ಭಾರತೀಯ ಸಂಸ್ಕೃತಿ,ಪರಂಪರೆಯ ಚೇತನವಾದ ಭಗವದ್ಗೀತೆ, ಕೇವಲ ದಾಯಾದಿಗಳ ಕಲಹವೇ..?
– ಎಸ್.ಎನ್.ಭಾಸ್ಕರ್, ಬಂಗಾರಪೇಟೆ
ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವನ್ನಾಗಿ ಘೋಷಣೆ ಮಾಡುವ ಬಗ್ಗೆ ಪ್ರಸ್ತಾಪಿತವಾದ ಹಿನ್ನೆಲೆಯಲ್ಲಿ ದಿನಾಂಕ ೧೨-೧೨-೨೦೧೪ ರಂದು ಕನ್ನಡಪ್ರಭ ಪತ್ರಿಕೆಯಲ್ಲಿ “ದಾಯಾದಿಗಳ ಕಲಹ ರಾಷ್ಟ್ರೀಯ ಗ್ರಂಥವಾಗಬೇಕೆ?” ಎಂಬ ಶೀರ್ಷಿಕೆ ಅಡಿಯಲ್ಲಿ ಲೇಖನವೊಂದು ಪ್ರಕಟವಾಗಿತ್ತು.
ಭಗವದ್ಗೀತೆಯ ವ್ಯಾಪ್ತಿಯ ಬಗ್ಗೆ, ಮಹತ್ವದ ಬಗ್ಗೆ ಸೂಕ್ತವಾದ ಅರಿವು ಇಲ್ಲದೇ ಬರೆದಂತಹ ಈ ಲೇಖನಕ್ಕೆ ಪ್ರತಿಕ್ರಿಯೆ ನೀಡುವ ನಿಟ್ಟಿನಲ್ಲಿ ಈ ಕೆಳಗಿನ ಲೇಖನವನ್ನು ಬರೆಯಲಾಗಿದೆ.
—————————————————————————————————-
“ಭಗವದ್ಗೀತೆಯನ್ನು ಅಭ್ಯಸಿಸಿ, ಭಗವಂತನ ಈ ಸೃಷ್ಠಿಯ ಪರಿಕಲ್ಪನೆಯನ್ನು ತಿಳಿದ ಅರಿವಿನ ಮುಂದೆ ಜಗತ್ತಿನಲ್ಲಿ ಅಸ್ಥಿತ್ವದಲ್ಲಿರುವ ಸಮಸ್ತ ಅಂಶಗಳು ಗೌಣವೆನಿಸುತ್ತವೆ” – ಆಲ್ಬರ್ಟ್ ಐನ್‌ಸ್ಟೈನ್.
“ಜೀವನದಲ್ಲಿ ಸಂದೇಹಗಳು ನನ್ನ ಕಾಡಿದಾಗ, ದುಃಖ, ಭ್ರಮನಿರಸನಗಳು ಎದುರಾದಾಗ, ಯಾವುದೇ ಆಶಾಕಿರಣಗಳು ಗೋಚರಿಸದಿದ್ದಾಗ, ಭಗವದ್ಗೀತೆಯ ಕಡೆ ನಾನು ಮುಖಮಾಡುತ್ತೇನೆ, ಮರುಕ್ಷಣ ದುಃಖ ದುಮ್ಮಾನಗಳು ಕರಗಿ, ಮನಸ್ಸಿನನಲ್ಲಿ ವಿಶ್ವಾಸದ ಮಂದಹಾಸ ಮೂಡುತ್ತದೆ. ಭಗವದ್ಗೀತೆಯನ್ನು ಧ್ಯಾನಿಸುವ ವ್ಯಕ್ತಿಯು ನಿರಂತರ ಸುಖಿಯಾಗುತ್ತಾನೆ, ಪ್ರತಿನಿತ್ಯವೂ ಜೀವನದ ಹೊಸ ಹೊಸ ಅರ್ಥಗಳನ್ನು ತಿಳಿಯುತ್ತಾನೆ” – ಮಹಾತ್ಮಾ ಗಾಂಧಿ.