ವೈದ್ಯಕೀಯ ವಿದ್ಯಾಲಯಗಳಲ್ಲಿ ಕಲಿಸದ ವಿಷಯವೇನೆಂದರೆ……!!
– ಗುರುರಾಜ್ ಕೊಡ್ಕಣಿ, ಯಲ್ಲಾಪುರ
ಅಸಲಿಗೆ ನಾನೇಕೆ ವೈದ್ಯನಾಗಬೇಕೆಂದುಕೊಂಡಿದ್ದೆ ಎನ್ನುವುದು ನನಗೆ ನೆನಪೇ ಇಲ್ಲ. ಆದರೆ ವೈದ್ಯನಾದ ಮೇಲೆ ನನ್ನ ವರ್ತನೆ ಉಳಿದೆಲ್ಲ ವೈದ್ಯರಿಗಿಂತ ತೀರ ಭಿನ್ನವೇನಾಗಿರಲಿಲ್ಲ. ನನ್ನಲ್ಲೊಂದು ಹೆಮ್ಮೆಯಿತ್ತು. ನಾನೊಬ್ಬ ವೈದ್ಯನೆನ್ನುವ ಗರ್ವ ಮೀರಿದ ಅಹಂಕಾರವಿತ್ತು. ನನ್ನಲ್ಲಿದ್ದ ಅಹಮಿಕೆಗೆ ಮೊದಲ ಪೆಟ್ಟು ಬಿದ್ದಿದ್ದು ಸರಿಸುಮಾರು ಮೂವತ್ತು ವರ್ಷಗಳ ಹಿಂದೆ. ಅದೊಂದು ನಸುಕಿನ ಜಾವಕ್ಕೆ ಮಹಿಳೆಯೊಬ್ಬಳು ಮೂವತ್ತರ ಹರೆಯದ ತನ್ನ ಪತಿಯ ಶವವನ್ನು ನಮ್ಮ ಆಸ್ಪತ್ರೆಗೆ ತಂದಿದ್ದಳು. ತನ್ನ ಗಂಡ ತೀರಿಕೊಂಡಿದ್ದಾನೆಂಬ ಸತ್ಯವನ್ನು ಅರಗಿಸಿಕೊಳ್ಳಲಾಗದ ಆಕೆ, ನನ್ನ ಮೊಣಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡು ಬಿಕ್ಕುತ್ತ, “ಡಾಕ್ಟರ್, ನನ್ನ ಗಂಡ ಏಕೆ ಸತ್ತ.’? ಎಂದು ಪ್ರಶ್ನಿಸಿದಳು. ಅದೊಂದು ಪ್ರಶ್ನೆ ನಾನೊಬ್ಬ ದೊಡ್ಡ ವೈದ್ಯನೆನ್ನುವ ಗರ್ವವನ್ನು ಒಂದೇ ಪೆಟ್ಟಿಗೆ ಮುರಿದುಹಾಕಿತ್ತು. ಆಕೆ ತನ್ನ ಪತಿ’ಹೇಗೆ’ಸತ್ತ ಎಂದು ಪ್ರಶ್ನಿಸಿದ್ದರೆ ನಾನು ಆಕೆಗೆ ಹತ್ತಾರು ಕಾರಣಗಳನ್ನು ಕೊಡಬಹುದಿತ್ತು. ಅವನಿಗೆ ಹೃದಯಾಘಾತವಾಗಿದೆಯೆಂದೋ ಅಥವಾ ಅವನ ರಕ್ತದೊತ್ತಡ ಕುಸಿದಿದ್ದರಿಂದ ಸತ್ತನೆಂದೋ ಸುಳ್ಳುಹೇಳಿಬಿಡಬಹುದಾಗಿತ್ತು. ಆದರೆ ಆಕೆ ಕೇಳಿದ್ದು ತನ್ನ ಗಂಡ ‘ಏಕೆ’ ಸತ್ತ ಎನ್ನುವ ಪ್ರಶ್ನೆ. ನಿಜಕ್ಕೂ ಬಲು ಕ್ಲಿಷ್ಟ ಪ್ರಶ್ನೆಯದು. ಆತನಿಗೆ ಕೇವಲ ಮೂವತ್ತು ಚಿಲ್ಲರೆ ವರ್ಷಗಳಷ್ಟು ವಯಸ್ಸು. ಆತನ ರಕ್ತದೊತ್ತಡ, ಸಕ್ಕರೆಯ ಮಟ್ಟ ತೀರ ಸಾಮಾನ್ಯವಾಗಿದ್ದವು. ಹೃದಯವೂ ಗಟ್ಟಿಮುಟ್ಟಾಗಿಯೇ ಇತ್ತು. ಆದರೂ ಆತ ಏಕೆ ಸತ್ತ ಎನ್ನುವ ಪ್ರಶ್ನೆಗೆ ನನ್ನ ಬಳಿ ಉತ್ತರವಿರಲಿಲ್ಲ. ನಿಜ ಹೇಳಬೇಕೆಂದರೆ ಅಂಥದ್ದೊಂದು ಪ್ರಶ್ನೆಗೆ ಉತ್ತರ ವೈದ್ಯಕೀಯ ಲೋಕಕ್ಕೂ ಇದುವರೆಗೆ ಸಿಕ್ಕಿಲ್ಲ. ಅದೊಂದು ಪ್ರಶ್ನೆ ನನ್ನನ್ನು ತುಂಬ ಕಾಲ ಬೆನ್ನುಬಿಡದೇ ಕಾಡಿತ್ತು. ‘ಏಕೆ’ ಎನ್ನುವ ಸಂಕೀರ್ಣ ಪ್ರಶ್ನೆಯೇ ನನ್ನನ್ನು ತತ್ವಶಾಸ್ತ್ರ, ಧರ್ಮ, ವೇದಾಂತಗಳತ್ತ ಆಕರ್ಷಿಸಿತ್ತು. ಅಂತಹ ಸವಾಲಿನ ಜವಾಬು ಹುಡುಕುತ್ತ ಹೊರಟ ನನಗೆ ಆಧುನಿಕ ವೈದ್ಯ ಲೋಕದ ದೌರ್ಬಲ್ಯಗಳ ಪರಿಚಯವೂ ಆಯಿತು” ಮತ್ತಷ್ಟು ಓದು