ವಿಷಯದ ವಿವರಗಳಿಗೆ ದಾಟಿರಿ

Archive for

25
ಏಪ್ರಿಲ್

ಸಾಯಣರ ವೇದವ್ಯಾಖ್ಯಾನವು ಏನನ್ನು ತಿಳಿಸುತ್ತದೆ?

– ವಿನಾಯಕ ಹಂಪಿಹೊಳಿ
vedaಸಾಯಣಾಚಾರ್ಯರು ಋಗ್ವೇದಕ್ಕೆ ಭಾಷ್ಯವನ್ನು ಬರೆಯುವಾಗ ಮೊದಲು ವೇದ ಎಂದರೇನು ?, ಅದರ ಲಕ್ಷಣವೇನು ಎಂಬುದರ ಕುರಿತು ಒಂದು ದೀರ್ಘ ಚರ್ಚೆಯನ್ನು ಮಾಡಿದ್ದಾರೆ. ಅದರಲ್ಲಿ ಪೂರ್ವಪಕ್ಷದ ವಾದಗಳನ್ನೆಲ್ಲ ಒಂದೊಂದಾಗಿ ಪರಿಗಣಿಸಿ, ವೇದದ ಲಕ್ಷಣದ ಕುರಿತು ತಮ್ಮ ಸಿದ್ಧಾಂತವನ್ನು ಮಂಡಿಸಿ, ಪೂರ್ವಪಕ್ಷಿಯ ಸಂದೇಹಗಳನ್ನೆಲ್ಲ ಪರಿಹರಿಸುತ್ತಾ ಸಾಗಿದ್ದಾರೆ. ಆ ಚರ್ಚೆ ಏನು ಎಂಬುದು ಮುಖ್ಯವಲ್ಲ. ಆ ಚರ್ಚೆಯಲ್ಲಿ ಪೂರ್ವಪಕ್ಷಿಗಳು ಮತ್ತು ಸಿದ್ಧಾಂತಿಗಳು ವೇದದ ಕುರಿತು ಯಾವ ದೃಷ್ಟಿಕೋಣವನ್ನು ಇಟ್ಟುಕೊಂಡಿದ್ದರು ಎಂಬುದು ಇಲ್ಲಿ ಮುಖ್ಯ. ಹೀಗಾಗಿ ಆ ಚರ್ಚೆಯ ಆದಿಭಾಗದ ಸಾರಾಂಶವನ್ನು ಮಾತ್ರ ನೋಡೋಣ. ಮೊದಲು ಪೂರ್ವಪಕ್ಷದ ವಾದಗಳನ್ನು ಪಟ್ಟಿ ಮಾಡಿ ನಂತರ ಸಾಯಣರು ಕೊಟ್ಟ ವೇದದ ವ್ಯಾಖ್ಯಾನವನ್ನು ನೀಡಲಾಗಿದೆ. ಪೂರ್ವಪಕ್ಷದ ಮತ: ವೇದ ಎನ್ನುವದು ಯಾವದನ್ನು? ವೇದಕ್ಕೆ ಲಕ್ಷಣಗಳೇನಾದರೂ ಇವೆಯೇ? ಪ್ರತ್ಯಕ್ಷ, ಅನುಮಾನ ಮತ್ತು ಆಗಮ ಎಂಬ ಮೂರು ಪ್ರಮಾಣಗಳಿವೆಯಲ್ಲ (ಊಟ ಮಾಡಿದರೆ ಹೊಟ್ಟೆ ತುಂಬುತ್ತದೆ ಎನ್ನುವದಕ್ಕೆ ಪ್ರತ್ಯಕ್ಷ ಪ್ರಮಾಣ, ಹೊಗೆಯಾಡುತ್ತಿರುವಲ್ಲಿ ಬೆಂಕಿಯಿರಬಹುದೆಂಬುದಕ್ಕೆ ಅನುಮಾನ ಪ್ರಮಾಣ, ಯಾಗದಿಂದ ಸ್ವರ್ಗಪ್ರಾಪ್ತಿ ಎಂಬುದಕ್ಕೆ ಆಗಮ ಪ್ರಮಾಣ), ಅವುಗಳಲ್ಲಿ ಕೊನೆಯ ಆಗಮ ಪ್ರಮಾಣವೆಂಬುದೇ ವೇದದ ಲಕ್ಷಣವೆನ್ನಲು ಸಾಧ್ಯವಿಲ್ಲ. ಏಕೆಂದರೆ ಮನ್ವಾದಿ ಸ್ಮೃತಿಗಳೂ ಆಗಮಗಳಾಗಿವೆ. ವೇದ ಎನ್ನುವದು ಸ್ವರ್ಗ ಅಥವಾ ಮೋಕ್ಷಕ್ಕೆ ಸಾಧನ ಎಂಬ ಲಕ್ಷಣವನ್ನೂ ಹೇಳಲು ಸಾಧ್ಯವಿಲ್ಲ ಕಾರಣ ಇತಿಹಾಸ ಪುರಾಣಗಳೂ ಸ್ವರ್ಗ ಅಥವಾ ಮೋಕ್ಷಕ್ಕೆ ಸಾಧನಗಳಾಗಿರುತ್ತವೆ. ಆಗಮವೇ ವೇದದ ಲಕ್ಷಣ ಎನ್ನುವದು ಅತಿವ್ಯಾಪ್ತಿದೋಷ ಒಳಗೊಂಡಿದೆ. ಬೆಳ್ಳಗಿರುವದು ಹಾಲಿನ ಲಕ್ಷಣ ಎಂದರೆ, ಸುಣ್ಣವೂ ಬೆಳ್ಳಗಿರುವದರಿಂದ, ಈ ಲಕ್ಷಣವಾಕ್ಯವು ಅತಿವ್ಯಾಪ್ತಿದೋಷ (Necessary But Not Sufficient) ಎಂಬ ದೋಷವನ್ನು ಹೊಂದಿರುತ್ತದೆ. ಮತ್ತಷ್ಟು ಓದು »