ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 18, 2015

8

ವಿವೇಕಾನಂದರ ವಿಚಾರಗಳು: ಸಮಾಜ ಸುಧಾರಣೆ

‍ನಿಲುಮೆ ಮೂಲಕ

– ಪ್ರೊ.ರಾಜಾರಾಮ ಹೆಗಡೆ

ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ

Swami Vivekanandaಕನ್ನಡದ ಅಂಕಣಕಾರರೊಬ್ಬರು ನಾಲ್ಕಾರು ವರ್ಷಗಳ ಹಿಂದೆ ವಿವೇಕಾನಂದರ ಕುರಿತು ಬರೆದ ಲೇಖನವೊಂದು ಜಾಲತಾಣಗಳಲ್ಲಿ ಇತ್ತೀಚೆಗೆ ಹರಿದಾಡಿತು. ಇದು ತುಂಬಾ ವಿವಾದಾತ್ಮಕವಾದ ಲೇಖನವಾಗಿತ್ತು, ಕಾರಣ, ವಿವೇಕಾನಂದರ ಕುರಿತು ಇರುವ ಅತಿಮಾನುಷ ಕಲ್ಪನೆಗಳನ್ನು ಒಡೆಯುವುದು ತನ್ನ ಗುರಿ ಎಂಬುದೇ ಆ ಲೇಖನದ ಘೋಷಣೆ. ಆ ಲೇಖನದಲ್ಲೇ ವಿವೇಕಾನಂದರು ಮತ್ತೊಂದು ರೀತಿಯ ಅತಿಮಾನುಷರಾಗಿ ಚಿತ್ರಿತರಾದುದು ವಿಪರ್ಯಾಸ. ಅದೆಂದರೆ ಅವರು ಅಕ್ಷರಶಃ ಇಂದಿನ ಪ್ರಗತಿಪರರಂತೆ ವಿಚಾರ ಮಾಡುತ್ತಿದ್ದುದು: ಹಿಂದೂ ಧರ್ಮವೊಂದು ನರಕ, ಹಾಗಾಗಿ ಅದು ನಾಶವಾಗಬೇಕು, ಜಾತಿ ವ್ಯವಸ್ಥೆ ಹೋಗಬೇಕು, ಕ್ರಿಸ್ತನ ಪಾದವನ್ನು ತಮ್ಮ ರಕ್ತದಿಂದ ತೊಳೆದರೂ ಕಡಿಮೆಯೇ, ಭಾರತೀಯ ಸಂಸ್ಕøತಿಗೆ ಇಸ್ಲಾಂನ ಶರೀರ ಇರಬೇಕು, ಬ್ರಾಹ್ಮಣರು ಭಾರತಕ್ಕೆ ಶಾಪ, ಇತ್ಯಾದಿ. ಅವರು ಮಾಂಸವನ್ನು ತಿಂದಿದ್ದು, ಹುಕ್ಕಾ ಸೇದಿದ್ದು, ಹಾಗೂ ಹಲವಾರು ರೋಗಗಳಿಂದ ನರಳಿದ್ದು ಆ ಲೇಖನಕ್ಕೆ ಬಹಳ ನಿರ್ಣಾಯಕವಾಗಿ ಕಂಡಿದೆ. ಏಕೆಂದರೆ ಇಂದ್ರಿಯಗಳ ಮೇಲೆ ನಿಯಂತ್ರಣವನ್ನೇ ಕಳೆದುಕೊಂಡು ಇಲ್ಲದ ಚಟಗಳನ್ನು, ರೋಗಗಳನ್ನು ಆಹ್ವಾನಿಸಿಕೊಂಡು, ಸಮಾಜವನ್ನು( ತನಗೆ ಬೇಕಾದಾಗ) ಧಿಕ್ಕರಿಸಿ ಬದುಕುವುದು ಪ್ರಗತಿಪರ ಜೀವನ ಶೈಲಿಯ ಸಂಕೇತವಾಗಿದೆ. ಇಂಥವರಿಗೆ ವಿವೇಕಾನಂದರು ಪ್ರಗತಿಪರರಾಗಬೇಕಾದರೆ ಹೀಗೇ ಇರಬೇಕಾದುದು ಸಹಜ.

ಒಬ್ಬ ವ್ಯಕ್ತಿಯು ಗತಿಸಿ 110 ವರ್ಷಗಳಾದ ಮೇಲೆ ಅವನ ಜೀವನ ಶೈಲಿ ಹಾಗೂ ದೈಹಿಕ ಆಕೃತಿಯ ಕುರಿತು ಅವನ ಆರಾಧಕರಲ್ಲಿ ಏನೇನು ತಪ್ಪು ಕಲ್ಪನೆಗಳು ಹುಟ್ಟಿಕೊಳ್ಳುತ್ತವೆ ಎಂಬುದು ಅಷ್ಟು ಮುಖ್ಯವಲ್ಲ. ಹಾಗೂ ಜೀವನ ಶೈಲಿ ಮತ್ತು ದೇಹಸ್ಥಿತಿಗಳು ಒಬ್ಬನ ಜ್ಞಾನಸಾಧನೆಯನ್ನು ಆಳೆಯಲು ಮಾನದಂಡಗಳಲ್ಲ. ಭಾರತೀಯ ಅಧ್ಯಾತ್ಮ ಪರಂಪರೆಯು ಈ ಕುರಿತು ಯಾವುದೇ ಸಂದೇಹವನ್ನೂ ಉಳಿಸುವುದಿಲ್ಲ. ಹಾಗಾಗಿ ನಿಜವಾಗಿಯೂ ಕಾಳಜಿ ವಹಿಸಬೇಕಾದದ್ದು ವಿವೇಕಾನಂದರ ವಿಚಾರಗಳ ಕುರಿತು ಹುಟ್ಟಿಕೊಳ್ಳಬಹುದಾದ ತಪ್ಪು ಕಲ್ಪನೆಗಳ ಕುರಿತು. ಅವರ ವಿಚಾರಗಳ ಕುರಿತು ಏನೇನು ವಿಕೃತ ಚಿತ್ರಣಗಳು ಹುಟ್ಟಿಕೊಂಡಿವೆಯೆಂಬುದಕ್ಕೆ ಈ ಮೇಲಿನ ಲೇಖನವೂ ಒಂದು ಉದಾಹರಣೆ. ಇಲ್ಲಿ ವಿವೇಕಾನಂದರ ಭಾಷಣಗಳಿಂದ ನಾಲ್ಕಾರು ಆಯ್ದ ಸಾಲುಗಳನ್ನು ಸಂದರ್ಭದಿಂದ ಎತ್ತಿ ತಮ್ಮ ಪ್ರತಿಪಾದನೆಗೆ ಅಸಹಜವಾಗಿ ಒಗ್ಗಿಸಿಕೊಳ್ಳಲಾಗಿದೆ. ವಿವೇಕಾನಂದರ ಭಾಷಣಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಇಂದು ಪ್ರಗತಿಪರರೆಂದು ಕರೆದುಕೊಳ್ಳುವವರು ಪ್ರತಿಪಾದಿಸಬಯಸುವ ಸಮಾಜ ಸುಧಾರಣೆಯ ಕುರಿತು ಒಟ್ಟಾರೆಯಾಗಿ ವಿವೇಕಾನಂದರ ಅಭಿಪ್ರಾಯಗಳು ಏನು ಎಂಬುದು ತಿಳಿದುಬರುತ್ತದೆ. ಈ ಕೆಳಗೆ ನಾನು ವಿವೇಕಾನಂದರ ಹೇಳಿಕೆಗಳನ್ನೇ ಸಂಕ್ಷಿಪ್ತಗೊಳಿಸಿದ್ದೇನೆ.

ವಿವೇಕಾನಂದರು ತಮ್ಮ ಕಾಲದಲ್ಲಿ ಇದ್ದ ಸಮಾಜ ಸುಧಾರಕರನ್ನು ಢೋಂಗಿಗಳು ಎಂದು ಪರಿಗಣಿಸಿದ್ದರು. ಅದಕ್ಕೆ ಕಾರಣ ಹೀಗಿದೆ: ಇಂಥ ಸಮಾಜ ಸುಧಾರಕರಿಗೆ ತಾವು ಏನು ಹೇಳುತಿದ್ದೇವೆಂಬುದೇ ಅರ್ಥವಾಗಿಲ್ಲ. ಹಿಂದೂ ಧರ್ಮದ ಆಚರಣೆಗಳು ಕೆಡುಕು, ಅವನ್ನು ಮಾಡಬಾರದು ಎಂದು ಇಂಥ ಸುಧಾರಕರು ಹೇಳುತ್ತಾರೆ, ಆದರೆ ಏಕೆ ಮಾಡಬಾರದೆಂದು ಪ್ರಶ್ನಿಸಿದರೆ ಅವರಿಗೆ ಏಕೆಂಬುದೇ ತಿಳಿಯದು, ಈ ಸುಧಾರಕರು ಮೂರ್ತಿಪೂಜೆಯು ಪಾಪ ಎಂಬುದಾಗಿ ಹೇಳುತ್ತಾರೆ. ಆದರೆ ರಾಮಕೃಷ್ಣ ಪರಮಹಂಸರು ಮೂರ್ತಿಪೂಜೆಯಿಂದಲೇ ಜ್ಞಾನವನನ್ನು ಹೊಂದಿದರು. ಅದರಲ್ಲೇನು ಪಾಪವಿದೆ? ಎಂದು ಕೇಳಿದರೆ ಬ್ರಿಟಿಷರು ಹಾಗೆ ಹೇಳುತ್ತಾರೆ ಎಂಬುದನ್ನು ಬಿಟ್ಟರೆ ಈ ಸುಧಾರಕರಿಗೆ ನಮ್ಮ ಆಚರಣೆಗಳನ್ನು ದೂಷಿಸಲು ಬೇರೆ ಕಾರಣವೇ ಇಲ್ಲ. ಇಂಥ ಕರೆಗಳನ್ನು ಕೊಡುವವರೆಲ್ಲ ಆಧುನಿಕ ವಿದ್ಯಾವಂತರು ಹಾಗೂ ಅವರಲ್ಲಿ ಒಬ್ಬರೂ ಅನ್ಯರಿಗಾಗಿ ತಮ್ಮ ಸುಖವನ್ನು ತ್ಯಾಗಮಾಡುವವರಲ್ಲ, ಅವರು ಕೇವಲ ಪ್ರಚಾರ ಜೀವಿಗಳು, ಟೊಳ್ಳು ವ್ಯಕ್ತಿತ್ವಗಳು. ಭಾರತೀಯ ಸಂಸ್ಕೃತಿಯನ್ನು ಅಲ್ಲಗಳೆಯುವವನು ಹಾಗೂ ಅದನ್ನು ಕಣ್ಮುಚ್ಚಿ ಅನುಕರಿಸುವವನು ಇಬ್ಬರೂ ಅದಕ್ಕೆ ಅಪಾಯಕಾರಿಯೇ ಆಗಿದ್ದರೂ ಕೂಡ ಇಂಥ ಸುಧಾರಕರಿಗಿಂತ ಒಬ್ಬ ಸಂಪ್ರದಾಯಸ್ಥನನ್ನೇ ತಾನು ಬೆಂಬಲಿಸುತ್ತೇನೆ, ಏಕೆಂದರೆ ಕಡೇ ಪಕ್ಷ ಆತನಿಗೊಂದು ಗಟ್ಟಿ ವ್ಯಕ್ತಿತ್ವವಾದರೂ ಇದೆ ಎಂಬುದಾಗಿ ವಿವೇಕಾನಂದರು ಹೇಳಿದ್ದರು.

ವಿವೇಕಾನಂದರು ತಾನೊಬ್ಬ ಸಮಾಜ ಸುಧಾರಕನಲ್ಲ ಎಂಬುದನ್ನು ಒತ್ತಿ ಹೇಳುತ್ತಾರೆ. ಹಾಗೂ ಅವರ ಅನೇಕ ಭಾಷಣಗಳಲ್ಲಿ ಅವರು ಈ ಅಂಶವನ್ನು ಮನದಟ್ಟುಮಾಡಲು ಪ್ರಯತ್ನಿಸುತ್ತಾರೆ. ಏಕೆ ಸಮಾಜ ಸುಧಾರಕರನ್ನು ಅವರು ಅಷ್ಟೊಂದು ಕಟುವಾಗಿ ಟೀಕಿಸುತ್ತಿದ್ದರು? ಹಿಂದೂ ಸಂಸ್ಕೃತಿಯಲ್ಲಿ ಸುಧಾರಣೆಯೇ ಬೇಡ ಎಂಬುದು ಅವರ ಅಭಿಮತವಾಗಿರಲಿಲ್ಲ. ಆದರೆ ಸುಧಾರಣೆಯ ಹೆಸರಿನಲ್ಲಿ ಹಿಂದೂ ಸಂಸ್ಕೃತಿಯನ್ನೇ ನಿರಾಕರಿಸುವ ಒಂದು ಪೃವೃತ್ತಿಯು ಅಂದಿನ ಆಧುನಿಕ ವಿದ್ಯಾವಂತರಲ್ಲಿ ಬೆಳೆಯುತ್ತಿರುವುದು ಅಪಾಯಕಾರಿ ಎಂಬುದು ಅವರ ಧೋರಣೆಯಾಗಿತ್ತು. ಅಂದರೆ ಈ ಪೃವೃತ್ತಿಯ ಹಿಂದೆ ಅನ್ಯ ಸಂಸ್ಕೃತಿಗಳ ಅಂಧಾನುಕರಣೆ, ಹಾಗೂ ಅವುಗಳ ಕೈಗೊಂಬೆಯಾಗಿ ಸ್ವಂತ ಸಂಸ್ಕೃತಿಯನ್ನೇ ನಾಶಮಾಡುವ ಪೃವೃತ್ತಿ ಅವರಿಗೆ ಕಾಣಿಸುತ್ತದೆ. ಹಿಂದೂ ಅಧ್ಯಾತ್ಮವು ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾದ ಹಾಗೂ ವೈಜ್ಞಾನಿಕವಾದ ಜೀವನ ಕಲ್ಪನೆಯಾಗಿದೆ. ಹಿಂದೂ ಆಚರಣೆಗಳು ಈ ನಿಟ್ಟಿನಲ್ಲಿ ಅಂಥ ಜೀವನ ಸಾಧನೆಗೆ ಅಳವಡಿಸಿಕೊಂಡಂಥವು. ಹಿಂದೂಗಳ ಗ್ರಂಥಗಳು ಈ ಧ್ಯೇಯಾದರ್ಶವನ್ನು ಬಿತ್ತರಿಸುತ್ತವೆ. ಅಂಥದೊಂದು ಪರಂಪರೆಯನ್ನು ಹಾಗೂ ಅದು ಕಂಡುಕೊಂಡ ಆಚರಣೆಗಳನ್ನು ನಿರಾಕರಿಸುವವರು ಅದರ ಶ್ರೇಷ್ಠತೆಯನ್ನು ತಿಳಿದುಕೊಳ್ಳದೇ ಪಾಶ್ಚಾತ್ಯರು ಹೇಳಿದ್ದನ್ನು ಗಿಳಿಪಾಠ ಒಪ್ಪಿಸುತ್ತಿದ್ದಾರೆ.

ಅವರು ಸುಧಾರಣಾವಾದಿಗಳ ಕಾಳಜಿಯನ್ನು ತಾನು ಗೌರವಿಸುತ್ತೇನೆ ಎನ್ನುತ್ತಾರೆ. ಆದರೆ ವಸಾಹತು ಕಾಲದ ಸಮಾಜ ಸುಧಾರಣೆಯು ಪ್ರಾರಂಭವಾಗಿ ನೂರು ವರ್ಷಗಳಾದರೂ ಅದು ನಮ್ಮ ಜನಕ್ಕೆ ಏನು ಒಳ್ಳೆಯದು ಮಾಡಿದೆ? ಅದು ಸುಧಾರಣೆಯಲ್ಲ, ನಮ್ಮ ಸಂಸ್ಕೃತಿಯ ನಾಶ. ಹಾಗಾಗಿ ಅಂಥ ಸುಧಾರಣೆಗಳಿಂದ ನಿಂದನೆಯ ಸುರಿಮಳೆಯಾಗಿದೆಯೇ ಹೊರತೂ ನಮ್ಮ ಸಮಾಜಕ್ಕೆ ಒಳ್ಳೆಯದಾಗಿಲ್ಲ ಎನ್ನುತ್ತಾರೆ ವಿವೇಕಾನಂದರು. ಅಷ್ಟೇ ಅಲ್ಲ, ಸಂಪ್ರದಾಯಪರರೂ ಕೂಡ ಅಷ್ಟೇ ಕೆಟ್ಟದಾಗಿ ಅವರಿಗೆ ಪ್ರತಿಕ್ರಿಯಿಸಿ ಹಿಂದೂ ಜನಾಂಗಕ್ಕೇ ನಾಚಿಕೆ ಹುಟ್ಟಿಸುವ ಸಾಹಿತ್ಯ ರಾಶಿಬಿದ್ದಿದೆ ಎನ್ನುತ್ತಾರೆ.

ಈ ಸಂದರ್ಭದಲ್ಲಿ ಅವರು ಈ ಸಮಾಜದಲ್ಲಿನ ಅನ್ಯಾಯವನ್ನು ತೊಡೆಯಲು ಇಂಥ ಸುಧಾರಣೆಯ ಮಾರ್ಗ ಸರಿಯಾದುದಲ್ಲ ಎಂಬ ಅಭಿಪ್ರಾಯವನ್ನು ಹೊಂದಿದ್ದರು. ಅದರಲ್ಲೂ ಕಾಯ್ದೆ ಕಾನೂನುಗಳನ್ನು ಪಾಸುಮಾಡಿ ಬಲಾತ್ಕಾರದಿಂದ ಜನರನ್ನು ಸುಧಾರಿಸುತ್ತೇನೆ ಎನ್ನುವುದು ಘರ್ಷಣೆಯನ್ನು, ಅನ್ಯಾಯವನ್ನು, ಅಮಾನವೀಯತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅದಕ್ಕೆ ಉದಾಹರಣೆಯಾಗಿ ಅವರು ಗುಲಾಮಗಿರಿಯ ನಿರ್ಮೂಲನೆಗಾಗಿ ಅಮೇರಿಕಾದಲ್ಲಿ ಕಾನೂನುಗಳನ್ನು ತಂದಮೇಲೆ ಪ್ರಧಾನ ಧಾರೆಯ ಜನರು ಅವರ ಜವಾಬ್ದಾರಿ ತಮಗೆ ಇಲ್ಲ ಎಂಬ ಧೋರಣೆಯನ್ನು ತಳೆದದ್ದು ಹಾಗೂ ಕರಿಜನರು ಬಹಿಷ್ಕೃತರಾಗಿ ಅವರ ಸ್ಥಿತಿ ಮತ್ತಷ್ಟು ಕರುಣಾಜನಕವಾಗಿರುವುದನ್ನು ಕುರಿತು ನಮ್ಮ ಗಮನ ಸೆಳೆಯುತ್ತಾರೆ.

ವಸಾಹತು ಕಾಲದಲ್ಲಿ ಬ್ರಿಟಿಷರು ಭಾರತವನ್ನು ತಮ್ಮ ಸ್ವಾಧೀನ ಪಡಿಸಿಕೊಂಡು ಆಳ್ವಿಕೆ ಪ್ರಾರಂಭಿಸಿದ ಮೇಲೆ ಈ ಸಮಾಜ ಸುಧಾರಣೆಗಳು ಹುಟ್ಟಿಕೊಂಡವು. ಹಾಗಾಗಿ ಈ ಸುಧಾರಣೆಗಳಿಗೂ, ಭಾರತೀಯರ ಗುಲಾಮಗಿರಿಗೂ, ಇಂಗ್ಲೀಷ್ ವಿಧ್ಯಾಭ್ಯಾಸಕ್ಕೂ, ಸೆಮೆಟಿಕ್ ರಿಲಿಜನ್ನುಗಳು ಹಿಂದೂಯಿಸಂ ಒಂದು ಸುಳ್ಳು ರಿಲಿಜನ್ನು ಎನ್ನುತ್ತಿದ್ದುದಕ್ಕೂ ಸಂಬಂಧ ನೇರವಾಗಿಯೇ ಇತ್ತು. ವಿವೇಕಾನಂದರು ಆಧುನಿಕ ವಿಧ್ಯಾಭ್ಯಾಸವು ನಮ್ಮ ಸಂಸ್ಕೃತಿಯ ಕುರಿತು ನಕಾರಾತ್ಮಕ ಭಾವನೆಯನ್ನು ಹುಟ್ಟಿಸುತ್ತದೆ ಎಂಬುದನ್ನು ಗುರುತಿಸಿದ್ದರು. ‘ಒಂದು ಮಗುವು ಇಂಗ್ಲೀಷ್ ಶಾಲೆಗೆ ಹೋದ ಮೊದಲ ದಿನವೇ ತನ್ನ ತಂದೆ ಮೂರ್ಖ ಎನ್ನಲು ಕಲಿಯುತ್ತದೆ. ಎರಡನೆಯ ದಿನ ತನ್ನ ಅಜ್ಜನಿಗೆ ತಲೆಕೆಟ್ಟಿದೆ ಎನ್ನಲು ಕಲಿಯುತ್ತದೆ…. ಹದಿನಾರನೆಯ ವರ್ಷದಲ್ಲಿ ಅದರ ತಲೆತುಂಬ ನಮ್ಮ ಸಂಸ್ಕೃತಿಯ ಬಗ್ಗೆ ನಕಾರಾತ್ಮಕ ಭಾವನೆಗಳೇ ತುಂಬಿರುತ್ತವೆ’ ಎನ್ನುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಭಾರತೀಯ ಸಂಸ್ಕೃತಿಗೆ ಒದಗಿರುವ ಅಪಾಯವನ್ನು ಅವರು ಗ್ರಹಿಸಿದ್ದರು. ರಾಮಕೃಷ್ಣರನ್ನು ಸಂಧಿಸಿದ ನಂತರ ಅವರ ಇಡೀ ಜೀವನವೇ ಆ ಅಪಾಯದ ವಿರುದ್ಧದ ಹೋರಾಟವಾಯಿತು.

ಮುಂದುವರಿಯುವುದು…

(ಹೊಸದಿಂಗತ ಪತ್ರಿಕೆಯಲ್ಲಿ ಪ್ರಕಟಿತ)

8 ಟಿಪ್ಪಣಿಗಳು Post a comment
 1. ಫೆಬ್ರ 18 2015

  ವಿವೇಕಾನಂದರ ವಿಚಾರದಲ್ಲಿ ಚರ್ಚೆ ಮಾಡುವಷ್ಟು ಪಂಡಿತ ನಾನಲ್ಲ. ಅವರ ವಿಚಾರ ಲಹರಿಯನ್ನು ಓದಿದ ನಂತರ ತರ್ಕಬದ್ಧವಾಗಿ ನನಗೆ ಸರಿಯೆನಿಸಿದ್ದನ್ನು ನಾನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುತ್ತೇನೆ.

  ಉತ್ತರ
 2. ವಾಸು.
  ಫೆಬ್ರ 18 2015

  ವಿವೇಕಾನಂದರ ಬಗ್ಗೆ ಪುಂಖಾನು ಪುಂಖವಾಗಿ ಬರೆಯುವ ಇವರು ಅವರು ಸಂನ್ಯಾಸ ಧರ್ಮವನ್ನು ಉಲ್ಲಂಘಿಸಿ, ಹಿಂಸೆಯಿಂದ ಕೂಡಿದ ಮಾಂಸಾಹಾರವನ್ನು ಬೆಂಬಲಿಸುವುದರ ಬಗ್ಗೆ ಏಕೆ ಬರೆಯುವುದಿಲ್ಲ? ಮಾಂಸಾಹಾರ ದಿಂದ ರಾಜಸವೃತ್ತಿ ವುದ್ಧಿಯಾಗುವುದೆಂದು ಅವರ ನಂಬಿಕೆ ಎಷ್ಟರ ಮಟ್ಟಿಗೆ ಸತ್ಯ? ಹಾಗೆ ನೋಡಿದರೆ ಬಂಗಾಳಿಗಳು ಅಂದು ಮತ್ತು ಇಂದು ಬಹು ಪಾಲು ಮಾಂಸಾಹಾರಿಗಳೇ. ಅವರಲ್ಲಿ ರಾಜಸವೃತ್ತಿ ಪ್ರಬಲಗೊಂಡು ಬ್ರಿಟಿಷರನ್ನು ಏಕೆ ಭಾರತದಿಂದ ಅಟ್ಟಲು ಸಾಧ್ಯವಾಗಲಿಲ್ಲ.? ಮುಸಲ್ಮಾನರ ಕ್ರೂರ ಶಾಸನವನ್ನು ಅವರು ಹೇಗೆ ಸಹಿಸಿದರು? ಇವಕ್ಕೆಲ್ಲಾ ವಿವೇಕಾನಂದರ ಉತ್ತರವೇನಿತ್ತು ಎಂದು ಯಾರೂ ಏಕೆ ಪ್ರಶ್ನಿಸುವುದಿಲ್ಲ?
  ಹಿಂದೂ ಸಮಾಜದ ಕಾಯಕಲ್ಪಕ್ಕೆ ವಿವೇಕಾನಂದರ ಕೊಡುಗೆ ಏನು? ನಿಜ. ಅವರು ಜಾತಿ ಪದ್ಧತಿಯನ್ನು ಮತ್ತು ಮಡಿವಂತಿಕೆಯನ್ನು ಖಂಡಿಸಿದರು, ಆದರೆ ಇದಕ್ಕೆ ವಿಕಲ್ಪವೇನು ಎಂದು ಅವರು ಹೇಳಲಿಲ್ಲ. ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕೊಡುಗೆಯೇನು? ರಾಮಕೃಷ್ಣ ಆಶ್ರಮದ ಸಂನ್ಯಾಸಿಗಳು ಎಷ್ಟರ ಮಟ್ಟಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ? ಹಾಗೆ ನೋಡಿದರೆ ಇದಕ್ಕೆಲ್ಲಾ ಸಿಗುವ ಉತ್ತರ ಶೂನ್ಯವೇ
  ಹಿಂದೂ ಸಮಾಜದ ಸಮಗ್ರ ಕಾಯಕಲ್ಪಕ್ಕೆ ನಿಷ್ಟೆಯಿಂದ ದುಡಿದು ಅದಕ್ಕೆ ಶಾಶ್ವತ ಪರಿಹಾರ ತೋರಿಸಿದವರೆಂದರೆ ಆರ್ಯ ಸಮಾಜದ ಪ್ರವರ್ತಕ ಸ್ವಾಮಿ ದಯಾನಂದರೇ. ಸ್ವಾತಂತ್ರ್ಯ ಹೋರಾಟಕ್ಕೆ ಕರೆ ಕೊಟ್ಟ ಮೊದಲನೇ ಸಂನ್ಯಾಸಿ ಸ್ವಾಮಿ ದಯಾನಂದರು. ಆದುದರಿಂದಲೇ, ತಿಲಕ್ ರವರು ದಯಾನಂದರನ್ನು ಸ್ವಾತಂತ್ರ್ಯ ಪದದ ಉಚ್ಛಾರಣೆ ಮಾಡಿದ ಪ್ರಥಮ ವೈಕ್ತಿ ಎಂದು ಕೊಂಡಾಡಿದರೆ, ಸ್ವಾತಂತ್ರ್ಯ ವೀರ ಸಾವರಕರ್ ದಯಾನಂದರನ್ನು ಸ್ವಾಧೀನತಾ ಹೋರಾಟದ ಮೊದಲನೇ ಯೋಧ ಎಂದು ಬಣ್ನಿಸಿದರು. ದಯಾನಂದರ ಉಜ್ವಲ ಸ್ವಾತಂತ್ರ್ಯ ಪ್ರೇಮ ಮತ್ತು ಅದಕ್ಕಾಗಿ ಹೋರಾಟಕ್ಕಾಗಿ ನೀಡಿದ ಕರೆಗೆ ಓಗೊಟ್ಟ ಮಂದಿ ಅಸಂಖ್ಯ. ಸ್ವಾಧೀನತಾ ಸಂಗ್ರಾಮದಲ್ಲಿ ಆರ್ಯಸಮಾಜದ ಪಾಲು ಅಸದೃಶವಾದದು. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲುಗೊಂಡ ಶೇ60% ಮಂದಿ ದಯಾನಂದ ವಿಚಾರ ಪ್ರೇರಿತ ಆರ್ಯಸಮಾಜದವರೇ ಎಂದು ಸ್ವತಃ ಮಹಾತ್ಮ ಗಾಂಧಿ ಯವರೆ ಕೃತಜ್ಞತೆಯಿಂದ ಸ್ಮರಿಸಿದ್ದಾರೆ, ವಿವೇಕಾನಂದರು ಇಂತಹ ಕೀರ್ತಿ ಪಾತ್ರರೇ?
  ಹಿಂದೂ ಸಮಾಜದ ಕಾಯಕಲ್ಪಕ್ಕಾಗಿ ಅವರು ಶುದ್ಧಿ ಆಂದೋಲನವನ್ನು ಜಾರಿಗೆ ತಂದರು. ಈಗ ನಾವು ಕೇಳುತ್ತಿರುವ ಘರ್ ವಾಪಸಿಯನ್ನು ದಯಾನಂದರೇ 140 ವರ್ಷಗಳ ಹಿಂದೆ ಹುಟ್ಟು ಹಾಕಿದ್ದರು. ಎಲ್ಲಿಯವರೆಗೆ ಒಂದು ಉಪಾಸನ ಕ್ರಮ ಇರುವುದಿಲ್ಲವೋ ಅಲ್ಲಿಯವರೆಗೆ ಹಿಂದೂ ಸಂಘಟನೆ ಕಷ್ಟ ಸಾದ್ಯವೆಂದು ಎಲ್ಲರಿಗೂ ಅನ್ವಯವಾಗುವ ವೇದೋಕ್ತ ಉಪಾಸನಾ ಪದ್ಧತಿಯನ್ನು ಜಾರಿಗೆ ತಂದರು. ಜಾತಿ ವ್ಯವಸ್ಥೆಯ ವಿರುದ್ಧ ಶಂಖನಾದ ಮಾಡಿದ ಅವರು ವೈದಿಕ ವರ್ಣವ್ಯವಸ್ಥೆಯನ್ನು ಎತ್ತಿ ಹಿಡಿದರು. ಸ್ವತಃ ಅಂಬೇಡ್ಕರ್ ರವರೇ ದಯಾನಂದರ ಈ ನಿಲುವನ್ನು ಮೆಚ್ಚಿದ್ದಾರೆ.
  ವೇದಗಳನ್ನು ಆಧರಿಸಿಯೇ ಅವರು ಮೂರ್ತಿ ಪೂಜೆಯನ್ನು ಪ್ರಬಲವಾಗಿ ವಿರೋಧಿಸಿದರು. ಸ್ತ್ತ್ರೀ ಶಿಕ್ಷಣಕ್ಕೆ ಮಹತ್ವ ನೀಡಿದರು. ಆಧ್ಯಾತ್ಮಿಕವಾಗಿ ಎಲ್ಲರೂ ಸಮಾನ ಎಂದು ಹೇಳಿ ಉಪಾಸನಾ ವಿಷಯದಲ್ಲಿದ್ದ ಪುರೋಹಿತ ಷಾಹಿ, ಗುರುಷಾಹಿಯನ್ನು ಖಂಡಿಸಿದರು. ಶತಮಾನಗಳಿಂದ ಬ್ರಾಹ್ಮಣರನ್ನು ಹೊರತು ಪಡಿಸಿ ಮಿಕ್ಕವರಿಗೆ ವೇದಗಳನ್ನು ಓದುವ ಮತ್ತು ಓದಿಸುವ ಆಧಿಕಾರ ವಿಲ್ಲದಿದ್ದ ಸಂದರ್ಭದಲ್ಲಿ ದಯಾನಂದರು ಎಲ್ಲರಿಗೂ ವೇದಾಧಿಕಾರ ಎಂದು ಹೇಳಿದರು. ಈಗ ಆರ್ಯಸಮಾಜ ಮಂದಿರಗಳಲ್ಲಿ ಜಾತಿ, ಲಿಂಗ, ಪಕ್ಷ , ಪಂಗಡ ಇತ್ಯಾದಿಗಳ ಭೇದ ವಿಲ್ಲದೆ ಎಲ್ಲರಿಗೂ ಸಮಾನ ವೇದಾದಿಕಾರ ಮತ್ತು ಸಂಸ್ಕಾರಗಳಿಗೆ ಅರ್ಹರಾಗಿದ್ದಾರೆ. ಅಂತರಜಾತೀಯ ವಿವಾಹಕ್ಕೆ ಪ್ರೋತ್ಸಾಹ ಕೊಟ್ಟವರೇ ದಯಾನಂದರು. ಈಗಂತೂ ಅಂತರ ಜಾತಿ ವಿವಾಹ, ಅರ್ಥಫೂರ್ಣ ವಿವಾಹ ಸಂಸ್ಕಾರ ಮುಂತಾದ ವಿಷಯಗಳಲ್ಲಿ ಆರ್ಯಸಮಾಜ ಅಗ್ರೇಸರ ಸ್ಥಾನದಲ್ಲಿದೆ.
  ಗೋಹತ್ಯಾ ನಿಷೇದ, ಹಿಂದಿಗೆ ಪುರಸ್ಕಾರ, ಸ್ವದೇಶಿ ವಿಚಾರಗಳು ಇವುಗಳ ಪ್ರಬಲ ಸಮರ್ಥಕರಾಗಿ ದಯಾನಂದರು ಹಿಂದೂ ಸಮಾಜದ ಮಹಾನ್ ಸುಧಾರಕರಾಗಿದ್ದಾರೆ, ಅನ್ಯ ಮತಗಳ ಪೊಳ್ಳು ಸಿದ್ಧಾಂತಗಳನ್ನು ಪ್ರಪಥಮವಾಗಿ ಬಯಲಿಗೆಳದವರೇ ದಯಾನಂದರು. ಅವರು ಬರೆದ ಅಮೋಘ ಕ್ರಾಂತಿ ಕೃತಿ ” ಸತ್ಯಾರ್ಥ ಪ್ರಕಾಶ” ಮತಾಂಧತೆ, ಮೌಢ್ಯ ಗಳ ವಿರುದ್ಧ ನಡೆಸಿದ ಮಹಾನ ಹೋರಾಟಕ್ಕೆ ಕುರುಹು.
  ಇವೆಲ್ಲವನ್ನೂ ಮಾಡದ ಕೇವಲ ವಿವೇಕಾನಂದರ ಜಪ ಮಾಡುತ್ತಿರುವ ಹಿಂದುತ್ವ ಬುದ್ಧಿ ಜೀವಿಗಳ ಜಾಣ ಕುರುಡುತನಕ್ಕೆ ನನ್ನ ಮರುಕವಿದೆ. ಇನ್ನು ಮುಂದಾದರೂ ಅವರು ಈ ಅರ್ಥ ರಹಿತ ವಿವೇಕಾನಂದರ ಅಭಿಮಾನ ಬಿಟ್ಟು ನಿಜವಾಗಿ ಹಿಂದೂ ಸಮಾಜದ ಸಮಗ್ರ, ಸರ್ವಾಂಗೀಣ ಕಾಯಕಲ್ಪಕ್ಕೆ ದುಡಿದ ಸ್ವಾಮಿ ದಯಾನಂದರ ವಿಚಾರಗಳತ್ತು ತಮ್ಮ ಕೃಪೆ ಬೀರಲಿ ಎನ್ನುವುದೇ ನನ್ನ ಆಶಯ.

  ಉತ್ತರ
 3. ಶ್ರೀರಾಂಪುರ್ಕರ್
  ಫೆಬ್ರ 21 2015

  “ಒಬ್ಬ ವ್ಯಕ್ತಿಯು ಗತಿಸಿ 110 ವರ್ಷಗಳಾದ ಮೇಲೆ ಅವನ ಜೀವನ ಶೈಲಿ ಹಾಗೂ ದೈಹಿಕ ಆಕೃತಿಯ ಕುರಿತು ಅವನ ಆರಾಧಕರಲ್ಲಿ ಏನೇನು ತಪ್ಪು ಕಲ್ಪನೆಗಳು ಹುಟ್ಟಿಕೊಳ್ಳುತ್ತವೆ ಎಂಬುದು ಅಷ್ಟು ಮುಖ್ಯವಲ್ಲ.”

  ಖಂಡಿತ ಹೌದು ಬಿಡಿ. ಸರಿಯಾದರೇನು, ತಪ್ಪಾದರೇನು, ಕಲ್ಪನೆಗಳಿರುವುದು ಮುಖ್ಯ! ಆರಾಧನೆಯ ಕಾರಣಗಳು ಅಮುಖ್ಯ, ಆರಾಧಕರಿರಬೇಕಾದುದು ಅತಿಮುಖ್ಯ! xyz ಎನ್ನುವುದು ಒಂದು ರಿಲೀಜನ್ನೇ ಅಲ್ಲದಿದ್ದರೇನಂತೆ, ಅದರ ಹೆಸರಿನಲ್ಲಿ ಗಲಭೆಯೆಬ್ಬಿಸುವ ಮಂದಿಯಿರಬೇಕಾದುದು ಅತೀ ಮುಖ್ಯ. ಲೇಖನದಲ್ಲಿ ಏನಾದರೂ ಅಂಶವಿದ್ದರೇನು, ಇರದಿದ್ದರೇನು, ಲೈಕುಗಳು ಬೀಳುವುದು – ಸಾವಿರಾರು ಶೇರುಗಳಾಗುವುದು ಮುಖ್ಯ; ರಾಜ್ಯಮಟ್ಟದ ಪತ್ರಿಕೆಯಲ್ಲಿ ಪ್ರಕಟವಾಗುವುದು ಬಹುಮುಖ್ಯ.

  “ಜೀವನ ಶೈಲಿ ಮತ್ತು ದೇಹಸ್ಥಿತಿಗಳು ಒಬ್ಬನ ಜ್ಞಾನಸಾಧನೆಯನ್ನು ಆಳೆಯಲು ಮಾನದಂಡಗಳಲ್ಲ.”
  ಹೌದೌದು. ಒಪ್ಪಬೇಕಾದ ಮಾತು. ಅದರಲ್ಲೂ ಒಬ್ಬ ಮಹಾನ್ ವ್ಯಕ್ತಿಯು ತನ್ನ ಸಮಾಜದ ಸಾಮಾನ್ಯ ಜನರು ಹೇಗೆ ಬದುಕತಿದ್ದಾರೆ/ಬದುಕಬೇಕು ಎಂಬುದರ ಬಗ್ಗೆ ಕೂಡ ಮಾತುಗಳನ್ನ ಆಡಿದ್ದಾಗಲಂತೂ ಆತನ ಸ್ವಂತ ದೇಹಸ್ಥಿತಿ ಮುಖ್ಯವಾಗುವುದೇ ಇಲ್ಲ. “ನಾನು ಇರುವಂತೆ ಇರಬೇಡ – ನಾನು ಹೇಳುವಂತೆ ಇರು!” ಅಲ್ಲವೇ?

  “ನನಗೆ ಉಕ್ಕಿನ ನರಗಳಿರುವ ನೂರು ಮನುಷ್ಯರನ್ನು ಕೊಡಿ, ಜಗವನ್ನೇ ಬದಲಾಯಿಸುತ್ತೇನೆ!” ಅನ್ನುವ ಮಾತನ್ನ ಸ್ವತ: ವಿವೇಕಾನಂದರೇ ಚಾಚೂ ತಪ್ಪದೇ ಹಾಗೇ ಹೇಳಿದ್ದರೋ ಅಥವಾ ಅವರ ‘ಆರಾಧಕರು’ ಅದನ್ನ ಆರಾಧನೆಗೆ ನಿಮಿತ್ತಮಾತ್ರವಾಗಿ ಬಳಸಿದುದೋ… ಅದೆಲ್ಲ ಮುಖ್ಯವಾಗಬೇಕಾಗಿಯೇ ಇಲ್ಲ. ಹ್ಯಾಗಿದ್ದರೇನಂತೆ, ಕೇವಲ ನಾಮಜಪದಲ್ಲೇ ಪುಟತುಂಬಿಸುವ ಕೆಲಸ ಸುಲಭವಿರುವಾಗ ಇನ್ನೇನೂ ಬೇಕಿಲ್ಲ. ಪರಾಮರ್ಶೆ ಎಂಬುದು ಅಪಾಯಕಾರೀ ಪಾಶ್ಚ್ಯಾತ್ಯ ದುಷ್ಟಚಾಳಿ, ಅದಕ್ಕೆ ಜಾಗವಿರಕೂಡದು. ವಿವೇಕಾನಂದರೇ ಭಾರತೀಯರ ಬದುಕು-ವಿಶ್ವಾಸಗಳನ್ನು ಕಟುವಾಗಿ ವಿಮರ್ಶೆಮಾಡಿದುದು ಇದ್ದರೂ ಅದು ನಗಣ್ಯ, ಅವರ ಆರಾಧಕರ ರಮ್ಯಕಲ್ಪನೆಗಳು ಮಾತ್ರ ಗಣ್ಯ.

  ಉತ್ತರ
 4. Mandagadde Srinivasaiah
  ಫೆಬ್ರ 21 2015

  Vivekananda is a great force in the world, whose inspirational messages still holds good and will continue to be so in future. He respected all religions and there was no hatretedness and hence all religious people likes him.

  ಉತ್ತರ
 5. Nagshetty Shetkar
  ಫೆಬ್ರ 24 2015

Trackbacks & Pingbacks

 1. ವಿವೇಕಾನಂದರ ವಿಚಾರಗಳು: ಜಾತಿ ಪದ್ಧತಿ | ನಿಲುಮೆ
 2. ವಿವೇಕಾನಂದರ ವಿಚಾರಗಳ ಐತಿಹಾಸಿಕ ಸಂದರ್ಭ | ನಿಲುಮೆ
 3. ಹಿಂದೂ ಸಂಸ್ಕೃತಿಯ ಕುರಿತು ವಿವೇಕಾನಂದರ ವಿಚಾರಗಳು | ನಿಲುಮೆ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments