ಜಗತ್ತಿನ ಪ್ರಶ್ನೆಗಳಿಗೆ ನಿರುತ್ತರ ಕೊರಿಯ
– ರೋಹಿತ್ ಚಕ್ರತೀರ್ಥ
ಫೆಬ್ರವರಿ 12, 2013. ಮಂಗಳವಾರ. ದೊಡ್ಡಣ್ಣ ಅಮೆರಿಕದ ಅಧ್ಯಕ್ಷ ಒಬಾಮ ಟಿವಿಗಳಲ್ಲಿ ಕಾಣಿಸಿಕೊಂಡು, “ಈ ಪ್ರಯತ್ನ ಕೂಡಲೇ ನಿಲ್ಲಬೇಕು. ಇಲ್ಲವಾದರೆ ತಕ್ಕ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ” ಅಂತ ಘೋಷಿಸಿದ್ದೇ ತಡ, ಒಂದರ ಹಿಂದೊಂದರಂತೆ ಘೋಷಣೆ, ಬೆದರಿಕೆಗಳ ಸುರಿಮಳೆ. ಜಪಾನ್, ದಕ್ಷಿಣ ಕೊರಿಯ, ರಷ್ಯ, ಇಂಗ್ಲೆಂಡ್, ಫ್ರಾನ್ಸ್, ಸಿಂಗಪುರ, ಮಲೇಷಿಯಾದಂತಹ ಹತ್ತುಹಲವಾರು ದೇಶಗಳ ಅಧ್ಯಕ್ಷರುಗಳು ತಮ್ಮ ಹೇಳಿಕೆಗಳನ್ನು ತಾರಕಸ್ವರದಲ್ಲಿ ಕೂಗಿ ಹೇಳಲು ಕ್ಯೂ ನಿಂತುಬಿಟ್ಟರು. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾ ಕಿ ಮೂನ್ ಕೂಡ, “ನಿಮ್ಮ ಪ್ರಯೋಗಗಳನ್ನು ಕೂಡಲೇ ಸ್ಥಗಿತಗೊಳಿಸಿ. ಇಲ್ಲವಾದರೆ ಪ್ರತಿರೋಧ ಎದುರಿಸಿ” ಅಂತ ಘಂಟಾಘೋಷವಾಗಿ ಹೇಳಿದರು. ಹೆಗಲಿಗೆ ಕೈಹಾಕಿ ಕುಶಲ ಕೇಳುವ ಗೆಳೆಯ ಚೀನಾ ಕೂಡ (ಒಳಗೊಳಗೆ ಬೆಂಬಲಿಸಿದರೂ), ಈ ಪರೀಕ್ಷೆಗಳನ್ನೆಲ್ಲ ಕೈಬಿಟ್ಟು ಸುಮ್ಮನಿದ್ದರೆ ಏನು ನಷ್ಟ? ಅಂತ ಆಪ್ತಸಲಹೆ ಕೊಟ್ಟು ಕೈತೊಳೆದುಕೊಂಡಿತು.
ಇಷ್ಟೆಲ್ಲ ಅಧ್ವಾನಕ್ಕೆ ಕಾರಣವಾಗಿದ್ದು ಉತ್ತರ ಕೊರಿಯ ಎಂಬ ದೇಶ, ತಾನೇ ಹೇಳಿಕೊಂಡಂತೆ – ಬಹಳ ಸಣ್ಣಪ್ರಮಾಣದಲ್ಲಿ ನಡೆಸಿದ, ಮಾಪಕಗಳಲ್ಲಿ 4.9ರಷ್ಟು ದಾಖಲಾದ ನ್ಯೂಕ್ಲಿಯರ್ ಪರೀಕ್ಷೆ. 2006ರ ಪರೀಕ್ಷೆಯ ಹತ್ತುಪಟ್ಟು, 2009ರ ಪರೀಕ್ಷೆಯ ಎರಡು ಪಟ್ಟು ಶಕ್ತಿಶಾಲಿಯಾಗಿದ್ದ ಈ ಪರೀಕ್ಷೆಯಿಂದ ಉತ್ತರ ಕೊರಿಯ ಅಮೆರಿಕೆಗೆ ತನ್ನ ತಾಕತ್ತು ತೋರಿಸಲು ಹೊರಟಿತ್ತು. ಗಾಯದ ಮೇಲೆ ಗೀರೆಳೆದಂತೆ, ಪರೀಕ್ಷೆ ನಡೆಸಿದ ಮೇಲೆ, “ನಮ್ಮ ವ್ಯವಹಾರಗಳಲ್ಲಿ ಪದೇಪದೇ ಮೂಗು ತೂರಿಸುವ ಅಮೆರಿಕಕ್ಕೆ ನಾವು ಕೊಡುತ್ತಿರುವ ಎಚ್ಚರಿಕೆ ಇದು. ಅದರ ಹಸ್ತಕ್ಷೇಪ ನಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಪರೀಕ್ಷೆಗಳನ್ನು ನಡೆಸುತ್ತ ಹೋಗುತ್ತೇವೆ” ಅಂತ ಹೇಳಿಕೆ ಕೂಡ ಬಿಡುಗಡೆ ಮಾಡಿತು. ಅಚ್ಚರಿಯ ಮಾತೆಂದರೆ “ಜಗತ್ತಿನ ಸೂಪರ್ ಪವರ್ ನಾಯಕನಾಗಿ ಹೊರಹೊಮ್ಮುತ್ತಿರುವ ನಮ್ಮ ದೇಶದ ಯುದ್ಧ ಸಿದ್ಧತೆಗೆ ಹೆದರಿ ಬಾಲಮುದುರಿ ಕುಂಯ್‍ಗುಡುತ್ತಿರುವ ಅಮೆರಿಕ” ಅಂತ ರಾಷ್ಟ್ರೀಯ ಚಾನೆಲ್‍ನಲ್ಲಿ ಬಂದ ಸುದ್ದಿಯನ್ನು ನೋಡಿ ಪ್ಯೊಂಗ್‍ಯಾಂಗಿನ ಬೀದಿಗಳಲ್ಲಿ ಜನ ಸಂಭ್ರಮಿಸಿ ಕುಣಿದರು! ದೇಶಪ್ರೇಮ ಎನ್ನುತ್ತೀರೋ, ಹಿಸ್ಟೀರಿಯ ಎನ್ನುತ್ತೀರೋ!
ಈ ಎಲ್ಲ ರಾಜಕೀಯ ಪ್ರೇರಿತ ರಾದ್ಧಾಂತ, ಗೊಂದಲಗಳನ್ನು ಬದಿಗಿಟ್ಟು ಈ ಕತೆಯ ಸುತ್ತ ಹಬ್ಬಿಬೆಳೆದ ಹುತ್ತವನ್ನು ತಡವುತ್ತ ಹೋದರೆ, ಕೊನೆಗೆ ನಮಗೆ ಹಾವು ಗೋಚರಿಸಬಹುದೋ ಏನೋ! ಹಾಗಾಗಿ, ಉತ್ತರ ಕೊರಿಯದ ಸುತ್ತ ಸುಮ್ಮನೆ ನಿಷ್ಪಕ್ಷಪಾತವಾಗಿ ಒಂದು ಸುತ್ತು ಹಾಕ್ಕೊಂಡು ಬರೋಣ, ಬನ್ನಿ.
ಇಪ್ಪತ್ತೊಂದನೇ ಶತಮಾನದ ಶಿಲಾಯುಗ
ನಮ್ಮ ಸುತ್ತಾಟವನ್ನು ಕೊರಿಯದ ರಾಜಧಾನಿ ಪ್ಯೊಂಗ್‍ಯಾಂಗಿನ ಯೂನಿವರ್ಸಿಟಿಯಿಂದಲೇ ಶುರುಮಾಡೋಣ. ಇಲ್ಲಿ ಫಾರಿನ್ ಲಾಂಗ್ವೇಜ್ ವಿಭಾಗದ ತರುಣ ವಿದ್ಯಾರ್ಥಿಯೊಬ್ಬನನ್ನು ಮಾತಿಗೆಳೆಯುತ್ತೀರಿ. ಆತ ನಿರರ್ಗಳವಾಗಿ ಶುದ್ಧವಾದ ಇಂಗ್ಲೀಷಿನಲ್ಲಿ ಮಾತಾಡುವುದನ್ನು ನೋಡಿ ನಿಮಗೆ ಆಶ್ಚರ್ಯ! “ಇಷ್ಟು ಚೆನ್ನಾಗಿ ಇಂಗ್ಲೀಷ್ ಮಾತಾಡುತ್ತೀಯಲ್ಲ, ಹೇಗೆ ಕಲಿತೆ?” ಎಂದು ಕೇಳಿದರೆ ಆತ, ಇದೆಲ್ಲ ನಮ್ಮ ಮಹಾನಾಯಕನ ದಯೆ ಎನ್ನುತ್ತಾನೆ! “ನಮಗಿಲ್ಲಿ ಎಲ್ಲ ಉತ್ತಮ ವ್ಯವಸ್ಥೆಗಳನ್ನು ಕೊಟ್ಟಿದ್ದಾರೆ. ಸೌಂಡ್ ಆಫ್ ಮ್ಯೂಸಿಕ್‍ನಂತಹ (ಓಬೀರಾಯನ ಕಾಲದ) ಒಳ್ಳೊಳ್ಳೆಯ ಇಂಗ್ಲೀಷ್ ಸಿನೆಮಗಳನ್ನು ನೋಡಲು ಬಿಡುತ್ತಾರೆ” ಅಂತ ಹೇಳುತ್ತಾನೆ. ನಿನ್ನ ದೇಶದ ಮಹಾನಾಯಕರನ್ನು ಬಿಟ್ಟರೆ ಬೇರೆ ಯಾರು ಇಷ್ಟ ಎಂದು ಕೇಳಿದರೆ ಅವನ ಉತ್ತರ – “ಸ್ಟಾಲಿನ್ ಮತ್ತು ಮಾವೋ”! ನೆಲ್ಸನ್ ಮಂಡೇಲನ ಬಗ್ಗೆ ಕೇಳಿಲ್ಲವೇ ಅಂತ ನೀವು ಚಕಿತರಾಗಿ ಪ್ರಶ್ನಿಸಿದರೆ, “ಹಾಗೆಂದರೇನು?” ಅಂತ ನಿಮ್ಮನ್ನೆ ತಿರುಗಿ ಕೇಳಿ ತಬ್ಬಿಬ್ಬುಗೊಳಿಸುತ್ತಾನೆ.
ಉತ್ತರ ಕೊರಿಯದ ಟಿವಿಯನ್ನು (ಮತ್ತು ಅದರಲ್ಲಿ ಬಿತ್ತರಗೊಳ್ಳುವ ಒಂದೇ ಒಂದು ಚಾನೆಲ್ಲನ್ನು) ಯಾವ ಹೊತ್ತಲ್ಲಿ ತಿರುಗಿಸಿದರೂ ಅದರಲ್ಲಿ ಕೊರಿಯವನ್ನಾಳಿದ ಎರಡು ‘ಮಹಾನ್’ ನಾಯಕರ ಕತೆ-ಚಿತ್ರಗಳೇ ಮತ್ತೆಮತ್ತೆ ಬರುತ್ತಿರುತ್ತವೆ. ಬಿಟ್ಟರೆ, ಕೊರಿಯದ ಮಾದರಿ ಹಳ್ಳಿಗಳು, ಮಾದರಿ ಗದ್ದೆಗಳು ಹೇಗಿವೆ ಎನ್ನುವುದನ್ನು ತೋರಿಸುತ್ತಾರೆ. ಇಲ್ಲಿನ ಜನ, ಇವಿಷ್ಟನ್ನು ಬಿಟ್ಟರೆ ಬೇರೆ ಯಾವುದೇ ದೇಶದ ಯಾವುದೇ ಇತರ ಕಾರ್ಯಕ್ರಮವನ್ನಾಗಲೀ ಡಾಕ್ಯಮೆಂಟರಿಗಳನ್ನಾಗಲೀ ನೋಡಿಲ್ಲ ಎಂದರೆ ನೀವು ನಂಬಲೇಬೇಕು! ವಿಶೇಷವೆಂದರೆ, ಉತ್ತರ ಕೊರಿಯದ ಯಾವ ಪ್ರಜೆಗೂ ಫೇಸ್‍ಬುಕ್ ಅಥವಾ ಟ್ವಿಟ್ಟರ್ ಅಕೌಂಟ್ ಇಲ್ಲ! ಯಾಕೆಂದರೆ, ಇಂಟರ್ನೆಟ್ಟಂಥ ಇಂಟರ್ನೆಟ್ಟನ್ನೇ ಈ ದೇಶದಿಂದ ಗಡೀಪಾರು ಮಾಡಿದ್ದಾರೆ! ಕೊರಿಯದ ಒಳಗೆ ಕ್ವಾಂಗ್‍ಮ್ಯಾಂಗ್ ಎಂಬ ಅಂತರ್ಜಾಲ ವ್ಯವಸ್ಥೆಯನ್ನು ಬಳಸಲಾಗುತ್ತದೆ. ಇದರಲ್ಲಿ ಉತ್ತರ ಕೊರಿಯದೊಳಗಿನ ಪ್ರಜೆಗಳು ಮಾಹಿತಿ ವಿನಿಮಯ ಮಾಡಿಕೊಳ್ಳಲು ಅನುಕೂಲವಾಗುವಂತೆ ಕೆಲವೇ ಕೆಲವು ವೆಬ್‍ಸೈಟುಗಳು, ಮೆಸೇಜ್ ಬೋರ್ಡುಗಳು ಮತ್ತು ಚಾಟ್ ಆಯ್ಕೆಗಳಿವೆ. ಇಂತಹ ದೇವಲೋಕದಿಂದಿಳಿದ ಅಪರೂಪದ ವ್ಯವಸ್ಥೆಯನ್ನು ಎಲ್ಲರೂ ಬಳಸಲು ಬರುವುದಿಲ್ಲ. ಇದನ್ನು ಉಪಯೋಗಿಸಬೇಕಾದರೆ ನೀವು ಮಹಾನಾಯಕನ ವಂಶಜನೆಂಬ ಅಂಕಿತವನ್ನು ನಿಮ್ಮ ಪೃಷ್ಟದಲ್ಲಿ ಹೆಮ್ಮೆಯಿಂದ ಹೊತ್ತಿರಬೇಕು ಇಲ್ಲವೇ ಸರಕಾರೀ ಯಂತ್ರದಲ್ಲಿ ಒಪ್ಪಿಗೆಯ ಮುದ್ರೆಯೊತ್ತಿಕೊಂಡು ಬಂದ ವಿಜ್ಞಾನಿಯೋ ಶಿಕ್ಷಕನೋ ಆಗಿರಬೇಕು.
ಮೊಬೈಲಿನ ವಿಷಯಕ್ಕೆ ಬರೋಣ. ಉತ್ತರ ಕೊರಿಯದಲ್ಲಿರುವುದು ‘ಕೊರ್ಯೊಲಿಂಕ್’ ಎಂಬ ಒಂದೇ ಒಂದು ಮೊಬೈಲ್ ನೆಟ್‍ವರ್ಕ್ ಕಂಪೆನಿ! ಆದರೆ ಇಡೀ ದೇಶದ ಒಂದು ಮಿಲಿಯ ಜನರನ್ನು ತಲುಪುತ್ತೇನೆ ಅಂತ ಗರ್ವದಿಂದ ಎದೆತಟ್ಟಿಕೊಳ್ಳುವ ಈ ಕಂಪೆನಿಯ ಗುಂಡಿಗೆಗೆ ಕೂಡ ಸರಕಾರದ ಬಂದೂಕು ನೇರವಾಗಿ ಗುರಿಯಿಟ್ಟು ಕಾಯುತ್ತಿದೆ. ಕೊರ್ಯೊಲಿಂಕ್ ಎಂಥಾ ದೇಶಪ್ರೇಮಿ ಅಂದರೆ, ಅದು ಲೋಕಲ್ ಮತ್ತು ಎಸ್‍ಟಿಡಿ ಸೇವೆಯನ್ನು ಮಾತ್ರ ಒದಗಿಸುತ್ತದೆ. ಯಾವನೇ ಕೊರಿಯನ್, ತನ್ನ ದೇಶದ ಯಾವ ಮೂಲೆಗೆ ಹೋದರೂ ವಿದೇಶೀ ಕರೆಯನ್ನು ಮಾಡಲು (ಅಥವಾ ಸ್ವೀಕರಿಸಲು) ಮಾತ್ರ ಸುತಾರಾಂ ಸಾಧ್ಯವಿಲ್ಲ. ಇನ್ನು ಮೊಬೈಲ್ ಇಂಟರ್ನೆಟ್ ಎಂದೇನಾದರೂ ನೀವು ವಿಚಾರಿಸಲು ಹೋದರೆ ಅಂತಹ ಸಂಗತಿಯನ್ನು ಕಂಡುಕೇಳಿಲ್ಲದ ಕೊರಿಯದ ಜನ ಎದೆಯೊಡೆದು ಸತ್ತಾರು.
ಕೊರಿಯದ ಇಂಟನೆಟ್ಟಿನಲ್ಲಿ ಮೊಜಿಲ್ಲ ಆಗಲೀ ಇಂಟರ್ನೆಟ್ ಎಕ್ಸ್‍ಪ್ಲೋರರ್ ಆಗಲೀ ಇಲ್ಲ. ಅಂತರ್ಜಾಲದ ಎಲ್ಲ ಕೆಲಸ ನಡೆಯುವುದು ನೇನಾರ (ಅಂದರೆ, ‘ನನ್ನ ದೇಶ’) ಅನ್ನುವ ಪೋರ್ಟಲ್ ಮೂಲಕ. ಕೊನೇಪಕ್ಷ ಮೈಕ್ರೋಸಾಫ್ಟ್ ವಿಂಡೋಸ್ ಆದರೂ ಜನರಿಗೆ ಗೊತ್ತಿರಬಹುದು ಅನ್ನುತ್ತೀರಾ? ಕ್ಷಮಿಸಿ! ಇಲ್ಲಿನ ಎಲ್ಲ ಕಂಪ್ಯೂಟರುಗಳು ನಡೆಯುವುದು “ರೆಡ್ ಸ್ಟಾರ್” ಎಂಬ (ಕೆಂಪು ನಕ್ಷತ್ರ – ಕಮ್ಯುನಿಷ್ಟ್ ನಾಯಕರ ತಲೆಯ ಮೇಲಿನ ಪ್ರಭಾವಳಿ!) ಆಪರೇಟಿಂಗ್ ಸಿಸ್ಟಮ್ ಆಧಾರದಲ್ಲಿ. ಅಂದಹಾಗೆ, ಉತ್ತರ ಕೊರಿಯದ ರಾಜಧಾನಿ ಪ್ಯೊಂಗ್‍ಯಾಂಗಲ್ಲಿ ಎಷ್ಟು ಸೈಬರ್‍ಕೆಫೆಗಳಿವೆ ಹೇಳಿ. ಸಾವಿರ? ನೂರು? ಹತ್ತು? ಒಂದು? ಡಿ ಈಸ್ ದ ರೈಟ್ ಆನ್ಸರ್!
ಶಾಲೆಯಲ್ಲಿ ಬ್ರೈನ್‍ವಾಷ್
ಈ ದೇಶದ ಪ್ರತಿಶಾಲೆಯ ಪ್ರತಿ ತರಗತಿಯಲ್ಲೂ ಎರಡು ಮಹಾನಾಯಕರ ಫೋಟೋಗಳು ತೂಗುಬಿದ್ದಿರುತ್ತವೆ. ಕಿಮ್ ಇಲ್‍ಸಂಗ್ ಮತ್ತು ಅವನ ಮಗ ಕಿಮ್ ಜಾಂಗ್‍ಇಲ್ – ಇವರೇ ಈ ದೇಶವನ್ನಾಳಿದ ಮಹಾಪುರುಷರು. ವ್ಯಾಟಿಕನ್ ಸಿಟಿ ಬೈಬಲ್ಲಿಗೆ ವಿರುದ್ಧವಾಗಿ ಹೋಗಬಹುದು, ಆದರೆ ಕೊರಿಯ ಈ ಅವತಾರಪುರುಷರ ಆದರ್ಶಗಳಿಗೆ ವಿರುದ್ಧವಾಗಿ ಹೋಗುವುದನ್ನು ಕನಸಿನಲ್ಲಿ ಕೂಡ ಕಲ್ಪಿಸಲು ಸಾಧ್ಯವಿಲ್ಲ! ಕಿಮ್ ಇಲ್‍ಸಂಗ್ ಹುಟ್ಟಿದ ವರ್ಷ 1912 – ಕೊರಿಯದ ‘ನವೋದಯ ವರ್ಷ’. ಕ್ರಿಸ್ತ ಹುಟ್ಟಿದಾಗ ಕ್ರಿಸ್ತಶಕೆ ಶುರುವಾದ ಹಾಗೆ, ಈ ನಾಯಕ ಹುಟ್ಟಿದ ವರ್ಷದಿಂದ ಮೊದಲ್ಗೊಂಡು ಕೊರಿಯದ ಪಂಚಾಂಗ, ಕಾಲವನ್ನು ಲೆಕ್ಕ ಹಾಕುತ್ತದೆ. ಅದರ ಪ್ರಕಾರ, ಈಗ ಕೊರಿಯದಲ್ಲಿ ನಡೆಯುತ್ತಿರುವ ವರ್ಷ – ಜುಕೆ 104. ಕೊರಿಯದಲ್ಲಿ ಗ್ರೆಗೊರಿಯನ್ ಕ್ಯಾಲೆಂಡರಿಗೆ ಕವಡೆಕಾಸಿನ ಕಿಮ್ಮತ್ತೂ ಇಲ್ಲ!
ಇನ್ನು, ಇಲ್ಲಿ ನರ್ಸರಿ ಶಾಲೆಗಳಲ್ಲಿ ಮಕ್ಕಳಿಗೆ ಶಿಶುಗೀತೆಗಳನ್ನು ಹೇಗೆ ಹೇಳಿಕೊಡುತ್ತಾರೆ ನೋಡಿ:
ಒಳ್ಳೆಯದು – ಕೊರಿಯ; ಕೆಟ್ಟದ್ದು – ಅಮೆರಿಕ!
ಮಹಾನ್‍ಶಕ್ತಿ – ಕಿಮ್ ಇಲ್‍ಸಂಗ್; ದುಷ್ಟಶಕ್ತಿ – ಅಮೆರಿಕ!
ಅತ್ಯುತ್ಕೃಷ್ಟ – ನನ್ನ ದೇಶ; ದಟ್ಟದರಿದ್ರ – ಅಮೆರಿಕ!
ಅಷ್ಟೇ ಅಲ್ಲ, ಚಿಕ್ಕಮಕ್ಕಳಿಗೆ ಟಾಯ್‍ಗನ್‍ಗಳನ್ನು ಕೊಟ್ಟು ಅಮೆರಿಕದ ಸೈನಿಕರನ್ನು ಶೂಟ್ ಮಾಡುವ ಆಟವನ್ನು ಕಲಿಸುತ್ತಾರೆ. ಅಮೆರಿಕನ್ ಸೈನಿಕರನ್ನು ಗೋಡೆಗಳಲ್ಲಿ, ಚೆಂಡುಗಳ ಮೇಲೆ ಅಂಟಿಸಿ ಅದನ್ನು ಎಷ್ಟು ಸಾಧ್ಯವೋ ಅಷ್ಟು ಬಲವಾಗಿ ಒದ್ದ ಹುಡುಗನಿಗೆ ತರಗತಿಗಳಲ್ಲಿ ಮುಂಬಡ್ತಿ ಕೊಡಲಾಗುತ್ತದೆ. ಮಕ್ಕಳಿಗೆ ಕೊರಿಯ ಬಿಟ್ಟರೆ ಜಗತ್ತಿನ ಬೇರೆ ಯಾವುದೇ ದೇಶದ ಮಾಹಿತಿಯೂ ಇಲ್ಲ. ಹೊರದೇಶಗಳಿಂದ ಕ್ಯಾಮರ ಹಿಡಿದು ಬಂದ ಪತ್ರಕರ್ತರಿಗೆ ಈ ದೇಶದ ಯಾವುದೇ ಶಾಲೆಯಲ್ಲೂ ಚಿತ್ರೀಕರಣ ನಡೆಸಲು ಅವಕಾಶವಿಲ್ಲ. ಮೀರಿ ಹೋದವರಿಗೆ ಗುಂಡಿನ ಉತ್ತರ ಕೊಡಲು ಸೈನಿಕ ಪಡೆ ಸದಾ ಸನ್ನದ್ಧ.
ಶಾಲೆ ಬಿಟ್ಟು ಹೊರಬಂದರೆ, ಮಹಾನಾಯಕರ ಹುಟ್ಟಿದ, ಸತ್ತ, ಮದುವೆ ಅಥವಾ ಪ್ರಸ್ಥ ಮಾಡಿಕೊಂಡ ದಿನಗಳನ್ನು ಎಂದೆಂದೂ ಮರೆಯದೆ ಕ್ಯಾಲೆಂಡರಿನಲ್ಲಿ ಗುರುತು ಹಾಕಿಕೊಂಡು ಅವನ್ನು ತಮ್ಮದೇ ಸ್ವರ್ಗಾರೋಹಣದ ದಿನ ಅನ್ನುವ ಹಾಗೆ ಅದ್ಧೂರಿಯಾಗಿ ಸಂತೋಷದಿಂದ ಆಚರಿಸುವ ಜನ ಸಿಗುತ್ತಾರೆ. ಅಂತಹ ವಿಶೇಷ ದಿನಗಳಂದು ದೇಶದ ಲಕ್ಷಾಂತರ ಮಕ್ಕಳು ಜೊತೆಯಾಗಿ ಸೇರಿ ಮಾಸ್‍ಷೋ ನಡೆಸಿಕೊಡುತ್ತಾರೆ. ಎಲ್ಲ ಶಾಲೆಕಾಲೇಜುಗಳಲ್ಲಿ ಮಹಾನಾಯಕರ ಜೀವನವನ್ನು ಪದ್ಯದಲ್ಲಿ, ನೃತ್ಯದಲ್ಲಿ ಪ್ರದರ್ಶಿಸುತ್ತಾರೆ. ಶಬರಿಮಲೆಯಲ್ಲಿ ಮಕರಜ್ಯೋತಿಯ ದರ್ಶನಕ್ಕೆ ನುಗ್ಗಿದಂತೆ, ಇಡೀ ದೇಶದ ಜನ ತುದಿಗಾಲಲ್ಲಿ ನಿಂತುಕೊಂಡು ಈ ಕಾರ್ಯಕ್ರಮಗಳನ್ನು ನೋಡುತ್ತಾರೆ. ದೇಶದ ಜನತೆ ಗೌರವ ಸಲ್ಲಿಸಲು ಅನುಕೂಲವಾಗುವ ಹಾಗೆ ಪ್ಯೊಂಗ್‍ಯಾಂಗಲ್ಲಿ ಐನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮಹಾನಾಯಕದ್ವಯರ ಕಂಚಿನ ಪ್ರತಿಮೆಗಳನ್ನು ನಿಲ್ಲಿಸಲಾಗಿದೆ. ಪುಣ್ಯದಿನಗಳಂದು ಇಲ್ಲಿ ಒಟ್ಟು ಸೇರುವ ಜನ ಮತ್ತು ತುಂಬಿತುಳುಕುವ ಹೂವಿನ ರಾಶಿ ಯಾವ ಕುಂಭಮೇಳಕ್ಕೂ ಕಡಿಮೆಯಿಲ್ಲ.
ಸರ್ಕಸ್ ಕಂಪೆನಿಯಿಂದ ಪಲಾಯನ
ಇಷ್ಟೆಲ್ಲ ಸುಖಸಂಪತ್ತು ತೇಲಾಡಿಕೊಂಡಿರುವ ಸುಭಿಕ್ಷರಾಜ್ಯವನ್ನು ಕೂಡ ಬಿಟ್ಟು ಓಡಿಹೋಗುವ ಹಂಚಿಕೆ ಹಾಕುವ ಕೆಲವು ಬುದ್ಧಿವಂತರು ಇದ್ದಾರೆ! ಹಾಗೆ, ಸೈನಿಕರ ಕಣ್ಣು ತಪ್ಪಿಸಿ, ಕರೆಂಟು ಹಾಯುವ ದೊಡ್ಡದೊಡ್ಡ ತಂತಿಬೇಲಿಗಳನ್ನು ಜೀವದ ಹಂಗು ತೊರೆದು ಹಾರಿ ಹೊರಬರುವ ಧೈರ್ಯವಂತರ ಸಂಖ್ಯೆ ಕಮ್ಮಿಯೇನಿಲ್ಲ. ಪ್ರತಿವರ್ಷ, ಹೀಗೆ ಕುದಿಯುವ ನರಕದಿಂದ ಪಾರಾಗಿ ದಕ್ಷಿಣ ಕೊರಿಯ ಸೇರುವವರ ಸಂಖ್ಯೆ ಹತ್ತಿರಹತ್ತಿರ ಮೂರು ಸಾವಿರ.
ಇವರನ್ನು ದಕ್ಷಿಣ ಕೊರಿಯ ಪ್ರೀತಿಯಿಂದ ಸ್ವಾಗತಿಸಿ ತನ್ನ ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳಲು ಅನುವು ಮಾಡಿಕೊಡುತ್ತದೆ. ಆದರೆ, ಅದಕ್ಕಿರುವ ಒಂದೇ ಒಂದು ಸಮಸ್ಯೆಯೆಂದರೆ, ಗಡಿ ಹಾರಿ ಬಂದ ಉತ್ತರ ಕೊರಿಯನ್ನರಿಗೆ ಹೊರಜಗತ್ತಿನಲ್ಲಿ ಎರಡು ಸಾವಿರ ವರ್ಷಗಳು ಅದಾಗಲೇ ಕಳೆದುಹೋಗಿವೆ ಎಂಬ ತಥ್ಯ ಗೊತ್ತಿರುವುದಿಲ್ಲ. ಪ್ರಪಂಚದಲ್ಲೇ ಅತಿವೇಗದ ಇಂಟರ್ನೆಟ್ ಸೌಕರ್ಯ ಒದಗಿಸುವ ದಕ್ಷಿಣ ಕೊರಿಯದಲ್ಲಿ ಇವರು ಸೂಪರ್ ಮಾರ್ಕೆಟ್ಟಿನಲ್ಲಿ ಅಲೆಯುವ ಟಾರ್ಜಾನರಂತೆ ಕಾಣುತ್ತಾರೆ! ಜಗತ್ತಿನಲ್ಲಿ ಮುನ್ನೂರಕ್ಕೂ ಮಿಕ್ಕಿ ದೇಶಗಳಿವೆ ಅಂತಲೂ ಅವರಿಗೆ ಗೊತ್ತಿರುವುದಿಲ್ಲ! ಇಂಥವರನ್ನು ಸೇರಿಸಿ, ದಕ್ಷಿಣ ಕೊರಿಯದ ಸರಕಾರ ವಿಶೇಷ ಸರಕಾರೀ ಶಾಲೆಗಳಲ್ಲಿ ತಿಂಗಳುಗಟ್ಟಲೆ ಟ್ರೈನಿಂಗ್ ಕೊಡುತ್ತದೆ. ನಾವು-ನೀವು ಹುಟ್ಟಿದ ಮೊದಲ ಹತ್ತುವರ್ಷದಲ್ಲಿ ಕಲಿತ ಜಗತ್ತಿನ ಜ್ಞಾನವನ್ನು ಈ ಅಮಾಯಕ ಮುಗ್ಧರು ಈ ಶಾಲೆಗಳಲ್ಲಿ ಕಲಿತು ಹೊಸಜಗತ್ತಿಗೆ ಹೆಜ್ಜೆ ಇಡುತ್ತಾರೆ.
ಸಿಕ್ಕಿಬಿದ್ದರೆ ಮರಣಮೃದಂಗ
ಇದು ಯಶಸ್ವಿಯಾಗಿ ಹೊರಹಾರಿ ಹೋದವರ ಕತೆಯಾಯ್ತು. ಹೊರಹಾರಲು ಹೋಗಿ ಬೇಲಿಯಲ್ಲಿ ಸಿಕ್ಕಿಹಾಕಿಕೊಂಡು ಅರೆಬೆಂದು ಹೋದವರ, ಹಾರುವ ಮೊದಲೆ ಸೈನಿಕರ ಕೈಯಲ್ಲಿ ಸಿಕ್ಕಿಬಿದ್ದವರ ಕತೆ ಏನು – ಅಂತ ಕೇಳುತ್ತೀರಾ? ಅವರನ್ನು ಉತ್ತರ ಕೊರಿಯ ಸರಕಾರವೇ ಬಹಳ ಮುತುವರ್ಜಿ ವಹಿಸಿ ರಿ-ಎಜುಕೇಶನ್ ಸೆಂಟರ್ ಎಂಬ ಹೆಸರಿನ ಮಾದರಿಶಾಲೆಗಳಿಗೆ ಕಳಿಸುತ್ತದೆ. ಹುಟ್ಟಿದಂದಿನಿಂದ ಇಂದಿನವರೆಗೆ ಇಷ್ಟೆಲ್ಲ ಚೆನ್ನಾಗಿ ನೋಡಿಕೊಂಡರೂ ವಿವೇಚನೆ ಅನ್ನುವ ವಿಷವನ್ನು ತಲೆಯಲ್ಲಿ ತುಂಬಿಸಿಕೊಂಡ ಈ ತಪ್ಪಿತಸ್ಥರಿಗೆ ಇನ್ನಷ್ಟು ಶಿಕ್ಷಣದ ಅಗತ್ಯ ಇದೆ ಎನ್ನುವುದು ಸರಕಾರದ ನಿಲುವು. ಅದಕ್ಕಾಗಿಯೇ ರಿ-ಎಜುಕೇಶನ್!
ಕೊರಿಯನ್ ಭಾಷೆಯಲ್ಲಿ ಈ ಶಾಲೆಗಳಿಗೆ ಕ್ವಾನ್ಲಿಸೋ ಎಂದು ಹೆಸರು. ಹೊರದೇಶಗಳಿಂದ ಬಂದಿಳಿದ ಯಾವನೇ ಆಗಲಿ, ಪ್ರವಾಸಿ ಇರಲಿ ಪತ್ರಕರ್ತ ಇರಲಿ, ಅವನಿಗೆ ಈ ಶಾಲೆಗಳಿಗೆ ಪ್ರವೇಶವಿಲ್ಲ. ಮಾತ್ರವಲ್ಲ, ಇದರ ಆಸುಪಾಸು (ಅಂದರೆ ಐದು ಮೈಲಿ ದೂರದಲ್ಲಿ ಕೂಡ) ಸುಳಿದಾಡಲು ಅವಕಾಶವಿಲ್ಲ. ಯಾಕೆಂದರೆ, ಇಲ್ಲಿ ಕೊಡುವ ಶಿಕ್ಷಣ ನಾಜಿ ಸೈನಿಕರ ಯಾತನಾಶಿಬಿರಗಳಿಗಿಂತಲೂ ಹಲವಾರು ಪಟ್ಟು ಹೆಚ್ಚು ಕ್ರೂರವಾಗಿದೆ. ಇಲ್ಲಿಗೆ ಬಂದು ಸೇರಿದವರಿಗೆ ಅನ್ನಾಹಾರಗಳು ಇಲ್ಲ. ದಿನಕ್ಕೆ ಹತ್ತು-ಹದಿನೈದು ಗಂಟೆಗಳ ಕಠಿಣ ದುಡಿಮೆ. ಇವರೇ ಹೊಲಗಳಲ್ಲಿ ಎತ್ತುಗಳಾಗಿ ನೇಗಿಲು ಹೊರಬೇಕು. ಟನ್‍ಗಟ್ಟಲೆ ಭಾರವನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಬೇಕು. ಆಜ್ಞೆಗೆ ತಪ್ಪಿದ ಅಥವಾ ಒಪ್ಪದ ಕೈದಿಯನ್ನು ಪಿಜನ್ ಪನಿಷ್‍ಮೆಂಟ್ ಎಂಬ ಹೆಸರಲ್ಲಿ ಘನಘೋರವಾಗಿ ಹಿಂಸಿಸಲಾಗುತ್ತದೆ. ಕೈದಿಗಳ ಕೈಗಳನ್ನು ಬೆನ್ನ ಹಿಂದೆ ಕಟ್ಟಿಹಾಕಿ ಬೆನ್ನು ಬಗ್ಗಿಸಿ ಹಕ್ಕಿಗಳಂತೆ ಮೂರ್ನಾಲ್ಕು ದಿನ ನಿಲ್ಲಿಸಿ ಬಾಸುಂಡೆ ಬರುವಂತೆ ಹೊಡೆಯಲಾಗುತ್ತದೆ. ನಿಶ್ಶಕ್ತರಾದವರನ್ನು ಗುಂಡಿಟ್ಟು ಕೊಲ್ಲಲಾಗುತ್ತದೆ. ದೇಶ ಕಾಯುವ ಕೆಲಸದಲ್ಲಿ ಬೇಜಾರಾದ ಯೋಧರಿಗೆ ತಮ್ಮೆಲ್ಲ ಸಿಟ್ಟು, ಸೆಡವು, ಅತೃಪ್ತಿ, ಬೇಸರಗಳನ್ನು ಹೊರಹಾಕಲು ಬೇಕಾದ ಗೊಂಬೆಗಳು ಈ ಕೈದಿಗಳು. ಅವರನ್ನು ಬಡಿದು, ಹೊಡೆದು, ರೇಪ್ ಮಾಡಿ, ಅಂಗಾಂಗ ಕತ್ತರಿಸಿ ಕೊಂದುಹಾಕುವ ಎಲ್ಲ ಅಪ್ರತಿಮ ಅಧಿಕಾರಗಳನ್ನು ಇಲ್ಲಿ ಸೈನಿಕರಿಗೆ ಕೊಡಲಾಗಿದೆ.
ಇಂತಹ ಸ್ವರ್ಗಸುಖ ಪಡೆಯುವ ಭಾಗ್ಯ ಎಲ್ಲ ಸೈನಿಕರಿಗೆ ಸಿಗಬೇಕು ಎನ್ನುವ ಒಳ್ಳೆಯ ಆಶಯದಿಂದ ಕೊರಿಯ ಸರಕಾರ ಯೋಡಾಕ್, ಹೊರ್ಯೊಂಗ್, ಚೊಂಗ್‍ಜಿನ್, ಹ್ವಾಸಂಗ್, ಪುಕ್‍ಚಾಂಗ್, ಗೇಚನ್ – ಹೀಗೆ ಎಲ್ಲೆಲ್ಲೂ ಯಾತನಾಶಿಬಿರಗಳನ್ನು ತೆರೆದಿದೆ. ಇವಿಷ್ಟೂ ‘ಶಾಲೆ’ಗಳಲ್ಲಿ ಕೂಡಿಹಾಕಿರುವ ಒಟ್ಟು ನರಕವಾಸಿಗಳ ಸಂಖ್ಯೆ ಬರೋಬ್ಬರಿ ಎರಡೂವರೆ ಲಕ್ಷ!
ಹೆಣಗಳ ನಡುವೆ ಜೀವನದರ್ಶನ
ಗೂಗಲ್ ಕಂಪೆನಿಯ ಛೇರ್‍ಮನ್ ಎರಿಕ್ ಸ್ಮಿತ್‍ನ ಜೊತೆ, ಉತ್ತರ ಕೊರಿಯದ ನರಕದಿಂದ ಪಾರಾಗಿ ಸಿಯೋಲ್ (ದಕ್ಷಿಣ ಕೊರಿಯ) ಸೇರಿದ ‘ಪಾಲ್’ ಎಂದು ಹೆಸರಿಸಿಕೊಂಡ ಕೊರಿಯನ್ ಹಂಚಿಕೊಂಡ ಕತೆ ಇದು: ಪಾಲ್‍ನ ತಾಯಿ ವಿದೇಶೀಯರ ಜೊತೆ ವ್ಯಾಪಾರ ಮಾಡಿದಳು ಎಂಬ ಕೇಸು ಹಾಕಿ ಅವಳನ್ನು ಯಾತನಾಶಿಬಿರಕ್ಕೆ ಅಟ್ಟಲಾಗಿತ್ತು. ಅಲ್ಲಿ ಆಕೆ ನರಳಿನರಳಿ ಸತ್ತಳು. ಕೆಲ ತಿಂಗಳ ಬಳಿಕ, ಗಡಿಬೇಲಿ ಹಾರಲು ಯತ್ನಿಸಿದ ಎಂಬ ಕಾರಣಕ್ಕೆ ಪಾಲ್‍ನನ್ನು ಅಂತಹುದೇ ಮತ್ತೊಂದು ಶಿಬಿರಕ್ಕೆ ಸಾಗಿಸಲಾಯಿತು. ಅಲ್ಲಿಯ ಪರಿಸ್ಥಿತಿ ದಾರುಣವಾಗಿತ್ತು. ಬಹುತೇಕ ಕೈದಿಗಳಿಗೆ ತಾವೇಕೆ ಅಲ್ಲಿದ್ದೇವೆ, ಯಾವ ಕಾರಣಕ್ಕಾಗಿ ತಮ್ಮನ್ನು ಹಿಡಿದು ಇಲ್ಲಿ ಹಾಕಲಾಯಿತು ಎಂದೇ ತಿಳಿದಿರಲಿಲ್ಲ. ಯಾವಾವುದೋ ಕಾರಣಗಳನ್ನು ಬೆದಕಿ ತೆಗೆದು ಅವರನ್ನು ಇಲ್ಲಿ ಹಾಕಿ ಜೈಲ್‍ಭರೋ ಮಾಡಿದ್ದರು. ಹೆಚ್ಚಿನ ಕೈದಿಗಳು ಕೇವಲ ಮೂಳೆಗೂಡುಗಳಾಗಿ ಬದಲಾಗಿದ್ದರು. ಕಣ್ಣುಗಳು ಇಂಗಿಹೋಗಿದ್ದವು. ಮುಂಜಾನೆಯಿಂದ ಮುಸ್ಸಂಜೆಯವರೆಗೆ ಅವರು ಯಾವಾವುದೋ ಅರ್ಥಹೀನ ದೈಹಿಕ ಶ್ರಮದ ಕೆಲಸ ಮಾಡಿ ಸಾಯಬೇಕಿತ್ತು. ಇನ್ನೇನು ಕೆಲಸ ಮಾಡಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿಗೆ ಬಂದ ಕೈದಿಗಳನ್ನು ಸೈನಿಕರು ಶಿಬಿರದ ಆಸ್ಪತ್ರೆಗೆ ಎಸೆದು ಹೋಗುತ್ತಿದ್ದರು. ಅಲ್ಲಿ ಹೋಗಿ ನೋಡಿದ ಪಾಲ್‍ಗೆ ಯಾತನೆಯಲ್ಲಿ ಹೊಟ್ಟೆಯೆಲ್ಲ ತಳಮಳಿಸಿತು. ಯಾಕೆಂದರೆ, ಆಸ್ಪತ್ರೆಯ ರೋಗಿಗಳು ಒಬ್ಬರಿಗೊಬ್ಬರು ಅಂಟಿಕೊಂಡು ಮಲಗಿ ರೋಗಗಳನ್ನು ಬೇಕೆಂದೇ ಹರಡಿಸಿಕೊಳ್ಳಲು ಹಾತೊರೆಯುತ್ತ ಮಲಗಿರುತ್ತಿದ್ದರು. ಯಾವನಾದರೂ ಕೈದಿ ಆತ್ಮಹತ್ಯೆಗೆ ಪ್ರಯತ್ನಿಸಿ ಯಶಸ್ವಿಯಾದರೆ, ಅವನ ಮನೆಯವರನ್ನು ಎಳೆದುತಂದು ಶಿಬಿರದಲ್ಲಿ ಹಾಕಿ ಚಿತ್ರಹಿಂಸೆ ಕೊಡಲಾಗುತ್ತಿತ್ತು. ಆದ್ದರಿಂದ ಕೈದಿಗಳು ರೋಗಗಳನ್ನು ಬರಿಸಿಕೊಂಡು ಸಾಯಲು ಈ ಉಪಾಯ ಹೂಡಿದ್ದರು.
ಪಾಲ್‍ಗೆ ಆಸ್ಪತ್ರೆಯ ಜೀವನ ಎಷ್ಟು ಒಗ್ಗಿಹೋಯಿತೆಂದರೆ ರೋಗಿಗಳ ಉಸಿರಾಟದಲ್ಲಿ ಆಗುವ ಬದಲಾವಣೆಯನ್ನು ನೋಡಿ, ಅವರು ಇನ್ನೆಷ್ಟು ದಿನ ಬದುಕುತ್ತಾರೆ ಎಂದು ಖಚಿತವಾಗಿ ಹೇಳಬಲ್ಲಷ್ಟು ಪರಿಣಿತಿ ಅವನಿಗೆ ಬಂದಿತ್ತು! ಹಾಗಾಗಿ ಯಾರು ಇನ್ನೆರಡು ದಿನಗಳಲ್ಲಿ ಸಾಯಲು ಕ್ಷಣಗಣನೆ ಮಾಡುತ್ತಿದ್ದಾರೋ ಅಂಥವರ ಹತ್ತಿರ ಹೋಗಿ ಮಲಗುತ್ತಿದ್ದ. ಆ ರೋಗಿಗಳು ಸತ್ತ ಬಳಿಕ ಅವರಿಗೆ ಇಟ್ಟುಹೋಗುತ್ತಿದ್ದ ಊಟವನ್ನು ತಿಂದು ದಿನದೂಡುತ್ತಿದ್ದ. ರೋಗಿಗಳು ಸತ್ತು ಮೂರ್ನಾಲ್ಕು ದಿನವಾಗಿ ಕೊಳೆತು ವಾಸನೆ ಬರಲು ತೊಡಗಿದ ಮೇಲೆ ದಾದಿಯರು ಬಂದು ಹೆಣವನ್ನು ಎತ್ತಿಕೊಂಡು ಹೋಗುತ್ತಿದ್ದರು! ಇಂಥಾ ದಟ್ಟದರಿದ್ರ ಪರಿಸರದಲ್ಲಿ ಮೂರುವರ್ಷ ಸೆರೆ ಅನುಭವಿಸಿ ಹೊರಬಂದ ಪಾಲ್ ಕೊನೆಗೂ ಕೊರಿಯದ ಗಡಿ ಹಾರಿ ದಕ್ಷಿಣ ಕೊರಿಯಕ್ಕೆ ಹೋಗಲು ಶಕ್ತನಾದ. ಆಮ್ನೆಸ್ಟಿ ಇಂಟರ್‍ನ್ಯಾಷನಲ್ ಸಂಸ್ಥೆ ಅವನಿಗೆ ಇತ್ತೀಚೆಗೆ ತೆಗೆದ ಕೊರಿಯದ ಗೂಗಲ್ ಅರ್ಥ್ ಚಿತ್ರಗಳನ್ನು ಜೂಮ್ ಮಾಡಿ ತೋರಿಸಿದಾಗ ಅವನು ಹೇಳಿದ್ದು – “ಈಗ ಇಲ್ಲಿ ಜಾಸ್ತಿ ಕಟ್ಟಡಗಳು ಕಾಣಿಸ್ತಾ ಇವೆ. ಮುಂಚೆಗಿಂತ ಜಾಸ್ತಿಯಾಗಿವೆ. ಅದರರ್ಥ ಇನ್ನಷ್ಟು ಹೆಚ್ಚು ಸಾವಿರ ಕೈದಿಗಳನ್ನು ಇಲ್ಲಿ ಕೂಡಿಹಾಕಿ ನರಕದ ದಾರಿ ತೋರಿಸ್ತಾ ಇದಾರೆ!”
ಸಾವಿನ ಮನೆಗೆ ಗಟ್ಟಿಪಂಚಾಂಗ
ಈ ಸಾವಿನ ಮನೆಗಳಲ್ಲಿ ಇದ್ದವರು, ಇರುವವರು ಕೇವಲ ಸಾಮಾನ್ಯ ಜನ ಅಂತ ಅಂದುಕೊಳ್ಳಬೇಡಿ. ಉತ್ತರ ಕೊರಿಯದ ಕ್ಷಿಪಣಿ ತಯಾರಿ, ಅಣ್ವಸ್ತ್ರ ಪರೀಕ್ಷೆಯಂಥ ಹತ್ತುಹಲವಾರು ಜಗದ್ವಿಂಸಕ ಕಾರ್ಯಕ್ರಮಗಳ ರೂಪುರೇಷೆ ತಯಾರಿಸಿ ಪಂಚಾಂಗ ಹಾಕಿದ ಸಿಯೋ ಸಾಂಗ್‍ಗುಕ್ ಎಂಬ ವಿಜ್ಞಾನಿ ಕೂಡ ಈ ಯಾತನಾಶಿಬಿರಗಳಲ್ಲಿ ದಿನಗಳೆದಿದ್ದ. ಬುದ್ಧಿವಂತಿಕೆಯ ವಿಚಾರದಲ್ಲಿ ನಮಗೆ ಅಬ್ದುಲ್ ಕಲಾಂ ಇದ್ದ ಹಾಗೆ ಕೊರಿಯಕ್ಕೆ ಸಾಂಗ್‍ಗುಕ್. ಈತ ತನ್ನ ಉನ್ನತಶಿಕ್ಷಣ ಪೂರೈಸಿದ್ದು ರಷ್ಯದಲ್ಲಿ. ಮರಳಿ ತಾಯ್ನಾಡಿಗೆ ಬಂದು ದೇಶದ ಅಧ್ಯಕ್ಷರ ಹೆಸರಿನ ಕಿಮ್ ಇಲ್‍ಸಂಗ್ ಯೂನಿವರ್ಸಿಟಿಯಲ್ಲಿ ಭೌತಶಾಸ್ತ್ರ ಬೋಧಿಸುತ್ತಿದ್ದ ಸಾಂಗ್‍ಗುಕ್ ಒಮ್ಮೆ ಗೆಳೆಯರ ಜೊತೆ ಪಟ್ಟಾಂಗ ಹೊಡೆಯುತ್ತ “ರಷ್ಯನ್ನರು ತಂತ್ರಜ್ಞಾನದ ವಿಷಯದಲ್ಲಿ ಅದ್ವಿತೀಯರು. ನನ್ನನ್ನು ಎಷ್ಟು ಸಂಬಳ ಕೊಟ್ಟಾದರೂ ಉಳಿಸಿಕೊಳ್ಳಬಯಸಿದ್ದರು” ಅಂತ ಹೇಳಿಕೊಂಡದ್ದೇ ನೆಪವಾಗಿ, ಈ ಮನುಷ್ಯನಿಗೆ ರಷ್ಯನ್ನರ ಜೊತೆ ಗುಪ್ತವ್ಯವಹಾರ ಇದೆ ಅಂತ ಕೊರಿಯನ್ ಸರಕಾರ ಸಾಂಗ್‍ಗುಕ್‍ನನ್ನು ನೇರವಾಗಿ ಯಾತನಾಶಿಬಿರಕ್ಕೆ ಕಳಿಸಿಬಿಟ್ಟಿತು. ಮುಂದೆ ಕೆಲವರ್ಷಗಳ ನಂತರ ಇಲ್‍ಸಂಗ್ ರಷ್ಯಕ್ಕೆ ಭೇಟಿಕೊಟ್ಟಾಗ ಅಲ್ಲಿಯ ವಿಜ್ಞಾನಿಗಳ ಬಳಿ ತನ್ನ ದೇಶಕ್ಕೆ ಕ್ಷಿಪಣಿ ತಂತ್ರಜ್ಞಾನದಲ್ಲಿ ಬೆಳೆಯಲು ಸಹಾಯ ಮಾಡುವಂತೆ ಕೋರಿದ. ಅವರು ನಕ್ಕು, “ನಮ್ಮ ಸಹಾಯ ಯಾಕೆ ಬೇಕು, ಸಾಂಗ್‍ಗುಕ್ ನಿಮ್ಮ ಜೊತೆ ಇರುವಾಗ?” ಅಂತ ಕೇಳಿದರು. ಅಧ್ಯಕ್ಷನಿಗೆ ಜ್ಞಾನೋದಯವಾಯಿತು! ವಾಪಸು ಬಂದವನೇ ಸಾಂಗ್‍ಗುಕ್‍ನನ್ನು ಮರಣಶಿಬಿರದಿಂದ ಹಿಂದಕ್ಕೆ ಕರೆಸಿ ಕ್ಷಿಪಣಿ ಯೋಜನೆಯ ಅಧ್ಯಕ್ಷಗಿರಿ ಕೊಟ್ಟುಬಿಟ್ಟ! ಮುಂದೆ ಆಗಲಿದ್ದ ಅನಾಹುತಗಳ ಮುನ್ಸೂಚನೆ ಇಲ್ಲದೆ ಸಾಂಗ್‍ಗುಕ್ ದೇಶದ ಅಧ್ಯಕ್ಷನ ಹೆಗಲಿಗೆ ಹೆಗಲು ಕೊಟ್ಟು ದುಡಿದು ಕೊರಿಯಕ್ಕೆ ಬೇಕಾದ ಎಲ್ಲ ಕ್ಷಿಪಣಿ, ಅಣ್ವಸ್ತ್ರ ತಂತ್ರಜ್ಞಾನವನ್ನು ತಯಾರು ಮಾಡಿಕೊಟ್ಟ. ಭಸ್ಮಾಸುರನಿಗೆ ವರಕೊಟ್ಟು ಜಾತ್ರೆಗೆ ಕಳಿಸಿದ ಹಾಗಾಯಿತು. ಉತ್ತರ ಕೊರಿಯ ಅಲ್ಲಿಂದೀಚೆಗೆ ಒಂದಕ್ಕಿಂತ ಒಂದು ದೊಡ್ಡ ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸುತ್ತ, ಮಿಸೈಲುಗಳನ್ನು ಹಾರಿಸುತ್ತ ಪೂರ್ವಏಷ್ಯಾದ ನಿದ್ದೆಗೆಡಿಸುತ್ತ ಬಂದಿದೆ. ಭವಿಷ್ಯದಲ್ಲಿ ಒಂದುವೇಳೆ, ಅದು ಕಳ್ಳು ಕುಡಿದ ಹುಚ್ಚನಂತೆ ತಲೆಕೆಟ್ಟು ಯರ್ರಾಬಿರ್ರಿಯಾಗಿ ಅಣ್ವಸ್ತ್ರಗಳನ್ನು ಪ್ರಯೋಗಿಸಲು ಪ್ರಾರಂಭಿಸಿದರೆ, ಅದರ ಪರಿಣಾಮವನ್ನು ಚೀನಾ, ದಕ್ಷಿಣ ಕೊರಿಯ, ಜಪಾನ್, ಅಮೆರಿಕ ಮತ್ತು ಬಹುತೇಕ ಈಶಾನ್ಯ ಮತ್ತು ಆಗ್ನೇಯ ಏಷ್ಯಾದ ದೇಶಗಳು ಅನುಭವಿಸಬೇಕಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ನಷ್ಟದ ದೊಡ್ಡ ಬಿಸಿತುತ್ತನ್ನು ನುಂಗಬೇಕಾಗುವುದು ಸ್ವತಃ ಉತ್ತರ ಕೊರಿಯವೇ ಎನ್ನುವುದು ಮತ್ತು ಅದನ್ನು ತಿಳಿಯುವ ವಿವೇಕ ಇನ್ನೂ ಅದಕ್ಕೆ ಬಂದಿಲ್ಲ ಅನ್ನುವುದೇ ದೊಡ್ಡ ದುರಂತ.
ಅನ್ನದ ತಟ್ಟೆಗೆ ಅಣ್ವಸ್ತ್ರ
ಎರಡೂವರೆ ಕೋಟಿ ಜನಸಂಖ್ಯೆ ಇರುವ ಉತ್ತರ ಕೊರಿಯದಲ್ಲಿ ಪ್ಯೊಂಗ್‍ಯಾಂಗ್ ಬಿಟ್ಟರೆ ಬೇರೆ ನಗರಗಳೇ ಇಲ್ಲ. ಎಲ್ಲ ಕಡೆ ಹಳ್ಳಿಗಳೇ. ಈ ಹಳ್ಳಿಗಳಾದರೋ, ಬೇಕಾದ ಮೂಲಭೂತ ಅವಶ್ಯಕತೆಗಳಿಗೆ ಪರದಾಡಬೇಕಾದ ಪರಿಸ್ಥಿತಿ. ವಿದ್ಯತ್ತು, ನೀರು, ಆಹಾರ, ಅರೋಗ್ಯ, ಶಾಲೆ – ಯಾವುದೂ ಸಮರ್ಪಕವಾಗಿ ಇಲ್ಲ. ಸೂಪರ್‍ಮಾರ್ಕೆಟ್ಟುಗಳ ಕಲ್ಪನೆ ಕೂಡ ಹೆಚ್ಚಿನ ಕೊರಿಯನ್ನರಿಗೆ ಇಲ್ಲ. ಹಳ್ಳಿಗಳ ಬಹುತೇಕ ಹೊಲಗಳು ಸಮರ್ಪಕ ನೀರಾವರಿ ಸವಲತ್ತು ಇಲ್ಲದೆ ಬಂಜರು ಬಿದ್ದಿವೆ. ಇಲ್ಲಿ ಮಳೆ ಬಂದರೆ ಬೆಳೆ ಉಂಟು, ಇಲ್ಲವಾದರೆ ಬಾಯಿಗೆ ಮಣ್ಣೇ ಗತಿ. ಈಗಿನ ಕೊರಿಯನ್ ಕಾನೂನಿನ ಪ್ರಕಾರ, ದೇಶದ ಯಾವುದೇ ಮೂಲೆಯಲ್ಲಿ ಬೆಳೆ ಬೆಳೆಯುವ ರೈತ ತನಗಾಗಿ ಪಾವು ಅಕ್ಕಿಯನ್ನೂ ಉಳಿಸಿಕೊಳ್ಳುವ ಹಾಗಿಲ್ಲ. ಬೆಳೆದದ್ದೆಲ್ಲವನ್ನೂ ಸರಕಾರದ ಅಮೃತಪಾದಗಳ ಮೇಲೆ ಸುರಿಯಬೇಕು. ಅದು (ದಯೆ ಬಂದರೆ) ಹೆಕ್ಕಿ ಹಾಕಿದ ಅಕ್ಷತೆಕಾಳನ್ನು ಪ್ರಸಾದವೆಂದು ಸ್ವೀಕರಿಸಬೇಕು. ಈ ರೂಲಿಗೆ ವಿರುದ್ಧವಾಗಿ ಮಾತಾಡುವ ಯಾವನೇ ಕೊರಿಯನ್ ನೇರವಾಗಿ ಹೋಗುವುದು ಕಾನ್ಸಂಟ್ರೇಶನ್ ಕ್ಯಾಂಪಿಗೆ. ಅಲ್ಲಿಗೆ ಹೋದವರು ಬದುಕಿ ಈಚೆ ಬಂದ ಉದಾಹರಣೆ ಇಲ್ಲ.
ದೇಶದ ಶೇಕಡಾ ಎಪ್ಪತ್ತು ಜನರಿಗೆ ಕುಡಿಯುವ ಶುದ್ಧ ನೀರಾಗಲೀ ಹೊಟ್ಟೆ ತುಂಬ ಅನ್ನವಾಗಲೀ ಇಲ್ಲ. ರೈತ ಮೂಳೆ ಕಾಣುವ ಬೆನ್ನನ್ನು ಬಗ್ಗಿಸಿ ದುಡಿದು ಬೆಳೆದ ಅನ್ನವನ್ನು ಸೈನಿಕರು ಮಾಂಸದ ಜೊತೆ ನೆಚ್ಚಿಕೊಂಡು ಚಪ್ಪರಿಸಿಕೊಂಡು ತಿನ್ನುತ್ತಾರೆ. ಯಾಕೆಂದರೆ ಅವರು ಕೇಜಿಗಟ್ಟಲೆ ತೂಗುವ ಬಂದೂಕುಗಳನ್ನು ಹೆಗಲೇರಿಸಿಕೊಂಡು ದೇಶ ಕಾಯಬೇಕಲ್ಲ! ದೇಶದ ಪ್ರಜೆಗಳು ನಾಯಿಗಳಿಗಿಂತ ಕಡೆಯಾಗಿ ದೈನೇಸಿಯಾಗಿ ಬದುಕುತ್ತಿರುವಾಗ ಅಧ್ಯಕ್ಷ, ಮಹಾನಾಯಕ ಕಿಮ್ ಜಾಂಗ್‍ಅನ್ ತನ್ನ ಅರಮನೆಯ ಸೆಟಲೈಟ್ ಕಂಟ್ರೋಲ್ ರೂಮಿನಲ್ಲಿ ಕೂತು ಉನ್ಹಾ ರಾಕೆಟ್ಟುಗಳು ಯಶಸ್ವಿಯಾಗಿ ಬಾನಿಗೆ ನೆಗೆಯುವುದನ್ನು ಕಂಪ್ಯೂಟರ್ ಪರದೆಯಲ್ಲಿ ನೋಡುತ್ತ ಖುಷಿಯಾಗಿ ಸಿಗರೇಟಿನ ಹೊಗೆಯನ್ನು ಅಲೆಅಲೆಯಾಗಿ ಹರಡುತ್ತಾನೆ.
ಹೊತ್ತಿ ಉರಿಯುವ ರೋಮ್ ಮತ್ತು ಪಿಟೀಲು ನುಡಿಸುವ ನೀರೋಗಳು ಮತ್ತೆಮತ್ತೆ ಹುಟ್ಟಿಬರುತ್ತಲೇ ಇರುತ್ತಾರೆ ಎನ್ನುವುದು ಇತಿಹಾಸದ ದೊಡ್ಡ ವ್ಯಂಗ್ಯ.
ಚಿತ್ರಕೃಪೆ : http://www.businessinsider.com
ಎದೆ ನಡಗುತ್ತೆ. ಇಂಥಹ ಜನಜೀವನ ಈಗಲೂ ಇದೆಯಾ? ಇಂತಹದ್ದರಲ್ಲಿ ವಿಶ್ವಸಂಸ್ಥೆ ಎನೂ ಗೊತ್ತಿಲ್ಲದಹಾಗೆ ಹೇಗೆ ಇದೆ?