ವಿಷಯದ ವಿವರಗಳಿಗೆ ದಾಟಿರಿ

Archive for

26
ನವೆಂ

ಪ್ರಶಸ್ತಿ ವಾಪಸಾತಿ : ಚಿಂತನೆಗಳು ವೈಚಾರಿಕವಾಗಿರಲಿ

– ಡಾ. ಟಿ. ಗೋವಿಂದರಾಜು

ಪ್ರಶಸ್ತಿಪ್ರಶಸ್ತಿ ವಾಪಸಿಗರ ಸಾಮಾಜಿಕ ಕಾಳಜಿಯನ್ನು ಅರ್ಥ ಮಾಡಿಕೊಳ್ಳದ ಕೆಲ ಸಂಕುಚಿತ ಮನಸ್ಸುಗಳು ಇನ್ನೂ ಕಟಕಿಯಾಡುತ್ತಿರುವುದು ವಿಷಾಧನೀಯ. ಯಾರೋ ಒದರಿದ್ದನ್ನೇ ಪರಮ ಪ್ರಸಾದದಂತೆ ಸ್ವೀಕರಿಸಿ, ಆ ನಕಲು ಮಾತುಗಳನ್ನೇ ಮರು ಪ್ರಸಾರ ಕೇಂದ್ರಗಳಂತೆ ತಾವೂ ಉಗ್ಗಡಿಸುತ್ತಿರುವುದು ಅವರ ಬೌದ್ಧಿಕ ದಾರಿದ್ರ್ಯವನ್ನು ಸೂಚಿಸುತ್ತೆ. “ ಗಣನೀಯ ಸಾಧನೆ ಮಾಡಿದ ವ್ಯಕ್ತಿಗಳನ್ನು ಪ್ರಶಸ್ತಿಗಳಿಗೆ ಆಯ್ಕೆ ಮಾಡಿ” ಗೌರವಿಸಲಾಗುತ್ತದೆ..ಎನ್ನುವ ರಾಮಶೇಷ ಅವರೇ ಕೊನೆಗೆ, “ ಇಂತಹ ಪ್ರಶಸ್ತಿಗಳನ್ನು ಯಾವುದಕ್ಕೋ ನೆಪ ಮಾಡಿ ಹಿಂದಿರುಗಿಸುತ್ತಿರುವುದು ಅಕ್ಷಮ್ಯ.. ಇವರು ಕಷ್ಟಪಟ್ಟು ಶ್ರಮ ಹಾಕಿ ಈ ಪ್ರಶಸ್ತಿಗಳನ್ನು ಪಡೆದವರಲ್ಲ ಅಂತ ಅನ್ನಿಸುತ್ತದೆ..” ಎಂದೂ ತಮ್ಮ ಪತ್ರದಲ್ಲಿ ಬರೆದಿದ್ದಾರೆ (ಪ್ರವಾ; ವಾವಾ,23.11.15). ಅವರ ಮಾತಿನಲ್ಲೇ ವಿರೋಧಾಭಾಸ, ಅಸಹಿಷ್ಣುತೆ ತುಳುಕಾಡಿದೆ. ‘ಅವಧಿ’,‘ನಿಲುಮೆ’, ‘ಫೇಸ್ ಬುಕ್’ ಮತ್ತಿತರ ಜಾಲ ತಾಣಗಳಲ್ಲೂ ಹಾಗೆ ಕುಚೋದ್ಯ ಮಾಡುವವರಿದ್ದಾರೆ. ಅಷ್ಟಕ್ಕೂ, ಈ ರೀತಿ ಮಾತಾಡಿದವರಲ್ಲಿ ರಾಮಶೇಷ ಅವರು ನೂರೊಂದನೆಯವರಿದ್ದಂತಿದೆ.ಮಾಧ್ಯಮದ ಮುಂದೆ ತಮ್ಮದೂ ಒಂದು ಇರಲಿ ಎಂದು ಗುರಿ ತಪ್ಪಿದ ಕಲ್ಲು ಒಗೆವ ಬದಲು, ತಮ್ಮ ಮನಸ್ಸನ್ನೇ ಕೇಳಿಕೊಂಡಿದ್ದರೆ ಆಗ, ಅವರ ಪ್ರತಿಕ್ರಿಯೆ ಬೇರೆಯಾಗಿರುತ್ತಿತ್ತು. ಕೆಲವರು ಪ್ರಶಸ್ತಿ ವಾಪಸಿ ಮಾಡಿದರೆ, ಹಲವರು ತಮ್ಮ ಬುಡಕ್ಕೇ ಬೆಂಕಿ ಬಿದ್ದಂತೆ ಬೆದರಿ, ಅಬ್ಬರಿಸುತ್ತಿರುವುದರಲ್ಲಿ, ಅವರೆಲ್ಲಾ ತಮ್ಮದೇ ರಾಜಕೀಯ ಹಿತಾಸಕ್ತಿಗೆ ಹಪಹಪಿಸುತ್ತಿರುವವರೆಂಬುದು ಗೋಚರವಾಗುತ್ತದೆ.

ಪ್ರಶಸ್ತಿ ವಾಪಾಸು ಮಾಡುತ್ತಿರುವವರೆಲ್ಲಾ ಕೇಂದ್ರ ಸರ್ಕಾರ ಅರ್ಥಾತ್ ಈಗಿನ ಪ್ರಧಾನಿಯವರನ್ನು ವಿರೋಧಿಸುತ್ತಿರುವವರು ಎಂಬ ಹೇಳಿಕೆಗಳೂ ವಿವೇಚನೆ ಇಲ್ಲದವು. ಏಕೆಂದರೆ, ಹೆಚ್ಚಿನವರಿಗೆ ದೊರೆತಿರುವುದು ರಾಜ್ಯ ಮಟ್ಟದ ಪುರಸ್ಕಾರಗಳು. ಬಿಜೆಪಿ ಅಧಿಕಾರದಲ್ಲಿಲ್ಲದ ರಾಜ್ಯಗಳ ಹಲವು ಸಾಹಿತಿಗಳೂ ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದಾರೆ. ಕರ್ನಾಟಕದಲ್ಲಿ ಅಸಹಿಷ್ಣುತೆ ಬಗೆಗೆ ಅಷ್ಟೇ ಅಲ್ಲ, ಮೌಢ್ಯಾಚರಣೆ ಪ್ರತಿಬಂಧಕ ಕಾಯಿದೆ ಜಾರಿಗಾಗಿ ಒತ್ತಾಯಿಸಿಯೂ ಇಲ್ಲಿನವರು ಹೋರಾಟ ಮಾಡುತ್ತಿದ್ದಾರೆ. ಇದನ್ನೆಲ್ಲಾ ತನ್ನ ವಿರುದ್ಧ ಎಂದೇ ಕೇಂದ್ರ ಸರ್ಕಾರವಾಗಲೀ, ಅದರ ಹಿತಾಸಕ್ತರಾಗಲೀ ನಂಬುವುದು ಸಿನಿಕತನವಾಗುತ್ತದೆ. ಅಲ್ಲದೆ, ವಾಪಾಸು ಮಾಡುವವರು ಒಂದು ಪಕ್ಷದ ಪರವಾದವರು ಎನ್ನುವುದಾದರೆ, ವಿಚಾರವಂತರ ನಿಲುವನ್ನು ಖಂಡಿಸುತ್ತಿರುವವರೂ ತಮ್ಮದೇ ಬೇರೊಂದು ಪಕ್ಷದ ರಕ್ಷಣೆಗೆ ಟೊಂಕ ಕಟ್ಟಿದವರು ಎಂಬ ನಿಲುವಿಗೆ ಬರಬೇಕಾಗುತ್ತದೆ.

ಮತ್ತಷ್ಟು ಓದು »

26
ನವೆಂ

“ನುಡಿಸಿರಿ” ಮತ್ತು ಮೊಸರಲ್ಲಿ ಕಲ್ಲು ಹುಡುಕುವ ಮನಸ್ಥಿತಿ

– ಗುರುಪ್ರಸಾದ್ ಆಚಾರ್ಯ

ಆಳ್ವಾಸ್ ನುಡಿಸಿರಿ೨೦೧೫” ಆಳ್ವಾಸ್ ನುಡಿಸಿರಿ ” ಮತ್ತು ” ಆಳ್ವಾಸ್ ವಿರಾಸತ್ ” ಈ ಎರಡು ಸಾಂಸ್ಕೃತಿಕ ಹಬ್ಬಗಳ ಹೆಸರು ಕೇಳದ ಜನರು ತೀರಾ ವಿರಳ ಅಂತನೇ ಹೇಳಬೇಕು, ಆ ಮಟ್ಟಿಗೆ ಅದು ಜನರ ಗಮನ ಸೆಳೆದಿದೆ. ಬರಿಯ ರಾಜ್ಯ ಮಾತ್ರವಲ್ಲ ರಾಷ್ಟ್ರ ಮಟ್ಟಕ್ಕೂ ತನ್ನ ಖ್ಯಾತಿಯನ್ನ ವಿಸ್ತರಿಸಿ ಅದರಾಚೆಗೂ ತನ್ನ ಛಾಪು ಮೂಡಿಸಿದೆಯೆಂದರೆ ಅದರ ಸ್ವರೂಪ, ವೈಶಿಷ್ಟ್ಯತೆ ಹೇಗಿದ್ದರಬೇಡ. ಇವೆರಡರ ಕಲ್ಪನೆಯೇ ವಿಶಿಷ್ಟವಾದದ್ದು ” ನುಡಿಸಿರಿ ” ಅನ್ನೋದು ನಮ್ಮ ನಾಡಿನ ನುಡಿಗಾಗಿ ಮೀಸಲಿಟ್ಟ ಕಾರ್ಯಕ್ರಮವಾದರೆ ” ವಿರಾಸತ್ ” ನಮ್ಮ ಸಾಂಸ್ಕೃತಿಕ ವೈಭವಕ್ಕೆ ಹಿಡಿದ ಕೈಗನ್ನಡಿ. ಪಾಶ್ಚಿಮಾತ್ಯ ಸಂಸ್ಕೃತಿ ಮತ್ತು ಭಾಷೆ ಇವೆರಡರ ಕಬಂಧ ಬಾಹುಗಳ ಬಂಧನದಲ್ಲಿರೋ ನಮ್ಮ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಈ ಎರಡೂ ಕಾರ್ಯಕ್ರಮಗಳೇ ಆಶಾಕಿರಣ. ಅಷ್ಟಾಗಿದ್ದೂ ಈ ನುಡಿಸಿರಿಯ ಬಗ್ಗೆ ಅಪಸ್ವರ ಏಳುತ್ತಿದೆ ಅಂದರೆ ಅದನ್ನ ದುರಂತವೆನ್ನದೆ ಇನ್ನೇನನ್ನಲಿ…??

ಬಹುಶಃ ಕಳೆದ ಬಾರಿಯೇ ಇದ್ದಿರಬೇಕು…. ತೀರಾ ಹಿಂದುಳಿದ ವರ್ಗದ ಸಾಂಸ್ಕೃತಿಕ ಕಲಾಪ್ರಕಾರವೊಂದನ್ನ ಅಳವಡಿಸಿಕೊಂಡಿದ್ದಕ್ಕೆ ಅಪಸ್ವರವೊಂದು ಕೇಳಿ ಬಂದಿತ್ತು. ಕಾರಣ ಆ ಕಲಾವಿದರು ತಮ್ಮ ಮೈ ಮತ್ತು ಮುಖಕ್ಕೆ  ಪೂರ್ತಿ ಕಪ್ಪು ಬಣ್ಣ ಬಳಿದುಕೊಂಡಿದ್ದರು.ಭಾರತದಲ್ಲಿ ಕಲಾ ಪ್ರಕಾರಗಳು ಲೆಕ್ಕವಿಲ್ಲದಷ್ಟಿದೆ ಅನ್ನೋದು ನಮಗೆಲ್ಲಾ ಗೊತ್ತಿದ್ದ ವಿಷಯವೇ.ಪ್ರತಿಯೊಂದು ಜನಾಂಗಕ್ಕೂ ಅದರದೇ ಆದ ಸಾಂಸ್ಕೃತಿಕ ಆಚರಣೆಗಳಿರುತ್ತದೆ.ಆ ಜನಾಂಗಕ್ಕೆ ಆ ಕಲಾ ಪ್ರಕಾರದ ಕುರಿತು ಅಭಿಮಾನವಿದ್ದೇ ಇರುತ್ತದೆ, ಇಂಥಾದ್ದರಲ್ಲಿ ಆ ಕಲಾ ಪ್ರಕಾರ ಉಳಿಯಲಿ ಅನ್ನುವ ನಿಟ್ಟಿನಲ್ಲಿ ಅಂತಾ ಕಲಾವಿದರನ್ನ ಕರೆದು ಅವರಿಗೊಂದು ವೇದಿಕೆ ಕಲ್ಪಿಸಿಕೊಟ್ಟು ಆ ಕಲೆಯನ್ನೂ ಉಳಿಸುವ ಪ್ರಯತ್ನ ಪಟ್ಟ ಮೋಹನ್ ಆಳ್ವಾರವರು ಟೀಕೆಗೊಳಪಡುತ್ತಾರೆ.ಅದು ಆ ಜನಾಂಗದ ನಿಂದನೆ ಎಂಬಂತೆ ಲೇಖನ ಬರೆಯುತ್ತಾರೆ.ವಾಸ್ತವದಲ್ಲಿ ” ಜನಾಂಗೀಯ ನಿಂದನೆ ” ಅನ್ನೋ ಆರೋಪ ಹೊರಿಸಿದವರ್ಯಾರು ಆ ಕಲಾವಿದರನ್ನ ಮಾತಾಡಿಸಿ ಅವರ ಮನದ ಮಾತನ್ನ ತಮ್ಮ ಬರಹದ ಮೂಲಕ ಹೇಳಿದ್ದಲ್ಲ. ತಮಗೆ ತಾವೇ ಅದು ಜನಾಂಗೀಯ ಅವಹೇಳನ ಅನ್ನುವ ನಿರ್ಧಾರ ತೆಗೆದುಕೊಂಡು ಡಂಗುರ ಸಾರಿಬಿಟ್ಟಿದ್ದರು. ಆದರೆ ಅದೇ ಕಲಾ ಪ್ರಕಾರವನ್ನ ಖುದ್ದು ರಾಜ್ಯಸರ್ಕಾರವೇ ಒಮ್ಮೆ ಗಣರಾಜ್ಯೋತ್ಸವ ದಿನದ ಪೆರೇಡ್ ನಲ್ಲೋ ಅಥವಾ ದಸರಾ ಉತ್ಸವದಲ್ಲೂ ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟಿತ್ತು. ಆವಾಗ ಏನೂ ಮಾತನಾಡದವರು ಆಳ್ವಾಸ್ ನುಡಿಸಿರಿಯಲ್ಲಿ ಇದನ್ನ ಕಂಡೊಂಡನೆ ಕೆಂಡ ತುಳಿದವರಂತೆ ಆಡತೊಡಗಿದ್ದಾದರೂ ಯಾಕೆ…? ಕಲಾವಿದರಿಗೆ ಮುನಿಸಿಲ್ಲ, ಕಲೆಯನ್ನ ಪೋಷಿಸೋರಿಗೂ ಕೀಳಾಗಿ ಕಾಣಿಸುವ ಯೋಚನೆ ಇಲ್ಲದಿರುವಾಗ ಮೂರನೆ ವ್ಯಕ್ತಿಗಳಿಂದ ಅಪಸ್ವರ ಬರುತ್ತಿರುವುದು  ಯಾಕೆ…?

ಮತ್ತಷ್ಟು ಓದು »