ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 30, 2016

2

ಪೇಪರು ಔಟಾಗಿ, ಎಂಟ್ರೆನ್ಸು ಬೇಕಾಗಿ..

‍ನಿಲುಮೆ ಮೂಲಕ

– ನಾಗೇಶ ಮೈಸೂರು

chemistry-paper-leak-305_032216115714ಅದು ಸುಮಾರು ೮೨-೮೩ ರ ಕಾಲ. ನಾವು ಅಗ ಎರಡನೆ ಪೀಯೂಸಿಯಲ್ಲಿ ಓದುತಿದ್ದೆವು. ಆಗಿನ್ನೂ ಎಂಜಿನಿಯರಿಂಗ್, ಮೆಡಿಕಲ್ ಸೀಟುಗಳಿಗೆ ಪ್ರವೇಶ ಪರೀಕ್ಷೆ ಇರಲಿಲ್ಲ – ಪೀಯೂಸಿ ಅಂಕೆ, ದರ್ಜೆಯ ಮೇಲೆ ಸೀಟು ನಿರ್ಧಾರವಾಗುತ್ತಿದ್ದ ಕಾಲ. ‘ಸೈನ್ಸ್ ತೆಗೆದುಕೊಂಡರೆ ಕೆಲಸ ಸುಲಭ ಸಿಗುತ್ತೆ’ ಅನ್ನುವ ಜನಪ್ರಿಯ ನಂಬಿಕೆಯನುಸಾರ ಪೀಸಿಎಂಬಿ ತೆಗೆದುಕೊಡಿದ್ದ ನನಗಂತೂ ಕೂತಲ್ಲಿ, ನಿಂತಲ್ಲಿ ಅದೇ ಧ್ಯಾನ, ಆತಂಕ, ಕಳವಳ.

ಫೇಲಾಗಿ ಬಿಟ್ಟರೆ ಎಲ್ಲರ ಎದುರು ಮುಖವೆತ್ತಿ ತಿರುಗುವುದು ಹೇಗೆ ಅನ್ನುವುದಕ್ಕಿಂತ, ಸುತ್ತ ಮುತ್ತಲಿನವರೆಲ್ಲ ಇಟ್ಟುಕೊಂಡಿರುವ ‘ಮಹಾ ಬುದ್ಧಿವಂತ, ಗ್ಯಾರಂಟಿ ಎಂಜಿನಿಯರೋ, ಡಾಕ್ಟರೋ ಆಗ್ತಾನೆ’ ಅನ್ನೋ ನಂಬಿಕೆ ಸುಳ್ಳಾಗಿಬಿಟ್ರೆ ಏನು ಕಥೆಯಪ್ಪ ? ಅನ್ನೋ ಅಳುಕೇ ಹೆಚ್ಚಾಗಿ ಕಿತ್ತು ತಿನ್ನುತ್ತಿತ್ತು. ಇನ್ನು ಮಿಕ್ಕಿದ್ದೆಲ್ಲ ಹೇಳುವ ಹಾಗೆ ಇಲ್ಲಾ ಬಿಡಿ – ಬೆಳಗಿನಿಂದ ಕಾಲೇಜು ಕ್ಲಾಸು, ಮುಗಿಯುತ್ತಿದ್ದಂತೆ ಸೈಕಲ್ ಏರಿ ಹೊರಟರೆ ಒಂದು ಕಡೆಯಿಂದ ಟ್ಯೂಶನ್ನಿನ ಪರಿಭ್ರಮಣನೆ.. ಎಂಜಿನಿಯರಿಂಗೋ, ಮೆಡಿಕಲ್ಲೋ ಆನ್ನೋ ಸಂದಿಗ್ದಕ್ಕೆ ಎಲ್ಲಾ ನಾಲ್ಕು ಸಬ್ಜೆಕ್ಟ್ಟಿಗೂ ಟ್ಯೂಷನ್.. ಮನೆಗೆ ಬಂದ ಮೇಲೆ ಮತ್ತೆ ರಿವಿಷನ್, ಸ್ಟಡಿ ನಡುರಾತ್ರಿಯವರೆಗೆ. ಇವಿಷ್ಟು ಬಿಟ್ಟರೆ ಬೇರೆ ಬದುಕೇ ಇಲ್ಲ ಅನ್ನೋ ತರಹದ ಜೀವನ.

ಅಂತು ಇಂತೂ ಪರೀಕ್ಷೆಯ ಸಮಯವೂ ಹತ್ತಿರ ಬಂದುಬಿಟ್ಟಿತ್ತು.. ಅದಕ್ಕೆ ತಕ್ಕಂತೆ ಓದಿಕೊಳ್ಳುವ ವೇಳೆಯು ರಾತ್ರಿ ಮೂರಕ್ಕೆ ಮಲಗಿ ಬೆಳಗ್ಗೆ ಆರಕ್ಕೇಳುವ ಪರಿಕ್ರಮ.. ರಾತ್ರಿಯೆಲ್ಲಾ ಟೀ, ಕಾಫಿ ಕುಡಿಯುತ್ತಾ ನಿದ್ದೆಗೆಟ್ಟು ಅಭ್ಯಾಸ ಮಾಡುವ ಕಾಲ. ಬಹುಶಃ ತಪಸ್ಸೆಂದರೆ ಏನೆಂಬುದರ ತುಸು ಅಂದಾಜು ಸಿಕ್ಕಿದ್ದೇ ಆ ಸಮಯದಲ್ಲಿರಬೇಕು. ಮೊದಲ ಪರೀಕ್ಷೆ ಗಣಿತ; ಅದರ ನಿರೀಕ್ಷೆ ಹೇಗಿತ್ತೆಂದರೆ ನೂರು ಬಂದರೆ ಪಕ್ಕಾ, ತೊಂಭತ್ತೊಂಭತ್ತು ಬಂದರೆ ಕಡಿಮೆ ಅನ್ನುವ ಹಾಗೆ.

ನನಗೋ ತೊಂಭತ್ತಕ್ಕಿಂತ ಕಡಿಮೆ ಇರದಿದ್ದರೆ ಸಾಕಪ್ಪ ಅನ್ನುವ ಭಾವನೆ – ಬರೆಯುವ ಹತ್ತು ನಿಮಿಷಕ್ಕೆ ಮೊದಲು. ಅಂತು ಶುರುವಾದಾಗ ಎಲ್ಲಾ ಗೊತ್ತಿದ್ದ ಪ್ರಶ್ನೆಗಳೇ ಇದ್ದುದು ಕಂಡು ಧೈರ್ಯ ಬಂದಂತಾಗಿ ಎಲ್ಲಾ ಬರೆದು ಮುಗಿಸಿದ್ದೆ – ನೂರಲ್ಲದಿದ್ದರೆ ತೊಂಭತ್ತೊಂಭತ್ತು ಗಟ್ಟಿ ಎನ್ನುವ ಹಾಗೆ. ಮುಗಿಸಿ ಮನೆಗೆ ಬಂದು ಮಧ್ಯಾಹ್ನವೆಲ್ಲಾ ನಿದ್ದೆ – ರಾತ್ರಿಗೆದ್ದು ಮುಂದಿನದು ಓದಿಕೊಳ್ಳಲು. ಪ್ರತಿ ಪರೀಕ್ಷೆಯ ನಡುವೆ ಒಂದೆರಡು ಮೂರು ದಿನಗಳ ಗ್ಯಾಪ್ ಇರುವುದರಿಂದ ಆ ಹೊತ್ತಿನ ಓದು ಗಣನೀಯ ಪಾತ್ರ ವಹಿಸುತ್ತದಲ್ಲ – ಲಾಸ್ಟ್ ಮಿನಿಟ್ ಪ್ರಿಪರೇಷನ್ನಿಗೆ..! ಎಂದಿನಂತೆ ಸಂಜೆ ಎದ್ದು ಮತ್ತೆ ಪುಸ್ತಕ ಹಿಡಿಯುವ ಮುನ್ನ ತಿಂಡಿ ತಿನ್ನುತ್ತ ಎಡಗೈಯಲ್ಲಿ ಅಂದಿನ ಪೇಪರು ತೆಗೆದುಕೊಂಡು ನೋಡಿದರೆ ಎದೆ ಧಸಕ್ಕೆಂದಿತು..! ಪರೀಕ್ಷೆಯ ಒತ್ತಡದಲ್ಲಿ ಎಡಬಲ ನೋಡದೆ ಯಾರೊಡನೆಯೂ ಮಾತಾಡದೆ ಮನೆ ಸೇರಿದ್ದ ನನಗೆ ವಿಷಯದ ಅರಿವೇ ಆಗಿರಲಿಲ್ಲ – ಅಂದು ಬರೆದಿದ್ದ ಪೇಪರು ಹಿಂದಿನ ದಿನವೇ ಕಾಲೇಜೊಂದರಲ್ಲಿ ಲೀಕ್ ಆಗಿ ಹೋಗಿ, ಅದು ಹೇಗೋ ಪತ್ರಿಕೆಗಳಿಗೂ ಸಿಕ್ಕಿ ಬೆಳಗ್ಗೆಯೇ ಮುಖಪುಟದ ಸರಕಾಗಿ ಹೋಗಿದೆಯೆಂದು ! ಪ್ರಿಂಟಾಗಿದ್ದ ಪ್ರಶ್ನೆಗಳನ್ನು ನೋಡಿದರೆ ಎಲ್ಲಾ ಯಥಾವತ್ ಬರೆದು ಬಂದಿದ್ದೇ ಇದೆ..!

ಸರಿ ಶುರುವಾಯ್ತು – ಫ್ರೆಂಡುಗಳ ಮನೆಗಲೆದಾಟ, ರೇಡಿಯೊ ನ್ಯೂಸ್ ಇತ್ಯಾದಿ.. ಕೊನೆಗೆ ವಾರ್ತೆಯಲ್ಲಿ ವಿಷಯ ಖಚಿತವಾಗಿ ಗಣಿತ ರೀ ಎಗ್ಸಾಮು ನಡೆಯುವುದೆಂದು ದಿನಾಂಕವನ್ನು ನಿಗದಿಪಡಿಸಿದ್ದು ಗೊತ್ತಾಯ್ತು. ಮಿಕ್ಕ ಪರೀಕ್ಷೆಗಳ ದಿನಾಂಕವೇನು ಬದಲಾಗಿಲ್ಲವೆಂದು ಅನೌನ್ಸ್ ಮಾಡಿದ್ದರೂ, ಕಷ್ಟಪಟ್ಟು ಬರೆದು ಚೆನ್ನಾಗಿ ಉತ್ತರಿಸಿದ್ದ ಪತ್ರಿಕೆ ಮತ್ತೆ ತೆಗೆದುಕೊಳ್ಳಬೇಕಲ್ಲ ಎಂದು ಸಂಕಟವೂ ಆಗಿತ್ತು.. ಅದರ ನಡುವಲ್ಲೇ ಮುಂದಿನ ಪರೀಕ್ಷೆಗಳಿಗೆ ಯಥಾರೀತಿ ಸಿದ್ದತೆ ನಡೆಯತೊಡಗಿತ್ತು ಹಗಲಿರುಳೆನ್ನದೆ. ಆ ಹೊತ್ತಲ್ಲಿ ಪರೀಕ್ಷೆಯ ಗ್ಯಾಪಿನಲ್ಲಿ ತೀರಾ ನಿದ್ದೆಗೆಟ್ಟು ಓದಬಾರದೆಂದು ತಿಳಿಹೇಳುವವರು ಇರಲಿಲ್ಲ. ಇರುವಷ್ಟು ಪೋರ್ಷನ್ನನ್ನು ಕನಿಷ್ಠ ಒಂದು ಸಾರಿಯಾದರೂ ರಿವೈಸ್ ಮಾಡಿ ಮುಗಿಸಿಬಿಡಬೇಕೆಂದು ದಮ್ಮುಗಟ್ಟಿ ಓದುತ್ತಿದ್ದ ಕಾರಣ ಮೂರ್ನಾಲ್ಕು ಗಂಟೆಗಿಂತ ಹೆಚ್ಚು ನಿದ್ದೆ ಆಗುತ್ತಿರಲಿಲ್ಲ. ಅದು ಪರೀಕ್ಷೆಯ ಗ್ಯಾಪಿನಲ್ಲೂ ಮುಂದುವರೆದು ಈಗ ಹಿಂದಿನ ರಾತ್ರಿಯೂ ಪೂರ್ತಿ ನಿದ್ದೆಗೆಡುವ ಅಧ್ವಾನದ ಮಟ್ಟಕ್ಕೆ ಮುಟ್ಟಿತ್ತು. ಕಡೆಗೆ ಎರಡು ಗಂಟೆಯ ನಿದ್ದೆಯ ಮುಖದಲ್ಲಿ ಎಗ್ಸಾಮ್ ಹಾಲಲ್ಲಿ ಕೂತು ಎರಡನೆ ಫಿಸಿಕ್ಸ್ ಪೇಪರ್ ನೋಡಿದರೆ ಎಲ್ಲಾ ಗೊತ್ತಿರುವ ಪ್ರಶ್ನೆಗಳೇ ಅನಿಸಿ ಸಮಾಧಾನವಾಗಿ ಬರೆಯತೊಡಗಿದ್ದೆ.

ಆಗ ಸಂಭವಿಸಿತ್ತು ನನಗರಿವಿಲ್ಲದೆ ಘಟಿಸಿದ ಆ ಪ್ರಕರಣ..!

ಆದದ್ದಾದರು ಏನು ?! ಕೊನೆಯ ಅರ್ಧ ಗಂಟೆ ಬೆಲ್ ಆದಾಗ ಇದ್ದಕ್ಕಿದ್ದಂತೆ ಯಾರೋ ಬಡಿದೆಬ್ಬಿಸಿದಂತೆ ಎಚ್ಚರವಾಗಿ ಪ್ರಜ್ಞಾ ಸ್ಥಿತಿಗೆ ಬಂದಂತೆನಿಸಿ ಪೇಪರು ನೋಡಿದರೆ ಇನ್ನು ಅರ್ಧವೂ ಮುಗಿದಿರಲಿಲ್ಲ.. ‘ಅರೆರೆ..! ಎಲ್ಲಾ ಗೊತ್ತಿರುವ ಪ್ರಶ್ನೆಗಳೇ ಇದ್ದರೂ ಯಾಕೆ ಬರೆಯಲಾಗಿಲ್ಲ ನನಗೆ? ಮಿಕ್ಕ ಅರ್ಧಗಂಟೆಯಲ್ಲಿ ಎಷ್ಟು ತಾನೇ ಆದೀತು ?’ ಅಂದುಕೊಳ್ಳುತ್ತಾ ಅವಸರಿಸಿಕೊಂಡೇ ಬರೆದರೂ ಕೊನೆಗೆ ಅರವತ್ತೈದು ಅಂಕಗಳಷ್ಟೇ ಮುಗಿಸಲು ಆಗಿತ್ತು. ನನಗೆಲ್ಲಾ ಅಯೋಮಯ, ಗೊಂದಲದ ಪರಿಸ್ಥಿತಿ – ಯಾಕಿಷ್ಟು ಸುಲಭವಿದ್ದು ನಾನು ಮುಗಿಸಲಾಗಿಲ್ಲ ಎಂದು ಹಪಹಪಿಸುತ್ತಿದ್ದರು ಉತ್ತರ ಹೊಳೆದಿರಲಿಲ್ಲ. ಹೇಗೆ ತಾನೇ ಹೊಳೆದೀತು ? ಪೇಪರು ಬರೆವ ಹೊತ್ತಲ್ಲೇ ,ದಿನಗಟ್ಟಲೆ ನಿದ್ದೆಯಿಲ್ಲದೆ ಓದಿದ ಕಾರಣಕ್ಕೋ ಏನೋ – ಇದ್ದಕ್ಕಿದ್ದಂತೆ ಪ್ರಜ್ಞೆ ಕಳೆದುಕೊಂಡು ಬಿದ್ದುಬಿಟ್ಟಿದ್ದೆನಂತ…! ಸುಮಾರು ಒಂದು ಗಂಟೆಯ ಕಾಲ ಆ ಸ್ಥಿತಿಯಲ್ಲೇ ನಷ್ಟವಾಗಿ ಹೋಗಿತ್ತಾದರು ನನಗದು ಗೊತ್ತಾಗಿದ್ದು ಆಮೇಲೆ ಗೆಳೆಯರು ಹೇಳಿದ ವಿವರಗಳಿಂದಲೇ..

ಅಲ್ಲಿಗೆ ನನಗರಿವಾಗಿ ಹೋಗಿತ್ತು ಇನ್ನು ಎಂಜಿನಿಯರಿಂಗಿನಂತ ಸೀಟಿಗೆ ತಿಲಾಂಜಲಿ ಬಿಟ್ಟ ಹಾಗೆ ಎಂದು. ಅಷ್ಟು ದಿಕ್ಕೆಟ್ಟ ದಿಗ್ಭ್ರಾಂತ ಸ್ಥಿತಿ ಯಾವತ್ತೂ ಉಂಟಾಗಿರಲಿಲ್ಲ. ದಾರಿಯುದ್ದಕ್ಕೂ ಅಳುತ್ತಲೇ ಸೈಕಲ್ಲು ಹೊಡೆದುಕೊಂಡು ಮನೆಗೆ ಬಂದು ಭೋರೆಂದು ಅಳುತ್ತಾ ಮಖಾಡೆ ಮಲಗಿಬಿಟ್ಟೆ. ಎಲ್ಲರಿಗೂ ಗಾಬರಿ ಏನಾಯ್ತು , ಹೇಗಾಯ್ತು ಎಂದು. ಕೊನೆಗೆ ಅಳುತ್ತಳುತ್ತಲೇ ನನ್ನ ಪ್ರವರ ಬಿಚ್ಚಿದಾಗ ಯಾರೂ ವಿದ್ಯಾವಂತರೇ ಇರದ ಮನೆಯಲ್ಲಿ ‘ಅಯ್ಯೋ ಅಷ್ಟೆ ತಾನೇ ? ಪಾಸಾಗುತ್ತಲ್ಲ ಸಾಕು ಬಿಡು..’ ಎಂದು ಉಢಾಫೆ ಮಾಡಿದಾಗ ನನಗೆ ನಗುವುದೋ ಅಳುವುದೋ ಗೊತ್ತಾಗದ ವಿಚಿತ್ರ ಸ್ಥಿತಿ.

ಆಗ ಊರಿನಿಂದ ಬಂದಿದ್ದ ನನ್ನ ದಾಯಾದಿ ಅಣ್ಣನೊಬ್ಬ ನನ್ನನ್ನು ಬಲವಂತದಿಂದ ಎಬ್ಬಿಸಿಕೊಂಡು ಓದಲು ಕೂರಲು ಬಿಡದೆ ಸಿನೆಮಾವೊಂದಕ್ಕೆ ಕರೆದೊಯ್ದುಬಿಟ್ಟ. ಹೆಚ್ಚುಕಮ್ಮಿ ಪ್ರತಿದಿನವೂ ಒಂದೊಂದು ಸಿನಿಮಾ ಅನ್ನುವಂತಾಗಿಹೋಯ್ತು. ನಾನೂ ಸಹ ಇನ್ನೇನು ಬೀಎಸ್ಸಿಯೇ ತಾನೇ ಮಿಕ್ಕಿದ್ದು ? ಅಂದುಕೊಂಡು ಎಂಜಿನಿಯರಿಂಗ್ ಕನಸು ಮರೆತು ಓದಿನ ಉರವಣಿಗೆ ಎಳ್ಳು ನೀರು ಬಿಟ್ಟು ನಿರಾಶೆಯಿಂದ ಅವನ ಜತೆ ಯಾಂತ್ರಿಕವಾಗಿ ಓಡಾಡತೊಡಗಿದ್ದೆ.. ದುರದೃಷ್ಟಕ್ಕೆ ಈ ಪೇಪರ್ ಔಟ್ ಆಗಿರಲಿಲ್ಲ .. ಹೀಗಾಗಿ ಮರುಪರೀಕ್ಷೆಯ ಭಾಗ್ಯವೂ ಇದ್ದಂತೆ ಕಾಣಲಿಲ್ಲ. ನನ್ನ ಮೇಲೆ ನಾನೇ ಶಪಿಸಿಕೊಳ್ಳುವುದಲ್ಲದೆ ಬೇರೇನೂ ಮಾಡುವಂತಿರಲಿಲ್ಲ..

ಅದೇ ಯಾಂತ್ರಿಕತೆಯಲ್ಲಿ ಮುಂದಿನ ಪೇಪರುಗಳನ್ನು, ಸಿದ್ದತೆಗೆ ಹೋಲಿಸಿದರೆ ಚೆನ್ನಾಗಿಯೇ ಮಾಡಿದ್ದೆ.. ಆದರೆ ಅಲ್ಲೇ ನಡೆದಿದ್ದು ವಿಚಿತ್ರ.. ಆ ಮುಂದಿನ ಪೇಪರುಗಳು ಕೂಡಾ ಔಟ್ ಆಗಿ ನ್ಯೂಸ್ ಪೇಪರ್ ಹೆಡ್ಲೈನ್ ಐಟಂಗಳಾಗಿಬಿಡುವುದೆ !? ಮತ್ತೆ ಹೊಸದಿನದ ನಿಗದಿ, ಮತ್ತೆ ಪರೀಕ್ಷೆ ಬರೆಯಬೇಕೆನ್ನುವ ಸುದ್ದಿಗೆ ರೋಸಿ ಹೋದಂತಾಗಿ ಎಲ್ಲದರ ಮೇಲೆ ಪೂರ್ತಿ ಆಸಕ್ತಿಯೇ ಹೊರಟುಹೋಗಿತ್ತು.. ಇದರ ನಡುವೆ ಮೊಟ್ಟ ಮೊದಲು ಔಟ್ ಆಗಿದ್ದ ಗಣಿತದ ಮರುಪರೀಕ್ಷೆಯ ದಿನಾಂಕವೂ ಬಂದುಬಿಟ್ಟಿತ್ತು.. ಯಾಂತ್ರಿಕವಾಗಿ ಅದನ್ನು ಬರೆದು ಬಂದರೆ – ಆ ಎರಡನೆ ಬಾರಿಯ ಪೇಪರು ಕೂಡಾ ಔಟಾಗಿದೆಯೆಂದು ಗೊತ್ತಾಗಿ – ಪೀಯೂಸಿ ಪರೀಕ್ಷೆಗಳೆಂದರೆ ಎಲ್ಲರೂ ಅವಹೇಳನ ಮಾಡುತ್ತ ಹಾಸ್ಯಮಾಡುವ ಮಟ್ಟಕ್ಕೆ ತಲುಪಿಬಿಟ್ಟಿತ್ತು – ಅದನ್ನು ಬರೆಯುತ್ತಿರುವ ನಮ್ಮನ್ನು ಬಿಟ್ಟು ಮಿಕ್ಕೆಲ್ಲರಿಗೂ.

ಇದೆಲ್ಲಾ ಗದ್ದಲ, ಗೊಂದಲದ ಮಧ್ಯೆ ವಿದ್ಯಾ ಮಂತ್ರಾಲಯದಿಂದ ಕೊನೆಗೊಂದು ಪ್ರಕಟಣೆ ಹೊರಟಿತು.. ಆ ಬಾರಿಯ ಲೀಕ್ ಔಟ್ ಹಗರಣದಿಂದ ಮೌಲ್ಯಮಾಪನದ ಫಲಿತಾಂಶ ನಂಬಲರ್ಹವೆನಿಸದ ಕಾರಣ ಹೊಸದೊಂದು ಯೋಜನೆಯನ್ನು ಪ್ರಕಟಿಸಿಬಿಟ್ಟಿತ್ತು ಸರ್ಕಾರ. ಈ ಫಲಿತಗಳಿಂದ ಹೆಚ್ಚು ಏಟು ಬೀಳುವುದು ಎಂಜಿನಿಯರಿಂಗ್ , ಮೆಡಿಕಲ್ , ಬಿಡಿಎಸ್ ವಿದ್ಯಾರ್ಥಿಗಳಿಗೆ ತಾನೇ ? ಆ ವರ್ಷ ಪೀಯೂಸಿಯ ಯಾವ ಅಂಕವನ್ನು ಸೀಟಿನ ವಿಂಗಡಣೆಗೆ ಪರಿಗಣಿಸುವುದಿಲ್ಲವೆಂದು, ಬದಲಿಗೆ ಅದೇ ಮೊದಲ ಬಾರಿಗೆ ಇವೆಲ್ಲಾ ಸೀಟುಗಳಿಗೆ ರಾಜ್ಯಮಟ್ಟದ ಪ್ರವೇಶ ಪರೀಕ್ಷೆ ನಡೆಸಿ ತನ್ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವುದಾಗಿ ಪ್ರಕಟಿಸಲಾಯ್ತು. ಇದರಿಂದ ನಮಗಂತು ಮತ್ತೊಂದು ತರದ ಆತಂಕ ಶುರುವಾಯ್ತು.. ಮೊಟ್ಟ ಮೊದಲ ಬಾರಿಗೆ ಯಾವುದೇ ಪೂರ್ವಾನುಭವ, ಸಿದ್ದತೆ, ಅನುಭವವಿಲ್ಲದೆ ‘ಎಂಟ್ರೆನ್ಸ್ ಎಗ್ಸಾಮ್’ ಬರೆಯುವ ಮೊದಲ ಬಲಿಪಶು ಬ್ಯಾಚ್ ನಾವಾಗಬೇಕಿತ್ತು..

ಆದರೆ ನನ್ನ ಮಟ್ಟಿಗೆ ಅಲ್ಲೊಂದು ದಟ್ಟವಾದ ಕಪ್ಪುಮೋಡದ ಬಳಿ ಬೆಳ್ಳಿ ರೇಖೆಯೊಂದು ಕಾಣಿಸಿಕೊಂಡಿತ್ತು.. ಆ ಸಾರಿಯ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಸೀಟುಗಳ ಹಂಚುವಿಕೆ ಪೂರ್ತಿ ಪ್ರವೇಶ ಪರೀಕ್ಷೆಯ ಆಧಾರದಲ್ಲೇ ನಡೆಯುವುದರಿಂದ ನನ್ನ ಪರೀಕ್ಷೆಯ ಕಡಿಮೆ ಅಂಕಗಳು ಯಾವುದೇ ತೊಡಕುಂಟಾಗಿಸುವ ಸಾಧ್ಯತೆ ತಪ್ಪಿಹೋಗಿತ್ತು.. ಇದೊಂದು ದೇವರೇ ಕೊಟ್ಟ ಸದಾವಕಾಶವೆಂದು ಲ್ಯಾನ್ಸ್ಡೌನ್ ಬಿಲ್ಡಿಂಗಿಗೆ ಓಡಿಹೋಗಿ ಐವತ್ತು ರೂಪಾಯಿಯ ಎಂಟ್ರೆನ್ಸ್ ಪರೀಕ್ಷೆಯ ಪ್ರಶ್ನೋತ್ತರ ಪುಸ್ತಕ ಕೊಂಡುತಂದಿದ್ದೆ. ಅದೋ ಪೂರ ಬಾಲಿಶ ಮಟ್ಟದ ಪುಸ್ತಕ – ನಿಜವಾದ ಪರೀಕ್ಷೆಯ ಹತ್ತುಭಾಗದಷ್ಟು ಸಹಾಯವೂ ಅದರಿಂದಾಗಲಿಲ್ಲ ಅನ್ನುವುದು ಬೇರೆ ವಿಷಯ. ನನ್ನ ಕಸಿನ್ ಒಬ್ಬ ಮೂಗಿನ ಮೇಲೆ ಬೆರಳಿಟ್ಟುಕೊಂಡು ‘ಐವತ್ತು ರೂಪಾಯಿ ಪುಸ್ತಕಾನ ? ಯಾಕೆ ದುಡ್ಡು ದಂಡ ಮಾಡ್ತಿದೀರಿ’ ಎಂದು ಸಂಕಟಪಟ್ಟಾಗ ನನಗೂ ಭಯವಾಗಿತ್ತು – ಪಾಸಾಗದಿದ್ದರೆ ಏನು ಕಥೆ ? ಎಂದು.

ಒಟ್ಟಾರೆ ಅದೃಷ್ಟದ ಬಲವೋ ಏನೋ, ಆ ಕಷ್ಟಕರವಾದ ಎಂಟ್ರೆನ್ಸಿನಲ್ಲಿ ಒಳ್ಳೆಯ ದರ್ಜೆ ಸಿಕ್ಕಿ ಮೆರಿಟ್ ಸೀಟಿನಲ್ಲೇ ಎಂಜಿನಿಯರಿಂಗ್, ಮೆಡಿಕಲ್, ಬಿಡಿಎಸ್ ಮೂರರಲ್ಲೂ ಸೀಟು ಸಿಕ್ಕಿಬಿಟ್ಟಿತ್ತು. ಕೊನೆಗೆ ಆಯ್ದುಕೊಂಡಿದ್ದು ಎಂಜಿನಿಯರಿಂಗ್ ಆದರೂ, ಕೂದಲೆಳೆಯ ಅಂತರದಲ್ಲಿ ನಾನು ತಪ್ಪಿಸಿಕೊಂಡಿದ್ದೆ. ಬಹುಷಃ ಪೇಪರುಗಳು ಔಟಾಗಿ ಇಷ್ಟೆಲ್ಲಾ ಗದ್ದಲ ಆಗಿರದಿದ್ದರೆ ನನಗೆ ಆ ಸೆಕೆಂಡ್ ಛಾನ್ಸ್ ಸಿಕ್ಕುತ್ತಲೇ ಇರಲಿಲ್ಲವೇನೋ.. ಮೊದಲ ಬಾರಿಗೆ ಎಂಟ್ರೆನ್ಸ್ ಬರೆದ ಒತ್ತಡದ ಸನ್ನಿವೇಶ ಎನ್ನುವುದು ಬಿಟ್ಟರೆ, ನನ್ನ ಪಾಲಿಗಂತೂ ‘ಆದದ್ದೆಲ್ಲಾ ಒಳಿತೇ ಆಯಿತು..’ ಎನ್ನುವಂತಾಗಿತ್ತು..!

ಆ ನಂತರದ ಪ್ರವೇಶ ಪರೀಕ್ಷೆ ಬರೆಯುವವರಿಗೆ ಕನಿಷ್ಠ ಹಳೆಯ ವರ್ಷಗಳ ಪೇಪರುಗಳ ರೆಫರೆನ್ಸ್ ಆದರೂ ಸಿಗುತ್ತದೆ.. ಅಲ್ಲದೆ ಬೇಕಾದಷ್ಟು ಕೋಚಿಂಗ್ , ಮಾಕ್ ಪೇಪರುಗಳ ಸಹಾಯವೂ ದೊರಕುತ್ತದೆ.. ಸಾಲದ್ದಕ್ಕೆ ವಾರ್ಷಿಕ ಪರೀಕ್ಷೆ ಮತ್ತು ಪ್ರವೇಶ ಪರೀಕ್ಷೆ ಎರಡಕ್ಕೂ ಶೇಕಡಾ ಐವತ್ತರ ಸಮಾನ ಆದ್ಯತೆ ಕೊಟ್ಟು ಎರಡರ ಶ್ರಮವನ್ನು ಪರಿಗಣಿಸುತ್ತಾರೆ.. ಅದರಲ್ಲೂ ಈಗಂತು ಹಳೆಯ ವರ್ಷಗಳ ಅನುಭವದ ಭಂಡಾರವೇ ಇದೆ – ತರಬೇತು ಕೊಟ್ಟು ತಯಾರಿ ಮಾಡಲು. ಅದೊಂದು ಇರದೇ ಬರಿಯ ಆತಂಕವನ್ನೇ ಬಂಡವಾಳವನ್ನಾಗಿ ಹೊತ್ತು ಮೊಟ್ಟಮೊದಲ ಬಾರಿಗೆ ಬರೆದ ಪ್ರವೇಶ ಪರೀಕ್ಷೆ ನಮ್ಮ ಮಟ್ಟಿಗಂತೂ ಅವಿಸ್ಮರಣೀಯ ಅನ್ನಬೇಕು.

ಅದರಲ್ಲೂ ನನ್ನ ಮಟ್ಟಿಗೆ ಹೇಳುವುದಾದರೆ ಎಲ್ಲೋ ಜಾರಿ ಕಳುವಾಗಿ ಹೋಗಲಿದ್ದವನನ್ನು ಮತ್ತೆ ಕೈಹಿಡಿದೆಬ್ಬಿಸಿ ಬೆನ್ನು ತಟ್ಟಿ ಮೇಲ್ಹತ್ತಿಸಿಕೊಂಡು ಮತ್ತೊಂದವಕಾಶ ಕಲ್ಪಿಸಿತ್ತು ಅದೃಷ್ಟದ ಬಂಡಿ…!

2 ಟಿಪ್ಪಣಿಗಳು Post a comment
  1. ಮಾರ್ಚ್ 30 2016

    It is only the general merit students that suffer when such leakage, outage, mess ups in paper correction, etc happen. They are the ones that work hard to do their best and this is how our government respects and encourages them. This has been going on for more than 30 years now. Will this ever stop?

    ಉತ್ತರ
  2. ಮಾರ್ಚ್ 30 2016

    Reblogged this on ಮನದಿಂಗಿತಗಳ ಸ್ವಗತ and commented:
    Published in nilume today (30.03.2016)

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments