“ಮಿಡಿದ ಹೃದಯಗಳು”
ಪ್ರವೀಣ್ .ಎಸ್
ಜೂನ್ ತಿಂಗಳ ಮುಂಜಾನೆಯ ಮಳೆ, ನಾನು ಆಫೀಸ್ಗೆ ಪ್ರಯಾಣಿಸಲು ದ್ವಿಚಕ್ರ ವಾಹನವನ್ನು ತರಾತುರಿಯಲ್ಲಿ ಹೊರ ತೆಗೆಯಲು ಸಾಹಸ ಪಡುತ್ತಿದ್ದೆ ಆದದ್ದೇನು?…ಅನಿರೀಕ್ಷಿತ ತಾಂತ್ರಿಕ ದೋಷ!, ಪೆಚ್ಚು ಮೊರೆ ಹಾಕಿಕೊಂಡು ಅದೃಷ್ಟವನ್ನು ಬಯ್ಯುತ್ತ, ಇಂದು ಮಹಾ ನಗರ ಪಾಲಿಕೆಯ ಬಸ್ಸೇ ಗತಿಯೆಂದು, ಕೈ ಗೆ ಸಿಕ್ಕ ಛತ್ರಿ ಹಿಡಿದು, ಬ್ಯಾಗನ್ನು ಬೆನ್ನಿಗೇರಿಸಿ, ಪ್ಯಾಂಟನ್ನು ಅರ್ಧ ಅಡಿ ಮಡಿಸಿ, ಹಳ್ಳ ಕೊಳ್ಳಗಳ ರಸ್ತೆಯಲ್ಲಿ ಹೆಜ್ಜೆ ಹಾಕುತ್ತ ಆತುರವಾಗಿ ಬಸ್ ಸ್ಟಾಪಿನೆಡೆಗೆ ಪ್ರಯಾಣಿಸಿದೆ. ಅಂತೂ ಇಂತು ತುಂತುರು ಮಳೆಯ ಫಲಿತಾಂಶವೋ ಎಂಬ ಟ್ರಾಫಿಕ್ ಜಂಜಾಟಕ್ಕೆ ಸಿಲುಕಿ ಬಸವಳಿದ ಬಸ್ ಬಂದೆ ಬಿಟ್ಟಿತು, ಇನ್ನು ಚಾಲಕರು ಮತ್ತು ನಿರ್ವಾಹಕರು ಒಂದು ಕಾಪಿ ಹೀರಲೋ / ಬೀಡಿ ಹಚ್ಚಲೋ ಕೆಳಗಿಳಿದರು, ಆಗಲೇ ಸಮಯ 8 ಕ್ಕೆ ಹತ್ತು ನಿಮಿಷ. ಬಸ್ ಏರಿ ಸಾಮಾನ್ಯವಾಗಿಯೇ ಕಿಟಕಿ ಪಕ್ಕದ ಸೀಟ್ನಲ್ಲಿ ಕೂರುವ ಜನ ಇಂದು ಯಾರೂ ಆ ಸೀಟ್ಗಳ ಹಿಡಿಯುತ್ತಿಲ್ಲ, ಕಾರಣ ನಿಮಗೆ ಗೊತ್ತೇ ಇದೆ! ಎಷ್ಟು ಪ್ರಮಾಣದ ಮಳೆ ಹೊರಗೆ ಆಗಿದೆ ಎಂದು ತಿಳಿಯಲು ನಮ್ಮೂರಿನ ಬಸ್ಸಿನೊಳಗೆ ಹೊಕ್ಕರೆ ಸಾಕು (ಮಳೆ ಅಳೆಯುವ ಸಾಧನವಿಟ್ಟು ಅಳೆವುದೊಂದೇ ಬಾಕಿ, ಹವಾಮಾನ ಇಲಾಖೆಗೆ) ಆ ವಿಷಯ ಇರಲಿ ಬಿಡಿ; ಅಂತೂ ನನಗೂ ಒಂದು ಸೀಟು ದೊರಕಿತು. ಮತ್ತಷ್ಟು ಓದು