್ಯವು ಇನ್ನೂ ಬಹಳ ದೂರದಲ್ಲಿದೆ.

ಇದೆಲ್ಲ ಹೇಳಿದ ಮೇಲೆ ನಿಮ್ಮ ಬಗ್ಗೆ ಹೇಳದಿದ್ದರೆ ಅದು ಅಪೂರ್ಣ. ನೀವು ನಮ್ಮ ಬೆನ್ನಿಗೆ ನಿಂತವರು. ನಿಮ್ಮಗಳ ಪ್ರೋತ್ಸಾಹ ನಿಲುಮೆಯನ್ನು ಈ ಮಟ್ಟಕ್ಕೆ ಬೆಳೆಸಿದೆ. ಹಿರಿಯರ ಮಾರ್ಗದರ್ಶನ,ಕಿರಿಯರ ಪ್ರೀತಿ ಎರಡು ನಿಲುಮೆಯನ್ನು ಸಾಕಷ್ಟು ಪ್ರೋತ್ಸಾಹಿಸಿವೆ. ಅದಕ್ಕೆ ನಿಲುಮೆ ನಿಮಗೆ ಚಿರರುಣಿ. ಹಾಗೆ ಮತ್ತೊಮ್ಮೆ ನಿಮ್ಮನ್ನು ನಿಲುಮೆ ಭಿನ್ನವಿಸುವುದು ಏನೆಂದರೆ ಹೇಗೆ ನಿಲುಮೆಯನ್ನು ಇನ್ನಷ್ಟು ಜನರಿಗೆ ತಲುಪಿಸಬಹುದು ಎಂಬ ನಿಮ್ಮ ಅಭಿಪ್ರಾಯಕ್ಕಾಗಿ. ಇದರಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಏನು ಎಂಬ ಪ್ರೀತಿಯ ಒತ್ತಾಯಕ್ಕಾಗಿ. ನಿಮ್ಮಗಳ ಪ್ರೀತಿಯೇ ನಿಲುಮೆಯ ಹರುಷ.ನಿಲುಮೆಯ ಸಂಕ್ರಮಣದ ಸಂಭ್ರಮದಲ್ಲಿ ನೀವೂ ಪಾಲ್ಗೊಳ್ಳಿ. ನಿಲುಮೆಯ ಬಗ್ಗೆ ನಿಮ್ಮ ಅನಿಸಿಕೆ, ಅಭಿಪ್ರಾಯ, ಟೀಕೆ ಟಿಪ್ಪಣಿಗಳನ್ನು(baraha@nilume.netಗೆ) ಕಳಿಸಿಕೊಡಿ. ಸಹ್ಯ ಭಾಷೆಯಲ್ಲಿರುವ ಟೀಕೆ-ಟಿಪ್ಪಣಿಗಳನ್ನೂ, ಪ್ರೀತಿಯ ಮಾತುಗಳನ್ನೂ ಎಲ್ಲವನ್ನು ನಾವು ಇಲ್ಲೇ ಪ್ರಕಟಿಸುತ್ತೇವೆ.

ನಿಮ್ಮೊಲುಮೆಯ,

ನಿಲುಮೆ