ವಿಷಯದ ವಿವರಗಳಿಗೆ ದಾಟಿರಿ

Archive for

11
ನವೆಂ

ಕಾನೂನು Vs ಪ್ರತ್ಯೇಕತೆ – ಬದಲಾಗಬೇಕಾಗಿದ್ದು ಯಾರು ?

– ಶೈಲೇಶ್ ಕುಲ್ಕರ್ಣಿ

Jammu-Kashmirಕಾಲಕಾಲಕ್ಕೆ ಭಾರತದ ಕೆಲವೊಂದು ರಾಜ್ಯಗಳ ಆಡಳಿತಾರೂಢ ಜನಪ್ರತಿನಿಧಿಗಳೇ ಭಾರತವಿರೋಧಿ ಭಾವನೆಗಳನ್ನ ಸಾರ್ವಜನಿಕವಾಗಿ ಪ್ರದರ್ಶನಕ್ಕಿಡೋದು ಅವ್ಯಾಹತವಾಗಿ ನಡೆದುಕೊಂಡು ಬಂದಿದೆ.ಈಗ್ಗೆ ಸ್ವಲ್ಪ ಸಮಯದ ಕೆಳಗೆ ಜಮ್ಮುಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸಂವಿಧಾನದ ೩೭೦ನೆ ವಿಧಿ ಆ ರಾಜ್ಯದಲ್ಲಿ ಜಾರಿಗೊಂಡ ಪಕ್ಷದಲ್ಲಿ ಆ ರಾಜ್ಯ ಭಾರತದಭಾಗವಾಗಿ ಮುಂದುವರೆಯೋದಿಲ್ಲ ಅಂತ ಸಾರ್ವಜನಿಕವಾಗಿಯೇ ಹೇಳಿದ್ದರು.ಹೀಗೆ ಪ್ರತೀ ಬಾರಿ ಒಡಕಿನ ರಾಗ ಆಲಾಪಿಸಿದಾಗಲೂ ಅವರೆಲ್ಲರ ದುಃಖಕ್ಕೆ  AFSPA ನಂಥ  ಕಾನೂನನ್ನೇ  ಹೊಣೆಯಾಗಿಸೋದು ಮಾಮೂಲಿ ಸಂಗತಿ .

ಜಮ್ಮು-ಕಾಶ್ಮೀರದ ಜೊತೆಗೇ ಭಾರತದ ನೈಋತ್ಯದ ರಾಜ್ಯಗಳ(ಅಸ್ಸಾಂ, ಮಣಿಪೂರ್) ಕೆಲ ಚುನಾಯಿತ ಪ್ರತಿನಿಧಿಗಳು ತಮ್ಮ ರಾಜ್ಯಗಳಲ್ಲಿ ಭಾರತೀಯ ಸೈನ್ಯ AFSPA (ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ೧೯೫೮) ಕಾನೂನಿನ ಅಡಿಯಲ್ಲಿ ಇರೋದನ್ನ ಬಲವಾಗಿ ವಿರೋಧಿಸಿಕೊಂಡೆ ಬಂದಿದ್ದಾರೆ. ಈ ವಿಶೇಷಾಧಿಕಾರದ ಅನ್ವಯದಿಂದ ತಮ್ಮ ರಾಜ್ಯಗಳು ಸೈನ್ಯದ ಛಾಯೆಯಲ್ಲೇ ಬದುಕಬೇಕಾದ ಅನಿವಾರ್ಯಕ್ಕೆ ಸಿಲುಕಿವೆ. ಸಂಪೂರ್ಣರಾಷ್ಟ್ರವೇ ಮಿಲಿಟರಿಯ ಹಂಗಿಲ್ಲದೆ ಮನಸೋಇಚ್ಛೆ ಬಾಳ್ವೆ ನಡೆಸುತ್ತಿರುವಾಗ ಪ್ರಜಾತಂತ್ರದ ಹೆಸರಿನಡಿಯಲ್ಲಿ ಹಾಡುಹಗಲೇ ತಮ್ಮ ಸ್ವಾತಂತ್ರ್ಯಹರಣಕ್ಕೆ ಸೈನ್ಯದಬಳಕೆ ಪ್ರಜಾತಂತ್ರಕ್ಕೆ ಮತ್ತು ಮಾನವೀಯತೆಗೆ ಮಾಡಿದ ಅಪಚಾರ ಅನ್ನೋದು ಅವರ ವಾದ .
ಪರಿಸ್ಥಿತಿಯ ಲಾಭಪಡೆವ ಸೈನ್ಯ ಅಲ್ಲಿನ ಪ್ರಜೆಗಳ ಮೇಲೆ ದೌರ್ಜನ್ಯಕ್ಕೂ ಮುಂದಾಗುತ್ತದೆ ಅನ್ನೋದು ಆ ವಾದದ ಸರಣಿ. .

ಕೂಲಂಕುಶವಾಗಿ ಈ ಎಲ್ಲ ವಾದಗಳ ಮೂಲ ಕೆದಕಿದಲ್ಲಿ ಅಲ್ಲಿ ಅಡಗಿರೋದು ಕ್ಷುದ್ರರಾಜಕಾರಣವಲ್ಲದೆ ಜನಪರ ಕಾಳಜಿ ಅಥವ ಮಾನವಸಂವೇದನೆ ಖಂಡಿತ ಅಲ್ಲ ಅನ್ನೋದು ಸ್ಪಷ್ಟವಾಗಿ ಕಾಣಬಹುದು.

ಮತ್ತಷ್ಟು ಓದು »

10
ನವೆಂ

ಕನ್ನಡದ ಇಲ್ಲಗಳು!

– ಡಾ. ಶ್ರೀಪಾದ ಭಟ್, ಸಹಾಯಕ ಪ್ರಾಧ್ಯಾಪಕ

ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು, ಕರ್ನಾಟಕ

ಕನ್ನಡದ ಇಲ್ಲಗಳುಕನ್ನಡ ಸಾವಿರ ವರ್ಷಗಳಿಂದ ಉಳಿದು ಬಂದ ಬಗೆ ಬೆರಗು ಹುಟ್ಟಿಸುವಂಥದ್ದೇನಲ್ಲ. ಅದು ಎಲ್ಲ ಜೀವಂತ ಭಾಷೆಗಳಂತೆಯೇ ಸಹಜವಾಗಿ ಸವಾಲುಗಳನ್ನು ಎದುರಿಸಿ ತನ್ನೊಡಲೊಳಗೆ ಸೇರಿಸಿಕೊಂಡು, ತನ್ನದನ್ನಾಗಿ ಮಾಡಿಕೊಂಡಿದೆ. ಹೀಗೆಂದರೆ ಬಿಸಿಲು, ಮಳೆ ಗಾಳಿಗಳನ್ನು ಎದುರಿಸಿ ಸಾವಿರ ವರ್ಷಗಳಿಂದ ಜಗ್ಗದೇ ಈ ಕಲ್ಲು ನಿಂತಿದೆ ಎಂಬಂತೆ ಕನ್ನಡ ಎಂದರೆ ಯಾವುದೋ ಎರಡನೆಯ ವಸ್ತುವಲ್ಲ. ಕನ್ನಡ ದಕ್ಕಿಸಿಕೊಂಡಿದೆ ಎಂದರೆ ಕನ್ನಡ ಮಾತನಾಡುವ ಜನ ಹಾಗೆ ಮಾಡಿದ್ದಾರೆ ಎಂದರ್ಥ. ಆದರೆ ಇಂದೇನಾಗಿದೆ? ಕನ್ನಡಿಗರು ಕನ್ನಡವೇ ಬೇರೆ, ತಾವೇ ಬೇರೆ ಎಂಬಂತೆ ಇದ್ದಾರೆ. ಎಲ್ಲವನ್ನೂ ಸಿದ್ಧಮಾದರಿಯಲ್ಲಿ ಬಯಸುವ ನಮಗೆ ಕನ್ನಡವೂ ಸಿದ್ಧಮಾದರಿಯಲ್ಲಿ ಉದ್ಧಾರವಾಗಬೇಕು! ನಾನೊಬ್ಬ ಕನ್ನಡ ಮಾತಾಡದಿದ್ದರೆ ಏನಂತೆ? ನನ್ನ ಮಗ/ಮಗಳು ಕನ್ನಡ ಕಲಿಯದಿದ್ದರೆ ಏನಂತೆ? ಎಂದು ಒಬ್ಬೊಬ್ಬರೂ ಭಾವಿಸಿ ಅಂತೆಯೇ ವರ್ತಿಸುತ್ತಿರುವುದೇ ಕನ್ನಡದ ಇಂದಿನ ಸಮಸ್ಯೆಗೆ ಬಹುಪಾಲು ಕಾರಣ. ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಗತಿಯಾದ ಭಾಷೆಯನ್ನು ಆರ್ಥಿಕ-ಔದ್ಯೋಗಿಕ ಮತ್ತು ರಾಜಕೀಯ ದೃಷ್ಟಿಯಿಂದ ನೋಡುವ ಪರಿಪಾಠ ಇನ್ನೊಂದು ಅಪಾಯ. ಕಾಲ ಕಾಲಕ್ಕೆ ಆಯಾ ಭಾಷಿಕ ಪರಿಸರದಲ್ಲಿ ಕಾಣಿಸುವ ರಾಜಕೀಯ, ವಿಜ್ಞಾನ, ತಂತ್ರಜ್ಞಾನ, ಆರ್ಥಿಕತೆ ಮೊದಲಾದ ಸನ್ನಿವೇಶಗಳನ್ನು ಎದುರಿಸುತ್ತ, ಅದನ್ನು ತನ್ನೊಡಲೊಳಗೆ ಸೇರಿಸಿಕೊಳ್ಳುತ್ತ ಹೋಗಬೇಕಾದ ಸವಾಲು ಇರುವುದರಿಂದ ಕನ್ನಡ ಎಂದಲ್ಲ, ಎಲ್ಲ ಜೀವಂತ ಭಾಷೆಗಳೂ ಸದಾ ಕಾಲ ಸಂಕ್ರಮಣ ಸ್ಥಿತಿಯಲ್ಲೇ ಇರುತ್ತವೆ.

ಸದ್ಯದ ಸ್ಥಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಕನ್ನಡಕ್ಕಾಗಿ ಇರುವ ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಸಂಘ ಸಂಸ್ಥೆಗಳು ನೂರನ್ನೂ ಮೀರುತ್ತವೆ. ಇಷ್ಟಾದರೂ ಜಾಗತಿಕ ವಿದ್ಯಮಾನದ ಹಿನ್ನೆಲೆಯಲ್ಲಿ ಆಗುತ್ತಿರುವ ಬದಲಾವಣೆಗೆ ಸಿದ್ಧವಾಗುವಂತೆ ಕನ್ನಡವನ್ನು ಕಟ್ಟುವ ಮತ್ತು ರೂಪಿಸುವ ಕೆಲಸ ಮಾತ್ರ ನಡೆಯುತ್ತಿಲ್ಲ. ಇದು ಆಕ್ಷೇಪವಲ್ಲ, ವಾಸ್ತವ. ಆಧುನಿಕ ತಂತ್ರಜ್ಞಾನದಿಂದ ಇಂದು ಭಾಷೆ, ಶಿಕ್ಷಣ ಮತ್ತು ಸಾಹಿತ್ಯದ ಸ್ವರೂಪವೇ ಬದಲಾಗಿಹೋಗಿದೆ. ಕಂಪ್ಯೂಟರ್, ಮೊಬೈಲ್ ತಂತ್ರಜ್ಞಾನಗಳು ನಿತ್ಯ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಹೊಸ ಜಗತ್ತಿನ ಈ ಹೊಸ ಸಂಪರ್ಕ ಮಾಧ್ಯಮಗಳು ಭಾಷೆಯನ್ನು ಬಳಸಿಕೊಳ್ಳುವ ಬಗೆಯೇ ಬೇರೆ. ಈ ತಂತ್ರಜ್ಞಾನಗಳಿಗೆ ಒಳಪಡದ ಭಾಷೆ ಅಳಿವು ಉಳಿವಿನ ಪ್ರಶ್ನೆಯನ್ನು ಎದುರಿಸುವುದು ಖಂಡಿತ. ಕನ್ನಡ ಈಗ ಈ ಸವಾಲು ಎದುರಿಸುತ್ತಿದೆ.

ಮತ್ತಷ್ಟು ಓದು »

6
ನವೆಂ

ವೇಶ್ಯಾವೃತ್ತಿ: ಮಹಿಳೆಯರ ರಕ್ಷಣೆಗೆ ಮಹಿಳೆಯರ ಅತ್ಯಾಚಾರವೇ?

– ತುರುವೇಕೆರೆ ಪ್ರಸಾದ್

ಮಹಿಳಾ ದೌರ್ಜನ್ಯವೇಶ್ಯಾವೃತ್ತಿಯನ್ನು ಕಾನೂನು ಬದ್ಧಗೊಳಿಸಬೇಕು. ಇದರಿಂದ ಸ್ವಲ್ಪ ಮಟ್ಟಿಗೆ ಸ್ತ್ರೀಯರ ಮೇಲಿನ ದೌರ್ಜನ್ಯಗಳು ಹಾಗೂ ಅತ್ಯಾಚಾರಗಳು ನಿಯಂತ್ರಣಕ್ಕೆ ಬರುತ್ತವೆ ಎಂದು ಹಲವರು ಅಭಿಪ್ರಾಯಪಡುತ್ತಾರೆ. ಪ್ರಪಂಚದ ಹಲವು ಕಡೆ ನಡೆಸಿದ ಸಮೀಕ್ಷೆ ಹಾಗೂ ಅಧ್ಯಯನಗಳಲ್ಲಿ ಇದಕ್ಕೆ ಪೂರಕವಾದ ಅಂಕಿ ಅಂಶಗಳು ಸಿಕ್ಕಿವೆ. ಅವುಗಳಲ್ಲಿ ಕೆಲವನ್ನು ಉದಾಹರಿಸುವುದಾದರೆ ಎನ್‍ಬಿಇಎಲ್ ಅಧ್ಯಯನದ ಪ್ರಕಾರ ರೋಡ್ ದ್ವೀಪದಲ್ಲಿ 2003-2009ರ ಅವಧಿಯಲ್ಲಿ ವೇಶ್ಯಾ ವೃತ್ತಿಯನ್ನು ಕಾನೂನುಬದ್ಧಗೊಳಿಸಿದಾಗ ಶೇ.39 ರಷ್ಟು ಅತ್ಯಾಚಾರ ಪ್ರಕರಣಗಳು ಕಡಿಮೆಯಾಗಿದ್ದವು. ಗೊನೇರಿಯಾ ಕಾಯಿಲೆಯ ಹರಡುವಿಕೆ ಪ್ರಮಾಣ    ಶೇ.45ರಷ್ಟು ಕಡಿಮೆಯಾಗಿತ್ತು. ಬೈಲಾರ್ ವಿಶ್ವವಿದ್ಯಾಲಯದ ಸಂಪನ್ಮೂಲ ವ್ಯಕ್ತಿಗಳಾದ ಸ್ಕಾಟ್ ಕನ್ನಿಂಗ್ ಹ್ಯಾಮ್ ಮತ್ತು ಮಾನಿಷಾ ಶಾ ವೇಶ್ಯೆಯರ ಮೇಲಿನ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂದೆ ತೆಗೆದ ಪರಿಣಾಮ ಹೆಂಗಸರ ಮೇಲಿನ ಅಪರಾಧ ಹಾಗೂ ದೌರ್ಜನ್ಯಗಳ ಸಂಖ್ಯೆ ಇಳಿಮುಖವಾಗಿತ್ತು ಎಂಬುದನ್ನು ಗುರುತಿಸಿದ್ದಾರೆ. ನಾರ್ತ್ ಈಸ್ರ್ಟನ್ ಸ್ಟೇಟ್ ಯೂನಿವಸಿಟಿಯ ಕಿರ್ಬಿ ಆರ್. ಕಂಡೀಫ್ ಅಮೇರಿಕಾದಲ್ಲಿ ವೇಶ್ಯಾವೃತ್ತಿಯನ್ನು ಕಾನೂನುಬದ್ಧಗೊಳಿಸಿದರೆ       ಶೇ.25ರಷ್ಟು ಅಂದರೆ 25ಸಾವಿರ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗಬಹುದೆಂದು ಬಹಳ ಹಿಂದೆಯೇ ಸಲಹೆ ನೀಡಿದ್ದರು. ಕ್ವೀನ್ಸ್‍ಲ್ಯಾಡ್‍ನಲ್ಲಿ ಕಾನೂನುಬದ್ಧವಾಗಿ ನಡೆಸುತ್ತಿದ್ದ ವೇಶ್ಯಾಗೃಹಗಳನ್ನು ಮುಚ್ಚಿದಾಗ ಅಲ್ಲಿನ ಅತ್ಯಾಚಾರ ಪ್ರಕರಣಗಳ ಪ್ರಮಾಣ ಶೇ.149ಕ್ಕೆ ಏರಿತು ಎಂದು ಲಿಂಡಾ ರಿಚ್‍ಮ್ಯಾನ್ ಅಭಿಪ್ರಾಯ ಪಡುತ್ತಾರೆ. 2004ರಲ್ಲಿ ಜರ್ಮನಿಯಲ್ಲಿ ವೇಶ್ಯಾವೃತ್ತಿಯನ್ನು ಕಾನೂನುಬದ್ಧಗೊಳಿಸಿ ನೊಂದಾಯಿಸಿದ ವೇಶ್ಯೆಯರಿಗೆ ಆರೋಗ್ಯವಿಮೆ, ನಿವೃತ್ತಿ ವೇತನ ಇತರೆ ಸೌಲಭ್ಯಗಳನ್ನು ನೀಡುವುದಾಗಿ ಘೋಷಿಸಲಾಗಿತ್ತು. ಇದರಿಂದ ಪ್ರವಾಸೋದ್ಯಮ ಬೃಹತ್ತಾಗಿ ಬೆಳೆಯಿತು. ಹೆಂಗಸರಿನ ಮೇಲಿನ ಅಪರಾಧ ಪ್ರಕರಣಗಳು ಗಣನೀಯ ಸಂಖ್ಯೆಯಲ್ಲಿ ಕಡಿಮೆಯಾದವು. ಅದರೆ ಕೇವಲ 44 ಮಂದಿ ವೃತ್ತಿನಿರತ ಮಹಿಳೆಯರು ಮಾತ್ರವೇ ಸರ್ಕಾರದ ಸವಲತ್ತು ಪಡೆದರು. ಇದೇ ಅವಧಿಯಲ್ಲಿ ಜರ್ಮನ್ ಧೋರಣೆಗೆ ವಿರುದ್ಧವಾಗಿ ಸ್ವೀಡನ್ ವೇಶ್ಯಾವೃತ್ತಿಯನ್ನು ಸಂಪೂರ್ಣ ನಿಯಂತ್ರಿಸುವ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿತು. ಇದರ ಪರಿಣಾಮ ಸ್ವೀಡನ್‍ನಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಸಂಖ್ಯೆ ಏರುಪ್ರಮಾಣ ದಾಖಲಿಸಿತು. ವೇಶ್ಯಾವೃತ್ತಿಯಲ್ಲಿ ತೊಡಗುವವರು ವಯಸ್ಕರಾಗಿರಬೇಕು ಮತ್ತು ಯಾವುದೇ ಒತ್ತಡಕ್ಕೆ ಬಲಿಯಾಗದಂತೆ ಈ ವೃತ್ತಿಯನ್ನು ಕಾನೂನು ಬದ್ಧಗೊಳಿಸಬಹುದು. ಇದರಿಂದ ಭಾರತದಲ್ಲಿ ಸಹ ಅತ್ಯಾಚಾರ ಪ್ರಕರಣಗಳು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತವೆ ಎಂದು ಖ್ಯಾತ ಪತ್ರಕರ್ತ ದಿ. ಕುಶ್ವಂತ್‍ಸಿಂಗ್ ಸಹ ಅಭಿಪ್ರಾಯಪಟ್ಟಿದ್ದರು.

ಮತ್ತಷ್ಟು ಓದು »

3
ನವೆಂ

ಪೌರಕಾರ್ಮಿಕರ ಸಮಸ್ಯೆಗಳು ಮತ್ತು ಶ್ರೇಣಿಕೃತ ಜಾತಿವ್ಯವಸ್ಥೆಯೆಂಬ ಮಿಥ್

– ರಾಕೇಶ್ ಶೆಟ್ಟಿ

Mala Horuvudu‘ವಿಜಯವಾಣಿ’ ಪತ್ರಿಕೆಯಲ್ಲಿ ಅಕ್ಟೋಬರ್ ೧೪ನೇ ತಾರೀಖು ಪ್ರಕಟವಾದ, ಮಾಜಿ ಸಚಿವ ಬಿ.ಸೋಮಶೇಖರ್ ಅವರ “ಸ್ವಚ್ಚ ಮನಸ್ಸುಗಳಿಂದ ಸ್ವಚ್ಚ ಭಾರತ ನಿರ್ಮಾಣ” ಲೇಖನಕ್ಕೆ ನನ್ನ ಪ್ರತಿಕ್ರಿಯೆ.

ಸೋಮಶೇಖರ್ ಅವರು ಲೇಖನದಲ್ಲಿ ‘ಸ್ವಚ್ಚ ಭಾರತ ಅಭಿಯಾನ’ದ ಬಗ್ಗೆ ಮಾತನಾಡುತ್ತ ಮುಖ್ಯವಾಗಿ ಎರಡು ಅಂಶಗಳನ್ನು ದಾಖಲಿಸಿದ್ದಾರೆ.ಅದರಲ್ಲಿ ಮೊದಲನೆಯ ಅಂಶದಲ್ಲಿ, ಸರ್ವೇ ಸಾಧಾರಣವಾಗಿ ಭಾರತದ ಯಾವುದೇ ಬುದ್ಧಿಜೀವಿಯೋ ಅಥವಾ ರಾಜಕಾರಣಿಯೋ ಹೇಳುವಂತಹ “ಭಾರತೀಯ ಸಮಾಜ ಜಾತಿ ಆಧಾರಿತ,ಶ್ರೇಣಿಕೃತ” ಇತ್ಯಾದಿ.ಹಾಗೇ,ಸ್ವಚ್ಚಗೊಳಿಸುವ ಕೆಲಸಕ್ಕಾಗಿ ಇಲ್ಲಿ ಒಂದೇ ಜಾತಿ,ವರ್ಗವನ್ನು ಸೃಷ್ಟಿಸಲಾಯಿತು ಮತ್ತು ಅದಕ್ಕೆ ಧರ್ಮ-ಶಾಸ್ತ್ರಗಳ ಮೂಲಕ ಅಧಿಕೃತವನ್ನಾಗಿಸಲಾಯಿತು ಅಂತೆಲ್ಲ ಬರೆದುಕೊಂಡಿದ್ದಾರೆ. ಎರಡನೆಯ ಅಂಶ ಪೌರ ಕಾರ್ಮಿಕರ ಸಮಸ್ಯೆಗಳು,ಸ್ವಚ್ಚ ಭಾರತ ಅಭಿಯಾನದ ಅನುಷ್ಟಾನದ ಬಗ್ಗೆಯಾಗಿದೆ.

ಅವರ ಲೇಖನದ ಮೊದಲನೇ ಅಂಶದಲ್ಲಿ ಬರುವ ಶ್ರೇಣಿಕೃತ ಜಾತಿ ವ್ಯವಸ್ಥೆ,ಧರ್ಮ-ಶಾಸ್ತ್ರಗಳು ಇತ್ಯಾದಿ ವಾದಗಳಿಗೆ ಯಾವುದೇ ವೈಜ್ನಾನಿಕ ಆಧಾರಗಳು ಇಲ್ಲ.ಈ ವಾದಗಳು “ಅಡಗೂಲಜ್ಜಿ ಕತೆ”ಗಳಂತೆ ಹಳೆ ಕಾಲದಿಂದ ಕೇಳಿಸುತ್ತಲೇ ಬರುತ್ತಿವೆ.ಇತ್ತೀಚಿನ ಸಮಾಜ ವಿಜ್ನಾನದ ವಾದಗಳು ಭಾರತದಲ್ಲಿ ‘ಶ್ರೇಣಿಕೃತ ಜಾತಿ ವ್ಯವಸ್ಥೆ’ ಇಲ್ಲವೆಂದು ಹೇಳುತ್ತಿವೆ.

ಅಷ್ಟಕ್ಕೂ “ಶ್ರೇಣಿಕೃತ (Hierarchy)ವ್ಯವಸ್ಥೆ” ಎಂದರೇನು?

ಉದಾಹರಣೆಗೆ,ನಮಗೊಂದು ರಾಜ್ಯ ಸರ್ಕಾರವಿದೆ.ಅದಕ್ಕೊಬ್ಬರು ಮುಖ್ಯಮಂತ್ರಿ,ಅವರ ಕೆಳಗೆ ಮಂತ್ರಿಗಳು, ಶಾಸಕರು,ಮುಖ್ಯ ಕಾರ್ಯದರ್ಶಿಗಳು,ಅಧಿಕಾರಿಗಳು,ಜಿಲ್ಲಾಧಿಕಾರಿಗಳು,ತಹಶೀಲ್ದಾರರು ಹೀಗೆ ಒಂದು ವ್ಯವಸ್ಥೆ (System/Structure)ಇದೆ.ಇದೇ ರೀತಿಯ ವ್ಯವಸ್ಥೆಯೇನಾದರೂ ನಮ್ಮ ಸಮಾಜದಲ್ಲಿ ಕಾಣಬರುವ ಜಾತಿಗಳಲ್ಲಿ ಇವೆಯೇ?

ಮತ್ತಷ್ಟು ಓದು »

3
ನವೆಂ

ಕನ್ನಡ ಅಕ್ಷರ ಮಾಲೆಯ ಸೌಂದರ್ಯ ಅಭಿವ್ಯಕ್ತಗೊಳಿಸುವ ಕವನ

– ಡಾ. ಸುದರ್ಶನ ಗುರುರಾಜರಾವ್

ಕನ್ನಡ ಕಲಿ”ಅ,ಆ ಇ,ಈ ಕನ್ನಡದಾ ಅಕ್ಷರಮಾಲೆ ಅಮ್ಮ ಎಂಬುದೆ ಕಂದನ ಕರುಳಿನ ಕರೆಯೋಲೆ” ಈ ಹಾಡನ್ನು ಕೇಳದ ಕನ್ನಡಿಗರಿಲ್ಲ. ಈ ಸುಂದರ ಗೀತೆ ಸ್ವರಗಳ ಸ್ತರದಲ್ಲಿ ಯೋಗವಾಹಗಳಾದ ಅಂ ಅಃ ಗಳೊಂದಿಗೆ ಮುಗಿಯುತ್ತದೆ. ಕರುಳಿನ ಕರೆ ಚಿತ್ರಕ್ಕಾಗಿ ಶ್ರಿ ಆರ್.ಎನ್. ಜಯಗೋಪಾಲ್ ಅವರು ರಚಿಸಿದ ಕನ್ನಡದ ಈ ಅನನ್ಯ ಗೀತೆ ಪ್ರತಿಯೊಂದು ಸ್ವರಕ್ಕೂ ಜೀವನದ ವಿವಿಧ ಹಂತ (ಸ್ತರ) ಗಳಲ್ಲಿ ಇರಬಹುದಾದ ಪ್ರಾಮುಖ್ಯತೆ ಯನ್ನು ತೊರುತ್ತದೆ. ’ಅ’ ಇಂದ ಅಮ್ಮಾ ಎನ್ನುವ ಮೊದಲ ಮಾತು ಶಿಶುವಾಗಿದ್ದಾಗ, ಆಟ ಊಟ ಓಟ ಗಳು ಬಾಲಕನಾಗಿದ್ದಾಗ,ಇನ್ನೂ ಬೆಳೆದ ನಂತರ ಮಾನವೀಯ ಮೌಲ್ಯಗಳ ಕಲಿಕೆ- ಇದ್ದವರು ಇಲ್ಲದವರಿಗೆ ನೀಡುವುದು, ಈಶ್ವರನಲ್ಲಿ ಭಕ್ತಿ ಇಡುವುದು ಮುಖ್ಯವಾಗುತ್ತದೆ;ಅಂದರೆ, “ನಾನು” ಎನ್ನುವ ಭಾವ ತೊಡೆಯುವುದು. ತರುಣರಾಗಿದ್ದಾಗ ಕಲಿಯುವ ಬಹು ಮುಖ್ಯ ನೀತಿ ಉಪ್ಪು ತಿಂದ ಮನೆಗೆ ಎರ್ಡ ಬಗೆಯದಿರುವ ಮನೋಭಾವ, ಸ್ವಾರ್ಥ ಸಾಧನೆಗಾಗಿ ಊರಿಗೆ ದ್ರೋಹ ಮಾಡದಿರುವ ( ವ್ಯಕ್ತಿಗತ ಹಿತಕ್ಕಿಂತ ಸಾಮಾಜಿಕ ಹಿತವನ್ನು ಪರಿಗಣಿಸುವ ಮನೋಭಾವನೆ) ವ್ಯಕ್ತಿತ್ವದ ಬೆಳವಣಿಗೆ, ಆನಂತರದಲ್ಲಿ ಓದು ಮುಗಿದು ಮಾಗಿದ ತಾರುಣ್ಯದ ವಯಸ್ಸಿನಲ್ಲಿ ದೇಶಸೇವೆ ಈಶ ಸೇವೆ ಎಂದು ಮಾಡಿದಾಗ ಜೀವನ ಆಹಾ ಆಃ ಆಃ ಎನ್ನುವಂತಿರುತ್ತದೆ ಎಂದು ಸುಂದರವಾಗಿ ಹೆಣೆದಿದ್ದಾರೆ.  ಕನ್ನಡದ ಮುಂದಿನ ವರ್ಣಮಾಲೆಯಲ್ಲಿ ಬರುವ ವ್ಯಂಜನಗಳಿಗೂ ಅವುಗಳದ್ದೆ ಆದ ವೈಶಿಷ್ಟ್ಯ ಇದ್ದು ಇದು ಬಹಳ ಜನಕ್ಕೆ ತಿಳಿಯದು. ವ್ಯಂಜನಗಳಲ್ಲಿ ವರ್ಗೀಯ,ಅವರ್ಗೀಯ, ಅಲ್ಪಪ್ರಾಣ,ಮಹಪ್ರಾಣ ಹಾಗು ಅನುನಾಸಿಕಗಳೆಂಬ ಬಗೆಗಳಿವೆ ಇದು ಎಲ್ಲರಿಗೂ ತಿಳಿದ ವಿಚಾರ. ವರ್ಣಮಾಲೆಯ ಪ್ರತಿಯೊಂದು ಗುಂಪಿನ ಎಲ್ಲ ಸದಸ್ಯರು ನಮ್ಮ ಶ್ವಾಸ ಪ್ರಕ್ರಿಯೆಯ ವಿವಿಧ ಹಂತಗಳಿಂದ ಕ್ರಮವಾಗಿ ಮೂಡಿಬರುತ್ತವೆ.   ಸ್ವರಗಳಿಂದ ಆರಂಭವಾಗುವ ಧ್ವನಿಗಳು ಹಂತ ಹಂತವಾಗಿ ಗಂಟಲಿನಿಂದ ಮೇಲೇರಿ ತುಟಿಯ ವರೆಗೂ ಬರುತ್ತವೆ. ಉದಾಹರಣೆಗೆ, ಅ,ಆ ಅಂದು ನೋಡಿ, ನಾಲಿಗೆಯ ಹಿಂದಿನ ಗಂಟಲ ಭಾಗದಿಂದ ಶಬ್ದ ಹೊರಡುತ್ತದೆ. ಕ,ಖ,ಗ ಗಳು ಅಲ್ಲಿಂದ ಮುಂದಕ್ಕೆ ಸರಿದು ನಾಲಿಗೆ ಮತ್ತು ಕಿರಿನಾಲಿಗೆಯ ಚಲನೆಯಿಂದ ಬರುತ್ತವೆ. ಹೀಗೆ ಪ.ಫ ಬ ದಲ್ಲಿ ಎರಡು ತುಟಿಗಳು ತಗುಲಿದಾಗ ಮಾತ್ರವೆ ಶಬ್ದ ಹೊರಡುವುದು. ಇಷ್ಟು ಸುಂದರವಾಗಿ, ವ್ಯವಸ್ಥಿತವಾಗಿ ಸಂಸ್ಕೃತದಿಂದ ಪ್ರೇರಿತವಾದ ಭಾರತದ ಭಾಷೆಗಳಲ್ಲದೆ ಬೇರೆ ಭಾಷೆಯಲ್ಲಿದೆಯೆಂದು ನನಗನಿಸದು. ಅದರಲ್ಲೂ, ಎಲ್ಲಾ ವರ್ಣಗಳಿಂದ ಸಮೃದ್ಧವಾದ ಕನ್ನಡ ಭಾಷೆಯಲ್ಲಿ  ಈ ಬೆಡಗನ್ನು ಕಾಣಬಹುದು. ಈ ಭಾಷಾ ಸೌಂದರ್ಯವನ್ನು ಕವಿತೆಯಲ್ಲಿ ಹಿಡಿದಿಡುವ,ಅಭಿವ್ಯಕ್ತಗೊಳಿಸುವ ಅಭಿಲಾಷೆ ನನ್ನದು.
ಮತ್ತಷ್ಟು ಓದು »

3
ನವೆಂ

ಕನ್ನಡ – ಕನ್ನಡ

– ಭರತೇಶ ಅಲಸಂಡೆಮಜಲು

ಕನ್ನಡ ಕಲಿಅ.. ಆ.. ಅ. ಆ..
ಇ.. ಈ.. ಇ.. ಈ..
ಅಆಇಈ ಕನ್ನಡದ ಅಕ್ಷರಮಾಲೆ
ಅ…. ಅಮ್ಮ ಎಂಬುವುದೇ ಕಂದನ ಕರುಳಿನ ಕರೆಯೋಲೆ
ಆ…. ಆಟ, ಊಟ, ಓಟ ಕನ್ನಡ ಒಂದನೇ ಪಾಠ
ಕನ್ನಡ ಭಾಷೆಯ ಕಲಿತವನ ಜೀವನವೇ ರಸದೂಟ…

ಇದು “ಕರುಳಿನ ಕರೆ” ಚಿತ್ರದ ಕನ್ನಡ ಭಾಷೆಯ ಬಗೆಗಿನ ಹೆಮ್ಮೆಯ ಹಾಡು, ಹೌದು ಜೀವಿಯೊಂದರ ಧ್ವನಿ ಪೆಟ್ಟಿಗೆಯಿಂದ ಉದ್ಭವಿಸಿದ ದನಿ ಗಾಳಿಯ ಒತ್ತಡಕ್ಕೆ ಸಿಳುಕಿ ಹಾರಾಡಿ ಅದು ತರಂಗಗಳಾಗಿ ತಮಟೆಗೆ ಬಡಿದು ಅನಾಥವಾದರೆ ಶಬ್ಧ, ಅದು ಅರ್ಥವಾದರೆ ಭಾಷೆಯಾಗುತ್ತದೆ. ಪ್ರತಿಯೊಬ್ಬರಿಗೂ ಭಾಷೆಯ ಬಗೆಗೆ ವಿಧ ವಿಧವಾದ ವ್ಯಾಖ್ಯಾನಗಳಿವೆ ಭಾಷೆ ಒಂದು ಸಂಸ್ಕಾರದ ಪರಿಶೋಧನೆಗೆ ಸಂಕೇತಗಳ ರೂಪ ನೀಡಿ ವ್ಯವಹರಿಸಲಿರುವ ವಿಶೇಷ ಸಾಮಥ್ರ್ಯ ಹಾಗೂ ಪಶು-ಪಕ್ಷಿಗಳಿಂದ ಪ್ರತ್ಯೇಕಿಸುವ ಘಟಕವೆಂದೆ ಬಿಂಬಿತವಾಗಿದೆ. ಭಾಷೆಯೆಂಬುದು ಆ ಪ್ರಾಂತ್ಯದ , ಜನ ಮಾನಸದ, ವ್ಯವಹಾರದ, ಸಮಾಜ ಸಂಸ್ಕ್ರತಿಯ ಸೊಗಡನ್ನು ಅಭಿವ್ಯಕ್ತಿ ಪಡಿಸುವ ರಾಯಭಾರಿಯಿದ್ದಂತೆ. ನಾವು ನಮ್ಮನ್ನು ಪರಿಚಯಿಸುವುದೇ ನಮ್ಮ ಭಾಷೆ, ನಮ್ಮ ನಾಡಿನ ಹೆಸರುಗಳ ಮೂಲಕ, ನಮ್ಮದು ಕನ್ನಡ ಭಾಷೆ ಅದರ ನವ್ಯತೆ, ನವಿರತೆ, ಮುಗ್ಧತೆ, ಸ್ಪಷ್ಟತೆ, ಉಚ್ಚರಣೆ, ಭಾವಾವಿಶೇಷಣಗಳು ಕನ್ನಡಿಗನೆನ್ನುವವನ ಮನ ಗೌರವವೆನಿಸುತ್ತದೆ.. ಅದಿ ದ್ರಾವಿಡ ಭಾಷೆಯಿಂದ ಕವಳೊಡೆದು ಒಸರಿನಂತೆ ಜಿನುಗಿ ಅದರ ಗಟ್ಟಿತನ , ಪ್ರಾಚೀನತೆ, ಸ್ವತಂತ್ರ ಪರಂಪರೆ, ಅಪಾರ ಸಾಹಿತ್ಯ ಬಿನ್ನತೆ, ಉನ್ನತ ಮಟ್ಟದ ಮೌಖಿಕ , ಶ್ರೇಷ್ಠ ಜಾನಪದ ನೆಲೆಯಲ್ಲಿ ಇಂದು ಕನ್ನಡ ಶಾಸ್ತ್ರೀಯ ಭಾಷೆಗಳಲ್ಲಿ ಒಂದಾಗಿದೆ. ಕನ್ನಡದ ಕುಲಪುರೋಹಿತ ಅಲೂರು ವೆಂಕಟರಾಯರು ಹೇಳುತ್ತಾ ” ಭರತ ಖಂಡವಿಲ್ಲದೆ ಕರ್ನಾಟಕ ಮುಂತಾದ ಪ್ರಾಂತ್ಯಗಳು ಇಲ್ಲವೆಂಬುದು ಎಷ್ಟು ನಿಜವೋ, ಅಷ್ಟೇ ಕರ್ನಾಟಕ ಮುಂತಾದ ಪ್ರಾಂತ್ಯಗಳಿಲ್ಲದೆ ಭರತಖಂಡವಿಲ್ಲವೆಂಬುದೂ ನಿಜ !!!
ಮತ್ತಷ್ಟು ಓದು »