ಕನ್ನಡ ಎನೆ ಕಿವಿ ನಿಮಿರಬೇಕಿರುವುದು ಪರರದ್ದು!
-ಸಂಕೇತ್ ಡಿ ಹೆಗಡೆ, ಸಾಗರ
ಕೋರಾ ಅಂತ ಒಂದು ಸಾಮಾಜಿಕ ಜಾಲತಾಣವಿದೆ. ಮೊನ್ನೆ ಹೀಗೆ ಜಾಲಾಡುತ್ತಿದ್ದಾಗ ಒಂದು ಭಲೇ ಬುದ್ಧಿವಂತಿಕೆಯ ಪ್ರಶ್ನೆ ಎದುರಾಯಿತು. ಪುಣ್ಯಾತ್ಮನೊಬ್ಬ ಬೆಂಗಳೂರಿನ ರಸ್ತೆಯೊಂದರ ಮೇಲೆ ಕಾರಿನಲ್ಲಿ ಕುಳಿತು ಪೋಸ್ಟ್ ಮಾಡಿದ್ದು. “ನಾನೀಗ ಬೆಂಗಳೂರಿನಲ್ಲಿದ್ದೇನೆ. ಕರ್ನಾಟಕ ಇಲ್ಲಿಂದ ಎಷ್ಟು ಕಿಲೋಮೀಟರ್ ಪ್ರಯಾಣಿಸಿದರೆ ಸಿಗುತ್ತೆ” ಅಂತ! ಹಾಗೆ ಕೇಳಿದವನ ಕಂಡು ಮತ್ತೊಬ್ಬ ಉತ್ತರ ಬರೆದಿದ್ದ. “೧೦೮ಕ್ಕೆ ಕರೆಮಾಡಿ ’ನಾನು ಬೆಂಗಳೂರಿನಲ್ಲಿದ್ದೇನೆ, ನನಗೆ ಕರ್ನಾಟಕಕ್ಕೆ ಕರೆದುಕೊಂಡುಹೋಗಿ’ ಅಂತ ಹೇಳಿ. ಅವರು ವಿಲ್ಸನ್ ಗಾರ್ಡನ್ ಅನ್ನುವ ಸ್ಥಳದಲ್ಲಿರುವ ನಿಮ್ಹಾನ್ಸ್ ಅನ್ನುವ ಕಟ್ಟಡದ ಬಳಿ ಇಳಿಸುತ್ತಾರೆ” ಅಂತ. ಇವರ ಪ್ರಶ್ನೋತ್ತರಗಳ ನೋಡಿ ಉಕ್ಕಿಬಂದ ನಗು, “ತಪ್ಪು ಅವನದಲ್ಲ” ಎಂದು ಅನಿಸಿದಾಗ ಮುಚ್ಚಿಕೊಂಡು ಹಿಂದೆಹೋಗಿಬಿಟ್ಟಿತು. ಎಂತಹ ಸ್ಥಿತಿಗೆ ಬೆಂಗಳೂರನ್ನು ತಂದಿಟ್ಟುಬಿಟ್ಟಿದ್ದೇವೆ ಅನ್ನುವುದು ನೆನಪಾಗಿ ಹೃದಯದ ಒಂದು ಮೂಲೆಯಲ್ಲಿರುವ ಭಾಷಾಭಿಮಾನಕ್ಕೆ ಅತೀವ ವೇದನೆಯಾಯಿತು. ಪಾಪ ಆ ಕಾರಿನವನದೇನು ತಪ್ಪು? ಬೆಂಗಳೂರಿನ ಗಾಳಿಯನ್ನು ಪ್ರಥಮ ಬಾರಿಗೆ ಕುಡಿಯುತ್ತಿರುವ ಯಾವನಿಗೆ ಕರ್ನಾಟಕದ “ರಾಜಧಾನಿ”ಯ ಗಾಳಿ ಕುಡಿದ ಅನುಭವವಾಗುತ್ತೆ? ಅವನೋ ಕನ್ನಡಿಗರ ನಾಡಾಗಿರುವ, ಕನ್ನಡವನ್ನು ಉಸಿರಾಗಿಸಿಕೊಂಡಿರುವ, ಕನ್ನಡತನದ ಬೀಡಾಗಿರುವ ಪ್ರದೇಶವೊಂದು ಸಿಕ್ಕಾಗ ಇಳಿದುಕೊಂಡುಬಿಡೋಣ ಅಂದುಕೊಂಡಿದ್ದ. ಅವನಿಗೇನು ಗೊತ್ತು, “ದಿಸ್ ಇಸ್ ಕರ್ನಾಟಕಾಸ್ ಕ್ಯಾಪಿಟಲ್, ಫಾರ್ ಯು” ಅಂತ. ಬೆಂಗಳೂರು ಕರ್ನಾಟಕದಲ್ಲಿದೆ, ಅದೇ ಅದರ ರಾಜಧಾನಿ ಅಂತ ಅವನಿಗೆ ಗೊತ್ತಿಲ್ಲದಿರುವ ಅವನ ಸಾಮಾನ್ಯ ಜ್ನಾನಕ್ಕೆ ವಿಷಾದಿಸೋಣ. ಆದರೆ ಅವನಿಗೆ ಬೆಂಗಳೂರಿನಲ್ಲಿದ್ದರೂ ಇದು ಕರ್ನಾಟಕವೆನ್ನುವುದು ಗೊತ್ತಾಗದ ಮಟ್ಟದಲ್ಲಿ ನಾವು ಬೆಂಗಳೂರನ್ನು ಕಾಪಾಡಿಕೊಂಡಿದ್ದೇವೆ ಎಂಬ ಕಟುವಾಸ್ತವಕ್ಕೆ, ಕೇವಲ ವಿಷಾದಿಸಿದರೆ ಸಾಕೇನು? ಮತ್ತಷ್ಟು ಓದು