ವಿಷಯದ ವಿವರಗಳಿಗೆ ದಾಟಿರಿ

Archive for

10
ನವೆಂ

ಅಪ್ಪನ ಪತ್ರ : ಡೆಫೊಡಿಲ್ಸ್‍ಅನ್ನು ಕೈಯಲ್ಲಿ ಹಿಡಿ, ಕನಕಾಂಬರ ತಲೆಯಲ್ಲಿ ಮುಡಿ!

– ರೋಹಿತ್ ಚಕ್ರತೀರ್ಥ

ಪ್ರಿಯ ಅಶ್ವಿನ್,

ಪತ್ರನೂರಾರು ಕಿಲೋಮೀಟರ್ ದೂರದಲ್ಲಿರುವ ನಿನ್ನನ್ನು ಒಮ್ಮೆ ಎದುರೆದುರೇ ಕಂಡಂತೆ ಆಗುವ ಅನುಭವ ಇವತ್ತು ಆಯಿತು. ಹಾಗಾಗಿ, ಆ ಉಮೇದನ್ನು ತಡೆಹಿಡಿಯಲಾರದೆ ಪೆನ್ನು ಕೈಗೆತ್ತಿಕೊಂಡು ನಿನಗೀ ಪತ್ರ ಬರೆಯುತ್ತಿದ್ದೇನೆ. ಹಾಗೆಯೇ  ನನ್ನೊಳಗೆ ಈ ಕ್ಷಣದಲ್ಲಿ ಹುಟ್ಟಿರುವ ತಳಮಳ, ಕಾತರಗಳಿಗೆ ಮಾತಿನ ರೂಪ ಕೊಡುವ ಪ್ರಯತ್ನ ಇದು ಅಂತಲೂ ಹೇಳಬಹುದು.

ಅಂದಹಾಗೆ, ಇಂದು ಒಂದು ಪ್ರತಿಷ್ಟಿತ ಕಾಲೇಜಿಗೆ ಒಂದು ಸ್ಪರ್ಧೆಯ ನಿರ್ಣಾಯಕನಾಗಿ ಹೋಗಬೇಕಾಗಿ ಬಂತು. ಕಾಲೇಜಿನ ಪ್ರಿನ್ಸಿಪಾಲ್ ನನ್ನ ಪರಿಚಯದವರೇ ಆದ್ದರಿಂದ, ಈ ಒಂದು ಕೆಲಸಕ್ಕೆ ಬಿಡುವು ಮಾಡಿಕೊಂಡು ಬರಲೇಬೇಕು ಅಂತ ಒತ್ತಾಯಿಸಿದ್ದರು. ಈ ಫೈಲು-ಮೀಟಿಂಗು-ಸಂದರ್ಶನಗಳ ತಲೆನೋವಿನಿಂದ ಒಂದಿಷ್ಟಾದರೂ ಮುಕ್ತಿ ಸಿಗುತ್ತಲ್ಲ ಎಂದು ಕಾಲೇಜಿಗೆ ಹೋಗಲು ತಕ್ಷಣ ಒಪ್ಪಿಗೆ ಕೊಟ್ಟಿದ್ದೆ. ಅಲ್ಲದೆ, ನಿನ್ನ ಪ್ರಾಯದ ಹುಡುಗರ ಜೊತೆ ಕಾಲ ಕಳೆಯುವುದೆಂದರೆ ಖುಷಿಯ ಸಂಗತಿಯೇ ತಾನೆ! ಅದೊಂದು ಚರ್ಚಾಸ್ಪರ್ಧೆ. ಟಿವಿಯಲ್ಲಿ ನಿತ್ಯ ನೋಡುವ ಹಲವಾರು ಸಮಸ್ಯೆಗಳಲ್ಲೇ ಕೆಲವನ್ನು ಆಯ್ದು ಚರ್ಚೆಗೆ ಕೊಟ್ಟಿದ್ದರು. ಹುಡುಗರೂ ಯಥಾನುಶಕ್ತಿ ಆ ವಿಷಯಗಳ ಮೇಲೆ ಓದಿಕೊಂಡು ಬಂದು ಚರ್ಚಿಸಲು ಯತ್ನಿಸುತ್ತಿದ್ದರು. ಅವರೇನು ಚರ್ಚಿಸಿದರು ಅನ್ನುವುದೆಲ್ಲ ನಗಣ್ಯ. ನನಗೆ ಅಲ್ಲಿ ತುಂಬ ಮುಖ್ಯ ಎಂದು ಕಂಡ ಕೆಲವು ಸಂಗತಿಗಳನ್ನಷ್ಟೇ, ಅವು ನಿನಗೂ ಅನ್ವಯಿಸುತ್ತವಾದ್ದರಿಂದ, ಎತ್ತಿಕೊಳ್ಳುತ್ತೇನೆ.

ಮತ್ತಷ್ಟು ಓದು »

10
ನವೆಂ

ಆಡುಜೀವನ

– ಪ್ರಶಾಂತ್ ಭಟ್

ಆಡುಜೀವನಸ್ವಾತಂತ್ರ್ಯದ ಮಹತ್ವದ ಅರಿವಾಗುವುದು ಅದು ಇಲ್ಲವಾದಾಗಲೇ ಎಂಬ ಮಾತಿದೆ. ನಮ್ಮ ತಲೆಮಾರಿಗೆ ಈ ಮಾತಿನ ಅರ್ಥ ಆಗಿರುವ ಸಂಭವಗಳು ಕಡಿಮೆ. ಇತ್ತೀಚೆಗೆ ಓದಿದ ’ಬೆನ್ಯಾಮೀನ್’ ರ ’ಆಡುಜೀವನ’ (ಅನುವಾದ ಡಾ.ಅಶೋಕ್ ಕುಮಾರ್ ) ಇದರ ಅರ್ಥವ ತಕ್ಕಮಟ್ಟಿಗೆ ಮಾಡಿಸಿತು.ನಮಗೆಲ್ಲ ಒಂದು ಕಲ್ಪನೆಯಿದೆ. ಇಲ್ಲಿಂದ ಅರಬ್ ದೇಶಗಳಿಗೆ ಹೋದವರೆಲ್ಲ ಕೈ ತುಂಬಾ ದುಡಿದು ಝಣ ಝಣ ಎಣಿಸಿಕೊಂಡು ಬರುತ್ತಾರೆ ಎಂದು.ಈ ಕಾದಂಬರಿಯು ಅದೇ ಆಸೆ ಹೊತ್ತು ವಿದೇಶಕ್ಕೆ ತೆರಳುವ ಒಬ್ಬನ ಅನುಭವದ ಕತೆ. ಲೇಖಕರಿಗೆ ಇನ್ನೊಬ್ಬರ ಅನುಭವವಾಗಿ ದಕ್ಕಿದ ಈ ಕತೆ ಪ್ರಥಮ ಪುರುಷ ನಿರೂಪಣೆಯಲ್ಲಿ ನಮ್ಮದೇ ಕತೆಯಾಗಿ ಎದೆ ಹಿಂಡಿಸಿಕೊಳ್ಳುತ್ತದೆ.

ಮನೆಯ ಕಷ್ಟಗಳಿಗೆ ಒಂದೇ ಉತ್ತರವೆಂಬಂತೆ ನಜೀರ್ ವಿದೇಶಕ್ಕೆ ಹೋಗಲು ಅಣಿಯಾಗುತ್ತಾನೆ.ಪತ್ನಿಯ ಬಿಟ್ಟು ಯಾವುದೋ ಕನ್ಸ್ಟ್ರಕ್ಷನ್ ಕಂಪೆನಿಯಲ್ಲಿ ಕೆಲಸ ಹುಡುಕಿ ಹೊರಡುವ ಆತನಿಗೆ ಅಲ್ಲಿ ಎದುರಾಗುವುದು ಕಷ್ಟ ಪರಂಪರೆ.ಏರ್ ಪೋರ್ಟ್ ನಲ್ಲಿ ಕಾದೂ ಕಾದೂ ಸುಸ್ತಾಗುವ ಅವನಿಗೆ, ಕೊನೆಗೊಮ್ಮೆ ಆಶಾಕಿರಣದಂತೆ ಬಂದ ಅರಬಾಬ್ ಅವನನ್ನು ಎಲ್ಲಿಗೋ ಕರೆದೊಯ್ಯುತ್ತಾನೆ. ಅಲ್ಲಿ ತಲುಪುವವರೆಗೂ ತನ್ನ ಕೆಲಸದ ಅರಿವಿರದ ನಜೀರ್ ಗೆ ಅಲ್ಲಿನ ಪರಿಸ್ಥಿತಿ ಕಂಡು ಅಯೋಮಯವಾಗುತ್ತದೆ. ಆಡುಗಳನ್ನು ನೋಡಿಕೊಳ್ಳುವ, ಅವುಗಳ ಚಾಕರಿ ಮಾಡುವ,ಅವಕ್ಕೆ ಹುಲ್ಲು ಹಾಕಿ ನೀರು ಕುಡಿಸುವ, ಅವುಗಳನ್ನು ಕಾಲಾಡಿಸಲು ಕರಕೊಂಡು ಹೋಗುವ ಕೆಲಸ.ಮಲಗಲು ನೆಲವೇ ಗತಿ.ಸ್ನಾನ ಕನಸಿನ ಮಾತು.ತಿನ್ನಲು ಖಾಮೂಸ್ ಎಂಬ ತಿನಿಸು ಮಾತ್ರ. ಬಹಿರ್ದೆಶೆಗೆ ಹೋದರೆ ಸ್ವಚ್ಚಗೊಳಿಸಲೂ ನೀರಿಲ್ಲ. ಅಲ್ಲಿ ಬಂದಿಳಿದವನಿಗೆ ನಿರ್ಭಾವುಕನಾದ ಭೀಕರ ಜೀವಿಯೊಬ್ಬ ಕಾಣ ಸಿಗುತ್ತಾನೆ. ತನ್ನಂತೆ ಅಲ್ಲಿಗೆ ಕೆಲಸ ಹುಡುಕಿಕೊಂಡು ಬಂದವನು ಅವನು ಎಂಬ ಸತ್ಯ ಗೊತ್ತಾದ ನಜೀರ್ ಗೆ ಅವನ ಅಸಹ್ಯ ವೇಷ ಕಂಡು ತನ್ನ ಭವಿಷ್ಯವೂ ಹೀಗೇ ಎಂಬ ಕಟು ಸತ್ಯ ಅರಿವಾಗುತ್ತದೆ.
ಮತ್ತಷ್ಟು ಓದು »