ಆಳ್ವಾಸ್ ನುಡಿಸಿರಿ : ನಮ್ಮ ಸಮೃದ್ಧ ಸಾಂಸ್ಕೃತಿಕ ಜೀವನದ ಅನಾವರಣ
– ಡಾ.ಎಂ.ಮೋಹನ್ ಆಳ್ವ
(ಬೆಳಗಾವಿ ಜಿಲ್ಲೆಯ ಅಥಣಿ, ಚಿಕ್ಕೋಡಿ, ನಿಪ್ಪಾಣಿ ಹಾಗೂ ಸವದತ್ತಿ ತಾಲೂಕುಗಳಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಿತು. ಈ ಘಟಕಗಳ ಕಾರ್ಯಕ್ರಮದಲ್ಲಿ ಡಾ.ಎಂ.ಮೋಹನ್ ಆಳ್ವರು ಆಳ್ವಾಸ್ ನುಡಿಸಿರಿಯ ಉದ್ದೇಶ, ಪ್ರಾಮುಖ್ಯತೆಗಳನ್ನು ಜನರೊಡನೆ ಮನಃಪೂರ್ವಕವಾಗಿ ಹಂಚಿಕೊಂಡರು. ಅವರ ಮನದಾಳದ ಮಾತುಗಳು ಹೀಗಿದ್ದವು )
ಭಾರತ ಎಲ್ಲಾ ವಿಧದಿಂದಲೂ ಸಂಪದ್ಭರಿತವಾದ ದೇಶ. ಈ ದೇಶದ ಸಾಂಸ್ಕೃತಿಕ ಹಿನ್ನೆಲೆ ಈ ಮಾತಿನಿಂದ ಹೊರತಾದುದಲ್ಲ. ಸಾಂಸ್ಕೃತಿಕವಾಗಿ ಅತ್ಯಂತ ಸಮೃದ್ಧವಾದ ದೇಶ ನಮ್ಮದು. ನಮಗಿರುವ ಸಾಂಸ್ಕೃತಿಕ ಹಿನ್ನೆಲೆ ಬೇರಾವ ದೇಶಕ್ಕೂ ಇಲ್ಲ. ಆದರೆ ಇಂದು ಈ ಎಲ್ಲಾ ಚಟುವಟಿಕೆಗಳ ಭಾರತೀಯರಾದ ನಮ್ಮಿಂದ ಎಲ್ಲೋ ದೂರ ಸರಿಯುತ್ತಿವೆ. ನಮ್ಮಿಂದ ಮರೆಯಾಗುತ್ತಿರುವ ಸಾಂಸ್ಕೃತಿಕ ಚಟುವಟಿಕೆಗಳನ್ನು ಉಳಿಸಿ, ಬೆಳೆಸಿ, ಆದರಿಸುವ ಕಾರ್ಯ ನಮ್ಮಿಂದಾಗಬೇಕಿದೆ. ಈ ಹಿನ್ನೆಲೆಯಲ್ಲಿ ನಾವು ಆರಂಭಿಸಿರುವ ಸಾಂಸ್ಕೃತಿಕ ಉತ್ಸವಗಳೇ `ಆಳ್ವಾಸ್ ನುಡಿಸಿರಿ’ ಹಾಗೂ `ಆಳ್ವಾಸ್ ವಿರಾಸತ್’ ಕಾರ್ಯಕ್ರಮಗಳು.
ಆಳ್ವಾಸ್ ನುಡಿಸಿರಿ ಕನ್ನಡ ಭಾಷೆಯ ಕುರಿತಾದ ರಾಷ್ಟ್ರೀಯ ನಾಡು-ನುಡಿಯ ಉತ್ಸವ. ಇದು ಆರಂಭವಾಗಿ 12 ವರ್ಷ ಸಂದಿವೆ. ಇನ್ನು ಆಳ್ವಾಸ್ ವಿರಾಸತ್ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ. ವಿರಾಸತ್ ಆರಂಭವಾಗಿ 22 ವರ್ಷ ಕಳೆದಿವೆ. ದೇಶ-ವಿದೇಶಗಳಲ್ಲಿರುವ ಕಲಾ ರಸಿಕರನ್ನು ಒಂದುಗೂಡಿಸುವ ಕಾರ್ಯ ಇದಾಗಿದೆ.
ಸಾಂಸ್ಕೃತಿಕ ಚಟುವಟಿಕೆಗಳು ಅತೀ ಮುಖ್ಯ
ನಾವು ಈ ಕಾರ್ಯಕ್ರಮಗಳನ್ನು ಮಾಡುವಾಗ ಸಾಕಷ್ಟು ಹಣ ಖರ್ಚಾಗುತ್ತದೆ. ನೀವು ವ್ಯರ್ಥ ಹಣ ಪೋಲು ಮಾಡುತ್ತೀರಿ ಎನ್ನುವವರೂ ಇದ್ದಾರೆ. ಆದರೆ ನಮ್ಮ ಸಾಂಸ್ಕೃತಿಕ ಹಿನ್ನೆಲೆಯನ್ನು ಕಾಪಾಡುವಾಗ ಇದು ಅನಿವಾರ್ಯ ಹಾಗೂ ಅವಶ್ಯಕ. ಇಂದು ಅನೇಕ ಜಾಗತಿಕ ಸವಾಲುಗಳು ನಮ್ಮೆದುರಿಗಿವೆ. ವಿದ್ಯಾರ್ಥಿಗಳು ಅವನ್ನು ಎದುರಿಸಲು ಯಾವಾಗಲೂ ತಯಾರಾಗಿರಬೇಕು. ಹಾಗಿರುವಾಗ ಕೇವಲ ಶೈಕ್ಷಣಿಕವಾಗಿ ಬಲವಾಗಿದ್ದರೆ ಸಾಲದು; ಮಾನಸಿಕವಾಗಿ, ಬೌದ್ದಿಕವಾಗಿ ಆ ಸವಾಲುಗಳನ್ನೆದುರಿಸುವ ಪ್ರೌಢಿಮೆ ನಮ್ಮ ಮಕ್ಕಳಿಗಿರಬೇಕು. ಮಸ್ಯೆಗಳಿಗೆ ಪರಿಹಾರ ಹುಡುಕುವ, ಕಾಲಕ್ಕೆ ತಕ್ಕಂತೆ ಬದಲಾಗುವ ಮಾನಸಿಕ ಸ್ಥಿತಿ ಇರಲೇಬೇಕು. ಈ ಹಿನ್ನೆಲೆಯಲ್ಲಿ ಇಂದಿನ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸ್ಪರ್ಶ ಇರಬೇಕಾದುದು ಅತಿ ಮುಖ್ಯ. ಆದ್ದರಿಂದ ಇಂತಹ ಕಾರ್ಯಕ್ರಮಗಳು ಮಹತ್ವದ್ದೆನಿಸುತ್ತವೆ. ನಮ್ಮ ಸಸ್ಥೆಯಲ್ಲಿರುವ 22,000 ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸ್ಪರ್ಶ ನೀಡುವ ಕಾರ್ಯ ನಡೆದೇ ಇರುತ್ತದೆ. ನಮ್ಮ ವಿದ್ಯಾರ್ಥಿಗಳು ಎಲ್ಲ ರೀತಿಯಿಂದಲೂ ಸದೃಢರಾಗಿರಬೇಕೆಂಬ ಇರಾದೆ ನಮ್ಮದು. ಮತ್ತಷ್ಟು ಓದು