ವಿಷಯದ ವಿವರಗಳಿಗೆ ದಾಟಿರಿ

Archive for

23
ಜುಲೈ

ಒಳಗಣ್ಣು – 1 ( ಭಗವದ್ಗೀತೆಯನ್ನು ಯಾವ ಪ್ರಾಯದಲ್ಲಿ ಓದಬೇಕು? )

– ಸ್ವಾಮಿ ಶಾಂತಸ್ವರೂಪಾನಂದ

krishna-poster-FV90_lನಮ್ಮಲ್ಲೊಂದು ಅಭಿಪ್ರಾಯವಿದೆ. ಭಗವದ್ಗೀತೆ, ರಾಮಾಯಣ, ಮಹಾಭಾರತ, ಭಾಗವತ, ಉಪನಿಷತ್ತು ಇವೆಲ್ಲ ಪ್ರಾಯವಾದವರಿಗೆ. ಅಜ್ಜಂದಿರಿಗೆ. ಕೈಲಾಗದೆ ಕೂತವರಿಗೆ. ಊರುಗೋಲಿಲ್ಲದೆ ನಡೆದಾಡಲು ಆಗದ ಸ್ಥಿತಿಗೆ ತಲುಪಿದ ಮೇಲೆ ಇವೆಲ್ಲ ವೇದಾಂತಗಳು. ಅಲ್ಲಿಯವರೆಗೆ ನಮಗೆ ಧರ್ಮಗ್ರಂಥಗಳು ಬೇಕಾಗಿಲ್ಲ, ಅಂತ. ಒಮ್ಮೆ ನಾನು ಉತ್ತರಭಾರತದ ಪ್ರವಾಸದಲ್ಲಿದ್ದಾಗ ಒಂದು ಹಳ್ಳಿಯ ದೇವಸ್ಥಾನದಲ್ಲಿ ಪೂಜೆ ಮತ್ತು ಪ್ರವಚನ ಏರ್ಪಾಟಾಗಿತ್ತು. ಪೂಜೆಯ ಹೊತ್ತಿಗೆ ಊರಿನ ಹಲವು ತರುಣರು ಹಾಜರಿದ್ದರು. ಆದರೆ ಪೂಜೆಯ ಬಳಿಕ ಗೀತಾಪ್ರವಚನ ಎಂದಾದಾಗ ಅಲ್ಲಿದ್ದ ತರುಣರೆಲ್ಲ ಹೊರಟುಹೋಗಿ ನಡುವಯಸ್ಸು ದಾಟಿದ ಮಂದಿಯಷ್ಟೇ ಉಳಿದರು. ಹಾಗೇಕಾಯಿತು ಎಂದು ಅಲ್ಲಿದ್ದವರಲ್ಲಿ ಕೇಳಿದಾಗ “ಸತ್ಸಂಗ, ಪ್ರವಚನ ಇವೆಲ್ಲ ಮಕ್ಕಳಿಗೇಕೆ ಸ್ವಾಮಿ! ಅದನ್ನು ಕೇಳುವುದೇನಿದ್ದರೂ ಜೀವನದ ಎಲ್ಲ ವ್ಯಾಪಾರ ಮುಗಿಸಿ ಪರಲೋಕಕ್ಕೆ ಹೊರಡಲನುವಾದ ಮುದುಕರ ಕೆಲಸವಲ್ಲವೆ?” ಎಂದು ಹೇಳಿದರು. ಇನ್ನೊಂದು ಸಂದರ್ಭದಲ್ಲಿ, ಮುಂಬಯಿಯ ಮನೆಯೊಂದಕ್ಕೆ ಆಮಂತ್ರಿತನಾಗಿ ಹೋಗಿದ್ದೆ. ಮನೆ ಯಜಮಾನ ನನಗೆ ಅವರ ದೇವರ ಮನೆ ತೋರಿಸುತ್ತ, ಅಲ್ಲೇ ಪಕ್ಕದಲ್ಲಿ ಪೇರಿಸಿದ್ದ ಉದ್ಗ್ರಂಥಗಳನ್ನು ತೋರಿಸಿ, ಅವಕ್ಕೆ ಪ್ರತಿದಿನ ಪೂಜೆ ಮಾಡುತ್ತೇನೆ ಎಂದರು. “ಹೌದೆ? ಏನು ಪುಸ್ತಕಗಳವು?” ಎಂದು ಕೇಳಿದೆ. ನೋಡಿದರೆ ಬಹಳ ಹಳೆಯ ಕಾಲದ ಪುಸ್ತಕಗಳಂತೆ ಕಂಡವು. ಹಾಳೆ ವೃದ್ಧಾಪ್ಯದ ಕಾರಣದಿಂದ ಬೂದುಬಣ್ಣಕ್ಕೆ ತಿರುಗಿತ್ತು. ರಟ್ಟಿಗೂ ಮನುಷ್ಯನೊಬ್ಬನ ಆಯುಸ್ಸಿನಷ್ಟೇ ಪ್ರಾಯವಾಗಿರಬೇಕು! “ಇವು ರಾಮಾಯಣ, ಮಹಾಭಾರತ ಮತ್ತು ಭಾಗವತದ ಗ್ರಂಥಗಳು. ನನ್ನ ಅಜ್ಜ ಅವನ್ನು ಬಳಸುತ್ತಿದ್ದರಂತೆ. ನಂತರ ತಂದೆಯ ಕೈಗೆ ಬಂದವು. ಅಲ್ಲಿಂದ ನನಗೆ ಸಿಕ್ಕವು. ಮೂರು ತಲೆಮಾರಿನಿಂದ ಅವು ಹೀಗೆ ದೇವರ ಕೋಣೆಯಲ್ಲಿ ಪೂಜೆಗೊಳ್ಳುತ್ತಿವೆ” ಎಂದರಾತ. “ಓಹ್! ನೀವು ಇವನ್ನು ಅಭ್ಯಾಸ ಮಾಡಿದ್ದೀರೆಂದು ತುಂಬ ಖುಷಿಯಾಯಿತು” ಎಂದು ಹರ್ಷ ವ್ಯಕ್ತಪಡಿಸಿದೆ. “ಇಲ್ಲ ಇಲ್ಲ! ಇವೆಲ್ಲ ಸಂಸ್ಕೃತದಲ್ಲಿರುವ ಪುಸ್ತಕಗಳು! ನನಗೆ ಇಂಗ್ಲೀಷ್ ಮತ್ತು ಕೊಂಚ ಹಿಂದಿ ಬಿಟ್ಟರೆ ಮಿಕ್ಕ ಭಾಷೆಗಳ ಅಭ್ಯಾಸವಿಲ್ಲ. ಸಂಸ್ಕೃತವಂತೂ ನನ್ನ ಅಜ್ಜನ ಕಾಲಕ್ಕೇ ನಿಂತುಹೋಯಿತು. ಅವರು ಆಗಿನ ಕಾಲದ ಮೇಧಾವಿಗಳೊಂದಿಗೆ ಸಂಸ್ಕೃತದಲ್ಲಿ ಚರ್ಚೆ ಮಾಡುತ್ತಿದ್ದರಂತೆ. ತಂದೆಗೆ ಅಲ್ಪಸ್ವಲ್ಪ ಬರುತ್ತಿದ್ದಿರಬೇಕು. ನನಗಂತೂ ಸಂಸ್ಕೃತವನ್ನು ಸುಡುತಿನ್ನಲಿಕ್ಕೂ ಬರುವುದಿಲ್ಲ! ಇವೆಲ್ಲ ಹಳೆ ತಲೆಮಾರಿನ ವಸ್ತುಗಳೆಂದು ದೇವರ ಮನೆಯಲ್ಲಿಟ್ಟು ಪೂಜೆ ಮಾಡುತ್ತೇವೆ ಅಷ್ಟೆ! ನಿವೃತ್ತನಾದ ಮೇಲೆ ನಾನು ಮಹಾಭಾರತವೋ ರಾಮಾಯಣವೋ ಯಾವುದಾದರೊಂದು ಕೃತಿಯ ಇಂಗ್ಲೀಷ್ ಅನುವಾದವನ್ನು ಕೊಳ್ಳಬೇಕೆಂದಿದ್ದೇನೆ” ಎಂದರು ಆ ಪುಣ್ಯಾತ್ಮ. ನನಗೆ ಭ್ರಮನಿರಸನವಾದರೂ ಮತ್ತಷ್ಟು ಕುತೂಹಲ ಉಳಿದಿತ್ತು. “ಅದೇಕೆ ಯಾವುದಾದರೊಂದು ಕೃತಿ ಎನ್ನುತ್ತೀರಿ? ಎರಡೂ ಕೊಳ್ಳಬಹುದಲ್ಲ!” ಎಂದೆ ನಾನು. ಅದಕ್ಕೆ ಆ ಮನುಷ್ಯ ನಗುತ್ತ “ತಮಾಷೆ ಮಾಡ್ತಿದ್ದೀರಾ ಸ್ವಾಮೀಜಿ! ನಿವೃತ್ತನಾದ ಮೇಲೆ ನಮಗೆ ಎಷ್ಟು ಮಹಾ ಆಯುಷ್ಯ ಉಳಿದಿರುತ್ತೆ! ಹೆಚ್ಚೆಂದರೆ ಹತ್ತು ವರ್ಷ! ಅಷ್ಟರಲ್ಲಿ ಒಂದು ಗ್ರಂಥ ಓದಿ ಅರ್ಥೈಸಿಕೊಳ್ಳುವುದೇ ಕಷ್ಟದ ಮಾತು. ಅಂಥಾದ್ದರಲ್ಲಿ ಎರಡೆರಡು ಹೇಗೆ ಸಾಧ್ಯ? ಎರಡು ಪುಸ್ತಕ ಕೊಂಡು ಅವುಗಳಲ್ಲೊಂದನ್ನು ಓದಲು ಆಗದೇ ಹೋದರೆ ಆ ನಿರಾಸೆ ಮನಸ್ಸಲ್ಲಿ ಉಳಿದುಬಿಡುತ್ತದಲ್ಲವೆ?” ಎಂದು ಉತ್ತರಿಸಿದರು. ಮತ್ತಷ್ಟು ಓದು »