ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 10, 2016

7

ಕಾವೇರಿ = ಕನ್ನಡ/ಕನ್ನಡಿಗ?

‍ನಿಲುಮೆ ಮೂಲಕ

– ಚೇತನಾ ಹೆಗಡೆ

ಕಾವೇರಿ = ಕನ್ನಡ/ಕನ್ನಡಿಗ?

river_cauvery_enಈ ಪ್ರಶ್ನೆ ನನ್ನನ್ನು ಚಿಕ್ಕಂದಿನಿಂದಲೂ ಕಾಡಿದೆ. ಕಾರಣ ನಮ್ಮ ಸಿನಿಮಾಗಳು ಮತ್ತು ಅವುಗಳ ಹಾಡುಗಳು. ಕನ್ನಡ ಭಾಷೆ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದ ಯಾವುದೇ ಹಾಡು ಇದ್ದರೂ ಅದರಲ್ಲಿ ಕಾವೇರಿಯ ಉಲ್ಲೇಖ ಪಕ್ಕಾ. ಯಾಕೆ ಕಾವೇರಿ ನದಿಗೆ ಇಷ್ಟೊಂದು ಪ್ರಾಮುಖ್ಯತೆ ಎಂಬುದು ದೇವರಾಣೆಗೂ ಅರ್ಥವಾಗಿರಲಿಲ್ಲ.

ಸತ್ಯ ಹೇಳುತ್ತೇನೆ, ಅಪ್ಪಟ ಮಲೆನಾಡಾದ ಶಿರಸಿಯಲ್ಲಿ ಹುಟ್ಟಿ ಬೆಳೆದ ನನಗೆ ನೀರಿನ ಕೊರತೆ ಎಂಬುದು ಅಷ್ಟಾಗಿ ಕಾಡಿರಲಿಲ್ಲ. ಪ್ರತೀ ಮನೆಯೂ ಒಂದೊಂದು ಸಿಹಿನೀರಿನ ಬಾವಿ ಹೊಂದಿರುವುದು ವಿಶೇಷವೇ ಅಲ್ಲ. ಹಳ್ಳಿಗಳಲ್ಲಿ ಮನೆಯ ಹಿಂದುಗಡೆಯೇ ಗುಡ್ಡದಿಂದ ಇಳಿದು ಬರುವ ನೀರಿನ ಝರಿಗಳು ಬಹು ಸಾಮಾನ್ಯವಾಗಿದ್ದ ಕಾಲ. ಹಾಗಾಗಿ ಉತ್ತರಕನ್ನಡ ಜಿಲ್ಲೆಯಲ್ಲಿ ಹುಟ್ಟಿದ/ಹರಿಯುವ ನದಿಗಳಾದ ಅಘನಾಶಿನಿ, ಶರಾವತಿ, ಬೇಡ್ತಿ, ಕಾಳಿ, ವರದಾ ಮುಂತಾದ ಯಾವ ನದಿಯ ನೀರನ್ನೂ ಕುಡಿದು ಬೆಳೆದವಳಲ್ಲ ನಾನು… ಎಲ್ಲೋ ಪ್ರವಾಸಕ್ಕೆ ಹೋದಾಗ ಒಂದೆರಡು ಬೊಗಸೆ ನೀರು ಕುಡಿದದ್ದು ಬಿಟ್ಟು!! ನನ್ನ PUC ಮುಗಿಯುವವರೆಗೂ ನಮ್ಮ ಮನೆಯಿದ್ದ ಬಡಾವಣೆಯಲ್ಲಿ ನಲ್ಲಿ ನೀರಿನ ವ್ಯವಸ್ಥೆಯೂ ಇರಲಿಲ್ಲ. ಆಮೇಲೆ 15-20 ಮನೆಗಳಿಗೆ ಒಂದರಂತೆ ಬೀದಿಯಲ್ಲಿ ನಲ್ಲಿ ವ್ಯವಸ್ಥೆ ಬಂತು. ಅದೂ ಕೂಡ ಶಿರಸಿಯ ಸಮೀಪ ಹರಿಯುವ ಕೆಂಗ್ರೆ ಹೊಳೆಯ ನೀರು!! ಬೇಸಿಗೆಯಲ್ಲಿ ಗಿಡಗಳಿಗೆ, ಬಟ್ಟೆ-ಪಾತ್ರೆಗಳಿಗೆ ಬಳಸುತ್ತಿದ್ದೆವು ಅಷ್ಟೇ. ಪೋಸ್ಟ್ ಗ್ರಾಜುಯೇಷನ್ ಗೆ ಧಾರವಾಡಕ್ಕೆ ಹೋದಮೇಲೆ ಕುಡಿದದ್ದು ಹುಬ್ಬಳ್ಳಿಯ ಉಣಕಲ್ ಕೆರೆಯ ನೀರು! ಬೆಂಗಳೂರಿಗೆ ಬಂದ ಮೇಲೆ ಬಾಡಿಗೆ ಮನೆ ಹುಡುಕುವಾಗ ಓನರ್ ಗಳೇ “ಕಾವೇರಿ ಮನೆಯೊಳಗೆ ಬರಲ್ಲ, ಆಚೆ ಇರೋ tap ನಲ್ಲಿ ಹಿಡ್ಕೋಬೇಕು” ಎಂದೋ, ಅಥವಾ “ಈ ಏರಿಯಾದಲ್ಲಿ ಕಾವೇರಿ ಬರಲ್ಲ “ ಎಂದೋ ಹೇಳುವಾಗ “ಅಯ್ಯೋ, ಕಾವೇರಿ ಯಾಕೆ ಬೇಕು?” ಎಂದುಕೊಂಡಿದ್ದೇ ಹೆಚ್ಚು. ಆಮೇಲೆ ಇಲ್ಲಿಯ ಬೋರೆವೆಲ್ ನೀರಿನ ಹಣೆಬರಹ ಗೊತ್ತಾದರೂ ಕಾವೇರಿ ನೀರು ಬರುವ ಸಮಯಕ್ಕೆ ಮನೆಯಲ್ಲಿರಲು ಆಗದಂಥ ಆಫೀಸ್ ಟೈಮ್ ನಿಂದಾಗಿ ಕಾವೇರಿ ನೀರು ಕುಡಿದದ್ದು ಅಷ್ಟರಲ್ಲೇ ಇದೆ. ಆದರೆ, ಬೆಂಗಳೂರು, ಮಂಡ್ಯ, ಮೈಸೂರು ಭಾಗದ ಜನರ ಕಾವೇರಿಯ ಮೇಲಿನ ಅವಲಂಬನೆ ಅರ್ಥವಾಯಿತು.

ಆದರೂ ಸಹ ಕಾವೇರಿಯನ್ನು ಕನ್ನಡತನಕ್ಕೆ ಸಮೀಕರಿಸುವ ಕೆಲವು ಜನರ ಧೋರಣೆಯ ಬಗ್ಗೆ ನನ್ನ ವಿರೋಧವಿದೆ. ಬೀದರ್, ಗುಲ್ಬರ್ಗ, ಬಳ್ಳಾರಿಯಿಂದ ಹಿಡಿದು ಮೈಸೂರು, ಕೊಡಗು, ಚಾಮರಾಜನಗರಗಳವರೆಗೆ ಹಬ್ಬಿರುವ ಕರ್ನಾಟಕದ ಎಲ್ಲ ಜಿಲ್ಲೆಗಳ ಜನರೂ ಕಾವೇರಿ ನೀರನ್ನೇ ಕುಡಿಯುತ್ತಾರೆಯೇ? ಇಲ್ಲ ಎಂದ ಮಾತ್ರಕ್ಕೆ ಅವರೆಲ್ಲ ಕನ್ನಡಿಗರೇ ಅಲ್ಲವೇ? ತಲೆತಲಾಂತರದಿಂದ ಕರ್ನಾಟಕದಲ್ಲೇ ಹುಟ್ಟಿ, ಬೆಳೆದು ಕನ್ನಡ ಬಿಟ್ಟು ಬೇರೇನನ್ನೂ ಮಾತಾಡಲು ಬಾರದ ಅದೆಷ್ಟು ಕನ್ನಡಿಗರಿಲ್ಲ? ತುಂಗಾ, ಭದ್ರ, ಘಟಪ್ರಭಾ, ಮಲಪ್ರಭಾ, ಶರಾವತಿ, ಶಾಲ್ಮಲಾ, ಕಾಳಿ, ಅಘನಾಶಿನಿ, ನೇತ್ರಾವತಿ, ಕೃಷ್ಣಾ ಇವೆಲ್ಲ ಕರ್ನಾಟಕದಲ್ಲಿ ಹರಿಯುವ ನದಿಗಳಲ್ಲವೇ? ಆಯಾ ಭಾಗದ ಜನರು ಅವುಗಳ ಮೇಲೆಯೇ ಅವಲಂಬಿತರಾಗಿಲ್ಲವೇ? ಹಾಗಿದ್ದ ಮೇಲೆ ಉಳಿದೆಲ್ಲ ನದಿಗಳಿಗಿಂತ ಕಾವೇರಿಗೆ ಮಾತ್ರ ಯಾಕೆ ಪ್ರಾಶಸ್ತ್ಯ? ಕೇವಲ ಅಧಿಕಾರ ಕೇಂದ್ರವಾಗಿರುವ ಬೆಂಗಳೂರು ಮತ್ತು ಸಮೀಪದ ಮಂಡ್ಯ, ಮೈಸೂರುಗಳಿಗೆ ಆಸರೆಯೆಂದೇ? ನಾನೂ ಒಪ್ಪುತ್ತೇನೆ, ನಮ್ಮ ಜನರಿಗೇ ನೀರಿಲ್ಲದಿರುವಾಗ ಬೇರೆ ರಾಜ್ಯಕ್ಕೆ ನೀರು ಬಿಡುವುದರ ಬಗ್ಗೆ ಯೋಚಿಸಬೇಕು, ಸಮಸ್ಯೆ ಬಗೆಹರಿಸಬೇಕು. ಇದು ಪಕ್ಕಾ ಆಡಳಿತಾತ್ಮಕ ಸಮಸ್ಯೆ. ಯಾರೋ ಜನ ಸಾಮಾನ್ಯರು, ಸೆಲೆಬ್ರಿಟಿಗಳು ಕುಳಿತು ಮಾತಾಡಿದರೆ ಬಗೆಹರಿಯುವುದಿಲ್ಲ. ಅಂದಮೇಲೆ ಕಾವೇರಿಯ ಪರವಾಗಿ ಮಾತಾಡದೇ ತಟಸ್ಥವಾಗಿರುವ ಜನರನ್ನು ‘ಕನ್ನಡಿಗರೇ ಅಲ್ಲ’ ಅಥವಾ ‘ಕನ್ನಡ ದ್ರೋಹಿ’ ಎಂದೇಕೆ ಬಗೆಯಬೇಕು?

ಈಗ ಇದನ್ನೆಲ್ಲ ಬರೆಯಲು ಕಾರಣ – ಇತ್ತೀಚೆಗೆ ಜನಶ್ರೀ ಚಾನೆಲ್ ನವರು ನಟ/ನಿರ್ದೇಶಕ ಪ್ರಕಾಶ್ ರೈ ಬಗ್ಗೆ ಎಬ್ಬಿಸಿದ ಗದ್ದಲ. ಕಾವೇರಿಯ ಬಗ್ಗೆ ಅಭಿಪ್ರಾಯ ಕೇಳಿದ ನಿರೂಪಕಿಗೆ ಪ್ರಕಾಶ್ ಮೊದಲು ಸಮಾಧಾನದಲ್ಲೇ ಉತ್ತರಿಸಿದ್ದಾರೆ – “ ಇದು ಗಂಭೀರ ವಿಷಯ, ಚರ್ಚೆಗೆ ಇದು ವೇದಿಕೆಯಲ್ಲ” ಎಂದು. ತಮ್ಮ ಸಿನಿಮಾದ ಪ್ರಮೋಷನ್ ಗೆ ಕಾರ್ಯಕ್ರಮ ಕೊಡಲು ಬಂದ ಅವರು ತಮ್ಮ ಕೆಲಸಕ್ಕೆ ಮಾತ್ರ ಪ್ರಾಮುಖ್ಯತೆ ಕೊಡುವುದು ಸಹಜ. ಅಷ್ಟಾಗಿಯೂ ನಿರೂಪಕಿ ಮತ್ತೆ ಮತ್ತೆ ಅದನ್ನೇ ಕೇಳಿದಾಗ ಅವರು ಸಿಟ್ಟಾದರು. ಆದರೆ ಈ ಚಾನೆಲ್ ನವರು ಮಾಡಿದ್ದೇನು? “ಕಾವೇರಿ ನೀರು ಕುಡಿದ ಕನ್ನಡಿಗ ಪ್ರಕಾಶ್ ರೈ ಇಂದ ಕನ್ನಡಕ್ಕೆ ದ್ರೋಹ” ಎಂದು heading ಕೊಟ್ಟು ದಿನಗಟ್ಟಲೇ ಬ್ರೇಕಿಂಗ್ ನ್ಯೂಸ್, ಪ್ಯಾನೆಲ್ ಡಿಸ್ಕಶನ್ ಮಾಡಿ ತಾವೆಷ್ಟು ಚೀಪ್ ಎಂದು ತೋರಿಸಿಕೊಂಡರು. ಜನಶ್ರೀ ಹೆಡ್ ಆದ ಅನಂತ್ ಚಿನಿವಾರ್ ಅವರು “ಪ್ರಕಾಶ್ ಅಂಥ ಸೆಲೆಬ್ರಿಟಿ ನಮಗೆ ಸಿಕ್ಕಾಗಲೇ ನಾವು ಜವಾಬ್ದಾರಿಯುತ ಪ್ರಶ್ನೆ ಕೇಳಬೇಕು” ಅಂದು ಪತ್ರಿಕೆಯೊಂದರಲ್ಲಿ ತಮ್ಮನ್ನು ಸಮರ್ಥಿಸಿಕೊಂಡರು. ಹಾಗಿದ್ದರೆ, ನಿರೂಪಕಿ ಪ್ರಕಾಶ್ ಬಳಿ ಮಹದಾಯಿ ಬಗ್ಗೆ ಏಕೆ ಕೇಳಲಿಲ್ಲ? ಉತ್ತರ ಸ್ಪಷ್ಟ – ತಮಿಳಿನಲ್ಲೇ ಮೇಲೆಬಂದ ಪ್ರಕಾಶ್ ರನ್ನು ಇಕ್ಕಟ್ಟಿಗೆ ಸಿಲುಕಿಸುವುದೇ ಉದ್ದೇಶ. ಪರ/ವಿರೋಧ ಏನೇ ಹೇಳಿದರೂ TRP ಗೋಸ್ಕರ ಏನೋ ಒಂದು ಪ್ಯಾನೆಲ್ ಡಿಸ್ಕಶನ್ ಮಾಡಲು ಸಿದ್ಧವಾಗಿಯೇ ಇದ್ದವರು ಚಾನೆಲ್ ನವರು.

ಜನಶ್ರೀಯವರು ಈ ವಿವಾದ ಎಬ್ಬಿಸಲು ಕೊಟ್ಟ heading ಬಗ್ಗೆಯೇ ನನಗೆ ತಕರಾರಿದೆ. ನನಗೆ ತಿಳಿದಮಟ್ಟಿಗೆ ಪ್ರಕಾಶ್ ರೈ ದಕ್ಷಿಣ ಕನ್ನಡ ಜಿಲ್ಲೆಯವರು. ಮತ್ತು ಅಲ್ಲಿ ಕಾವೇರಿ ನೀರು ಹರಿಯುವುದಿಲ್ಲ, ಕಾವೇರಿ ನೀರಿನ ಸಪ್ಲೈ ಕೂಡ ಇಲ್ಲ !! 1990-92ರ ಸಮಯ. ‘ಗುಡ್ಡದ ಭೂತ’ ಧಾರಾವಾಹಿಯಿಂದ ಜನರಿಗೆ ಪ್ರಕಾಶ್ ರೈ ಮುಖ ಪರಿಚಯವಾಗಿತ್ತು ಅಷ್ಟೇ. ಆ ಸಮಯದಲ್ಲಿ ‘ಭವ್ಯ ಭಾರತ’ ಎಂಬ ಕನ್ನಡ ಸಿನಿಮಾದ ಶೂಟಿಂಗ್ ಶಿರಸಿಯಲ್ಲಿ ನಡೆಯುತ್ತಿತ್ತು. (ಎಷ್ಟು ಜನ ಈ ಚಿತ್ರದ ಹೆಸರು ಕೇಳಿದ್ದಾರೋ ಗೊತ್ತಿಲ್ಲ!). ಪ್ರಭಾಕರ್, ವಿನಯಾ ಪ್ರಸಾದ್, ತಾರಾ, ಅವಿನಾಶ್ ಎಲ್ಲ ಇದ್ದ ಈ ಸಿನೆಮಾದಲ್ಲಿ ಪ್ರಕಾಶ್ ರೈ ಕೂಡ ಇದ್ದರು. ದೇವರಾಣೆ ಹೇಳುತ್ತೇನೆ – ನಮ್ಮ ಶಾಲೆಯ ಮುಂದೆಯೇ ನಡೆಯುತ್ತಿದ್ದ ಶೂಟಿಂಗ್ ನೋಡಲು ಸೇರುತ್ತಿದ್ದ ಜನರಿಗೆ (ನನ್ನನ್ನೂ ಸೇರಿಸಿ) ಆಕರ್ಷಣೆ ಪ್ರಭಾಕರ್, ತಾರಾ ಮತ್ತಿತರರೇ ಹೊರತು ಪ್ರಕಾಶ್ ಅವರನ್ನು ನೋಡುವವರೂ ಇರಲಿಲ್ಲ. ಅಂತ ಪರಿಸ್ಥಿತಿಯಲ್ಲಿದ್ದ ಅವರು ಸ್ವಂತ ಪ್ರತಿಭೆಯಿಂದ ಬೆಳೆದರು. ತಮಿಳು/ತೆಲುಗು ಚಿತ್ರರಂಗದಲ್ಲಿ ಮಿಂಚಿದರು. ಕನ್ನಡ ಚಿತ್ರರಂಗದಲ್ಲಿ ಅವರು ಸೈಕಲ್ ಹೊಡೆಯುತ್ತಿದ್ದ ದಿನಗಳಲ್ಲಿ ಈಗ ಬೊಬ್ಬೆ ಹಾಕುವ ಸಾ.ರಾ. ಗೋವಿಂದು ಅಥವಾ ಅವರಂಥ ‘ಉಟ್ಟು ಓರಾಟಗಾರರು’ ಎಲ್ಲಿದ್ದರು? ಈಗ ಬಾಯಿಗೆ ಬಂದಂತೆ ಮಾತನಾಡುವುದು ಹೊಟ್ಟೆಕಿಚ್ಚಲ್ಲದೇ ಇನ್ನೇನು? ಕನ್ನಡ ಸಿನೆಮಾದಲ್ಲಿ ಚಿಕ್ಕ-ಪುಟ್ಟ role ಗಳಲ್ಲಿ ಅಭಿನಯಿಸುವಾಗ ಬೆಂಗಳೂರಿನ ಬಾಡಿಗೆ ಮನೆಯಲ್ಲಿ (ಸ್ವಂತ ಮನೆ ಮಾಡುವಷ್ಟು ದುಡ್ಡು ಖಂಡಿತಾ ಅವರ ಬಳಿ ಆಗ ಇದ್ದಿರಲಿಕ್ಕಿಲ್ಲ ಬಿಡಿ) ಇರುವಷ್ಟು ಸಮಯ ಕಾವೇರು ನೀರು ಕುಡಿದಿರಬಹುದು ಪ್ರಕಾಶ್ ರೈ. ಅಥವಾ ನನ್ನಂತೆ ಅವರಿಗೆ ಕಾವೇರಿ ನೀರು ಬರುವ ಸಮಯ ಮಿಸ್ಸಾಗಿರಲೂಬಹುದು !! ಅಂದಮೇಲೆ “ಕಾವೇರಿ ನೀರು ಕುಡಿದ ಕನ್ನಡಿಗ” ಅವರು ಹೇಗಾದಾರು? ಕನ್ನಡಿಗರೆಲ್ಲ ಕಾವೇರಿ ನೀರೇ ಕುಡಿದಿರುತ್ತಾರೆಯೇ? ಅಥವಾ ಕಾವೇರಿ ನೀರು ಕುಡಿದವರು ಮಾತ್ರ ಕನ್ನಡಿಗರೇ? ಕಾವೇರಿ ನೀರು ಕುಡಿಯದ, ಮುದ್ದೆ-ಸಾರು ತಿನ್ನಲು ಬಾರದ ನನ್ನಂಥವರು ಕನ್ನಡಿಗರಾಗಲು ಅನರ್ಹರೆ? ಯಾಕೆ ಇಂಥ ಕುರುಡು ಪ್ರೇಮದ ಮೆಂಟಾಲಿಟಿ? ಕರ್ನಾಟಕ ರಾಜ್ಯದ ವಿಸ್ತಾರ ಇವರಿಗೆಲ್ಲ ತಿಳಿದೇ ಇಲ್ಲವೇ?

ಅಧಿಕಾರ ಕೇಂದ್ರಿತ ಸೀಮಿತ ಬುದ್ಧಿ/ತಿಳುವಳಿಕೆಯ ಇಂಥ ಜನ ಸಮಾಜದಲ್ಲಿ ಹೇಗೆ ಸ್ವಾಸ್ಥ್ಯ ಕೆಡಿಸುತ್ತಾರೆ ಎನ್ನುವುದಕ್ಕೆ ಈ ವಿವಾದವೇ ಸಾಕ್ಷಿ. ಪ್ರಕಾಶ್ ರೈ ಬಗ್ಗೆ ನನಗೆ ಸಹಾನುಭೂತಿಯಿದೆ. ಅವರ ಸಿನೆಮಾಗೆ ಗೆಲುವು ಸಿಗಲಿ. ಅವರಂಥ ಪ್ರತಿಭಾನ್ವಿತ ಕನ್ನಡಿಗರು ಇನ್ನಷ್ಟು ಹೆಸರು ಮಾಡಲಿ. ಕನ್ನಡವನ್ನು ಪಸರಿಸಲಿ.

7 ಟಿಪ್ಪಣಿಗಳು Post a comment
 1. ಅಜಯ್ ಹೆಗಡೆ
  ಆಕ್ಟೋ 10 2016

  ನಿಮಗೆ ಬೆಂಗಳ ೂರಲ್ಲಿ ನಾಲ್ಕು ದಿನ ವಾಟರ್ ಸಿಗದಿದ್ದರೆ ಗೊತ್ತಾಗತ್ತೆ , ಆಗ ಶಿರಸಿಯಿಂದ ಬಾವಿ ವಾಟರ್ ತಂದು ಕುಡಿತಿರಾ? ಪ್ರಕಾಶ ರೈ ಸಮರ್ಥನೆ ಮಾಡುವ ಭರದಲ್ಲಿ ಬಾಲಿಶವಾಗಿ Kaveri water ಕುಡಿಯದವರು ಕನ್ನಡಿಗರಲ್ವಾ ಅಂತ ಕೆಳುವುದು ಸರಿಯಲ್ಲ.

  ಉತ್ತರ
  • Chetana Hegde
   ಆಕ್ಟೋ 11 2016

   ಅಜಯ್ ಅವರೇ, ನೀವು ತಪ್ಪಾಗಿ ಅರ್ಥೈಸಿಕೊಂಡಿರಿ. ನೀರಿನ ಮಹತ್ವ ಶಿರಸಿಯಲ್ಲಿ ಇದ್ದಾಗಲೂ ನನಗೆ ಗೊತ್ತಿತ್ತು. ಯಾಕಂದ್ರೆ ನಾನು ಖರ್ಚು ಮಾಡುವ ನೀರನ್ನು ನಾನೇ ಬಾವಿಯಿಂದ ಸೇದಿಕೊಳ್ಳಬೇಕಿತ್ತು, ಸುಮಾರು 8-10 ವಯಸ್ಸಿದ್ದಾಗಿಂದಲೇ. ಆ ಜವಾಬ್ದಾರಿ ಈಗಲೂ ನನಗಿದೆ. ನನ್ನ ಚರ್ಚೆ ಇಲ್ಲಿ “ಕಾವೇರಿ ಮತ್ತು ಕನ್ನಡತನವನ್ನು ಒಂದೇ” ಎಂಬಂತೆ ಮಾತಾಡುವವರ ಬಗ್ಗೆಯೇ ಹೊರತು ನೀರಿನ ಬಗ್ಗೆ ಅಲ್ಲ. ಅದನ್ನು ನಾನು ಸ್ಪಷ್ಟಪಡಿಸಿದ್ದೇನೆ. ಇತ್ತೀಚಿಗೆ “ಗಾಂಚಾಲಿ ಬಿಡಿ, ಕನ್ನಡ ಮಾತಾಡಿ” ಎಂಬ ಗ್ರೂಪ್ ನವರು ಮುದ್ದೆ-ಸಾರಿನ ಫೋಟೋ ಹಾಕಿ “ಇದನ್ನು ತಿನ್ನದವನು ಕನ್ನಡದವನೇ ಅಲ್ಲ” ಎಂಬರ್ಥದ ಕ್ಯಾಪ್ಶನ್ ಕೊಟ್ಟಿದ್ದರು. ಇದಕ್ಕೇನು ಹೇಳುತ್ತೀರಿ? ಈ ರೀತಿಯ ಧೋರಣೆ ತುಂಬಾ ಜನರಿಗೆ ಇರುವುದನ್ನು ಗಮನಿಸಿದ್ದೇನೆ. ನನ್ನ ಪ್ರಶ್ನೆ ಅಂಥ ಧೋರಣೆಯವರಿಗೆ ಮಾತ್ರ. ಸಾರ್ವತ್ರಿಕ ಖಂಡಿತ ಅಲ್ಲ. ಕರ್ನಾಟಕದ ಎಷ್ಟೋ ಜಿಲ್ಲೆಗಳ ಹೆಸರೇ ಗೊತ್ತಿಲ್ಲದ ನೂರಾರು ವಿದ್ಯಾವಂತ ಕನ್ನಡಿಗರನ್ನು ನಾನು ನೋಡಿದ್ದೇನೆ. ಮತ್ತೆ ಅವರೆಲ್ಲರೂ ಬೆಂಗಳೂರು, ಮೈಸೂರು, ಕೋಲಾರ ಇಂಥ ಕಡೆಯವರೇ ಆಗಿದ್ದುದು ಕಾಕತಾಳೀಯವೇ?

   ಉತ್ತರ
   • ಅಜಯ ಹೆಗಡೆ
    ಆಕ್ಟೋ 18 2016

    ನಿಮ್ಮ ಆಶಯ ಗೊತ್ತಾಯಿತು ಚೇತನಾ ಅವರೇ. ‘ಕಾವೇರಿ’ ಅನ್ನುವುದನ್ನ ಬರೀ ಒಂದು ಪ್ರಾಂತ್ಯದ ಒಂದು ನದಿಯಾಗಿ ನೋಡದೇ ನಮ್ಮ ನಾಡಿನ ಜಲ ಅನ್ನುವ ರೀತಿಯಲ್ಲಿ ಸಮಗ್ರವಾಗಿ ಅರ್ಥೈಸಿಕೊಳ್ಳಬೇಕು. ಹಳೇ ಮೈಸೂರಿನವರಿಗೆ ಉತ್ತರ ಕರ್ನಾಟಕ ಅಪರಿಚಿತ ಆಗಿರಬಹುದು, ಅದೇ ರೀತಿ ಉತ್ತರ ಕನ್ನಡದವರಿಗೆ ತೀರ ಇತ್ತೀಚಿನವರೆಗೂ ಹುಬ್ಬಳ್ಳಿ ಧಾರವಾಡ ಮುಂಬಯಿ ಬಿಟ್ಟರೆ ಬೇರೆ ಗೊತ್ತಿರಲಿಲ್ಲ ಎನ್ನುವುದೂ ಸತ್ಯ. ಮುದ್ದೆ ತಿನ್ನದವ ಕನ್ನಡಿಗನಲ್ಲ, ಅಪ್ಪೆಹುಳಿ ಸುರಿಯದವ ಹವ್ಯಕನಲ್ಲ ಇದೆಲ್ಲಾ ಸ್ವಲ್ಪ ಕ್ಲೀಷೆಗಳು. ಅದು ಅತ್ಯುತ್ಸಾಹದಲ್ಲಿ ಬರುವಂತವು. ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ. ಮುದ್ದೆಯನ್ನು ನಮ್ಮ ಆಹಾರಕ್ಕೆ ಸಮೀಕರಿಸಿಕೊಂಡರೆ ಆಯಿತು. ಅಲ್ಲಿಗೆ ಎಲ್ಲರೂ ಕನ್ನಡಿಗರೇ. ಹಾಗಾಗಿ ನಾವು ಯಾವ ಪ್ರಾಂತ್ಯದವರು, ಎಲ್ಲಿಂದ ಬಂದವರು, ಬಾವಿನೀರು ಕುಡಿಯುತ್ತೀವೋ, ಅಥವಾ ನೀರೇ ಕುಡಿಯುವುದಿಲ್ಲವೋ ಅದು ಇಲ್ಲಿ ಪ್ರಸ್ತುತವಾಗದೇ ನೆಲ ಜಲ ಭಾಷೆಗೆ ಸಂಬಂಧಿಸಿದ ವಿಷಯಗಳಲ್ಲಿ ನಮ್ಮ ನಾಡಿನ ಪರವಾಗಿ ನಾವು ನಿಲುವು ಹೊಂದಿರಬೇಕು ಎನ್ನುವುದು ಇದರ ಒಟ್ಟಾರೆ ಸಾರಾಂಶ.

    ಉತ್ತರ
 2. M A Sriranga
  ಆಕ್ಟೋ 10 2016

  ಕಾವೇರಿ ನದಿಯ ಉಲ್ಲೇಖ ಕನ್ನಡ ಸಿನಿಮಾಗಳಲ್ಲಿ ಮತ್ತು ಅದರ ಹಾಡುಗಳಲ್ಲಿ ಈಗಲೂ ಪ್ರಾಮುಖ್ಯ ಪಡೆಯಲು ನನಗೆ ತಿಳಿದಂತೆ ಒಂದೆರೆಡು ಕಾರಣಗಳಿವೆ. ಕಾವೇರಿ ನದಿಗೆ ಕೃಷ್ಣರಾಜಸಾಗರ ಆಣೆಕಟ್ಟು (ಕನ್ನಂಬಾಡಿ) ಕಟ್ಟಿದ್ದು ಮೈಸೂರು ಮಹಾರಾಜರ ಆಳ್ವಿಕೆ ಇದ್ದಾಗ. (ಆಗ ಮೈಸೂರು ರಾಜ್ಯ ಎಂದು ಕರೆಯುತ್ತಿದ್ದರು; ಈಗ ಹಳೇ ಮೈಸೂರು ರಾಜ್ಯ ಎನ್ನುತ್ತಾರೆ). ಈ ಕಡೆ ಬೆಂಗಳೂರು ಆಚೆಕಡೆ ಹೆಚ್ಚೆಂದರೆ ದಾವಣಗೆರೆ (ಅಥವಾ ಸ್ವಲ್ಪ ಹೆಚ್ಚು ಕಮ್ಮಿ ಇರಬಹುದು) ದಾಟದ ಆಗಿನ ಆಳ್ವಿಕೆಯಲ್ಲಿ ಕನ್ನಡ, ಕನ್ನಡಿಗ ಎಂದರೆ ಇಷ್ಟೇ ಆಗಿರಬಹುದು. ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯಾಗಿ ಅಂದಿನ ಹೈದರಾಬಾದ್ ,ಬಾಂಬೆ ಮತ್ತು ಮದ್ರಾಸ್ ಸರ್ಕಾರಗಳ ಆಳ್ವಿಕೆಗೆ ಒಳಪಟ್ಟಿದ್ದ, ಹೆಚ್ಚಾಗಿ ಮತ್ತು ಮುಖ್ಯವಾಗಿ ಕನ್ನಡ ಭಾಷೆ ಮಾತಾಡುತ್ತಿದ್ದ ಭಾಗಗಳು ವಿಶಾಲ ಮೈಸೂರು (ಈಗ ಕರ್ನಾಟಕ) ಸರ್ಕಾರದ ಆಳ್ವಿಕೆಗೆ ಒಳಪಟ್ಟಿತು. ಇದರಲ್ಲಿ ಭೌಗೋಳಿಕವಾಗಿ ಆಡಳಿತ ನಡೆಸಲು ಅನುಕೂಲವಾಗುವ ದೃಷ್ಟಿಯೂ ಇತ್ತು. ಆದರೂ ಬೆಳಗಾವಿಯ ಸಮಸ್ಯೆ ಇಟ್ಟುಕೊಂಡು ಅಲ್ಲಿ ಆಗಾಗ ಪರಿಸ್ಥಿತಿ ವಿಕೋಪಕ್ಕೆ ಹೋಗಿರುವುದೂ ಉಂಟು. ಹೀಗಾಗಿ ಕಾವೇರಿ ನೀರು ಕುಡಿದಿಲ್ಲವೇ, ಕನ್ನಡಿಗ , ಕಾವೇರಿಯ ನೀರು ಇತ್ಯಾದಿಗಳ ಸಮಸ್ಯೆ ಹಳೆ ಮೈಸೂರಿನ ಪ್ರದೇಶ ಬಿಟ್ಟು ಬೇರೆ ಕಡೆ ಅಷ್ಟು ಮುಖ್ಯವಾಗದಿರುವುದು ಸಹಜ. ದಿನೇ ದಿನೇ ನಾಶವಾಗುತ್ತಿರುವ ಪಶ್ಚಿಮ ಘಟ್ಟಗಳು, ಸಾಮಾನ್ಯ ಸವಲತ್ತುಗಳೂ ಇಲ್ಲದ ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ, ಅಲ್ಲಿಯ ಬರದ ಬಗ್ಗೆ, ಕೂಲಿಗಾಗಿ ಇಡೀ ಹಳ್ಳಿಗೆ ಹಳ್ಳಿಯ ಜನರು ಮಹಾರಾಷ್ಟ್ರ, ಆಂಧ್ರ ಕಡೆಗೆ ಅಷ್ಟೇಕೆ ಬೆಂಗಳೂರಿಗೂ ಬರುತ್ತಿದ್ದಾರೆ. ಇವುಗಳ ಬಗ್ಗೆ ಬೆಂಗಳೂರಿನ ಜನಗಳು ಮಾತಾಡುತ್ತಾರೆಯೇ? ಇದು ಮಹದಾಯಿ ನದಿಯ ಸಮಸ್ಯೆಯ ಸಮಯದಲ್ಲಿ ಚೆನ್ನಾಗಿ ಸಾಬೀತಾಯಿತು. ಇಲ್ಲಿಯ ಸಿನಿಮಾ ನಟರು, ಸಾಹಿತಿಗಳು, ಒಂದಷ್ಟು ಕನ್ನಡ ಸಂಘಟನೆಯವರು scope ತೆಗೆದುಕೊಳ್ಳಲು ಉತ್ತರ ಕರ್ನಾಟಕದ ಕಡೆಗೆ ಒಂದೆರೆಡು ಬಾರಿ ಬಂದರು; ನಂತರ ಮರೆತರು. ಇನ್ನು ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯ (ಬಿ ಬಿ ಎಂ ಪಿ) ಆಳ್ವಿಕೆಗೆ ಒಳಪಟ್ಟಿರುವ ಎಲ್ಲಾ ಭಾಗಗಳಿಗೂ ಕಾವೇರಿ ನೀರೇನೂ ಬರುತ್ತಿಲ್ಲ. ಅದರಲ್ಲೂ ಒಡೆದು ಆಳುವ ರೀತಿ. ಹಳೆ ಬೆಂಗಳೂರಿಗೆ ಕಾವೇರಿ; ಹೊಸ ಬೆಂಗಳೂರಿಗೆ ಬೋರವೆಲ್, ಟ್ಯಾಂಕರ್ ನೀರು. ಈಗ ನೀರಿನ ಜತೆ ಕಸದ ಸಮಸ್ಯೆಯೂ ಬಿಗಡಾಯಿಸಿಕೊಂಡು ಬಿ ಬಿ ಎಂ ಪಿ ಯನ್ನು ಮೂರು ಅಥವಾ ನಾಲ್ಕು ಭಾಗಗಳನ್ನಾಗಿ ಒಡೆಯುವ ಯೋಚನೆ,ಯೋಜನೆ ಶುರುವಾಗಿದೆ. ಎಲ್ಲಾ ತಲೆನೋವಿಗೂ ಪರಿಹಾರ ಎಂದು!. ಹೀಗಾಗಿ ನಮ್ಮ ಕನ್ನಡ, ಕನ್ನಡಿಗ ಇತ್ಯಾದಿಗಳ ವ್ಯಾಖ್ಯೆಯನ್ನು ‘ಕಾವೇರಿ ನೀರು ಕುಡಿದಿಲ್ಲವೇ?’ ಎಂದು ಸಂಕುಚಿತ ಬುದ್ಧಿಯಿಂದ ಕೇಳುವುದು ತಪ್ಪು. ಕಾವೇರಿ ನೀರಿಗೂ ಕನ್ನಡತನಕ್ಕೂ ಗಂಟು ಹಾಕಬಾರದು.
  ಇನ್ನು ಪ್ರಕಾಶ್ ರೈ ಪ್ರಕರಣದ ಬಗ್ಗೆ ನಾನೀಗಾಗಲೇ ‘ನಿಲುಮೆ’ಯಲ್ಲಿ ‘ಮನೆಯೊಂದು ಮೂರು ಬಾಗಿಲು …….. ‘ ಎಂಬ ಪುಟ್ಟ ಲೇಖನ ಬರೆದಿದ್ದೇನೆ. ಆಸಕ್ತರು ಓದಬಹುದು.

  ಉತ್ತರ
  • Suraj B Hegde
   ಆಕ್ಟೋ 17 2016

   ಖಂಡಿತವಾಗಿಯೂ ಹೌದು! ನಿಮ್ಮ ಅಭಿಪ್ರಾಯ ಸರಿ 🙂

   ನಿಮ್ಮ “ಮನೆಯೊಂದು ಮೂರು ಬಾಗಿಲು…” ಲೇಖನದ ಲಿಂಕನ್ನು ದಯವಿಟ್ಟು ಹಾಕುವಿರಾ…?!

   ಉತ್ತರ
 3. Suraj B Hegde
  ಆಕ್ಟೋ 17 2016

  ಹೀಗಾದ್ರೂ ಮತ್ತಷ್ಟು ಕನ್ನಡಿಗರ ಬೆಂಬಲ ಸಿಗಬಹುದೇನೋ ಎಂಬ ಸಣ್ಣ ಸ್ವಾರ್ಥವಷ್ಟೆ… ಅದಕ್ಕೂ ಹೆಚ್ಚಿನ ಹುನ್ನಾರವೇನು ನಾ ಕಾಣೆ!

  ಒಳ್ಲೆಯ ಅವಲೋಕನೆಯುಳ್ಳ ಲೇಖನ.

  ನಿಮ್ಮ ಮುಂದಿನ ಬರಹಕ್ಕೆ ಕಾದಿರುವ ಅಭಿಮಾನಿ,
  ಸೂರಜ್ ಭಾಸ್ಕರ್ ಹೆಗಡೆ

  ಉತ್ತರ

Trackbacks & Pingbacks

 1. ಕಾವೇರಿ = ಕನ್ನಡ/ಕನ್ನಡಿಗ? | Chetana Hegde

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments