ವಿಷಯದ ವಿವರಗಳಿಗೆ ದಾಟಿರಿ

Archive for

13
ನವೆಂ

ಅಸಹಿಷ್ಣುತೆ: ಕನ್ನಡ ಜನ-ಮನದ ದೃಷ್ಟಿ

imagesಡಾ. ಶ್ರೀಪಾದ ಭಟ್, ಸಹಾಯಕ ಪ್ರಾಧ್ಯಾಪಕ, ತುಮಕೂರು ವಿಶ್ವವಿದ್ಯಾನಿಲಯ,

  ಈಗೀಗ ಮಾಧ್ಯಮ ಚರ್ಚೆಗಳಲ್ಲಿ ನಮ್ಮ ಕಿವಿಗೆ ಮತ್ತೆ ಮತ್ತೆ ಬೀಳುತ್ತಿರುವ ಪದ ‘ಅಸಹಿಷ್ಣುತೆ’. ವಸಾಹತುಶಾಹಿಗಳ ಕಾಲದಿಂದ ಈ ಪದ ನಮ್ಮಲ್ಲಿ ಬಳಕೆಯಾಗುತ್ತಿದೆ. ಇಂಗ್ಲಿಷಿನ ‘ಇಂಟಾಲರನ್ಸ್’ ಎಂಬ ಪದಕ್ಕೆ ಇದನ್ನು ಸಂವಾದಿಯಾಗಿ ಬಳಸಲಾಗುತ್ತಿದೆ. ಒಂದು ರೀತಿಯಲ್ಲಿ ಇದು ಇಂಗ್ಲಿಷ್ ಪದದ ಅನುವಾದವಷ್ಟೇ ಅಲ್ಲ, ಯೂರೋಪಿನ, ಕ್ರಿಶ್ಚಿಯಾನಿಟಿಯ ಅಸಹಿಷ್ಣುತೆಯ ಪರಿಕಲ್ಪನೆಯ ಅನುವಾದವೂ ಹೌದು. ಇಂಟಾಲರನ್ಸ್ಗೆ ನಿಜವಾದ ಅರ್ಥ ‘ಅನ್ಯ ಧರ್ಮ, ಇತರರ ಅಭಿಪ್ರಾಯ ಮೊದಲಾದವುಗಳನ್ನು ಸೈರಿಸದಿರುವಿಕೆ’. ಕನ್ನಡ ಜನ-ಮಾನಸಕ್ಕೆ, ಇನ್ನೂ ವಿಸ್ತರಿಸಿ ಹೇಳುವುದಾದರೆ ಭಾರತೀಯ ಪಾರಂಪರಿಕ ಮನೋಧರ್ಮಕ್ಕೆ ಈ ಪರಿಕಲ್ಪನೆ ವಸಾಹತುವಿನಂತೆಯೇ ಹೊಸದು. ಯಾಕೆಂದರೆ ನಮ್ಮ ಪರಂಪರೆಯಲ್ಲಿ ಇರುವುದು ‘ಇಂಡಿಫರನ್ಸ್’ ಅಂದರೆ ತಮ್ಮ ಅಭಿಪ್ರಾಯ, ಮತ-ಸಂಪ್ರದಾಯಗಳಿಂದ ಬೇರೆಯಾದ ವಿಷಯದಲ್ಲಿ ತಾಟಸ್ಥ್ಯ. ಕನ್ನಡ ಜನ ಮನದ ದಾಖಲೆಗಳನ್ನು ಗಮನಿಸಿದಾಗ ಈ ಸಂಗತಿ ಸ್ಪಷ್ಟವಾಗಿ ತಿಳಿದು ಬರುತ್ತದೆ. ಈ ಎರಡು ಪದಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾದ ಅಗತ್ಯವಿದೆ. ಅಸಹಿಷ್ಣುತೆ ಎಂಬುದರ ಮೂಲ ಚೂಲವನ್ನು ತಿಳಿಯದೇ ಎಲ್ಲರೂ ಇದನ್ನು ಬಳಸತೊಡಗಿದ್ದಾರೆ. ಜನರ ನಿಜವಾದ ದೃಷ್ಟಿ ಧೋರಣೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಇದು ಗೊಂದಲಕ್ಕೆ ಕಾರಣವಾಗುತ್ತದೆ. ಈಗ ಆಗಿರುವುದೂ ಇದೇ.

  ಸಣ್ಣ ನಿದರ್ಶನ ನೋಡುವುದಾದರೆ ರಿಲಿಜನ್ ಎಂಬುದನ್ನು ಧರ್ಮ ಎಂದೂ ಮಾರಲ್ ಎಂಬುದನ್ನು ನೈತಿಕ ಎಂದೂ ಗಾಡ್ ಎಂಬುದನ್ನು ದೇವರು ಅನುವಾದಿಸಿದಂತೆಯೇ ಇಂಟಾಲರನ್ಸ್ ಎಂಬುದು ಅಸಹಿಷ್ಣುತೆಯಾಗಿ ನಮ್ಮಲ್ಲಿ ಚಾಲ್ತಿಗೆ ಬಂದಿದೆ. ನಿಜವಾಗಿ ಇವುಗಳ ಮೂಲಾರ್ಥವನ್ನು ಗಮನಿಸಿದರೆ ಇವೆಲ್ಲ ಪರಿಕಲ್ಪನಾತ್ಮಕವಾಗಿ ಬೇರೆಯೇ ಆಗಿವೆ ಎಂದು ತಿಳಿದು ಬರುತ್ತದೆ. ವಸಾಹತುಶಾಹಿ ಕಾಲದಲ್ಲಿ ಯೂರೋಪಿನ ವಿದ್ವಾಂಸರು, ಆಡಳಿತಗಾರರು ತಮ್ಮ ಆಡಳಿತಾನುಕೂಲಕ್ಕೆ ಸ್ಥಳೀಯ ಜನರ ಆಚಾರ ವಿಚಾರವನ್ನು ತಿಳಿಯಲು ಭಾಷೆ, ಆಚಾರ-ವಿಚಾರಗಳು ಹಾಗೂ ಜನಪದ ಸಾಮಗ್ರಿ ಸಂಗ್ರಹಣೆಗೆ ಮುಂದಾದಾಗ ತಮ್ಮ ಕ್ರಿಶ್ಚಿಯನ್ ಅನುಭವಕ್ಕೆ ಸರಿಹೊಂದುವಂತೆ ಕಂಡ ಸಂಗತಿಗಳನ್ನು ತಮ್ಮ ಪರಿಭಾಷೆಯಲ್ಲಿ ವ್ಯಾಖ್ಯಾನಿಸಿದರು. ಆ ಪದಗಳನ್ನು ನಮ್ಮ ಭಾಷೆಗೆ ಮತ್ತೆ ತರುವಾಗ ಇವೆಲ್ಲ ತಮ್ಮೊಳಗೆ ಏನೇನನ್ನೋ ಅಡಗಿಸಿಟ್ಟುಕೊಂಡು ಏನೇನೋ ರೂಪಗಳನ್ನು ಪಡೆದು ಚಾಲ್ತಿಗೆ ಬಂದವು. ನಮಗೆ ಅಪರಿಚಿತವಾದ ಸಂಗತಿಯೊಂದನ್ನು ಮೊದಲ ಬಾರಿ ಕಂಡಾಗ ನಾವು ನಮಗೆ ಪರಿಚಿತ ಸಂಗತಿಯ ಹಿನ್ನೆಲೆಯಲ್ಲಿಯೇ ಅರಿತುಕೊಳ್ಳಲು ಮುಂದಾಗುತ್ತೇವೆ. ನಮ್ಮ ದೇಶದಲ್ಲಿ ಅಸಂಖ್ಯ ರೀತಿ, ಸಂಪ್ರದಾಯಗಳಿವೆ. ಬ್ರಾಹ್ಮಣ ಸಂಪ್ರದಾಯದ ಶವ ಸಂಸ್ಕಾರ ರೀತಿ ಪರಿಚಯವಿರುವಾತ ಸೋಲಿಗ ಅಥವಾ ಕಾಡುಗೊಲ್ಲರ ಅಥವಾ ಶೈವರ ಶವ ಸಂಸ್ಕಾರ ರೀತಿಯನ್ನು ಮೊದಲ ಬಾರಿ ಕಂಡಾಗ ಇದೇನು ಹೀಗೆ ಮಾಡುತ್ತಾರಲ್ಲಾ ಎಂದುಕೊಳ್ಳಬಹುದು. ಆತನಿಗೆ ಅದು ವಿಚಿತ್ರವಾಗಿ ಕಾಣಬಹುದು, ಇವರು ಸರಿಯಾದ ಕ್ರಮ ಅನುಸರಿಸುತ್ತಿಲ್ಲ ಅನಿಸಬಹುದು. ಆತ ಅದನ್ನು ತನ್ನದೇ ಶಬ್ದಗಳಲ್ಲಿ ಅರ್ಥಮಾಡಿಕೊಳ್ಳುತ್ತಾನೆ. ಎಲ್ಲ ಅಪರಿಚಿತ ರೀತಿ, ನೀತಿ, ಸಂಪ್ರದಾಯಗಳ ವಿಷಯದಲ್ಲೂ ಇದೇ ಮಾತು ಅನ್ವಯ. ಅರ್ಥವಾದರಷ್ಟೇ ಸಾಲದು. ತನ್ನ ಅಭಿಪ್ರಾಯದಲ್ಲಿ ಕಾಣಿಸುತ್ತಿರುವ ಗೊಂದಲದ ಕಾರಣವನ್ನು ಆತ ಪ್ರಾಮಾಣಿಕವಾಗಿ ಬೇರ್ಪಡಿಸಿ ನೋಡಲೂ ಸಿದ್ಧನಿರಬೇಕು ಹಾಗೂ ಇದೂ ‘ಒಂದು ರೀತಿ’ ಎಂದು ಭಾವಿಸಬೇಕು. ಭಿನ್ನ ಅಭಿಪ್ರಾಯ, ದೃಷ್ಟಿ ಇತ್ಯಾದಿಗಳ ವಿಷಯದಲ್ಲೂ ಇದೇ ಮಾತು ಅನ್ವಯ. ಅಸಹಿಷ್ಣುತೆಯ ಮಾತನ್ನು ಈ ದೃಷ್ಟಿಯಿಂದ ನೋಡಬಹುದು. ಮತ್ತಷ್ಟು ಓದು »

13
ನವೆಂ

ಕನ್ನಡ ಭಾಷೆಯ ಆತಂಕಗಳು

– ರಾಜಕುಮಾರ.ವ್ಹಿ.ಕುಲಕರ್ಣಿ,
ಮುಖ್ಯಗ್ರಂಥಪಾಲಕ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ

ಕನ್ನಡ ಕನ್ನಡ ಭಾಷೆ ತುಂಬ ಆತಂಕದಲ್ಲಿರುವ ದಿನಗಳಿವು. ಸಾವಿರಾರು ವರ್ಷಗಳ ಇತಿಹಾಸವಿರುವ ಮತ್ತು ದೇಶದ ಬಹುದೊಡ್ಡ ರಾಜ್ಯದ ನಾಡ ಭಾಷೆಯಾಗಿರುವ ಕನ್ನಡ ಭಾಷೆ ಈಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಭಾಷೆಯ ಮಟ್ಟಿಗೆ ಬೆಳವಣಿಗೆ ಎನ್ನುವುದು ಅದು ನಿರಂತರವಾಗಿ ಪ್ರವಹಿಸುತ್ತಿರಬೇಕು. ಏಕೆಂದರೆ ಭಾಷೆ ಕೇವಲ ಸಂವಹನದ ಮಾಧ್ಯಮ ಮಾತ್ರವಲ್ಲ. ಅದು ಒಂದು ನೆಲದ ಹಾಗೂ ಅನೇಕ ತಲೆಮಾರುಗಳ ಸಂಸ್ಕೃತಿಯನ್ನು ಅತ್ಯಂತ ಜತನದಿಂದ ಕಾಪಿಟ್ಟುಕೊಂಡು ಬಂದ ಮಾಧ್ಯಮ. ಆದ್ದರಿಂದ ಭಾಷೆಗೂ ಮತ್ತು ನೆಲದ ಸಂಸ್ಕೃತಿಗೂ ನಿಕಟವಾದ ಸಂಬಂಧವಿದೆ. ಇಂಥದ್ದೊಂದು ಸಂಬಂಧವಿಲ್ಲದೆ ಹೋದಲ್ಲಿ ಭಾಷೆ ಕೇವಲ ಮಾತನಾಡುವ ಸಂಕೇತ ಮಾತ್ರವಾಗಿ ಉಳಿದು ಜನಮಾನಸದಿಂದ ಬಹುಬೇಗ ಮರೆಯಾಗಿ ಹೋಗುವ ಅಪಾಯವಿರುತ್ತದೆ. ಇದಕ್ಕೆ ಲಿಪಿಯಿಲ್ಲದ ಭಾಷೆಗಳಾದ ಲಂಬಾಣಿ, ತುಳು, ಕೊಡವ ಇತ್ಯಾದಿ ಭಾಷೆಗಳನ್ನು ಉದಾಹರಣೆಯಾಗಿ ಹೇಳಬಹುದು. ಭಾಷೆಯೊಂದು ಗಟ್ಟಿಯಾಗಿ ತಳವೂರಿ ಬೆಳೆಯಲು ಆ ಭಾಷೆಯನ್ನು ಎಷ್ಟು ಸಮರ್ಥವಾಗಿ ಬಳಸಿಕೊಳ್ಳಲಾಗಿದೆ ಎನ್ನುವುದು ಮುಖ್ಯವಾಗುತ್ತದೆ. ಈ ದೃಷ್ಟಿಯಿಂದ ಕನ್ನಡ ಭಾಷೆಯನ್ನು ಈ ನಾಡಿನಲ್ಲಿ ಸಮೃದ್ಧವಾಗಿ ಬಳಸಿಕೊಳ್ಳಲಾಗಿದೆ. ಅದಕ್ಕೆಂದೇ ಕನ್ನಡ ಭಾಷೆಯಲ್ಲಿ ಸಾಹಿತ್ಯ ಮತ್ತಿತರ ಸೃಜನಶೀಲತೆಯ ಫಸಲು ಸಮೃದ್ಧವಾಗಿ ಬೆಳೆಯಲು ಸಾಧ್ಯವಾಯಿತು. ಅಮೋಘವರ್ಷ ನೃಪತುಂಗನ ಕಾಲದಿಂದ ಕುವೆಂಪು, ಕಾರಂತ, ಬೇಂದ್ರೆ ಮತ್ತು ನವ್ಯದ ಅಡಿಗರು, ಅನಂತಮೂರ್ತಿ, ಲಂಕೇಶ್, ಭೈರಪ್ಪನವರವರೆಗೆ ಕನ್ನಡ ಭಾಷೆಯಲ್ಲಿ ಉತ್ಕೃಷ್ಟ ಕೃತಿಗಳು ರಚನೆಯಾದವು. ಹಳೆಗನ್ನಡ, ಹೊಸಗನ್ನಡ, ನವ್ಯ, ನವೋದಯ, ಬಂಡಾಯ ಹೀಗೆ ವಿವಿಧ ಕಾಲಘಟ್ಟದಲ್ಲಿ ಕನ್ನಡ ಭಾಷೆ ಅನೇಕ ಅಗ್ನಿದಿವ್ಯಗಳನ್ನು ಹಾದು ತನ್ನತನ ಮತ್ತು ಸಮೃದ್ಧತೆಯನ್ನು ಉಳಿಸಿಕೊಂಡು ಬಂದಿದೆ. ಆದರೆ ಕಳೆದ ಮೂರು ದಶಕಗಳಿಂದ ಕನ್ನಡಕ್ಕೆ ಎದುರಾದ ಸಮಸ್ಯೆಗಳು ಈ ನೆಲದ ಭಾಷೆಯನ್ನು ಜರ್ಜರಿತಗೊಳಿಸಿವೆ. ಪರಭಾಷೆಗಳ ಪೈಪೋಟಿ, ಶಿಕ್ಷಣದ ಮಾಧ್ಯಮವಾಗಿ ಬೇರೂರಿರುವ ಇಂಗ್ಲಿಷ್ ಭಾಷೆ, ಕನ್ನಡ ಪುಸ್ತಕಗಳನ್ನು ಖರೀದಿಸಿ ಓದುವ ಓದುಗರ ಕೊರತೆ, ರಾಜಕಾರಣಿಗಳ ಸ್ವಹಿತಾಸಕ್ತಿ ಈ ಎಲ್ಲ ಸಮಸ್ಯೆಗಳ ನಡುವೆ ಕನ್ನಡ ಭಾಷೆ ತನ್ನ ನೆಲದಲ್ಲೇ ಅಪರಿಚಿತವಾಗುತ್ತಿದೆ.

ಮತ್ತಷ್ಟು ಓದು »