ದಲಿತ ಸಮಸ್ಯೆಗಳಿಗೆ ‘ಮತಾಂತರ’ ಪರಿಹಾರವೇ?
ರಘು, ಎಸ್. ಕುವೆಂಪು ವಿಶ್ವವಿದ್ಯಾನಿಲಯ
ಪ್ರಸ್ತುತ ಕಾಲಘಟ್ಟದಲ್ಲಿ ದಲಿತರಿಗೆ ಸಂಬಂಧಿಸಿದ ಚರ್ಚೆಯು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ದಲಿತ ಸಮಸ್ಯೆಯ ಕುರಿತ ಇಂಥ ಚರ್ಚೆಯನ್ನು ಪರಿಶೀಲಿಸಿದರೆ ದಲಿತರ ಸಮಸ್ಯೆಗಳಿಗೆ ‘ಹಿಂದೂಯಿಸಂ’ ಮೂಲ ಕಾರಣವಾಗಿದ್ದು, ‘ಮತಾಂತರ’ವೇ ಅದರ ನಿವಾರಣೆಗೆ ಇರುವ ಅಂತಿಮ ಪರಿಹಾರ ಎಂಬ ವಾದವನ್ನು ಮುಂದಿಡುವುದು ಕಂಡುಬರುತ್ತದೆ. ಒಂದೊಮ್ಮೆ ‘ದಲಿತ ಸಮಸ್ಯೆ’ಯ ಮೂಲ ‘ಹಿಂದೂಯಿಸಂ’ ಆಗಿದ್ದ ಪಕ್ಷದಲ್ಲಿ ಮತಾಂತರಗೊಂಡ ದಲಿತರಲ್ಲಿ ಈ ಹಿಂದೆ ಇದ್ದ ‘ಸಮಸ್ಯೆ’ಗಳನ್ನು ಗುರುತಿಸಲು ಸಾಧ್ಯವಾಗಬಾರದು. ಆದರೆ ಮತಾಂತರಗೊಂಡ ದಲಿತರ ಕುರಿತ ಪ್ರಚಲಿತವಾದಗಳು ಇದಕ್ಕೆ ತದ್ವಿರುದ್ಧವಾಗಿವೆ. ಇದು ಮತಾಂತರದ ಕುರಿತ ಚರ್ಚೆಯನ್ನೇ ಮರುಪರಿಶೀಲಿಸುವ ಅನಿವಾರ್ಯತೆಯನ್ನು ಸೃಷ್ಠಿಸುತ್ತದೆ.
ದಲಿತ ಸಮಸ್ಯೆಯ ಕುರಿತ ಚಿತ್ರಣಗಳಲ್ಲಿ ವಸಾಹತು ಕಾಲಘಟ್ಟದ ಜನಾಂಗೀಯ, ಮಾನವಶಾಸ್ತ್ರೀಯ ಅಧ್ಯಯನಗಳಿಂದ ಹಿಡಿದು ಇಂದಿನ ಚಿಂತನೆಗಳವರೆಗೂ ಒಂದು ನಿರಂತರತೆಯನ್ನು ಗುರುತಿಸಬಹುದು. ಅವುಗಳು ವೈಜ್ಞಾನಿಕ ಸತ್ಯದ ಸ್ಥಾನಮಾನವನ್ನು ಪಡೆದುಕೊಂಡಿವೆ. ಆ ನಿರಂತರತೆಯ ಎಳೆಯು ಈ ರೀತಿಯಾಗಿದೆ: ‘ಹಿಂದೂಯಿಸಂ’ನಲ್ಲಿ ಕೆಳಮಟ್ಟದ ಸ್ಥಾನದಲ್ಲಿರುವ ದಲಿತರು ಸಾವಿರಾರು ವರ್ಷಗಳಿಂದಲೂ ಶೋಷಣೆಗೆ ಒಳಗಾಗುತ್ತಿದ್ದಾರೆ. ಶ್ರೇಣಿಕರಣಗೊಂಡಿರುವ ಜಾತಿವ್ಯವಸ್ಥೆಯು ‘ಹಿಂದೂಯಿಸಂ’ನ ಭಾಗವಾಗಿದೆ. ಈ ಶ್ರೇಣಿಕರಣದಲ್ಲಿ ಮೊದಲ ಸ್ಥಾನವನ್ನು ಪಡೆದಿರುವ ಬ್ರಾಹ್ಮಣರು ‘ಹಿಂದೂಯಿಸಂ’ನ ಪ್ರೀಸ್ಟ್ಗಳಾಗಿದ್ದಾರೆ. ಆ ವರ್ಗದವರು ದಲಿತರನ್ನು ಸದಾ ಶೋಷಣೆಗೆ ಒಳಪಡಿಸುತ್ತಿದ್ದಾರೆ. ಇಂಥ ಶೋಷಣೆಗೆ ‘ಹಿಂದೂಯಿಸಂ’ ತಾತ್ವಿಕ ನೆಲೆಗಟ್ಟನ್ನು ಒದಗಿಸುತ್ತಾ ಬಂದಿದೆ. ದಲಿತರ ಮೇಲಿನ ಈ ರೀತಿಯ ಶೋಷಣೆಯು ‘ಹಿಂದೂಯಿಸಂ’ಗೆ ಮಾತ್ರ ಸೀಮಿತವಾಗಿದ್ದು, ದಲಿತರ ಸಮಸ್ಯೆಗಳಿಗೆ ಅದರ ಒಳಗೆ ಯಾವುದೇ ಪರಿಹಾರಗಳಿಲ್ಲ. ಮತ್ತಷ್ಟು ಓದು