ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 19, 2015

3

ವೈಕುಂಠದಲ್ಲಿ ಕೋಲಾ(ಕ್ಲೋನಾ)ಹಲ-ವಿಡಂಬನಾ ಕಥೆ

‍ನಿಲುಮೆ ಮೂಲಕ

– ಸುದರ್ಶನ್ ರಾವ್

dantavillada_kathegalu_nilumeಕ್ಷೀರ ಸಾಗರದ ಮಧ್ಯದಲ್ಲಿ ಶೇಷ ಶಾಯಿಯಾಗಿ ಶ್ರೀ ಲಕ್ಷ್ಮಿಯ ಸೇವೆ ಪಡೆಯುತ್ತಿದ್ದ ಶ್ರೀಮನ್ನಾರಾಯಣನಿಗೆ ಡಿಸ್ಟರ್ಬ್ ಮಾಡುವ ಇರಾದೆ ಜಯ ವಿಜಯರಿಗೆ ಖಂಡಿತಾ ಇರಲಿಲ್ಲ. ತ್ರೇತಾ ದ್ವಾಪರ ಯುಗಗಳಲ್ಲಿ ಧರ್ಮಸಂಸ್ಥಾಪನೆಯನ್ನು ಮಾಡಿದ ನಂತರ ದೀರ್ಘ ವಿಶ್ರಾಂತಿಯಲ್ಲಿದ್ದ ಅವನು ಯಾವ ಕಿರಿ ಕಿರಿಯನ್ನೂ ನಿರೀಕ್ಷಿಸುತ್ತಿರಲಿಲ್ಲ. ಜಾಗತಿಕ ತಾಪಮಾನ ಏರುತ್ತಿರುವ ತೆರದಲ್ಲೇ ಮಾನವರ ಅನಾಚಾರಗಳೂ ಹೆಚ್ಚುತ್ತಿರುವುದು ಅವನಿಗೆ ತಿಳಿಯದ ವಿಷಯವಾಗಿರದಿದ್ದರೂ ಪ್ರಪಂಚವನ್ನು ಹಾಲು ಕಾಯಿಸಿದಂತೆ ತನ್ನಷ್ಟಕ್ಕೆ ತಾನು ಕಾಯ್ದು ಕೊಳ್ಳಲಿ, ಉಕ್ಕಿದಾಗ ನೋಡೋಣ ಎಂಬ ಎಣಿಕೆ ಅವನದು.ಅದೂ ಅಲ್ಲದೆ ದೇವಸ್ಥಾನಗಳ ಹುಂಡಿಯಲ್ಲಿ ಹಣದ ಮಹಾಪೂರವೇ ಹರಿಯುತ್ತಿರಲಾಗಿ ಧರ್ಮಕ್ಕೆ ಚ್ಯುತಿ ಬಂದಿರಲಾರದೆಂದು ಅವನ ಊಹೆ. ಇಷ್ಟಕ್ಕೂ ತಿರುಪತಿಯ ಹುಂಡಿಯಿಂದ ಕುಬೇರನ ಸಾಲಕ್ಕೆ ಹಣ ಚುಕ್ತಾ ಆಗುತ್ತಿರಲು ಒಂದು ರೀತಿಯ ನಿರಾಳವೇ ಅವನಲ್ಲಿತ್ತು.

ಆದರೆ ಅಂದು ಬೆಳ್ಳಂಬೆಳಿಗ್ಗೆಯೇ ಭೂದೇವಿ ಬಹಳ ಅಸ್ತವ್ಯಸ್ತ ವೇಷದಲ್ಲಿ ವಿಷ್ಣುದರ್ಶನಕ್ಕಾಗಿ ಬಂದಳು. ಸ್ವಾಮಿ ಇನ್ನೂ ಮಲಗಿರಬಹುದೆಂದೇ ದ್ವಾರಪಾಲಕರ ಎಣಿಕೆ. ತಾನು ತನ್ನ ಪತಿಯೊಡನೆ ಮಾತುಕತೆ ನಡೆಸಬೇಕಾಗಿದೆಯೆಂದೂ, ತುರ್ತಾಗಿ ತನಗೆ ಬಾಗಿಲು ತೆಗೆಯಬೇಕೆಂದೂ ಆಗ್ರಹಿಸಿದಳು. ಜಯ-ವಿಜಯರಿಗೆ ಧರ್ಮ ಸಂಕಟ. ಬಿಟ್ಟ್ರೂ ತೊಂದರೆ ಬಿಡದೇ ಇದ್ದರೂ ತೊಂದರೆ.’ಇತ್ತ ಹಾವು ಅತ್ತ ಹುಲಿ ’ ಎಂಬ ಪರಿಸ್ಥಿಗೆ ಸಿಲುಕಿ ಹಲುಬಿದರು. ಸನಕಾದಿ ಮುನಿಗಳ ಶಾಪಕ್ಕೆ ತುತ್ತಾಗಿ, ಭೂಭಾರ ಇಳಿಸಲು ದುಷ್ಟಾತಿ ದುಷ್ಟರಾಗಿ ಜನ್ಮ ತಾಳಿ ಹತರಾಗಿದ್ದ ನೆನಪು ಇನ್ನೂ ಮಾಸಿರಲಿಲ್ಲ. ಮುಖ ಮುಖ ನೋಡಿಕೊಂಡು ತಮ್ಮ ಹಣೆ ಬರಹವನ್ನು ಹಳಿಯುತ್ತಾ ಬಾಗಿಲು ತೆಗೆದು ಭೂದೇವಿಯನ್ನು ಒಳಗೆ ಬಿಟ್ಟರು.

ಲಕ್ಷ್ಮಿಯೊಡನೆ ನಸುನಗುತ್ತಾ ಹರಟುತ್ತಿದ್ದ ನಾರಾಯಣ ಭೂದೇವಿಯನ್ನು ಕಂಡು ಧಿಗ್ಗನೆದ್ದು ಕುಳಿತ. ಸಾವಿರಾರು ವರ್ಷಗಳ ಕೆಳಗೆ ಭೂದೇವಿಯ ಸಂಪರ್ಕಕ್ಕೆ ಬಂದಿದ್ದನಾಗಿ , ಅನಂತರದಲ್ಲಿ ಅತ್ತ ತಲೆಯನ್ನೂ ಹಾಕದ ಅಪಚಾರಕ್ಕಾಗಿ ಇನ್ನೇನು ದೋಷಾರೋಪಣೆ ಕಾದಿದೆಯೋ ಎಂಬ ಭಾವನೆಯೊಂದಿಗೆ ಅಪರಾಧೀ ಭಾವವೂ ಕಾಡದಿರಲಿಲ್ಲ. ಅವಳನ್ನು ಕಂಡು ಕರುಣೆಯೂ ಮೂಡಿತು. ನಳನಳಿಸುವ ಭೂರಮೆ ಯಾಗಿ ಅವಳು ಉಳಿದಿರಲಿಲ್ಲ. ಸ್ವಾಗತಿಸಿ ಕುಳ್ಳಿರಿಸಿ ಉಪಚರಿಸಿದ. ಲಕ್ಷ್ಮಿ, ಸವತಿ ಮಾತ್ಸರ್ಯ ತೋರಲಿಲ್ಲ!

ನಿಧಾನವಾಗಿ ನಿಟ್ಟುಸಿರು ಬಿಟ್ಟ ಭೂದೇವಿ ಆಕ್ಷೇಪಿಸುವ ದನಿಯಲ್ಲಿ ಮಹಾಸ್ವಾಮಿಯು ತನ್ನನ್ನು ಮರೆತ ಕಾರಣವಾದರೂ ಏನು? ಯಜಮಾನನಿಲ್ಲದ ಮನೆಯಂತಾಗಿರುವ ಭೂಮಿಯನ್ನು ಕಡೆಗಣಿಸಿದ್ದಾದರೂ ಏಕೆ? ಹೆತ್ತಮ್ಮನನ್ನೇ ಗೋಳು ಹುಯ್ದುಕೊಳ್ಳುವ ಮಕ್ಕಳಂತೆ ಮನುಷ್ಯರು ವರ್ತಿಸಿರುವುದನ್ನು ಕಂಡೂ ಕಾಣದಂತಿರುವುದರ ರಹಸ್ಯವಾದರೂ ಏನು? ಇದೋ ಈ ಲಕ್ಷ್ಮಿಯ ದಾಸರಾಗಿ ತನ್ನ ಒಡಲನ್ನೇ ಬಗೆಯುತ್ತಿದ್ದರೂ, ತನ್ನ ಸುಂದರ ಕೇಶರಾಶಿಗಳಾದ ಕಾಡುಗಳನ್ನು ಧ್ವಂಸಗೊಳಿಸುತ್ತಿದ್ದರೂ, ಆಳಕ್ಕೆ ಕೊಳವೆಗಳನ್ನು ತನ್ನ ಗರ್ಭಕ್ಕಿಳಿಸಿ ತನ್ನ ಜೀವರಸವನ್ನು ಹೀರುತ್ತಿದ್ದರೂ, ಕೆರೆ, ಕಟ್ಟೆ ನದಿಗಳಿಂದ ಮರಳನ್ನು ಬಗೆದು ತನ್ನ ಬಾಯಿ ಪಸೆ ಆರಿಸುತ್ತಿದ್ದರೂ, ಯಾವ ಧರ್ಮ ಕರ್ಮಗಳ ಹಂಗಿಲ್ಲದಂತೆ ಅಕ್ರಮ ಎಸಗುತ್ತಿದ್ದರೂ ದಿವ್ಯ ನಿರ್ಲಕ್ಷ್ಯ ವಹಿಸಿದ ಹಿಂದಿನ ಆಂತರ್ಯವಾದರೂ ಏನು” ಎಂದು ಮೇಘಸ್ಫೋಟದಂತಹ ಪ್ರಶ್ನೆಗಳ ಮಳೆಸುರಿಸಿದಳು.

ಪ್ರಶ್ನಾವಳಿಗಳ ಧಾಳಿಗೆ ತತ್ತರಿಸಿದ ನಾರಾಯಣ ಸಮಜಾಯಿಷಿ ಕೊಡಲು ತಡಬಡಾಯಿಸುತ್ತಿರುವುದನ್ನು ಮನಗಂಡು ಭೂದೇವಿ ತನ್ನ ಹಿಡಿತ ಬಿಗಿಗೊಳಿಸತೊಡಗಿದಳು. ಆಕ್ಷೇಪಣೆಯಲ್ಲಿ ತನ್ನ ಹೆಸರೂ ಸೇರಿದ್ದಕ್ಕೆ ಲಕ್ಷ್ಮಿಗೆ ಅಸಮಾಧಾನವಾಯ್ತು. ಅದರೆ ಸುಮ್ಮನಿದ್ದಳು.

ಭೂದೇವಿ ಮುಂದುವರಿದು, “ದಾಮೋದರನೇ ಈ ಭೂಮಿಯ ಮೇಲಿನ ಪ್ರಾಣಿಗಳೆಲ್ಲರೂ ನನ್ನ ಮಕ್ಕಳೇ.. ಅವರು ಮಾಡುವ ಕೆಲಸ ಕೆಲವೊಮ್ಮೆ ತುಂಟಾಟ, ಕೆಲವೊಮ್ಮೆ ಪುಂಡಾಟದಂತೇ ಕಾಣುವುದು. ಆದರೆ ಈಗ ಮಿತಿ ಮೀರಿದೆ. ಮನುಷ್ಯವರ್ಗದ ಮಕ್ಕಳುಗಳು ನನ್ನ ಬೇರೆ ವರ್ಗದ ಪ್ರಾಣಿ-ಪಕ್ಷಿವರ್ಗದ ಮಕ್ಕಳನ್ನು ಉಳಿಯಗೊಡುತ್ತಿಲ್ಲ. ಸಬಲರಾದ ಇವರುಗಳು ದುರ್ಬಲರಾದ ಅವರಗಳನ್ನು ಕೀಚಕರೋಪಾದಿಯಲ್ಲಿ ಕಾಡುತ್ತಿದ್ದಾರೆ. ಹೋಗಲಿ ತಮ್ಮ ತಮ್ಮಲ್ಲೇ ಸೌಹಾರ್ದದಿಂದಿದ್ದಾರೋ ಎಂದರೆ ಅದೂ ಇಲ್ಲ. ಕಿತ್ತಾಡುತ್ತಿದ್ದಾರೆ,. ನನ್ನ ಗುಡುಗು, ಸಿಡಿಲನಂಥ ಬೈಗುಳಕ್ಕೂ ಬೆಲೆ ಇಲ್ಲ, ಭೊರ್ಗರೆದು ಪ್ರವಾಹವಾಗುವಂತೆ ಅತ್ತರೂ ಲೆಕ್ಖಕ್ಕಿಲ್ಲ. ಹೆತ್ತಮ್ಮನನ್ನು ತಿಂದೋರು ಅತ್ತ್ಯಮ್ಮನನ್ನು ಬಿಟ್ಟಾರ್ಯೇಎಂಬ ಗಾದೆಯೇ ಇಲ್ಲವೇ. ತಮ್ಮ ನಿಜ ತಾಯಿಗೇ ಮರ್ಯಾದೆ ಕೊಡುತ್ತಿಲ್ಲ ಇನ್ನು ಮಹಾತಾಯಿಯಾದ ನನಗೆಲ್ಲಿಯದು? ಅಪ್ಪನಾದ ನೀನೇ ಇಲ್ಲದ ಮೇಲೆ ನನಗೆಲ್ಲಿಯ ಮರ್ಯಾದೆ? ? ಇದಷ್ಟೇ ಆಗಿದ್ದಲ್ಲಿ ಹೋಗಲಿ ಎಂದೆನ್ನಬಹುದಿತ್ತು. ಇತ್ತೀಚೆಗೆ ಹೊಸ ಕುಚೇಷ್ಟೆ ಶುರು ಹಚ್ಚಿಕೊಂಡಿದ್ದಾರೆ. ಅದನ್ನು ಮಾತ್ರ ನನ್ನಿಂದ ಸರ್ವಥಾ ಸಹಿಸಲು ಸಾಧ್ಯವಿಲ್ಲ. ಏಳು, ಎದ್ದೇಳು, ಏನಾದರೂ ವ್ಯವಸ್ಥೆ ಮಾಡು” ಎಂದು ಹೇಳುತ್ತಿರುವಷ್ಟರಲ್ಲಿ ಜಯ-ವಿಜಯರನ್ನು ಆಚೆ-ಈಛೆ ತಳ್ಳಿ ಬಾಗಿಲನ್ನು ಧಡಾರನೆ ದೂಡಿಕೊಂಡು ಬ್ರಹ್ಮ ಒಳಗೆ ಬಂದ! ಬಿದ್ದೆದ್ದ ಜಯ ವಿಜಯರು ಮೈಮೇಲಿನ ಧೂಳು ಕೊಡವಿಕೊಂಡು ಎಲಾ ಇವನಾ!! ಮೀಸೆ ಗಡ್ದ ಬಿಳಿಯಾದರೂ ಕೈ ಕಸುವಿಗೇನೂ ಕಡಿಮೆಯಿಲ್ಲ ಎಂದು ಯೋಚಿಸಿಕೊಂಡರು!

“ಸೃಷ್ಟಿಕಾರ್ಯವನ್ನಷ್ಟೇ ಮಾಡಿಕೊಂಡು, ಜೀವಿಗಳೆಂಬೊ ಬೊಂಬೆಯ ಮಾಡಿ ಅವುಗಳ ಹಣೆಬರಹ ಬರೆದು, ಭೂಲೋಕಕ್ಕೆ ಸಾಗ ಹಾಕುತ್ತಿದ್ದ ಬ್ರಹ್ಮ ಸಿಟ್ಟಾದದ್ದೇ ಕಡಿಮೆ. ಅಂಥದ್ದರಲ್ಲಿ ಇಂದು ಹೀಗೆ ಬರಬೇಕಾದರೆ…” ಎಂದು ವಿಷ್ಣು ಯೋಚಿಸುತ್ತಿರುವಾಗಲೇ, ಮುಖ ಕೆಂಪು ಮಾಡಿಕೊಂಡು, ಗಡ್ಡ ಮೀಸೆ ಕುಣಿಸುತ್ತ ಬ್ರಹ್ಮ ಹೇಳತೊಡಗಿದ, “ಕೇಶವಾ, ಅವೇಳೆಯಲ್ಲಿ ಬಂದಿದ್ದಕ್ಕೆ ಕ್ಷಮಿಸು.ಈಗ್ಗೆ ಕೆಲವು ತಿಂಗಳುಗಳಿಂದ ನನ್ನ ಕೆಲಸ ತೀವ್ರವಾಗಿ ಏರುಪೇರಾಗಿದೆ. ಈ ರೀತಿಯ ತೊಂದರೆ ಮೊದಲು ನನ್ನ ಗಮನಕ್ಕೆ ಕೆಲವು ವರ್ಷಗಳ ಹಿಂದೆಯೇ ಬಂದಿತ್ತು. ಆದರೆ ಅದು ಎಲ್ಲೋ ನನ್ನ ಭ್ರಮೆ ಅಥವಾ ಆಯಾಸದಿಂದಾದ ಅಚಾತುರ್ಯವೆಂದು ತಳ್ಳಿ ಹಾಕಿದ್ದೇ ಸುಮ್ಮನೆ ಬಿಟ್ಟಿದ್ದೆ. ಮತ್ತೆ ಕೆಲವು ಕಾಲ ಏನೂ ಸಮಸ್ಯೆ ಇರಲಿಲ್ಲ. ಈಗ ಮತ್ತೆ ಬಹಳ ಕ್ಲಿಷ್ಟ ಸಮಸ್ಯೆಯಾಗಿ , ಪೆಡಂಭೂತವಾಗಿ ನಿಂತುಬಿಟ್ಟಿದೆ. ಇದೋ ನೋಡು, ಹುಟ್ಟು ಹಣೆ ಬರಹ ದಾಖಲಿಸುವ ಪುಸ್ತಕ. ನನಗೆ ಅರಿವೇ ಇಲ್ಲದೆ ಎಷ್ಟೊಂದು ಎಂಟ್ರಿ ಗಳು- ನೊಂದಾವಣೆ ಯಾಗಿರುವ, ಆಗುತ್ತಿರುವ ಜೀವಗಳು! ನನ್ನ ಕೆಲಸದ ಪ್ರಕಾರ ಜೀವಿಗಳ ಕರ್ಮ ಕಾಂಡ, ಪಾಪ ಪುಣ್ಯ, ಜೀವನ ಚಕ್ರದಲ್ಲಿ ತಿರುಗಿಬಂದ ಅವರ ಜನಮಗಳ ಸಂಖ್ಯೆ, ಇವನ್ನೆಲ್ಲಾ ಪರಿಗಣಿಸಿ ಮುಂದಿನ ಜನ್ಮದ ರೂಪು ರೇಷೆ (ಫ಼್ಲೋ ಚಾರ್ಟ್) ತಯಾರಿಸಿ ಅದಕ್ಕೆ ಸೂಕ್ತ ಆಕಾರ ಕೊಟ್ಟು ಹಣೆ ಬರಹ ಬರೆದು, ಜನ್ಮಕ್ಕೆ ಹೊಂದಿಕೆ ಯಾಗುವ ಆತ್ಮವನ್ನು ಚಿತ್ರಗುಪ್ತ-ಯಮಧರ್ಮರು ನಿಯೋಜಿಸಿದ ನಂತರ ಆ ಜೀವಿಯು ಭೂಮಿಯಲ್ಲಿ ತನ್ನ ಆಟ ಆಡಲು ತೆರಳುವುದು ನಿನಗೆ ಗೊತ್ತೇ ಇದೆ. ಆದರೆ ನನ್ನ ಅರಿವಿಗೆ ಬಾರದೆ ಧರೆಯಲ್ಲಿರುವ ಜೀವಿಗಳ ಸಂಖ್ಯೆ ನೋಡು, ಅವುಗಳ ಪಟ್ಟಿ ನೋಡು! ಇವು ಯಾವುದರ ಪೂರ್ವಾ ಪರವೂ ನನಗೆ ತಿಳಿಯದು. ಸರಿ ಹಣೆ ಬರಹ ಬರೆಯೋಣವೆಂದರೆ ಆಯುಸ್ಸು ಸೊನ್ನೆಯಿಂದ ಶುರು ಆಗುತ್ತಿಲ್ಲ. ಎಲ್ಲೆಲಿಂದಲೋ ಶುರು ಆಗುತ್ತಿವೆ. ಒಂದದಕ್ಕೂ ಒಂದೊಂದು ವಿಭಿನ್ನ .ಇವರುಗಳ ಆಯಸ್ಸು ನಿರ್ಧರಿಸುವುದೇ ಕಷ್ಟಕರವಾಗಿಬಿಟ್ಟಿದೆ. ನನ್ನ ಅರಿವನ್ನೂ ಮೀರಿದೆ ಇವುಗಳ ಜೀವನದ ಪಟ. ಕೆಲವರಿಗೆ ಯಾವು ಯಾವುದೋ ಖಾಯಿಲೆ ಕಸಾಲೆ,ಕೆಲವರ ಆಯುಷ್ಯ ರೇಖೆ ಮುಗಿಯುತ್ತಲೇ ಇಲ್ಲ- ಅನಂತವಾಗಿರುವಂತೆ ತೋರುತ್ತಿದೆ. ಹೇ ಅನಂತಾ, ನಿನ್ನ ಹೆಸರಿಗೇ ಸಂಚಾಕಾರ ಬರುವಂತಿದೆ! ಈ ಜೀವಿಗಳಿಗೆಲ್ಲಾ ನಿಯೋಜಿಸುವಷ್ಟು ಆತ್ಮಗಳ ದಾಸ್ತಾನು ನನ್ನಲ್ಲಿಲ್ಲ. ಒಂದೇ ಮಾತಿನಲ್ಲಿ ಹೇಳುವುದಾದರೆ, ನನ್ನ ಕೆಲಸಕ್ಕೇ ಸಂಚಾಕಾರ ಬಂದಿದೆ. ನಾನು ನಿರುದ್ಯೋಗಿ ಆಗಬಹುದು ಅಥವಾ, ನೀನು ಇದಕ್ಕೊಂದು ಪರಿಹಾರ ತೊರದಿದ್ದಲ್ಲಿ, ಹೈರಾಣಾಗಿ ನಾನೇ ಸ್ವಯಂ ನಿವೃತ್ತಿ ತೆಗೆದುಕೊಳ್ಳಬೇಕಾಗಬಹುದು” ಎಂದು ಅಲವತ್ತುಕೊಂಡ.

ವಿಷ್ಣು, ನೆಟ್ಟಗೆ ಕುಳಿತು, ” ಅಯ್ಯಾ ಬ್ರಹ್ಮ, ನೀನು ನನ್ನ ನಾಭಿಯಿಂದ ಜನಿಸಿ ಪದ್ಮನಾಭನೆಂಬ ಸುಂದರ ಹೆಸರು ನನಗೆ ಬರುವಂತೆ ಮಾಡಿದ್ದೀಯೆ. ನನ್ನ ಈ ಜಗನ್ನಿಯಾಮಕ ಕಾರ್ಯದಲ್ಲಿ ಸೃಷ್ಟಿಯ ವಿಭಾಗವನ್ನು ಎಷ್ಟೋ ಕಲ್ಪಗಳಿಂದ ದಕ್ಷವಾಗಿ ನಡೆಸಿಕೊಂಡು ಬರುತ್ತಿದ್ದೀಯೆ. ಆಗಾಗ ಕೆಲವು ಅಪಾತ್ರರಿಗೆ ಕೇಳಿದ ವರಗಳನ್ನು ಹಿಂದು-ಮುಂದು ನೋಡದೆ ಕರುಣಿಸಿ ಸಮಸ್ಯೆಗೆ ಸಿಕ್ಕಿದ್ದನ್ನು ಬಿಟ್ಟರೆ ನೀನು ಮಹಾ ನಿರುಪದ್ರವಿ. ನಿನ್ನಿರುವೇ ನಮಗೆ ಗೊತ್ತಿರುವುದಿಲ್ಲ; ಹಾಗಿರುತ್ತೀಯ. ನಿನಗೆ ತಿಳಿಯದೆ ನಡೆದಿರುವ, ನಿನಗೇ ಕೋಪ ತರಿಸುತ್ತಿರುವ ಈ ಪರಿಸ್ಥಿತಿಯಾದರೂ ಏನದು. ಹಿಂದೆ ರಕ್ತ ಬಿಜಾಸುರನಿಗೆ ಕೊಟ್ಟಂಥ ವರದಂತೆ ಇನ್ಯಾರಿಗೂ ಏನೂ ಕೊಟ್ಟಿಲ್ಲ ತಾನೆ? ಎಂದು ಹೊಗಳುತ್ತಲೇ ಕೆದಕಿದ.

ಇಲ್ಲವೆಂದು ತಲೆಯಾಡಿಸುತ್ತಾ, ” ಅಯ್ಯಾ ಪುರುಷೋತ್ತಮ, ಅಂಥಾ ತಪಸ್ಸನ್ನು ಮಾಡಬಲ್ಲ ಯೋಗ್ಯತೆ ಇರುವ ಯಾವ ಜೀವಿಯ ಸೃಷ್ಟಿಯೂ ಇತ್ತೀಚೆಗೆ ತನ್ನಿಂದ ಅಗಿಲ್ಲ..ಇನ್ನು ವರಕೊಡುವುದೆಲ್ಲಿಂದ…”. ಎಂದು ಹೇಳುತ್ತಿರುವಾಗಲೇ ಯಮ, ಯಮದೂತರು, ಚಿತ್ರಗುಪ್ತ ಎಲ್ಲರೂ ಓಡೋಡುತ್ತಾ, ಏದುಸಿರು ಬಿಡುತ್ತಾ ಒಳಬಂದರು. ಬ್ರಹ್ಮನಿಂದ ತಳ್ಳಿಸಿಕೊಂಡಾದ ಮೇಲೆ ಯಾರನ್ನೂ ತಡೆಯುವ ಸಾಹಸ ಆ ದ್ವಾರಪಾಲಕರು ಮಾಡಲಿಲ್ಲ ಪಾಪ!.

ಇದೇನು ಹೊಸ ತಲೆನೋವು ಬಂತಪ್ಪಾ.. ನಾನು ಈಗಾಗಲೇ ಒಂಭತ್ತು ಅವತಾರಗಳನ್ನು ಎತ್ತಿ ಭೂಭಾರ ಇಳುಹಿದ್ದಾಯ್ತು. ಇನ್ನೇನು ಸ್ವಲ್ಪ ಆರಾಮವಾಗಿರೋಣ ಎಂದರೆ ಈ ದೇವ ದೇವತೆಗಳು ಒಂದಲ್ಲಾ ಒಂದು ಕಿರಿ ಕಿರಿ ತಂದಿಡುತ್ತಿದ್ದಾರೆ. ಛೇ, ಇವರಿಗೆ ಕರ್ತವ್ಯ ದಕ್ಷತೆ, ಕಾರ್ಯ ಕ್ಷಮತೆ ಒಂದೂ ಇಲ್ಲ. ಮೇಲ್ವಿಚಾರಕರಿಲ್ಲದ ಕಚೇರಿಯಂತಾಗಿದೆ ಈ ವಿಶ್ವ. ಎಷ್ಟೆಲ್ಲ ತಯಾರಿ ಕೊಟ್ಟು ಅನುಭವಸ್ಥರನ್ನಾಗಿ ಮಾಡಿದರೂ ತಮ್ಮ ಪ್ರೋಟೊಕಾಲ್ ನಿಂದ ಅಚೆಗೆ ಯೋಚಿಸುವುದೇ ಇಲ್ಲ!! ಎಲ್ಲಕ್ಕೂ ನಾನೇ ತಲೆ ಕೊಡಬೇಕಾಗಿದೆ ಎಂದು ಚಿಂತಿಸುತ್ತಲೇ ಈ ಹೊಸಬರ ಅಹವಾಲು ಕೇಳಲು ಕಿವಿಯಾಗತೊಡಗಿದ.

ಮೊದಲು ಮಾತನಾಡಿದವನು ಯಮದೂತ! ಅವನ ಫೀರ್ಯಾದು ಯಮ ಧರ್ಮನ ಮೇಲೇ ಇತ್ತು. ” ಸ್ವಾಮಿ ನಿಮಗೆ ತಿಳಿಯದ್ದೇನಿದೆ? ಜೀವಿಗಳು ಜನ್ಮ ತಾಳಿದ ತಕ್ಷಣ ಅವರ ಜೀವಿತದ ಕಾಲ, ವೇಳಾಪಟ್ಟಿ, ಬ್ರಹ್ಮದೇವರಿಂದ ನಮಗೆ ರವಾನೆಯಾಗುವುದು ನಿಜವೇ. ಆಯಾ ಕಾಲಕ್ಕೆ , ಅಯುಷ್ಯಕ್ಕೆ ಅನುಗುಣವಾಗಿ ನಾವು ಪ್ರತೀ ದಿನಾಂಕದಲ್ಲೂ ಯಾರ್ಯಾರನ್ನು ಹೊತ್ತು ತರಬೇಕೆಂಬುದು ನೋಡಿಕೊಂಡು, ಅವುಗಳು ತಮ್ಮ ಸ್ಥೂಲ ರೂಪವನ್ನು ತ್ಯಜಿಸಿದ ನಂತರ ಸೂಕ್ಷ್ಮರೂಪವನ್ನು ಎಳೆದು ತರುವುದಲ್ಲವೇ ನಮ್ಮ ಕೆಲಸ?ನಮ್ಮ ಕೆಲಸದ ಪಾಳಿಯ ಪ್ರಕಾರ ಇಂತಿಂಥಾ ದಿನ ಇಷ್ಟಿಷ್ಟೇಂದು ಸೂಕ್ಷ್ಮ ರೂಪದ ಜೀವಿಗಳನ್ನು ಎಳೆದು ತರುತ್ತಿದ್ದೆವು. ಪಾಳಿಯ ನಂತರ ನಮಗೂ ವಿಶ್ರಾಂತಿ ಬೇಡವೇ? ಇತ್ತೀಚೆಗೆ ಲೆಕ್ಖಕ್ಕೇ ಇಲ್ಲದ ಎಷ್ಟೊ ಜೀವಿಗಳು ತಮ್ಮ ಹೊರ ಶರೀರವನ್ನು ಅಕಾಲದಲ್ಲಿ ತ್ಯಜಿಸುತ್ತಿವೆ. ಇದರಿಂದ ನಮಗೆ ಹೆಚ್ಚುವರಿ ಕೆಲಸ ಬಿದ್ದಿದೆ. ಅದೂ ಅಲ್ಲದೆ ಈ ಹೊಸ ಬಗೆಯ ಸೂಕ್ಷ್ಮ ಶರೀರಿಗಳು ನಮಗೂ ನವನವೀನ. ನೋಡಲು ಬಹುತೇಕ ಮನುಷ್ಯರಂತೆ ಕಂಡರೂ ಪೂರ್ತಿ ಅವರಲ್ಲ. ಅದೂ ಅಲ್ಲದೆ ನಮ್ಮ ನಿಯಮಗಳಿಗನುಸಾರವಾಗಿ ಅವರು ನಡೆಯದೆ ಹೇಳಲಾದದಷ್ಟು ಕಷ್ಟಕೋಟಲೆ ಕೊಡುತ್ತಾರೆ. ನಮ್ಮ ಪಾಶಕ್ಕೆ ಸಿಕ್ಕದೆ ಕೋಡಂಗಿಗಳಂತೆ ತಪ್ಪಿಸಿಕೊಳ್ಳುತ್ತವೆ. ಅವುಗಳನ್ನು ಹಿಡಿದು ಹೆಡೆಮುರಿ ಕಟ್ಟಿ ತರುವಷ್ಟರಲ್ಲಿ ನಮ್ಮ ಹೆಣವೇ ಬಿದ್ದು ಹೋಗಿರುತ್ತದೆ. ಸಾವಿತ್ರಿಯ ಗಂಡ ಸತ್ಯವಾನನ ನಂತರದಲ್ಲಿ ನಾವಿಷ್ಟು ಪರಿಪಾಟಲು ಪಟ್ಟಿರಲೇ ಇಲ್ಲ. ಅದಾದರೂ ಎಂಥ ಶ್ರೇಯಸ್ಕರ ಅನುಭವವಾಗಿತ್ತು. ಉಳಿದ ಪ್ರಾಣಿಗಳಲ್ಲೂ ಆಗಾಗ ಈ ರೀತಿ ಆಗುವುದುಂಟು ;ಅದರೆ ಅವು ಇಷ್ಟೊಂದು ಹೈರಾಣ ಮಾಡುವುದಿಲ್ಲ. ಈ ಕೆಲಸ ಸಾಕೆನಿಸಿದೆ. ನಾವೆಲ್ಲ ಕೂಡಿ ರಾಜಿನಾಮೆ ಕೊಡಬೇಕೆಂದಿದ್ದೇವೆ” ಎಂದ ಒಂದೇ ಉಸಿರಿಗೆ.

ವಿಷ್ಣುವಿಗೆ ಬ್ರಹ್ಮನ ಮೇಲೆ ಅನುಮಾನ ಹೆಚ್ಚಾಯ್ತು. ಇವನೆಲ್ಲೊ ಮತ್ತೊಬ್ಬ ಹಿರಣ್ಯ ಕಶ್ಯಪುವಿಗೋ ಇಲ್ಲ ರಕ್ತಬೀಜಾಸುರನಿಗೋ ವರವಿತ್ತು ಪರಪಟ್ಟು ಮಾಡಿಕೊಂಡಿರಬೇಕೆಂದೇ ಅನುಮಾನದಿಂದ ಅವನತ್ತ ನೋದಿದ. ಬ್ರಹ್ಮನ ಮುಖದಲ್ಲಿ ದುಗುಡ ಮಡುಗಟ್ಟಿತ್ತೇ ವಿನಃ ಅಪರಾಧಿ ಮನೋಭಾವ ಕಾಣಲಿಲ್ಲ.

“ಸರಿ”, ಯಮಧರ್ಮನ ಕಡೆಗೆ ತಿರುಗಿದ ವಿಷ್ಣು, “ನಿನ್ನದೇನು ಹೇಳಿಬಿಡು; ಅದೂ ಕೇಳಿ ಬಿಡುತ್ತೇನೆ” ಎಂಬಂತೆ ಸನ್ನೆ ಮಾಡಿದ.

ದೊಡ್ದದೊಂದು ಉಸಿರೆಳೆದುಕೊಂಡ ಯಮಧರ್ಮ ತನ್ನನ್ನು ದೂರುವ ತೆರದಲ್ಲಿ ಫೀರ್ಯಾದು ಮಾಡಿದ ಯಮಭಟರ ಕಡೆಗೂ,ಎಲ್ಲ ತಪ್ಪೂ ಬ್ರಹ್ಮನದೇ ಎಂಬ ಅನುಮಾನದಿಂದ ಬ್ರಹ್ಮನ ಕಡೆಗೂ ನೋಡಿ ತನ್ನ ಪ್ರವರ ಶುರು ಹಚ್ಚಿಕೊಂಡ, ” ಮಹಾದೇವ, ಇವರುಗಳು ಹೇಳೀದ್ದೆಲ್ಲಾ ನೀನೇ ಕೇಳಿರುವೆ.ಇತ್ತೀಚೆಗೆ ಯಮಭಟರು ಎಲ್ಲಾ ವಿಷಯಕ್ಕೂ ನನ್ನನ್ನೇ ಕರೆಯುವ ಅಭ್ಯಾಸ ಮಾಡಿಕೊಂಡುಬಿಟ್ಟಿದ್ದಾರೆ. ಇದೇನು ಅವರ ಕಾರ್ಯಕ್ಷಮತೆ ಕಡಿಮೆಯಾಗಿರುವ ಕುರುಹೋ ಇಲ್ಲಾ ಕರ್ತವ್ಯ ದಕ್ಷತೆ ಕ್ಷೀಣಿಸುತ್ತಿರುವ ಸೂಚನೆಯೊ,ಇಲ್ಲ ನನ್ನ ನಿರ್ದೇಶನ, ನಿಭಾವಣೆಗಳು ನಿರ್ನಾಮ ಅಗುತ್ತಿರುವ ಲಕ್ಷಣವೋ, ಅಥವಾ ಈ ಜೀವಿಗಳು ನಿಜವಾಗಿಯೂ ನಮ್ಮ ಪಟ್ಟಿಗೆ ಜಗ್ಗದ ವಿಲಕ್ಷಣ ಪ್ರಭೇದವೋ ಒಂದೂ ತಿಳಿಯದಾಗಿದೆ. ಈ ಯಮ ಭಟರು ನನ್ನನ್ನು ಕರೆದಾಗ ಹೋಗಿ ಆ ವಿಲಕ್ಷಣ ಜೀವಿಗಳನ್ನು ಹಿಡಿಯುವುದು ಒಂದು ಪ್ರಯಾಸಕರವಾದ ಕೆಲಸವಾಗಿಬಿಟ್ಟಿದೆ. ಅವುಗಳನ್ನು ಕೋಳಿ, ನಾಯಿ, ಹಂದಿಗಳಂತೆ ಅಟ್ಟಾಡಿಸಿಕೊಂಡು ಹಿಡಿಯುವುದರಲ್ಲಿ ಸಾಕು ಬೇಕಾಗಿಹೋಗಿದೆ. ನಾವು ಪಡುವ ಪರಿಪಾಟಲಿಗೆ ನನಗೇ ಒಮ್ಮೊಮ್ಮೆ ನಗು ಬರುವಂತಾಗುತ್ತದೆ.ಯಾರಾದರೂ ನೋಡಿಬಿಟ್ಟಲ್ಲಿ ನಗೆಪಾಟಲಿಗೀಡಾಗಿ ನನ್ನ ಮೇಲಿನ ಭಯ ಭಕ್ತಿಗಳನ್ನು ಎಲ್ಲಿ ಕಳೆದುಕೊಳ್ಳುವುನೋ ಎಂಬ ಚಿಂತೆಯೂ ಕಾಡುತ್ತಿದೆ. ದೇವಾ, ಇವು ಬಹಳ ಕುತಂತ್ರಿ ಜೀವಿಗಳು.ಅಷ್ಟೆಲ್ಲಾ ಕಷ್ಟ ಪಟ್ಟು ಹೆಡೆಮುರಿಕಟ್ಟೀ ಹಿಡಿದು ತಂದು ವಿಚಾರಣೆಗೆ ನಿಲ್ಲಿಸಿದೆವೋ,ಈ ಚಿತ್ರಗುಪ್ತ ಕೈಕೊಡುತ್ತಾನೆ. ಅವನ ದಫ್ತರಿನ ದೊಡ್ಡ ಪುಸ್ತಕಗಳಲ್ಲಿ ಅವುಗಳ ನಮೂದೇ ಇರುವುದಿಲ್ಲ. ನಾವೇ ಕಪಿಗಳಂತೆ ಮಿಕ ಮಿಕ ನೋಡುವುದಾಗುತ್ತದೆ. ಆ ಕಟಕಟಯಲ್ಲಿ ನಿಂತು ನಮ್ಮನ್ನೇ ನೋಡಿ ಗಹಗಹಿಸಿ ನಗುತ್ತವೆ.ನಮ್ಮನ್ನೇ ಪರಿಹಾಸ್ಯ ಮಾಡುತ್ತವೆ. ಧರ್ಮಪಾಲನೆಗೆ ನಿಂತ ನಾನು ಅವುಗಳ ಮೇಲಿನ ದಾಖಲೆ ಇಲ್ಲದೆ ಅಪವಾದ ಹೊರಿಸುವುದಾದರೂ ಹೇಗೆ, ವಿಚಾರಣೆ ಮಾಡುವುದಾದರೂ ಎಲ್ಲಿಂದ. ಭೋಲೋಕದಲ್ಲಿದಾಗ ಅವು ಮಾಡಿದ ಕುಚೇಷ್ಟೆಗಳೇನು ಕಡಿಮೆಯಿಲ್ಲ. ನ್ಯಾಯಯುತ , ಸಾಮಾನ್ಯ ಜೀವಿಗಳಿಗೆ ಇವು ಕೊಡುತ್ತಿರುವ ಕೋಟಲೆಗಳು ಒಂದೆರೆಡಲ್ಲ. ಆದರೆ ನಮಗೆ ಸೂಕ್ತ ದಾಖಲೆಗಳೇ ಇಲ್ಲದೆ ನಾವು ಮುಂದುವರಿಯುವುದಾದರೂ ಹೇಗೆ. ನಮ್ಮ ನಿಜ ಮಾನವರನ್ನು ನಾವು ಕಾಯಲಾಗದಂತಾಗಿದೆ.ನನಗೆ ಬರುವ ಸಿಟ್ಟಿಗೆ ಕಾದ ಎಣ್ಣೆ ಕೊಪ್ಪರಿಗೆಯಲ್ಲಿ ಎಸೆಯುವ ಬಯಕೆ ಆಗುತ್ತಿದೆ. ಕಷ್ಟಪಟ್ಟು ಗುರುತು ಹಿಡಿದು ಅವರ ಕರ್ಮ ಕಾಂಡಗಳ ಪಟ್ಟಿ ತೆಗೆದೆವೋ,ಅದರಲ್ಲಿನ ದಿನ, ಮಾಸ, ವಾರ, ತಿಥಿ, ವೇಳೆ ಇವೆಲ್ಲ ತಾಳೆ, ಹೊಂದಾಣಿಕೆ ಅಗುವುದಿಲ್ಲ. ಎಲ್ಲ ಅಯೋಮಯ. ನಮಗೇ ತಿರುಗಿ ಸವಾಲು ಹಾಕುತ್ತವೆ. ಈ ಚಿತ್ರಗುಪ್ತನಿಗೂ ಅರುಳು ಮರುಳೆಂದು ಕಾಣುತ್ತದೆ. ಒಟ್ಟಿನಲ್ಲಿ ನಾನೇ ನರಕ ವಾಸಿಯಾಗಿಬಿಟ್ಟಿದ್ದೇನೆ ನೋಡು. ಸಾವಿತ್ರಿ, ಸತ್ಯವಾನ, ನಚಿಕೇತ, ಧರ್ಮರಾಯ,ಭೀಷ್ಮನೇ ಮೊದಲಾದ ಮಹಾನ್ ವ್ಯಕ್ತಿಗಳೊಡನೆ ವ್ಯವಹರಿಸಿದ ನಾನು ಯಕಃಶ್ಚಿತ್ “ಬೇವಾರ್ಸಿ”ಗಳಂತಿರುವ ಈ ಸೂಕ್ಷ್ಮಜೀವಿಗಳಿಂದ ಅಪಹಾಸ್ಯಕ್ಕೊಳಗಾಗುವುದೆಂದರೇನು? ಇವರುಗಳನ್ನು ನಿಯಂತ್ರಿಸಲಾಗದೆ ಲೋಕದ ಪರಿಹಾಸ್ಯಕ್ಕೆ ಗುರಿಯಗುವೆನೆಂಬುವುದೇ ನೋವಿನ ಸಂಗತಿ ” ಎಂದೆಂದು ನಿಲ್ಲಿಸಿದ.

’ಬೇವಾರ್ಸಿ’ ಅಂತೇಕೆ ಅವುಗಳನ್ನು ಕರೆದ ಎಂದು ವಿಷ್ಣು ಚಿಂತಿಸುತ್ತಿರವಲ್ಲಿ, ತನ್ನ ಕರ್ತವ್ಯ ಪ್ರಜ್ಞೆಗೇ ಕೊಡಲಿಯೇಟು ಹಾಕಿದ ಯಮಧರ್ಮನನ್ನು ಮನದಲ್ಲೇ ನಿಂದಿಸುತ್ತಾ,, ಚಿತ್ರಗುಪ್ತ ತನ್ನ ಅಹವಾಲನ್ನೂ ಆಲಿಸಬೇಕೆಂದು ಸಣ್ನದನಿಯಲ್ಲಿ ಕೋರಿದ. ಎಂಥೆಂಥಾ ಹೇಮಾಹೇಮಿ ವ್ಯಕ್ತಿಗಳನ್ನೂ ಬಿಡದೆ ನಿರ್ದಾಕ್ಷಿಣ್ಯವಾಗಿ ಅವರುಗಳ ಧರ್ಮ-ಕರ್ಮಗಳನ್ನು ಬಯಲಿಗೆಳೆದು ಬೆತ್ತಲು ಮಾಡುತ್ತಿದ್ದ ಚಿತ್ರಗುಪ್ತ ಈಗ ತನ್ನ ಪರಿಣತಿಯನ್ನೇ ಸಂದೇಹಿಸುವ ಪರಿಸ್ಥಿತಿಯಲ್ಲಿ ಸಿಲುಕಿದ್ದ. ಈ ಲೋಕ ಸೃಷ್ಟಿಯಾಗಿ ಹಲವಾರು ಬ್ರಹ್ಮ ಕಲ್ಪಗಳು ಕಳೆದಿದ್ದರೂ, ಲೆಕ್ಖವಿಲ್ಲದಷ್ಟು ಜೀವಿಗಳ ಜೀವನದ ಲೆಕ್ಖಾಚಾರವನ್ನು ಕರಾರವಾಕಕಾಗಿ ಸೂಪರ್ ಕಂಪ್ಯೂಟರ್ನಂತೆ ದಾಖಲಿಸಿ ,ಬೇಕೆಂದಾಗ ಮಿಂಚಿನೋಪಾದಿಯಲ್ಲಿ ಹೊರಗಳೆದು ಪ್ರಸ್ತುತಪಡಿಸುತ್ತಿದ್ದ ತಾನು ಇತ್ತೀಚಿನ ಕೆಲವೇ ವರ್ಷಗಳಲ್ಲಿ ಈ ರೀತಿ ತಲೆ ಬುಡಗಳು ಹೊಂದಾಣಿಕೆಯಾಗದಂತೆ ದಾಖಲಿಸುವುದೆಂದರೇನು? ತಾನು ಎಷ್ಟೇ ಪ್ರಯತ್ನ ಪಟ್ಟರೂ ಇದರ ಮರ್ಮ ತನಗೆ ಅರ್ಥವಾಗದೆ ಹೋದದ್ದೇನು?ಮೊದಲ ಹೆಜ್ಜೆಯಲ್ಲಿ ತಪ್ಪು ಮಾಡಿದ ಗಣಿತಜ್ಞ ಕಡೆಯಲ್ಲಿ ಉತ್ತರವನ್ನು ತಪ್ಪೇ ಪಡೆಯುವಂತೆ ಬ್ರಹ್ಮ ಕೊಟ್ಟ ಲೆಕ್ಖವೇ ತಪ್ಪಿದ್ದರೆ ಅದು ತನ್ನ ದೋಷವಾಗುವುದಾರರೂ ಎಂತು? ತನ್ನ ಯಾವ ಪಾಪಕಾರ್ಯಕ್ಕೆ ತನಗೀ ಪರೀಕ್ಷೆಯನ್ನು ಈ ವಿಧಿ ತಂದೊಡ್ಡಿರಬಹುದು?ಎಂಬೆಲ್ಲಾ ಪ್ರಶ್ನೆಗಳನ್ನು ತನಗೆ ತಾನೇ ಕೇಳಿಕೊಂಡು, ಉತ್ತರ ಸಿಗದೆ ತಡಕಾಡುತ್ತಾ ತಳಮಳಗೊಳ್ಳುತ್ತಿದ್ದ.

ವಿಷ್ಣುವು ತಲೆಯಾಡಿಸಿ ನೀನೂ ಅರುಹೆನ್ನಲು,, ತನ್ನೆಲ್ಲ ಸಂದೇಹಗಳನ್ನು ವಿಷ್ಣುವಿಗೆ ವರ್ಗಾಯಿಸಿ ಇದರಲ್ಲಿ ತನ್ನ ತಪ್ಪಿಲ್ಲವೆಂದೂ,ಇದೇನೋ ಮಾಯೆಯ ಮಸಲತ್ತೇ ಇರಬೇಕೆಂದೂ,ತನ್ನ ತಲೆ ಕೆಟ್ಟು ಗೊಬ್ಬರವಾಗುವುದರೊಳಗೆ ಇದಕ್ಕೊಂದು ಪರಿಹಾರ ಸೂಚಿಸಬೇಕೆಂದೂ,ಇಲ್ಲವಾದರೆ ತನ್ನನ್ನು ವಜಾ ಮಾಡಿ ಮನೆಗೆ ಕಳಿಸಬೇಕೆಂದೂ ಕೋರಿದ.

ವಿಷ್ಣುವಿಗೆ ಪೀಕಲಾಟಕ್ಕಿಟ್ಟುಕೊಂಡಿತು.ಆಗ ಇಲ್ಲಿಯವರೆಗೂ ಸುಮ್ಮನಿದ್ದು ತನ್ನ ಸಮಸ್ಯೆಯನ್ನು ಪೂರ್ಣ ಹೇಳಿಕೊಂಡಿರದ ಭೂದೇವಿಯು “ದೇವಾ ನಾನು ಕಡೆಯಲ್ಲಿ ಹೇಳಬೇಕಾದದ್ದು ಇದೇ ಸಮಸ್ಯೆಗೆ ತಳುಕು ಹಾಕಿಕೊಂಡಿದೆ. ಈ ಹೊಸ ಬೆಳವಣಿಗೆಯು ನನಗೆ ಬಹಳ ತಳಮಳ ಉಂಟುಮಾಡಿದೆ. ಇದು ಹೀಗೇ ಮುಂದುವರಿದಲ್ಲಿ ನನ್ನನ್ನು ಕಾಡುತ್ತಿರುವ ಇವರುಗಳು ನಿಯಂತ್ರಣಕ್ಕೆ ಸಿಗದೆ ಜೀವಸಹಿತ ತಿಂದುಬಿಡುವರು.ನಿನ್ನ ಸೃಷ್ಟಿಯಲ್ಲಿಯೇ ಅತೀ ಸುಂದರಳೆಂದು ಖ್ಯಾತಿವೆತ್ತಿದ್ದ ನಾನು ಈಗ ಕುರೂಪಿಯಾಗುತ್ತ ನಡೆದಿದ್ದೇನೆ. ಅದಕ್ಕೇ ನಿನಗೆ ನನ್ನ ಮೇಲಿನ ವ್ಯಾಮೋಹ ಹೊರಟು ಹೋಯಿತೋ?” ಎಂದೆನ್ನುತ್ತಾ ಅವನ ಅಂತರಾಳಕ್ಕೆ ಕೈಹಾಕಿ ಚಿವುಟಿದಳು.

ಮುಖ ಹುಳ್ಳಗೆ ಮಾಡಿದ ವಿಷ್ಣು ಲಕ್ಷ್ಮಿಯ ಕಡೆಗೊಮ್ಮೆ ಕಳ್ಳನೋಟ ಬೀರಿದ. ಅವಳು ಸಮಸ್ಯೆಯಲ್ಲಿ ತಾನೂ ಕುತೂಹಲಗೊಂಡಿದ್ದು ಭೂದೇವಿಯ ಮರ್ಮಾಘಾತ ಮಾತಿಗೆ ಸವತಿ ಪ್ರತಿಕ್ರಿಯೆ ನೀಡಲಿಲ್ಲ. ನಿರಾಳವಾದ ವಿಷ್ಣುವು ಯೋಚಿಸಿದ.’ ಇವರೆಲ್ಲರ ಪರಿಪಾಟಲಿನ ಕಷ್ಟಕೋಟಲೆಗಳ ಮೂಲಕಾರಣ ಒಂದೇ ಇರಬೇಕು. ಅದನ್ನು ಕಂಡು ಹಿಡಿದರೆ ಅರ್ಧ ಕೆಲಸ ಮುಗಿದಹಾಗೆ’ ಎಂದುಕೊಂಡು ಎಲ್ಲಿಂದ ಶುರು ಮಾಡಲೀಯೆಂದು ಯೊಚಿಸತೊಡಗಿದ.

ಆದಿಶೇಷನ ಮೇಲೆ ಒರಗಿದ್ದ ವಿಷ್ಣು ಎದ್ದು ಸರಿಯಾಗಿ ಕುಳಿತು ಅವರನ್ನೆಲ್ಲ ಉದ್ದೇಶಿಸಿ ನುಡಿದ ” ನಿಮ್ಮೆಲ್ಲಾ ಸಮಸ್ಯೆಗಳ ಮೂಲ ಒಂದೇ ಸಾಮಾನ್ಯಕಾರಣದಿಂದ ಉದ್ಭವಿಸಿರಬೇಕು. ಎಲ್ಲರ ಸಮಸ್ಯೆಗಳು , ಅದರ ಕಥೆಗಳನ್ನು ಇದುವರೆಗೂ ಕೇಳಿದಿರಿ. ಅದರಿಂದ ಈಗ ನಿಮಗೇನಾದರೂ ಹೊಳೆಯಿತೋ?”.

ಬಸವಳಿದು ಹೈರಾಣವಾಗಿದ್ದ ಅವರ್ಯಾರೂ ಯೋಚಿಸುವ ಸ್ಥಿತಿಯಲ್ಲಿ ಇರಲಿಲ್ಲ. ಎಲ್ಲರೂ ಒಕ್ಕೊರಲಿನಿಂದ, ” ದೇವಾ ಜಗದೋದ್ಧಾರನೂ, ಸರ್ವಾಂತರ್ಯಾಮಿಯೂ, ಜಗನ್ನಿಯಾಮಕನೂ, ನಮ್ಮೆಲ್ಲರನ್ನು ಆಡಿಸುವ ಸೂತ್ರಧಾರಿಯೂ ಆಗಿರುವ ನೀನೇ ಇದಕ್ಕೆ ಸಮರ್ಪಕ ಪರಿಹಾರ ಕೊಡಿಸಬೇಕು. ನಾವೆಲ್ಲಾ ಅಸಹಾಯಕರು” ಎಂದು ಉದ್ಘೊಷಿಸುತ್ತಾ ಅವನ ಕಾಲಿಗೆ ಬಿದ್ದರು.

ಅಷ್ಟರಲ್ಲಿ ನಾರದರ ಆಗಮನ ಆಯ್ತು, “ನಾರಾಯಣ, ಇದೇನು ಎಲ್ಲರೂ ನಿನ್ನ ವೈಕುಂಠದಲ್ಲಿ ಠಿಕಾಣಿ ಹಾಕಿಬಿಟ್ಟಿದ್ದಾರೆ? ಕೆಲಸಕಾರ್ಯಗಳಿಗೆಲ್ಲ ಇವತ್ತು ರಜೆಯೋ ಹೇಗೆ” ಎಂದು ಕೀಟಲೆ ಮಾಡಿದರು.

ವಿಷ್ಣುವು ಅವರನ್ನು ಕುರಿತು, ” ನಾರದರೇ ಇವರಿಗೆ ಬಂದಿರುವ ಕಷ್ಟ ನಿಮಗೆ ತಿಳಿದೇ ಇರುತ್ತದೆ. ಇದೆಲ್ಲದರ ಕಾರಣ ನಿಮಗೆ ತಿಳಿದಿದೆಯೋ?” ಕೇಳಿದ.

– ಮುಂದುವರಿಯುವುದು …

3 ಟಿಪ್ಪಣಿಗಳು Post a comment
 1. ಫೆಬ್ರ 19 2015

  Ayyyyo.. bega next episode upload maadi 🙂

  ಉತ್ತರ
 2. Mandagadde Srinivasaiah
  ಫೆಬ್ರ 21 2015

  It is a reflection of days position. Good article. But I am worried whether this comes under the scanner of ‘moral police’!!

  ಉತ್ತರ

Trackbacks & Pingbacks

 1. ವೈಕುಂಠದಲ್ಲಿ ಕೋಲಾ(ಕ್ಲೋನಾ)ಹಲ-ವಿಡಂಬನಾ ಕಥೆ – ಭಾಗ ೨ | ನಿಲುಮೆ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments