ಏಕರೂಪ ನಾಗರಿಕ ಸಂಹಿತೆ – ಸುಪ್ರೀಂ ಕೋರ್ಟ್ V/S ಜಮಾತೆ ವಿಚಾರಧಾರೆ
– ಅನಿರುದ್ಧ ವಸಿಷ್ಟ,ಭದ್ರಾವತಿ
ಅರಾಜಕತೆ ತಂದೊಡ್ಡದಿರಲಿ ಧರ್ಮಾಧಾರಿತ ಕಾನೂನು
ಪ್ರಜಾಪ್ರಭುತ್ವ ದೇಶದಲ್ಲಿರುವ ಭಾರತೀಯರಿಗೆ ದೇಶದ ಸಂವಿಧಾನವೇ ಮೇಲ್ಪಂಕ್ತಿಯಾಗಿದ್ದು, ಸಂವಿಧಾನವೇ ಅಂತಿಮವಾದುದು. ಧರ್ಮ ಗ್ರಂಥಗಳಾದ ರಾಮಾಯಣ, ಮಹಾಭಾರತ, ಕುರಾನ್, ಬೈಬಲ್‌ಗಳು ಆಯಾ ಧರ್ಮದ ಅನುಯಾಯಿಗಳ ವೈಯಕ್ತಿಕವಾಗಿರಬೇಕು.ಆದರೆ,ವೋಟ್ ಬ್ಯಾಂಕ್ ರಾಜಕಾರಣದ ಫಲವಾಗಿ ಸರ್ಕಾರಗಳು ಕೈಗೊಂಡ ನಿರ್ಧಾರಗಳು ಸಂವಿಧಾನ ವಿರುದ್ಧ ನಡೆಯಲು ಪ್ರೇರಣೆಯಾಗುತ್ತವೆ ಎಂದರೆ ಅದು ಪ್ರಜಾಪ್ರಭುತ್ವದ ದುರಂತವೇ ಹೌದು.೩೦೦ ವರ್ಷಗಳ ಕಾಲ ಬ್ರಿಟೀಷರಿಂದ ಆಳಿಸಿಕೊಂಡ ನಮ್ಮ ದೇಶ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ್ದರೂ, ಒಂದು ರೀತಿಯಲ್ಲಿ ಸರ್ವಾಧಿಕಾರಿ ಮನಸ್ಥಿತಿಯನ್ನೆ ಇಂದಿಗೂ ಹೊಂದಿದೆ ಎಂದರೆ ತಪ್ಪಲ್ಲ. ಇದು ಕೇವಲ ಆಳುವ ಪಕ್ಷಗಳ ಮನಸ್ಥಿತಿ ಮಾತ್ರವಲ್ಲ, ದೇಶದ ಪ್ರತಿ ಧರ್ಮ ಹಾಗೂ ಜಾತಿಗಳಲ್ಲಿ ಇದು ಹಾಸು ಹೊಕ್ಕಾಗಿದೆ.
೧೯೪೭ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ರೂಪಿಸಲಾದ ಸಂವಿಧಾನ ಮಹೋನ್ನತ ಆಶಯಗಳನ್ನು ಹೊಂದಿದೆ.ಸಂವಿಧಾನವೇ ಭಾರತೀಯರಿಗೆ ಒಂದು ರೀತಿಯಲ್ಲಿ ಸವೋತ್ತಮ ಎಂದರೂ ತಪ್ಪಲ್ಲ. ಆದರೆ, ಸಂವಿಧಾನ ಆಶಯಕ್ಕೆ ಧಕ್ಕೆ ಬರುವ ರೀತಿಯಲ್ಲಿ ಯಾವುದೇ ಸರ್ಕಾರ ಅಥವಾ ಧರ್ಮಗಳು ನಡೆದುಕೊಂಡಾಗ ಅದನ್ನು ನ್ಯಾಯಾಂಗದಲ್ಲಿ ಪ್ರಶ್ನೆ ಮಾಡುವ ಅಧಿಕಾರವನ್ನು ಇದೇ ಸಂವಿಧಾನ ಕಲ್ಪಿಸಿದೆ. ಆದರೆ, ಯಾವುದೇ ಒಂದು ಒಳ ವ್ಯವಸ್ಥೆ ದೇಶದ ಅತ್ಯುನ್ನತ ನ್ಯಾಯಾಂಗ ವ್ಯವಸ್ಥೆಯನ್ನೇ ಪ್ರಶ್ನಿಸುತ್ತದೆ ಎಂದರೆ ಹೇಗೆ?
ಪ್ರಸ್ತುತ ಪ್ರಕರಣವನ್ನೇ ನೋಡುವುದಾರೆ, ಮುಸ್ಲಿಂ ವೈಯಕ್ತಿಕ ಕಾನೂನನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸುವಂತಿಲ್ಲ ಎಂದು ಮುಸ್ಲಿಂ ಧರ್ಮಗುರು ಸಂಘಟನೆ ಜಮಿಯತ್ ಉಲೇಮಾ ಎ ಹಿಂದ್ ಸಂಘಟನೆ ಹೇಳಿದೆ. ಪವಿತ್ರ ಕುರಾನ್ ಆಧಾರದ ಮೇಲೆ ಮಹ್ಮದೀಯ ಕಾನೂನನ್ನು ಸ್ಥಾಪಿಸಲಾಗಿದೆ. ಸಂವಿಧಾನದ ಅನುಚ್ಛೇದ ೧೩ರ ಪ್ರಕಾರ ಮಹ್ಮದೀಯ ಕಾನೂನು ಚಾಲ್ತಿಯಲ್ಲಿರುವ ಕಾನೂನು ನಿಯಮಗಳ ವ್ಯಾಪ್ತಿಗೆ ಬರುವುದಿಲ್ಲ ಹಾಗೂ ಇವುಗಳ ಸಿಂಧುತ್ವವನ್ನು ಸಂವಿಧಾನದ ಮೂರನೆಯ ಭಾಗದ ಅಡಿ ಪರೀಕ್ಷೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ಇಜಾಜ್ ಮಕ್ ಬೂಲ್ ಎನ್ನುವವರ ಮೂಲಕ ಸಲ್ಲಿಸಲಾಗಿರುವ ಜೆಯುಎಸ್ ಅರ್ಜಿಯಲ್ಲಿ ಹೇಳಿದೆ.
ಭಾರತ ಸಂವಿಧಾನದ ೧೩ನೆಯ ಅನುಚ್ಛೇದ ಪ್ರಕಾರ ಸಂವಿಧಾನ ಜಾರಿಗೆ ಬರುವ ನಿಕಟಪೂರ್ವದಲ್ಲಿ ಭಾರತದಲ್ಲಿ ಜಾರಿಯಲ್ಲಿರುವ ಎಲ್ಲ ರೀತಿಯ ಕಾನೂನುಗಳೂ ಶೂನ್ಯವಾಗುತ್ತವೆ. ಹಾಗೆಯೇ, ಸಂವಿಧಾನದ ಮೂರನೆಯ ಭಾಗದ ಅಡಿ ಕಲ್ಪಿಸಲಾಗಿರುವ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿ ಯಾವುದೇ ಕಾನೂನು ಇರತಕ್ಕುದಲ್ಲ. ಯಾವುದೇ ವ್ಯಕ್ತಿಯ ಮೂಲಭೂಯ ಹಕ್ಕು ಉಲ್ಲಂಘನೆಯಾಗುವಂತೆ ರೂಪಿಸುವ ಯಾವುದೇ ಕಾನೂನು ಇದೇ ೧೩ನೆಯ ಅನುಚ್ಛೇದದ ಪ್ರಕಾರ ಊರ್ಜಿತವಲ್ಲ ಎಂದು ಸಂವಿಧಾನ ಹೇಳಿದೆ.
ಈಗ, ಜಮಿಯತ್ ಕೂಡಾ ಇದೇ ಅನುಚ್ಛೇದದ ಆಧಾರದಲ್ಲಿ ನಮ್ಮ ವೈಯಕ್ತಿಕ ಕಾನೂನನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸುವಂತಿಲ್ಲ ಎಂದು ಹೇಳಿರುವುದು. ಯಾವುದೇ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಒಮ್ಮೆ ನೀಡಿದ ತೀರ್ಪು ಸಮಂಜಸವಾಗಿಲ್ಲ ಎಂದೆನಿಸಿದರೆ, ಮತ್ತೆ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಹಾಗಾಗಿ, ಜಮಿಯತ್ ಸಂಸ್ಥೆ ಸುಪ್ರೀಂಕೋಟ್‌ಗೆ ಹೇಳುವ ಅಧಿಕಾರ ಇಲ್ಲವೆಂದಿಲ್ಲ.ಆದರೆ, ಭಾರತ ಸಂವಿಧಾನವೇ ಕಲ್ಪಿಸಿರುವಂತೆ ಈ ದೇಶದ ವ್ಯವಸ್ಥೆಯಲ್ಲಿ ನ್ಯಾಯಾಂಗವೇ ಆಂತಿಮ. ಶಾಸಕಾಂಗ ಹಾಗೂ ಕಾರ್ಯಾಂಗಕ್ಕೂ ಮಿಗಿಲಾಗಿ ಸುಪ್ರೀಂಕೋರ್ಟ್‌ನ್ನು ಸಂವಿಧಾನ ರೂಪಿಸಿದ್ದು, ಇದಕ್ಕೆ ವಿಶೇಷಾಧಿಕಾರಗಳನ್ನು ನೀಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಭಾರತದಲ್ಲಿ ಸುಪ್ರೀಂ ಕೋರ್ಟ್‌ನಂತಹ ಒಂದು ನ್ಯಾಯ ಪೀಠ, ನಿಜಕ್ಕೂ ಸುಪ್ರೀಂ ಆಗಿಯೇ ಕಾರ್ಯ ನಿರ್ವಹಿಸುವುದು ಸಾಧುವೇ ಹೌದು.ಇಲ್ಲಿ, ಇಂತಹ ಸುಪ್ರೀಂ ಕೋರ್ಟಗೆ ಜಮಿಯತ್ ಹೇಳಿರುವುದು ಅದರ ಪ್ರಕಾರ ಸಂವಿಧಾನದ ಉಲ್ಲಂಘನೆಯಲ್ಲ ಹಾಗೂ ನ್ಯಾಯಯುತವಾಗಿದ್ದು, ಇದನ್ನು ಸುಪ್ರೀಂ ಪ್ರಶ್ನಿಸಬಾರದು ಸರಿ. ಇವರೇ ಹೇಳಿರುವಂತೆ ಅನುಚ್ಛೇದ ೧೩ರ ಅಡಿಯಲ್ಲಿ ಜಮಿಯತ್ ನಿರ್ಧಾರ ಸರಿಯಾಗಿದೆ. ಪವಿತ್ರ ಕುರಾನ್ ಆಧಾರದ ಮೇಲೆ ಮಹ್ಮದೀಯ ಕಾನೂನನ್ನು ಸ್ಥಾಪಿಸಲಾಗಿರುವುದು ನ್ಯಾಯಯುತವಾಗಿದೆ ಎನ್ನುವುದಾಗಿದೆ.
ಅದರೆ, ಮುಸ್ಲೀಂ ವೈಯಕ್ತಿಕ ಕಾನೂನಿನಿಂದ ಅಲ್ಲಿನ ಮಹಿಳೆಯರಿಗೆ ತೊಂದರೆಯಾಗುತ್ತಿದೆ ಎಂದು ಸಲ್ಲಿಸಲಾದ ಪಿಐಎಲ್ ಅರ್ಜಿಯೊಂದರ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿರುವುದು ನ್ಯಾಯಸಮ್ಮತವಾಗಿದೆ. ಆದರೆ, ಜಮಿಯತ್ ಸಂಘಟನೆ ಸುಪ್ರೀಂಕೋರ್ಟನ್ನು ಪ್ರಶ್ನಿಸುವ ಮಟ್ಟಕ್ಕೆ ಹೋಗುತ್ತದೆ ಎಂದರೆ, ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಅದರ ಮೂರು ಅಂಗಗಳನ್ನೇ ಅಪಹಾಸ್ಯ ಮಾಡಿದಂತೆ.೧೩ನೆಯ ಅನುಚ್ಛೇದದ ಅಡಿಯಲ್ಲಿ ವೈಯಕ್ತಿಕ ಕಾನೂನು ರೂಪಿಸಿಕೊಂಡಿದ್ದೇವೆ ಎಂದು ಜಮಿಯತ್ ಹೇಳಿದೆ. ಆದರೆ, ಸಂವಿಧಾನದ ಆಶಯದಂತೆ ಯಾವುದೇ ವೈಯಕ್ತಿಕ ಕಾನೂನುಗಳು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವಂತಿಲ್ಲ.ಆದರೆ,ವಾಸ್ತವವಾಗಿ ಮುಸ್ಲೀಂ ವೈಯಕ್ತಿಕ ಕಾನೂನಿನಿಂದ ಅಲ್ಲಿನ ಮಹಿಳೆಯರು ಶೋಷಣೆಗೆ ಹಾಗೂ ಅನ್ಯಾಯಕ್ಕೆ ಒಳಗಾಗುತ್ತಿರುವುದು ಹಲವು ಬಾರಿ ಸಾಬೀತಾಗಿದೆ.
೨೦೧೫ರಲ್ಲಿ ಭಾರತೀಯ ಮುಸ್ಲೀಂ ಮಹಿಳಾ ಆಂದೋಲನ(ಇಂಡಿಯನ್ ಮುಸ್ಲೀಂ ವುಮೆನ್ಸ್ ರೈಟ್ಸ್) ಸಮೀಕ್ಷೆಯೊಂದನ್ನು ನಡೆಸಿತ್ತು. ಇದರ ವರದಿಯನ್ನು ಇಲ್ಲಿ ಉಲ್ಲೇಖಿಸುವುದಾದರೆ, ಶೇ.೯೨ರಷ್ಟು ಮುಸ್ಲೀಂ ಮಹಿಳೆಯರು ತಲಾಖ್ ನೀಡುವ ಪದ್ದತಿಯನ್ನು ವಿರೋಧಿಸಿದ್ದರೆ, ಶೇ.೯೧.೭ರಷ್ಟು ಮುಸ್ಲೀಂ ಮಹಿಳೆಯರು ಬಹುಪತ್ನಿತ್ವವನ್ನು ವಿರೋಧಿಸಿದ್ದಾರೆ. ಅಂದರೆ, ಜಮಿಯತ್ ಹೇಳುವಂತೆ ಅವರ ವೈಯಕ್ತಿಕ ಕಾನೂನು ನ್ಯಾಯಸಮ್ಮತವಾಗಿಲ್ಲ. ಈ ದೇಶದ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ ಎನ್ನುವುದು ಮೇಲ್ನೋಟಕ್ಕೆಯೇ ಸಾಬೀತಾಗುತ್ತದೆ.ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಈ ವೈಯಕ್ತಿಕ ಕಾನೂನು ತಪ್ಪು ಎಂದಾಗುತ್ತದೆ. ಹೀಗಾಗಿ, ಇದರಿಂದ ಶೋಷಣೆಗೆ ಒಳಗಾಗುತ್ತಿರುವ ಮಹಿಳೆಯರನ್ನು ರಕ್ಷಿಸಬೇಕಾದ್ದು ಸರ್ಕಾರದ ಕರ್ತವ್ಯವಾಗುತ್ತದೆ.ಸಂವಿಧಾನದ ಅಡಿಯಲ್ಲಿ ಕೆಲವು ಬಾರಿ ಸುಪ್ರೀಂ ಕೋರ್ಟಗೆ ಪ್ರಶ್ನಿಸುವ ಅವಕಾಶವಿದೆ ಎಂದ ಮಾತ್ರಕ್ಕೆ, ವೈಯಕ್ತಿಕ ಕಾನೂನು ರೂಪಿಸಿಕೊಂಡವರೆಲ್ಲಾ ತಮ್ಮನ್ನು ತಾವು ಸಮರ್ಥಿಕೊಳ್ಳುತ್ತಾ, ಸುಪ್ರೀಂ ಕೋರ್ಟನ್ನು ಪ್ರಶ್ನಿಸುತ್ತಾ ಹೋದರೆ, ದೇಶದ ನ್ಯಾಯಾಂಗ ವ್ಯವಸ್ಥೆಗೆ ಬೆಲೆಯೆಲ್ಲಿ ಉಳಿಯುತ್ತಿದೆ.ಧರ್ಮಾಧಾರಿತ ಕಾನೂನುಗಳನ್ನು ರೂಪಿಸಿಕೊಂಡು, ನ್ಯಾಯಾಂಗ ಕೇಳಬಾರದು ಎಂದು ಹೇಳುತ್ತಲೇ ಹೋದರೆ, ಮುಂದೊಂದು ದಿನ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ, ಗೌರವ ಇಲ್ಲದಂತಾಗುತ್ತದೆ. ಇದು ಸಂವಿಧಾನದ ಮೂಲ ಆಶಯಗಳನ್ನೇ ಗಾಳಿಗೆ ತೂರಿ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿ ಪರಿಣಮಿಸುತ್ತದೆ.
ಈ ಹಿನ್ನೆಲೆಯಲ್ಲಿ ಸಂವಿಧಾನದ ೪೪ನೆಯ ಅನುಚ್ಛೇದ ಹೇಳಿರುವಂತೆ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಬೇಕಿದೆ. ಈ ಕುರಿತಂತೆ ಸಿಸಿಸಿ ರೂಪಿಸುವಂತೆ ಸುಪ್ರೀಂ ಕೋರ್ಟ್ ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಸೂಚಿಸಿದ್ದರೂ, ಯಾವುದೇ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವುದು ದುರಂತ. ಜಾತ್ಯತೀತ ರಾಷ್ಟ್ರವೊಂದರಲ್ಲಿ ಜಾತಿ ಧರ್ಮವೇ ಅತೀತವಾಗಿ ವ್ಯವಸ್ಥೆ ಈ ಮಟ್ಟದಲ್ಲಿ ಸಾಗುತ್ತಿರುವುದಕ್ಕೆ ವ್ಯವಸ್ಥೆಯಲ್ಲಿ ಅಧಿಕಾರ ಹಿಡಿದ ಎಲ್ಲರ ವೋಟ್ ಬ್ಯಾಂಕ್ ರಾಜಕಾರಣವೇ ಕಾರಣ ಎನ್ನುವುದು ಸ್ಪಷ್ಟ.
ಷಾ ಬಾನು ಪ್ರಕರಣದ ಕಾಂಗ್ರೆಸ್ ಪ್ರಸಾದ
ಜಮಿಯತ್ ಉಲೇಮಾ ಎ ಹಿಂದ್ ಸಂಘಟನೆ ಸುಪ್ರೀಂ ಕೋರ್ಟನ್ನೇ ಪ್ರಶ್ನಿಸುವ ಮಟ್ಟಕ್ಕೆ ಹೋಗುತ್ತದೆ ಎಂದರೆ, ಇಂತಹ ಮನಸ್ಥಿತಿಗಳನ್ನು ಬೆಳಸಿದ್ದ ಸೋಕಾಲ್ಡ್ ಜಾತ್ಯತೀತವಾದಿಗಳ ಕಾಂಗ್ರೆಸ್ ಸರ್ಕಾರ. ೮೦ರ ದಶಕದಲ್ಲಿ ಬಾರೀ ಬಿರುಗಾಳಿಯೆಬ್ಬಿಸಿದ್ದ ಷಾ ಬಾನು ಪ್ರಕರಣ ಇವೆಲ್ಲಾ ವಿವಾದಗಳಿಗೆ ನಾಂದಿ ಎಂದರೆ ತಪ್ಪಲ್ಲ. ೬೦ ವರ್ಷದ ಮಹಿಳೆ ಪತಿಯಿಂದ ಜೀವನಾಂಶ ಕೊಡಿಸುವಂತೆ ನ್ಯಾಯಾಲಯಕ್ಕೆ ಮೊರೆ ಹೋಗುತ್ತಾರೆ. ಆಗ, ಸಿಆರ್‌ಪಿಸಿ(೧೯೭೩) ಸೆಕ್ಷನ್ ೧೨೫ರ ಅನ್ವಯ ಜೀವನಾಂಶ ನೀಡಬೇಕು ಎಂದು ತೀರ್ಪು ಹೊರಬೀಳುತ್ತದೆ. ಆದರೆ, ಸಂಪ್ರದಾಯವಾದಿ ಮುಸಲ್ಮಾನಿಗಳು ಇದು ಇಸ್ಲಾಂ ಕಾನೂನಿಗೆ ವಿರೋಧ ಎಂಬ ಕೂಗು ಎತ್ತುತ್ತಾರೆ.ಆ ವೇಳೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಸಂಪ್ರದಾಯವಾದಿಗಳ ಒತ್ತಡಕ್ಕೆ ಮಣಿದು ಮುಸ್ಲೀಂ ವುಮೆನ್(ಪ್ರೊಟಕ್ಷನ್ ಆಫ್ ರೈಟ್ಸ್ ಆನ್ ಡೈವೋರ್ಸ್) ಆಕ್ಟ್ ೧೯೮೬ರ ತಿದ್ದುಪಡಿಯನ್ನು ಮಾನ್ಯ ಮಾಡುವ ಮೂಲಕ ಧರ್ಮಾಧಾರಿತ ವೈಯಕ್ತಿಕ ಕಾನೂನುಗಳ ಪದ್ದತಿಗೆ ಮತ್ತಷ್ಟು ಬಲವನ್ನು ತಂದು, ಮಹಿಳಾ ಶೋಷಣೆಯ ಬೇರನ್ನು ಗಟ್ಟಿಗೊಳಿಸಿತು.
ಇಲ್ಲಿ ಈ ವಿವಾದ ಉದ್ಭವವಾಗಿರುವುದು ಕಳೆದ ವರ್ಷದ ಅರ್ಜಿಯಿಂದ. ಮುಸ್ಲಿಂ ವೈಯಕ್ತಿಕ ಕಾನೂನಿನಿಂದ ಮುಸ್ಲಿಂ ಮಹಿಳೆಯರ ಮೇಲೆ ಶೋಷಣೆಯಾಗುತ್ತಿದೆ. ಈ ಕಾನೂನಿನ ಅನ್ವಯ ಬಹುಪತ್ನಿತ್ವ, ತಲಾಖ್ ನೀಡುವುದು ಹಾಗೂ ಜೀವನಾಧಾರ ನೀಡುವ ವಿಚಾರದಲ್ಲಿ ಅನ್ಯಾಯವಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ಗೆ ಪಿಐಎಲ್ ಸಲ್ಲಿಕೆಯಾಗಿತ್ತು.ಈ ಅರ್ಜಿ ವಿಚಾರಣೆ ನಡೆಸಿದ್ದ ಜಸ್ಟಿಸ್ ಎ.ಆರ್. ದವೇ ಹಾಗೂ ಆದರ್ಶ್ ಗೋಯಲ್ ಅವರಿದ್ದ ಪೀಠ ನ್ಯಾಶನಲ್ ಲೀಗಲ್ ಸರ್ವಿಸ್ ಅಥಾರಿಟಿ ಹಾಗೂ ಅಟಾರ್ನಿ ಜನರಲ್ ಅವರಿಗೆ ನೋಟೀಸ್ ಜಾರಿಗೊಳಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ನ್ಯಾಯಾಲಯ, ಈ ಹಿಂದೆ ಮುಸ್ಲಿಂ ವೈಯಕ್ತಿಕ ಕಾನೂನಿನಿಂದ ಮಹಿಳೆಯರ ಹಕ್ಕುಗಳಿಗೆ ಧಕ್ಕೆಯಾಗುತ್ತಿದ್ದು, ಮೂರು ಬಾರಿ ತಲಾಕ್ ನೀಡುವ ವ್ಯವಸ್ಥೆ ಮತ್ತು ಬಹುಪತ್ನಿತ್ವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತ್ತು.
ಧರ್ಮಾಧಾರಿತ ವೈಯಕ್ತಿಕ ಕಾನೂನುಗಳನ್ನು ಅಸಿಂಧುಗೊಳಿಸಿ, ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಬೇಕು ಎಂದು ಸಂವಿಧಾನದ ೪೪ನೆಯ ಅನುಚ್ಛೇದ ಹೇಳಿದೆ. ಏಕರೂಪ ನಾಗರಿಕ ಸಂಹಿತೆ ಜಾರಿಯಾಗುವುದರಿಂದ ಆಗುವ ಪ್ರಯೋಜನಗಳೇನು?
ನಿರೀಕ್ಷಿಸಿ…..
ಏಕರೂಪ ನಾಗರಿಕ ಸಂಹಿತೆಯನ್ನು ನಮ್ಮ ದೇಶದಲ್ಲಿ ಕೂಡಲೇ ಜಾರಿ ಮಾಡಬೇಕು.
ಹೌದು. ಏಕರೂಪ ನಾಗರಿಕ ಸಂಹಿತೆ ಜಾರಿಯಾಗಬೇಕು. ಹಿಂದಿನ ಸಕಾ೯ರಗಳು ಮಾಡಲಿಲ್ಲ. ಮೋದಿಯವರ ಸಕಾ೯ರ ಇದನ್ನು ಜಾರಿಗೆ ತರಬೇಕು. ಇಲ್ಲವಾದರೆ ಈ ಸಕಾ೯ರಕ್ಕೂ ಹಿಂದಿನ ಸಕಾ೯ರಗಳಿಗೂ ವ್ಯತ್ಯಾಸವಿರುವುದಿಲ್ಲ.