ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 30, 2015

8

ವರ್ಣಮಯ ಬದುಕಿಗೆ ಸಮಚಿತ್ತದ ವಿದಾಯ

‍ನಿಲುಮೆ ಮೂಲಕ

ತನ್ನ ಎಂಬತ್ತೆರಡನೆ ವಯಸ್ಸಿನಲ್ಲಿ ಕ್ಯಾನ್ಸರ್‍ನಿಂದ ತೀರಿಕೊಂಡ ಜಗತ್ಪ್ರಸಿದ್ಧ ನರವಿಜ್ಞಾನಿ ಮತ್ತು ಜನಪ್ರಿಯ ವಿಜ್ಞಾನ ಬರಹಗಾರ ಆಲಿವರ್ ಸ್ಯಾಕ್ಸ್, ತನ್ನ ಇಳಿಗಾಲದಲ್ಲಿ ಬರೆದುಕೊಂಡ ಚರಮಗೀತೆ. ಡಾ. ಆಲಿವರ್ ಮತ್ತು ಡಾ. ಕಲ್ಬುರ್ಗಿ ತೀರಿಕೊಂಡದ್ದು ಒಂದೇ ದಿನ.

ಕನ್ನಡಕ್ಕೆ: ರೋಹಿತ್ ಚಕ್ರತೀರ್ಥ

ಆಲಿವರ್ ಸ್ಯಾಕ್ಸ್ಕೇವಲ ಒಂದು ತಿಂಗಳ ಹಿಂದೆಯಷ್ಟೇ ನಾನು ಸುದೃಢ, ಗಟ್ಟಿಜೀವದ ಆರೋಗ್ಯವಂತನೆಂದು ಭಾವಿಸಿದ್ದೆ. 81ನೇ ಇಳಿವಯಸ್ಸಿನಲ್ಲೂ ಒಂದು ಮೈಲಿ ನೀರಲ್ಲಿ ಈಜಬಲ್ಲವನಾಗಿದ್ದೆ. ಆದರೆ, ಕೆಲವು ವಾರಗಳ ಹಿಂದೆಯಷ್ಟೇ ಪರೀಕ್ಷೆಯಲ್ಲಿ ತಿಳಿಯಿತು – ನನಗೆ ಯಕೃತ್ತಿನ ಕ್ಯಾನ್ಸರ್ ಬಂದಿದೆ. ಒಂಬತ್ತು ವರ್ಷಗಳ ಹಿಂದೆ ನನ್ನ ಕಣ್ಣುಗುಡ್ಡೆಯ ಮೇಲೊಂದು ಸಣ್ಣ ಟ್ಯೂಮರ್ ಬೆಳೆದಿತ್ತು. ಆಗ ಅದನ್ನು ಲೇಸರ್ ಚಿಕಿತ್ಸೆಯ ಮೂಲಕ ತೆಗೆದುಹಾಕಬೇಕಾಗಿ ಬಂದಿತ್ತು. ಅಲ್ಲದೆ, ಆ ಆಪರೇಶನ್ ಮಾಡಿಸಿಕೊಳ್ಳುವ ಮೂಲಕ ನಾನು ಆ ಕಣ್ಣಿನಲ್ಲಿ ಶಾಶ್ವತವಾದ ಅಂಧತ್ವವನ್ನೂ ಅನಪೇಕ್ಷಿತ ಉಡುಗೊರೆಯಾಗಿ ಪಡೆಯಬೇಕಾಯಿತು. ಅಂಥ ಆಪರೇಶನ್ ಮಾಡಿಸಿಕೊಳ್ಳುವ ಅರ್ಧಕ್ಕರ್ಧ ಜನರಿಗೆ ದೃಷ್ಟಿ ಹೋಗುವುದಿಲ್ಲ ಎಂದು ವೈದ್ಯರು ಭರವಸೆಯೇನೋ ಕೊಟ್ಟಿದ್ದರು. ಆದರೆ, ಅವರು ಹೇಳಿದ ಅರ್ಧ ಬಿಟ್ಟು ಮಿಕ್ಕರ್ಧ ಜನರ ಗುಂಪಿನಲ್ಲಿ ನಾನಿದ್ದೆನೆಂದು ನನಗಾಗ ಗೊತ್ತಿರಲಿಲ್ಲ. ಅದೃಷ್ಟಹೀನತೆ ಎನ್ನಬೇಕು!

ಆದರೇನಂತೆ, ನಾನೇನೂ ಸಾಯಲಿಲ್ಲವಲ್ಲ! ಅದಾಗಿ ಒಂಬತ್ತು ವರ್ಷಗಳ ಕಾಲ ಯಮನನ್ನು ವಂಚಿಸಿ ಬದುಕಿದ್ದೇನೆಂಬ ಹೆಮ್ಮೆಯಿದೆ ನನಗೆ. ಆದರೀಗ ಮತ್ತೆ ಮೃತ್ಯುವಿನ ಎದುರಾಎದುರು ಕೂತು ಸುಖಕಷ್ಟ ಕೇಳುವ ಪರಿಸ್ಥಿತಿ ಬಂದಿದೆ. ಕ್ಯಾನ್ಸರ್ ಗಡ್ಡೆ ಯಕೃತ್ತಿನ ಮೂರನೇ ಒಂದು ಭಾಗವನ್ನು ಆವರಿಸಿದೆ. ಅದರ ಬೆಳವಣಿಗೆಯನ್ನು ನಿಯಂತ್ರಿಸಬಹುದೇನೋ, ಆದರೆ, ಅದರ ಸಂಪೂರ್ಣ ನಾಶ ಈಗ ಸಾಧ್ಯವಿಲ್ಲದ ಹಂತಕ್ಕೆ ಬಂದುನಿಂತಿದೆ. ಸಾವು ಅನಿವಾರ್ಯ. ತಪ್ಪಿಸಿಕೊಳ್ಳುವಂತಿಲ್ಲ.

ನನ್ನ ಮುಂದಿರುವ ಕೆಲವು ತಿಂಗಳುಗಳನ್ನು ಹೇಗೆ ಕಳೆಯಬಯಸುತ್ತೇನೆನ್ನುವುದು ಸಂಪೂರ್ಣವಾಗಿ ನನಗೇ ಬಿಟ್ಟ ವಿಚಾರ. ಆದಾಯವಿಲ್ಲದೆ ಬ್ಯಾಂಕಿನಲ್ಲಿ ಕೂಡಿಟ್ಟ ದುಡ್ಡಲ್ಲಷ್ಟೇ ಜೀವನ ಕಳೆಯಬೇಕಾದ ನಿವೃತ್ತನಂತೆ ನಾನೀಗ ಬೇಗಬೇಗ ಮುಗಿದುಹೋಗುತ್ತಿರುವ ನನ್ನ ಬದುಕಿನ ಕೊನೆಗಾಲವನ್ನು ತೀವ್ರವಾಗಿ ಅನುಭವಿಸುತ್ತ, ಆದಷ್ಟೂ ಹೆಚ್ಚು ಸೃಜನಾತ್ಮಕವಾಗಿ ಕಳೆಯಬೇಕಾಗಿದೆ. ಈ ದಾರಿಯಲ್ಲಿ ನನಗೆ ಭರವಸೆಯ ಬೆಳಕಾಗಿ ಕೈಹಿಡಿಯುವುದು ನನ್ನ ಇಷ್ಟದ ತತ್ವಜ್ಞಾನಿಯಾದ ಡೇವಿಡ್ ಹ್ಯೂಮ್‍ನ ಮಾತುಗಳು. 65ನೇ ವಯಸ್ಸಿನಲ್ಲಿ ಅವನಿಗೆ ತನ್ನ ಬದುಕು ಮುಗಿಯಿತು; ಇನ್ನು ಕೆಲವೇ ದಿನಗಳಲ್ಲಿ ಪೆಟ್ಟಿಗೆ ಕಟ್ಟಿ ಈ ಪ್ರಪಂಚಕ್ಕೆ ವಿದಾಯ ಹೇಳಬೇಕು ಎನ್ನುವುದು ಖಚಿತವಾದಾಗ, 1776ರ ಏಪ್ರೀಲ್‍ನಲ್ಲಿ ಅವನು ನೀಳ್ಗತೆಯಂತಿದ್ದ ಒಂದು ಆತ್ಮಚರಿತ್ರೆಯನ್ನು ಒಂದೇ ದಿನದಲ್ಲಿ ಬರೆದು ಮುಗಿಸಿದನಂತೆ. ಅದಕ್ಕವನು ಕೊಟ್ಟ ಹೆಸರು: “ನನ್ನ ಸ್ವಂತ ಬದುಕು”.

“ಮುಗಿದುಹೋಗುತ್ತಿರುವ ನನ್ನ ಬದುಕಿನ ಕೊನೆಯ ಎಳೆಗಳನ್ನು ನಾನೀಗ ಗಬಗಬನೆ ಮುಕ್ಕಿಬಿಡಬೇಕು! ಆದರೂ ನನ್ನ ಜೀವನದಲ್ಲಿ ನಾನು ಕಡಿಮೆ ನೋವು ತಿಂದಿದ್ದೇನೆ; ನನ್ನ ಚೈತನ್ಯದಲ್ಲಿ ಒಂದಂಶವೂ ಕುಂದಿಲ್ಲ. ಇಂದಿಗೂ ಓದಿನಲ್ಲಿ, ಅಧ್ಯಯನದಲ್ಲಿ, ಗೆಳೆಯರ ಜೊತೆಗಿನ ಒಡನಾಟದಲ್ಲಿ ಅದೇ ಹಿಂದಿನ ತಾದಾತ್ಮ್ಯ ಮತ್ತು ಪ್ರೀತಿ ಉಳಿದುಕೊಂಡಿದೆ” ಎಂದು ಅವನು ಬರೆದುಕೊಂಡಿದ್ದಾನೆ. ಹ್ಯೂಮ್‍ಗಿಂತ ಹದಿನೈದು ಹೆಚ್ಚುವರಿ ವರ್ಷಗಳು ನನಗೆ ಸಿಕ್ಕಿದ್ದು ನನ್ನ ಪುಣ್ಯವೆಂದೇ ಹೇಳಬೇಕು! ಈ ವರ್ಷಗಳನ್ನು ಅತ್ಯಂತ ತನ್ಮಯತೆಯಿಂದ ನನಗಿಷ್ಟವಾದ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತ ಕಳೆದಿದ್ದೇನೆಂಬ ತೃಪ್ತಿಯಿದೆ ನನಗೆ. ಈ ಅವಧಿಯಲ್ಲಿ ಐದು ಪುಸ್ತಕಗಳನ್ನು ಪ್ರಕಟಿಸಿದ್ದೇನೆ; ಜೊತೆಗೆ ಹ್ಯೂಮ್‍ನದ್ದಕ್ಕಿಂತ ಕೊಂಚ ದೀರ್ಘವಾದ ಆತ್ಮಚರಿತ್ರೆಯನ್ನು ಬರೆದುಕೊಂಡಿದ್ದೇನೆ. ಇನ್ನೂ ಹಲವಾರು ಪುಸ್ತಕಗಳು ಅಚ್ಚಿನಮನೆಯಿಂದ ನನ್ನ ಮೆಚ್ಚಿನ ಓದುಗರ ಕೈಗೆ ಸೇರಲು ಕಾಯುತ್ತಿವೆ. ಹ್ಯೂಮ್ ಮುಂದುವರಿಯುತ್ತ ಹೇಳುತ್ತಾನೆ: “ಬದುಕಿನಲ್ಲಿ ವ್ಯವಸ್ಥಿತವಾಗಿ, ಸ್ಥಿತಪ್ರಜ್ಞನಾಗಿ, ಹಾಸ್ಯಪ್ರಜ್ಞೆ ಉಳಿಸಿಕೊಂಡ ನಾಗರಿಕನಾಗಿ, ದ್ವೇಷಕ್ಕೆ ಮನಸ್ಸನ್ನು ಕೊಡದೆ, ಬಹಳ ಎಚ್ಚರದಿಂದ ನನ್ನ ದಿನಗಳನ್ನು ಕಳೆದಿದ್ದೇನೆ; ಕಳೆಯುತ್ತಲೂ ಇದ್ದೇನೆ”. ಬಹುಶಃ ಇಲ್ಲಿ ನನ್ನ ಮತ್ತು ಹ್ಯೂಮ್‍ನ ದಾರಿಗಳು ಕವಲೊಡೆಯುತ್ತವೆ ಎನಿಸುತ್ತದೆ. ನನ್ನ ಬದುಕಿನಲ್ಲಿ ಆಯಾಚಿತವಾಗಿ ಬಂದುಹೋದ ಪ್ರೀತಿ, ಗೆಳೆತನಗಳನ್ನು ನಾನೂ ಅವನಷ್ಟೇ ಸಂಭ್ರಮದಿಂದ ಅನುಭವಿಸಿದವನಾದರೂ ನಾನು ಬದುಕನ್ನು ವ್ಯವಸ್ಥಿತವಾಗಿ, ಲೆಕ್ಕಾಚಾರ ಹಾಕಿ ಕಳೆದೆ ಎಂದು ಮಾತ್ರ ಹೇಳಲಾರೆ. ನನ್ನ ಬದುಕು ಬೆಟ್ಟದ ತುದಿಯಲ್ಲಿ ಹುಟ್ಟಿ ಕಣಿವೆಕೊಳ್ಳಗಳನ್ನು ಹತ್ತಿಳಿದು ದುಮ್ಮಿಕ್ಕುವ ಧಬಧಬೆಯಂತಿತ್ತು ಎಂದು ಹೇಳಬಹುದೇನೋ. ನನ್ನ ನೂರೆಂಟು ಹುಚ್ಚಾಟಗಳನ್ನು ಹತ್ತಿರದಿಂದ ನೋಡಿದವರು ಈ ಮಾತನ್ನು ಮನಸಾ ಒಪ್ಪುತ್ತಾರೆ. ಸಮಪಾತಳಿಯಲ್ಲಿ ರೈಲಿನಂತೆ ಏಕಪ್ರಕಾರವಾಗಿ ಸಾಗುವುದು ನನಗೊಗ್ಗದ ಕೆಲಸ.

ಆದರೂ ಮತ್ತೆ ಹ್ಯೂಮ್‍ನ ಮಾತುಗಳಿಗೆ ಮರಳುವುದಾದರೆ, ಅವನು ಹೇಳಿದಂತೆ, ಜೀವನದ ದಾರಿಗೆ ವಿಮುಖನಾಗಿ ನಡೆಯುವುದು ಅಷ್ಟೊಂದು ಸುಲಭವಲ್ಲ. ಮೃತ್ಯುವಿನ ಒಂದು ಪುಟ್ಟ ಟೈಂಬಾಂಬ್ ನನ್ನ ಉದರದೊಳಗೆ ಟಿಕ್‍ಟಿಕ್‍ಗುಟ್ಟುತ್ತಿದೆ ಎಂದು ಗೊತ್ತಾದ ದಿನದಿಂದ ನಾನು ನನ್ನ ಬದುಕನ್ನು ಅವಲೋಕಿಸುತ್ತಿದ್ದೇನೆ. ಇದುವರೆಗೆ ಬಾಳಿದ ಅಷ್ಟೂ ವರ್ಷಗಳ ಮೇಲೆ ಈಗೊಂದು ಸಿಂಹಾವಲೋಕನ ಮಾಡಿದಾಗ, ಅದು ಬೆಟ್ಟದ ತುದಿಯಲ್ಲಿ ನಿಂತು ಮಾಡಿದ ಹಕ್ಕಿನೋಟದಂತೆ ಕಾಣುತ್ತದೆ. ನನ್ನ ಬದುಕಿನ ಬಿಡಿಭಾಗಗಳು ಈಗ ಒಂದು ದೊಡ್ಡ ಚಿತ್ರದ ವಿವಿಧ ತುಣುಕುಗಳಂತೆ ಗೋಚರಿಸುತ್ತವೆ. ಬದುಕು ಮುಗಿಯಿತು ಅನ್ನಿಸಬೇಕಿದ್ದ ಈ ಸಮಯದಲ್ಲಿ ನನಗೆ ಹಿಂದೆಂದೂ ಇರದಿದ್ದ ಜೀವಂತಿಕೆ ಆವರಿಸುತ್ತಿದೆ. ನನ್ನ ಸ್ನೇಹವಲಯದ ಅಂಚನ್ನೊಮ್ಮೆ ಸವರಿಕೊಂಡು ಬರಲು, ಆಪ್ತರ ಜೊತೆ ಸಮಯ ಕಳೆಯಲು, ಇನ್ನಷ್ಟು ಬರೆಯಲು, ಸಾಧ್ಯವಾದರೆ ಒಂದಷ್ಟು ಪ್ರವಾಸ ಹೋಗಿಬರಲು, ಜ್ಞಾನದ ಹೊಸಮಜಲುಗಳನ್ನು ಹತ್ತಲು, ಚಿಂತನೆಯ ಆಳಕ್ಕೆ ಮುಳುಗುಹಾಕಲು ನಾನೀಗ ಸಂಪೂರ್ಣ ಸಜ್ಜಾಗಬೇಕಿದೆ. ಇದಕ್ಕಾಗಿ ನನಗೆ ಧೈರ್ಯ, ಕೆಚ್ಚೆದೆ, ಧಿಮಾಕುಗಳಿರಬೇಕು. ಜಗತ್ತನ್ನು ಯಾವ ಗೊಂದಲಗಳಿಲ್ಲದೆ ಸರಳವಾಗಿ, ಸ್ಪಷ್ಟವಾಗಿ ನೋಡುವ ತಾಳ್ಮೆ ಮತ್ತು ಒಳನೋಟ ಬೇಕು. ಇವನ್ನೆಲ್ಲ ಮರಣದೇವತೆಯನ್ನು ಎದುರಿಟ್ಟುಕೊಂಡೇ ನಾನು ಗಳಿಸಿಕೊಳ್ಳಬೇಕಾಗಿದೆ!

ಸ್ವಾರಸ್ಯವೆಂದರೆ ನನಗೀಗ ಗೊಂದಲಗಳಿಲ್ಲ. ನನ್ನ ಗುರಿಯಲ್ಲಿ ಗೋಜಲುಗಳಿಲ್ಲ. ಅನಗತ್ಯವಾದದ್ದನ್ನು ಮಾಡುತ್ತ ಕೂರಲು ಸಮಯವಿಲ್ಲ. ನಾನು ನನ್ನ ಕರ್ತವ್ಯ ಮತ್ತು ಸಾಧನೆಗಳ ಕಡೆ ಗಮನ ಕೇಂದ್ರೀಕರಿಸಬೇಕಾಗಿದೆ. ಪ್ರತಿದಿನ ರಾತ್ರಿ ಎಂಟು ಗಂಟೆಗೆ ಟಿವಿಯ ಮುಂದೆ ಸುದ್ದಿಗಾಗಿ ಮೈಚೆಲ್ಲಿ ಕೂರುವುದು ಇನ್ನುಮುಂದೆ ಸಾಧ್ಯವಿಲ್ಲ. ರಾಜಕೀಯವಾಗಲೀ ಗ್ಲೋಬಲ್ ವಾರ್ಮಿಂಗ್ ಬಗ್ಗೆ ನಡೆಯುವ ಪ್ಯಾನೆಲ್ ಚರ್ಚೆಗಳಾಗಲೀ ನನ್ನ ಆಸಕ್ತಿ ಕೆರಳಿಸಲಾರವು. ಇದು ನಿರಾಸಕ್ತಿಯಲ್ಲ; ಅನಾಸಕ್ತಯೋಗ. ಮಧ್ಯಪ್ರಾಚ್ಯದ ರಾಜಕೀಯ ಘರ್ಷಣೆಗಳು, ಭೂಮಿಯ ಬಿಸಿ ಏರುತ್ತಿರುವುದು, ಹೆಚ್ಚುತ್ತಿರುವ ಸಾಮಾಜಿಕ ಅಸಮತೆ ಇವುಗಳ ಬಗ್ಗೆ ನನಗೆ ಕಾಳಜಿ ಇದೆ; ಆದರೆ ಅವು ಸದ್ಯಕ್ಕೆ ನನ್ನ ಆದ್ಯತೆಗಳಲ್ಲ ಅಷ್ಟೆ. ಅವನ್ನೆಲ್ಲ ನನ್ನ ಮುಂದಿನ ಜನಾಂಗದ ಹುಡುಗರಿಗಾಗಿ ಬಿಟ್ಟುಬಿಡುತ್ತೇನೆ. ಈಗಿನ ಪೀಳಿಗೆಯ ಯುವಕರ ಬಿಸಿರಕ್ತ ಮತ್ತು ಕ್ರಾಂತಿ ಮಾಡಬೇಕೆಂಬ ಹೊಳಪು ಕಣ್ಣುಗಳನ್ನು ನೋಡಿದಾಗ ಅವರ ಬಗ್ಗೆ ಭರವಸೆ ಮೂಡುತ್ತದೆ. ಜಗತ್ತಿನ ಸಮಸ್ಯೆಗಳನ್ನು ಇವರಿಗಾಗಿ ಬಿಟ್ಟುಹೋಗುವುದರಲ್ಲಿ ನೆಮ್ಮದಿ ಇದೆ. ಭವಿಷ್ಯ ಇವರ ಕೈಯಲ್ಲಿ ಚೆನ್ನಾಗಿರುತ್ತದೆಂಬ ನಂಬಿಕೆ ಇದೆ.

ಕಳೆದ ಹತ್ತುವರ್ಷಗಳಿಂದ ನಾನು ಬದುಕನ್ನು ಅದರೆಲ್ಲ ಸೂಕ್ಷ್ಮಗಳೊಂದಿಗೆ ಎಚ್ಚರದಿಂದ ಗಮನಿಸುತ್ತಿದ್ದೇನೆ. ನನ್ನೊಡನೆ ಬಾಳಿದವರೆಲ್ಲ ಒಬ್ಬೊಬ್ಬರಾಗಿ ಇಹಲೋಕದ ಕರ್ತವ್ಯ ಮುಗಿಸಿಹೋದದ್ದನ್ನು ನೋಡಿದ್ದೇನೆ. ಪ್ರತಿ ಸಾವು ಕೂಡ ತನ್ನ ಜೊತೆ ಬದುಕಿರುವವರ ಆತ್ಮದ ಒಂದಷ್ಟನ್ನು ಸೆಳೆದುಕೊಂಡು ಹೋಗುತ್ತದೆ. ಮನುಷ್ಯರು ಮಡಿದಾಗ “ತುಂಬಲಾರದ ನಷ್ಟ” ಎನ್ನುತ್ತೇವೆ. ಈ ಜಗತ್ತಿನಲ್ಲಿ ಒಬ್ಬನಂತೆ ಇನ್ನೊಬ್ಬನಿಲ್ಲ. ಹಾಗಾಗಿ ಯಾವನೇ ಸತ್ತರೂ ಖಂಡಿತ ಅವನ ಜಾಗವನ್ನು ಅಷ್ಟೇ ಸಮರ್ಥವಾಗಿ ತುಂಬಬಲ್ಲ ಇನ್ನೊಬ್ಬ ಸಿಗುವುದಿಲ್ಲ. ಬೇರಾವ ಬೆಣೆಯಿಂದಲೂ ಮುಚ್ಚಲಾರದ ತೂತುಗಳಂತೆ ಈ ಸಾವುಗಳು ನಮ್ಮನ್ನು ಕಾಡುತ್ತವೆ, ಅಣಕಿಸುತ್ತವೆ. ಪ್ರತಿಯೊಬ್ಬ ಮನುಷ್ಯನೂ ಈ ಜಗತ್ತಿನಲ್ಲಿ ಅನನ್ಯನಾಗಿ ಹುಟ್ಟಬೇಕು. ಬೇರಾರಿಗೂ ಸಮನಲ್ಲದಂತೆ ತನ್ನನ್ನು ರೂಪಿಸಿಕೊಳ್ಳಬೇಕು. ಇದುವರೆಗೆ ಯಾರೂ ನಡೆಯದ ದಾರಿಯಲ್ಲಿ ಮಗುವಿನಂತೆ ಹೊಸಹೆಜ್ಜೆ ಮೂಡಿಸುತ್ತ ಹೋಗಬೇಕು. ಹಾಗಾಗಿ ಪ್ರತಿಯೊಬ್ಬನ ಮೃತ್ಯು ಕೂಡ ಅಷ್ಟೇ ಅನನ್ಯ, ವಿಶಿಷ್ಟ. ಯಾರಿಬ್ಬರೂ ಒಂದೇ ರೀತಿಯಲ್ಲಿ ಬದುಕಿ ಸಾಯುವುದು ಸಾಧ್ಯವಿಲ್ಲ.

ನನಗೆ ಭಯವಿಲ್ಲ ಎಂದು ಸುಳ್ಳು ಹೇಳಲಾರೆ. ಆದರೆ, ಆ ಭಯವನ್ನೂ ಮೆಟ್ಟಿನಿಂತ ಕೃತಜ್ಞತಾಭಾವ ನನ್ನನ್ನು ಆವರಿಸಿದೆ. ಈ ಜಗತ್ತಿನಲ್ಲಿ ನಾನು ಜನರನ್ನು ಪ್ರೀತಿಸಿದೆ; ಅಷ್ಟೇ ಪ್ರೀತಿಯನ್ನು ಮರಳಿ ಪಡೆದೆ. ಓದಿದೆ, ಹೊಸ ಊರುಗಳನ್ನು ನೋಡಿದೆ, ಯೋಚಿಸಿದೆ, ಬರೆದೆ. ಈ ಜಗತ್ತಿನ ಜೊತೆಗಿನ ನನ್ನ ವ್ಯವಹಾರ ಒಂದು ತೀವ್ರ ಭಾವಾವೇಶದ, ಹಲವು ವರ್ಷಗಳವರೆಗೆ ಮಧುರ ನೆನಪಿನಂತೆ ಕಾಡುವ ಅತಿರೇಕದ ಪ್ರಣಯದಂತಿತ್ತು. ಅಷ್ಟು ಸಾಕು ನನಗೆ! ಹೃದಯದ ಭಾಷೆ ಅರಿಯಬಲ್ಲ ವ್ಯಕ್ತಿಯಾಗಿ, ಚಿಂತಿಸಬಲ್ಲ ಪ್ರಾಣಿಯಾಗಿ ಈ ಸುಂದರ ಜಗತ್ತಿನಲ್ಲಿ ಇಷ್ಟು ಕಾಲ ಕಳೆದೆ ಎನ್ನುವುದಕ್ಕಿಂತ ದೊಡ್ಡ ಕೃಪೆ ಇನ್ನೇನಿದೆ.

Read more from ಲೇಖನಗಳು
8 ಟಿಪ್ಪಣಿಗಳು Post a comment
  1. ISHWARA BHAT BAKRABAIL
    ಸೆಪ್ಟೆಂ 30 2015

    ಪ್ರತಿ ಸಾವು ಕೂಡ ತನ್ನ ಜೊತೆ ಬದುಕಿರುವವರ ಆತ್ಮದ ಒಂದಷ್ಟನ್ನು ಸೆಳೆದುಕೊಂಡು ಹೋಗುತ್ತದೆ!

    ಉತ್ತರ
  2. H.S. Raghavendra Rao
    ಸೆಪ್ಟೆಂ 30 2015

    I liked this article immensely. You have communicated the ideas in very chaste and moving Kannada.
    H.S. Raghavendra Rao

    ಉತ್ತರ
  3. Satyanarayana K
    ಸೆಪ್ಟೆಂ 30 2015

    An excellent and very moving read.Rohith Chakrathirtha is one of my favourite writer.His diction and idiom is pucca.How to get in touch with him.

    Sent from my iPhone

    >

    ಉತ್ತರ
  4. ಮಂದಾಕಿನಿಯ ಕಾಲ್ನಡಿಗೆ
    ಸೆಪ್ಟೆಂ 30 2015

    ಆದರ್ಶಪ್ರಾಯ ವ್ಯಕ್ತಿತ್ವದ ಬಗೆಗಿನ ಅರ್ಥಪೂರ್ಣ ಬರಹ. Nicely narrated. Liked it very much.

    ಉತ್ತರ
  5. raghunath
    ಸೆಪ್ಟೆಂ 30 2015

    ಸಾರ್ಥಕವಾಗಿ ಬದುಕುವುದೆಂದರೆ ಇದೇ ಇರಬೇಕುಆಆ

    ಉತ್ತರ
  6. girijashastry
    ಸೆಪ್ಟೆಂ 30 2015

    ಸಾವು ಎಂದರೆ ಬದುಕು, ಸಾವು ಎಂದರೆ ಸೃಜನಶೀಲತೆ…ಪ್ರೀತಿ…..wow…very touchimg

    ಉತ್ತರ
  7. ಆಕ್ಟೋ 1 2015

    ಓದುತ್ತಾ ಹೋದಂತೆ ಆಮಾತುಗಳು ನಮ್ಮದೇ ಅನಿಸತೊಡಗುತ್ತವೆ.

    ಉತ್ತರ
  8. santoshkumar
    ಆಕ್ಟೋ 3 2015

    ಆಲಿವರ್ ಸ್ಯಾಕ್ಸ್ ನ ಮಾತುಗಳಿಗೆ ಮೈಕ್ ಹಿಡಿಯಬಲ್ಲ ಏಕೈಕ ಕನ್ನಡಿಗ ರೋಹಿತ್!

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments