ಗೀತೆ ಅರ್ಥೈಸಿಕೊಳ್ಳಲು ತಯಾರಿಲ್ಲದವರ ವ್ಯರ್ಥ ವಿರೋಧ
– ಡಾ. ಬಿ.ಕೆ ಸುರೇಶ್,ಮಂಡ್ಯ
ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥ ಮಾಡಬೇಕೆಂಬ ಪರ ವಿರೋಧದ ವಿಮರ್ಶೆಗಳಲ್ಲಿ “ದಾಯಾದಿಗಳ ಕಥನ ರಾಷ್ಟ್ರೀಯ ಗ್ರಂಥವಾಗಬೇಕೆ?” ಎಂದು ವಿಶ್ಲೇಷಿಸಿರುವ ಶ್ರೀ ವೆಂಕಟೇಶ್ ಕೆ ಜನಾದ್ರಿ ಅವರ ಆಲೋಚನೆ ವಿಚಿತ್ರವಾಗಿದೆ. ಕುರುಕ್ಷೇತ್ರ ಕದನದಲ್ಲಿ ಬುದ್ದ, ಕ್ರಿಸ್ತ, ಬಸವಣ್ಣ, ಗಾಂಧೀಜಿ ಮೊದಲಾದವರನ್ನೆಲ್ಲಾ ಎಳೆದು ತಂದು ಅವರೆಲ್ಲಾ ಇದ್ದಿದ್ದರೆ ಏನೇನು ಆಡುತ್ತಿದ್ದರು? ಏನೇನು ಸಂಭವಿಸುತ್ತಿತ್ತು? ಎಂಬುದನ್ನು ತಿಳಿಸಿದ್ದಾರೆ. ಖಂಡಿತವಾಗಿಯೂ ಕೃಷ್ಣನನ್ನು ಹೊರತುಪಡಿಸಿ ಬೇರೆ ಯಾರೇ ಇದ್ದಿದ್ದರೂ ಭಗವದ್ಗೀತೆ ಹುಟ್ಟುತ್ತಿರಲಿಲ್ಲ. ಅರ್ಜುನ ಉಳಿಯುತ್ತಲೂ ಇರಲಿಲ್ಲ. ಮಹಾಭಾರತದ ಅಸ್ತಿತ್ವವೇ ಇರುತ್ತಿರಲಿಲ್ಲ. ಗೀತೆ ಮತ್ತು ಕೃಷ್ಣನ ಮಹತ್ತ್ವ ಇರುವುದೇ ಅಲ್ಲಿ. ಭಗವದ್ಗೀತೆಯನ್ನು ಏನಕೇನ ವಿರೋಧಿಸಲೇ ಬೇಕೆಂಬ ಒಂದೇ ಒಂದು ಕಾರಣಕ್ಕೆ ಲೇಖಕರು ಕಾಲಧರ್ಮಕ್ಕನುಗುಣವಾಗಿ ಮಹಾಪುರುಷರು ಸಮಾಜವನ್ನು ಉದ್ದರಿಸಿದ್ದ ಸಂಗತಿಯನ್ನು ಮರೆತಿದ್ದಾರೆ. ಬುದ್ದನ ಕಾಲ ಮತ್ತು ಕಾಲಧರ್ಮವೇ ಬೇರೆ ಮತ್ತು ಬಸವಣ್ಣ ಕಾಲ ಮತ್ತು ಕಾಲಧರ್ಮವೇ ಬೇರೆ ಎಂಬ ಸಂಗತಿಯನ್ನು ಅವರು ಮರೆತಿದ್ದಾರೆ ಅಥವಾ ಮರೆತಂತೆ ನಟಿಸಿದ್ದಾರೆ. ಮಹಾಭಾರತ ಕಾಲದಲ್ಲಿ ಧರ್ಮವನ್ನು(ಪೂಜಾ ವಿಧಾನ ಎಂದು ಅರ್ಥೈಸಿಕೊಳ್ಳಬಾರದು) ಪ್ರತಿಪಾದನೆ ಮಾಡಬೇಕಾದ ವಿಧಾನ ಕೃಷ್ಣನದ್ದಾದರೆ ಬುದ್ದನ ಕಾಲದಲ್ಲಿ ಅದರ ವಿಧಾನ ಭೀನ್ನವೇ ಆಗಿರುತ್ತದಲ್ಲಾ. ನಮ್ಮ ಕಾಲದಲ್ಲಿ ಸ್ಲೇಟು ಹಿಡಿದು ಶಾಲೆಹೋಗುತ್ತಿದ್ದೆವು. ಈಗ ಮಕ್ಕಳು ಟ್ಯಾಬ್ಲಟ್ ಹಿಡಿದು ಹೋಗಲಾಗುತ್ತಿದೆ. ಹಾಗಾಗಿ ಸ್ಲೇಟೇ ಸರಿ ಇಲ್ಲ ಎನ್ನಲಾಗುತ್ತದೆಯೇ? ಬುದ್ದ ಮತ್ತು ಕೃಷ್ಣ ಇಬ್ಬರನ್ನೂ ಅವತಾರಿ ಪುರುಷರು ಎನ್ನುವ ನೆಲದಲ್ಲಿ ಅವೆರಡೂ ವಿಧಾನಗಳನ್ನು ನಮ್ಮ ದೇಶ ಒಪ್ಪಿದೆ. ಒಪ್ಪದೇ ಇರುವ ಮಾನಸಿಕತೆ ನಮ್ಮಲ್ಲಿ ಆರಂಭವಾಗಿದ್ದು ಕಮ್ಯುನಿಷ್ಟ ಚಿಂತನೆ ಸಮಾಜದಲ್ಲಿ ಪ್ರಚಾರಕ್ಕೆ ಬಂದ ಮೇಲಷ್ಟೆ. ತಮ್ಮ ಮೂಗಿನ ನೇರಕ್ಕೆ ವಾದಗಳನ್ನು ಮಂಡಿಸುವ ಇಂಥ ವಿಧಾನಗಳು ಪ್ರಚಲಿತಕ್ಕೆ ಬಂದಿರುವುದೂ ಕೂಡ ಕಮ್ಯುನಿಷ್ಟ್ ಚಿಂತನೆಯ ಪ್ರಚಾರದ ತರುವಾಯ.