ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 4, 2016

3

ಮನೆಯೊಂದು ಮೂರು ಬಾಗಿಲು…..

‍ನಿಲುಮೆ ಮೂಲಕ

– ಮು ಅ ಶ್ರೀರಂಗ

28_ramya_1600129f೧. ಕೃಷ್ಣರಾಜಸಾಗರ ಆಣೆಕಟ್ಟು ಕಟ್ಟುವಾಗಲಿಂದ ಹಿಡಿದು ಇಲ್ಲಿಯತನಕ  ನೂರು ವರ್ಷಗಳಿಗೂ ಮೀರಿ ಕಾವೇರಿ ನದಿ ನೀರಿನ ಹಂಚಿಕೆ ಮತ್ತಿತರ ವಿಷಯಗಳ ಗಲಾಟೆ ತಮಿಳುನಾಡು (ಅಂದಿನ ಮದ್ರಾಸ್ ರಾಜ್ಯ) ಮತ್ತು ನಮ್ಮ ನಡುವೆ ಇದೆ. ಶಾಸಕಾಂಗ, ನ್ಯಾಯಾಂಗ, ಒಕ್ಕೂಟ ವ್ಯವಸ್ಥೆ, ಕೇಂದ್ರ ಸರ್ಕಾರ ಹೀಗೆ ಅನೇಕ ವಿಷಯಗಳು ಹೆಣೆದುಕೊಂಡಿರುವ ಒಂದು ಸಮಸ್ಯೆ ಸಿನಿಮಾನಟರ, ಬುದ್ಧಿಜೀವಿಗಳ, ಸಾಹಿತಿಗಳ ಮೆರವಣಿಗೆ, ಅಬ್ಬರದ, ಆಕ್ರೋಶದ ಒಂದು ಹೇಳಿಕೆಯಿಂದ ಬಗೆ ಹರಿಯುತ್ತವೆ ಎಂಬುದೇ ಹಾಸ್ಯಾಸ್ಪದ ಸಂಗತಿ. ಕೆಲವು ಪ್ರಚಾರಪ್ರಿಯ ಸಾಹಿತಿಗಳು ಗೋಕಾಕ್ ಚಳುವಳಿಯ ಉದಾಹರಣೆ ಕೊಟ್ಟು ಈಗಲೂ ಹಾಗೆ ಮಾಡಿದರೆ ರಾತ್ರಿ ಕಳೆದು ಬೆಳಗಾಗುವುದರವೊಳಗೆ ಕಾವೇರಿ ಸಮಸ್ಯೆ ಬಗೆಹರಿಸಬಹುದು ಎಂಬ ಹೇಳಿಕೆಕೊಡುತ್ತಿದ್ದಾರೆ. ಆದರೆ ಗೋಕಾಕ್ ವರದಿಯ ಅನುಷ್ಠಾನ ಕಟ್ಟುನಿಟ್ಟಾಗಿ ಜಾರಿಯಾಗಿದೆಯೇ? ಇತ್ತೀಚಿಗೆ ತಾನೇ ಸುಪ್ರೀಂ ಕೋರ್ಟಿನಲ್ಲಿ ಕನ್ನಡ ಮಾಧ್ಯಮ ಕಡ್ಡಾಯ ಮಾಡುವುದು ತಪ್ಪು ಎಂದು ಹೇಳಿ ‘ಮಾತೃ ಭಾಷೆ’ಗೆ ನಮ್ಮ ಸಂವಿಧಾನದ ಪ್ರಕಾರ ಬೇರೆ ವ್ಯಾಖ್ಯಾನ ನೀಡಿದೆ. ಖಾಸಗಿ ಶಾಲೆಗಳ ಒಕ್ಕೂಟದ ವಾದಕ್ಕೆ ಜಯ ಸಿಕ್ಕಿದೆ. ಸರ್ಕಾರಿ ಕನ್ನಡ ಮಾಧ್ಯಮದ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಖಾಲಿ ಹೊಡೆಯುತ್ತಿವೆ; ಮುಚ್ಚುತ್ತಿವೆ ಅಥವಾ ಮೂರ್ನಾಲಕ್ಕು ಶಾಲೆಗಳನ್ನು ಒಟ್ಟುಗೂಡಿಸಿ ಹಾಗೂ ಹೀಗೂ ಉಸಿರಾಡುವಂತೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಪ್ರಥಮ ಆದ್ಯತೆ ಕೊಡಬೇಕು ಎಂಬ ಮಹಿಷಿ ವರದಿಯ ಜಾರಿಯೂ ಪೂರ್ಣಪ್ರಮಾಣದಲ್ಲಿ ಜಾರಿಯಾಗಲು ಸಂವಿಧಾನ, ನ್ಯಾಯಾಂಗದ ವಿಧಿಗಳ ಪ್ರಕಾರ ಆಗುತ್ತಿಲ್ಲ. ಇದೇನು ನಮ್ಮನ್ನಾಳುತ್ತಿರುವ, ಆಳಿದ  ಸರ್ಕಾರಗಳ ‘ರಾಜಕೀಯ ಇಚ್ಚಾಶಕ್ತಿ’ಯ ಕೊರತೆಯೋ ಅಥವಾ ಆ ವರದಿಗಳಲ್ಲಿನ ಕೊರತೆಯೋ ತಿಳಿಯದಾಗಿದೆ.

೨. ಇನ್ನು ಪ್ರಕಾಶ್ ರೈ  ಅವರ ವಿಚಾರ- ರೈ ಅವರಂತಹವರನ್ನು  ಕನ್ನಡ ಚಿತ್ರರಂಗಂದ ಅತಿರಥ ಮಹಾರಥರಂತಹ ನಿರ್ಮಾಪಕರು,ನಿರ್ದೇಶಕರು ಕಡೆಗಣಿಸಿದಾಗ ಅವರಿಗೆ ನೆಲೆ ಕೊಟ್ಟಿದ್ದು ತಮಿಳು ಮತ್ತು ತೆಲುಗು ಚಿತ್ರರಂಗ. ಅಲ್ಲಿ ಹೆಸರು ಮಾಡಿದ ಮೇಲೆ ಕನ್ನಡದಲ್ಲಿ  ನಟನೆ ಜತೆಗೆ ಸಿನಿಮಾ ನಿರ್ಮಾಣ,ನಿರ್ದೇಶನಕ್ಕೆ ಬಂದರು. ಮಚ್ಚು,ಲಾಂಗು, ರಕ್ತದ ಕೋಡಿ ಹರಿಸುವ ಕನ್ನಡ ಚಿತ್ರಗಳ  ಸಂತೆಯಲ್ಲಿ ಸದಭಿರುಚಿಯ ಉತ್ತಮ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಅವರು ಕರ್ನಾಟಕದವರು ಎಂದ ಮಾತ್ರಕ್ಕೆ ಕಾವೇರಿ ಬಗ್ಗೆ ಪ್ರಶ್ನೆ ಕೇಳುವಾಗ ಆ ವಾಹಿನಿಯ ಪತ್ರಕರ್ತೆಗೆ ರೈ ಅವರ ಈ ಹಿನ್ನೆಲೆ ಗೊತ್ತಿರಬೇಕಿತ್ತು. ಆಕೆಗೆ ಗೊತ್ತಿಲ್ಲ, ಏನೋ ಆಯಿತು ಎಂದು ಆ ವಾಹಿನಿಯ ಸಂಪಾದಕರಿಗೆ ಅವಶ್ಯವಾಗಿ ಗೊತ್ತಿರಬೇಕು; ಗೊತ್ತಿದೆ. ಆದರೆ  ತಮ್ಮ’ego’ ನ ಪ್ರದರ್ಶನಕ್ಕಾಗಿ ಪ್ಯಾನೆಲ್ ಚರ್ಚೆ ಮಾಡಿ ರೈ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಅವಶ್ಯಕತೆ ಇರಲಿಲ್ಲ.

೩. ಬಿ ಸಿ ಸಿ ಐ ನಂತಹ ಅತಿ ದೊಡ್ಡ ಸಂಸ್ಥೆಯೇ ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜಕೀಯ ಸಮಸ್ಯೆಯಿಂದ ಪಾಕ್ ಜೊತೆ ಪಾಕ್ ನೆಲದಲ್ಲಿ ಕ್ರಿಕೆಟ್ ಆಡುವುದನ್ನು ಬಿಟ್ಟು ಸುಮಾರು ವರ್ಷಗಳಾಯಿತು. ತಟಸ್ಥ ದೇಶದಲ್ಲಿ ಕ್ರಿಕೆಟ್ ಆಡುತ್ತಿದೆ. ಅಂತಹುದರಲ್ಲಿ ಮಾಜಿ ಸಂಸದೆಯೂ ಆಗಿರುವ ರಮ್ಯಾ ಅವರು ಆ ರೀತಿ  ಹೇಳಿಕೆ ಕೊಡುವ ಅಗತ್ಯವಿತ್ತೆ ?. ವಿವಾದವೆದ್ದ ನಂತರ ನಾನು ಹಾಗೆ ಹೇಳಿರಲಿಲ್ಲ; ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದರು. ಆಡಿಯೋ, ವೀಡಿಯೋ ಇರುವಾಗ ಆ ರೀತಿ ಹೇಳಿದರೆ ಯಾರಾದರೂ ನಂಬುತ್ತಾರೆಯೇ? ವಾಹಿನಿಗಳು ಸಿಕ್ಕಿದೇ ಚಾನ್ಸ್ ಎಂದು ಎರಡು ಮೂರು ದಿನ ಆ ಸುದ್ದಿಯನ್ನು ಬಿತ್ತರಿಸಿದವು. ಎರಡು ದೇಶಗಳ ನಡುವೆ ಕೆಲವಾರು ಕಾರಣಗಳಿಂದ ರಾಜಕೀಯ ಪರಿಸ್ಥಿತಿ ಹದಗೆಟ್ಟ ಮಾತ್ರಕ್ಕೆ ಒಂದು ದೇಶ ನರಕ ಮತ್ತೊಂದು ಸ್ವರ್ಗ ಅಲ್ಲ. ಅಲ್ಲಿಯ ಜನಗಳೂ ನಮ್ಮಂತಹವರೇ. ಯಾರು ಅಲ್ಲವೆನ್ನುತ್ತಾರೆ? ಆದರೆ ಮಾತಾಡುವಾಗ ನಮಗೆ ಎಚ್ಚರ ಇರಬೇಕು. ರಮ್ಯಾ ಪ್ರಕರಣ ಮರೆತುಹೋದಂತೆ, ರೈ ಪ್ರಕರಣವೂ ಕಾಲ ಸರಿದಂತೆ ಮರೆಯುತ್ತದೆ.

3 ಟಿಪ್ಪಣಿಗಳು Post a comment
  1. ಆಕ್ಟೋ 4 2016

    ನಿಮ್ಮ ತರ್ಕ ಸರಿಯಾಗಿದೆ ಸರ್

    ಉತ್ತರ
  2. Goutham
    ಆಕ್ಟೋ 6 2016

    ಪ್ರಕಾಶ್ ರೈ ಅವರಿಗೆ ಪ್ರಶ್ನೆ ಕೇಳಿದ ಪತ್ರಕರ್ತೆಗೆ ಇರುವ ಮನಸ್ಥಿತಿಯುಳ್ಳ ಶಕ್ತಿಯೇ ರಮ್ಯ ಅವರ ವಿರುದ್ಧ ವಿವಾದ ಸೃಷ್ಟಿಸಿತು.

    ಉತ್ತರ
  3. Shripad
    ಆಕ್ಟೋ 8 2016

    ನೀವು ಹೇಳಿದ್ದು ಅಕ್ಷರಶಃ ನಿಜ. ಕರ್ನಾಟಕದಲ್ಲಿ ಸದ್ಯ ಸರಿಯಾದ ಮಾರ್ಗದರ್ಶನ ಮಾಡಬಲ್ಲ ಯಾವ ಮಾರ್ಗವೂ ಕಾಣುತ್ತಿಲ್ಲ. ಯೋಗ್ಯರು ಮೌನಕ್ಕೆ ಶರಣಾಗಿದ್ದರೆ ಹುಂಬರು ಹುಚ್ಚರು ಅವಿವೇಕಿಗಳು ಮೆರೆಯುತ್ತಿದ್ದಾರೆ. ಶಿಕ್ಷಣ ಪ್ರಮಾಣ ಪತ್ರ ನೀಡಲಷ್ಟೇ ಸೀಮಿತ!

    ಉತ್ತರ

Leave a reply to Shripad ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments