ಅಶ್ವತ್ಥಾಮನಿಗೆ ಬ್ರಹಾಸ್ತ್ರ ಒಲಿದಂತೆ – ಪ್ಲುಟೋನಿಯಂ ಬೆಂಕಿಗೆ ಜಲಜನಕದ ತುಪ್ಪ
– ವಿನಾಯಕ್ ಹಂಪಿಹೊಳಿ
ಸ್ಪೆಷಲ್ ರಿಲೇಟಿವಿಟಿ ಸಿದ್ಧಾಂತವನ್ನು ಐನ್ಸ್ಟೈನ್ ಮುಂದಿಟ್ಟಾಗ ಅದರದ್ದೊಂದು ಇಕ್ವೇಷನ್ನು E= mc2 ತುಂಬಾ ಸಂಚಲನ ಉಂಟು ಮಾಡಿತ್ತು. ಏಕೆಂದರೆ ಅದು ದ್ರವ್ಯರಾಶಿ ಮತ್ತು ಶಕ್ತಿಗಳನ್ನು ಸಮೀಕರಣಗೊಳಿಸಿತ್ತು. ಆದರೂ ಅದಕ್ಕೆ ಪ್ರತ್ಯಕ್ಷ ಸಾಕ್ಷಿ ಸಿಕ್ಕಿರಲಿಲ್ಲ. ಅದು ಸಿಕ್ಕಿದ್ದು ಯುರೇನಿಯಂ ಎಂಬ ಭಾರದ ಪರಮಾಣುವಿಗೆ ನ್ಯೂಟ್ರಾನೊಂದು ಬಡಿದಾಗ ಬೀಜವಿದಳನ ನಡೆದು ಬೇರಿಯಂ ಮತ್ತ್ರು ಕ್ರಿಪ್ಟಾನ್ ಪರಮಾಣುಗಳು ರಚನೆಯಾದಾಗ. ಆ ಬೀಜವಿದಳನದಲ್ಲಿ ಕೊಂಚ ಪ್ರಮಾಣದ ದ್ರವ್ಯರಾಶಿ ಕಾಣೆಯಾಗಿತ್ತು ಮತ್ತು ಊಹಿಸಲಿಕ್ಕೇ ಆಗದಷ್ಟು ಪ್ರಮಾಣದ ಶಕ್ತಿಯು ಬಿಡುಗಡೆಯಾಗಿತ್ತು. ತನ್ಮೂಲಕ ಬಹುಚರ್ಚಿತ ಈ ಸಮೀಕರಣವು ಸರಿಯೆಂದು ಸಾರಿತ್ತು.
ಪಾರಮಾಣ್ವಿಕ ಕ್ರಿಯೆಗಳು(ನ್ಯೂಕ್ಲಿಯರ್ ರಿಯಾಕ್ಷನ್ಸ್) ಎಂಬುದು ಪ್ರಕೃತಿಗೇನೂ ಹೊಸತಲ್ಲ ಬಿಡಿ. ನಮಗೆ ಹಗಲೆಲ್ಲ ಸಿಗುವ ಸೂರ್ಯನ ಬೆಳಕು ಇದೇ ಕ್ರಿಯೆಗಳ ಶಕ್ತಿಯೇ. ಆದರೆ ಸೂರ್ಯನಲ್ಲಿ ಯುರೇನಿಯಂ ವಿದಳನವಾಗುವದಿಲ್ಲ. ಬದಲಿಗೆ ಅಲ್ಲಿ ಎರಡು ಜಲಜನಕಗಳ ಸಂಯೋಜನೆಗೊಂಡು ಹೀಲಿಯಂ ಆಗುವದು. ಈ ಪ್ರಕ್ರಿಯೆ ನಮ್ಮ ವಿಜ್ಞಾನಿಗಳಿಗೆ ತೀವ್ರ ಕುತೂಹಲ ಕೆರಳಿಸಿತ್ತು. ಏಕೆಂದರೆ ಭೂಮಿಯಲ್ಲಿ ಯುರೇನಿಯಂ ಪ್ರಮಾಣ ಕಡಿಮೆ. ಆದರೆ ಜಲಜನಕ ಹಾಗಲ್ಲ ನೋಡಿ. ೭೦% ನೀರಿನಿಂದಲೇ ತುಂಬಿರುವ ಭೂಮಿಗೆ ಜಲಜನಕಕ್ಕೆ ಕೊರತೆಯೇ? ಅಲ್ಲದೇ ೧ ಗ್ರಾಂ ಯುರೇನಿಯಂನಿಂದ ಸಿಗುವ ವಿದಳನ ಶಕ್ತಿಗಿಂತ ೧ ಗ್ರಾಂ ಜಲಜನಕದಿಂದ ಸಿಗುವ ಸಂಯುಗ್ಮಶಕ್ತಿ ನೂರಾರು ಪಟ್ಟು ಜಾಸ್ತಿ ಬೇರೆ.
ಆದರೆ ಮನುಷ್ಯ ರಂಗೋಲಿಯ ಕೆಳಗೆ ನುಗ್ಗಿ ಪ್ರಕೃತಿಯನ್ನು ಹಿಡಿಯಲು ಯತ್ನಿಸಿದಾಗೆಲ್ಲ ಪ್ರಕೃತಿ ಟೈಲ್ಸ್ ಕೆಳಗೇ ತೂರಿಕೊಂಡಿದೆ ಎಂಬುದು ತಕ್ಕಮಟ್ಟಿಗೆ ವಾಸ್ತವವೇ. ಎರಡು ಜಲಜನಕ ಒಗ್ಗೂಡಿಸುವದು ಎಂದರೆ ಎರಡು ಜನತಾ ಪಕ್ಷಗಳನ್ನು ಕೂಡಿಸುವಷ್ಟೇ ಕಷ್ಟದ ಕೆಲಸ. ಎರಡು ಜನತಾ ಪಕ್ಷಗಳು ಸೇರಲು ಹೇಗೆ ಈಗಿರುವ ಅಸಹಿಷ್ಣುತೆ ಸಾಕಾಗುತ್ತಿಲ್ಲವೋ ಇನ್ನೂ ಹೆಚ್ಚಿನ ಅಸಹಿಷ್ಣುತೆ ಬೇಕಾಗಿದೆಯೋ, ಹಾಗೇ ಎರಡು ಜಲಜನಕಗಳು ಸೇರಿ ಹೀಲಿಯಂ ಆಗಲು ವಿಪರೀತ ಉಷ್ಣತೆ ಬೇಕು. ಅದಕ್ಕೆ ಬೇಕಾಗುವ ಲಕ್ಷಗಟ್ಟಲೆ ಸೆಲ್ಸಿಯಸ್ ಉಷ್ಣತೆ ಆಟಂ ಬಾಂಬಿನಿಂದ ಸಿಗುತ್ತದೆ. ಹೀಗಾಗಿ ಆಟಂ ಬಾಂಬಿನ ಬೆಂಕಿಗೆ ಜಲಜನಕವೆಂಬ ತುಪ್ಪ ಸುರಿಯುವ ವ್ಯವಸ್ಥೆ ಮಾಡಿಟ್ಟರಾಯಿತು. ನಿಮ್ಮ ಹೈಡ್ರೋಜನ್ ಬಾಂಬ್ ಎಂಬ ಸ್ಪೆಷಲ್ ಡಿಶ್ ರೆಡಿ.
ಮನುಷ್ಯನ ದುರ್ದೈವ ನೋಡಿ. ಯುರೇನಿಯಂ ವಿದಳನವನ್ನು ಬೇಕಾಬಿಟ್ಟಿಯಾಗಿ ಮಾಡದೇ ನಿಯಂತ್ರಿತವಾಗಿ ವಿಘಟಿತವಾದರೆ ಬರುವ ಶಕ್ತಿಯನ್ನು ವಿದ್ಯುತ್ತಿಗೆ ಬಳಸಬಹುದು. ಆದರೆ ಭೂಮಿಯಲ್ಲೆಲ್ಲ ಅಪಾರವಾಗಿ ಹರಡಿಕೊಂಡಿರುವ ಜಲಜನಕದ ಸಮ್ಮಿಳನವನ್ನು ನಿಯಂತ್ರಿತವಾಗಿ ಮಾಡಲಾಗುತ್ತಿಲ್ಲವೇ? ಕಾರಣ ಅದಕ್ಕೆ ಬೇಕಾಗುವ ಅಪಾರ ಉಷ್ಣತೆಯನ್ನು ಹಿಡಿದಿಡುವ ತಂತ್ರಜ್ಞಾನ ನಮ್ಮಲ್ಲಿಲ್ಲ. ಅಟಂ ಬಾಂಬ್ ನೀಡುವ ಲಕ್ಷಗಟ್ಟಲೇ ಸೆಲ್ಸಿಯಸ್ ಅನ್ನು ಹಿಡಿದಿಡಲು ನೀವೆಷ್ಟೇ ದಪ್ಪ ಗೋಡೆ ಹಾಕಿಕೊಂಡರೂ ಅದು ಕರಗಿಸಿಬಿಡುತ್ತದೆ. ಅಲ್ಲಿಗೆ ಹೈಡ್ರೊಜನ್ ರಿಯಾಕ್ಟರ್ ಬಾಂಬ್ ಆಗಿ ಪರಿವರ್ತನೆಯಾಗುತ್ತದೆ.
ಇತ್ತೀಚೆಗೆ ಮ್ಯಾಗ್ನೆಟಿಕ್ ಫ್ಲಕ್ಸ್ ಮೂಲಕ ಉಷ್ಣತೆಯನ್ನು ಹಿಡಿದಿಟ್ಟು ಅಲ್ಲಿ ನಿಯಂತ್ರಿತವಾಗಿ ಜಲಜನಕಗಳನ್ನು ಜೋಡಿಸುವ ಕೆಲಸ ನಡೆಯುತ್ತಿದೆಯಂತೆ. ಇದು ಎಷ್ಟರ ಮಟ್ಟಿಗೆ ಪ್ರಗತಿ ಹೊಂದಿದೆ ಎಂಬುದನ್ನು ನಾನಿನ್ನೂ ಅರಿಯಬೇಕಿದೆ. ಶಕ್ತಿಯ ಸಕಾರಾತ್ಮಕ ಉಪಯೋಗಗಳನ್ನು ದೃಷ್ಟಿಯಲ್ಲಿ ಇಟ್ಟು ನೋಡುವದಾದರೆ ಇಂಥದೊಂದು ಅನ್ವೇಷಣೆ ಖಂಡಿತವಾಗಿ ಆಗಲೇಬೇಕು.ಆದರೆ ಮಾನವನಿಗೆ ಧ್ವಂಸ ಮಾಡುವಲ್ಲಿ ಇರುವ ನೈಪುಣ್ಯತೆ ಸೃಜನಶೀಲ ಚಟುವಟಿಕೆಗಳಲ್ಲಿ ಇಲ್ಲ. ಈಗ ಆಗಿರುವದೂ ಅದೇ. ಉತ್ತರ ಕೊರಿಯಾ ಜಲಜನಕದ ಬಾಂಬ್ ಒಂದನ್ನು ಯಶಸ್ವಿಯಾಗಿ ಪ್ರಯೋಗಿಸಿದೆ. ಈ ಸ್ಫೋಟವು ೫.೧ ಪ್ರಮಾಣದ ಭೂಕಂಪವನ್ನೂ ಸೃಷ್ಟಿಸಿದೆ. ಪ್ರಾಯೋಗಿಕ ಬಾಂಬೇ ಈ ಲೆವೆಲ್ಲಲ್ಲಿ ಭೂಕಂಪ ಮಾಡಿರಬೇಕಾದರೆ ಇನ್ನು ಯುದ್ಧದಲ್ಲಿ ಪ್ರಯೋಗಿಸುವ ಬಾಂಬಿಗೆ ಅದೇನೇನು ಅಲುಗಾಡುತ್ತೋ?
ಉತ್ತರ ಕೊರಿಯಾ ದೇಶದ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ನಿಲುಮಿಗರಿಗೆ ಇದರ ಬಗ್ಗೆ ಈಗಾಗಲೇ ಚೆನ್ನಾಗಿ ಗೊತ್ತಿದೆ. ಅಲ್ಲಿನ “ರುದ್ರ” ರಮಣೀಯ ಸರ್ವಾಧಿಕಾರತ್ವವನ್ನು ನಮ್ಮ ರೋಹಿತ್ ಚಕ್ರತೀರ್ಥರವರು ಮನೋಜ್ಞವಾಗಿ ಚಿತ್ರಿಸಿದ್ದಾರೆ. ಆದರೆ ಹೊಸ ವರ್ಷದ ಶುಭಾಶಯದ ಭಾಷಣದಲ್ಲಿಯೇ ಯುದ್ಧೋತ್ಸಾಹ ತೋರುವ ಈ ಸರ್ವಾಧಿಕಾರಿಯ ಕೈಯಲ್ಲಿ ಜಲಜನಕದ ಬಾಂಬ್ ಸೇರಿರುವದು ಅಶ್ವತ್ಥಾಮನಿಗೆ ಬ್ರಹಾಸ್ತ್ರ ಒಲಿದಂತೆಯೇ. ಈಗಾಗಲೇ ಪ್ಲೂಟೋನಿಯಂ ಅಟಂ ಬಾಂಬ್ ಹೊಂದಿರುವ ಈ ದೇಶಕ್ಕೆ ಹೈಡ್ರೋಜನ್ ಬಾಂಬ್ ಕೂಡ ಕಂಡು ಹಿಡಿದಿರುವದು ಆತಂಕವೇ ಸರಿ. ನಮ್ಮ ದೇಶದ ಮಿತ್ರ ದೇಶಗಳಾದ ದಕ್ಷಿಣ ಕೊರಿಯಾ, ಜಪಾನುಗಳಿಗೆ ಇದು ಎಚ್ಚರಿಕೆಯ ಗಂಟೆ. ಹಾಗಂತ ನಮಗೇನೂ ಸಂಬಂಧವಿಲ್ಲ ಎಂದು ಕೂರುವ ಸ್ಥಿತಿಯೂ ಈಗಿಲ್ಲ.
ಚಿತ್ರಕೃಪೆ : http://www.pbs.org