ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 5, 2015

1

ನಿತ್ಯೋತ್ಸವ ಕವಿ ನಿಸಾರ್ @ ೮೦

‍ನಿಲುಮೆ ಮೂಲಕ

– ರಾಘವೇಂದ್ರ ಅಡಿಗ ಹೆಚ್.ಎನ್

ನಿಸಾರ್ ಅಹಮದ್ನಿತ್ಯೋತ್ಸವ ಖ್ಯಾತಿಯ ಕವಿ ನಿಸಾರ್ ಅಹಮದ್ ಇದೇ ಫೆಬ್ರವರಿ 5ರಂದು ಎಂಭತ್ತಕ್ಕೆ ಕಾಲಿರಿಸುತ್ತಿದ್ದಾರೆ. ತಮ್ಮ ಸರಳತೆ, ಸಾಹಿತ್ಯ ಪ್ರೌಢಿಮೆ,ಕವಿತೆಗಳಿಂದ ಕನ್ನಡಿಗರ ಮನೆಮಾತಾಗಿರುವ ಈ ಸಜ್ಜನ ಕವಿಯ ಜನುಮದಿನದಂದು ಈ ಸಮಯದಲ್ಲಿ ಕನ್ನಡಕ್ಕೆ ಇನ್ನೊಬ್ಬ ರಾಷ್ಟ್ರಕವಿ ಆಯ್ಕೆಪ್ರಕ್ರಿಯೆಯೂ ನಡೆಯುತ್ತಿದ್ದು, ನಮ್ಮೆಲ್ಲರ ಪ್ರೀತಿಯ ನಿಸಾರ್ ಅಹಮದ್ ಮುಂದಿನ ರಾಷ್ಟ್ರಕವಿಯಾಗಲೆದು ಹಾರೈಸೋಣ…ಅವರ ದಶಕಗಳ ಸಾಹಿತ್ಯಯಾತ್ರೆಯ ಒಂದು ಕಿರು ಪರಿಚಯವನ್ನು ಮಾಡಿಕೊಳ್ಳೋಣ

ಕರ್ನಾಟಕದಾದ್ಯಂತ ಕವಿಗಳಾಗಿ, ವಿಮರ್ಶಕರಾಗಿ ಮತ್ತು ವೈಚಾರಿಕ ಬರಹಗಾರರಾಗಿ ಪ್ರಸಿದ್ಧರಾದ ಪ್ರೊ|| ಕೆ. ಎಸ್. ನಿಸಾರ್ ಅಹಮದ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನ ಹಳ್ಳಿಯಲ್ಲಿ  05-02-1936ರಂದು ಕೆ. ಎಸ್. ಹೈದರ್ ಮತ್ತು ಹಮೀದಾ ಬೇಗಂ ಅವರ ಪುತ್ರರಾಗಿ ಜನಿಸಿದರು. ತಂದೆ ಸರಕಾರಿ ನೌಕರಿಯಲ್ಲಿದ್ದು ಕನ್ನಡ, ಇಂಗ್ಲಿಷ್, ಸಂಸ್ಕೃತ ಬಲ್ಲ ಸುಸಂಸ್ಕೃತರು. ನಿಸಾರರು ಪ್ರಾಥಮಿಕ, ಮಾಧ್ಯಮಿಕ ಶಾಲೆ ಓದಿದ್ದು ದೇವನಹಳ್ಳಿಯಲ್ಲಾದರೆ. ಪ್ರೌಢಶಾಲೆಗೆ ಹೊಸಕೋಟೆ ಹೈಸ್ಕೂಲು. ಸೇರಿಕೊಂಡರು. ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿ ಭೂಗರ್ಭ ಶಾಸ್ತ್ರದಲ್ಲಿ ಆನರ್ಸ್‌ ಪದವಿ ಪಡೆದರು. ಹೀಗೆ ಬೆಂಗಳೂರಿನಲ್ಲಿ  ಭೂವಿಜ್ಞಾನದಲ್ಲಿ ಎಂ.ಎಸ್ಸಿ. ವರೆಗಿನ ಅಧ್ಯಯನವನ್ನು ಮುಗಿಸಿ 1958ರಲ್ಲಿ ಗುಲ್ಬರ್ಗದಲ್ಲಿ ಸಹಾಯಕ ಭೂವಿಜ್ಞಾನಿಯಾಗಿ ಸರಕಾರಿ ಸೇವೆಯನ್ನು ಆರಂಭಿಸಿದರು.ಆದರೆ ತಾನು ಮಾಡುತ್ತಿರುವ ಕೆಲಸ ಅವರಿಗೆ ತೃಪ್ತಿ, ಸಂತೋಷವನ್ನು ತಂದುಕೊಡಲಿಲ್ಲ. ಹೀಗಾಗಿ ಆ ಉದ್ಯೋಗವನ್ನು ತೊರೆದು, ಅಧ್ಯಾಪನ ವೃತ್ತಿಗೆ ಸೇರಿಕೊಂಡರು. ಬೆಂಗಳೂರು ಸರಕಾರಿ ಕಾಲೇಜಿನಲ್ಲಿ  ಅಧ್ಯಾಪಕ ವೃತ್ತಿ ಆರಂಭ ಮಾಡಿದ್ದ ನಿಸಾರ್ ಅಹಮದ್ ನಂತರದಲ್ಲಿ ಚಿತ್ರದುರ್ಗ,ಶಿವಮೊಗ್ಗ, ಬೆಂಗಳೂರು ಪುನಃ ಶಿವಮೊಗ್ಗ ಕಾಲೇಜಿನಲ್ಲಿ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಕಾಲೇಜಿನ ಪ್ರಾಧ್ಯಾಪಕರಾಗಿರುವಾಗ ಎನ್.ಸಿ.ಸಿ.ಯಲ್ಲಿ ಲೆಪ್ಟಿನೆಂಟ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅನುಭವವೂ ಅವರಿಗಿದೆ.

ಅವರ ಸಾಹಿತ್ಯಾಸಕ್ತಿ ಎಳವೆಯಲ್ಲೇ ಚಿಗುರಿತ್ತು. ತನ್ನ ೧೦ನೇ ವಯಸ್ಸಿನಲ್ಲೇ ‘ಜಲಪಾತ’ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅನರ್ಸ್ ಅಧ್ಯಯನ ಸಮಯದಲ್ಲಿ ಎಲ್. ಗುಂಡಪ್ಪ, ಎಂ.ವಿ. ಸೀತಾರಾಮಯ್ಯ, ರಾಜರತ್ನಂ, ವಿ.ಸೀ. ಇವರ ಗುರುಗಳಾಗಿದ್ದರು. ಇದರಿಂದ ನಿಸಾರ್ ರವರಿಗೆ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಇನ್ನಷ್ಟು ಹೆಚ್ಚಲು ಸಾಧ್ಯವಾಯಿತು..ಸೇವೆಯಲ್ಲಿದ್ದಾಗಲೇ ರಾಜ್ಯಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ಪ್ರಕಟಿಸಿದ ‘ಚಂದನ’ ತ್ರೈಮಾಸಿಕ, ಸಾಹಿತ್ಯದ ಎಲ್ಲ ಪ್ರಕಾರಗಳ ದಶವಾರ್ಷಿಕ ಸಂಚಿಕೆ ಪ್ರಕಟಣೆ ಹೊರತಂದ ನಿಸಾರ್ ದೆಹಲಿಯಲ್ಲಿ CONTEMPORARY INDIAN LITERATURE ಸೆಮಿನಾರ್ ವ್ಯವಸ್ಥೆ ಮಾಡಿದ ಹೆಗ್ಗಳಿಕೆ.ಯನ್ನೂ ಹೊಂದಿದ್ದಾರೆ. ರಾಷ್ಟ್ರೀಯ ಶಿಕ್ಷಣ ಮತ್ತು ಸಂಶೋಧನಾಮಂಡಲಿಯ ಸದಸ್ಯರಾಗಿದ್ದರು.

ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನ ಒಡನಾಟ, ಅಲ್ಲಿನ ಪ್ರಕೃತಿಯ ಸೊಬಗು, ಕವಿಗಳಿಗೆಂದೇ ಹೇಳಿ ಮಾಡಿಸಿದ ಹವಾಗುಣ, ಇವೆಲ್ಲ ನಿಸಾರ್ ಅಹಮದರ ಕವಿ ಹೃದಯವನ್ನು ಪಕ್ವಗೊಳಿಸಿ ಅವರನ್ನೊಬ್ಬ ಶ್ರೇಷ್ಠ ಕವಿಯನ್ನಾಗಿ ರೂಪಿಸಿತು. 1960ರಲ್ಲಿ ಪ್ರಕಟಗೊಂಡ ‘ಮನಸು ಗಾಂಧಿಬಜಾರು’ ಎಂಬ ಕವಿತಾಸಂಕಲನದಿಂದ ತೊಡಗಿ 2013ರ ‘ವ್ಯಕ್ತಿಪರ ಕವನಗಳು’ ಕೃತಿಯವರೆಗೆ 19 ಕವನ ಸಂಕಲನಗಳನ್ನೂ 12 ಗದ್ಯ,ಪ್ರಬಂಧ,ವಿಮರ್ಶೆಯ ಲೇಖನ ಸಂಕಲನಗಳನ್ನೂ,5 ಮಕ್ಕಳ ಸಾಹಿತ್ಯಗ್ರಂಥಗಳನ್ನೂ,5 ಅನುವಾದ ಗ್ರಂಥಗಳನ್ನೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಟ್ಟ ಹಿರಿಮೆ ಇವರದು.ಇವರ ಹಲವು ಕವನ ಸಂಕಲನಗಳು ಮೂರು ಮೂರು ಆವೃತ್ತಿಗಳನ್ನು ಕಂಡಿವೆ. ‘ನಿತ್ಯೋತ್ಸವ’ ಎಂಬ ಕವನ ಸಂಕಲನವು 24 ಬಾರಿ ಮುದ್ರಿತವಾಗಿರುವುದು ಇವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಶೇಕ್ಸ್‌ಪಿಯರನ ನಾಟಕಗಳನ್ನೂ, ರಷ್ಯನ್ ಕಥೆಗಳನ್ನೂ ,ಸ್ಪಾನಿಷ್ ಕವಿ ಪಾಬ್ಲೊ ನೆರುಡನ ಕವಿತೆಗಳನ್ನೂ ಇವರು ಕನ್ನಡಕ್ಕೆ ತಂದಿದ್ದಾರೆ. 1978ರಲ್ಲಿ ಭಾರತೀಯ ಭಾಷೆಗಳಲ್ಲೇ ಮೊತ್ತಮೊದಲನೆಯದಾಗಿ ಭಾವಗೀತಗಳ ದನಿಸುರುಳಿಯನ್ನು ಹೊರತಂದು ಸುಗಮಸಂಗೀತ ಕ್ಷೇತ್ರದಲ್ಲಿ ಹೊಸ ಹಾದಿಯನ್ನು ನಿರ್ಮಿಸಿದ ಹಿರಿಮೆ ಇವರದು. ‘ನಿತ್ಯೋತ್ಸವ’ ಎಂಬ ಭಾವಗೀತಗಳ ಆ ದನಿಸುರುಳಿಯು ಕನ್ನಡದ ಸುಗಮಸಂಗೀತ ಕ್ಷೇತ್ರದಲ್ಲಿ ಇಂದಿಗೂ ಜನಪ್ರಿಯವಾಗಿ ಉಳಿದಿದೆ.

ಇವರ ಯಾವುದೇ ಕವನವು ನಮ್ಮನ್ನು ಕ್ಷೋಭೆಗೀಡು ಮಾಡದೇ, ಯಾವುದೇ ಸಂದರ್ಭದಲ್ಲೂ ಮುದನೀಡುವ ರಸೋನ್ನತಿಯನ್ನೂ ಭಾವಸಂಚಾರವನ್ನೂ ಹೊಂದಿರುತ್ತದೆ.   ನಿಸಾರ್ ಅಹಮದರ ಕವಿತೆಗಳು ಬರೀ ಹೆಣ್ಣನ್ನೇ ಅಥವಾ ಬರೀ ಪ್ರೇಮವನ್ನೇ ಮುಖ್ಯ ವಸ್ತುವಾಗಿಸಿಲ್ಲ. ಅವರ ಕವಿತೆಗಳು ಮಾಸ್ತಿಯವರ ವಾಕಿಂಗನ್ನು,ಕಾಲೇಜು ಯೂನಿಯನ್ನು ಪ್ರೆಸಿಡೆಂಟನ ತಳಮಳವನ್ನು, ಬುರ್ಖಾ ಎಂಬ ಸಾಮಾಜಿಕ ಮೌಢ್ಯವನ್ನು, ವಿಮರ್ಶಕರ ಕಿರಿಕಿರಿಯನ್ನು, ರಾಜಕಾರಣಿಗಳ ದೊಂಬರಾಟವನ್ನು, ಸೋಗಲಾಡಿ ಶಿಕ್ಷಣವನ್ನು ಬಿಂಬಿಸುತ್ತದೆ.

ಇದೇ ಕಾರಣದಿಂದಾಗಿಯೇ ‘ಉತ್ತನೆಲದ ಗೆರೆ’ ‘ಆಗಷ್ಟೇ ಕೊಂದ ಕುರಿಮರಿಯ ರಕ್ತದ ಬಿಸುಪು’, ‘ಕೊಯ್ದ ಹಸಿಮರದ ಕಂಪು’, ‘ಸಮಾಜವಾದದ ರೊಟ್ಟಿಯ ತುಣುಕು’ ಇಂಥ ಸಾಮಾನ್ಯ ವಿಷಯಗಳ ಮೇಲೆ ಕವನ ಬರೆದ ಪಾಬ್ಲೊ ನೆರೂಡ ಇವರಿಗೆ ಅತ್ಯಂತ ಪ್ರಿಯರಾಗುತ್ತಾರೆ. ನೆರುಡನನ್ನು ಆಳವಾಗಿ ಅಭ್ಯಸಿಸಿರುವ ಇವರು ಅವನನ್ನು ಸುಮ್ಮನೇ ಕೋಟ್ಮಾಡುವವರ ವಿರುದ್ಧ ಸಹಜವಾಗಿ ಕೋಪಗೊಳ್ಳುತ್ತಾರೆ. ನಿಸಾರರ ಕವನಗಳಲ್ಲಿ ಮಷಾಲು, ನಾಚು, ಖುಲ್ಲಾ ಮುಂತಾದ ಅರಬ್ಬೀ ಪದಗಳ ಹಾಸುಹೊಕ್ಕು ಹೇರಳವಾಗಿರುತ್ತದೆ. . ‘ಇಪ್ಪತ್ತೆಂಟನಾಡುವುದು ನಡುವೆ ಅದೂ ಇದೂ ಇಪ್ಪತ್ತೆಂಟನಾಡುವುದು’ ಎಂಬಂಥ ಪದಚಮತ್ಕಾರಗಳೂ ಇರುತ್ತದೆ. . ‘ನಾಡಿದ್ದು ನಾಳೆಯ, ನಾಳೆ ಇವೊತ್ತಿನ, ಇಂದು ನಿನ್ನೆಯಪುನರಾವರ್ತನೆಯ ಏಕತಾನತೆಯಲ್ಲಿ’ ಎಂಬಂಥ ತರ್ಕ ಜಿಜ್ಞಾಸೆಯೂ ಇರುತ್ತದೆ. .

ಅದೇ ರೀತಿಯಲ್ಲಿ ಇವರ ‘ಇದು ಬರಿ ಬೆಡಗಲ್ಲೋ ಅಣ್ಣ’ ಎಂಬ ವಿಮರ್ಶಾ ಕೃತಿ ಇತರ ವಿಮರ್ಶೆಗಳಂತೆ ಕಹಿಯೂ ಆಗದೆ ತೇಲಿಕೆಯೂ ಆಗದೆ ಅತ್ಯಂತ ಭಾವಪೂರ್ಣವೂ ತೂಕವುಳ್ಳದ್ದೂಆಗಿ ವಿಮರ್ಶಾಲೋಕದಲ್ಲಿ ಕುವೆಂಪುರವರ ಸಮಾನರಾಗಿ ನಿಲ್ಲುವ ಶಕ್ತಿಯನ್ನು ಅವರಿಗೆ ದೊರಕಿಸಿದೆ.

ತಮ್ಮ ಹಲವು ಕೃತಿಗಳಿಗೆ ರಾಜ್ಯಸಾಹಿತ್ಯ ಅಕಾಡೆಮಿಯ ಬಹುಮಾನಗಳನ್ನು ನಿಸಾರ್ ಅಹಮದ್ ಪಡೆದಿದ್ದಾರೆ. ‘ಹಕ್ಕಿಗಳು’ ಎಂಬ ಕೃತಿಗೆ 1978ರಲ್ಲಿ, ‘ಇದು ಬರಿ ಬೆಡಗಲ್ಲೊ ಅಣ್ಣ’ ಎಂಬಕೃತಿಗೆ 1981ರಲ್ಲಿ ‘ಅನಾಮಿಕ ಆಂಗ್ಲರು’ ಕೃತಿಗೆ 1982ರಲ್ಲಿ, ‘ಹಿರಿಯರು ಹರಸಿದ ಹೆದ್ದಾರಿ’ ಕೃತಿಗೆ 1992ರಲ್ಲಿ ಅಕಾಡೆಮಿ ಪ್ರಶಸ್ತಿಗಳು ಬಂದಿವೆ. 1981ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 1996ರಲ್ಲಿ ಕುವೆಂಪು ಹೆಸರಿನ ವಿಶ್ವಮಾನವ ಪ್ರಶಸ್ತಿ, 1992ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, 1993ರಲ್ಲಿ ಬೆಂಗಳೂರು ಮಹಾನಗರಪಾಲಿಕೆಯ ಕೆಂಪೇಗೌಡಪ್ರಶಸ್ತಿ, 2003ರಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪುರಸ್ಕಾರ, 2006 ರ ಅರಸು ಪ್ರಶಸ್ತಿ, 2006 ಡಿಸೆಂಬರಿನಲ್ಲಿ ಶಿವಮೊಗ್ಗದಲ್ಲಿ ನಡೆದ,’73ನೇ ಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷ’ರಾಗಿ ಆಯ್ಕೆಯಾಗಿದ್ದ ನಿಸಾರ್ ರವರಿಗೆ 2012ರಲ್ಲಿ ಆಳ್ವಾಸ್ ನುಡಿಸಿರಿ ಪ್ರಶಸ್ತಿ 2014ರಲ್ಲಿ ಮಂಜೇಶ್ವರ ಗೋವಿಂದ ಪೈ ಪ್ರಶಸ್ತಿ ಭಾರತ ಸರಕಾರದ ಪದ್ಮಶ್ರೀ ಪ್ರಶಸ್ತಿ– ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದ ಹಿರಿಮೆ ಇವರದು.

ಇದಲ್ಲದೆ ಬೆಂಗಳೂರು ಮತ್ತು ಕರ್ನಾಟಕದ ವಿವಿಧ ಸಾಂಸ್ಕೃತಿಕ ಸಂಘಟನೆಗಳು ಹಾಗೂ ದುಬೈ, ಅಬುದಾಬಿ, ಕುವೈತ್, ಇಂಗ್ಲೆಂಡ್, ಸಿಂಗಾಪುರ ಮೊದಲಾದೆಡೆಗಳ ಕನ್ನಡ ಬಳಗಗಳುಇವರನ್ನು ಸಮ್ಮಾನಿಸಿವೆ. 1967 ಮತ್ತು 1985ರಲ್ಲಿ ಎರಡು ಬಾರಿ ಗಣರಾಜ್ಯೋತ್ಸವದ ಅಂಗವಾಗಿ ನವದೆಹಲಿಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಕವಿ ಸಮ್ಮೇಳನದಲ್ಲಿ ಕನ್ನಡವನ್ನುಪ್ರತಿನಿಧಿಸಿದ ಹಿರಿಮೆ ಇವರಿಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಮೂರು ವರ್ಷಗಳ ಕಾಲ ದುಡಿದಿದ್ದಾರೆ. ಡಾ. ಕೆ. ಎಸ್. ನಿಸಾರ್ ಅಹಮದ್ ಅವರ ಕವಿತೆಗಳುಇಂಗ್ಲೀಷ್, ಹಿಂದಿ, ಉರ್ದು, ತೆಲುಗು, ಮಲಯಾಳಂ, ಮರಾಠಿ, ತಮಿಳು ಹಾಗೂ ಚೀನಿ ಭಾಷೆಗಳಿಗೆ ಅನುವಾದಿತವಾಗಿವೆ. ಇವರ ಬದುಕು ಬರವಣಿಗೆಗಳ ಕುರಿತು ಬೆಂಗಳೂರು ಮತ್ತುಗುಲ್ಬರ್ಗಾ ವಿಶ್ವವಿದ್ಯಾಲಯಗಳಲ್ಲಿ ಪಿ‌ಎಚ್. ಡಿ. ಮಟ್ಟದ ಅಧ್ಯಯನಗಳು ನಡೆದು ಪುಸ್ತಕಗಳು ಹೊರಬಂದಿವೆ. ಕರ್ನಾಟಕ ಸರಕಾರವು ಇವರನ್ನು 2011ರಲ್ಲಿ ರಾಜ್ಯಮಟ್ಟದ ಉನ್ನತ ಶಿಕ್ಷಣಪರಿಷತ್ತಿನ ಕಾರ್ಯಕಾರ ಸಮಿತಿಗೆ ಸದಸ್ಯರಾಗಿ ನೇಮಕ ಮಾಡಿದೆ.

2006ರಲ್ಲಿ ಡಾ. ಕೆ. ಎಸ್. ನಿಸಾರ್ ಅಹಮದ್ ಅವರಿಗೆ ‘ನಿಸಾರ್ ನಿಮಗಿದೋ ನಮನ’ ಎಂಬ ಬೃಹತ್ ಅಭಿನಂದನ ಗ್ರಂಥವನ್ನು ಸಮರ್ಪಿಸಿ ಗೌರವಿಸಲಾಯಿತು. ಅವರ ಬಗೆಗೆಸಾಕ್ಷ್ಯಚಿತ್ರ, ಸಂದರ್ಶನ, ಕವನವಾಚನ ಮೊದಲಾದ ಸಿ.ಡಿಗಳು ಹೊರಬಂದಿವೆ. ‘ಕುರಿಗಳು ಸಾರ್ ಕುರಿಗಳು’ ಎಂಬ ಕವಿತೆಯ ಮೂಲಕ ಸಾಹಿತ್ಯಲೋಕಕ್ಕೆ ಆತ್ಮೀಯರಾದ ಡಾ. ಕೆ. ಎಸ್.ನಿಸಾರ್ ಅಹಮದ್ ಅವರು ಇಂದೂ ಆ ಜನಪ್ರಿಯತೆಯನ್ನೂ ವೈಚಾರಿಕತೆಯನ್ನೂ ಉಳಿಸಿಕೊಂಡು ಸಾಹಿತ್ಯಕ್ಷೇತ್ರದಲ್ಲಿ ಸಕ್ರಿಯರಾಗಿರುವುದು ನಮಗೆಲ್ಲ ಸಂತೋಷದ ಸಂಗತಿ.

ಇಷ್ಟೆಲ್ಲಾ ಪ್ರಶಸ್ತಿ, ಗೌರವಗಳೊಂದಿಗೆ ಕನ್ನಡಿಗರ ಹೃದಯ ಗೆದ್ದಿರುವ  ಇವರು ಒಬ್ಬ ವಿವಾದಾತೀತ ವ್ಯಕ್ತಿ. ಕನ್ನಡ ಸಾಹಿತ್ಯ ಲೋಕದಲ್ಲಿ ಜಾತಿಯ, ರಾಜಕಾರಣದ, ಪ್ರಾದೇಶಿಕತೆಯಲಾಬಿಗಳೇ ರಾರಾಜಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಯಾವ ಲಾಬಿಗೂ ಇಳಿಯದೆ ಸ್ವಯಂ ತೇಜೋಮಾನರಾಗಿರುವ ಯುಗದ ಕವಿ ಯಾಗಿದ್ದಾರೆ. ಅವರೊಮ್ಮೆ ಯಾವುದೋಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಜೊತೆಯಲ್ಲಿ ತಮ್ಮ ಪತ್ನಿಯನ್ನೂ ಕರೆದೊಯ್ಯಬೇಕಿತ್ತು. ಸರಿ ಶುರುವಾಯಿತು ಅವರ ಪತ್ನಿಯ ಮೇಕಪ್ಪು. ವಸ್ತ್ರಾಲಂಕಾರ, ಪ್ರಸಾಧನ, ಒಡವೆಗಳಭೂಷಣ ಎಲ್ಲವೂ ಆದವು. ನಮ್ಮ ಕವಿಯೂ ಪತ್ನಿಯ ಸರ್ವಾಲಂಕಾರ ಸೊಬಗನ್ನು ಕಣ್ತಣಿಯೆ ನೋಡಿ ಹೆಮ್ಮೆಪಟ್ಟುಕೊಂಡರು. ಇನ್ನೇನು ಹೊರಡಬೇಕು ಆಗ ಅವರ ಪತ್ನಿ ಬುರ್ಖಾತೊಟ್ಟುಕೊಂಡರಂತೆ. ಎಲ್ಲ ಅಲಂಕಾರವನ್ನೂ ಆ ಬುರ್ಖಾ ಮರೆ ಮಾಡಿದ ಬಗೆಯನ್ನು ಕಂಡು ವಿಷಾದಿಸುತ್ತಾ ಅವರು ಕವನ ಬರೆದರು. ನವಿರು ಹಾಸ್ಯ ಮತ್ತು ವಿಚಾರವಂತಿಕೆಯಿಂದಕೂಡಿದ ಆ ಕವನಕ್ಕೆ ಮುಸ್ಲಿಂ ಬಾಂಧವರು ಕೋಪಗೊಳ್ಳಲಿಲ್ಲ, ಫತ್ವಾ ಹೊರಡಿಸಲಿಲ್ಲ. ಇದು ಕವಿ ಕೆ ಎಸ್ ನಿಸಾರ್ ಅಹಮದರ ಸರ್ವವಂದ್ಯ ವರ್ಚಸ್ಸಿಗೆ ಸಾಕ್ಷಿ.

ಇಂತಹಾ ಸಹೃದಯ ಕವಿವರ್ಯರು ಇಂದು ತಮ್ಮ ೮೦ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ ಕನ್ನಡಕ್ಕೆ ಇನ್ನೊಬ್ಬ ರಾಷ್ಟ್ರಕವಿ ಆಯ್ಕೆ ಪ್ರಕ್ರಿಯೆಯೂ ನಡೆಯುತ್ತಿದ್ದು,ನ್ನಮ್ಮೆಲ್ಲರ ಪ್ರೀತಿಯ ನಿಸಾರ್ ಅಹಮದ್ ಮುಂದಿನ ರಾಷ್ಟ್ರಕವಿಯಾಗಲೆದು ಹಾರೈಸೋಣ…

ಚಿತ್ರಕೃಪೆ : ದಿ.ಹಿಂದೂ

1 ಟಿಪ್ಪಣಿ Post a comment
 1. ಫೆಬ್ರ 5 2015

  ಬಹಳ ನಿಸ್ಪೃಹ, ಸಜ್ಜನ ವ್ಯಕ್ತಿ ಇವರು.
  ಆದರೆ, ಇಂತಹ ಶ್ರೇಷ್ಠರಿಗೂ ಕಷ್ಟ ಕಾಲ ಬರುತ್ತದೆ ಎಂದರೆ ಆಶ್ಚರ್ಯವೆನಿಸುತ್ತದೆ.
  ಅಂತಹ ಸಮಯದಲ್ಲಿ ನಮ್ಮ ಮಧ್ಯೆ ಇರುವ ರಾಜಕಾರಣಿಯೊಬ್ಬರು ಇವರಿಗೆ ಸಹಾಯ ಮಾಡಿದರು ಎನ್ನುವುದು ಭವಿಷ್ಯದ ಕುರಿತಾಗಿ ನಂಬಿಕೆ ಇರಿಸುವಂತೆ ಮಾಡುತ್ತದೆ.
  http://nimmasuresh.blogspot.com/2012/03/wishing-well-known-kannada-poet-sri-ks.html
  ಅದರಲ್ಲೂ ‘ಪ್ರಗತಿಪರ’ರೆಲ್ಲರೂ ಕೋಮುವಾದಿ ಎಂದು ಜರೆಯುವ ಪಕ್ಷಕ್ಕೆ ಸೇರಿದೀ ಪ್ರಾಮಾಣಿಕ, ಸಜ್ಜನ ರಾಜಕಾರಣಿ, ಮುಸಲ್ಮಾನ ವ್ಯಕ್ತಿಗೆ ಸಹಾಯ ಮಾಡಿದರೆನ್ನುವುದನ್ನು ಕೇಳಿದರೆ, ‘ಪ್ರಗತಿಪರ’ರಿಗೆ ಆಶ್ಚರ್ಯವಾಗಬಹುದು.

  ಮತ್ತು ಕೆ.ಎಸ್.ನಿಸಾರ್ ಅಹ್ಮದ್ ಅವರ ಕಷ್ಟದ ಸಮಯದಲ್ಲಿ, ‘ಪ್ರಗತಿಪರ’ರು, ‘ಜಾತ್ಯಾತೀತ’ರು ಇವರ ಕುರಿತಾಗಿ ಏನನ್ನೂ ಮಾಡಲಿಲ್ಲ ಎನ್ನುವುದು, ಆ ಗುಂಪಿಗೆ ಸೇರಿದವರ ಕುರಿತಾಗಿ ತಿಳಿಸುತ್ತದೆ! 😉

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments