ವಿಷಯದ ವಿವರಗಳಿಗೆ ದಾಟಿರಿ

Archive for

10
ಜುಲೈ

ನವಿಲುಗರಿ…..

– ಮಯೂರಲಕ್ಷ್ಮೀ
imagesಮುಖಪುಸ್ತಕದ ಅಭಿವ್ಯಕ್ತ ಮನಸುಗಳು…….
ದೈನಂದಿನ ಯಾಂತ್ರಿಕ ಬದುಕಿನ ಏಕತಾನತೆಯಿಂದ ಹೊರಬಂದು ಮನದಲ್ಲಿ ಹಾದು ಹೋಗುವ ಹಲವು ಭಾವನೆಗಳನ್ನು ವ್ಯಕ್ತಪಡಿಸಲು ಎಲ್ಲರಿಗೂ ಎಲ್ಲಾ ಸಮಯದಲ್ಲೂ ಸಿಗುವ ಸಾಧನಗಳಲ್ಲಿ ಇಂದು ಮುಖಪುಟವೂ (ಫೇಸ್‍ಬುಕ್) ಮುಖ್ಯ ಪಾತ್ರ ವಹಿಸುತ್ತಿದೆ. ಹಲವರಿಗೆ ಮುಖಪುಸ್ತಕದ ಸಂವಾದಗಳಲ್ಲಿ ತಮ್ಮ ವಿಚಾರಧಾರೆಗಳನ್ನು ಎಲ್ಲರೊಡನೆ ಹಂಚಿಕೊಳ್ಳುವ ಬಹುಮುಖ್ಯ ತಾಣಗಳು… ತಮಗಾದ ಹತಾಶೆ ಮತ್ತು ಸೋಲುಗಳಿಂದ ಹೊರಬಂದ ಮತ್ತೊಬ್ಬರಲ್ಲಿ ಕಂಡು ಗೆಲುವಿನ ಹಾದಿಯನ್ನು ಅರಸುವ ಹೃದಯಗಳು…ಇಂದಿನ ಮಾಹಿತಿ ಯುಗದಲ್ಲಿ ಐತಿಹಾಸಿಕ ಗತವೈಭವದ ಹಿರಿಮೆಯನ್ನು ಸಾರುವ ಬರಹಗಳು… ದೇಶ-ದೇಶಗಳ ಸಂಸ್ಕೃತಿಯನ್ನು ಕುರಿತು ದಾಖಲೆಗಳನ್ನು ನೀಡುವ ಪ್ರಾಜ್ಞ ದೃಷ್ಟಿಕೋನಗಳು… ಶಿಲಾಯುಗದಿಂದ ಸೈಬರ್‍ಯುಗದವರೆಗೂ ಅರಿವಿನ ಹಂದರವನ್ನು ಒರೆಹಚ್ಚುವ ವೈಜ್ಞಾನಿಕ ಸಿದ್ಧಾಂತಗಳು… ಪ್ರಚಲಿತ ವಿದ್ಯಮಾನಗಳನ್ನು ವಿಶ್ಲೇಷಿಸಿ BURNING ISSUE ಗಳನ್ನು ಕುರಿತು ಗಂಭೀರ ಚರ್ಚೆಗಳಲ್ಲಿ ಭಾಗವಹಿಸಿ ತಮ್ಮ ತಮ್ಮ ವಾದಗಳನ್ನು ವ್ಯಕ್ತಪಡಿಸುವ ಮನಸುಗಳು… ಸಕಾರಾತ್ಮಕ ನಿಲುವುಗಳನ್ನು ಪಾಸಿಟೀವ್ ದೃಷ್ಟಿಕೋನದಲ್ಲಿ ಭಿತ್ತರಿಸುವ ಚಿತ್ರ ಸಂದೇಶಗಳನ್ನು ಕಂಡ ಕೂಡಲೇ ತಮ್ಮ ಗೋಡೆಯ ಮೇಲೆ ಲಗತ್ತಿಸುವ ಕೈಗಳು… ಯಾರಿಗೋ ಎಲ್ಲೋ ಕಷ್ಟವಾದಲ್ಲಿ ಆ ಕಷ್ಟವು ತಮಗೇ ಬಂದಂತೆ ಕೂಡಲೇ ಪರಿತಿಪಿಸಿ ಪ್ರತಿಕ್ರಯಿಸುವ ಶುದ್ಧಾತ್ಮಗಳು… ಪ್ರಕೃತಿಯ ವಿಸ್ಮಯಗಳನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿದು ಸಂರಕ್ಷಿಸುವ ಛಾಯಾಚಿತ್ರ ಶೀರ್ಷಿಕೆಗಳು…ಇಂತಹ ನೂರಾರು ಸಾವಿರಾರು ಜನರು ದಿನನಿತ್ಯ ಫೇಸ್‍ಬುಕ್‍ನ ಜಾಲತಾಣದಲ್ಲಿ ಸಂವಹನಶೀಲರಾಗಿರುತ್ತಾರೆ. ತಿಳಿದೋ ತಿಳಿಯದೆಯೋ ನಾವು ಈ ಅಂತರ್‍ಜಾಲವೆಂಬ ತಾಣವಲ್ಲದ ತಾಣದಲ್ಲಿ ಕಳೆದು ಹೋಗುತ್ತಿರುತ್ತೇವೆ….. ಮತ್ತಷ್ಟು ಓದು »

10
ಜುಲೈ

ಸಿಬಿಐ ಅಧಿಕಾರಿಗಳಾಗಿ ಸೇರಿದವರಿಗೆ ಮರೆಯಲಾರದ ಪಾಠ

– ರೋಹಿತ್ ಚಕ್ರತೀರ್ಥ

13664875_10209161411808945_1664667020_n1987ನೇ ಇಸವಿಯ ಮಾರ್ಚ್ ತಿಂಗಳು. 19ನೇ ತಾರೀಕು. ಮುಂಬಯಿಯ ಪೊಲೀಸ್ ಮುಖ್ಯ ಕಚೇರಿಗೆ ಒಂದು ಫೋನ್‍ಕಾಲ್ ಬಂತು. ಇನ್ನೂ ಹದಿಮೂರು ವರ್ಷ ಸರ್ವೀಸ್ ಇದ್ದ, ದಕ್ಷ ಅಧಿಕಾರಿಯಾಗಿ ಹೆಸರು ಮಾಡಿ ಅದಾಗಲೇ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಹುದ್ದೆಗೇರಿದ್ದ ಅರವಿಂದ ಇನಾಂದಾರ್ ಫೋನೆತ್ತಿಕೊಂಡರು. ಅತ್ತ ಕಡೆಯಿಂದ ರಿಸೀವರ್ ಹಿಡಿದಿದ್ದ ಧ್ವನಿ ತಾನು ಒಪೆರಾ ಹೌಸ್‍ನಿಂದ ಮಾತಾಡುತ್ತಿರುವುದಾಗಿ ಹೇಳಿಕೊಂಡಿತು. ಅಲ್ಲಿನ ಒಂದು ಹೆಸರಾಂತ ಜ್ಯುವೆಲ್ಲರಿ ಮಳಿಗೆಯಲ್ಲಿ ಸಿಬಿಐ ದಾಳಿಯಾಗಿರುವುದಾಗಿ ಆ ಧ್ವನಿ ಹೇಳಿತು. ಮುಂಬಯಿಯನ್ನು ಕಂಡುಬಲ್ಲವರಿಗೆ ಒಪೆರಾ ಹೌಸ್ ಬಗ್ಗೆ ಹೆಚ್ಚೇನೂ ವಿವರಿಸಬೇಕಾಗಿಲ್ಲ. ನಮ್ಮ ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ಪುಸ್ತಕಗಳಿದ್ದಂತೆ, ಕಮರ್ಷಿಯಲ್ ಸ್ಟ್ರೀಟ್‍ನಲ್ಲಿ ಬಟ್ಟೆಗಳನ್ನು ಹರವಿ ಹಾಕಿದಂತೆ, ಚಿಕ್ಕಪೇಟೆಯಲ್ಲಿ ಸೀರೆಗಳ ಬೆಟ್ಟ ಪೇರಿಸಿದಂತೆ ಅಥವಾ ಕೆ.ಆರ್.ಮಾರ್ಕೆಟ್‍ನಲ್ಲಿ ಹೂಗಳ ಜಾತ್ರೆ ನಡೆಸಿದಂತೆ ಮುಂಬಯಿಯ ಒಪೆರಾ ಹೌಸ್‍ನಲ್ಲಿ ಜ್ಯುವೆಲ್ಲರಿ ಮಳಿಗೆಗಳದ್ದೇ ದಿಬ್ಬಣ. ಒಂದಕ್ಕಿಂತ ಒಂದು ಬಿಗುವಾದ, ಎತ್ತರವಾದ, ಭವ್ಯವಾದ ಆಭರಣದಂಗಡಿಗಳು ಇರುವ ಅತ್ಯಂತ ಪಾಶ್ ಜಾಗ ಇದು. ದಿನವೊಂದಕ್ಕೆ ಏನಿಲ್ಲೆಂದರೂ ಈ ಜಾಗದಲ್ಲಿ ಹತ್ತಿಪ್ಪತ್ತು ಕೋಟಿ ರುಪಾಯಿಗಳ ವ್ಯವಹಾರ ಚಕಾಚಕ್ ನಡೆದುಹೋಗುತ್ತದೆ. ಅದೆಷ್ಟು ಕಪ್ಪುದುಡ್ಡು ಇಲ್ಲಿನ ಝಗಮಗ ಚಿನ್ನದ ಹೊಳಪಲ್ಲಿ ಬಿಳುಪಾಗಿಹೋಗುತ್ತವೋ ಲೆಕ್ಕವಿಟ್ಟವರಾರು! ಹಾಗಾಗಿ, ಸಿಬಿಐ ದಾಳಿ ನಡೆದಿದೆ ಎನ್ನುವುದನ್ನು ಕೇಳಿದಾಗ ಇನಾಂದಾರರೇನೂ ಅಷ್ಟೊಂದು ಅಚ್ಚರಿಪಡಲಿಲ್ಲ. ಆದರೆ ಮುಂದಿನ ಕತೆ ಕೇಳಿದಮೇಲೆ ಮಾತ್ರ ಆಶ್ಚರ್ಯಚಕಿತರಾಗಿ, ತಕ್ಷಣ ತನ್ನ ಗಾಡಿಯನ್ನು ಒಪೆರಾ ಹೌಸ್ ಕಡೆ ಓಡಿಸಿದರು. ಮತ್ತಷ್ಟು ಓದು »