ಮತಾಂತರ ಸರಿಯಾದರೇ ,ಮರುಮತಾಂತರವೇಕೆ ತಪ್ಪು?
– ರಾಕೇಶ್ ಶೆಟ್ಟಿ
ಹೀಗೆ ಹತ್ತು ದಿನಗಳ ಹಿಂದೆ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಹತ್ತಿರ ಒಂದು ಜಾಹೀರಾತು ಓದಿದ್ದೆ.”೧೫ ಕಥೆಗಳು ನಿಮ್ಮ ಜೀವನವನ್ನೇ ಬದಲಾಯಿಸುವವು” ಅಂತ ಬರೆದಿತ್ತು.ಇದ್ಯಾವುದೋ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದ ಜಾಹೀರಾತು ಎಂದುಕೊಂಡೆ.ಆದರೆ,ಇತ್ತೀಚೆಗೆ ದಿನ ಪತ್ರಿಕೆಗಳ ಮುಖಪುಟದಲ್ಲೂ ದೊಡ್ಡದಾಗಿ ಇದೇ ಜಾಹೀರಾತು “ಅನುಭವಿಸಿ ಬದಲಾಯಿಸುವ ಶಕ್ತಿ – ೧೫ ಕಥೆಗಳು ನಿಮ್ಮ ಜೀವನವನ್ನು ಬದಲಾಯಿಸುವುದು” ಎಂದು ಕಾಣಿಸಲಾರಂಭಿಸಿತು. ಪ್ರತಿದಿನ ಜಾಹೀರಾತು ಕೊಡುವಂತದ್ದು ಈ ಪುಸ್ತಕದಲ್ಲಿ ಅಂತದ್ದೇನಿದೆ ಎಂದು ಓದುವ ಕೂತುಹಲವಾಗಿ ಓದಿದೆ.ಮೂರ್ನಾಲ್ಕು ಪುಟ ಓದಿದಂತೆ ಪುಸ್ತಕದ ಮುಂದಿನ ಪುಟಗಳಲ್ಲಿ ಏನಿರಬಹುದು ಮತ್ತು ಈ ಪುಸ್ತಕ ಓದಿದವರು ಏನಾಗಿ ಬದಲಾಗಬೇಕು ಎಂಬ ಉದ್ದೇಶವಿದೆಯೆಂದು ಖುದ್ದು ಅನುಭವಿಸಿದೆ!
ಆ ಪುಸ್ತಕದಲ್ಲಿ ಬಾಲಿವುಡ್ ನಟ ಜಾನಿಲಿವರ್,ನಟಿ ನಗ್ಮಾ ಇನ್ನೂ ಹಲವರು ತಮ್ಮ ತಮ್ಮ ಕತೆಗಳನ್ನು ಹೇಳಿ ಕೊಂಡಿದ್ದಾರೆ.ಈ ಪುಸ್ತಕದ ಸರಳ ಸಾರಾಂಶವೇನೆಂದರೆ,”ಬೈಬಲ್ ಮತ್ತು ಜೀಸಸ್” ಮಾತ್ರ ಸತ್ಯ ಮತ್ತು ಅವು ಮಾತ್ರವೇ “ಪಾಪಿ”ಗಳಾದ ಮನುಷ್ಯ ಬದುಕಿನ ಬಿಡುಗಡೆಯ ಹಾದಿ ಎಂಬುದು!.ಅದೊಂದೇ ಮಾತ್ರ ಸತ್ಯವೆಂದಾದರೆ,ಉಳಿದ ರಿಲಿಜನ್ನುಗಳು, ಸಂಪ್ರದಾಯಗಳು ಮತ್ತು ಭಿನ್ನ ಹಾದಿಗಳೆಲ್ಲವೂ ಸುಳ್ಳು ಅಂತಾಯಿತಲ್ಲ! ಈ ಪುಸ್ತಕದ ಉದ್ದೇಶವನ್ನು ಇನ್ನೂ ಸರಳ ಮಾಡುವುದಾದರೆ ಅಥವಾ ಸಾಮಾನ್ಯಜನರ ಭಾಷೆಯಲ್ಲಿ ಹೇಳುವುದಾದರೆ,ಜನರನ್ನು ಕ್ರಿಸ್ತ ಮತಕ್ಕೆ ಬನ್ನಿ ಎಂದು ಕರೆಯುವ ಮತಾಂತರದ ಹೊಸ ತಂತ್ರವಷ್ಟೇ.ಈ ಬಗ್ಗೆ ಯಾವ ಮೀಡಿಯಾಗಳು,ಯಾವ ಸೆಕ್ಯುಲರ್ ನಾಯಕನೂ ಅಬ್ಬರಿಸಿ ಬೊಬ್ಬಿರಿಯಲಿಲ್ಲ,ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತದೆ ಎಂದು ಮೊಸಳೆ ಕಣ್ಣೀರೂ ಸುರಿಸಲಿಲ್ಲ.