
ಹೌದು ಶಾಲೆಯೆಂದರೆ ಅಲ್ಲಿ ಮದುವೆಗೆ ಬಣ್ಣದ ಕಾಗದದ ತೋರಣ ಕಟ್ಟಿದಂತೆ ಸಾಲು ಸಾಲು ಪರೀಕ್ಷೆಗಳು,ಕಿರು ಪರೀಕ್ಷೆ, ಮಧ್ಯ ವಾರ್ಷಿಕ, ವಾರ್ಷಿಕ, ಸೆಮಿಸ್ಟರ್, ಮರುಪರೀಕ್ಷೆ, ಸಿದ್ದತಾ ಪರೀಕ್ಷೆ , ಗಣಿತದ ಸಾಧನೆಗಳು, ರಾಸಾಯನ ಶಾಸ್ತ್ರದ ಸೂತ್ರಗಳು, ಜೀವ ಶಾಸ್ತ್ರದ ವೈಜ್ಞಾನಿಕ ಹೆಸರುಗಳು, ವಾರದಲ್ಲೊಂದು ಪರೀಕ್ಷೆ, ಒಂದು ಪಾಠ ಅದ ಮೇಲೊಂದು ಪರೀಕ್ಷೆ ಅದು, ಇದು ಒಂದೇ , ಎರಡೇ , ಒಂದು ತರಗತಿಯಲ್ಲಿ ಕನಿಷ್ಠ 6 ಪಠ್ಯಗಳು, 8 ಪರೀಕ್ಷೆಗಳೆಂದು ಗುಣಿಸಿದ್ರೂ ಡಿಗ್ರಿ ಮುಗಿಯುವ ಹಂತಕ್ಕೆ 800 ಪರೀಕ್ಷೆಗಳನ್ನು ಗಡದ್ದಾಗಿ ಬರೆದಿರುತ್ತೇವೆ. ಇನ್ನೂ ಪೊಡಿ, ಪೊಡಿ ಪರೀಕ್ಷೆಗಳನ್ನು ಸಂಕಲನ ಮಾಡಿದರೆ 1400 ಗಡಿ ದಾಟಬಹುದು. ಇಷ್ಟೊಂದು ಪರೀಕ್ಷೆಗಳಿಗೆ ತಯಾರಿ ಹೇಗಿರಬೇಡ ಹ್ಹಹ್ಹಹ್ಹ ಅಷ್ಟೊಂದು ಕಕ್ಕುಬೇಕಾದರೆ ಎಷ್ಟು ತಿನ್ನಬೇಡ !!!
ಮನೆಯಲ್ಲಿ ಅಮ್ಮನ ಕಣ್ಣು ಕಟ್ಟಲು, ಪುಸ್ತಕ ಬಿಡಿಸಿ ಓದಿದಂತೆ ನಟಿಸಿ, ಮತ್ತೆ ಪರೀಕ್ಷೆಗೆ ತಯಾರಿ ನಡೆಸುವ ಪರಿಯೋ ಬ್ರಹ್ಮನಿಗೆ ಪ್ರೀತಿ, ಹೌದು ಅದೆಷ್ಟು ಚೀಟಿಗಳು, ಪೆನ್ಸಿಲ್ ಕೆತ್ತನೆಗಳು, ಗೋಡೆ ಬರಹ, ಅಂಗಿ ಅಕ್ಷರಗಳು, ಡೆಸ್ಕು ಸಾಹಿತ್ಯ, ಮಣಿಗಂಟು ಲೇಖನ, ಹಲವು ಬಗೆ , ಯಾರು ತರಗತಿಯಲ್ಲಿ ಓದುತ್ತಾನೆಯೋ ಅವನ ತಲೆಗೆ ದಂಡ ಪಾವತಿಸಿ ಇಪಾರ್ಟಂಟ್ ಕ್ವೇಶನ್ ಕೇಳಿ ಗೆರೆ ಹಾಕಿಯೋ, ಅಲ್ಲಿ ಇಲ್ಲಿ ಬರೆದೋ, ಯುದ್ಧಕ್ಕೆ ಶಸ್ತ್ರಾಭ್ಯಾಸಕ್ಕೆ ಸಿದ್ಧ ಅಂಗೈ ಅಗಲದ ಸಾಮಾನು ಚೀಟಿ ಎತ್ತಿ ಭೂತಕನ್ನಡಿಯಿಟ್ಟು ನೋಡುವಸಷ್ಟು ಪುಟ್ಟ ಅಕ್ಷರಗಳಾದರೂ ಸ್ಪುಟ, ಸ್ಪಷ್ಟತೆಯಿಂದ ಎದ್ದು ಕಾಣುವಂತೆ ಬರೆದು ಸೋಲ್ಡಿ (ಲಕ್ಕಿಡಿಪ್ ಡ್ರಾ) ಹಾಕುವಂತೆ ಮಡಚಿ, ಉದ್ದ ತೋಳಿನ ಅಂಗಿಯ ಕೈಯಲ್ಲೋ, ಬೆಲ್ಟ್ ನ ಸೆರೆಯಲ್ಲೋ, ಡೆಸ್ಕಿನ ಎಡೆಯಲ್ಲೋ, ಕಿಟಕಿಯ ಮೂಲೆಯಲ್ಲೋ, ಪೆನ್ನಿನೊಳಗೋ, ಕಂಪಾಸ್ ಡಬ್ಬದೊಳಗೋ, ಲಾಗ್ ಪುಸ್ತಕದ ಮಧ್ಯದಲ್ಲೋ, ಖಾಸಗಿ ಜಾಗಗಳಲ್ಲೋ ಸುಲಭವಾಗಿ ಸಿಗುವಂತಹ, ಸುರಕ್ಷಾ ಸ್ಥಳಗಳಲ್ಲಿ ಇಟ್ಟು ಸಿದ್ಧಗೊಳ್ಳುವ ಪರಿಯೇ ಅಬ್ಬಾಬ್ಬಾ ಸೈನಿಕರನ್ನು ಮಿರಿಸುವ ಕರಾಮತ್ತು , ಚೀಟಿ ಬರೆದು ಸಿದ್ಧಪಡಿಸಿದರೆ ಸಾಕೇ… ಪರಿಕ್ಷೇಯಲ್ಲಿ ಬರುವ ಅಪರಿಚಿತ ಪ್ರಶ್ನೆಗಳಿಗೆ ಉತ್ತರಿಸಬೇಕಲ್ಲಾ ಅದಕ್ಕೂ ಪಂಚವಾರ್ಷಿಕ ಯೋಜನೆಯಂತೆ, ಯಾವ ಪಾಠಕ್ಕೆ ಯಾವ ಚೀಟಿಯೆಂದು ಸಾಲು ಕ್ರಮಸಂಖ್ಯೆಗಳು, ಯಾವ ಪ್ರಶ್ನೆಗೆ ಯಾವ ಉತ್ತರ.
ಇನ್ನೂ ಚೀಟಿ ಬಿಡಿಸಿ ನೋಡುವ ಕ್ರಮವೋ ವರ್ಣಿಸ ಹೊರಟರೆ ಪುಟಗಳು ಸಾಲದು..!! ನಮ್ಮ ಮನೆಬಿರುಕು ಮಾಡುವ ಧಾರಾವಾಹಿಯ ಸೊಸೆ, ಅತ್ತೆಯನ್ನು ಬಾಗಿಲ ಸಣ್ಣ ಸಂದಿನಿಂದ ನೋಡುವಂತೆ, ಕಣ್ಣಿನ ರೆಪ್ಪೆಗಳಿಗೆ ಕೋನ ನೀಡಿ, ಪಂಚೇಂದ್ರಿಯಗಳು ಸೈನಿಕನಂತೆ ಸೆಟೆದು ನಿಂತು ಜತನದಿಂದ ಶಿಕ್ಷಕರ ಧ್ವನಿ, ಶಿಕ್ಷಕಿಯ ಕಾಜಿಯ ಸಂಗೀತ, ಹೊಸ ಮದುವೆಯಾದ ಟೀಚರಿನ ಕಾಲಿನ ಗೆಜ್ಜೆನಾದ, ತಲೆಗೆ ಮೂಡಿದ ಹೂವಿನ ಪರಿಮಳ, ನಿದ್ದೆ ಮಾಡಿದಂತೆ ನಟಿಸುವ ಮಾಸ್ತ್ರರ ದೃಷ್ಠಿ, ಅಲ್ಲಾಡುವ ನೆರಳು, ಗಾಳಿಯ ಒತ್ತಡವೆಲ್ಲವನ್ನು ಗ್ರಹಿಸಿಕೊಂಡು ಕಾಪಾಡಿಕೊಳ್ಳಬೇಕು. ಮೊದಲ ದಿನದ ಪರೀಕ್ಷೆಯಲ್ಲಿ ಮೊಹರು ಹಾಕಿದ ಉತ್ತರಪತ್ರಿಕೆಯನ್ನು ತೆಗೆದುಕೊಂಡು ಪುಟ ತುಂಬಾ ಬರೆದು ಮರುದಿನದ ಪರೀಕ್ಷೆಯಲ್ಲಿ ಹಗ್ಗ ಕಟ್ಟುವುದು ಇದೆ, ಮತ್ತೆ ಪ್ರಶ್ನೆ ಪತ್ರಿಕೆಯ ಕೆಳಗೆ, ಕಾಂಪಾಸು ಡಬ್ಬದ ಒಳಗೆ, ಕ್ಯಾಲ್ಕುಲೇಟರ್ ನ ಮೇಲೆ, ಆಡಿಕೋಲುಗಳ ಅಡಿ ಭಾಗ, ಲಂಗದ ನಡುವೆ, ಹಳೆಯ ಪ್ರಶ್ನೆ ಪತ್ರಿಕೆಗಳಲ್ಲೇ ಇನ್ನೂ ಹಲವಾರು….ಇಷ್ಟು ಮಾಡಿ ಪರೀಕ್ಷೆಯಲ್ಲಿ ಅದೇ ಪ್ರಶ್ನೆ ಬಂದು ಬರೆದೆ ಅಂದ್ರೆ ಅಮ್ಮನ ಮೊದಲ ಪ್ರಸವದಷ್ಟು ಖುಷಿ… ಬರೀ ನಾವೇ ಬರೆದರಾಯಿತೆ !!
ದಾನಶೂರರಲ್ಲವೇ, ನಾವು ಬರೆಯುವುದ್ದಕ್ಕೂ ಸೈ ಮತೋಬ್ಬರನ್ನು ಪ್ರೋತ್ಸಾಹಿಸಲು ಜೈ ಯೆಂಬಂತೆ ಈ ಚೀಟಿಗಳನ್ನು ವರ್ಗಾಹಿಸುವುದೋ ಅದೊಂದು ಕಷ್ಟದ ಸನ್ನಿವೇಷ “ನನಗೆ ಬರೆದಾಗಲಿಲ್ಲ ಅವನದು ಕಿರಿಕಿರಿ” ಸಿಟ್ಟೋ ಸಿಟ್ಟು ಅದರು ಗೆಳೆಯನಲ್ಲವೇ ಕೊಡಬೇಕಲ್ವಾ !! .. ಅದಕ್ಕಾಗಿ ಕಣ್ಸನ್ನೆಗಳೆನು?, ಪೆನ್ನಿನ ಕಡೆಯಲ್ಲಿ ಕುಟ್ಟುವುದೇನು?, ಕಾಲು ಗುದ್ದುವುದೇನು, ಕೈ ಮೇಲೆತ್ತುವುದೇನು?, ರಬ್ಬರ್ ಗೆ ಕಟ್ಟಿ ಬಿಸಾಡುವುದೇನು? ಮತ್ತೆ ಅಪರೂಪಕ್ಕೆ ಮಾಸ್ಟ್ರು ನೋಡಿದರೆಂದರೆ ಮೆಲ್ಲಗೆ ಕಿಟಕಿಯಿಂದ ಹಾರಿಸುವುದೇನು, ಚಡ್ಡಿಯೊಳಗೆ ಹಾಕುವುದೇನು, ಕುಪ್ಪಸದೊಳಗೆ ತುರುಕಿಸುವುದೇನು, ಕಾಲುಚೀಲದೊಳಗೆ ನುಗ್ಗಿಸುವುದೇನು. ಬಾಯಲ್ಲಿ ಹಾಕಿ ಜಗಿಯುವುದೇನು? ಅಬ್ಬಾ ನಗೋದು ಬೇಡ.. ಓದುತಿರುವ ನೀವು ಅಪ್ಪ ಅಮ್ಮನಾಗಿದ್ದರೆ ಮಗನಿಗೋ, ಮಗಳಿಗೋ ಹೇಳಿ ಕೊಡಿ ಅವರು ಕಲಿಯಲಿ, ಶಾಲೆ- ಕಾಲೇಜಿಗೆ ಹೋಗುವವರಾಗಿದ್ದರೆ ಒಮ್ಮೆ ಪ್ರಯತ್ನಿಸಿ ನೋಡಿ ಒಳ್ಳೆ ಫಲಿತಾಂಶ ಬರಬಹುದು…. ಸಮಾಜಕ್ಕೆ , ನೌಕರಿಗೆ ಬೇಕಾಗಿರೊದು ನೀವು ಗಳಿಸಿದ ಅಂಕ, ಹೇಗೆ ಗಳಿಸಿದನೆ/ಳೆಂಬುವುದು ಮುಖ್ಯ ಅಲ್ಲ ಅಲ್ಲವೇ…
ಶುಭವಾಗಲಿ