ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 18, 2016

1

ಅಂಬಿಕಾತನಯದತ್ತರ “ ಬೆಳಗು” – ಶ್ರೀ ಅರವಿಂದರ “ ಚಿನ್ಮಯದ ಆತ್ಮದೀಪ ”

‍ನಿಲುಮೆ ಮೂಲಕ

– ಪುಟ್ಟು ಕುಲಕರ್ಣಿ,ಕುಮಟಾ

ಬೇಂದ್ರೆ ಮತ್ತು ಅರಬಿಂದೋವರಕವಿ ಅಂಬಿಕಾತನಯದತ್ತರು , ಜ್ಞಾನಪೀಠ ಪ್ರಶಸ್ತಿ ಸ್ವೀಕರಿಸುವ ಮುನ್ನ ಮಾಡಿದ ಭಾಷಣದಲ್ಲಿ ಒಂದು ಸಾಲು ಹೀಗಿದೆ, ‘ ನನ್ನ “ಬೆಳಗು” ಮತ್ತು “ಹಕ್ಕಿ ಹಾರುತಿದೆ” ಕವನಗಳನ್ನು ಮುಗ್ಧ ವಿದ್ಯಾರ್ಥಿಗಳಿಗೆ ಕಲಿಸಿ ಕೊಡಲಾಗುತ್ತಿದೆ. ಆದರೆ ಅದನ್ನು ಕಲಿಸುತ್ತಿರುವ ಶಿಕ್ಷಕರು ಆ ವಿದ್ಯಾರ್ಥಿಗಳಿಗಿಂತ ಮುಗ್ಧರಾಗಿದ್ದಾರೆ….. “ . ಈ ಸಾಲುಗಳನ್ನು ಓದಿದಾಗ , ಇಲ್ಲಿಯವರೆಗೂ “ಬೆಳಗು” ಕವನದ ಬಗೆಗೆ ಬಂದ ವಿಶ್ಲೇಷಣೆಗಳ ಕುರಿತು ಕವಿಗೆ ತೃಪ್ತಿ ಇಲ್ಲವೆಂದು ತೋರುತ್ತಿದೆ. ಹಾಗಾದರೆ ಈ “ಬೆಳಗು” ಮತ್ತು “ಹಕ್ಕಿ ಹಾರುತಿದೆ ನೋಡಿದಿರಾ” ಕವನಗಳನ್ನು ಬೇರೊಂದು ಆಯಾಮದಿಂದ ವಿಶ್ಲೇಷನೆ ಮಾಡಬೇಕೆ? ಹಾಗಿದ್ದಲ್ಲಿ ಅದಕ್ಕೆ ಇರುವ ಮಾನಕಗಳೇನು? ಯಾವ ಅಥವಾ ಯಾರ ಪ್ರಭಾವದಲ್ಲಿ ಈ ಕವನಗಳು ರೂಪಿತಗೊಂಡಿವೆ? ಬೌದ್ಧಿಕ ಹಂತದ ಶಬ್ದಜಾಲದ ಹೊರತಾಗಿಯೂ , ಪ್ರಜ್ಞಾ ವಲಯದ ಆಚೆಯಲ್ಲಿ ಸಾಗಿ ಅನಂತಾನಂತದ ಜೊತೆಗೆ ಜೋಡಣೆಯಾಗಬಲ್ಲ ಅನೂಹ್ಯವಾದದು ಏನಾದರೂ ಇಲ್ಲಿ ಹೇಳಲ್ಪಡುತ್ತಿದೆಯೋ?

ಇಲ್ಲಿರುವ ಶಬ್ದಮಾಧುರ್ಯದ ಆಚೆ ಇರುವ “ ಏನನ್ನೋ” ಕವಿ ಈ “ಬೆಳಗು” ಕವನದಲ್ಲಿ ಅಡಗಿಸಿದ್ದಾನೆ. ಈ “ಬೆಳಗು” ಕೇವಲ ನಾಮಪದವೋ, ಕ್ರಿಯಾಪದವೋ ಅಥವಾ ವಿಶೇಷಣವೋ ಅಥವಾ ಎಲ್ಲವೂ ಆಗಿ ಅರ್ಥಗರ್ಭಿತವಾಗಿದೆಯೋ?

“ಬೆಳಗು” ನಾಮಪದವಾಗಿ ಉಷೆಯ ಕಾಲವೆಂದು ಸರ್ವವಿದಿತ. ಆದರೆ ಅದೇ ಬೆಳಗು ಕ್ರಿಯಾಪದವಾಗಿ ಹೊಳೆ, ಆರತಿಯೆತ್ತು ಎನ್ನುವ ಅರ್ಥವನ್ನೂ ಹೇಳುತ್ತಿದೆ. ಹೊಳೆಯುವ , ಮಿನುಗುವ ವಿಶೇಷಣದಲ್ಲೂ ಸಹಿತ ಮಿಂಚುತ್ತಿದೆ. ಹಾಗಾದರೆ ಇಲ್ಲಿರುವ ಬೆಳಗು ಯಾವುದು? ಚುಮುಚುಮು ಬೆಳಗೇ? ಪೆರ್ವೆಳಗೆ ? ಬಳ್ಳಿವೆಳಗೆ ? ಬೆರಕೆವೆಳಗೆ? ಬೆಳ್ವೆಳಗೆ? ಹೀಗೆ ಹತ್ತಾರು ಹಂತದ ಪ್ರಶ್ನೆಗಳನ್ನು ನಿಲ್ಲಿಸುತ್ತಿದೆ. ಬೆಳಗೊಂದಿಸು ಎನ್ನುವದಕ್ಕೆ ಕಾಂತಿಗೊಳಿಸು ಎನ್ನುವ ಅರ್ಥವೂ ಇದೆ ಈ ಎಲ್ಲ ಹಂತದ ಸ್ವಾನುಭವವನ್ನು ಆ ಉಷೆಯ ಸಮಯದ ತೋಷದಲ್ಲಿ ಕಂಡೇ ಅನುಭವಿಸಬೇಕು. ಯಾವ ಶಬ್ದದದಲ್ಲಿ ಹೇಳಿದರೂ ಆ ಅನುಭಾವ ಸಿಕ್ಕಲಾರದು.

ಬೆಳಗು, ಬೆರಗು , ಬೆಡಗು ಇತ್ಯಾದಿ ಡ ಕಾರ , ಳ ಕಾರ ಹಾಗೂ ರ ಕಾರಗಳ ಕಾಲಬಂಧೀ ವ್ಯವಹರಣೆಯಲ್ಲಿ , ಇಲ್ಲಿನ ಬೆಳಗು ಎಲ್ಲವನ್ನೂ ಒಳಗೊಂಡಿದೆ. ಹಿಂದಿನ ದಿನದ ಕತ್ತಲೆಯನ್ನು ಪರಿ-ಹರಿಸಿ , ಕಾಣದಂಚಿಗೆ ಸರಿಸಿ, ಬೆಳಕಿನಲ್ಲಿ ಎಲ್ಲವನ್ನೂ ಮೀಯಿಸುವ ಪರಿಯ ಸೊಬಗನ್ನು ಅವರದೇ ಭಾಷೆಯಲ್ಲಿ ಕೇಳಬೇಕು,” ಮೂಡಣ ಮನೆಯಾ ಮುತ್ತಿನ ನೀರಿನ ಎರಕಾವಾ ಹೊಯ್ದಾ , ನುಣ್ಣನ್ನೆರಕಾವ ಹೊಯ್ದಾ ‘ ಎನ್ನುವಲ್ಲಿ ಯಾವುದು ಈ ಮೂಡಣ? ಜೊತೆಗೆ “ಮುತ್ತಿನ ನೀರು” ಮೇಲಾಗಿ ‘ಎರಕ ಹೊಯ್ಯುವಿಕೆ” ಗಳನ್ನು ಕೇವಲ ವಾಚ್ಯಾರ್ಥದಲ್ಲಿ ಅರ್ಥೈಸುವಂತಿಲ್ಲ. ಎರಕ ಹೊಯ್ಯು ಎನ್ನುವದಕ್ಕೆ ಅಚ್ಚು ಹಾಕು ಎಂತಲೂ ಅರ್ಥವಿದೆ. ಆದರೆ ಇಲ್ಲಿರುವ ಎರಕದ ಅರ್ಥ “ಅವತರಣಗೊಳ್ಳು” ಎಂದಾಗುತ್ತದೆ.ಅವತರಣಗೊಳ್ಳುತ್ತಿರುವದು ಮೂಡಣದ ಕಡೆಯಿಂದ . ಅದೂ ಊರ್ಧ್ವದತ್ತ ಇರುವ ಆ ಜ್ಯೋತಿಮೂಲದಿಂದ. ಬರಲಿರುವ ಬೆಳಕಿಗೆ ಸದಾ ಕಾಯುತ್ತಿರುವ ಆ ಕತ್ತಲೆಯಲ್ಲಿ ಅರಿಯದಲೇ ಸಿಲುಕಿಕೊಂಡ ಜಗತ್ತು , ತಾನು ಬೆಳಕಿನಲ್ಲಿ ಒಳಗೊಳ್ಳಬೇಕೆಂದು ಸದಾ ಅಲವತ್ತುಕೊಳ್ಳುತ್ತಿರುತ್ತದೆ. ಆ ದಿಸೆಯತ್ತ ಹೆಜ್ಜೆ ಇಡುವಾಗ , ಅವತರಣಗೊಂಡು (ಎರಕಗೊಂಡು) ಬರುವ ಬೆಳಕು ಇದಕ್ಕೆ ಯೋಗ ಒದಗಿಸಿ ಸಂಯೋಗಗೊಳ್ಳುತ್ತದೆ. ಅವಿರತ ಪ್ರಯತ್ನ ಮತ್ಉ ಋತವು ಸಂಯೋಗಗೊಳುವ ಅಪೂರ್ವ ಘಳಿಗೆ ಇದು.

ಅದು ಎಂತಹ ಅತ್ಯಪೂರ್ವ ಮುಹೂರ್ತದಲ್ಲಿ ಬರುತ್ತದೆ ಎಂದರೆ “ಬಾಗಿಲ ತೆರೆದು” ಬೆಳಕು ಹರಿದು ಬರುತ್ತದೆ. ಈ ಬಾಗಿಲು ಮನುಷ್ಯ ನಿರ್ಮಿತವೇ? ಅಥವಾ ನಿಯತಿಯಲ್ಲಿ ಇರುವ ಸಂಗತಿಯೋ? ಬೆಳಕು ಬರಬೇಕೆಂದರೆ “ಬಾಗಿಲು” ತೆರೆಯಲೇಬೇಕು. ಇದನ್ನು ತೆರೆಯುವ ಬಗೆ ಹೇಗೆ? ಬೆಳಕು ಬಂದಾಕ್ಷಣ ತನ್ನಷ್ಟಕ್ಕೆ ತಾನೇ ಬಾಗಿಲು ತೆಗೆದುಕೊಳ್ಳುತ್ತಿದೆಯೇ?

ಇಲ್ಲಿ ಬಾಗಿಲು ಎನ್ನುವದು ತಮದ ಪರದೆ. ಅದು ಸರಿಯಬೇಕು. ತೆರೆ ಸರಿದ ಹಾಗೆ ಸರಿಯಬೇಕು ಆವಾಗ ತೆರೆ –ತೆರೆಯಾಗಿ ಬೆಳಕು ಹರಿ ಹರಿದು ಬರುತ್ತದೆ. ಆರತಿ ಎತ್ತಲು ಬಳಸುವ ಮುತ್ತಿನ ನೀರು ಹರಿ ಹರಿದು ಜಗವನ್ನೆಲ್ಲಾ ತೋಯಿಸಿ , ಬೆಳಕಾಗಿಸುತ್ತದೆ. ಶಬ್ದದ ಮೇಲ್ಪದರಿನಲ್ಲಿರುವ ಆಕರ್ಷಣೀಯ ಕಾಂತಿಯ ಹಿಂದೆ ಇರುವ ಆತ್ಮವನ್ನು ನಾವೀಗ ಗಮನಿಸಬೇಕಿದೆ. ಈ ಆತ್ಮ ಈ ಶಬ್ದದ ಮೂಲಕ ಒಂದು ನಾದವನ್ನು ಸೃಷ್ಟಿ ಮಾಡುತ್ತದೆ. ಈ ನಾದಕ್ಕೆ ಸ್ಪಮದಿಸಬಲ್ಲ ಓದುಗನಲ್ಲಿ ವಿಶ್ವಸತ್ಯದ ಶ್ರುತಿಯನ್ನು ನಾದ ಸಂವಹನಗೊಳಿಸುತ್ತಿರುತ್ತದೆ. ಏಕೆಂದರೆ ಈ ಶಬ್ದದ ನಾದವು ವಿಶ್ವದಲ್ಲೆಲ್ಲವೂ ಇರುವ ನಾದದೊಂದಿಗೆ ಸಮಸ್ಪಂದಿಯಾಗಿರುತ್ತದೆ. ಇದನ್ನು ಅರಿತುಕೊಂಡಾಗ ಮಾತ್ರ ಆ ಕಾವ್ಯ ತನ್ನಂತರಂಗವನ್ನು ತೋರಬಲ್ಲುದು.
ಬೇಂದ್ರೆಯರ ಕಾವ್ಯಕ್ಕಿರುವ ವರ್ಣವೈಭವ, ಶಬ್ದದ ಮಾಧುರ್ಯ ಹಾಗೂ ಗಾರುಡಿಗತನ, ಸುಲಲಿತವಾಗಿ ಸಂವಹಗೊಳಿಸಲು ಸಹಜ ಸುಮಧುರವಾಗಿರುವ ಪ್ರಾಸದ ರಮಣೀಯತೆ ಹಾಗೂ ಪ್ರಕೃತಿ ಸಹಜ ಗೇಯತೆಯ ಅಂಶ, ಇವೆಲ್ಲವೂ ಉಷೆಯ ಮಾರ್ದವತೆಯನ್ನು ಮನಗಿಂಬುವಂತೆ ಮೂರ್ತೀಕರಿಸುತ್ತಿದೆ.

ರವೀಂದ್ರನಾಥ ಠಾಕೂರ ಹಾಗೂ ಶ್ರೀ ಅರವಿಂದರನ್ನು ತಮ್ಮ ಕಾವ್ಯಗುರುಗಳು ಎನ್ನವುದನ್ನು ಬೇಂದ್ರೆಯವರು ನಿಖರವಾಗಿ ತಿಳಿಸಿದ್ದಾರೆ. “ನಿನ್ನಂಗ ಹಾಡಾಕ ನಿನ್ನಂಗ ಆಡಾಕ ಪಡೆದು ಬಂದಿರಬೇಕೊ ಗುರುದೇವಾ” ಎನ್ನುವಲ್ಲಿ ರವೀಂದ್ರನಾಥ ಠಾಕೂರರ ಬಗೆಗೆ ತಮಗಿರುವ ಭಾವವನ್ನು ಕಾವ್ಯಾತ್ಮಕವಾಗಿಯೆ ತಿಳಿಸಿದ್ದಾರೆ. ಆದರೆ ಕಾವ್ಯದ ಆತ್ಮದ ಕುರಿತು ಮಾತನಾಡುವಲ್ಲಿ ಶ್ರೀ ಅರವಿಂದರನ್ನು ನೆನೆದೇ ಮುಂದುವರೆಯುತ್ತಾರೆ.

ಕವಿ ರವೀಂದ್ರ ಜೊತೆಗೆ ಹಾಗೂ ಶ್ರೀ ಅರವಿಂದರ ಜೊತೆಗೆ ಬೇಂದ್ರೆಯವರನ್ನು ಪ್ರಭಾವಿಸಿದ ಇನ್ನೊಬ್ಬ ಕವಿ ಎಂದರೆ ಖಲೀಲ ಗಿಬ್ರಾನ್. ಎಲ್ಲರೂ ಅನುಭಾವದ ಕವಿಗಳು . ಅನುಭಾವಕ್ಕೆ ಯಾವುದೂ ಅಮೂರ್ತವಲ್ಲ. ಶ್ರೀ ಅರವಿಂದರಂತೂ ಅನುಭಾವದ ಜೊತೆಗೆ ವಿಶ್ವರಹಸ್ಯವನ್ನೂ ಸಹಿತ ತಮ್ಮದೇ ಯೋಗದ ಪರಿಭಾಷೆಯಲ್ಲಿ ಪಡಿಮೂಡಿಸಿದವರು. ಶ್ರೀ ಅರವಿಂದರ “ಭವಿಷ್ಯ ಕಾವ್ಯ” ಮತ್ತು “ಸಾವಿತ್ರೀ” ಯಂತೂ ಇಡೀ ಭಾರತದ ಪ್ರಜ್ಞಾ ವಲಯವನ್ನು ಪ್ರಭಾವಿಸಿದ್ದವು. ಅದರಲ್ಲೂ “ಸಾವಿತ್ರೀ” ಮಹಾಕಾವ್ಯದ ವಿಷಯ ಪ್ರತಿಪಾದನೆ , ಅನುಭಾವದ ತುರೀಯ ಸ್ಥಿತಿಯ ಸಂಗತಿಗಳ ದೃಷ್ಟಚಿತ್ರಣಗಳಂತೂ ಹೊಸದೊಂದು ಪಥವನ್ನಢೇ ನಿರ್ಮಾಣ ಮಾಡಿತು.

ಬೇಂದ್ರೆಯವರ “ಬೆಳಗು” ಕವನದಲ್ಲಿ ಬಂದಿರುವ ಬೆಳಗಿನ ವಿವರಗಳ ಮೂಲವನ್ನು ,ಅದರಲ್ಲೂ ಸಾವಿತ್ರಿಯಲ್ಲಿ ಹೇಳಿರುವ ಅಮೂರ್ತವೆನ್ನಬಹುದಾದ ಸಂಗತಿಗಳ ವಿಷಯದ ಬಗೆಗೆ ಅಭಿಪ್ರಾಯ ಮಂಡಿಸುವಲ್ಲಿ , ಚರ್ಚೆಯಿಂದ ದೂರವೇ ಉಳಿದ ಸಂಗತಿಗಳಾದವು. ಸಾವಿತ್ರಿ ಇಂಗ್ಲೀಷಿನಲ್ಲಿ ಇದ್ದದ್ದು ಒಂದಾದರೆ , 50-60 ರ ದಶಕದ , ಸ್ವಾತಂತ್ರ್ಯೋತ್ಸವದ ವಿಜೃಂಭಣೆಯ ಆಚರಣೆ , ಉದ್ಘೋಷಗಳಲ್ಲಿ , ಈ ರೀತಿಯ ವಿಶ್ಲೇಷಣೆಗೆ ದಾರಿಯೂ ಇರಲಿಲ್ಲ. ಪ್ರಜಾಪ್ರಭುತ್ವದಲ್ಲಿ , ತೀವ್ರವಾಗಿ ಪಲ್ಲಟಗೊಳ್ಳುತ್ತಿದ್ದ ಮೌಲ್ಯಗಳ ಸಂಘರ್ಷದಲ್ಲಿ , ಸ್ವತಂತ್ರದ ಹುಮ್ಮಸ್ಸಿನ ಆನಂದೋನ್ಮಾದದಲ್ಲಿ , ಚಿಂತನ ವಲಯಕ್ಕೆ ತಾತ್ಕಾಲಿಕವಾಗಿ ಪರದೆ / ಬಾಗಿಲು ಮುಚ್ಚಿತ್ತು. ಬರಬಹುದಾದ ಬೆಳಕಿನ ಮೂಲವನ್ನೂ ಕಡೆಗಣಿಸಿ , ಕತ್ತಲೆಯೇ ಸರ್ವಸ್ವವೆನ್ನುವ ವಿಹ್ವಲದಲ್ಲಿ ಸಿಲುಕಿದ್ದ ಮನಸ್ಸಿಗೆ ಹೊಸ ಚೈತನ್ಯವೊಂದು ಬರಬೇಕಾದ, ಬಂದ ಹಂತವನ್ನು ಈ “ಬೆಳಗು’ ಸಂಕೇತಿಸುತ್ತದೆ.

ವಿಶ್ವಸತ್ಯವನ್ನು ಋಷಿಸದೃಷ ದೃಷ್ಟಾರರಾಗಿ ಕಾಣುವದು ಒಂದು ನಿಯತಿ. ಇದು ಎಲ್ಲರಿಗೂ ಸಾಧ್ಯವಿದ್ದ ವಿಷಯವಾದರೂ ಸಾಧ್ಯವಾಗಿಸಿಕೊಂಡವರು ಮಾತ್ರ ಅಪರೂಪದಲ್ಲಿ ಅಪರೂಪ. “ಭವ”ಕ್ಕೆ ಅಂಟಿಕೊಂಡ “ಭವಿ”ಗೆ ಈ ಲೋಕದ ಮೂರ್ತರೂಪದ ಸ್ವಾದವೇ ಆನಂದದಾಯಕ. “ಅಮೂರ್ತ”ವಾದುದು ಬೇರೆ , ಇದು ತಮ್ಮ ವಿಷಯವಲ್ಲ ಎನ್ನುವ “ಭವಿ”ಗಳಿಗೆ , ಈ ಲೌಕಿಕದ , ಮೂರ್ತಸ್ವರೂಪದ ವಸ್ತುಗಳಲ್ಲಿಯೇ ಅಮೂರ್ತಕ್ಕೆ ರಹದಾರಿ ಇದೆ ಎನ್ನುವದನ್ನು ತಿಳಿಸುವ ವಿಷಯ ಸವಾಲಿನದು . ಮೊದಲೇ ನೋಡಿದ ಹಾಗೆ ಅನುಭಾವಿ ಕವಿಗೆ ಅಮೂರ್ತವೆನ್ನುವದು ಯಾವುದೂ ಇಲ್ಲ. ಹೀಗಾಗಿ , ಭವದಲ್ಲಿ ಬದುಕಿ, ಅದನ್ನು ಅನು’ಭವಿ’ಸಿ, ಅದಕ್ಕೆ ಅನುಭಾವದ ಗತಿಯ ಪಥವನ್ನು ತೋರಿಸುವ ಮಹತ್ರರ ಕಾರ್ಯವನ್ನು ಬೇಂದ್ರೆಯವರು “ಅಂಬಿಕಾತನಯದತ್ತ”ರಾಗಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಈ “ಬೆಳಗು” ಕುರಿತು ಶ್ರೀ ಅರವಿಂದರು ತಮ್ಮ “ಸಾವಿತ್ರೀ”ಯಲ್ಲಿ ಸವಿವರವಾಗಿ ತಿಳಿಸಿದ್ದಾರೆ.
Till the nescient dark is Lifted from man’s soul
And the morns of God have over taken in night.
As long as Nature lasts he too is there;
For this is sure that he and she are one. [Book 1 Canto 4 -7]
ಇದನ್ನು ಕನ್ನಡದಲ್ಲಿ ;
ಆ ಪರಮಪುರುಷ ಪಾತಾಳ ನಿಶೆಯ ಪರದೆಯನು ತೆಗೆಯುವತ್ತ
ಜೊತೆಜೊತೆಗೆ ದೈವ ಪ್ರತ್ಯೂಷ ಸರಣಿ ತಮವನ್ನು ಕರಗಿಸುತ್ತ .
ಪ್ರಕೃತಿ ತಾನಾಗ ಅನಂತತೆಯಲ್ಲಿ ವಿಶ್ವವವು ವ್ಯಾಪಿಸುತ್ತ
ಅದಕಾಗಿ ಖಚಿತ ಅವನ ಜೊತೆಯವಳು ಅದ್ವೈತವಾಗುವತ್ತ. (ದಳ 1 ರೇಣು 4 -55)

ಬೆಳಗು ಕವನದ ಪ್ರಥಮ ಸಾಲುಗಳನ್ನು ಈ ಹಿನ್ನೆಲೆಯಲ್ಲಿ ಗಮನಿಸಿದರೆ , “ಬಾಗಿಲ ತೆರೆದು” ಎನ್ನುದರ ವಿಶಾಲಾರ್ಥ ಗೊತ್ತಾಗುತ್ತದೆ. ಈ ವಿಶ್ವರಹಸ್ಯದ ಬೆಳಗು ಅನಂತಾನಂತವಾಗಿ ಆ ಪರಾಕಾಶದಲ್ಲಿ . ಸದಾ ಅವತರಣಗೊಳ್ಳಲು ತವಕಿಸುತ್ತಿರುತ್ತದೆ. ಏಕೆಂದರೆ
‘ಆದ್ಯ-ವೇದ್ಯರಿಗೆ ಜೊತೆ ಸಾಧ್ಯ ಸಿದ್ಧರಿಗೆ ಸಿದ್ಧಿಸಿದ ಪ್ರಜ್ಞೆಯಿದುವು
ಇದು ಅವನ ಪೂರ್ವ ಸಿದ್ಧಿಯಾ-ಚಿತ್ತು, ಇದು ಅವನ ಮೂಲ ಠಾವು. ( ಸಾವಿತ್ರಿ) ದಳ 1 ರೇಣು 5 -1

ಆದ್ಯ-ವೇದ್ಯರ ಹಂತದಲ್ಲಿ ಇರುವವರಿಗೆ ಈ ಭವದಲ್ಲಿ ಇರುವ ಪ್ರತಿಯೊಂದನ್ನೂ ಅಮೂರ್ತದ ರಹಸ್ಯವನ್ನು ತಿಳಿಸುತ್ತಿರುವ ಕುರಿತೇ ಹೇಳುತ್ತಾರೆ. ಹೀಗಾಗಿ ಸಾಮಾನ್ಯರ ಕಣ್ಣಿಗೆ ಬರೀ ಬೆಳಕಾಗಿ ಕಾಣುವ ಈ ಕಾಂತಿ “ಮುತ್ತಿನ ನೀರಾಗಿ ಎರಕ ಹೊಯ್ಯಲು(ಅವತರಣಗೊಳ್ಳಲು) ಬಂದು , ನುಣ್ಣನ್ನ ಮೂರ್ತಿಯನ್ನು “ ರೂಪಿಸಿದ ರೂಪಕವನ್ನು ಪ್ರಥಮ ಸಾಲಿನಲ್ಲಿಯೇ ಕಾಣುತ್ತೇವೆ. “ನಮ್ಮ ಚಿಂತನದ ಮತ್ತು ಆ ಪರಮ ಪರಾಕಾಶದಲ್ಲಿ ಸ್ಥಿತವಾಗಿರುವ ಆ ಚಿನ್ಮಯದ ನಿರ್ವಿಶೇಷ-ದರ್ಶನದ ಮಧ್ಯೆ ಇರುವ ಪರದೆಯನ್ನು (ಸಾವಿತ್ರಿ ದಳ 1 ರೇಣೂ 5 /1)” ಸರಿಸುವ ಕ್ರಿಯೆಯನ್ನು ಈ ಬೆಳಗು ಮಾಡುತ್ತಿದೆ. ಇಂತಹ ಅತ್ಯಪೂರ್ವವಾದ ಘಳಿಗೆಯೊಂದರಲ್ಲಿ , ಕತ್ತಲೆ ಸರಿದು ಬರುವ ಉಷಾ ಕಾಲದ ಮಾರ್ದವದ ಎಲ್ಲ ಸಂಗತಿಗಳನ್ನೂ ಮೂರ್ತರೂಪಕ್ಕೆ ತಂದು ಅನುಭೂತಿ ಒದಗಿಸುತ್ತಿರುವ ಈ “ಬೆಳಗು” ಕನ್ನಡ ಕಾವ್ಯಲೋಕಕ್ಕೊಂದು ನವೀನ ಆಯಾಮವನ್ನೇ ತಂದಿದೆ.

ಇನ್ನು ಎರಕದ ಬಗೆಗೆ ನೋಡಿದರೆ , ಓ, ದರ್ಶನಾನುಭೂತಿಯ ಪರಮೋಚ್ಚ ಸ್ಥಿತಿಯ ಸ್ಪಷ್ಟ ಚಿತ್ರಣ ಇಲ್ಲಿದೆ. ಎರಕದ(ಅವತರಣದ)ಮೂಲಕ ಬರುತ್ತಿರುವ ಈ ಪ್ರವಾಹ ಯಾವ ಯಾವ ಅಚ್ಚುಗಳಲ್ಲಿ ತುಂಬಿಕೊಳ್ಳುತ್ತಿದೆ ? ಗುಡ್ಡ-ಬೆಟ್ಟ-ಪರ್ವತ-ಝರಿ-ನದಿ-ಕೊಳ್ಳ-ಕಾನು-ಗಿಡ-ಬಳ್ಳಿ-ಹೂವು-ಹಣ್ಣು-ಪಕ್ಷಿ-ಎಲ್ಲವೂ-ಸರ್ವಾತಿ ಸರ್ವ !ಪ್ರಕೃತಿ ಅಚ್ಚಿನೋಪಾದಿಯಲ್ಲಿ ಈ ಬೆಳಕಿನ-ರಸದಲ್ಲಿ ಆಕಾರವಡೆದು ಸಂಚಲನಗೊಳ್ಳುತ್ತವೆ. ನುಣುಪು ಹೀಗಾಗಿ ಜಗವೆಲ್ಲಾ ತೊಯ್ದು, ಆಕಾರವಾಗಿ ಸಾಕಾರಗೊಂಡು ಪ್ರಕೃತಿಯ ದರ್ಶನಕ್ಕೊಂದು ಮೂರ್ತ ಸ್ವರೂಪದ ದೃಷ್ಟಾಂತವಾಗಿ ಈ ಸಾಲು ಕಂಗೊಳಿಸುತ್ತದೆ.

ಈ ರೀತಿಯಲ್ಲಿ ಅವತರಣಗೊಂಡ ಬೆಳಗು , ಯಾವ ಯಾವ ಹಂತದಲ್ಲಿ ಯಾವ ಯಾವ ಆಕಾರ ತಾಳಿದೆ ಎನ್ನುವದನ್ನು ವಿವರಿಸುವ ಮುಂದಿನ ಸಾಲುಗಳಂತೂ ಅಪ್ಯಾಯಮಾನವಾಗಿವೆ. “ ಗಿಡ-ಗಂಟೆಗಳ ಕೊರಳೊಳಗಿಂದ ಹಕ್ಕಿಗಳ ಹಾಡಾಗಿ” ಹೊರಹೊಮ್ಮಿದ ಈ ಬೆಳಕು “ಶ್ರಾವ್ಯವಾಗುತ್ತದೆ” ದೃಶ್ಯವಾದದು ಶ್ರಾವ್ಯವಾಗುವದು, ಶ್ರಾವ್ಯವಾಗುವದು ದೃಶ್ಯವಾಗುವದು ಇವೆರಡೂ ಸ್ಪರ್ಶಕ್ಕೆ ಸಿಗಬೇಕು.ಜಡವೆಂದು ಸಾಮಾನ್ಯ ಮನಸ್ಸು ಭಾವಿಸಿದ ಈ ಗಿಡ-ಮರಕ್ಕೆ , ಮನುಷ್ಯ ಸಹಜ “ಧ್ವನಿ” ಬರುತ್ತದೆ. ಅದೂ ವೈಖರೀ ಹಂತದಲ್ಲಿ ಪ್ರಕಟಗೊಳ್ಳುವ “ಕಂಠ”ದಿಂದ. ವೈಖರೀ ಹಂತ ಗಂಧರ್ವರ ನಾಡು. ಇಲ್ಲಿ ಣಾದ-ಮೋದ-ಆಮೋದ-ಪ್ರಮೋದಗಳು ಸಾಮಾನ್ಯ ಸಂಗತಿ. ಈ ಎಲ್ಲ ಕಲರವಗಳು ಸಾಮಾನ್ಯ ಬದುಕಿಂತ ತುಸು ಎತ್ತರದ “ಗಂಧರ್ವ ಲೋಕ”ದ ವಲಯವಾಗಿರುತ್ತದೆ.

ಕಾವ್ಯದ ವಿಮರ್ಶೆಯಲ್ಲಿ ಇಂದ್ರಿಯ ಸೌಂದರ್ಯ (Sensuous Beauty), ಕಲ್ಪನಾ ಸೌಂದರ್ಯ( Imaginative Beauty), ತಾತ್ತ್ವಿಕ ಅಥವಾ ಚಿತ್ತದ ಸೌಂದರ್ಯ (Intellectual Beauty) ಮತ್ತು ಆತ್ಮ ಸೌಂದರ್ಯ (Ideal Beauty) ಎಂದು ಪಾಶ್ಚಾಚ್ಯ ಕಾವ್ಯಮೀಮಾಂಸೆಯಲ್ಲಿ ಇರುವ ಈ ಪ್ರಕಾರಗಳನ್ನು ಶ್ರೀ ಅರವಿಂದರು , ಕೀಟ್ಸ ಕವಿಯ ಕುರಿತು ವಿಮರ್ಶೆಯಲ್ಲಿ ವಿಶ್ಳೇಷಿಸಿದ್ದಾರೆ. ಈ ವಿಶ್ಲೇಷಣೆಯ ಹಿನ್ನಲೆಯಲ್ಲಿಯೇ “ಬೆಳಗು” ಕವನವನ್ನು ಕವಿ ಜಿ ಎಸ್ ಶಿವರುದ್ರಪ್ಪನವರು ತಮ್ಮ “ಸೌಂದರ್ಯ ಸಮೀಕ್ಷೆ” ಯಲ್ಲಿ ವಿವರವಾಗಿ ತಿಳಿಸಿದ್ದಾರೆ. ಹೀಗಾಗಿ ಈ ನಾಲ್ಕು ಹಂತದಗಳಲ್ಲಿ, ಮೂರು ಹಂತಗಳನ್ನು ಅತ್ಯಂತ ಸ್ಪಷ್ಟವಾಗಿ ವಿವರಿಸುವ ಈ ಸಾಲುಗಳು ಅನನ್ಯವಾಗಿವೆ.
ಅಂದರೆ ಮೂರ್ತರೂಪದಲ್ಲಿರುವ ಈ ಗಿಡ-ಮರಗಳ ಮೂಲಕವೇ ಅಮೂರ್ತದೆಡೆಗೆ ಸಾಗುವ ಹಂತ. ದೇವ-ಗಂಧರ್ವ-ಕಿನ್ನರ-ಕಿಂಪುರುಷ-ಮಾನವ ಎನ್ನುವ ಹಂತಗಳಲ್ಲಿ , ಇಲ್ಲಿ ಗಂಧರ್ವ ನಾಡಿನ ತನಕ ನಮ್ಮನ್ನು ಕರೆದೊಯ್ಯುತ್ತದೆ. ಇದನ್ನೇ ಶ್ರೀ

ಅರವಿಂದರು – “This ever she meant since the first design of life,
This constant will she covered with her sport,
To evoke a person in the impersonal Void,
[Savitri Book 1 Canto 4- 55]
“ಜೀವನದ ಪ್ರಥಮ ಉಷೆಯಿದುವು ಅವಳು ಸತತದಲಿ ಕಾಂತಿಗೊಳಿಸಿ
ಅದು ಚಿರದ ತಾಣ, ಅವಳಾಟದಿಂದ ಅದ ತುಂಬಿ-ತುಂಬಿ ನಿಲಿಸಿ ,
ಚೇತನಾತ್ಮಕದ ಆ- ಭೂಮ-ಭವ್ಯದಲ್ಲವಳು ಚಲನ ಬಯಸಿ
ಆ ಪುರುಷನನ್ನು ಜಾಗೃತಿಗೆ ತಂದು ಜಗ-ಯುಗವ ಮುಂದುವರೆಸಿ.
[ಸಾವಿತ್ರಿ ದಳ 1 ರೇಣು 4- 55]

ಹೀಗಾಗಿ ಬೇಂದ್ರೆಯವರು ಬರೆದಿರುವ ಈ “ಬೆಳಗು” ಬುವಿಗೆ ಆಗಮಿಸಿದ ಪ್ರಪ್ರಥಮ ಬೆಳಗು!! ಆಗ ಕಂಡ ಸಂಗತಿಗಳನ್ನು , ಮನುಷ್ಯ ಕುಲಕ್ಕೆ ಋತವನ್ನು ತೋರಿಸುವ ಸಲುವಾಗಿ ,ಅವತರಣದೊಂದಿಗೆ ಬುವಿಗೆ ಬಂದ ಸಂಗತಿಗಳನ್ನು , ಬೇಂದ್ರೆಯವರು ಮುಂದಿನ ಸಾಲುಗಳಲ್ಲಿ ಕಡೆದಿರಿಸದ್ದಾರೆ;

“ಎಲೆಗಳ ಮೇಲೆ ಹೂಗಳ ಒಳಗೆ ಅಮೃತದಾ –ಬಿಂದು” ಎನ್ನುವಲ್ಲಿ ಈ ಬೆಳಗು ಸಾಕಾರಗೊಂಡು ಬಿಂದುರೂಪದಲಿ ಮಾರ್ದವದ ಹೂಗಳೊಡಲಿನಲ್ಲಿ , ಎಲೆಗಳ ಮೇಲೆ ದರ್ಶನ ಕೊಡುತ್ತಿದೆ. ಇಲ್ಲಿರುವ ಆ ನೀರ್ಪನಿ ಕೇವಲ ನೀರಿನ/ಇಬ್ಬನಿಯ/ಮಂಜಿನ ಹನಿಯಲ್ಲ ಇದು. ಆ ಪರಮದಲ್ಲಿ ಇರುವ ಅಮೃತವು ಇಲ್ಲಿ ಬಿಂದುವಾಗಿ ಬಂದಿದೆ. ಕೃಪೆಯು ಧಾರಾಕಾರವಾಗಿ ಹರಿದು ಬಂದರೂ ನಮಗೆ ದಕ್ಕುವದು ಬಿಂದು ಮಾತ್ರ. ಏಕೆಂದರೆ ನಮ್ಮ ಪಾತ್ರವೇ ಅಷ್ಟು. ಆ ಅಮೃತದ ಬಿಂದುವಿನ ಮೂಲಕ , ಮನುಷ್ಯನಿಗೆ ಪರಮ ಗಂತವ್ಯವಾದ ಸ್ವರ್ಗವನ್ನು ಇಲ್ಲಿಗೆ ತಂದು ನಿಲ್ಲಿಸಿದ್ದಾರೆ.

ಆದರೆ ಇದೇ ಅಂತಿಮವಲ್ಲವಲ್ಲ.ಅದಕ್ಕೂ ಮುಂದಿನ ಹಂತಕ್ಕೆ ಣಾವು ಹೋಗಬೇಕಾಗಿದೆ. ಇದರ ಬಗೆಗೆ ಶ್ರೀ ಅರವಿಂದರು ಹೇಳುವ ವಿಚಾರ ಹೀಗಿದೆ,’
With the Truth-Light strike earth’s massive roots of trance,
Wake a dumb self in the inconscient …..

ಬುವಿಯೊಡಲಿನಲ್ಲಿ ಘನಸಮಾಧಿಯಾ ಆ ಸ್ಥೂಲ-ಮೂಲಗಳಿಗೆ
ಋತದ ಜ್ಯೊತಿ ತಾ ಹಿತದ ಸ್ಪರ್ಶದಲಿ ವಿಕಸನಕೆ ಶುಭದ ಘಳಿಗೆ ,
ಕಾಲಸರ್ಪವದು –ದೀರ್ಘನಿದ್ರೆಯಲಿ ಬಲಹೀನವಾಗಿ ನಿಂದ
ಅಚಿತಿಯಾಳದಲಿ ವಾಕ್-ಸ್ತಂಭಗೊಂಡ ಆತ್ಮಕ್ಕೆ ನೀಡಿ ಸ್ಪಂದ
(ಸಾವಿತ್ರಿ ದಳ 1-ರೇಣು 4 /56)
ಶ್ರೀ ಅರವಿಂದರು ಬರೆದಿರುವಂತೆ, ಉಪನಿಷತ್ ಕಾಲದಲ್ಲಿ ಮತ್ತು ಕಾಳಿದಾಸನ ಅವಧಿಯಲ್ಲಿ , ಅನುಭಾವದ ಆಭಿವ್ಯಕ್ತಿಯು 3,3,4,5 6 ಸಾಲಿನ ಹಂತಗಳಲ್ಲಿ ರೂಪಿಸಲ್ಪಡುತ್ತಿತ್ತು. ಇದೇ ತೆರನಾದ ಛಂಧಸ್ಸನ್ನು “ಇಂಗ್ಲೀಷನ “ಸಾವಿತ್ರಿ”ಯಲ್ಲಿ ಕಾಣುತ್ತೇವೆ.

ಬೇಂದ್ರೆಯವರೂ ಸಹಿತ “ಬೆಳಗು” ಕವನದಲ್ಲಿ , ಇದೇ ಮಾದರಿಯ ಅನುಭಾವದ ಹಿನ್ನೆಲೆಯ ಅಭಿವ್ಯಕ್ತಿಯಲ್ಲಿ ‘ಬೆಳಗು’ ಕವನ ರೂಪಿಸಿರುವದನ್ನು ಕಾಣಬಹುದು. ಈ ಕವನವನ್ನು ಗರತಿಯ ಹಾಡಿನ ಮಾದರಿಯಲ್ಲಿ, ಜಾನಪದದ ಹಿನ್ನೆಲೆಯಲ್ಲಿ ಮತ್ತು ಪುಟ್ಟಣ್ಣ ಕಣಗಾಲರು ತಮ್ಮ ಚಿತ್ರವೊಂದಕ್ಕೆ ರೂಪಿಸಿದ ಸ್ವರೂಪದಲ್ಲಿ ಪ್ರಚಲಿತವಿದ್ದರೂ , ಅದರಾಚೆ ಇರಬಹುದಾದ ಸಾಧ್ಯತೆಗಳನ್ನು ಅರಸುವಲ್ಲಿ, ನಾವು ಶ್ರೀ ಅರವಿಂದರನ್ನು ಅಧ್ಯಯನ ಮಾಡಲೇಬೇಕಿದೆ.

ಅವಕಾಶದಲ್ಲಿ ನಿಷ್ಕಳದ ಪುಷ್ಪ ವಿಕಸನಕೆ ರೂಹುಗೊಳಲು
ಆ ಬ್ರಹ್ಮಭಾವದಾ ಮಹದ್-ಚಿದ್ಬೀಜ ಸ್ಪಂದಿಸಲು ವಿಶ್ವದೊಡಲು
ಮನದ ಮನ ಲಯದಿ ತನ್ಯದ ಕಳೆಯು ಬೆಳಗುತಿದೆ ಅಗ್ನಿ-ಪುಷ್ಪ
ಚಿತ್-ಶಕ್ತಿ ಗರ್ಭದೊಡಲಿಂದ ಉದಿಸಿ ಚಿನ್ಯದ ಆತ್ಮದೀಪ. (ಸಾವಿತ್ರಿ ದಳ 1 ರೇಣು 4-59)
ಅಂಬಿಕಾತನಯದತ್ತರ “ಬೆಳಕು” ಶ್ರೀ ಅರವಿಂದರು ತೋರುತ್ತಿರುವ “ಆತ್ಮದೀಪ”ದ ಕನ್ನಡ ಅವತರಣಿಕೆ.

ಆಧಾರ ಗ್ರಂಥಗಳು : Savitri/ ಸೌಂದರ್ಯ ಮೀಮಾಂಸೆ/ ಸಾವಿತ್ರಿ (ಕನ್ನಡ ಪದ್ಯಾನುವಾದ)/ ಸತ್ಯ ಮತ್ತು ಸೌಂದರ್ಯ /

1 ಟಿಪ್ಪಣಿ Post a comment
  1. Rajaram Hegde
    ಫೆಬ್ರ 19 2016

    ಲೇಖನ ತುಂಬಾ ಚೆನ್ನಾಗಿದೆ. ನವೋದಯ ಕವಿಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಆತ್ಮದೀಪದ ಬೆಳಕು ಅತ್ಯಗತ್ಯ. ಈ ಬೆಳಕು ಅಡಿಗರ ನಂತರ ನಮ್ಮ ನವ್ಯ ನವ್ಯೋತ್ತರ ಕವಿಗಳಲ್ಲಿ ಕಾಣೆಯಾದಂತಿದೆ. ಹಾಗಾಗಿ ಅವರು ಪಾಶ್ಚಾತ್ಯ ಮಿಸ್ಟಿಸಿಸಂ ಹಿಡಿದುಕೊಂಡು ಕತ್ತಲಲ್ಲಿ ತಡಕಾಡುತ್ತಿರುವ ಕುರುಡರಂತೆ ಆಡುತ್ತಾರೆ. ಭಗವಾನ್ ಹಾಗೂ ಅವರದೇ ಧೋರಣೆ ಹೊಂದಿರುವ ಇಂದಿನ ತರಹೆವಾರಿ ಪ್ರಗತಿಪರ ಬರೆಹಗಾರರು ಅಡಿಗರ ‘ಕತ್ತಲೆಗೆ ಹತ್ತೆ ತಲೆ?’ ಸಾಲನ್ನು ಅಭಿನಯಿಸುತ್ತಿರುವಂತಿದೆ. ಇಂಥ ವಾತಾವರಣದಲ್ಲಿ ನವೋದಯ ಕವಿಗಳ ಅನುಸಂಧಾನ ಮಾಡುವ ಮಾರ್ಗವನ್ನು ಇಂಥ ಲೇಖನ ಗಳು ತೆರೆಯುತ್ತವೆ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments