ತುಳುನಾಡ ನಂಬಿಕೆಗಳು…
– ಭರತೇಶ ಆಲಸಂಡೆಮಜಲು
ಬಾಳಿಗೊಂದು ನಂಬಿಕೆ ಎಂಬಂತೆ, ಈ ಬಾಹ್ಯ ಜಗತ್ತು ನಂಬಿಕೆಯ ತಲೆದಿಂಬುನಿಟ್ಟು ಮಲಗಿದೆ. ಈ ನಂಬಿಕೆಯಲ್ಲಿ ಎಲ್ಲವೂ ಶೂನ್ಯ ಆಕಾಶ ಅನಂತವಾದರೆ, ಅಣು ಪರಮಾಣುಗಳು ಎನೋ ಕತ್ತಲಲ್ಲಿ ತೇಲುವ ಸೂಕ್ಷ್ಮ ಜೀವಿ, ಆ ಆಗಾಧ ಶಕ್ತಿಯ ಕೊಲ್ಮಿಂಚು ಎಲ್ಲೋ ಹುಟ್ಟಿ ಶಕ್ತಿಯ ಅದುಮಿದ ಶೂನ್ಯ, ಸತ್ಯದ ಜಗದಲ್ಲಿ ನಾವೊಂದು ಭ್ರಾಮರಕ ನಿರ್ಮಿತಿಗಳು ಅದೇ ನಿರಾಕಾರ, ನಿರ್ಗುಣ, ನಿರಾಮಯ, ಆಗೋಚರ ಬ್ರಹ್ಮಾಂಡದ ಸ್ವರೂಪಗಳು ನಮ್ಮ ನಮ್ಮ ಜ್ಞಾನದ ಅಳತೆಯೊಳಗೆ…. “ನೈಜ ಜಗತ್ತಿನಲ್ಲಿ ಬಣ್ಣಗಳೇ ಇಲ್ಲ, ವಾಸನೆಯೂ ಇಲ್ಲ, ಮೃದುತ್ವ ಕಾಠೀಣ್ಯಗಳು ಇಲ್ಲ, ಅವೆಲ್ಲ ಏನಿದ್ದರೂ ನಮ್ಮ ನಿಮ್ಮ ಮಿದುಳಿನಲ್ಲಿ ನಮ್ಮ ನಿಮ್ಮ ಜ್ಞಾನದಲ್ಲಿ” ಎಂದು ಪ್ರಸಿದ್ಧ ನರ ವಿಜ್ಞಾನಿ ನೋಬೆಲ್ ವಿಜೇತ ಸರ್ ಜಾನ್ ಐಕೆಲ್ಸ್ ಹೇಳಿದ್ದಾರೆ.
ನಮ್ಮ ಯೋಚನಾ ಲಹರಿಯ ಶೂನ್ಯ ಜಾಗಗಳಲ್ಲಿ ಈ ನಂಬಿಕೆಗಳು ಅಚ್ಚಳಿದು ನಿಂತಿದೆ ನಮ್ಮ ನಂಬಿಕೆಗಳೇ ಹಾಗೆ ಅದು ಪ್ರಕೃತಿಯ ಅರಾಧನೆಯಿಂದ ಹಿಡಿದು ಗುರು ಹಿರಿಯರ ಪೂಜನೆಯವರೆಗೆ ಅದರಲ್ಲೂ ಕರಾವಳಿ ಇವೂಗಳ ಗೂಡು, ಬೀಡು. ಹಲವಾರು ವೈಶಿಷ್ಟ, ವಿಶೇಷ, ಆಚರಣೆ, ಅರಾಧನೆ, ಪಾಲನೆ ಇವುಗಳಿಂದಾಗಿ ವಿಶ್ವವ್ಯಾಪ್ತಿಯಲ್ಲಿ ಛಾಪನ್ನು ಮೂಡಿಸಿದೆ. ಎಲ್ಲರ ಮಂದ ದೃಷ್ಠಿ ಇತ್ತ ಕಡೆ ನೆಡುವಂತೆ ಮಾಡಿದೆ. ಇಲ್ಲಿನ ಆಚರಣೆ ಒಂದನ್ನು ಮೀರಿಸುವ ಇನ್ನೊಂದು ಪ್ರಬುದ್ಧವಾದದ್ದು. ಪ್ರಪಂಚದ ಬೇರೆ ಯಾವೂದೇ ಕೋಣೆಯಲ್ಲೂ ಅರಸಿ ಹುಡುಕಿದರೂ ಬಯಸಿ ಸಿಗಲಾರದು. ಯಾವುದೋ ಪೂವಾಗ್ರಹದ ನೆಲೆಯಲ್ಲಿ ತುಳುನಾಡು ತನ್ನ ಭವ್ಯ ಸಂಸ್ಕೃತಿಯ ಕಣಜದ ನೆಲೆಯಲ್ಲಿ ಇನ್ನೂ ಆಚರಣೆಗಳು ಉಳಿದು ನಡೆಯುತಿದೆ. ಒಂದಷ್ಟು ಜಿಜ್ಞಾಸೆ, ವಿಮರ್ಶೆಗಳಿಂದ ಮತ್ತಷ್ಟು ಪ್ರಚಾರವಾಗಿ ಇನ್ನಷ್ಟು ಗಟ್ಟಿಯಾಗಿ ತುಳುವರ ಮನಗಳಲ್ಲಿ ಅಗೆಲುಗಳ ರೂಪದಲ್ಲಿ ಭಾವುಕವಾಗಿ ಬೆಚ್ಚಗೆ ಕುಳಿತಿದೆ.