ಮಹಿಳಾ ಅಸ್ತಿತ್ವದ ವಿವಿಧ ನೆಲೆಗಳು
– ರಾಜಕುಮಾರ.ವ್ಹಿ.ಕುಲಕರ್ಣಿ, ಮುಖ್ಯಗ್ರಂಥಪಾಲಕ
ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ
ಮಾರ್ಚ್ 8 ಅಂತರಾಷ್ಟ್ರೀಯ ಮಹಿಳಾ ದಿನದ ನಿಮಿತ್ಯ ಈ ಲೇಖನ.
ರಾಮಾಯಣದಲ್ಲಿ ಊರ್ಮಿಳೆ ಎನ್ನುವ ಪಾತ್ರವೊಂದಿದೆ. ಈಕೆ ಲಕ್ಷ್ಮಣನ ಹೆಂಡತಿ. ರಾಮ ಕಾಡಿಗೆ ಹೋಗುವ ಸಂದರ್ಭ ಅಣ್ಣನನ್ನು ಅನುಸರಿಸಿ ಲಕ್ಷ್ಮಣ ಸಹ ಕಾಡಿಗೆ ತೆರಳುತ್ತಾನೆ. ಕಾಡಿಗೆ ಹೋಗುತ್ತಿರುವ ಲಕ್ಷ್ಮಣನಿಗೆ ತನ್ನನ್ನೇ ನಂಬಿಕೊಂಡ ಜೀವವೊಂದಿದೆ ಎನ್ನುವ ನೆನಪಾಗುವುದಿಲ್ಲ. ಹೆಂಡತಿ ಸೀತೆಯನ್ನೂ ತನ್ನೊಂದಿಗೆ ಕಾಡಿಗೆ ಕರೆದೊಯ್ಯುತ್ತಿರುವ ರಾಮನಿಗೂ ತನ್ನ ತಮ್ಮ ಲಕ್ಷ್ಮಣನಿಗೂ ಪತ್ನಿ ಇರುವಳೆಂಬ ಸತ್ಯ ಗೋಚರವಾಗುವುದಿಲ್ಲ. ರಾವಣ ಸೀತೆಯನ್ನು ಅಪಹರಿಸಿದಾಗ ವಿರಹ ವೇದನೆಯಿಂದ ಬಳಲುವ ರಾಮ ತಮ್ಮ ಲಕ್ಷ್ಮಣನೆದುರು ಸೀತೆಯ ಅಗಲುವಿಕೆಯಿಂದಾದ ದುಃಖವನ್ನು ತೋಡಿಕೊಳ್ಳುತ್ತಾನೆ. ದಾರಿಯಲ್ಲಿ ಎದುರಾಗುವ ಮರ,ಗಿಡ,ಬಳ್ಳಿ,ನದಿ,ಬೆಟ್ಟಗಳನ್ನು ಮಾತನಾಡಿಸಿ ನನ್ನ ಸೀತೆಯನ್ನು ಕಂಡಿರಾ ಎಂದು ಪ್ರಲಾಪಿಸುತ್ತಾನೆ. ಹೀಗೆ ದು:ಖಿಸುತ್ತಿರುವ ರಾಮನಿಗೆ ಲಕ್ಷ್ಮಣನೂ ವಿರಹಾಗ್ನಿಯಿಂದ ಬಳಲುತ್ತಿರಬಹುದೆನ್ನುವ ಕಿಂಚಿತ್ ಸಂದೇಹವೂ ಮನಸ್ಸಿನಲ್ಲಿ ಸುಳಿಯದೇ ಹೋಗುತ್ತದೆ.ರಾಮ ರಾವಣನನ್ನು ಜಯಿಸಿ ಹದಿನಾಲ್ಕು ವರ್ಷಗಳ ವನವಾಸವನ್ನು ಪೂರ್ಣಗೊಳಿಸಿ ಸೀತೆ ಮತ್ತು ಲಕ್ಷ್ಮಣನೊಂದಿಗೆ ಅಯೋಧ್ಯೆಗೆ ಮರಳುತ್ತಾನೆ. ಹಾಗಾದರೆ ಆ ಹದಿನಾಲ್ಕು ವರ್ಷಗಳ ಕಾಲ ಪತಿಯಿಂದ ದೂರಾಗಿ ಊರ್ಮಿಳೆ ಅನುಭವಿಸಿದ ವೇದನೆ ಮತ್ತು ಸಂಕಟಗಳ ಕಥೆ ಏನು?. ರಾಮಾಯಣವನ್ನು ಓದುತ್ತಿರುವ ಘಳಿಗೆ ಓದುಗ ಊರ್ಮಿಳೆಯ ಪಾತ್ರದೊಂದಿಗೆ ಮುಖಾಮುಖಿಯಾವುದೇ ಇಲ್ಲ. ಭಾತೃತ್ವದ ಪ್ರಶ್ನೆ ಎದುರಾದಾಗ ಅದಕ್ಕೆ ಶ್ರೇಷ್ಠ ಉದಾಹರಣೆಯಾಗಿ ಲಕ್ಷ್ಮಣನ ಹೆಸರನ್ನು ಹೇಳುವ ನಾವು ಊರ್ಮಿಳೆಯನ್ನು ಮರೆತು ಬಿಡುತ್ತೇವೆ. ಹಾಗಾದರೆ ಊರ್ಮಿಳೆಯದೂ ಶ್ರೇಷ್ಠ ತ್ಯಾಗವಲ್ಲವೇ? ಹದಿನಾಲ್ಕು ವರ್ಷಗಳ ಕಾಲ ಗಂಡನಿಂದ ದೂರವೇ ಉಳಿದು ಆತನನ್ನು ಅಣ್ಣನ ಸೇವೆಗಾಗಿ ಪ್ರಾಂಜಲ ಮನಸ್ಸಿನಿಂದ ಕಳಿಸಿಕೊಟ್ಟ ಊರ್ಮಿಳೆಯ ವ್ಯಕ್ತಿತ್ವಕ್ಕೆ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ದೊರೆಯಬೇಕಾದ ಮನ್ನಣೆ ಸಿಗಲೇ ಇಲ್ಲ. ಅಂದರೆ ಮಹಿಳೆಯನ್ನು ಪುರುಷ ಪ್ರಧಾನ ನೆಲೆಯಲ್ಲಿ ಶೋಷಣೆಗೊಳಪಡಿಸುತ್ತ ಬಂದಿರುವುದಕ್ಕೆ ನಮ್ಮ ಪ್ರಾಚೀನ ಪರಂಪರೆಯ ಒತ್ತಾಸೆಯಿದೆ ಎಂದರ್ಥ.ರಾಮಾಯಣ ಹಾಗೂ ಮಹಾಭಾರತದ ಕಾಲದಿಂದಲೂ ಸ್ತ್ರೀ ಶೊಷಣೆಯ ವಸ್ತುವಾಗಿಯೇ ಬಿಂಬಿತವಾಗುತ್ತ ಬಂದಿರುವಳು.
ಇತಿಹಾಸದ ಪಾತ್ರವೊಂದು ಸ್ತ್ರೀ ಶೋಷಣೆಯ ವಸ್ತುವಾಗಿ ಪುರುಷ ಪ್ರಧಾನ ವ್ಯವಸ್ಥೆಗೆ ಒತ್ತಾಸೆಯಾಗಿ ನಿಂತಾಗ ಇತಿಹಾಸದ ಮತ್ತೊಂದು ಪಾತ್ರವಾದ ಅಕ್ಕ ಮಹಾದೇವಿಯದು ಪುರುಷ ಪ್ರಧಾನ ವ್ಯವಸ್ಥೆಯನ್ನು ಧಿಕ್ಕರಿಸಿ ಹೊಸ ವ್ಯವಸ್ಥೆಯನ್ನು ಕಟ್ಟುವ ತಹತಹಿಕೆ. ಚೆನ್ನಮಲ್ಲಿಕಾರ್ಜುನನನ್ನೆ ತನ್ನ ಪತಿಯೊಂದು ಮಾನಸಿಕವಾಗಿ ಪರಿಭಾವಿಸಿದ ಅಕ್ಕ ಕೌಶಿಕ ರಾಜನ ಕಾಮನೆಗಳನ್ನು ಮೆಟ್ಟಿನಿಂತು ಮಹಿಳಾ ವಿಮೋಚನೆಗೆ ಹೊಸ ದಾರಿ ತೋರುತ್ತಾಳೆ. ಒಂದು ಪಾತ್ರದ ಮೂಲಕ ಸ್ತ್ರೀ ಶೊಷಣೆಗೆ ಸಾಕ್ಷಿಯಾದ ಇತಿಹಾಸ ಮತ್ತೊಂದು ಪಾತ್ರದ ಮೂಲಕ ಸ್ತ್ರೀ ವಿಮೋಚನೆಗೂ ಸಾಕ್ಷಿಯಾದದ್ದು ಇತಿಹಾಸದ ಮಹತ್ವಗಳಲ್ಲೊಂದು.ಇತಿಹಾಸದಿಂದ ಬಿಡುವಷ್ಟೇ ಪಡೆಯುವುದು ಕೂಡ ಬಹುಮುಖ್ಯವಾದದ್ದು.ನಮ್ಮ ನೆಲದ ಮಹಿಳೆಯರು ಅಕ್ಕ ಮಹಾದೇವಿಯ ಧೋರಣೆ ಹಾಗೂ ಪರುಷ ಸಮಾಜವನ್ನು ಧಿಕ್ಕರಿಸಿ ನಿಂತ ಆಕೆಯ ಮನೋಸ್ಥೈರ್ಯವನ್ನು ಬಳುವಳಿಯಾಗಿ ಪಡೆದು ಸ್ತ್ರೀ ವಿಮೋಚನೆಯ ಅನೇಕ ಸ್ಥಿತ್ಯಂತರಗಳಿಗೆ ಪ್ರಯತ್ನಿಸಿದರು.ಒಂದು ರೀತಿಯಲ್ಲಿ ಮಹಿಳೆ ತನ್ನ ಅಸ್ಮಿತೆಯನ್ನು (ಅಸ್ತಿತ್ವ) ವಿವಿಧ ನೆಲೆಗಳಲ್ಲಿ ಕಂಡುಕೊಳ್ಳಲು ಮಾಡಿದ ಪ್ರಯತ್ನವೂ ಅದಾಗಿತ್ತು.
ಮತ್ತಷ್ಟು ಓದು 
ಗುರುವಾಗುವುದು ಇಷ್ಟು ಕಷ್ಟವೇ?
– ಶ್ರೀಕಾಂತ. ಎನ್, ಸಂಶೋಧನಾ ವಿದ್ಯಾರ್ಥಿ ಕುವೆಂಪು ವಿ.ವಿ
ನನಗೀಗ ಇಪ್ಪತ್ತೈದು ವಯಸ್ಸು. ಈಗ ನಾನು ಸಂಶೋಧನಾ ವಿದ್ಯಾರ್ಥಿ. ಇಲ್ಲಿಗೆ ಬರುವ ಮುನ್ನ ಎರಡು ವರ್ಷ ಶಿಕ್ಷಕನಾಗಿ ಕೆಲಸ ಮಾಡಿದ್ದೆ. ಅದರ ಅನುಭವವನ್ನು ಹಂಚಿಕೊಳ್ಳುತ್ತಿದ್ದೇನೆ. ತಲೆಯ ತುಂಬಾ ಹುಡುಗರಿಗೆ ಅದು ಹೇಳಬೇಕು ಇದು ಹೇಳಬೇಕು ಎಂದು ಹಿಂದಿನ ದಿನ ಘಂಟೆಗಟ್ಟಲೇ ತಯಾರಾಗಿ, ಡಸ್ಟರ್, ಚಾಕ್, ಅಟೆಂಡೆನ್ಸ್, ಸಣ್ಣ ಚೀಟಿ ಹಿಡಿದು ತರಗತಿಗೆ ಮೊದಲನೇ ಬಾರಿ ಹೊರಟ ನನಗೆ ದೊಡ್ಡ ಆಶ್ಚರ್ಯ ಕಾದಿತ್ತು. ಯುನಿವರ್ಸಿಟಿ ನೀನು ಗಣಿತ ಪಾಠ ಮಾಡಲು ಯೋಗ್ಯ ಎಂದು ಒಂದು ಕಾರ್ಡ್ ಕೊಟ್ಟು ಕಳುಹಿಸಿತ್ತೇ ಹೊರತು, ಹೇಗೆ ಪಾಠ ಮಾಡುವುದು ಎಂದು ತಿಳಿಸಿರಲಿಲ್ಲ. ನನಗಿಂತ ಎತ್ತರ & ದಪ್ಪ, ನೋಡಲು ಪ್ರಬುದ್ಧರಾಗಿ ಕಾಣುತ್ತಿದ್ದ ಹುಡುಗರು ಅನುಮಾನದೊಂದಿಗೆ ಎದ್ದು ನಿಂತಾಗ, ನನ್ನ ಊಹೆಗಳೆಲ್ಲಾ ತಲೆಕೆಳಗಾಯಿತು. ಪಾಠ ಹೇಗೆ ಮಾಡುವುದು, ಏನೇನೆಲ್ಲಾ ಹೊಸತು ಹೇಳಬೇಕು ಎಂದಷ್ಟೇ ಯೋಚಿಸಿ ಹೋದ ನನಗೆ, ನನ್ನ ದೇಹದ ಗಾತ್ರ ಕೂಡ ಮಾನದಂಡ ಎಂದು ತಿಳಿದಾಗ, ಹಿಂದಿನ ದಿನ ತಯಾರಾದದ್ದೆಲ್ಲಾ ಸೊನ್ನೆಯಿಂದ ಗುಣಿಸಿದ ಹಾಗೆ ನಾಶವಾಯಿತು. ಕೆಲವರಂತು, ಇವರು ಲೆಕ್ಚರ್ ಅಲ್ಲವೆಂದು ಭಾವಿಸಿಯೇ ಕುಳಿತಿದ್ದರು. ಎಲ್ಲರನ್ನು ಕೂಡಿಸಿ, ಜೋರಾಗಿ ಕೇಳುತ್ತಿದ್ದ ಹೃದಯ ಬಡಿತ ಎಣಿಸುತ್ತಾ, ನನ್ನನ್ನೇ ತಿನ್ನುವಂತೆ ನೋಡುತ್ತಿದ್ದ 60*2 ಕಣ್ಣುಗಳ ತೀವ್ರತೆ ತಡೆಯಲಾಗದೆ ಬೋರ್ಡ್ ಕಡೆ ತಿರುಗಿ ಅಳಿಸಿದ್ದ ಬೋರ್ಡನ್ನು ಮತ್ತೆ ಅಳಿಸುತ್ತಾ ನನ್ನನ್ನು ಸಮಾಧಾನ ಮಾಡಿಕೊಂಡೆ. ನನ್ನ ಸಹೋದ್ಯೋಗಿ ಹೇಳಿ ಕಳಿಸಿದಂತೆ ಮೊದಲು ನನ್ನ ಪರಿಚಯ ಮಾಡಿಕೊಂಡು, ಅವರ ಹೆಸರು ಕೇಳಿ, ಭಯದಿಂದ ನನಗೆ ತೋಚಿದ್ದು ಹೇಳಿ ಬಂದಾಗ, ಇಷ್ಟೊಂದು ಕಷ್ಟವೇ ಗುರುವಾಗೋದು ? ನನ್ನ ಕೆರಿಯರ್ ಆಯ್ಕೆ ತಪ್ಪೇ ! ಎಂದೆನಿಸಿತು.
ಅಗ್ನಿರಾಜನ ಪ್ರಕರಣ
– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ,
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ,ತುಮಕೂರು ವಿಶ್ವವಿದ್ಯಾನಿಲಯ
ಮೊನ್ನೆ ತಾನೆ ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ತಂದೆಯಿಂದ ಅತ್ಯಾಚಾರಕ್ಕೊಳಗಾದ ಹೆಣ್ಣುಮಗಳೊಬ್ಬಳಿಗೆ ಪಂಚಾಯ್ತಿ ಛಡಿ ಏಟಿನ ಶಿಕ್ಷೆ ಕೊಟ್ಟಿದ್ದು ಇದೀಗ ರಾಷ್ಟ್ರವ್ಯಾಪಿ ಚರ್ಚೆಗೆ ಗ್ರಾಸವಾಗಿದೆ. ಇಂಥ ಕಥೆಯೊಂದು ಕ್ರಿ.ಶ. 900ರ ವೇಳೆಗೇ ನಡೆದಿದ್ದನ್ನು ಕಥೆಯೊಂದು ಹೇಳುತ್ತದೆ. ಇದನ್ನು ಹೇಳುವ ಮುನ್ನ ಸಣ್ಣ ಪೀಠಿಕೆ ಅಗತ್ಯ.
ಕಳೆದ ಮುನ್ನೂರು ವರ್ಷಗಳಲ್ಲಿ ಭಾರತೀಯ ಸಂಸ್ಕೃತಿಯ ಬಹುಪಾಲು ಸೈದ್ಧಾಂತಿಕ ಮತ್ತು ಪಠ್ಯ ಸಂಬಂಧಿ ಅಧ್ಯಯನವನ್ನು ಕೈಗೊಂಡವರು ಯೂರೋಪಿನ ಚಿಂತಕರು. ಅವರು ನಾವು ಹಾಗೂ ನಮ್ಮ ಸಮಾಜವನ್ನು ತಮ್ಮ ಇಷ್ಟದಂತೆ ಕಂಡು, “ಅಧ್ಯಯನ” ಮಾಡಿ, ನಮ್ಮ ಸಮಾಜ ಹಾಗೂ ಸಂಸ್ಕೃತಿಯಲ್ಲಿ ಏನೇನು ತಪ್ಪುಗಳಿವೆ ಎಂದು ತೋರಿಸಿ ಅದನ್ನೇ ಆಧುನಿಕ ಶಿಕ್ಷಣದ ಮೂಲಕ ನಮಗೆ ಕಲಿಸಿದರು. ಇಂದಿಗೂ ನಾವು ಅದನ್ನೇ ನಂಬಿಕೊಂಡು ಬಂದಿದ್ದೇವೆ. ಕಳೆದ ಎರಡರಿಂದ ಮೂರು ಸಾವಿರ ವರ್ಷಗಳ ಅವಧಿಯಲ್ಲಿ ಭಾರತೀಯ ಚಿಂತಕರು ಏನೇನೂ ಚಿಂತನೆ ಮಾಡಲೇ ಇಲ್ಲವೇ? ನಮ್ಮಿಂದ ಯೂರೋಪ್ ಕಲಿಯುವುದು ಏನೂ ಇಲ್ಲವೇ? ಎಂದು ಸಂಸ್ಕೃತಿ ಚಿಂತಕ ಬಾಲಗಂಗಾಧರ್ ಕೇಳುತ್ತಾರೆ. ಇಡೀ ಭಾರತದ್ದಿರಲಿ, ಕನ್ನಡ ಸಾಹಿತ್ಯದ ಹಲವಾರು ಸಂಗತಿಗಳನ್ನು ಗಮನಿಸಿದರೆ ಈ ಮಾತು ಅಕ್ಷರಶಃ ಸತ್ಯ ಅನಿಸುತ್ತದೆ. ಕನ್ನಡ ನವ್ಯ ಸಾಹಿತಿಗಳು ಪಾಶ್ಚಾತ್ಯರಿಂದ ಹೊಸದನ್ನು ತರುವ, ಪರಿಚಯಿಸುವ ಭರದಲ್ಲಿ ನಮ್ಮದೇ ಆದ ಹಳೆಗನ್ನಡವನ್ನು ಅಲಕ್ಷಿಸಿದರು. ಶಿಕ್ಷಣ, ಮಾಧ್ಯಮಗಳೆಲ್ಲ ನವ್ಯ ಸಾಹಿತ್ಯಕ್ಕೆ ನೀಡಿದ ಪ್ರಾಮುಖ್ಯವನ್ನು ಹಳೆಗನ್ನಡಕ್ಕೆ ನೀಡದೇ ಹೋದವು. ಮೂರ್ನಾಲ್ಕು ತಲೆಮಾರುಗಳು ಹೀಗೇ ರೂಪುಗೊಂಡು ಶಿಕ್ಷಣ ಸಂಸ್ಥೆಗಳಲ್ಲೂ ಇದೇ ಮಾದರಿ ತಯಾರಾಗಿ ಈಗ ಪ್ರಾಥಮಿಕ ಹಂತವಿರಲಿ, ಉನ್ನತ ಶಿಕ್ಷಣದಲ್ಲೂ ಹಳೆಗನ್ನಡ ಓದುವವರೂ ಇಲ್ಲವೇ ಇಲ್ಲ ಅನ್ನುವ ಪರಿಸ್ಥಿತಿ ಉಂಟಾಗಿದೆ. ನವ್ಯ ಪ್ರಭಾವದ ಇಂದಿನ ಕನ್ನಡ ಸಾಹಿತ್ಯ ಓದಿದವರಿಗೆ ಈಡಿಪಸ್ ಗೊತ್ತಿರುತ್ತಾನೆ, ಆದರೆ ಅಗ್ನಿರಾಜನಾಗಲೀ ಕುಮಾರರಾಮನಾಗಲೀ ಗೊತ್ತೇ ಇರದಿದ್ದರೆ ಅದು ವಿದ್ಯಾರ್ಥಿಗಳ ತಪ್ಪಲ್ಲ! ಸಿಗ್ಮಂಡ್ ಫ್ರಾಯ್ಡ್ ನ ಈಡಿಪಸ್ ಕಾಂಪ್ಲೆಕ್ಸ್ ಹೆಸರು ಹಾಗೂ ಕಥೆ ಪರಿಚಯವಿರುವಷ್ಟು ಅಗ್ನಿರಾಜನ ಕಥೆ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಬಹಳಷ್ಟು ಅಧ್ಯಾಪಕರಿಗೂ ಗೊತ್ತೇ ಇಲ್ಲ! ಇದಕ್ಕೆ ಇರುವ ಕಾರಣವನ್ನು ಈಗಾಗಲೇ ಬಾಲು ಅವರ ಮಾತಿನಲ್ಲಿ ಕೇಳಿದ್ದಾಗಿದೆ.
ಸೈನಿಕರೊಂದಿಗೆ ಸದೃಢ ಭಾರತ ಸರಕಾರ
– ಅನಿರುದ್ಧ ಎಸ್.ಆರ್ , ಭದ್ರಾವತಿ
“ಈ ಕ್ಷಣದಿಂದಲೇ ಪಾಕಿಸ್ಥಾನ ಅಪ್ರಚೋದಿತ ದಾಳಿ ನಡೆಸುವುದನ್ನು ನಿಲ್ಲಿಸಬೇಕು, ಭಾರತದ ಕಡೆಯಿಂದ ಎಂದಿಗೂ ಸ್ವಯಂ ಪ್ರೇರಿತವಾಗಿ ಗುಂಡಿನ ದಾಳಿ ನಡೆಯುವುದಿಲ್ಲ. ಆದರೆ ನಿಮ್ಮ ಕಡೆಯಿಂದ ಗುಂಡಿನ ದಾಳಿಯೇನಾದರೂ ನಡೆದರೆ, ಆನಂತರ ನಮ್ಮಿಂದ ಹಾರುವ ಗುಂಡುಗಳನ್ನು ಲೆಕ್ಕ ಹಾಕಲು ನಿಮಗೆ ಸಾಧ್ಯವಿಲ್ಲ ” ಹೀಗೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದು ಸರಕಾರದ ಗೃಹ ಸಚಿವರಾದ ರಾಜನಾಥ್ ಸಿಂಗ್.
ಈ ಯೋಧರು ತಮ್ಮ ಆಳುಗಳಿಗೆ ಕೊಟ್ಟ ಕೂಲಿ ಮುಖ್ಯಮಂತ್ರಿಯೂ ಕೊಡಲಾರ !
– ಸಂತೋಷ್ ತಮ್ಮಯ್ಯ
೧೯೯೯ರ ಜುಲೈ ತಿಂಗಳು. ದೇಶಾದ್ಯಂತ ಕಾರ್ಗಿಲ್ ಯುದ್ಧದ ಬಿಸಿ ವ್ಯಾಪಿಸುತ್ತಿತ್ತು. ಎಲ್ಲೆಲ್ಲೂ ಆಕ್ರೋಶ, ಯೋಧರ ಸ್ಥೈರ್ಯ ಹೆಚ್ಚಿಸುವ ಕಾರ್ಯಕ್ರಮಗಳು ನಡೆಯುತ್ತಿದ್ದವು. ದೇಶದ ಮೂಲೆ ಮೂಲೆಗಳಿಂದ ನಿಧಿಸಂಗ್ರಹ, ಪಾಕ್ ಖಂಡನೆ, ಪ್ರತಿಭಟನೆ, ಬಲಿದಾನಿಗಳಿಗೆ ನಮನ ಕಾರ್ಯಕ್ರಮಗಳು ನಡೆಯುತ್ತಿದ್ದವು. ಅಂಥ ಒಂದು ದಿನ ಕೊಡಗಿನ ಗೋಣಿಕೊಪ್ಪದಲ್ಲಿ ಕಾರ್ಗಿಲ್ ನಮನದ ಮೆರವಣಿಗೆ ನಡೆಯುತ್ತಿತ್ತು, ಜನ ಕಿಕ್ಕಿರಿದು ಸೇರಿದ್ದರು. ನಾಗರಿಕರು, ಮಾಜಿ ಯೋಧರು, ವರ್ತಕರು, ಸಂತೆಗೆ ಬಂದವರು, ವಿದ್ಯಾರ್ಥಿಗಳು ಸೇರಿದ್ದರು. ಮಾಜಿ ಮಿಲಿಟರಿ ಅಧಿಕಾರಿಯೊಬ್ಬರು ಪಾಕ್ ವಿರುದ್ಧ ಕೆಂಡಾಮಂಡಲವಾಗಿ ಮಾತಾಡಿದರು. ಜಯಘೋಷಗಳೊಂದಿಗೆ ಮೆರವಣಿಗೆ ಹೊರಟಿತು. ಮುಶ್ರಫನ ಪ್ರತಿಕೃತಿ ದಹಿಸುವುದರೊಂದಿಗೆ ಮೆರವಣಿಗೆ ಮುಕ್ತಾಯವಾಗುತ್ತದೆ ಎಂದು ಘೋಷಿಸಲಾಯಿತು. ಹೀಗೆ ಮೆರವಣಿಗೆ ಸಾಗಿ ಬಸ್ ಸ್ಟಾಂಡಿಗೆ ಮುಟ್ಟಿ ಮುಶ್ರಫನ ಪ್ರತಿಕೃತಿಗೆ ಇನ್ನೇನು ಬೆಂಕಿ ಹಚ್ಚಬೇಕು, ಅಷ್ಟರಲ್ಲಿ ಪೊನ್ನಂಪೇಟೆ ಕಡೆಯಿಂದ ಅತಿ ವೇಗವಾಗಿ ಬಂದ ಕಾರೊಂದು ಮೆರವಣಿಗೆಯ ಮುಂದೆ ಬಂದು ಜಕ್ಕೆಂದು ನಿಂತಿತು. ಜನರು ಬೆಂಕಿ ಹಚ್ಚುವುದನ್ನು ಬಿಟ್ಟು ಆ ಕಾರನ್ನು ನೋಡತೊಡಗಿದರು. ನೋಡುತ್ತಿದ್ದಂತೆ ಆ ಕಾರಿಂದ ಬಿಳಿಯಾದ ಸುರುಳಿ ಮೀಸೆಯ ಮುದುಕರೊಬ್ಬರು ಇಳಿದರು. ಅವರ ಕೈ ನಡುಗುತ್ತಿತ್ತು. ಡಬಲ್ ಬ್ಯಾರಲ್ ಬಂದೂಕನ್ನು ಬೇರೆ ಹಿಡಿದಿದ್ದರು. ಒಂದು ಕ್ಷಣ ಆ ಸಾವಿರಾರು ಜನರು ಸ್ತಬ್ದರಾದರು. ಈ ಅಜ್ಜ ನೋಡನೋಡುತ್ತಲೇ ಕೋವಿಗೆ ಕಾಡತೂಸುಗಳನ್ನು ತುಂಬಿಸಿದರು. ಜೈ ಮಾಕಾಳಿ ಎನ್ನುತ್ತಲೇ ಮುಶರಫನ ಪ್ರತಿಕೃತಿಗೆ ಎರಡು ಗುಂಡುಗಳನ್ನು ಹಾರಿಸಿಯೇಬಿಟ್ಟರು! ಸಾವಿರಾರು ಜನ ಸೇರಿದ್ದ ಮೆರವಣಿಗೆ ಸನ್ನಿ ಹಿಡಿದವರಂತೆ ಜಯಘೋಷ ಮೊಳಗಿಸಿತು. ನಂತರ ಆ ಅಜ್ಜನನ್ನು ಪತ್ರಿಕೆಗಳು ಮಾತಾಡಿಸಿದವು. ಆ ಅಜ್ಜ ಹವಾಲ್ದಾರ್ ಮುದ್ದಪ್ಪ. ಬ್ರಿಟೀಷ್ ಕಾಲದಲ್ಲೇ ಆರ್ಮಿ ಸೇರಿ ಎರಡನೆ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದ ಯೋಧ. ಅರವತ್ತೆರಡರ ಯುದ್ದದಲ್ಲಿ ಪಾಲ್ಗೊಂಡು ಚೀನಾದಲ್ಲಿ ಸೆರೆಯಾಳಗಿದ್ದ ವ್ಯಕ್ತಿ. ತಮ್ಮ ೮೫ನೇ ವಯಸ್ಸಿನಲ್ಲೂ ಅವರು “ನಾನು ಈಗಲೂ ಕಾರ್ಗಿಲ್ ಗೆ ಹೋಗಲು ಸಿದ್ಧ” ಎಂದು ಮೀಸೆ ತಿರುವಿ ವರದಿಗಾರರಿಗೆ ಹೇಳಿದ್ದರು. ಮತ್ತಷ್ಟು ಕೆದಕಿ ನೋಡಿದರೆ ಆ ಅಜ್ಜ ದಕ್ಷಿಣ ಕೊಡಗಿನಲ್ಲಿ ಅತಿ ದೊಡ್ಡ ಕಾಫಿ ತೋಟವನ್ನು ಹೊಂದಿದ್ದ ಟಾಪ್ ಹತ್ತು ಜನರಲ್ಲಿ ಒಬ್ಬರು. ಆ ಕಾಲದಲ್ಲೇ ಅವರ ಮಕ್ಕಳು ಹೆಲಿಕಾಫ್ಟರನ್ನು ಖರೀದಿಸಲು ಓಡಾಡುತ್ತಿದ್ದರು.
ಕಾಂಗ್ರೆಸ್ ಮುಕ್ತ ಸುಳ್ಯದಲ್ಲಿ ಅರಳಿದ ಕಮಲ
– ತಾರನಾಥ ನಡುಮನೆ
ಸುಳ್ಯ- ಇಂದು ಇದು ರಾಜಕೀಯವಾಗಿ ದಕ್ಷಿಣಕನ್ನಡಕ್ಕೆ ಸೇರಿದರೂ, ಇನ್ನೂ ಕೊಡಗಿನ ಕೆಲವು ಸಂಪ್ರದಾಯವನ್ನು ಉಳಿಸಿಕೊಂಡು ಬಂದ ಪ್ರದೇಶ. ಕರ್ನಾಟಕದ ಪ್ರಮುಖ ತೀರ್ಥಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವನ್ನು ಹೊಂದಿರುವ ತಾಲೂಕು.
ಸುಳ್ಯ ಪರಿಸರ ಮಂಗಳೂರಿನಂತೆ ಸಮತಟ್ಟಾಗಿರದೆ , ಕೊಡಗಿನಂತೆ ಸಣ್ಣ ಬೆಟ್ಟ-ಗುಡ್ಡ ವನ್ನು ಹೊಂದಿರೋ ಪ್ರದೇಶ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಹಸಿರು ಸಿರಿಯಲ್ಲಿ ಮಲಗಿರುವ ಊರು. ಇಲ್ಲಿನ ಜನ ಸ್ವಾಭಿಮಾನಿಗಳು , 1837 ರಲ್ಲಿ ನಡೆದ ಅಮರ ಸುಳ್ಯದ ರೈತ ದಂಗೆ ಇದಕ್ಕೆ ಸಾಕ್ಷಿ. ಅಂದು ಕಂದಾಯ ಪಾವತಿ ಹಾಗೂ ಕೊಡಗಿನ ಅರಸ ಚಿಕ್ಕವೀರರಾಜೇಂದ್ರನ ಪದಚ್ಯುತಿ ಕಾರಣಕ್ಕಾಗಿ ತಮ್ಮನಾಳುತ್ತಿದ್ದ ಬ್ರಿಟಿಷರ ವಿರುದ್ದ ದಂಗೆ ಎದ್ದ ರೈತರು ಮಂಗಳೂರಿಗೆ ಮುತ್ತಿಗೆ ಹಾಕಿದ್ದರು. ಮೊದಲು ಮಂಗಳೂರನ್ನು ಗೆದ್ದರೂ ನಂತರ ಆಂಗ್ಲರಿಗೆ ಬಿಟ್ಟು ಕೊಡಬೇಕಾಯಿತು.




