ವಿಷಯದ ವಿವರಗಳಿಗೆ ದಾಟಿರಿ

Archive for

17
ಜನ

ವಿಡಂಬನೆ:ಕಟ್ಟುವೆವು ಕಸದ ನಾಡೊಂದನು!

ತುರುವೇಕೆರೆ ಪ್ರಸಾದ್

dantavillada_kathegalu_nilumeಮೊನ್ನೆ ಮೊನ್ನೆ ನಿಧಾನಸೌಧದದಲ್ಲಿ ಮಂತ್ರಿಗಳೊಬ್ಬರು ತಮ್ಮ ಕಛೇರಿಯ ಗೋಡೆ ಒಡೆದ ಹಿನ್ನಲೆಯಲ್ಲಿ ಹಲವರು ಮತ್ಸದ್ದಿಗಳ ತರ್ಕ-ಕುತರ್ಕಗಳ ಸಾರಾಂಶ ಇಲ್ಲಿದೆ:

ಅನುಮಾನುಲು : ನಿಧಾನ ಸೌಧದ ಗೋಡೆ ಒಡೆದಿದ್ರಲ್ಲಿ ತಪ್ಪೇನೂ ಇಲ್ಲ. ನಾವು ಏನಾದ್ರೂ ಒಡುದ್ರೆ ದೊಡ್ಡ ಇಶ್ಯೂ ಮಾಡ್ತೀರಿ.ಆದ್ರೆ ನೀವು ದೊಡ್ ದೊಡ್ಡೋರು ಎಲ್ಲಾ ಉರುಳುಸ್ತಿದ್ರೂ ಕೇಳೋರೇ ಇಲ್ಲ..ಈಗ ಗೋಡೆ ಒಡೆದಿದ್ರಿಂತ ಏನು ಆಕಾಶ ತಲೆ ಮೇಲೆ ಬಿದ್ದಿದೆಯಾ?ಡಿಶ್ಕುಂ ಕುಮಾರ್ ನನ್ ರೂಂ ಮೇಲೆ ಕಣ್ ಹಾಕಿದ್ರು. ಅವರು ಗೋಡೆ ಒಡೀದೆ ಬಿಡ್ತಿದ್ರಾ? ಶತಶತಮಾನಗಳಿಂದ ಕಟ್ಟಿರೋ ಜಾತಿ, ಮತ,ಪಂಥಗಳ ಗೋಡೆಯನ್ನು ಒಡೀರಿ, ಎಲ್ಲಾ ಈಚೆ ಬನ್ನಿ  ಅಂತ ನಮ್ ಸಾಹಿತಿಗಳು ಹೇಳ್ತಾನೇ ಇರಲ್ವಾ? ನಾಲ್ಕು ಗೋಡೆ ಶಿಕ್ಷಣ ಅಂತ ಹೀಗಳೆಯಲ್ಲವಾ? ಏನೇ ಸುಧಾರಣೆ ಆದ್ರೂ ಮೊದ್ಲು ನಿಧಾನಸೌಧದಿಂದ ಆಗ್ಬೇಕು ಅಂತ ಹೇಳಲ್ವಾ? ಗೋಡೆ ಒಡೆಯೋದನ್ನೂ ಅಲ್ಲಿಂದಲೇ ಶುರು ಮಾಡಿದೀವಿ..ಇದೂ ಒಂದು ಆದರ್ಶ ಅಂತ ನಿಮಗ್ಯಾಕನಿಸಲ್ಲ..?

ಮತ್ತಷ್ಟು ಓದು »

16
ಜನ

ಉದಾರತೆಗೊಂದು ಉದಾಹರಣೆ

– ಮಧು ಚಂದ್ರ ಎಚ್.ಬಿ , ಭದ್ರಾವತಿ

ಉದಾರತೆಗೊಂದು ಉದಾಹರಣೆ

ಉದಾರತೆಗೊಂದು ಉದಾಹರಣೆ

ವ್ಯಾಪಾರಿ ಮನೋಭಾವ ಇಂದಿನ ನಮ್ಮ ನಿಮ್ಮೆಲ್ಲರಲ್ಲಿ ಕಂಡುಬರುವ ಅತಿ ಪ್ರಮುಖ ಅಂಶ. ಏನಾದರೂ ಮಾಡಿ ಅವರಿಂದ ಅಥವಾ ಅದರಿಂದ ಹೆಚ್ಚು ಲಾಭ ಪಡೆಯಬೇಕು ಎನ್ನುವ ಮನೋಭಾವ ಇಂದು ಮನುಷ್ಯನ ವ್ಯಕ್ತಿತ್ವವನ್ನೇ ಮಾರಿ ಕೊಳ್ಳುವ ಹಾಗೆ ಮಾಡಿದೆ. ಇದರಿಂದ ಯೋಗ್ಯವಾದುದು ಸಹ ಅಯೋಗ್ಯವೆನಿಸಿಕೊಳ್ಳುತ್ತಿದೆ. ಹತ್ತಿಪ್ಪತ್ತು ವರ್ಷಗಳಿಂದ ಇಚೆ ಮಣ್ಣು, ನೀರು, ಗಾಳಿ ಮಾರಿ ಹಣ ಮಾಡಿಕೊಳ್ಳುವ ದಂಧೆ ಆರಂಭವಾಗಿ ಈಗ ವಿಷಮ ಪರಿಸ್ಥಿತಿಯಲ್ಲಿದೆ.ಇವೆಲ್ಲವೂ ಪ್ರಕೃತಿಯಲ್ಲಿ ಸಿಗುವ ಎಲ್ಲರ ಆಜನ್ಮ ಸಿದ್ಧ ಹಕ್ಕುಗಳು ಆದರು ಹಣ ಕೊಟ್ಟು ಪಡೆಯುವ ಪರಿಸ್ಥಿತಿಯೊದಗಿದೆ ನಮಗೆ. ಇದಕ್ಕೆ ಶಿಕ್ಷಣವೂ ಸಹ ಸೇರ್ಪಡೆಯಾಗಿದ್ದು ನಮ್ಮ ದೌರ್ಭಾಗ್ಯವೇ ಸರಿ. ಉತ್ತಮ ಶಿಕ್ಷಣ ಕೊಡುತ್ತೇವೆಂದು ಹೇಳಿ ಹಣ ಸುಲಿಗೆ ಮಾಡುವ ಶಿಕ್ಷಣ ಸಂಸ್ಥೆಗಳು ಅನೇಕ, ಆದರೆ ಅವರು ಕೊಡುವ ಗುಣಮಟ್ಟವು ಸಹ ಅಷ್ಟಕಷ್ಟೇ. ಅನಗತ್ಯವಾಗಿ ನೆರೆಯ ಶಿಕ್ಷಣ ಸಂಸ್ಥೆ ಒಂದು ರೂಪಾಯಿ ಹೆಚ್ಚಿಗೆ ಹಣ ಕೇಳುವುದು ಗೊತ್ತಾದರೆ ಮೊತ್ತೊಂದು ಸಂಸ್ಥೆ ಸಹ ಹೆಚ್ಚಿಗೆ ಹಣ ಕೇಳುತ್ತದೆ. ಕಡೆಗೆ ಉತ್ತಮ ನಾಗರಿಕರನ್ನು ಸೃಷ್ಟಿ ಮಾಡಬೇಕಾದ ಸಂಸ್ಥೆಗಳು ಸೃಷ್ಟಿ ಮಾಡುವುದು ಹೆಚ್ಚು ಹಣ ಕೀಳುವ ವ್ಯಾಪಾರಿ ಮನೋಭಾವದ ವೃತ್ತಿ ಪರರನ್ನೇ ಹೊರತು ಸಜ್ಜನರನ್ನು ಅಲ್ಲ. ಅದ್ದರಿಂದ ಎಲ್ಲರೂ ಉದಾರ ಮನೋಭಾವ ಬೆಳಸಿಕೊಳ್ಳುವ ಅವಶ್ಯಕತೆಯಿದೆ ಇಲ್ಲದಿದ್ದರೆ ಮಾನವ ಜನಾಂಗವೆಲ್ಲಾ ಪರಸ್ಪರ ಕಿತ್ತಾಡುವ ಸಮಯ ಈಗಾಗಲೇ ಬಂದಿದೆ. ಉದಾರ ಮನೋಭಾವಕ್ಕೆ ನಮ್ಮ ಹಿರಿಯರು ಮಾದರಿ ಎನ್ನುವುದಕ್ಕೆ ಒಂದು ನಿದರ್ಶನ ಇಲ್ಲಿದೆ.

ಹಿಂದೆ ಶೇಷಾದ್ರಿ ಅಯ್ಯರ್ ಅವರು ಮೈಸೂರಿನ ದಿವಾನರಾಗಿದ್ದ ಕಾಲ.

ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಒಮ್ಮೆ ಬ್ರಿಟೀಶ್ ರೆಸಿಡೆಂಟ್ ಲಿ ವಾರ್ನೆರ್ ಭೇಟಿ ಕೊಟ್ಟಿದ್ದ. ಅವನು ಅಲ್ಲಿ ನಡೆಯುತ್ತಿದ್ದ ತರಗತಿಗೆ ಭೇಟಿಕೊಟ್ಟು. ಅಲ್ಲಿರುವ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳುತ್ತಿದ್ದ. ಹೀಗೆ ಅಲ್ಲಿದ್ದ ಒಬ್ಬ ಹುಡುಗನನ್ನು ಕುರಿತು

ಮತ್ತಷ್ಟು ಓದು »

15
ಜನ

ವಿಧಿ 370 – ಚರ್ಚೆ

– ಪ್ರವೀಣ್ ಪಟವರ್ಧನ್

Jammu Kashmir- Debate on Article 370ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರು ಜಮ್ಮುವಿನಲ್ಲಿ ನಡೆದ ಇತ್ತೀಚೆಗಿನ ಸಮಾವೇಶದಲ್ಲಿ ನಮ್ಮ ದೇಶದ ಮೊದಲ ಪ್ರಧಾನ ಮಂತ್ರಿಯವರ ನಿಲುವನ್ನು ಪ್ರಶ್ನಿಸಿದ್ದಾರೆ. ಡಾ|| ಶ್ಯಾಮಾ ಪ್ರಸಾದ್ ಮುಖರ್ಜೀ ಯವರ ಜಮ್ಮು ಕಾಶ್ಮೀರದಲ್ಲಿನ ಹೋರಾಟವನ್ನು, ಬಲಿದಾನವನ್ನು (ನಿಗೂಢ ಸಾವು ಎಂದರೆ ತಪ್ಪಾಗಲಾರದು) ನೆನಪಿಸಿಕೊಂಡಿದ್ದಾರೆ. ಭಾರತ ಸಂವಿಧಾನದ ವಿಧಿ 370 (Article 370) ಯನ್ನು ಚರ್ಚಿಸಬೇಕೆಂದು ಕೇಳಿಕೊಂಡಿದ್ದಾರೆ. ಸಹಜವಾಗಿಯೇ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಬೆಂಬಲಿಸುವ ಕೆಲ ಮಾಧ್ಯಮ ವರ್ಗದವರು ಮೋದಿಯ ಭಾಷಣವನ್ನು ಆಕ್ಷೇಪಿಸಿದ್ದಾರೆ.ಕಾರಣ ಮಾಜಿ ಪ್ರಧಾನಿ ನೆಹರೂರಿಗೆ ಅವಮಾನವಾಯ್ತೆಂದೋ, ಅಥವಾ ನೆಹರೂರವರು ಕಾಶ್ಮೀರದಲ್ಲಿ ಗೊಂದಲ ಸೃಷ್ಟಿಸಿದ್ದನ್ನು ಒಪ್ಪಿಕೊಳ್ಳಲಾಗದೆಂದೋ ಗೊತ್ತಿಲ್ಲ. ಹಿಂದೊಮ್ಮೆ ಸರ್ದಾರ್ ವಲ್ಲಭ ಭಾಯಿ ಪಟೇಲ್, ನೆಹರೂರ ತುಲನೆ ಮಾಡಿದ್ದ ಮೋದಿಯನ್ನು ಆಕ್ಷೇಪಿಸಿದ್ದು ಸ್ಮರಿಸಬಹುದು. ನೆಹರೂ ರವರು ಅಪ್ರತಿಮ ದೇಶಭಕ್ತ, ದ್ರಷ್ಟಾರ; ಅವರ ಬಗ್ಗೆ ಲಘುವಾಗಿ ಮಾತನಾಡಿದ್ದು  ಮೋದಿಯವರ ತಪ್ಪು ಎಂದು ಅವರು ಸಮರ್ಥಿಸಿಕೊಂಡರೆ ಅದಕ್ಕಿಂತ ದೊಡ್ಡ ಹಾಸ್ಯ ಮತ್ತೊಂದಿರಲಿಕ್ಕಿಲ್ಲ.

ಮೊದಲನೆಯದಾಗಿ ನೆಹರೂ ಭಾರತದ ಜೊತೆಗಿನ ಕಾಶ್ಮೀರದ ವಿಲೀನವನ್ನು ಗೊಂದಲಕ್ಕೆ ಮಾರ್ಪಾಟು ಮಾಡಿದ್ದರು ಎಂಬುದಕ್ಕೆ ಸಾಕಷ್ಟು ಪುರಾವೆಗಳು ಈಗಾಗಲೇ ಹಲವಾರು ಲೇಖಕರು, ಚಿಂತಕರು ತೋರಿಸಿಕೊಟ್ಟಿದ್ದಾರೆ. ಇನ್ನು ನೆಹರೂ ದೇಶಭಕ್ತರು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ದೇಶಕ್ಕೆ ಬ್ರಿಟಿಷರಿಂದ ಬಿಡುಗಡೆ ತಂದುಕೊಟ್ಟವರಲ್ಲಿ ಅಗ್ರಗಣ್ಯರು – ಹಾಗಾಗಿ ನೆಹರೂ ರವರನ್ನು ದೂಷಿಸಬಾರದು ಎಂದಾದರೆ – ಅದೂ ಒಪ್ಪಿಕೊಳ್ಳುವ ಮಾತಲ್ಲವೇ ಅಲ್ಲ. ಒಬ್ಬರ ನಿಲುವನ್ನು ಪ್ರಶ್ನಿಸುವ, ತೆಗೆದುಕೊಂಡ ನಿಷ್ಕರ್ಷೆಯಿಂದ ದೇಶಕ್ಕೇ ಮಾರಕವಾದಾಗಲೂ ನಿಲುವನ್ನು ಪ್ರಷ್ನಿಸಬಾರದು ಎನ್ನುವುದು ಮೂರ್ಖತನದ ಪರಮಾವಧಿ. ಈ ದೇಶದ ಸಾಮಾನ್ಯ ಪ್ರಜೆಗೂ ಆ ಹಕ್ಕು ಇದ್ದೇ ಇರುತ್ತದೆ. ಅದೇ ರೀತಿಯಲ್ಲಿ, ಕೆಲ ವರ್ಷಗಳ ನಂತರ ಮೋದಿಯವರು ತೆಗೆದುಕೊಂಡ ಯವುದೋ ನಿಲುವು ತಪ್ಪೆಂದು ಜನರು ಮೋದಿಯವರ ನಿರ್ಧಾರವನ್ನು ಟೀಕಿಸಬಹುದಲ್ಲವೇ?

ಮತ್ತಷ್ಟು ಓದು »

10
ಜನ

ಸಂಸ್ಕಾರ ಮತ್ತು ದಾಟು ಕಾದಂಬರಿಗಳಲ್ಲಿ ಜಾತಿ ಸಮಸ್ಯೆಗಳು

– ಮು ಅ ಶ್ರೀರಂಗ ಬೆಂಗಳೂರು

ದಾಟು - ಭೈರಪ್ಪಈ ಲೇಖನವನ್ನು ನಾನು ಭೈರಪ್ಪನವರ ಕಾದಂಬರಿಗಳನ್ನು ಕುರಿತ ವಿಮರ್ಶೆಗಳ ಲೇಖನಮಾಲೆ ಮುಗಿದ ನಂತರ ಬರೆಯೋಣವೆಂದುಕೊಂಡಿದ್ದೆ. ಆದರೆ ಆ ಲೇಖನಗಳ ಸರಣಿಯಲ್ಲಿ ಇನ್ನು ಚರ್ಚಿಸಬೇಕಾದ ಕಾದಂಬರಿಗಳು “ಆವರಣ” ಮತ್ತು “ಕವಲು” ಮಾತ್ರ. ಇವುಗಳಲ್ಲಿ ಜಾತಿಯ ಸಮಸ್ಯೆಗಳ ಪ್ರಸ್ತಾಪವಿಲ್ಲದಿರುವುದರಿಂದ ಈಗಲೇ ಬರೆಯುವುದು ಸೂಕ್ತವೆನಿಸಿದೆ.

ಸಂಸ್ಕಾರ ಮತ್ತು ದಾಟು ಕಾದಂಬರಿಗಳನ್ನು ಕುರಿತಂತೆ ನಡೆದ ಚರ್ಚೆಗಳು ಪ್ರಾರಂಭದಲ್ಲಿ ವಿಚಾರಗಳ ವಿನಿಮಯದಂತೆ ಕಂಡರೂ ನಂತರದಲ್ಲಿ ಕವಲು ದಾರಿ ಹಿಡಿದವು. ಇದಕ್ಕೆ ನನಗನಿಸುವಂತೆ ಬಹುಶಃ ಜಾತಿ ಸಮಸ್ಯೆಯನ್ನು ಸಾಹಿತ್ಯವು ಅರಿಯಲು ನಡೆಸುವ ಪ್ರಯತ್ನಕ್ಕೂ ಅದೇ ಸಮಸ್ಯೆಯನ್ನು ಆಧಾರ,ಸಿದ್ಧಾಂತ,ಊಹೆ,ತರ್ಕ ಇತ್ಯಾದಿಗಳ ಮೂಲಕ ಬಿಡಿಸಲು ಪ್ರಯತ್ನಿಸುವ ಮಾನವಿಕ ಶಾಸ್ತ್ರಗಳಿಗೂ ಇರುವ ಮೂಲಭೂತ ವ್ಯತ್ಯಾಸವನ್ನು ಮನಗಾಣಿಸುವುದರಲ್ಲಿ ಆ ಚರ್ಚೆಗಳು ನಡೆಯದೇ ಹೋದದ್ದು. ಇದುವರೆಗೆ ಮಾನವಿಕ ಶಾಸ್ತ್ರಗಳು ತಮ್ಮ ಅಧ್ಯಯನದ ಮೂಲಕ ಕಂಡುಕೊಂಡಿರುವ ನಮ್ಮ ಸಮಾಜದ ಬಗೆಗಿನ ತಿಳುವಳಿಕೆಗಳನ್ನು ಆಧರಿಸಿ ಆ ಚೌಕಟ್ಟಿಗೆ ಈ ಸಾಹಿತ್ಯ ಕೃತಿಗಳು ಹೊಂದುವುದಿಲ್ಲ ಎಂದು ಒಂದೇ ಏಟಿಗೆ ಪಕ್ಕಕ್ಕೆ ಸರಿಸುವುದನ್ನು ಸಾಹಿತ್ಯದ ಒಬ್ಬ ಓದುಗನಾಗಿ ನಾನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.

ಮತ್ತಷ್ಟು ಓದು »

9
ಜನ

ಮೈಸೂರು ಹುಲಿಯ ವಿರುದ್ಧ ಸೆಟೆದು ನಿಂತ ಸಹ್ಯಾದ್ರಿಯ ಹುಲಿ

 – ಕ.ವೆಂ.ನಾಗರಾಜ್

Dhondiya Waghಟಿಪ್ಪು ಸುಲ್ತಾನನ ಪರವಾಗಿ ಮತ್ತು ವಿರುದ್ಧವಾಗಿ ಬರುತ್ತಿರುವ ಲೇಖನಗಳು ಮತ್ತು ಹೇಳಿಕೆಗಳನ್ನು ಗಮನಿಸಿದಾಗ ಹೆಚ್ಚಿನವು ಉತ್ಪ್ರೇಕ್ಷೆಯಿಂದ ಕೂಡಿದುದೆಂದು ಮೇಲ್ನೋಟಕ್ಕೆ ಕಾಣುತ್ತವೆ. ಇದರಲ್ಲಿ ಜಾತಿ, ಧರ್ಮಗಳೂ ಥಳಕು ಹಾಕಿಕೊಂಡು ವಿಷಯವನ್ನು ಜಟಿಲಗೊಳಿಸುತ್ತವೆ. ಟಿಪ್ಪು ಪರಮತ ಸಹಿಷ್ಣುವೋ ಅಲ್ಲವೋ, ಕ್ರೂರಿಯೋ ಅಲ್ಲವೋ ಎಂಬ ಬಗ್ಗೆ ಪ್ರಖರವಾದ ವಾದ, ಪ್ರತಿವಾದಗಳನ್ನು ಕಂಡಿದ್ದೇವೆ. ಟಿಪ್ಪು ಹೆಸರಿನಲ್ಲಿ ಮುಸ್ಲಿಮ್ ವಿಶ್ವವಿದ್ಯಾಲಯದ ಸ್ಥಾಪನೆಗೆ ನಡೆಯುತ್ತಿರುವ ಪ್ರಯತ್ನ ಇಂತಹ ಚರ್ಚೆಗಳಿಗೆ ಮತ್ತಷ್ಟು ಒತ್ತು ಕೊಟ್ಟಿದೆ. ಇತಿಹಾಸವನ್ನು ಇತಿಹಾಸವಾಗಿಯೇ ಆಧ್ಯಯನ ಮಾಡಬೇಕು, ಅದಕ್ಕೆ ಜಾತ್ಯಾತೀತತೆಯ ಲೇಪ ಕೊಡುವ ಸಲುವಾಗಿ ವಾಸ್ತವತೆಯನ್ನು ಮರೆಮಾಚುವ ಕೆಲಸ ಇತಿಹಾಸಕ್ಕೆ ಮಾಡುವ ಅಪಚಾರವಾಗುತ್ತದೆ ಎಂಬುದನ್ನು ಎಷ್ಟು ಬೇಗ ಮನಗಾಣುತ್ತೇವೋ ಅಷ್ಟೂ ದೇಶಕ್ಕೆ ಒಳ್ಳೆಯದು. ಈಗಾಗಲೇ ಬಹಳಷ್ಟು ಚರ್ಚಿತವಾಗಿರುವ ವಿಷಯಗಳನ್ನು ಪುನಃ ಇಲ್ಲಿ ಪ್ರಸ್ತಾಪಿಸಹೋಗದೆ ಟಿಪ್ಪುವಿನ ಕಾಲದಲ್ಲಿ ಬಂದಿಗಳಾಗಿದ್ದವರ ಸ್ಥಿತಿಯ ಬಗ್ಗೆ ಸೂಕ್ಷ್ಮವಾಗಿ ಪ್ರಸ್ತಾಪಿಸಿ, ಟಿಪ್ಪುವಿನ ವಿರುದ್ಧ ಸೆಟೆದು ನಿಂತಿದ್ದ ಒಬ್ಬ ಧೀರ ಕನ್ನಡಿಗನ ಬಗ್ಗೆ ನನಗೆ ತಿಳಿದಿರುವ ಸಂಗತಿಗಳನ್ನು ಹಂಚಿಕೊಳ್ಳುತ್ತೇನೆ.

ಮೂಲ ವಿಷಯಕ್ಕೆ ಬರುವ ಮುನ್ನ ಮೊದಲೇ ಹೇಳಿದ್ದಂತೆ ಹೈದರ್ ಮತ್ತು ಟಿಪ್ಪೂರ ಕಾಲದಲ್ಲಿ ಬಂದಿಗಳ ಸ್ಥಿತಿಯನ್ನು ತಿಳಿಸುವ ಸಲುವಾಗಿ ಜೇಮ್ಸ್ ಸ್ಕರಿ ಎಂಬ ಬ್ರಿಟಿಷ್ ಕೈದಿಯೊಬ್ಬನ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯೋಣ. ಜೇಮ್ಸ್ ಸ್ಕರಿಯ ತಂದೆ ಒಬ್ಬ ಬ್ರಿಟಿಷ್ ಸೈನಿಕನಾಗಿದ್ದು, ಸ್ಕರಿ ಚಿಕ್ಕಂದಿನಲ್ಲೇ ಗನ್ ಪೌಡರ್ ಸಾಗಾಟದ ಕೆಲಸ ಮಾಡುತ್ತಿದ್ದು ಅದಕ್ಕಾಗಿ ಸಮುದ್ರಯಾನ ಮಾಡಬೇಕಾಗುತ್ತಿತ್ತು. ಹೀಗೆ ಪ್ರಯಾಣ ಮಾಡುತ್ತಿದ್ದ ಸಮಯದಲ್ಲಿ ತನ್ನ ೧೪ನೆಯ ವಯಸ್ಸಿನಲ್ಲೇ ಸೈಂಟ್ ಹೆಲೆನಾ ಎಂಬ ದ್ವೀಪದಲ್ಲಿ ಫ್ರೆಂಚರಿಂದ ಹಡಗಿನಲ್ಲಿದ್ದ ಇತರ ೧೪ ಸಿಬ್ಬಂದಿಗಳೊಂದಿಗೆ ಕ್ರಿ.ಶ. ೧೭೮೦ರಲ್ಲಿ ಬಂಧಿಸಲ್ಪಟ್ಟ. ಈ ೧೫ ಜನರನ್ನು ಫ್ರೆಂಚ್ ಅಡ್ಮಿರಲ್ ಸಫ್ರೆನ್ ಹೈದರಾಲಿಯ ವಶಕ್ಕೆ ಒಪ್ಪಿಸಿದ. ಇವರುಗಳನ್ನು ಮೊದಲು ಬೆಂಗಳೂರಿನ ಜೈಲಿಗೆ, ನಂತರ ಶ್ರೀರಂಗಪಟ್ಟಣದ ಸೆರೆಮನೆಗೆ ಸಾಗಿಸಲಾಯಿತು. ಸೆರೆಯಾದ ಕೂಡಲೇ ಕಾಲುಗಳಿಗೆ ಬಲವಾದ ಕಬ್ಬಿಣದ ಸರಪಳಿಗಳನ್ನು ಹಾಕಿ, ಕೈಗಳಿಗೂ ಕಬ್ಬಿಣದ ಕೋಳಗಳನ್ನು ಹಾಕಿ ಸೆರೆಮನೆ ತಲುಪುವವರಗೆ ಹಲವಾರು ದಿನಗಳ ಕಾಲ ನಡೆಸಿಕೊಂಡೇ ಹೋಗಲಾಗಿತ್ತು. ಟಿಪ್ಪು ಇವರೆಲ್ಲರನ್ನೂ ಬಲವಂತವಾಗಿ ಇಸ್ಲಾಮ್ ಮತಕ್ಕೆ ಮತಾಂತರಿಸಿ, ಜೇಮ್ಸ್ ಸ್ಕರಿಗೆ ಮುಸ್ಲಿಮ್ ಹೆಸರಾದ ಶಂಶೇರ್ ಖಾನ್ ಎಂದು ಹೊಸ ಹೆಸರು ಕೊಟ್ಟು ಬಲವಂತವಾಗಿ ತನ್ನ ಸೇನೆಯಲ್ಲಿ ಕೆಲಸ ಮಾಡಿಸಿದ್ದ.

ಮತ್ತಷ್ಟು ಓದು »

8
ಜನ

ತುಳುವಿಗೆ ೮ನೇ ಪರಿಚ್ಛೇದದ ಮಾನ್ಯತೆ ತುಳುವರ “ಹಕ್ಕು” ಯಾರ ಭಿಕ್ಷೆಯಲ್ಲ…!

– ರಾಕೇಶ್ ಶೆಟ್ಟಿ

Tulu - 8th Scheduleಬೆಂಗಳೂರಿನ ಸಮಸ್ತ ತುಳು ಸಂಘಟನೆಗಳೂ ಒಗ್ಗೂಡಿ,ತುಳುವನ್ನು ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರಿಸುವಂತೆ ಮತ್ತು ಇತರೆ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದ ವರ್ಷದ ಸೆಪ್ಟಂಬರ್ ೨೮ ರ ಶನಿವಾರ ಕಳೆದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಒಂದು ದಿನದ ’ಹಕ್ಕೊತ್ತಾಯ – ಪ್ರತಿಭಟನೆ’ಯನ್ನು ಮಾಡಿದ್ದವು.ಅಂದಿನ ಪ್ರತಿಭಟನೆಯ ನೇತೃತ್ವ ವಹಿಸಿದವರು ಹಿರಿಯ ಸಾಹಿತಿ ಡಾ|| ಡಿ.ಕೆ ಚೌಟ ಅವರು. ಚೌಟ ಅವರ ಭಾಷಣದಲ್ಲಿ ಇಷ್ಟು ವರ್ಷಗಳ ಕಾಯುವಿಕೆಯನ್ನು ಕಡೆಗಣಿಸಿದ ರಾಜಕಾರಣಿಗಳು,ವ್ಯವಸ್ಥೆಗಳ ಮೇಲೆ ಸಾತ್ವಿಕ ಕೋಪ ಎದ್ದು ಕಾಣುತಿತ್ತು.ಹಾಗೆಯೇ ತುಳುವಿಗೆ ಇರುವ ಅಪಾಯ, ನಮ್ಮ ಭೂಮಿ ಮಲಯಾಳಿಗಳ ಪಾಲಾಗುತ್ತಿರುವ ಬಗೆಗಿನ ಆತಂಕವಿತ್ತು.ಆ ದಿನ ಬಹಳಷ್ಟು ಜನ ಮಾತನಾಡಿದರು.ಆದರೆ ನಿಜವಾಗಿಯೂ ತುಳುವರ ಅಸ್ಮಿತೆಯನ್ನು ಬಡಿದ್ದೆಬ್ಬಿಸುವಂತ ಮಾತನಾಡಿದ್ದು ಚೌಟ ಅವರೊಬ್ಬರೇ.ಅವರ ಮಾತು ಮತ್ತದಕ್ಕೆ ವ್ಯಕ್ತವಾದ ಸ್ಪಂದನೆ ಕಂಡಾಗ ಏನಾದರೂ ಒಳ್ಳೆಯ ಬೆಳವಣಿಗೆಗಳು ಆಗಬಹುದು ಅಂದುಕೊಳ್ಳುತಿದ್ದೆ.ಅಷ್ಟರಲ್ಲೇ, ರಾಜಕಾರಣಿಗಳ ಆಗಮನವಾಯಿತು…!

ಒಬ್ಬರು ಚಿಕ್ಕಮಗಳೂರಿನ ಸಂಸದ ಜಯಪ್ರಕಾಶ್ ಹೆಗ್ಡೆ,ಮತ್ತೊಬ್ಬರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಅನಂತ ಕುಮಾರ್.ಇಂತ ಪ್ರತಿಭಟನಾ ಸಭೆಗಳಿಗೆ ರಾಜಕಾರಣಿಗಳನ್ನೇಕೆ ಕರೆಯುತ್ತಾರೆ ಅನ್ನುವುದು ನನಗೆ ಅರ್ಥವಾಗಲಿಲ್ಲ!

ಅದಕ್ಕೇ ಸರಿಯಾಗಿಯೇ ಈ ಇಬ್ಬರ ಮಾತುಗಳು ಸಾಗಿತ್ತು.ಪ್ರತಿಭಟನೆಗೆಂದು ಬಂದವರನ್ನು ತಮ್ಮ ಆಶ್ವಾಸನೆಗಳ ಮೂಲಕ,ಹಾಸ್ಯ ಚಟಾಕಿಗಳ ಮೂಲಕ ಸಮಾಧಾನಪಡಿಸುವ ಎಂದಿನ ರಾಜಕಾರಣಿಗಳ ಓಲೈಕೆಯ ಶೈಲಿಯ ಭಾಷಣ.೮ನೇ ಪರಿಚ್ಚೇದ ಬಿಟ್ಟು ಕೋರಿರೊಟ್ಟಿ,ನೀರ್ ದೋಸೆ ಇತ್ಯಾದಿ ಇತ್ಯಾದಿ.ಅನಂತ ಕುಮಾರ್ ಅವರು ನವೆಂಬರ್ ತಿಂಗಳಲ್ಲಿ ನೀವು ಒಂದು ತುಳು ನಿಯೋಗವನ್ನು ಕರೆದುಕೊಂಡು ದೆಹಲಿಗೆ ಬನ್ನಿ ಆ ಸಮಯಕ್ಕೆ ಶುರುವಾಗುವ ಸಂಸತ್ತಿನ ಅಧಿವೇಶನದಲ್ಲಿ  ತುಳುವನ್ನು ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ಮಾತನಾಡುವ ಅಂತ ಹೇಳಿ ಎಲ್ಲರ ಚಪ್ಪಾಳೆಯನ್ನು ಗಿಟ್ಟಿಸಿದ್ದರು.ಅನಂತ ಕುಮಾರ್ ಅವರ ಮಾತನ್ನು ಹೆಗ್ಡೆಯವರು ಅನುಮೋದಿಸಿದ್ದರು.ವೇದಿಕೆಯಲ್ಲಿದ್ದವರೂ ಅದಕ್ಕೇ ಸಮ್ಮತಿಸುವುದರೊಂದಿಗೆ ಪ್ರತಿಭಟನಾ ಸಭೆ ’ಶಾಂತ’ವಾಯಿತು.

ಮತ್ತಷ್ಟು ಓದು »

7
ಜನ

ಆರ್ವೇಲ್ ನ ಕಾದ೦ಬರಿ ’ಎನಿಮಲ್ ಫಾರ್ಮ್’ನೊಳಗೊ೦ದು ಪ್ರಸ್ತುತ ಭಾರತವನ್ನು ಕಾಣುತ್ತ…

– ಗುರುರಾಜ್ ಕೊಡ್ಕಣಿ

Animal Farmಅದು ಇ೦ಗ್ಲೆ೦ಡಿನ ಒ೦ದು ತೋಟ.ಒ೦ದು ದಿನ ಅಲ್ಲಿನ ಹಿರಿಯ ಹ೦ದಿಯೊ೦ದು ತೋಟದಲ್ಲಿನ ಎಲ್ಲಾ ಪ್ರಾಣಿಗಳನ್ನು ಸೇರಿಸಿ ಗುಪ್ತ ಸಭೆಯೊ೦ದನ್ನು ಆಯೋಜಿಸುತ್ತದೆ.ಪ್ರಾಣಿಗಳ ಮೇಲೆ ಮನುಷ್ಯನ ದೌರ್ಜನ್ಯ, ದಬ್ಬಾಳಿಕೆಗಳನ್ನು ಪರಿಪರಿಯಾಗಿ ವರ್ಣಿಸುತ್ತಾ,ತಮ್ಮ ಮೇಲಿನ ದೌರ್ಜನ್ಯಗಳು ಕೊನೆಗಾಣಬೇಕಾದರೇ ಸ್ವಾತ೦ತ್ರ್ಯವೊ೦ದೇ ದಾರಿ ಎ೦ದು ಸಾರುತ್ತಾ,’ಇ೦ಗ್ಲೆ೦ಡಿನ ಪಶುಗಳು’ ಎ೦ಬ ಕ್ರಾ೦ತಿಗೀತೆಯೊ೦ದನ್ನು ಹಾಡಿ ಪ್ರಾಣಿಗಳನ್ನು ಕ್ರಾ೦ತಿಯತ್ತ ಉತ್ತೇಜಿಸುತ್ತದೆ.ಉತ್ತೇಜಿತ ಪ್ರಾಣಿಗಳು ಒ೦ದು ಅನೀರಿಕ್ಷಿತ ಸ೦ದರ್ಭದಲ್ಲಿ ತೋಟದ ಮಾಲೀಕನ ಮೇಲೆ ತಿರುಗಿ ಬೀಳುವ ಮೂಲಕ,ಅವನನ್ನು ತೋಟದಿ೦ದ ಓಡಿಸಿ ಸ್ವಾತ೦ತ್ರ್ಯವನ್ನು ಪಡೆದುಕೊ೦ಡು ಬಿಡುತ್ತವೆ.ತೋಟದ ಹೆಸರನ್ನು ’ಪ್ರಾಣಿಗಳ ತೋಟ’ ಎ೦ದು ಬದಲಾಯಿಸುವ ಪ್ರಾಣಿಗಳ ನಾಯಕತ್ವವನ್ನು ’ಸ್ನೋಬಾಲ್’ ಮತ್ತು ’ನೆಪೋಲಿಯನ್’ ಎ೦ಬ ಎರಡು ಬುದ್ದಿವ೦ತ ಹ೦ದಿಗಳು ವಹಿಸಿಕೊಳ್ಳುತ್ತವೆ.ಸ್ನೋಬಾಲ್ ಪ್ರಾಣಿಗಳಿಗೆ ಓದು ಬರಹ ಹೇಳಿಕೊಡುವ ಜವಾಬ್ದಾರಿ ವಹಿಸಿಕೊ೦ಡರೇ,ನೆಪೋಲಿಯನ್ ಪಶುತ್ವದ ಮೂಲತತ್ವಗಳನ್ನು ಪ್ರಾಣಿಗಳಿಗೆ ಹೇಳಿಕೊಡಲಾರ೦ಭಿಸುತ್ತದೆ. ’ಎಲ್ಲ ಪ್ರಾಣಿಗಳೂ ಸಮಾನ’ ಎನ್ನುವ ಧ್ಯೇಯವಾಕ್ಯದಡಿ ಈ ಪ್ರಾಣಿ ಸಾಮ್ರಾಜ್ಯ ನಡೆಯುತ್ತಿರುತ್ತದೆ

ಮೊದಮೊದಲು ಎಲ್ಲವೂ ಸರಿಯಿರುತ್ತದಾದರೂ ಕೆಲಕಾಲದ ನ೦ತರ ಪ್ರಾಣಿಗಳ ನಾಯಕತ್ವದ ಗುರುತರ ಜವಾಬ್ದಾರಿ ತಮ್ಮ ಮೇಲಿರುವುದರಿ೦ದ ತಮ್ಮ ಆರೋಗ್ಯಕ್ಕೆ ಮುಖ್ಯವೆ೦ಬ ಕಾರಣಕ್ಕೆ ತೋಟದಲ್ಲಿ ಉತ್ಪತ್ತಿಯಾಗುವ ಹಾಲು ಮತ್ತೀತರ ಪೌಷ್ಠಿಕ ಆಹಾರಗಳನ್ನು ಪ್ರಾಣಿಗಳ ಮುಖ್ಯಸ್ಥರಾದ ಹ೦ದಿಗಳು ತಮಗಾಗಿ ಮಾತ್ರ ಮೀಸಲಿಡಲು ತೀರ್ಮಾನಿಸುತ್ತವೆ.ನಾಯಕರುಗಳಾದ ನೆಪೋಲಿಯನ್ ಮತ್ತು ಸ್ನೋಬಾಲ್ ನಡುವೆ ಭಿನ್ನಾಬಿಪ್ರಾಯದ ಕ೦ದಕವೇರ್ಪಡುತ್ತದೆ.ಪ್ರಾಣಿಗಳ ಏಳಿಗೆಗಾಗಿ ಗಾಳಿಗೋಪುರವೊ೦ದನ್ನು ನಿರ್ಮಿಸಬೇಕೆ೦ಬ ತನ್ನ ಯೋಜನೆಯನ್ನು ಸ್ನೋಬಾಲ್ ವಿವರಿಸಿದಾಗ,ನೆಪೋಲಿಯನ್ ಸ್ನೋಬಾಲ್ ನನ್ನು ತಾನು ಸಾಕಿದ ಗುಪ್ತ ನಾಯಿಗಳ ಸಹಾಯದಿ೦ದ ಬೆದರಿಸಿ, ತೋಟದಿ೦ದ ಓಡಿಸಿ ತೋಟಕ್ಕೆ ತಾನು ಏಕೈಕ ನಾಯಕನಾಗುತ್ತದೆ.

ಮತ್ತಷ್ಟು ಓದು »

6
ಜನ

ಬೆನ್ನಿ ಹಿನ್ ಕಂಡರೆ ಪ್ರಗತಿಪರರಿಗೇಕೆ ಅಷ್ಟೊಂದು ಭಯ!?

– ನರೇಂದ್ರ ಕುಮಾರ್ ಎಸ್.ಎಸ್

ಬೆನ್ನಿ ಹಿನ್ಬೆನ್ನಿ ಹಿನ್ ಮತ್ತೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. 2005ರಲ್ಲಿ ಬೆನ್ನಿ ಹಿನ್ ಬೆಂಗಳೂರಿಗೆ ಆಗಮಿಸಿದ್ದಾಗ ಬಹಳ ವಿರೋಧ ವ್ಯಕ್ತವಾಗಿತ್ತು. ಆದರೆ, ರಾಜ್ಯ ಸರಕಾರದ ಸಹಕಾರದಿಂದಾಗಿ, ಆತನ “ಕಣ್ ಕಟ್ ಪ್ರದರ್ಶನ ಮತ್ತು ಮತಾಂತರ” ನಿರಾತಂಕವಾಗಿ ನಡೆಯಿತು. ಆ ನಂತರ ಆನೇಕ ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರದಿಂದ ಹೊರಗುಳಿಯಬೇಕಾಯಿತು (ಆತನ ಕಣ್ ಕಟ್ನ ಪ್ರಭಾವವೂ ಇರಬಹುದೇ?). ಇದೀಗ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಮತ್ತು ಕೂಡಲೇ “ಬೆನ್ನಿ ಹಿನ್ ಅವರ ಕಣ್ ಕಟ್ ಕಾರ್ಯಕ್ರಮ” ಆಯೋಜಿತವಾಗಿದೆ! ಇದು ಕೇವಲ ಕಾಕತಾಳೀಯವಿರಲಾರದು ಅಲ್ಲವೇ!?

ಬೆನ್ನಿ ಹಿನ್ ಇಸ್ರೇಲಿನ ಜೆರೂಸೆಲಂನಲ್ಲಿ ಜನಿಸಿ, ಮುಂದೆ ಅಮೆರಿಕದ ಪ್ರಜೆಯಾದರು. ಅವರೊಬ್ಬ ಕ್ರೈಸ್ತ ಮತ ಪ್ರಚಾರಕ. ಅವರು ಹೋದಲ್ಲೆಲ್ಲಾ ಪ್ರಾರ್ಥನಾ ಸಭೆಗಳನ್ನು ನಡೆಸುತ್ತಾರೆ. ತನ್ನ ಸಭೆಗಳಲ್ಲಿ ಹಾಜರಿದ್ದು, ತನ್ನೊಡನೆ ಪ್ರಾರ್ಥನೆ ಮಾಡಿದವರಿಗೆ ಮತ್ತು ತನ್ನನ್ನು ಸ್ಪರ್ಶಿಸಿದವರಿಗೆ ಯಾವುದೇ ರೋಗವಿದ್ದರೂ ಗುಣವಾಗುತ್ತದೆ, ಎಂದು ಅವರು ಹೇಳಿಕೊಳ್ಳುತ್ತಾರೆ. “ಕ್ಯಾನ್ಸರ್/ ಏಡ್ಸ್ ನಂತಹ ಕಾಯಿಲೆಗಳನ್ನೂ ಕೇವಲ ಸ್ಪರ್ಶದ ಮೂಲಕವೇ ವಾಸಿ ಮಾಡುತ್ತೇನೆ” ಎಂದು ಹೇಳಿ ಜನರನ್ನು ಯಾಮಾರಿಸಲು ಪ್ರಯತ್ನಿಸುತ್ತಾರೆ! 3 ರಿಂದ 5 ದಿನಗಳ ಕಾಲ ನಡೆಯುವ ಇವರ ಕಾರ್ಯಕ್ರಮಗಳಲ್ಲಿ, ಕೊನೆಯ ದಿನಗಳು ಹತ್ತಿರ ಬಂದಂತೆ, ವೇದಿಕೆಯ ಮೇಲೆ ನಡೆಯುವ ನಾಟಕವೂ ಹೆಚ್ಚುತ್ತದೆ. ಇದ್ದಕ್ಕಿದ್ದಂತೆ ಮೈಮೇಲೆ ಏನೋ ಬಂದಂತೆ, ಕಣ್ಣೀರು ಸುರಿಸುತ್ತಾ ಕೆಲವರು ನುಗ್ಗುತ್ತಾರೆ. ತಮಗೆ ಯಾವುದೇ ಔಷಧದಿಂದಲೂ ಗುಣವಾಗದ ಖಾಯಿಲೆಯಿತ್ತು ಮತ್ತು ಇಲ್ಲಿ ಪ್ರಾರ್ಥಿಸಿದ ನಂತರ ಖಾಯಿಲೆ ವಾಸಿಯಾಗಿಬಿಟ್ಟಿತು; ಬೆನ್ನಿ ಹಿನ್ ಅವರೇ ಪ್ರತ್ಯಕ್ಷ ದೇವರು; ಎಂದೆಲ್ಲಾ ಕುಣಿದಾಡುತ್ತಾರೆ. ಇದೆಲ್ಲಾ ಪೂರ್ವನಿಯೋಜಿತ ನಾಟಕ ಎಂಬುದು ಹಲವು ಬಾರಿ ನಿರೂಪಿತವಾಗಿದ್ದರೂ, ಮುಂದಿನ ಬಾರಿಯೂ ಇದೇ ರೀತಿಯ ನಾಟಕ ಇದ್ದೇ ಇರುತ್ತದೆ. ಈ ರೀತಿಯ ನಾಟಕ ನಡೆಯದಿದ್ದರೆ, ಇವರ ಸಭೆಗೆ ಜನರೇ ಬರುವುದಿಲ್ಲವಲ್ಲ; ಹೀಗಾಗಿ ನಾಟಕ ನಿಲ್ಲಿಸುವಂತಿಲ್ಲ!

ಮತ್ತಷ್ಟು ಓದು »

5
ಜನ

ಮೋಕ್ಷದ ಹುಡುಕಾಟದಲ್ಲಿ ಕಳೆದುಹೋದ “ಸಿದ್ಧಾರ್ಥ”

– ಡಾ ಅಶೋಕ್ ಕೆ ಆರ್

Siddharthaಜರ್ಮನ್ ಲೇಖಕ ಹರ್ಮನ್ ಹೆಸ್ಸೆ (Hermann Hesse) 1922ರಲ್ಲಿ ಬರೆದ ಕಾದಂಬರಿ ‘ಸಿದ್ಧಾರ್ಥ’. ಹಲವು ವರುಷಗಳು ಕಳೆದ ನಂತರ ಪುಸ್ತಕವೊಂದರ ಕಾಪಿರೈಟ್ ಮುಗಿದುಹೋಗುತ್ತದೆ. ಅಂಥಹ ಪುಸ್ತಕಗಳನ್ನು ‘ಗುಟೆನ್ ಬರ್ಗ್’ ಎಂಬ ಅಂತರ್ಜಾಲ ತಾಣ ಮೊಬೈಲ್, ಟ್ಯಾಬ್ಲೆಟ್, ಕಂಪ್ಯೂಟರುಗಳಲ್ಲಿ ಓದಲನುಕೂಲವಾಗುವಂತೆ ಮಾಡುತ್ತಿದೆ. ‘ಗುಟೆನ್ ಬರ್ಗಿನ’ ಗೃಂಥಾಲಯದಲ್ಲಿ ಸಾವಿರಾರು ಪುಸ್ತಕಗಳು ಲಭ್ಯವಿದೆ. ‘ಸಿದ್ಧಾರ್ಥ’ ಎಂಬ ಶೀರ್ಷಿಕೆ ನೋಡಿ ‘ಬುದ್ಧ’ನ ಬಗೆಗೆ ಪಾಶ್ಚಿಮಾತ್ಯ ಚಿಂತನೆಯ ಪುಸ್ತಕವಿರಬೇಕು, ಪಶ್ಚಿಮದವರಿಗೆ ಕಂಡ ಬುದ್ಧನ ರೂಪ ಯಾವುದಿರಬೇಕೆಂಬ ಕುತೂಹಲದಿಂದ ಪುಸ್ತಕವನ್ನು ಓದಲಾರಂಭಿಸಿದೆ.

ಇಲ್ಲಿ ಬುದ್ಧನಿದ್ದಾನೆ; ಆದರವನು ‘ಸಿದ್ಧಾರ್ಥ’ನಲ್ಲ ‘ಗೌತಮ’. ಬುದ್ಧನನ್ನೇ ಧಿಕ್ಕರಿಸಿ ನಡೆಯುವ ಸಿದ್ಧಾರ್ಥನಿದ್ದಾನೆ. ಕಾದಂಬರಿಯ ನಾಯಕ ‘ಸಿದ್ಧಾರ್ಥ’ ಬ್ರಾಹ್ಮಣನೊಬ್ಬನ ಮಗ. ‘ಅರಿವು’ ಪಡೆದು ಮುಕ್ತಿ ಪಡೆಯಲೋಸಗ ಮನೆ ತೊರೆದು ಜ್ಞಾನಿಗಳೆಂದು ಹೆಸರಾದ ಸಮಾನರೊಡನೆ ಹೋಗುವ ಸಂಕಲ್ಪ ಮಾಡುತ್ತಾನೆ. ಸಿದ್ಧಾರ್ಥನ ತಂದೆ ಒಪ್ಪುವುದಿಲ್ಲ. ಸಿದ್ಧಾರ್ಥ ಹಟ ಬಿಡುವುದಿಲ್ಲ, ಅನುಮತಿ ಕೊಡುವವರೆಗೂ ನಿಂತ ಸ್ಥಳದಿಂದ ಅಲುಗಾಡುವುದಿಲ್ಲ. ಮಗನ ಕಾಠಿಣ್ಯವನ್ನು ನೋಡಿ ಬೆಚ್ಚಿ ಬೇಸರದಿಂದಲೇ ಮಗನನ್ನು ಆಶೀರ್ವದಿಸಿ ಕಳುಹಿಸುತ್ತಾರೆ. ತನ್ನ ಗೆಳೆಯ ಗೋವಿಂದನ ಜತೆಗೆ ಅರಿವಿನ ಪಯಣ ಪ್ರಾರಂಭಿಸುತ್ತಾನೆ. ಕೆಲವು ದಿನಗಳಲ್ಲೇ ಪಡೆದ ಜ್ಞಾನ ತನ್ನನ್ನು ತಾನೇ ಅರಿಯುವುದಕ್ಕೆ ಸಾಲುತ್ತಿಲ್ಲವೆನ್ನಿಸಿ ಮನೋಕ್ಷೋಬೆಗೊಳಗಾಗುತ್ತಾನೆ. ರಾಜತ್ವವನ್ನು ತೊರೆದು ಜ್ಞಾನೋದಯ ಪಡೆದ ಗೌತಮ ಬುದ್ಧನ ಹೆಸರು ಪ್ರಖ್ಯಾತವಾಗುತ್ತಿದ್ದ ಕಾಲವದು. ಗೆಳೆಯ ಗೋವಿಂದನ ಜೊತೆಗೆ ಬುದ್ಧನ ತತ್ವಗಳನ್ನರಿಯಲು ಹೊರಡುತ್ತಾನೆ ಸಿದ್ಧಾರ್ಥ. ಬುದ್ಧನ ಉಪದೇಶಗಳಿಂದ ಈರ್ವರೂ ಪ್ರಭಾವಿತರಾಗುತ್ತಾರೆ. ‘ಸಮಾನ’ರು ತಿಳಿಸಿಕೊಟ್ಟದ್ದಕ್ಕಿಂತ ಹೆಚ್ಚಿನ ಅರಿವು ಬೌದ್ಧ ಧರ್ಮದಲ್ಲಿದೆ ಎಂದು ಮನವರಿಕೆಯಾದರೂ ಸಿದ್ಧಾರ್ಥ ಬುದ್ಧನ ಶಿಷ್ಯನಾಗಲು ಆಶಿಸುವುದಿಲ್ಲ.

ಮತ್ತಷ್ಟು ಓದು »

3
ಜನ

ಕಡಲು ನಿನ್ನದೇ ಹಡಗು ನಿನ್ನದೇ ಮುಳುಗದಿರಲಿ ಬದುಕು -೨

– ಮು ಅ ಶ್ರೀರಂಗ ಬೆಂಗಳೂರು

Life of Pie(ನಿಲುಮೆಯಲ್ಲಿ ೫-೧೨-೨೦೧೩ರಂದು ಪ್ರಕಟವಾದ ‘ದೀಪವೂ ನಿನ್ನದೇ ಗಾಳಿಯೂ ನಿನ್ನದೇ ಆರದಿರಲಿ ಬೆಳಕೂ’.……… . ನೆನಪುಗಳ ಮುಂದುವರೆದ ಭಾಗ)

ಪಿ ಯು ಸಿ ಯಲ್ಲಿ ನನಗೆ ಕೆಮಿಸ್ಟ್ರಿ ಮತ್ತು ಬಯಾಲಜಿ ವಿಷಯಗಳು ಕಷ್ಟವಾಗಿತ್ತು. ಅದರಿಂದ ಬಿಎಸ್ಸಿಯಲ್ಲಿ ಅದನ್ನು ಬಿಟ್ಟು ಫಿಸಿಕ್ಸ್ ಮ್ಯಾಥಮೆಟಿಕ್ಸ್ ಮತ್ತು ಸ್ಟ್ಯಾಟಿಸ್ಟಿಕ್ಸ್ ವಿಷಯಗಳನ್ನು ತೆಗೆದುಕೊಂಡಿದ್ದೆ. ಮೂರು ವರ್ಷಗಳು ಬಿಎಸ್ಸಿಯಲ್ಲಿ ಸ್ಟ್ಯಾಟಿಸ್ಟಿಕ್ಸ್ ಅನ್ನು ಓದಿದ್ದರಿಂದ ಆ ವಿಷಯದಲ್ಲೇ  ಎಂಎಸ್ಸಿ ಮಾಡಲು ನಿರ್ಧರಿಸಿದೆ. ಕೋರ್ಸಿಗೆ ಸೇರಿದ್ದಾಯ್ತು. ಆದರೆ ತರಗತಿಯ ಪಾಠಗಳು ಅರ್ಥವಾಗುತ್ತಿರಲಿಲ್ಲ. ಹೀಗಾಗಿ ಮೂರ್ನಾಲಕ್ಕು ತಿಂಗಳ ನಂತರ ಓದನ್ನು ಬಿಟ್ಟು ಊರಿಗೆ ವಾಪಸ್ಸು ಬಂದುಬಿಟ್ಟೆ. ನಮ್ಮ ತಂದೆ ಸ್ಕೂಲಿನ  ವೇಳೆ ಮುಗಿದ ನಂತರ  ಹತ್ತು ಹದಿನೈದು ಹುಡುಗರಿಗೆ ಮನೆ ಪಾಠ ಮಾಡುತ್ತಿದ್ದರು. ಆಗ ತಿಂಗಳಿಗೆ ಒಬ್ಬ ಹುಡುಗನಿಗೆ ಹತ್ತು ರೂಪಾಯಿ ಫೀಸು. ಅದನ್ನು ಆ ಹುಡುಗರು ಕೊಡಲು  ನಿಗದಿತ ದಿನಾಂಕ ಎಂಬುದೇನಿಲ್ಲ. ತಿಂಗಳ ಮೊದಲನೇ ತಾರೀಖಿನಿಂದ ಕೊನೆಯ ದಿನದ ತನಕ ಯಾವಾಗ ಅವರಿಗೆ ಅನುಕೂಲವೋ ಆಗ ಕೊಡುತ್ತಿದ್ದರು. ಜತೆಗೆ ಆ ಸಲ ಹಾಸ್ಟೆಲ್ ನಲ್ಲಿ ಬದಲಾದ ನಿಯಮಗಳಿಂದ ನನಗೆ ಶುಲ್ಕದಲ್ಲಿ ಅರ್ಧ ಮಾಫಿ ಸಿಗಲಿಲ್ಲ. ಎಷ್ಟೇ ಕಷ್ಟವಾದರೂ ನನ್ನ ಮೇಲೆ ಭರವಸೆಯಿಟ್ಟಿದ್ದ ನನ್ನ ಅಪ್ಪನ ಹಣವನ್ನು ಸುಖಾಸುಮ್ಮನೆ ಖರ್ಚು ಮಾಡಿಕೊಂಡು ಬೆಂಗಳೂರಿನಲ್ಲಿರುವುದು  ನನಗೆ ಇಷ್ಟವಾಗಲಿಲ್ಲ. ಬಹುಶಃ ನನ್ನ ಬುದ್ಧಿ ಶಕ್ತಿ ಪದವಿ ಮಟ್ಟದ್ದಷ್ಟೇ ಆಗಿರಬೇಕು. ಇದನ್ನೆಲ್ಲಾ ಯೋಚಿಸಿ ನನ್ನ ಅಪ್ಪನಿಗೆ ಒಂದು ಕಾಗದ ಬರೆದೆ. ಅದರಲ್ಲಿ ನನ್ನ ತಳಮಳ, ದುಃಖವನ್ನೆಲ್ಲಾ ವಿವರವಾಗಿ ತಿಳಿಸಿದೆ . ಅದು ತಲುಪಿದ ಮಾರನೇ ದಿನ ಮಧ್ಯಾನ್ಹದ ವೇಳೆಗೆ  ನನ್ನ  ಅಪ್ಪ ಬಂದರು. ನಮ್ಮ ಹಾಸ್ಟೆಲ್ ಹತ್ತಿರದಲ್ಲಿ  ಒಂದು ಪಾರ್ಕಿತ್ತು. ಅಲ್ಲಿಗೆ ಹೋಗಿ ಕಲ್ಲು ಬೆಂಚೊಂದರ ಮೇಲೆ ಇಬ್ಬರೂ ಕುಳಿತೆವು. ತಮ್ಮ ಷರ್ಟಿನ ಜೇಬಿನಿಂದ  ನಾನು ಬರೆದ ಪತ್ರವನ್ನು ತೆಗೆದುಕೊಂಡು ಮತ್ತೊಮ್ಮೆ ಓದಿಕೊಂಡು “ನಿನ್ನ ಇಷ್ಟ”ಎಂದು ಹೇಳಿ ಎದ್ದರು. ಹಾಸ್ಟೆಲ್ಲಿಗೆ ವಾಪಸ್ಸು ಬಂದು ಲೆಕ್ಕ ಚುಕ್ತಾ ಮಾಡಿ ನನ್ನ ಗಂಟು ಮೂಟೆಯೊಂದಿಗೆ ಊರಿಗೆ ವಾಪಸ್ಸು ಬಂದೆವು.

ಮತ್ತಷ್ಟು ಓದು »