ಜಾತ್ಯತೀತರಿಗೆ ಈವರೆಗಿನ ಮತಾಂತರವೇಕೆ ಕಾಣಲಿಲ್ಲ?
ಡ್ಯಾನಿ ಪಿರೇರಾ
ಭಾರತದ ರಾಷ್ಟ್ರೀಯ ಜೀವನದಲ್ಲಿ ಅತಿ ದೀರ್ಘಕಾಲದಿಂದ ಘಾಸಿಗೊಳಿಸುತ್ತಿರುವ ಸಮಸ್ಯೆಗಳಲ್ಲಿ ಮತಾಂತರವೂ ಒಂದು. ಸೆಮೆಟಿಕ್ ಮೂಲವೆಂದು ಹೇಳಲಾಗುವ ಇಸ್ಲಾಂ ಮತ್ತು ಕ್ರೈಸ್ತ ಮತಗಳಲ್ಲಿ ನಡೆಯುತ್ತಿರುವ ಮತಾಂತರದ ಚಟುವಟಿಕೆಗಳು ನೂರಾರು ವರ್ಷಗಳಿಂದ ಈ ಸಮಸ್ಯೆ ಭಾರತವನ್ನು ಕಾಡುತ್ತಲೇ ಬಂದಿದೆ. ಇದಕ್ಕೆ ಬಲಿಯಾದವರ ಸಂಖ್ಯೆ ಭಾರಿಯೇ ಎನ್ನಬಹುದು. ಉತ್ತರ ಪ್ರದೇಶದಲ್ಲಿ 200 ಜನ 30 ವರ್ಷಗಳ ಹಿಂದೆ ಇಸ್ಲಾಮಿಗೆ ಮತಾಂತರಗೊಂಡು ನಂತರ ಹಿಂದೂ ಸಂಘಟನೆಗಳ ಪ್ರಯತ್ನದ ತರುವಾಯ ಮರಳಿ ಮಾತೃ ಧರ್ಮಕ್ಕೆ ಬಂದರೆ ದೇಶದ ಸೆಕ್ಯುಲರ್ ವಲಯಗಳಲ್ಲಿ ಚರ್ಚೆಯಾಗುತ್ತದೆ. ಅದರಲ್ಲೂ ಉತ್ತರ ಪ್ರದೇಶದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಅಸ್ತಿತ್ವಕ್ಕೆ ಹೋರಾಡ ಬೇಕಾದ ಅನಿವಾರ್ಯತೆ ಉಂಟಾಗಿರುವ ರಾಜಕೀಯ ನಾಯಕರಿಗೆ ಮುಸ್ಲಿಮರು ಹಿಂದೂ ಧರ್ಮಕ್ಕೆ ಬಂದಿರುವುದು ಇವರ ಹೊಟ್ಟೆ ತೊಳೆಸಿಕೊಳ್ಳಲು ಶುರುವಾಗಿರುವ ಸಂಗತಿ ಗೋಚರವಾಗುತ್ತಿದೆ. ಹಾಗಾಗಿ ಕೇವಲ ಇನ್ನೂರು ಜನ ಮುಸ್ಲಿಮರು ಹಿಂದು ಧರ್ಮಕ್ಕೆ ಮತಾಂತರಗೊಳಿಸಿರುವುದರಿಂದ ಧಾರ್ಮಿಕ ಸಾಮರಸ್ಯ ಹಾಳಾಗುತ್ತದೆ ಎಂದು ಅರಚಲು ಶುರು ಮಾಡಿದ್ದಾರೆ. ಇಲ್ಲಿ ಒಂದು ವಿಷಯ ಹೇಳಲೇಬೇಕು. ಅದೆಂದರೆ ಇವರು ಯಾವ ಸಾಮರಸ್ಯದ ಬಗ್ಗೆ ಮಾತಾಡುತ್ತಿದ್ದಾರೆ ಎಂಬುದು!
ಹಾಗೆ ಹೇಳುವುದಾದರೆ ಮತಾಂತರ ಪ್ರಕ್ರಿಯೆಯೇ ಆತ್ಮಘಾತುಕತನದ್ದು. ‘ಮತಾಂತರ’ ಎನ್ನುವ ಶಬ್ದವೇ ಒಂದು ಧರ್ಮ ಮತ್ತೊಂದು ಧರ್ಮವನ್ನು ಕೆಣಕುವ ಅಥವಾ ಸಾಮರಸ್ಯದ ಬುಡಕ್ಕೆ ಬೀಳುವ ಕೊಡಲಿ ಪಟ್ಟು. ಒಬ್ಬ ವ್ಯಕ್ತಿ ತಾನು ಯಾವ ಧರ್ಮವನ್ನು ಆಚರಿಸಬೇಕು ಆಥವಾ ಬಿಡಬೇಕು ಎನ್ನು ತೀರ್ಮಾನ ಆತನದ್ದೇ. ಆ ಹಕ್ಕನ್ನು ನಮ್ಮ ದೇಶದ ಸಂವಿಧಾನ ಕೊಟ್ಟಿದೆ ನಿಜ. ಆದರೆ ಮತಾಂತರಿಸುವ ಸಮಾಜ ಅದು ಕ್ರೈಸ್ತ, ಮುಸ್ಲಿಂ ಅಥವಾ ಹಿಂದೂಗಳಾಗಲಿ, ಅವರವರ ಮತಗ್ರಂಥಗಳನ್ನು ಕೊಟ್ಟು ಇದನ್ನು ಓದು ಇದರಿಂದ ನಿನ್ನ ಮನಪರಿವರ್ತನೆಯಾದರೆ ನನ್ನ ಮತಕ್ಕೆ ಬಾ ಎಂದು ಹೇಳುವುದಿಲ್ಲ. ಹಾಗೆ ಮಾಡಿದ್ದರೆ ಖಂಡಿತ ಯಾರೂ ಆಕ್ಷೇಪಿಸುವುದಿಲ್ಲ. ಆದರೆ ಈ ಮತಾಂತರ ಪ್ರಕ್ರಿಯೆಯಲ್ಲಿ ಒಟ್ಟಾರೆ ಒಂದು ಧರ್ಮದ ನಂಬಿಕೆಗಳನ್ನು ಹೀಯಾಳಿಸಿ ತನ್ನ ಮತ ಶ್ರೇಷ್ಠ ಎನ್ನುವ ಭ್ರಮೆಯೊಂದಿಗೆ ಅಸಹಿಷ್ಣುತೆ ಬೆಳೆಸಲಾಗುತ್ತದೆ, ಜೊತೆಗೆ ಆಸೆ-ಆಮಿಷಗಳು! ಉತ್ತರ ಪ್ರದೇಶದಲ್ಲಿ ಮುಸ್ಲಿಂ ಕಟುಂಬಗಳು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದನ್ನು ರಾಷ್ಟ್ರವ್ಯಾಪಿ ಚರ್ಚೆ ಮಾಡುವ ಸೆಕ್ಯುಲರ್ ನಾಯಕರು ಇದೇ ಮತಾಂತರಕ್ಕೆ ಲೆಕ್ಕವಿಲ್ಲದಷ್ಟು ಹಣ ಸುರಿಯುತ್ತಿರುವ ಕ್ರೈಸ್ತ ಮಿಶನರಿಗಳ ಮತ್ತು ಜಿಹಾದ್ ಹೆಸರಿನಲ್ಲಿ ನಡೆಯುವ ಮತಾಂತರದ ಬಗ್ಗೆ ಏಕೆ ಚಕಾರವೆತ್ತುವುದಿಲ್ಲ?! ಇದೇ ಮುಖವಾಡದ ಸೆಕ್ಯುಲರಿಷ್ಟರು ಹಿಂದೂ ಧರ್ಮೀಯರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸುತ್ತಿರುವುದನ್ನೇಕೆ ಪ್ರಶ್ನಿಸುತ್ತಿಲ್ಲ! ಇಷ್ಟಕ್ಕೂ ಈ ಮಿಶನರಿಗಳು ಮಾಡುತ್ತಿರುವುದು ಧರ್ಮ ಬೋಧನೆಯಲ್ಲ! ತಮ್ಮ ಮತದ ಜನಸಂಖ್ಯೆ ಹೆಚ್ಚಳವಷ್ಟೇ. 2011ರ ಒಂದು ವರದಿಯ ಪ್ರಕಾರ ಪ್ರತಿವರ್ಷ ಹಿಂದುಗಳನ್ನು ಮತಾಂತರಿಸಲು 10,500ಕೋಟಿ ರೂ. ಹಣ ಅಮೆರಿಕಾ, ಜರ್ಮನಿ, ಯುಕೆ, ನೆದರಲ್ಯಾಂಡ್,ಸ್ಪೇನ್ ಇಟಲಿ ಮುಂತಾದ ಕಡೆಗಳಿಂದ ಹಣ ಸರಬರಾಜಗುತ್ತದೆ ಎಂದು ಹೇಳಲಾಗುತ್ತದೆ. ಸರ್ಕಾರವೇ ಹೇಳುವ ವರದಿಯಂತೆ ಕೆಲವು ಎನ್ ಜಿ ಒ ಗಳಿಗೆ ಕ್ರೈಸ್ತ ಮಿಶನರಿಗಳೇ ಅವರ ಖಾತೆಗೆ ಹಣ ಜಮೇಮಾಡಿವೆಯಂತೆ. ವರದಿಯಂತೆ ಮತಾಂತರಿಯು ಇಂಟಲಿಜೆನ್ಸ್ ಬ್ಯೂರೋ ಅಧಿಕಾರಿಗಳಿಗೆ ಹೇಳಿದ್ದೇನೆಂದರೆ ಹಿಂದಿನ ಸರ್ಕಾರಗಳು ಅನುಸರಿಸಿದ ಕುರುಡು ನೀತಿಯು ಇದನ್ನೆಲ್ಲ ಮುಚ್ಚಿ ಹಾಕಿವೆ. ಇಲ್ಲಿ ರಾಜಕಾರಣಿಗಳ ಬಾಯಿ ಮುಚ್ಚಿಕೊಂಡಿರುವಂತೆ ಅವರ ಬಾಯಿಗೆ ಹಣ ಹಾಕಲಾಗುತ್ತದೆಯಂತೆ. ಬಲವಂತದ ಮತಾಂತರ ಶಿಕ್ಷಾರ್ಹ ಅಪರಾಧವಾಗಿರುವುದರಂದ ಬಾಯಿ ಮುಚ್ಚಿಕೊಂಡಿರಲು ಭಾರಿ ಮೊತ್ತವನ್ನು ವ್ಯಯಮಾಡಲಾಗುತ್ತದೆಯಂತೆ. ಆ ಐ.ಬಿ.ಅಧಿಕಾರಿ ಹೇಳುವಂತೆ- ‘ಸಾವಿರದಲ್ಲೊಬ್ಬ ಈ ಆಮಿಷದ ಮತಾಂತರದ ಬಗ್ಗೆ ದೂರು ನೀಡಲು ಬರುತ್ತಾನೆ. ಈ ಮಿಶನರಿಗಳು ಭಾರಿ ಹಣ ಬಳಸಿ ಅವರ ಬಾಯಿ ಮುಚ್ಚಿಸುತ್ತವೆ’ ಎಂದು. ಹಾಗಾದರೆ ಇದರಿಂದ ಸಮರಸ್ಯಕ್ಕೆ ಧಕ್ಕೆ ಬರುವುದಿಲ್ಲವೇ? ಇದೊಂದು ಜಾತ್ಯತೀತರ ಇಬ್ಬಗೆ ನೀತಿ ಎನ್ನುವುದು ಒಂದಷ್ಟು ವಿವೇಚನೆ ಇರುವಂತರಗೆ ಖಂಡಿತ ಅರ್ಥವಾಗುತ್ತದೆ ಎನ್ನುವಾಗ ಈ ಆಕ್ಷೇಪದ ಹಿಂದೆ ಒಂದಷ್ಟು ಹೊಲಸು ರಾಜಕಾರಣದ ವಾಸನೆಯಿದೆ ಎಂದೆನಿಸದಿರದು.