ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 29, 2016

11

ಟಿಪ್ಪು: ಸುಲ್ತಾನನೋ.. ಸೈತಾನನೋ?

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

11Fir08.qxpಕರ್ನಾಟಕ ಸರಕಾರ 2015ನೇ ಇಸವಿಯ ನವೆಂಬರ್ 10ರಂದು ಟಿಪ್ಪು ಸುಲ್ತಾನನ ಜಯಂತಿಯನ್ನು ಆಚರಿಸಿತು. ಈ ಸರಕಾರೀ ಕಾರ್ಯಕ್ರಮವನ್ನು ನಡೆಸಲು ಪ್ರತಿ ಜಿಲ್ಲೆಗೆ 50 ಸಾವಿರ ಮತ್ತು ಪ್ರತಿ ತಾಲೂಕಿಗೆ 25 ಸಾವಿರ ರುಪಾಯಿಗಳಂತೆ ಒಟ್ಟು 80 ಲಕ್ಷವನ್ನು ವ್ಯಯಿಸಲಾಯಿತು. ನಾಡಹಬ್ಬ ದಸರಾ ಆಚರಿಸಲು ದುಡ್ಡಿಲ್ಲದೆ ಪರದಾಡುತ್ತಿದ್ದ ಸರಕಾರಕ್ಕೆ ಟಿಪ್ಪು ಜಯಂತಿ ಎಂಬ ಹೊಸ ಸಂಪ್ರದಾಯವನ್ನು ಹುಟ್ಟುಹಾಕಲು ಇಷ್ಟೊಂದು ದುಡ್ಡು ಎಲ್ಲಿಂದ ಸಿಕ್ಕಿತು ಎನ್ನುವುದು ಯಕ್ಷಪ್ರಶ್ನೆ! ಇರಲಿ, ಈ ಜಯಂತಿಯಾದರೂ ಸುಸೂತ್ರವಾಗಿ ನಡೆದಿದ್ದರೆ; ಒಂದಷ್ಟು ಒಳ್ಳೆಯ ಕೆಲಸಗಳು ಆ ಮೂಲಕವಾದರೂ ಆಗಿದ್ದರೆ ರಾಜ್ಯದ ಜನ ನೆಮ್ಮದಿ ಕಾಣುತ್ತಿದ್ದರೋ ಏನೋ. ಆದರೆ, ಈ ಜಯಂತಿ ಜನರ ಕಾರ್ಯಕ್ರಮವಾಗದೆ ಕೇವಲ “ಸರಕಾರಿ ಆಚರಣೆ” ಮಾತ್ರವೇ ಆಗಿ ಉಳಿಯಿತು. ತನ್ನ ಸಮಸ್ತ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರಿಗೆ ಮೆಚ್ಚಿಕೆಯಾಗುವ ಕೆಲಸ ಮಾಡುವ ಅವಕಾಶವನ್ನು ತಾನಾಗಿ ಕೈಚೆಲ್ಲಿ ಸರಕಾರ ಒಂದು ಗುಂಪಿನ ಮನಮೆಚ್ಚಿಸಲು ಹೋಗುವುದು ಅಗತ್ಯವಿತ್ತೆ ಎಂಬ ಪ್ರಶ್ನೆ ಎದ್ದಿತು. ಸರಕಾರದ ನಡೆಯನ್ನು ಸಮರ್ಥಿಸಿಕೊಳ್ಳುತ್ತ ಒಬ್ಬ ಬುದ್ಧಿಜೀವಿ, “ಈಗಾಗಲೇ ಹಲವು ಜಾತಿ-ಕೋಮುಗಳ ಜನರಿಗೆ ಬೇಕಾದ ಜಯಂತಿಗಳಿವೆ. ಆದರೆ ಮುಸ್ಲಿಮರಿಗೆ ಹೇಳಿಕೊಳ್ಳುವಂಥ ಯಾವುದೇ ಸರಕಾರೀ ಕಾರ್ಯಕ್ರಮ ಇರಲಿಲ್ಲ. ಈಗ ಶುರುಮಾಡಿರುವ ಜಯಂತಿಯನ್ನು ಆ ನಿಟ್ಟಿನಲ್ಲಿ ಯೋಚಿಸಿ ಸ್ವಾಗತಿಸಬೇಕು” ಎಂಬ ಮಾತುಗಳನ್ನು ಆಡಿದರು. ಜಯಂತಿಗಳನ್ನು ರಾಜ್ಯದಲ್ಲಿರುವ ವಿವಿಧ ಜಾತಿ-ಪಂಗಡಗಳನ್ನು ಮೆಚ್ಚಿಸಲಿಕ್ಕಾಗಿ ಆಚರಿಸಲಾಗುತ್ತದೆ ಎಂಬ ಸತ್ಯ ಅವರ ಈ ಮಾತುಗಳ ಮೂಲಕ ಹೊರಬಿದ್ದಿದೆ. ಟಿಪ್ಪು ಜಯಂತಿಯನ್ನು ಆಚರಿಸಿರುವುದು ಕೇವಲ ಮುಸ್ಲಿಮ್ ಸಮುದಾಯವನ್ನು ಮೆಚ್ಚಿಸಲಿಕ್ಕಾಗಿ ಎಂಬ ಸರಕಾರದ ಅಜೆಂಡವನ್ನು ಸರಕಾರೀ ಸಾಹಿತಿ ಬಾಯಿತಪ್ಪಿ ಹೇಳಿಬಿಟ್ಟಿದ್ದಾರೆ!

ಟಿಪ್ಪು ಜಯಂತಿ ಒಂದಲ್ಲ ಹಲವು ವಿವಾದಗಳಿಗೆ ಕಾರಣವಾಯಿತು. ಯಾವುದೇ ಒಂದು ವ್ಯಕ್ತಿಯ ಹುಟ್ಟುಹಬ್ಬದ ಆಚರಣೆಯ ವಿಷಯಕ್ಕೆ ಮೂರು ಹೆಣಗಳು ಉರುಳಿದ ಚರಿತ್ರೆ ಕರ್ನಾಟಕದಲ್ಲಿ ಇರಲಿಲ್ಲ. ಒಬ್ಬ ವ್ಯಕ್ತಿ ಸತ್ತು ಎರಡು ಶತಮಾನಗಳು ಕಳೆದರೂ ಜನರಲ್ಲಿ ಅದಮ್ಯವಾದ ಕೋಪವನ್ನು ಕಾಯ್ದಿಟ್ಟಿದ್ದಾನೆಂದರೆ ಆತ ಅದೆಂಥ ದುಷ್ಟನಾಗಿದ್ದಾನು ಊಹಿಸಬಹುದು. ಈ ಹೋಮಾಗ್ನಿಗೆ ತುಪ್ಪ ಸುರಿಯುವಂತೆ ಜ್ಞಾನಪೀಠಿಯೊಬ್ಬರು ತೂಕ ತಪ್ಪಿದ ಮಾತಾಡಿ ನಾಲಗೆ ಕಚ್ಚಿಕೊಂಡರು. ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಲ್ಲಿ ಒಂದಲ್ಲಾ ಒಂದು ಪ್ರಕರಣದಲ್ಲಿ ಸಿಕ್ಕಿಕೊಂಡು ತಿಪ್ಪೆ ಸಾರಿಸುವುದನ್ನು ಅಭ್ಯಾಸ ಮಾಡಿಕೊಂಡಿರುವ ಮುಖ್ಯಮಂತ್ರಿಗಳು, ಟಿಪ್ಪು ಜಯಂತಿಯ ವಿಷಯದಲ್ಲೂ ಒಂದಷ್ಟು ಸ್ಪಷ್ಟೀಕರಣ ಕೊಟ್ಟು ತಿಪ್ಪೆ ಸಾರಿಸಬೇಕಾಯಿತು. ಒಟ್ಟಲ್ಲಿ ಇರಲಾರದೆ ಇರುವೆ ಬಿಟ್ಟುಕೊಂಡರು ಎಂಬ ಗಾದೆಯಂತೆ; ಸರಕಾರ ಸುಮ್ಮನೆ ಕೂರಲಾಗದೆ ಟಿಪ್ಪುವನ್ನು ಹೀರೋ ಮಾಡಲು ಹೋಗಿ ತಾನು ವಿಲನ್ ಆಗಬೇಕಾಯಿತು. ಮಾಡಬೇಕಾದ ಅಭಿವೃದ್ಧಿಯ ಕೆಲಸಗಳು ರಾಶಿ ಬಿದ್ದು ಕೊಳೆಯಹತ್ತಿರುವಾಗ, ಅವುಗಳತ್ತ ಗಮನ ಹರಿಸುವುದನ್ನು ಬಿಟ್ಟು ಯಾವುದೋ ಚಾರಿತ್ರಿಕ ಸಂಗತಿಗಳನ್ನು ಮತ್ತೆ ಎತ್ತಿ ರಾಡಿ ಮಾಡಿಕೊಳ್ಳುವುದು ಸರಕಾರಕ್ಕೆ ಬೇಕಿತ್ತೆ? – ಇದು ಜನರ ಪ್ರಶ್ನೆ.

ಫ್ರೆಂಚರನ್ನು ಕರೆದವನು!
ಟಿಪ್ಪು ಸುಲ್ತಾನನ ಕತೆಯನ್ನು ಪ್ರಾಥಮಿಕ ಶಾಲೆಯ ಚರಿತ್ರೆ ಪುಸ್ತಕದಲ್ಲಿ ನಾವೆಲ್ಲರೂ ಓದಿದವರೇ. ಟಿಪ್ಪು ಒಬ್ಬ ಮಹಾನ್ ಹೋರಾಟಗಾರನಾಗಿದ್ದ; ಅವನಿಗೆ ಮೈಸೂರಿನ ಹುಲಿ ಎಂಬ ಬಿರುದಿತ್ತು; ಅವನ ಕಾಲದಲ್ಲಿ ನಮ್ಮ ರಾಜ್ಯ ಸರ್ವಧರ್ಮಗಳ ಶಾಂತಿ-ಸಾಮರಸ್ಯಗಳ ಬೀಡಾಗಿತ್ತು; ಆತ ಹುಲಿಯ ಜೊತೆ ಕಾದಾಡಿದ್ದ; ಬ್ರಿಟಿಷರ ವಿರುದ್ಧ ಯುದ್ಧದಲ್ಲಿ ಹೋರಾಡುತ್ತ ವೀರಮರಣವನ್ನಪ್ಪಿದ – ಮುಂತಾದ ಕತೆಗಳನ್ನು ನಾವು ಪಠ್ಯದಲ್ಲಿ ಓದಿದ್ದೆವು. ಈ ಎಲ್ಲ ಅತಿರಂಜಿತ ವಿವರಣೆಗಳಿಂದಾಗಿ ಟಿಪ್ಪು ಎಂದೊಡನೆ ಒಬ್ಬ ಶೂರ ಯೋಧನ ಚಿತ್ರ ನಮ್ಮ ಕಣ್ಮುಂದೆ ಬರುತ್ತಿತ್ತು. ಆದರೆ, ನಮ್ಮ ಇತಿಹಾಸದ ದಾಖಲೆಪತ್ರಗಳು ಮತ್ತು ಆ ಕಾಲದ ಜೀವನ ವ್ಯವಸ್ಥೆಯನ್ನು ಆಳವಾಗಿ ಅಧ್ಯಯನ ಮಾಡಿ ಬರೆದಿರುವವರ ಪುಸ್ತಕಗಳು ಬಿಚ್ಚಿಡುವ ಸತ್ಯವೇ ಬೇರೆ. ಇತಿಹಾಸವನ್ನು ಕೆದಕಿದಾಗ, ಆತ ಯಾವುದೇ ದೇಶಾಭಿಮಾನ ಇಟ್ಟುಕೊಂಡು ಬ್ರಿಟಿಷರ ಜೊತೆ ಹೋರಾಡಿದ್ದು ಕಂಡುಬರುವುದಿಲ್ಲ. ಕನ್ನಡನಾಡಿನ ಜನರ ರಕ್ಷಣೆ ಮಾಡುತ್ತಿದ್ದ ಮೈಸೂರಿನ ಒಡೆಯರಿಂದ ಅಧಿಕಾರ ಕಸಿದುಕೊಂಡು ದಕ್ಷಿಣ ಭಾರತದಲ್ಲಿ ಪ್ರಬಲನಾದ ಹೈದರಾಲಿಯ ಮಗ ಟಿಪ್ಪು, ಬ್ರಿಟಿಷರ ವಿರುದ್ಧ ಹೋರಾಡಿದ್ದು ಅವರು ನಿಜಾಮ ಮತ್ತು ಮೈಸೂರಿನ ಒಡೆಯರ ಜೊತೆ ಹೊಂದಾಣಿಕೆ ಮಾಡಿಕೊಂಡು ತನ್ನ ವಿರುದ್ಧ ತಿರುಗಿಬಿದ್ದರು ಎಂಬ ಕಾರಣಕ್ಕೆ ಮಾತ್ರ. 1797ರ ಎಪ್ರೀಲ್ 21ರಂದು ಫ್ರೆಂಚರಿಗೆ ಪತ್ರ ಬರೆಯುವ ಟಿಪ್ಪು, ಅವರ ಬೆಂಬಲ ಸಿಕ್ಕರೆ ಬ್ರಿಟಿಷರನ್ನು ಓಡಿಸಿ ಇಡೀ ದೇಶವನ್ನು ಲೂಟಿ ಹೊಡೆಯಬಹುದು ಎಂಬ ಪ್ರಲೋಭನೆ ಒಡ್ಡುತ್ತಾನೆ. ಬ್ರಿಟಿಷರಿಂದ ಬಂಧನಕ್ಕೊಳಗಾಗಿ ಸೆರೆಮನೆವಾಸಿಯಾಗಿದ್ದ ಫ್ರೆಂಚ್ ನಾಯಕ ನೆಪೋಲಿಯನ್ ಬೋನಪಾರ್ಟೆಯ ಜೊತೆ ಟಿಪ್ಪುವಿಗೆ ಪತ್ರ ವ್ಯವಹಾರ ಇತ್ತು. ಫ್ರೆಂಚರು ಟಿಪ್ಪುವಿನೊಡನೆ ಸೇರಿ ದಕ್ಷಿಣ ಭಾರತದ ನಿಜಾಮ, ಮತ್ತು ಮರಾಠರನ್ನು ಸೋಲಿಸಿ ಇಲ್ಲಿ ಮೇಲುಗೈ ಸಾಧಿಸುವ ಕನಸು ಕಂಡರು. ಬ್ರಿಟಿಷರ ವಿರುದ್ಧ ಹೋರಾಡಲು ಫ್ರೆಂಚರ ಸಹಾಯ ಬೇಡಿದವನನ್ನು ರಾಷ್ಟ್ರಪ್ರೇಮಿ ಎಂದು ಕರೆಯಲು ಸಾಧ್ಯವಾದೀತೇ? ಹೋಗಲಿ, ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಾಗಿದ್ದ ಎಂಬ ಮಾತನ್ನಾದರೂ ಒಪ್ಪಬಹುದೆ? ಅವನ ಹೆಚ್ಚಿನೆಲ್ಲ ಶ್ರಮ ವ್ಯರ್ಥವಾದದ್ದು ತನ್ನ ಸುತ್ತಲಿನ ರಾಜ್ಯಗಳ ಮೇಲೆ ದಂಡೆತ್ತಿಹೋಗುವುದರಲ್ಲಿ; ಅಲ್ಲಿನ ಸಾವಿರಾರು ಪ್ರಜೆಗಳನ್ನು ಇಸ್ಲಾಂ ಮತಕ್ಕೆ ಮತಾಂತರಿಸುವುದರಲ್ಲಿ ಮತ್ತು ತನ್ನ ಮಾತು ಕೇಳದವರಿಗೆ ಬಗೆಬಗೆಯ ಶಿಕ್ಷೆಗಳನ್ನು ಕೊಟ್ಟು ಜೀವ ತೆಗೆಯುವುದರಲ್ಲಿ. ಭಾರತ ಎಂಬ ಏಕರಾಷ್ಟ್ರದ ಕಲ್ಪನೆಯೇ ಇನ್ನೂ ಮೊಳೆತಿರದ ಕಾಲದಲ್ಲಿದ್ದ ಟಿಪ್ಪು, ಸ್ವಾತಂತ್ರ್ಯ ಹೋರಾಟಗಾರನೆಂದು ಕರೆಸಿಕೊಳ್ಳಲು ಹೇಗೆ ಯೋಗ್ಯನಾಗುತ್ತಾನೆ ಎಂಬ ಪ್ರಶ್ನೆಯೂ ಇದೆ.

ಆತ ಕನ್ನಡದ ಕಂದನಾಗಿದ್ದ ಎಂಬುದಕ್ಕೂ ಇತಿಹಾಸದಲ್ಲಿ ಹೆಚ್ಚು ಆಧಾರಗಳು ಸಿಗುವುದಿಲ್ಲ. ಟಿಪ್ಪು ತನ್ನ ಆಡಳಿತವಿರುವ ಎಲ್ಲಾ ಪ್ರದೇಶಗಳಲ್ಲಿ ಉರ್ದು ಮತ್ತು ಫಾರಸಿ/ಪರ್ಶಿಯನ್ ಭಾಷೆಗಳನ್ನು ಖಾಯಂ ಮಾಡಿದ. ತನ್ನ ರಾಜ್ಯದ ವ್ಯವಹಾರಗಳು ಫಾರಸಿ ಭಾಷೆಯಲ್ಲೇ ಇರಬೇಕೆಂದು ಕಟ್ಟಪ್ಪಣೆ ಹೊರಡಿಸಿದ. ಅತ್ಯಂತ ಕಟ್ಟಾ ಮತೀಯನಾಗಿದ್ದ ಟಿಪ್ಪು ತನ್ನ ಆಡಳಿತ ಕಾಲದಲ್ಲಿ ಹಲವು ಊರುಗಳ ಹೆಸರುಗಳನ್ನು ಬದಲಾಯಿಸಿದ. ಮಂಗಳೂರು ಜಲಲಾಬಾದ್ ಆಯಿತು. ಮೈಸೂರು – ನಝರಾಬಾದ್, ಕಣ್ಣಾನೂರು – ಕುಸನಬಾದ್, ಗುಟ್ಟಿ – ಫೈಜ್ ಹಿಸ್ಸಾರ್, ಧಾರವಾಡ – ಖುರ್ಷಿದ್ ಸವಾಡ್, ದಿಂಡಿಗಲ್ – ಕಲಿಖಾಬಾದ್, ರತ್ನಗಿರಿ – ಮುಸ್ತಫಾಬಾದ್, ಕಲ್ಲಿಕೋಟೆ – ಇಸ್ಲಮಾಬಾದ್.. ಹೀಗೆ ಮೈಸೂರಿನ ಸುತ್ತಮುತ್ತಲಿನ ಜಾಗಗಳಿಗೆಲ್ಲ ಟಿಪ್ಪು ಮುಸ್ಲಿಮ್ ಹೆಸರುಗಳನ್ನು ಇಡುತ್ತಾ ಹೋದ. ಆದರೆ ಟಿಪ್ಪುವನ್ನು ನಖಶಿಖಾಂತ ದ್ವೇಷಿಸುತ್ತಿದ್ದ ಈ ಎಲ್ಲ ಊರುಗಳ ಜನರೂ ಅವನ ಮರಣಾನಂತರ ಹಳೆಯ ಹೆಸರುಗಳನ್ನೇ ಉಳಿಸಿಕೊಂಡರು. ಟಿಪ್ಪು ಊರುಗಳ ಹೆಸರುಗಳನ್ನು ಬದಲಿಸಿದ್ದು ಮಾತ್ರವಲ್ಲ; ದೂರವನ್ನು ಅಳೆಯುವ ಅಳತೆ ಮತ್ತು ಮಾನದಲ್ಲಿಯೂ ಇಸ್ಲಾಂ ಮತವನ್ನು ತುರುಕಿದ. ಖುರಾನಿನ ಒಂದು ಸಾಲು (ಕಲ್ಮಾ) ಇಪ್ಪತ್ತನಾಲ್ಕು ಅಕ್ಷರಗಳನ್ನು ಹೊಂದಿದೆಯೆಂಬ ಕಾರಣಕ್ಕೆ 24 ಅಂಗುಲಗಳ ಉದ್ದವನ್ನು ಮೂಲಮಾನವಾಗಿ ಇಟ್ಟುಕೊಂಡ. ಉಳಿದೆಲ್ಲ ಅಳತೆಗಳೂ ಇದಕ್ಕೆ ತಕ್ಕಂತೆ ಬದಲಾದವು. ಪ್ರವಾದಿ ಮುಹಮ್ಮದರು ಹುಟ್ಟಿದ ವರ್ಷದಿಂದ ಆರಂಭಿಸಿ ಹೊಸ ಶಕೆಯೊಂದನ್ನು ಆರಂಭಿಸಿ, ಹೊಸ ಬಗೆಯ ಪಂಚಾಂಗವನ್ನು ಟಿಪ್ಪು ಜಾರಿಗೆ ತಂದ. ಸೌರಮಾನ ಪದ್ಧತಿಯನ್ನು ಕೈಬಿಟ್ಟು ಚಾಂದ್ರಮಾನ ಪದ್ಧತಿ ಅನುಸರಿಸಲು ಆದೇಶ ಹೊರಡಿಸಲಾಯಿತು. ಟಿಪ್ಪು ಪ್ರಾರಂಭಿಸಿದ ವರ್ಷದಲ್ಲಿ 354 ದಿನಗಳಿದ್ದವು. ವರ್ಷಗಳಿಗೆ ಅಹಂದ್, ಅಬ್, ಝಾ, ಬಾಬ್ ಮುಂತಾದ ಇಸ್ಲಾಮಿಕ್ ಹೆಸರುಗಳನ್ನು ಕೊಡಲಾಯಿತು.

ಇನ್ನು, ಹೆಚ್ಚಾಗಿ ಎಲ್ಲರೂ ಭಾವಿಸುವುದು ಹುಲಿಯೊಂದಿಗೆ ಕಾದಾಡಿ ಅದನ್ನು ಕೊಂದದ್ದರಿಂದಾಗಿ ಅವನಿಗೆ ಮೈಸೂರು ಹುಲಿ ಎಂಬ ಬಿರುದು ಬಂದಿದೆಯೆಂದು. ಆದರೆ, ಟಿಪ್ಪು ಎಂದೂ ಹುಲಿಗಳೊಂದಿಗೆ ಕಾದಾಡಿದ ಉದಾಹರಣೆ ಇಲ್ಲ! ಪರಂಗಿಯೊಬ್ಬನ ಮೇಲೆರಗಿ ಕೂತ ಹುಲಿಯ ಆಟಿಕೆ ಅವನ ಬಳಿ ಇತ್ತು ಅಷ್ಟೆ! ಅದನ್ನು ಆತ ಚಿಕ್ಕ ಮಕ್ಕಳಂತೆ ಪ್ರೀತಿಯಿಂದ ತನ್ನ ಜೊತೆಗಿಟ್ಟುಕೊಂಡಿದ್ದ. ಆ ಕಾಲದಲ್ಲಿ ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿದ್ದುದರಿಂದ ಆತನಿಗೆ ಅದನ್ನೇ ತನ್ನ ರಾಜಚಿಹ್ನೆಯಾಗಿ ಇಟ್ಟುಕೊಳ್ಳುವ ಹಂಬಲ ಮೂಡಿರಬಹುದು. ಅವನ ಕತ್ತಿಯಲ್ಲಿ ಹುಲಿಯ ಉಲ್ಲೇಖ ಇತ್ತು. ಹುಲಿಯ ಮುಖದ ಅಚ್ಚು ಇರುವ ಸಿಂಹಾಸನವನ್ನು ಬಳಸುತ್ತಿದ್ದ. ಹುಲಿಯ ಪಟ್ಟೆಗಳ ವಿನ್ಯಾಸ ಇರುವ ಸಮವಸ್ತ್ರಗಳನ್ನು ತನ್ನ ಸೈನಿಕರಿಗೆ ಕೊಟ್ಟಿದ್ದ. ಜೊತೆಗೆ, ತನ್ನ ಅರಮನೆಯಲ್ಲಿ ಒಂದಷ್ಟು ಹುಲಿಗಳನ್ನು ಸಾಕಿಕೊಂಡಿದ್ದ. ಈ ಎಲ್ಲ ಕಾರಣಗಳಿಂದ ಅವನಿಗೆ ಶೇರ್-ಇ-ಮೈಸೂರ್ ಎಂಬ ಬಿರುದನ್ನು ಅವನ ಹೊಗಳುಭಟರು ಕೊಟ್ಟರು.

ಯಮಸದೃಶ ಮತಾಂತರಿ ಟಿಪ್ಪುವಿನ ದೌರ್ಜನ್ಯಗಳ ಮಾಹಿತಿಗಳು ನಮಗೆ ಸಿಕ್ಕುವುದು ಆ ಕಾಲದಲ್ಲಿ ಮೈಸೂರು ರಾಜ್ಯಕ್ಕೆ ಭೇಟಿ ಕೊಟ್ಟ ಪರದೇಶಗಳ ಇತಿಹಾಸ ತಜ್ಞರಿಂದ. ಜಗತ್ಪ್ರಸಿದ್ಧ ಪೋರ್ತುಗೀಸ್ ಯಾತ್ರಿಕ ಬಾರ್ತೊಲೋಮಿಯೋ ತನ್ನ “ವೊಯೇಜ್ ಟು ಈಸ್ಟ್ ಇಂಡೀಸ್” ಎಂಬ ಕೃತಿಯಲ್ಲಿ ಬರೆಯುವ ಕೆಲವು ಸಾಲುಗಳು: “ಟಿಪ್ಪು ಒಂದು ಆನೆಯ ಮೇಲೆ ಕೂತು ಸವಾರಿ ಮಾಡುತ್ತಿದ್ದ. ಅವನ ಹಿಂದೆ ಒಟ್ಟು 30,000 ಸೈನಿಕರಿದ್ದರು. ಕಲ್ಲಿಕೋಟೆಯಲ್ಲಿ ಇವರು ಸಿಕ್ಕಸಿಕ್ಕ ನಾಗರಿಕರನ್ನು ನೇಣು ಬಿಗಿದು ನೇತಾಡಿಸಿದರು. ಮಾತೆಯರ ಕೊರಳಿಗೆ ಅವರ ಮಕ್ಕಳನ್ನು ಕಟ್ಟಿಹಾಕಿ ಗಲ್ಲಿಗೆ ಹಾಕಲಾಯಿತು. ಕೇರಳದ ಕ್ರಿಶ್ಚಿಯನ್ನರು ಮತ್ತು ಹಿಂದೂಗಳನ್ನು ನಗ್ನವಾಗಿಸಿ ಆನೆಗಳ ಕಾಲಿಗೆ ಕಟ್ಟಿ ಎಳೆಸಲಾಯಿತು. ಅವರ ದೇಹಗಳು ಛಿದ್ರವಾಗಿ ಬೇರ್ಪಡುವವರೆಗೂ ಟಿಪ್ಪು ಈ ವಿಕೃತ ವಿನೋದಾವಳಿಯನ್ನು ಮುಂದುವರಿಸಿದ. ಕಲ್ಲಿಕೋಟೆಯ ಎಲ್ಲಾ ಚರ್ಚು ಮತ್ತು ಮಂದಿರಗಳನ್ನೂ ನೆಲಸಮ ಮಾಡಲಾಯಿತು. ಬದುಕುಳಿದ ಗಂಡು-ಹೆಣ್ಣುಗಳಿಗೆ ಮುಸ್ಲಿಮ್ ಹೆಣ್ಣು-ಗಂಡುಗಳನ್ನು ಬಲವಂತವಾಗಿ ಮದುವೆ ಮಾಡಿಸಲಾಯಿತು. ದೊರೆಯ ಆಜ್ಞೆಯನ್ನು ಧಿಕ್ಕರಿಸಿ ಪಲಾಯನ ಮಾಡಲು ನೋಡಿದವರನ್ನು ಹಿಡಿದುತಂದು ಕೂಡಲೇ ಗಲ್ಲಿಗೇರಿಸಿ, ಹೆಣವನ್ನು ಊರಲ್ಲಿ ಮೆರವಣಿಗೆ ಮಾಡಲಾಯಿತು.” ಬಾರ್ತೊಲೋಮಿಯೊನ ಈ ವಿವರಣೆಗಳನ್ನು ಓದುತ್ತ ಹೋದಾಗ, ನಮಗೆ, ಟಿಪ್ಪು ಯಾವ ಕೋನದಿಂದ ಧರ್ಮಸಹಿಷ್ಣುವಿನಂತೆ ಕಾಣಿಸುತ್ತಾನೆ? ಕಲ್ಲಿಕೋಟೆ ಒಂದು ಕಾಲದಲ್ಲಿ ಬ್ರಾಹ್ಮಣರ ಬಾಹುಳ್ಯವಿದ್ದ ಪಟ್ಟಣವಾಗಿತ್ತು. ಆದರೆ ಟಿಪ್ಪು ಅಲ್ಲಿದ್ದ 7000 ಬ್ರಾಹ್ಮಣ ಕುಟುಂಬಗಳಿಗೆ ಯಮಸದೃಶನಾದ. 2000 ಕುಟುಂಬಗಳನ್ನು ಒಂದು ಕುಡಿಯೂ ಉಳಿಯದಂತೆ ಅಳಿಸಿಹಾಕಿದ. ಹೆಂಗಸರು ಮಕ್ಕಳೂ ಆತನ ಸೇನೆಗೆ ಕೊರಳೊಡ್ಡಿ ಹುಳುಗಳಂತೆ ಸತ್ತರು. ಟಿಪ್ಪುವಿನ ಕಾಲದಲ್ಲಿ ಮಂಗಳೂರಿಗೆ ಬ್ರಿಟಿಷ್ ಅಧಿಕಾರಿಯಾಗಿ ನೇಮಕವಾಗಿದ್ದ ಕರ್ನಲ್ ಫುಲ್ಲೆರ್ಟನ್ 1783ರಲ್ಲಿ ಟಿಪ್ಪುಸೈನ್ಯ ತೋರಿದ ಹಿಂಸೆಯ ಭೀಭತ್ಸವನ್ನು ಹೀಗೆ ದಾಖಲು ಮಾಡುತ್ತಾನೆ: ಟಿಪ್ಪುವಿನ ಸೈನಿಕರು ಪ್ರತಿದಿನ ಹತ್ತಿಪ್ಪತ್ತು ಜನ ಬ್ರಾಹ್ಮಣರ ತಲೆಗಳನ್ನು ಕಡಿದು ತಂದು ಝಮೊರಿನ್ ಕೋಟೆಯ ಆಸುಪಾಸಿನಲ್ಲಿ ತೂಗು ಹಾಕುತ್ತಿದ್ದರು. ಈ ಕ್ರೌರ್ಯವನ್ನು ಕಂಡು ಸಹಿಸಲಾಗದೆ; ಇನ್ನಷ್ಟು ಬ್ರಾಹ್ಮಣರ ಜೀವ ಹೋಗಬಾರದೆಂಬ ಉದ್ಧೇಶದಿಂದ ಝಮೊರಿನ್ ರಾಜ ಆ ಪ್ರದೇಶಗಳನ್ನು ಬಿಟ್ಟುಕೊಟ್ಟು ಕೇರಳದ ದಕ್ಷಿಣಭಾಗಕ್ಕೆ ಹೋದ. ಟಿಪ್ಪುವಿನ ಅಧಿಕಾರಿಗಳು ಮಂಗಳೂರು ಮತ್ತು ಕೇರಳ ಪ್ರಾಂತ್ಯಗಳಲ್ಲಿ ನಡೆಸುತ್ತಿದ್ದ ಇನ್ನೊಂದು ಕೆಲಸವೆಂದರೆ ಸಾಮೂಹಿಕ ಮುಂಜಿ. ಸುಮಾರು ಸಾವಿರ ಜನರನ್ನು ಒಂದೇ ಸಾಲಿನಲ್ಲಿ ನಿಲ್ಲಿಸಿ, ಅವರ ಮರ್ಮಗಳ ಮುಂಭಾಗದ ತೊಗಲನ್ನು ಕತ್ತಿಯಿಂದ ಕತ್ತರಿಸುತ್ತಿದ್ದರು. ಈ ಕ್ರಿಯೆಯನ್ನು ಮಾಡಿಸಿಕೊಂಡವನು ಇಸ್ಲಾಂ ಮತಸ್ಥನಾದ ಎಂಬ ಘೋಷಣೆ ಮಾಡುತ್ತಿದ್ದರು. ಅಲ್ಲದೆ ಅವರ ಬಾಯಿಗೆ ಬಲವಂತವಾಗಿ ದನದ ಮಾಂಸವನ್ನು ತುರುಕಲಾಗುತ್ತಿತ್ತು.

ಟಿಪ್ಪುವಿನ ಕೃತ್ಯಗಳ ವಿವರಗಳು ಸಿಗುವ ಇನ್ನೊಂದು ಮೂಲ:
“ಮಲಬಾರ್ ಮ್ಯಾನುಯೆಲ್” ಎಂಬ ಗ್ರಂಥ. ಇದನ್ನು ಬರೆದ ವಿಲಿಯಂ ಲೋಗನ್, ಬ್ರಿಟಿಷ್ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಒಬ್ಬ ಸ್ಕಾಟಿಷ್ ಅಧಿಕಾರಿ. ಈತ ಕೇರಳ ಮತ್ತು ತಮಿಳುನಾಡುಗಳಲ್ಲಿ ಸುಮಾರು ಇಪ್ಪತ್ತು ವರ್ಷ ಮ್ಯಾಜಿಸ್ಟ್ರೇಟ್ ಮತ್ತು ನ್ಯಾಯಾಧೀಶನಾಗಿ ಕೆಲಸ ಮಾಡಿದ. ನಂತರ ಇವನನ್ನು ಮಲಬಾರ್ ಪ್ರಾಂತ್ಯದ ಕಲೆಕ್ಟರ್ ಆಗಿ ನೇಮಿಸಿ ಕಳಿಸಲಾಯಿತು. ಭಾರತದಲ್ಲಿ ತನ್ನ ಬಹುವರ್ಷಗಳನ್ನು ಕಳೆದದ್ದರಿಂದ ಲೋಗನ್ ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ನಿರರ್ಗಳವಾಗಿ ಮಾತಾಡಬಲ್ಲನಾಗಿದ್ದ. ತನ್ನ ಪುಸ್ತಕದಲ್ಲಿ ಆತ, ಟಿಪ್ಪು ಮಲಬಾರಿನಲ್ಲಿ ಮಾಡಿದ ಮತಾಂತರದ ಅತ್ಯಾಚಾರಗಳನ್ನು ತಣ್ಣಗಿನ ಭಾಷೆಯಲ್ಲಿ ನಿರ್ವಿಕಾರ ಸಂತನಂತೆ ಹೇಳುತ್ತಾ ಹೋಗುತ್ತಾನೆ. ಅವನು ಹೇಳುವ ವರ್ಣನೆಗಳನ್ನು ಕೇಳಿದರೆ ಹೊಟ್ಟೆಯಲ್ಲಿ ಛಳುಕು ಮೂಡುತ್ತದೆ. “ಕಲ್ಲಿಕೋಟೆಯಿಂದ ಇಪ್ಪತ್ತನೇ ಪತ್ರ ಬಂತು. ಎಂದಿನಂತೆ – ಇಷ್ಟಿಷ್ಟು ಜನ ಬ್ರಾಹ್ಮಣರನ್ನು ಹಿಡಿದುಹಾಕಲಾಯಿತು. ಅವರನ್ನು ಬಲಾತ್ಕಾರವಾಗಿ ಮುಂಜಿ ಮಾಡಿಸಿ ದನದ ಮಾಂಸ ತಿನ್ನಿಸಿ ಮುಸಲ್ಮಾನರಾಗಿ ಮಾಡಲಾಯಿತು – ಎಂಬ ಒಕ್ಕಣೆ ಇತ್ತು ಅದರಲ್ಲಿ. ಈ ಇಪ್ಪತ್ತನೇ ಪತ್ರದಲ್ಲಿ 200 ಮಂದಿ ಬ್ರಾಹ್ಮಣರನ್ನು ಹಿಡಿಯಲಾಯಿತು ಎಂಬ ಮಾಹಿತಿ ಇತ್ತು.” ಈ ಪತ್ರಗಳು ನಿರಂತರವಾಗಿ ಕೇರಳದ ಸೈನಿಕರಿಂದ ಟಿಪ್ಪುವಿಗೆ ರವಾನೆಯಾಗುತ್ತಿದ್ದವು. ನೂರಿನ್ನೂರು ಜನರನ್ನು ಹಿಡಿಯುವುದು; ಅವರನ್ನು ಸಾಮೂಹಿಕವಾಗಿ ಮುಂಜಿ ಮಾಡಿಸಿ, ಮಾಂಸ ತಿನ್ನಿಸುವುದು ಅವ್ಯಾಹತವಾಗಿ ನಡೆಯುತ್ತಿತ್ತು. ತಾವು ಎಷ್ಟೆಷ್ಟು ಜನರನ್ನು ಹೀಗೆ ಮುಸಲ್ಮಾನರಾಗಿ ಮಾಡಿದೆವು ಎನ್ನುವ ವಿವರಗಳನ್ನು ಅವರು ಟಿಪ್ಪುವಿಗೆ ತಲುಪಿಸಬೇಕಾಗಿತ್ತು. ಅದೇ ಪುಸ್ತಕದಲ್ಲಿ ಬರುವ ಇನ್ನೊಂದು ಭಾಗ ನೋಡಿ: “ಕುಟ್ಟಿಪುರಂ ಎನ್ನುವುದು ಕಡತ್ತನಾಡ್ ರಾಜವಂಶದ ರಾಜಧಾನಿ. ಇಲ್ಲಿಗೆ ಟಿಪ್ಪು ದಾಳಿ ಮಾಡುವ ಸೂಚನೆ ಸಿಕ್ಕಿತು. ಹಲವು ವರ್ಷಗಳಿಂದ ಆತ ಈ ಊರನ್ನು ವಶಪಡಿಸಿಕೊಳ್ಳಲು ಹಂಚಿಕೆ ಹಾಕುವುದೂ ಇಲ್ಲಿನ ಜನ ಪ್ರಬಲವಾದ ಪ್ರತಿರೋಧ ಒಡ್ಡುವುದೂ ನಡೆದೇ ಇತ್ತು. ಆದರೆ ಟಿಪ್ಪು ಹಲವು ಅಕ್ರಮ ಮಾರ್ಗಗಳನ್ನು ಬಳಸಿ, ಇಲ್ಲಿನ ಯೋಧರ ಸಂಖ್ಯೆ ಕಡಿಮೆಯಾಗುವಂತೆ ನೋಡಿಕೊಂಡಿದ್ದ. ಕೊನೆಗೆ ಅಲ್ಲಿ 2000 ನಾಯರ್ ಸೈನಿಕರು ಮಾತ್ರ ಉಳಿದುಕೊಂಡಿದ್ದರು. ಆದರೂ ಅವರು ವೀರಾವೇಶದಿಂದ ಹೋರಾಡುತ್ತಿದ್ದರು. ಎಷ್ಟು ಧೈರ್ಯದಿಂದ ಕಾದಿದರೂ ಟಿಪ್ಪುವಿನ ಮಹಾಸೈನ್ಯದೆದುರು ಈ ಎರಡು ಸಾವಿರ ಮಂದಿ ಏನೂ ಮಾಡುವಂತಿರಲಿಲ್ಲ. ಟಿಪ್ಪುವಿನ ಸೈನ್ಯ ಕೋಟೆಯನ್ನು ವಶಪಡಿಸಿಕೊಂಡೇಬಿಟ್ಟಿತು. ನಾಯರ್‍ಗಳು ಶರಣಾಗಬೇಕಾಯಿತು. ಯುದ್ಧದ ಮರುದಿನ ಟಿಪ್ಪುವಿನ ಸೇನೆಯ ವಿಜಯೋತ್ಸವ ನಡೆಯಿತು. ಎಲ್ಲಾ ನಾಯರ್ ಯುವಕರನ್ನೂ ನಿಲ್ಲಿಸಿ ಬಲವಂತವಾಗಿ ಮುಂಜಿ ಮಾಡಿಸಲಾಯಿತು. ಹೆಣ್ಣುಗಂಡೆಂಬ ಭೇದವಿಲ್ಲದೆ ಎಲ್ಲರಿಗೂ ದನದ ಮಾಂಸ ತಿನ್ನಿಸಲಾಯಿತು. ತಮ್ಮ ಧರ್ಮಕ್ಕೆ ವಿರುದ್ಧವಾಗಿ ನಡೆಯುವುದು ಸಾವಿಗಿಂತ ದೊಡ್ಡ ದುರಂತ ಎಂದು ಭಾವಿಸಿದ್ದ ನಾಯರ್‍ಗಳಿಗೆ ಅಂದು ಆದ ಅವಮಾನ ಎಂದೆಂದೂ ಮಾಯದ ಗಾಯದಂತೆ ಉಳಿದುಕೊಂಡಿತು”.

ಜನರನ್ನು ಮತಾಂತರ ಮಾಡಲು ಯಾವ ಮಾರ್ಗಗಳನ್ನೆಲ್ಲ ಬಳಸಿಕೊಳ್ಳಬಹುದೋ ಅವೆಲ್ಲವನ್ನೂ ಸಮರ್ಥವಾಗಿ ದುಡಿಸಿಕೊಳ್ಳುತ್ತಿದ್ದ ಟಿಪ್ಪು. ಮೈಸೂರಿನಲ್ಲಿ ಟಿಪ್ಪುವಿನ ಮಕ್ಕಳು ಬರೆದಿಟ್ಟ ಪತ್ರ, ಕಾಗದ, ಡೈರಿಗಳು – ಮುಂತಾದ ಲಿಖಿತ ದಾಖಲೆಗಳನ್ನು ಆಳವಾಗಿ ಅಭ್ಯಸಿಸಿ; ಕೀರ್ಮಾನಿಯಂಥ ಟಿಪ್ಪು ಆಸ್ಥಾನಪಂಡಿತರ ಮಾತುಗಳನ್ನು ಆಧರಿಸಿ ಎಮ್.ಎ. ಗೋಪಾಲ ರಾವ್ ಎಂಬವರು ಟಿಪ್ಪುವಿನ ಚರಿತ್ರೆಯನ್ನು ಬರೆದಿದ್ದಾರೆ. ಅದರಲ್ಲಿ ಈ ಮುಂದಿನ ಮಾತುಗಳನ್ನು ಅವರು ಬರೆದಿದ್ದಾರೆ: “ಟಿಪ್ಪುವಿನ ಮೂಲೋದ್ಧೇಶ ಮತಾಂತರವೇ ಆಗಿತ್ತು ಎನ್ನುವುದನ್ನು ಅವನ ಆಡಳಿತದ ನೀತಿ-ವಿಧಾನಗಳೇ ಸ್ಪಷ್ಟಪಡಿಸುತ್ತವೆ. ಟಿಪ್ಪುವಿನ ಆಡಳಿತದಲ್ಲಿ ಮುಸ್ಲಿಮರಿಗೆ ಮನೆ ತೆರಿಗೆ; ಕೊಳ್ಳುವ ವಸ್ತುಗಳ ಮೇಲೆ ಮಾರಾಟ ತೆರಿಗೆ ಮುಂತಾದವು ಇರಲಿಲ್ಲ. ಹಾಗೆಯೇ ಮುಸಲ್ಮಾನ ಮತಕ್ಕೆ ಮತಾಂತರಗೊಂಡವರಿಗೂ ಈ ಎಲ್ಲ ವಿನಾಯತಿಗಳನ್ನು ನೀಡಲಾಗುತ್ತಿತ್ತು. ಮತಾಂತರಗೊಂಡವರ ಮಕ್ಕಳನ್ನು ಉಚಿತವಾಗಿ ಓದಿಸುವುದಕ್ಕೂ ಟಿಪ್ಪು ವ್ಯವಸ್ಥೆ ಮಾಡಿದ್ದ. ಆದರೆ, ಅವನ ರಾಜ್ಯದ ಹಿಂದೂಗಳು ಮಾತ್ರ ಒಂದಕ್ಕೆರಡು ಪಟ್ಟು ತೆರಿಗೆ ಕಟ್ಟುತ್ತ ಹೈರಾಣಾಗಿದ್ದರು. ಸರಕಾರದ ಆಡಳಿತ ಮತ್ತು ಮಿಲಿಟರಿ ವ್ಯವಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಹಿಂದೂಗಳನ್ನು ಆರಿಸುವ ಪದ್ಧತಿ ಹೈದರಾಲಿಯ ಕಾಲದಲ್ಲಿತ್ತು. ಅದನ್ನು ಟಿಪ್ಪು ಸಂಪೂರ್ಣವಾಗಿ ನಿಲ್ಲಿಸಿದ. ಅವನ ಹದಿನಾರು ವರ್ಷಗಳ ಆಡಳಿತದಲ್ಲಿ ಸರಕಾರದಲ್ಲಿ ಉನ್ನತಹುದ್ದೆಯಲ್ಲಿ ಕಾರ್ಯನಿರ್ವಹಿಸಿದ ಏಕೈಕ ಹಿಂದೂ ಎಂದರೆ ದಿವಾನನ ಹುದ್ದೆಯಲ್ಲಿದ್ದ ಪೂರ್ಣಯ್ಯ ಮಾತ್ರ. 1797ರ ಹೊತ್ತಿಗೆ ಸರಕಾರದ ಒಟ್ಟು 65 ಉನ್ನತ ಹುದ್ದೆಗಳಲ್ಲಿ ಒಂದೇ ಒಂದರಲ್ಲೂ ಮುಸ್ಲಿಮರನ್ನು ಬಿಟ್ಟರೆ ಬೇರೆ ಜಾತಿ-ಮತ-ಧರ್ಮದವರು ಇರಲಿಲ್ಲ. 1792ರಲ್ಲಿ ಬ್ರಿಟಿಷರು ಹಿಡಿದು ಹಾಕಿದ್ದ ಒಟ್ಟು 26 ಅಧಿಕಾರಿಗಳಲ್ಲಿ ಕೇವಲ ಆರು ಜನ ಮಾತ್ರ ಬೇರೆ ಮತದವರಾಗಿದ್ದರು. 1789ರಲ್ಲಿ ಹೈದರಾಬಾದಿನ ನಿಜಾಮ, ಸರಕಾರದ ನೌಕರಶಾಹಿಯಲ್ಲಿ ಮುಸ್ಲಿಮರನ್ನು ಬಿಟ್ಟರೆ ಬೇರಾವ ಮತ-ಧರ್ಮಗಳವರೂ ಇರಬಾರದು ಎಂಬ ಕಾನೂನು ತಂದಿದ್ದ. ಅದನ್ನು ಕೆಲವೇ ವರ್ಷಗಳಲ್ಲಿ ಟಿಪ್ಪು ಅಳವಡಿಸಿಕೊಂಡ. ನೌಕರಿ ಎಂಬುದು ಅರ್ಹತೆಗಿಂತ ಜಾತಿಯಾಧಾರಿತವಾದ ಮೇಲೆ, ಅನಕ್ಷರಸ್ಥರು, ಅನನುಭವಿಗಳು, ಸರಿಯಾದ ಕೌಶಲ ಇಲ್ಲದವರೆಲ್ಲ ವಿವಿಧ ಹುದ್ದೆಗಳನ್ನು ಅಲಂಕರಿಸತೊಡಗಿದರು. ಮೇಲ್‍ಸ್ತರದಲ್ಲಿ ಕೆಲಸ ಮಾಡುವವರೆಲ್ಲ ಮುಸ್ಲಿಮರೇ ಆದ್ದರಿಂದ ಕನ್ನಡ ಮತ್ತು ಮರಾಠಿಯ ಬದಲು ಪರ್ಶಿಯನ್ ಭಾಷೆಯನ್ನೇ ಬರಹದಲ್ಲಿ ಉಪಯೋಗಿಸತೊಡಗಿದರು. ಬರಬರುತ್ತ ಆಡಳಿತವೆನ್ನುವುದು ಭ್ರಷ್ಟಾಚಾರದ ಕೂಪವಾಗಿ ಪತಿವರ್ತನೆಯಾಯಿತು. ಆಲಸಿಗಳು, ಅದಕ್ಷರು ಎಲ್ಲೆಲ್ಲೂ ತುಂಬಿಕೊಂಡರು. ಇಂಥವರ ಬಗ್ಗೆ ಸಾರ್ವಜನಿಕರು ಎಷ್ಟೇ ದೂರು ಒಯ್ದರೂ ಟಿಪ್ಪು, ಅವುಗಳ ಮೇಲೆ ವಿಚಾರಣೆ ಕರೆಯಲಿಕ್ಕೂ ಮನಸ್ಸು ಮಾಡಲಿಲ್ಲ”. – ಇಲ್ಲಿ ಮುಖ್ಯವಾಗಿ, ಟಿಪ್ಪುವಿನ ಮತಾಂಧತೆ ಹೇಗೆ ಕೊನೆಗೆ ಇಡೀ ರಾಜ್ಯಾಡಳಿತವನ್ನೇ ಹಳ್ಳಹಿಡಿಸಿತು ಎನ್ನುವುದನ್ನು ಗೋಪಾಲ ರಾಯರು ವಿವರಿಸಿದ್ದಾರೆ. ಅಲ್ಲದೆ, ಅದರಿಂದ ಕನ್ನಡಭಾಷೆಯೂ ಬಹುದೊಡ್ಡ ಹೊಡೆತ ತಿನ್ನಬೇಕಾಯಿತು. ಟಿಪ್ಪು ತನ್ನ ಮತದ ಬಗ್ಗೆ ಅದೆಷ್ಟು ಅಂಧಾಭಿಮಾನ ಇಟ್ಟುಕೊಂಡಿದ್ದನೆಂದರೆ, ಪರ್ಶಿಯನ್‍ಅನ್ನು ರಾಜ್ಯಭಾಷೆಯಾಗಿ ತರುವ ಬಗ್ಗೆಯೂ ಯೋಚನೆ ಮಾಡಿದ್ದ. ಕೊನೆಗೆ, ತನ್ನ ಭಾಷೆಯನ್ನು ಇಡೀ ರಾಜ್ಯದ ಜನತೆಯ ಮೇಲೆ ಹೇರಿದರೆ ದೊಡ್ಡಮಟ್ಟದ ವಿರೋಧ ಎದುರಿಸಬೇಕಾದೀತೆಂಬ ಭಯದಿಂದ ಆ ಕೆಲಸಕ್ಕೆ ಕೈಹಾಕಲಿಲ್ಲ ಅಷ್ಟೆ. ಆಡಳಿತದಲ್ಲಿ ಮಾತ್ರ ಬಹುತೇಕ ಎಲ್ಲ ವಿಭಾಗಗಳಲ್ಲೂ ಪರ್ಶಿಯನ್ ಪದಗಳು ನಿಂತುಹೋಗಿವೆ.
ಜೆಹಾದ್ ಉಗ್ರ ಟಿಪ್ಪು ಮೂಲತಃ ಒಬ್ಬ ಮತಾಂಧ ಅರಸನಾಗಿದ್ದ ಎನ್ನುವುದಕ್ಕೆ ಅವನೇ ಬರೆದ ಹಲವು ಪತ್ರಗಳು ಸಾಕ್ಷಿ ಹೇಳುತ್ತವೆ. ಅಬ್ದುಲ್ ಖಾದಿರ್‍ನಿಗೆ 1788ರ ಮಾರ್ಚ್ 22ರಂದು ಬರೆಯುವ ಪತ್ರದಲ್ಲಿ “ಒಟ್ಟು 12,000 ಜನ ಹಿಂದೂಗಳನ್ನು ಇಸ್ಲಾಮ್ ಧರ್ಮಕ್ಕೆ ಮತಾಂತರಿಸಲಾಯಿತು. ಅವರಲ್ಲಿ ಹೆಚ್ಚಿನವರು ನಂಬೂದಿರಿ ಬ್ರಾಹ್ಮಣರು. ಈ ಮತಾಂತರ ಕಾರ್ಯವನ್ನು ದೊಡ್ಡಮಟ್ಟದಲ್ಲಿ ಪ್ರಚಾರಗೊಳಿಸಬೇಕು. ಸ್ಥಳೀಯ ಊರುಗಳ ಎಲ್ಲಾ ಹಿಂದೂ ಧರ್ಮೀಯರನ್ನೂ ನಿನ್ನೆದುರು ನಿಲ್ಲಿಸಿ ಇಸ್ಲಾಂಗೆ ಮತಾಂತರಿಸುವ ಕೆಲಸ ನಡೆಯಲಿ. ನೆನಪಿಡು – ಒಬ್ಬನೇ ಒಬ್ಬ ಬ್ರಾಹ್ಮಣನೂ ತಪ್ಪಿಸಿಕೊಳ್ಳಬಾರದು” ಎಂದು ಬರೆಯುತ್ತಾನೆ ಟಿಪ್ಪು. 1790ರ ಜನವರಿ 18ರಂದು ಸಯ್ಯದ್ ಅಬ್ದುಲ್ ದುಲಾಯಿಗೆ ಪತ್ರ ಬರೆದು “ಪ್ರವಾದಿ ಮುಹಮ್ಮದ ಮತ್ತು ಅಲ್ಲಾಹನ ದಯೆಯಿಂದ, ಕಲ್ಲಿಕೋಟೆಯ ಎಲ್ಲಾ ಹಿಂದೂಗಳೂ ಇಸ್ಲಾಂ ಮತೀಯರಾದರು. ಕೊಚ್ಚಿ ರಾಜ್ಯದ ಗಡಿಭಾಗದಲ್ಲಿರುವ ಕೆಲವರು ಮಾತ್ರ ಇನ್ನೂ ಮತ ಬದಲಾಯಿಸದೆ ಉಳಿದುಕೊಂಡಿದ್ದಾರೆ. ಅವರನ್ನೂ ಬಿಡದೆ ಮತಾಂತರ ಮಾಡುವ ಕೆಲಸವನ್ನು ಶೀಘ್ರದಲ್ಲೇ ಕೈಗೆತ್ತಿಕೊಂಡು ಮುಗಿಸುತ್ತೇನೆ. ಇದನ್ನು ನಾನು ಜೆಹಾದ್ ಎಂದೇ ಪರಿಗಣಿಸಿದ್ದೇನೆ” ಎಂದಿದ್ದಾನೆ. ಅದರ ಮರುದಿನ ಬುದ್ರುಜ್ ಜುಮನ್ ಖಾನ್‍ಗೆ ಬರೆಯುವ ಪತ್ರದಲ್ಲಿ “ನಾನು ಇತ್ತೀಚೆಗೆ ಮಲಬಾರ್ ಪ್ರಾಂತ್ಯದಲ್ಲಿ ನಾಲ್ಕು ಲಕ್ಷ ಜನರನ್ನು ಇಸ್ಲಾಂಗೆ ಮತಾಂತರಿಸಿದ್ದು ನಿನಗೆ ಗೊತ್ತಿದೆಯೆ? ಅಂಥ ಸಾಧನೆ ಮಾಡಿದ ಮೇಲೆ ಅದೆಷ್ಟು ಉತ್ಸಾಹ ಬಂದಿದೆಯೆಂದರೆ ರಾಮನ್ ನಾಯರ್‍ನ (ತಿರುವಾಂಕೂರಿನ ರಾಜ ರಾಮ ವರ್ಮ) ರಾಜ್ಯದ ಮೇಲೆ ದಂಡೆತ್ತಿಹೋಗುವುದಕ್ಕೆ ಕಾತರದಿಂದ ಕಾಯುತ್ತಿದ್ದೇನೆ. ಆತನನ್ನೂ ಆತನ ಜನರನ್ನೂ ಇಸ್ಲಾಂಗೆ ಮತಾಂತರಿಸುವ ಯೋಚನೆಯೇ ಚೇತೋಹಾರಿಯಾಗಿದೆ. ಶ್ರೀರಂಗಪಟ್ಟಣಕ್ಕೆ ವಾಪಸು ಹೋಗುವುದನ್ನು ಕೂಡ ನಾನು ಮರೆತಂತಿದೆ” ಎಂದು ಬರೆಯುತ್ತಾನೆ.

ಲಾಹೋರಿನ ಪಾಕಿಸ್ತಾನ್ ಅಡ್ಮಿನಿಸ್ಟ್ರೇಟಿವ್ ಸ್ಟಾಫ್ ಕಾಲೇಜು 1964ರಲ್ಲಿ ಪ್ರಕಟಿಸಿದ “ಲೈಫ್ ಆಫ್ ಟಿಪ್ಪು ಸುಲ್ತಾನ್” ಎಂಬ ಕೃತಿಯಲ್ಲಿ ಈ ಸಾಲುಗಳನ್ನು ಬರೆಯಲಾಗಿದೆ: ಟಿಪ್ಪು ಮಲಬಾರ್ ಪ್ರಾಂತ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಹಿಂದೂಗಳನ್ನೂ 70,000 ಕ್ರಿಶ್ಚಿಯನ್ನರನ್ನೂ ಬಲಾತ್ಕಾರವಾಗಿ ಮತಾಂತರ ಮಾಡಿದ. ಅವರಿಗೆ ಮುಂಜಿ ಮಾಡಿ ದನದ ಮಾಂಸ ತಿನ್ನಿಸಿ ಧರ್ಮಭ್ರಷ್ಟಗೊಳಿಸಲಾಯಿತು. ಈ ಎಲ್ಲ ಕೆಲಸಗಳು ಅತ್ಯಂತ ಹೀನಾಯ ಮತ್ತು ಅನೈತಿಕವಾಗಿದ್ದರೂ ಅವು ಟಿಪ್ಪುವಿನ ಉದ್ಧೇಶ ನೆರವೇರಿಸಿದವು ಎಂದು ಹೇಳಬಹುದು. ತಮ್ಮ ಧರ್ಮದಿಂದ ಭ್ರಷ್ಟಗೊಂಡ ಮೇಲೆ ಆ ಜನರಿಗೆ ತಮ್ಮ ವೈರಿಯ ಮತವನ್ನು ಒಪ್ಪಿಕೊಂಡು ಜೀವ ಉಳಿಸಿಕೊಳ್ಳುವುದಕ್ಕಿಂತ ಬೇರೆ ಆಯ್ಕೆಗಳೇ ಇರಲಿಲ್ಲ. ಹೀಗೆ ಮತಾಂತರಗೊಂಡವರ ಮಕ್ಕಳು ಮುಸ್ಲಿಮರೇ ಆದರು. ಮತಾಂತರಗೊಂಡವರಿಗೆ ತೆರಿಗೆ ವಿನಾಯಿತಿ, ಸೇನೆಯಲ್ಲಿ ಕೆಲಸ ಇತ್ಯಾದಿ ಸೌಲಭ್ಯ ದೊರೆತದ್ದರಿಂದ, ಅವರು ತಮ್ಮ ಇಚ್ಛೆಗೆ ವಿರುದ್ಧವಾಗಿದ್ದರೂ ಇಸ್ಲಾಂ ಮತದಲ್ಲಿ ಉಳಿದುಕೊಳ್ಳುವಂತಾಯಿತು. ಟಿಪ್ಪುವಿನ ಮತಾಂತರ ಕಾರ್ಯ ಕೇವಲ ಮಲಬಾರ್ ಪ್ರಾಂತ್ಯಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಅದು ಪೂರ್ವದಲ್ಲಿ ಕೊಯಮತ್ತೂರಿನವರೆಗೂ ಹರಡಿತ್ತು”.

ದೇಗುಲಭಂಜಕ ಕೇರಳದ ಮಲಬಾರ್ ಪ್ರಾಂತ್ಯದಲ್ಲಿದ್ದ ಕ್ರಿಶ್ಚಿಯನ್ನರು ಮತ್ತು ಹಿಂದೂಗಳನ್ನು ಬಲಾತ್ಕಾರವಾಗಿ ಮತಾಂತರ ಮಾಡಿಸಬೇಕು ಎನ್ನುವುದು ಟಿಪ್ಪುವಿನ ಉದ್ಧೇಶವಾಗಿತ್ತು. ಲೆವಿಸ್ ಬಿ. ಬೌರಿ ಎಂಬ ಬ್ರಿಟಿಷ್ ಇತಿಹಾಸಜ್ಞನ ಪ್ರಕಾರ, ಟಿಪ್ಪು ಮಲಬಾರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಡಿದ ಅತ್ಯಾಚಾರ, ದೌರ್ಜನ್ಯಗಳನ್ನು ಭಾರತದ ಮೇಲೆ ದಾಳಿ ಮಾಡಿದ ಮುಹಮ್ಮದ್ ಘಜನಿ, ಅಲ್ಲಾದೀನ್ ಖಿಲ್ಜಿ, ನಾದಿರ್ ಷಾ ಮುಂತಾದವರಿಗೂ ಸರಿಗಟ್ಟುವುದು ಸಾಧ್ಯವಿಲ್ಲ. ವಿಲಿಯಂ ಲೋಗನ್ ತನ್ನ “ಮಲಬಾರ್ ಮ್ಯಾನುಯೆಲ್” ಹೊತ್ತಗೆಯಲ್ಲಿ, ಟಿಪ್ಪು ನಾಶಗೊಳಿಸಿದ ಹಿಂದೂ ದೇವಾಲಯಗಳ ಪಟ್ಟಿ ಮಾಡುತ್ತಾನೆ. ಚಿರಕ್ಕಲ್ ತಾಲೂಕಿನ ತ್ರಿಚಂಬರಂ ಮತ್ತು ತಲಿಪ್ಪರಂಪು ದೇವಸ್ಥಾನಗಳು, ತೆಲಿಶ್ಶೇರಿಯ ತಿರುವೆಂಕಟ ದೇವಸ್ಥಾನ, ಬಡಕ್ಕರ ಸಮೀಪದ ಪೊನ್ಮೆರಿ ದೇವಸ್ಥಾನ – ಇವೆಲ್ಲ ಟಿಪ್ಪು ದಾಳಿಗೆ ಒಳಗಾದ ಹಿಂದೂ ಶ್ರದ್ಧಾಕೇಂದ್ರಗಳು. ಕೇರಳದ ಮಣಿಯೂರು ಮಸೀದಿ ಒಂದು ಕಾಲದಲ್ಲಿ ದೇವಸ್ಥಾನವಾಗಿತ್ತು ಎಂಬ ಅಂಶವನ್ನೂ ವಿಲಿಯಂ ಮುಂದಿಡುತ್ತಾರೆ. ಟಿಪ್ಪು ಮೈಸೂರು, ಕೊಡಗು, ಮಂಗಳೂರು ಮತ್ತು ಕೇರಳಗಳಲ್ಲಿ ಹಿಂದೂ ದೇವಸ್ಥಾನಗಳಲ್ಲಿ ತೋರಿಸಿದ ಕ್ರೌರ್ಯಕ್ಕೆ ಸಮಾನವಾದ ಬೇರಾವ ಉದಾಹರಣೆಗಳೂ ನಮಗೆ ಸಿಗುವುದಿಲ್ಲ. ಬೆಂಕಿ ಹಚ್ಚಿ ನೂರಾರು ದೇವಾಲಯಗಳನ್ನು ಬೂದಿ ಮಾಡಲಾಯಿತು. ಕಲ್ಲಿನ ಕೆತ್ತನೆಗಳನ್ನು ವಿರೂಪಗೊಳಿಸಲಾಯಿತು. ತಾಳಿಪ್ಪರಂಪು, ತ್ರಿಶಂಬರಂ ಮುಂತಾದ ಅತಿಪ್ರಮುಖ ದೇವಸ್ಥಾನಗಳಲ್ಲಿ ಟಿಪ್ಪು ಮತ್ತವನ ಸೈನಿಕರು ಮಾಡಿದ ಅನಾಚಾರಗಳನ್ನು ಎಂದಿಗೂ ಕ್ಷಮಿಸುವುದು ಸಾಧ್ಯವಿಲ್ಲ ಎಂದು ವಟಕ್ಕಂಕೂರು ರಾಜರಾಜ ವರ್ಮ ತನ್ನ “ಕೇರಳದ ಸಂಸ್ಕøತ ಸಾಹಿತ್ಯದ ಚರಿತ್ರೆ” ಎಂಬ ಪ್ರಸಿದ್ಧ ಕೃತಿಯಲ್ಲಿ ದಾಖಲಿಸಿದ್ದಾರೆ. ಟಿಪ್ಪುವಿನ ಕೈಯಿಂದ ದಕ್ಷಿಣ ಭಾರತದಲ್ಲಿ ನಾಶಗೊಂಡ ಒಟ್ಟು ದೇವಾಲಯಗಳ ಸಂಖ್ಯೆ 8000ಕ್ಕೂ ಹೆಚ್ಚು ಎನ್ನುವ ಮಾತನ್ನು ಮೈಸೂರು ಗಝೆಟಿಯರ್ ದಾಖಲಿಸಿದೆ. ತಳಿ, ತಿರುವಣ್ಣೂರು, ವಾರಕ್ಕಲ್, ಪುತ್ತೂರು, ಗೋವಿಂದಪುರ ಮುಂತಾದ ಸ್ಥಳಗಳಲ್ಲಿದ್ದ ನೂರಾರು ದೇವಸ್ಥಾನಗಳು ಟಿಪ್ಪು ದಾಳಿಗೊಳದಾವು ಎನ್ನುವುದನ್ನು ಮಲಬಾರ್ ಗಝೆಟಿಯರ್ ಹೇಳುತ್ತದೆ. ಮಧೂರಿನ ಖ್ಯಾತ ಅನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಟಿಪ್ಪು ಮಾಡಿದ ಕತ್ತಿಯ ಗುರುತು ಇಂದಿಗೂ ಉಳಿದುಕೊಂಡಿದೆ.

ಬ್ರಿಟಿಷ್ ಇತಿಹಾಸಕಾರ ಲೆವಿಸ್ ರೈಸ್ ತನ್ನ “ಹಿಸ್ಟರಿ ಆಫ್ ಮೈಸೂರ್ ಆಂಡ್ ಕೂರ್ಗ್” ಕೃತಿಯಲ್ಲಿ “ಟಿಪ್ಪು ಸುಲ್ತಾನ ಸಾಯುವ ಕಾಲಕ್ಕೆ ಆತನ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲಿ ದಿನವೂ ಪೂಜೆ ನಡೆಯುತ್ತಿದ್ದ ದೇಗುಲಗಳು ಎರಡೇ. ಜಾತಕ, ಜ್ಯೋತಿಷ್ಯ ಮುಂತಾದವುಗಳಲ್ಲಿ ನಂಬಿಕೆ ಇಟ್ಟಿದ್ದ ಟಿಪ್ಪು, ಶ್ರೀರಂಗಪಟ್ಟಣದ ಕೆಲವು ಬ್ರಾಹ್ಮಣರಲ್ಲಿ ತನ್ನ ಭವಿಷ್ಯ ಕೇಳಲು ಹೋಗುತ್ತಿದ್ದ. ಕೆಲವೊಂದು ದೇವಸ್ಥಾನಗಳಲ್ಲಿ ಶಾಂತಿಹೋಮಗಳನ್ನು ನಡೆಸಿದರೆ ಎಲ್ಲ ವಿಘ್ನಗಳೂ ನಿವಾರಣೆಯಾಗುತ್ತವೆ ಎಂದು ಆ ಬ್ರಾಹ್ಮಣರು ಹೇಳಿದ್ದರಿಂದ, ಚಕ್ರವರ್ತಿಯಾಗುವ ಕನಸು ಕಾಣುತ್ತಿದ್ದ ಟಿಪ್ಪು, ಒಂದೆರಡು ದೇವಸ್ಥಾನಗಳಲ್ಲಿ ಪೂಜೆ ನಡೆಸುವುದಕ್ಕೆ ಏರ್ಪಾಡು ಮಾಡಿದ. ಉಳಿದೆಲ್ಲಾ ದೇವಾಲಯಗಳ ಸಂಪತ್ತನ್ನೂ 1790ಕ್ಕಿಂತ ಮೊದಲೇ ಆತ ಮುಟ್ಟುಗೋಲು ಹಾಕಿಕೊಂಡಾಗಿತ್ತು. ತನ್ನ ರಾಜ್ಯದ ಆರ್ಥಿಕ ನಷ್ಟವನ್ನು ಸರಿದೂಗಿಸಲು ಟಿಪ್ಪು ಮುಖ್ಯವಾಗಿ ದೇವಸ್ಥಾನಗಳ ಸಂಪತ್ತನ್ನೇ ಅವಲಂಭಿಸಿದ್ದ” ಎಂದು ದಾಖಲಿಸಿದ್ದಾನೆ.

ಕ್ರೈಸ್ತರ ವೈರಿ
ಟಿಪ್ಪುವಿನ ತಂದೆ ಹೈದರಾಲಿಯ ಕಾಲದಲ್ಲಿ ಬಿದನೂರು ಪ್ರಮುಖ ನಗರವಾಗಿತ್ತು. ಆಗ ಅದಕ್ಕೆ ಹೈದರ್‍ನಗರ ಎಂದೇ ಹೆಸರು. ಚಿರಕ್ಕಲ್ ರಾಜ್ಯದ ಕಮ್ಮಾರನ್ ನಂಬಿಯಾರ್ ಎಂಬಾತನನ್ನು ಇಸ್ಲಾಂಗೆ ಮತಾಂತರಿಸಿ ಅಯಾಜ್ ಖಾನ್ ಎಂದು ನಾಮಕರಣ ಮಾಡಿ, ಆತನ ಧೈರ್ಯ-ಸಾಹಸಗಳನ್ನು ಮೆಚ್ಚಿ ಹೈದರಾಲಿ ಅವನನ್ನು ಬಿದನೂರಿನ ಮಾಂಡಲಿಕನಾಕನಾಗಿ ನೇಮಿಸಿದ್ದ. ಆದರೆ, ಟಿಪ್ಪುವಿಗೂ ಅಯಾಜ್ ಖಾನನಿಗೂ ಸಂಬಂಧ ಚೆನ್ನಾಗಿರಲಿಲ್ಲ. ಕೊನೆಗೊಮ್ಮೆ ಟಿಪ್ಪು ತನ್ನನ್ನು ಮುಗಿಸಿಹಾಕಲು ಯೋಜನೆ ರೂಪಿಸಿದ್ದಾನೆ ಎಂಬುದನ್ನು ತಿಳಿದು ಅಯಾಜ್ ಖಾನ್ ತನ್ನಲ್ಲಿದ್ದ ಚಿನ್ನ ದುಡ್ಡು ತೆಗೆದುಕೊಂಡು ಬಾಂಬೆ ರಾಜ್ಯಕ್ಕೆ ಓಡಿಹೋದ. ಬಿದನೂರಿಗೆ ದಾಳಿ ಮಾಡಿದ ಟಿಪ್ಪು ಅಲ್ಲಿದ್ದ ಎಲ್ಲಾ ಹಿಂದೂಗಳನ್ನು, ಒಬ್ಬರನ್ನೂ ಬಿಡದೆ, ಇಸ್ಲಾಂಗೆ ಮತಾಂತರಿಸಿದ. ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದವರನ್ನು ಒಂದೋ ಕೊಲ್ಲಲಾಯಿತು, ಇಲ್ಲವೇ ಜೈಲುಗಳಲ್ಲಿ ಜೀವಮಾನಪೂರ್ತಿ ಕಳೆಯುವಂತೆ ಕೂಡಿಹಾಕಲಾಯಿತು. ಬಿದನೂರಲ್ಲಿ ಆತ ನಡೆಸಿದ ಹಿಂಸಾವಿನೋದಗಳ ಸಾಕ್ಷಿಗಳು ಈಗಲೂ ದೊರೆಯುತ್ತವೆ.

ಜನರನ್ನು ಇಸ್ಲಾಂಗೆ ಮತಾಂತರಿಸುವುದೇ ತನ್ನ ಜೀವನದ ಪರಮೋದ್ದೇಶವೆಂದು ಭಾವಿಸಿದ್ದ ಟಿಪ್ಪು ಮಂಗಳೂರಲ್ಲಿ ಅತ್ಯಂತ ಕ್ರೂರವಾಗಿ ಕ್ರಿಶ್ಚಿಯನ್ನರನ್ನು ನಡೆಸಿಕೊಂಡ. ಹಲವುಬಗೆಯ ಶಿಕ್ಷೆ, ಬೆದರಿಕೆಗಳ ಮೂಲಕ ಅವರನ್ನು ಮುಸ್ಲಿಮರಾಗಿಸಲಾಯಿತು. ಪೋರ್ತುಗೀಸರು ಅಲ್ಲಿ ಕ್ರಿಶ್ಚಿಯನ್ ಮತಾಂತರ ಕೆಲಸ ಮಾಡಿದ್ದಾರೆ. ಹಾಗಾಗಿ ತಾನು ಮಾಡುತ್ತಿರುವ ಕೆಲಸಕ್ಕೆ ಯಾವ ಪಾಪಲೇಪವೂ ಇಲ್ಲ ಎಂದು ಟಿಪ್ಪು ಹೇಳಿಕೊಳ್ಳುತ್ತಿದ್ದ. ಮಂಗಳೂರಲ್ಲಿ ಆತ ನಡೆಸಿದ ಅತ್ಯಾಚಾರಕ್ಕೆ ವಿಟ್ಲದ ಬಳಿಯ ನೆತ್ತರಕೆರೆ ಈಗಲೂ ಸಾಕ್ಷಿಯಾಗಿ ನಿಂತಿದೆ. ಮಂಗಳೂರಲ್ಲಿ ಹಿಡಿದುಹಾಕಿದ ಕ್ರಿಶ್ಚಿಯನ್ನರ ಕೈಕಾಲುಗಳಿಗೆ ಕೋಳ ತೊಡಿಸಿ ಶ್ರೀರಂಗಪಟ್ಟಣದವರೆಗೆ ನಡೆಸಲಾಯಿತು. ದಾರಿಯಲ್ಲಿ ಸುಮಾರು ನಾಲ್ಕುಸಾವಿರ ಜನ ಅಸುನೀಗಿದರು. ಉಳಿದವರನ್ನು ಶ್ರೀರಂಗಪಟ್ಟಣದಲ್ಲಿ ಸಾಮೂಹಿಕವಾಗಿ ಮುಂಜಿ ಮಾಡಿಸಿ, ಜೈಲಿಗೆ ತಳ್ಳಲಾಯಿತು. ಬ್ರಿಟಿಷರ ಗೂಢಚಾರರು ಎಂಬ ಸಂಶಯದಿಂದ ಟಿಪ್ಪು ಸುಮಾರು 60,000 ಮಂಗಳೂರಿನ ಕ್ರಿಶ್ಚಿಯನ್ನರನ್ನು ಸೆರೆಗೆ ಹಾಕಿದ! ಅಲ್ಲದೆ, ಅಲ್ಲಿದ್ದ ಹಲವು ಚರ್ಚುಗಳನ್ನು ನೆಲಸಮ ಮಾಡಿಹಾಕಿದ. 1680ರಲ್ಲಿ ಕಟ್ಟಲ್ಪಟ್ಟಿದ್ದ ಮಿಲಾಗ್ರಿಸ್ ಚರ್ಚು 1784ರಲ್ಲಿ ಟಿಪ್ಪುವಿನ ಕೈಯಲ್ಲಿ ನಾಮಾವಶೇಷವಾಯಿತು.

ಔತಣಕೂಟದಲ್ಲಿ ನೆತ್ತರೋಕುಳಿ ಟಿಪ್ಪುವಿನ ಪಾತಕಗಳಿಗೆ ಪ್ರಬಲ ಪ್ರತಿರೋಧ ಒಡ್ಡುತ್ತಿದ್ದವರೆಂದರೆ ಕೊಡವರು. ಫ್ರೆಂಚ್ ಸೇನೆಯ ನೆರವು ಪಡೆದರೂ ಕೊಡವ ಸೇನೆಯನ್ನು ಬಗ್ಗುಬಡಿಯಲು ಸಾಧ್ಯವಾಗದ ಮೇಲೆ ಟಿಪ್ಪು ಅವರನ್ನು ಉಪಾಯದಿಂದ ಸೋಲಿಸುವ ಕುತಂತ್ರ ಹೆಣೆದ. ತಾನು ಇನ್ನುಮುಂದೆ ಕೊಡವರ ಜೊತೆ ಕಾದಾಡುವುದಿಲ್ಲವೆಂದೂ ಪರಸ್ಪರ ಗೌರವ ಕೊಟ್ಟು ತಾವಿಬ್ಬರೂ ಸ್ನೇಹಿತರಂತೆ ನೆರೆಹೊರೆಯ ರಾಜ್ಯಗಳನ್ನು ನೋಡಿಕೊಂಡಿರೋಣ ಎಂದೂ ಹೇಳಿ ಕೊಡವರನ್ನು ನಂಬಿಸಿ ಭಾಗಮಂಡಲದ ದೇವಟ್ಟಿಪರಂಬು ಎಂಬಲ್ಲಿ ಔತಣಕೂಟವನ್ನು ಏರ್ಪಡಿಸಿದ. ಟಿಪ್ಪುವಿನ ಮಾತನ್ನು ನಂಬಿದ ಕೊಡವರು ಔತಣದಲ್ಲಿ ಪಾಲ್ಗೊಳ್ಳಲು ಬಂದರು. ಆಗ ಸಮಯ ಸಾಧಿಸಿ ಟಿಪ್ಪುವಿನ ಸೇನೆ ನಿರಾಯುಧ ಕೊಡವರ ಮೇಲೆ ದಾಳಿ ನಡೆಸಿತು. 1785ರ ಡಿಸೆಂಬರ್ 13ರಂದು ನಡೆದ ಈ ಹತ್ಯಾಕಾಂಡದಲ್ಲಿ ಒಟ್ಟು ಮೂವತ್ತು ಸಾವಿರ ಕೊಡವರು ಪ್ರಾಣಬಿಟ್ಟರು. ಬದುಕುಳಿದವರನ್ನು ಶ್ರೀರಂಗಪಟ್ಟಣದಲ್ಲಿ ಬಂಧಿಸಿಡಲಾಯಿತು. ಸತ್ತವರಲ್ಲಿ ಯೋಧರು ಮಾತ್ರವಲ್ಲದೆ, ಅವರ ಹೆಂಡತಿ-ಮಕ್ಕಳೂ ಸೇರಿದ್ದರು. ಆದರೆ, ಕೊಲೆ ಮಾಡುವ ಸನ್ನಿಗೆ ಬಿದ್ದಿದ್ದ ಟಿಪ್ಪು ಅವಕ್ಕೆಲ್ಲ ಕ್ಯಾರೇ ಎನ್ನಲಿಲ್ಲ. ಈ ರಣಮೇಧದ ಪೂರ್ತಿ ವಿವರಗಳು ಕೊಡಗಿನ ಇತಿಹಾಸಕಾರ ಐ.ಎಮ್.ಮುತ್ತಣ್ಣನವರ ಪುಸ್ತಕಗಳಲ್ಲೂ ಕೂರ್ಗ್ ಗೆಝೆಟಿಯರ್‍ನಲ್ಲೂ ದಾಖಲಾಗಿವೆ. ಒಮ್ಮೆ ಟಿಪ್ಪು ಸುಮಾರು ಹತ್ತುಸಾವಿರ ಕೊಡವರನ್ನು ಮುಸಲ್ಮಾನರಾಗಿ ಮತಾಂತರಿಸಿದ. ಇನ್ನೊಮ್ಮೆ ಒಂದು ಸಾವಿರ ಕೊಡವ ಯೋಧರನ್ನು ಬಂಧಿಸಿ ಶ್ರೀರಂಗಪಟ್ಟಣದ ಸೆರೆಯಲ್ಲಿ ಕೂಡಿಹಾಕಿದ್ದ. ಆತನಿಗೂ ಬ್ರಿಟಿಷರಿಗೂ ನಡೆದ ಕೊನೆಯ ಆಂಗ್ಲೋ-ಮೈಸೂರು ಯುದ್ಧದ ಸಮಯದಲ್ಲಿ ಆ ಅಷ್ಟೂ ಜನ ಸೆರೆಯಿಂದ ತಪ್ಪಿಸಿಕೊಂಡು ಮತ್ತೆ ಕೊಡಗಿಗೆ ಬಂದು ಹಿಂದೂಗಳಾಗಿ ಮರುಮತಾಂತರವಾದರು. ಎಷ್ಟುಮಾತ್ರಕ್ಕೂ ತಮ್ಮ ಧರ್ಮವನ್ನು ಬಿಟ್ಟುಕೊಡಲು ಕೇಳದಿದ್ದ ಮತ್ತು ದಕ್ಷಿಣದಲ್ಲಿ ತನ್ನ ರಾಜ್ಯ ವಿಸ್ತರಿಸಲು ದೊಡ್ಡ ತೊಡಕಾಗಿದ್ದ ಕೊಡವರ ಮೇಲೆ ಟಿಪ್ಪುವಿಗೆ ಎಷ್ಟು ದ್ವೇಷವಿತ್ತೆಂದರೆ, ಕೊಡವ ರಾಜನ ಇಬ್ಬರು ಸೋದರಿಯರನ್ನು ಅಪಹರಿಸಿ, ಅವರ ಒಪ್ಪಿಗೆಗೆ ವಿರುದ್ಧವಾಗಿ ಮದುವೆಯನ್ನೂ ಮಾಡಿಕೊಂಡ! ಟಿಪ್ಪುವಿನ ಮರಣಾನಂತರವಷ್ಟೇ ಈ ರಾಜಕುಮಾರಿಯರನ್ನು ಶ್ರೀರಂಗಪಟ್ಟಣದಿಂದ ಮರಳಿ ಕರೆತರಲಾಯಿತು.

ಟಿಪ್ಪುವಿನ ಆಸ್ಥಾನ ವಿದ್ವಾಂಸ ಮತ್ತು ಇತಿಹಾಸಕಾರನಾಗಿದ್ದ ಮೀರ್ ಹುಸೈನ್ ಕಿರ್ಮಾನಿ, 1788ರಲ್ಲಿ ಟಿಪ್ಪು ಕೊಡಗಿನ ಮೇಲೆ ಮಾಡಿದ ದಾಳಿಯನ್ನು ವಿಸ್ತಾರವಾಗಿ ವರ್ಣಿಸಿದ್ದಾನೆ. ಟಿಪ್ಪು ಕುಶಾಲನಗರ (ಆಗಿನ ಕುಶಾಲಪುರ), ತಲಕಾವೇರಿ, ಮಡಿಕೇರಿ ಮತ್ತು ಉಳಿದ ಜಾಗಗಳಲ್ಲಿ ಸಿಕ್ಕಸಿಕ್ಕ ದೇವಸ್ಥಾನಗಳನ್ನು ಕೆಡವುತ್ತ ಜನರನ್ನು ಕತ್ತರಿಸಿ ಚೆಲ್ಲುತ್ತ ಹೋದನಂತೆ. ಕರ್ನೂಲಿನ ನವಾಬನಿಗೆ ಬರೆಯುವ ಪತ್ರದಲ್ಲಿ ಆತ, ಒಟ್ಟು ನಲವತ್ತು ಸಾವಿರ ಕೊಡವರನ್ನು ಬಂಧಿಸಿ, ಜೈಲಿಗೆ ತಳ್ಳಿ, ಹಿಂಸಾತ್ಮಕ ಮಾರ್ಗಗಳಿಂದ ಇಸ್ಲಾಂಗೆ ಮತಾಂತರಿಸಿದ್ದನ್ನು ಪ್ರಸ್ತಾಪಿಸಿದ್ದಾನೆ. ಅಲ್ಲದೆ, ಕೊಡಗಿನಲ್ಲಿ ಜನಸಂಖ್ಯೆ ತೀವ್ರವಾಗಿ ಇಳಿದ ಮೇಲೆ ಬೇರೆ ಕಡೆಗಳಿಂದ ಶೇಕ್ ಮತ್ತು ಸಯ್ಯದ್ ವಂಶದ ಒಟ್ಟು 7000 ಕುಟುಂಬಗಳನ್ನು ಕೊಡಗಿಗೆ ಕರೆದುಕೊಂಡು ಬಂದು ನೆಲೆಗೊಳಿಸಿದ. ಆತನ ಹಿಂಸೆ ತಾಳಲಾಗದೆ ಹಲವು ಅರ್ಚಕ ಕುಟುಂಬಗಳು ಕೊಡಗಿನಿಂದ ಓಡಿಹೋಗಿ ಮಂಗಳೂರಿನಲ್ಲಿ ನೆಲೆ ಕಂಡವು. ಅನೇಕ ದೇವಸ್ಥಾನಗಳಲ್ಲಿ ಪೂಜೆ ಸಂಪೂರ್ಣವಾಗಿ ನಿಂತಿತು. ಹಲವು ಪೂಜಾಮಂದಿರಗಳು ಪಾಳುಬಿದ್ದವು. ಸಣ್ಣಗುಡಿಗಳನ್ನು ರೆಂಬೆಕೊಂಬೆ, ಸೊಪ್ಪುಸದೆಗಳಿಂದ ಮುಚ್ಚಿ ಬಚ್ಚಿಡಲಾಯಿತು. ವಿರಾಜಪೇಟೆಯ ಮಲೆತಿರಿಕೆ ಭಗವತಿ ದೇವಸ್ಥಾನದಲ್ಲಿ ಇದೇ ಕಾರಣದಿಂದ ಕೆಲವರ್ಷಗಳ ಕಾಲ ಪೂಜೆ ನಿಂತಿತ್ತು. ಕೊಡವ ರಾಜ, ಮಡಿಕೇರಿಯ ಪ್ರಸಿದ್ಧ ಓಂಕಾರೇಶ್ವರ ದೇವಸ್ಥಾನದ ಕಲಶ ತೆಗೆದು ಗುಮ್ಮಟದಂಥ ರಚನೆಯನ್ನು ನಿರ್ಮಿಸಿ; ಅದು ಟಿಪ್ಪುವಿನ ಕಣ್ಣಿಗೆ ಕಾಣದಂತೆ ರಕ್ಷಿಸಿದನಂತೆ. ಮಡಿಕೇರಿಯ ಸಮೀಪದ ನಾಪೋಕ್ಲು ಎಂಬ ಊರಿಗೆ ದಾಳಿ ಮಾಡಿದ ಟಿಪ್ಪು, ಅಲ್ಲಿನ ಸುತ್ತಮುತ್ತಲಿನ ನೂರಾರು ದೇವಸ್ಥಾನಗಳನ್ನು ಕೆಡವಿ ನೆಲಸಮ ಮಾಡಿದ ಎಂದು ಇತಿಹಾಸ ಹೇಳುತ್ತದೆ.

ಮೇಲುಕೋಟೆಯಲ್ಲಿ ದೀಪಾವಳಿ ಇಲ್ಲ:
ಇದೇ ಬಗೆಯ ಇನ್ನೊಂದು ಹತ್ಯಾಕಾಂಡವನ್ನು ಟಿಪ್ಪು ಮೇಲುಕೋಟೆಯಲ್ಲಿ ನಡೆಸಿದ. ಹೈದರಾಲಿಯ ಮೃತ್ಯುವಿನ ನಂತರ ರಾಜ್ಯವನ್ನು ಮತ್ತೆ ತನ್ನ ಕೈವಶ ಮಾಡಿಕೊಳ್ಳಲು ಮೈಸೂರಿನ ರಾಜಮಾತೆ ಲಕ್ಷ್ಮೀ ಅಮ್ಮಣ್ಣಿಯವರು ಪ್ರಯತ್ನಿಸುತ್ತಿದ್ದದ್ದು ಟಿಪ್ಪುವಿನ ಗಮನಕ್ಕೆ ಬಂತು. ಮೈಸೂರಿನ ಒಡೆಯರ್ ಕುಟುಂಬಕ್ಕೆ ನಾರಾಯಣ ಅಯ್ಯಂಗಾರ್ ಮತ್ತು ತಿರುಮಲೈ ಅಯ್ಯಂಗಾರ್ ಎಂಬ ಇಬ್ಬರು ನಿಷ್ಠರಾಗಿದ್ದರು. ಇಬ್ಬರಿಗೂ ಮೈಸೂರು ರಾಜ್ಯದಲ್ಲಿ ಪ್ರಕಾಂಡ ಪಂಡಿತರೆಂದು ಒಳ್ಳೆಯ ಹೆಸರಿತ್ತು. ಇವರಲ್ಲಿ ತಿರುಮಲೈ ಅಯ್ಯಂಗಾರರು ಮದರಾಸಿನಲ್ಲಿ ಬ್ರಿಟಿಷ್ ಸೇನೆಯ ನಾಯಕತ್ವ ವಹಿಸಿದ್ದ ಜನರಲ್ ಹ್ಯಾರಿಸ್‍ನೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಂಡಿದ್ದ ಸಂಗತಿ ಟಿಪ್ಪುವಿಗೆ ತಿಳಿಯಿತು. ಅದರ ಜೊತೆಗೆ, ತನ್ನ ಪಾಳೆಯದಲ್ಲಿ ಗುರುತಿಸಿಕೊಂಡಿದ್ದ ಶಾಮಯ್ಯ ಅಯ್ಯಂಗಾರರೂ ಇವರಿಬ್ಬರ ಜೊತೆ ಕೈಮಿಲಾಯಿಸಿದ್ದಾರೆಂಬ ಸಂಶಯ ಟಿಪ್ಪುವಿಗಿತ್ತು. ಇವೆಲ್ಲ ಸಂಗತಿಗಳು ಜೊತೆಯಾಗಿ, ಟಿಪ್ಪು, ಮೈಸೂರಿನ ಅರಸರಿಗೆ ಬೆಂಬಲ ಕೊಡುತ್ತಿರುವ ಅಯ್ಯಂಗಾರ್ ಕುಲವನ್ನೇ ನಿರ್ನಾಮ ಮಾಡಬೇಕೆಂದು ಬಗೆದ. ಮೇಲುಕೋಟೆಯ ಮಂಡಯಂ ಅಯ್ಯಂಗಾರರ ಮೇಲೆ ಸೇಡು ತೀರಿಸಿಕೊಳ್ಳಲು ದೀಪಾವಳಿಯ ನರಕಚತುರ್ದಶಿಯ ದಿನವನ್ನು ಆಯ್ದುಕೊಂಡ. ಹಬ್ಬದ ಸಂಭ್ರಮದಲ್ಲಿ ತೊಡಗಿಕೊಂಡಿದ್ದ ಸುಮಾರು 800 ಕುಟುಂಬಗಳನ್ನು ಟಿಪ್ಪುವಿನ ಸೈನಿಕರು ಘನಘೋರವಾಗಿ ಕಡಿದುಚೆಲ್ಲಿದರು. ಇಡೀ ಮೇಲುಕೋಟೆ ಊರೇ ರಕ್ತಸಿಕ್ತವಾಯಿತು. ಎಲ್ಲೆಲ್ಲೂ ಹೆಣಗಳ ರಾಶಿ ಬಿತ್ತು. ಹಬ್ಬದ ಕಳೆಗಟ್ಟಿದ್ದ ಮನೆಗಳಲ್ಲಿ ಸೂತಕದ ಛಾಯೆ ಆವರಿಸಿತು. ಮೇಲುಕೋಟೆ ದೇವಸ್ಥಾನಕ್ಕೆ ಟಿಪ್ಪು ಉಂಬಳಿ ಕೊಟ್ಟ ಎಂಬುದನ್ನು ತಾರಕದಲ್ಲಿ ಹೇಳುವ ಜಾತ್ಯತೀತ ಬುದ್ಧಿಜೀವಿಗಳು ಆತ ಅದೇ ಊರಲ್ಲಿ ಮಾಡಿದ ಈ ಭೀಕರ ನರಮೇಧದ ಸುದ್ದಿಯನ್ನು ಮಾತ್ರ ಜಾಣತನದಿಂದ ಮರೆಯುತ್ತಾರೆ. ಈ ಘಟನೆ ನಡೆದು 225 ವರ್ಷಗಳೇ ಕಳೆದರೂ, ಆ ಕಹಿಯ ನೆನಪಿಗೋ ಎನ್ನುವಂತೆ, ಮೇಲುಕೋಟೆಯಲ್ಲಿ ಇಂದಿಗೂ ದೀಪಾವಳಿ ಹಬ್ಬದ ಆಚರಣೆ ಇಲ್ಲ.
ಒಟ್ಟಲ್ಲಿ, ಟಿಪ್ಪು ತನ್ನ ಹದಿನೇಳು ವರ್ಷಗಳ (ಡಿಸೆಂಬರ್ 7, 1782 – ಮೇ 4, 1799) ರಾಜ್ಯಾಡಳಿತದಲ್ಲಿ ಹಲವುಹತ್ತು ಯುದ್ಧಗಳನ್ನು ಮಾಡಿದ. ಇವುಗಳಲ್ಲಿ ಆತ ದೇಶಕ್ಕಾಗಿ ಮಾಡಿದ ತ್ಯಾಗದ ಹೋರಾಟ ಯಾವುದೂ ಇಲ್ಲ. ಹೆಚ್ಚಿನೆಲ್ಲ ಯುದ್ಧಗಳೂ ಅವನ ರಾಜ್ಯರಕ್ಷಣೆ ಮತ್ತು ಇಸ್ಲಾಂ ಮತದ ವಿಸ್ತರಣೆಗಷ್ಟೇ ಸೀಮಿತವಾಗಿದ್ದವು. ಖಡ್ಗದ ಮೇಲಿನ ರಕ್ತದ ಕಲೆ ಆರಲು ಬಿಡದಂತೆ ನಿರಂತರವಾಗಿ ಕಾದಾಡಿದ ಟಿಪ್ಪು ತನ್ನ ಆಡಳಿತದಲ್ಲಿ ಎಷ್ಟು ಸುಧಾರಣಾ ಕೆಲಸಗಳನ್ನು ಮಾಡಿದ? ಮೊದಲ ಆದ್ಯತೆ ಯುದ್ಧಸಂಬಂಧೀ ಕೆಲಸಗಳಿಗೇ ಆದ್ದರಿಂದ ಆತ ಯುದ್ಧೋಪಕರಣಗಳ ಅಭಿವದ್ಧಿಗೆ ಹೆಚ್ಚಿನ ಗಮನ ನೀಡಿದ್ದು ಸಹಜವೇ ಆಗಿದೆ. ಆದರೆ ಅದರ ಹೊರತಾಗಿ ಆಡಳಿತ ಸುಧಾರಣೆಯ ವಿಷಯದಲ್ಲಿ ಟಿಪ್ಪು ಹೆಸರು ಕೇಳಲ್ಪಡುವುದಿಲ್ಲ. ಇನ್ನು ಕನ್ನಡ ಭಾಷೆಗೆ ಟಿಪ್ಪುವಿನ ಕೊಡುಗೆ ಶೂನ್ಯ ಎಂದೇ ಹೇಳಬಹುದು. ಹಾಗಿರುವಾಗ ಕೇವಲ ಜಾತಿ ಆಧಾರದ ಮೇಲೆ ನಡೆಯುತ್ತಿರುವ ಟಿಪ್ಪುಜಯಂತಿ ಎಷ್ಟು ಉಚಿತ? ಜರ್ಮನಿ ದೇಶದಲ್ಲಿ ಹಿಟ್ಲರ್ ನೆನಪಲ್ಲಿ ಹಬ್ಬ ನಡೆಸುವುದು ಎಷ್ಟು ಹಾಸ್ಯಾಸ್ಪದವೋ ಕರ್ನಾಟಕದಲ್ಲಿ ಮತಾಂಧ ಮತ್ತು ನರಹಂತಕನೊಬ್ಬನ ಜಯಂತಿಯನ್ನು ಆಚರಿಸುವುದು ಕೂಡ ಅಷ್ಟೇ ನಗೆಪಾಟಲಿನ ಸಂಗತಿ. ಇದು ಸರಕಾರ, ತಾನು ಮುಟ್ಟಿರುವ ನೈತಿಕ ಅಧಪತನಕ್ಕೆ ಬರೆಯುತ್ತಿರುವ ಹೊಸ ಭಾಷ್ಯ.

ಟಿಪ್ಪಣಿಗಳು
ಟಿಪ್ಪಣಿ 1: ಹೆಣ್ಣುಬಾಕ ಹುಲಿ
ಮುಸ್ಲಿಮ್ ರಾಜರ ದೊಡ್ಡ ದೌರ್ಬಲ್ಯವೆಂದರೆ ಹೆಂಗಸರು. ಹೈದರಾಬಾದಿನ ನಿಜಾಮ ಈ ಕಾರಣಕ್ಕಾಗಿಯೇ ಬಹುದೊಡ್ಡ ಹೆಸರು ಮಾಡಿದ್ದವನು. ಬಹುಪತ್ನಿತ್ವವನ್ನು ಧರ್ಮಗ್ರಂಥವೇ ಪುರಸ್ಕರಿಸುವುದರಿಂದ, ಹೆಚ್ಚು ಹೆಣ್ಣುಗಳನ್ನು ಮದುವೆಯಾದರೆ, ದೇವರ ಕೆಲಸವನ್ನು ಮಾಡಿದಂತೆ ಎಂದೇ ಇವರು ಭಾವಿಸಿದ್ದವರು. ಟಿಪ್ಪು ತನ್ನ ರಾಜಧಾನಿ ಶ್ರೀರಂಗಪಟ್ಟಣದಲ್ಲಿ ಅರಮನೆಯ ಪಕ್ಕದಲ್ಲೇ ಒಂದು ದೊಡ್ಡ ಜನಾನವನ್ನೂ ಕಟ್ಟಿಸಿದ್ದ. ಜನಾನ ಎಂದರೆ ರಾಣಿಯರ ವಾಸಗೃಹ ಎಂದು ಅರ್ಥ. ಟಿಪ್ಪುವಿನ ಮರಣಾನಂತರ ಆತನ ಎಲ್ಲ ಆಸ್ತಿಪಾಸ್ತಿಗಳ ಒಡೆತನವನ್ನೂ ತಮ್ಮ ಕೈಗೆ ತೆಗೆದುಕೊಂಡ ಬ್ರಿಟಿಷರು, ಜನಾನದ ಉಸ್ತುವಾರಿಯನ್ನು ಕ್ಯಾಪ್ಟನ್ ಥಾಮಸ್ ಮ್ಯಾರಿಯೆಟ್ ಎಂಬಾತನಿಗೆ ವಹಿಸಿದರು. ಆಗ ಆತ ಮೊದಲ ಬಾರಿಗೆ ಆ ಕಟ್ಟಡದೊಳಗೆ ಹೋಗಿ ಸಂಪೂರ್ಣವಾದ ಸಮೀಕ್ಷೆ ನಡೆಸಿ ತನ್ನ ವರದಿಯನ್ನು ಬರೆದ. ಮ್ಯಾರಿಯೆಟ್ ದಾಖಲಿಸಿದ ಪ್ರಕಾರ ಜನಾನದಲ್ಲಿ ಒಟ್ಟು 333 ಜನ ಟಿಪ್ಪುವಿನ ಹೆಂಗಸರು ಕಾಣಸಿಕ್ಕರಂತೆ. ಅಲ್ಲದೆ, ದಾಸಿಯರು, ಮಂಗಳಮುಖಿಯರು ಕೂಡ ಇದ್ದರು. ಪ್ರತಿ ಕೋಣೆಯನ್ನೂ ಒಂದಷ್ಟು ಮಂಗಳಮುಖಿಯರು ಕಾವಲು ಕಾಯುತ್ತಿದ್ದರು. ಜನಾನದಲ್ಲಿ ಹತ್ತಿರದ ಊರುಗಳ ಕೆಲವು ಪಾಳೆಗಾರರು, ಮಾಂಡಲಿಕರು, ಸರದಾರರ ಹೆಣ್ಣುಮಕ್ಕಳೂ ಇದ್ದರು; ದೂರದ ಟರ್ಕಿ, ಪರ್ಶಿಯ, ಜಾರ್ಜಿಯದಂತ ದೇಶಗಳಿಂದ ತಂದ ಬಿಳಿತೊಗಲಿನ ಹೆಂಗಸರೂ ಇದ್ದರು. ಭಾರತದಲ್ಲಿ ಆರ್ಕಾಟ್, ತಂಜಾವೂರು, ಹೈದರಾಬಾದ್, ದೆಹಲಿ ಮುಂತಾದ ಊರುಗಳಿಂದ ಒಂದೋ ಗೆದ್ದು ಇಲ್ಲವೇ ಅಪಹರಿಸಿ ಅಥವಾ ದುಡ್ಡು ಕೊಟ್ಟು ತಂದ ಹೆಣ್ಣುಮಕ್ಕಳನ್ನು ಜನಾನದಲ್ಲಿ ಕೂಡಿಹಾಕಲಾಗಿತ್ತು. ಟಿಪ್ಪು ಕೊಡಗಿನ ರಾಜನ ಇಬ್ಬರು ಸೋದರಿಯರನ್ನು (ದೇವಮ್ಮಾಜಿ, ನೀಲಮ್ಮಾಜಿ), ಪೂರ್ಣಯ್ಯನವರ ತಂಗಿಯ ಮಗಳನ್ನು, ಮತ್ತು ಮೈಸೂರು ಒಡೆಯರ್ ಮನೆತನಕ್ಕೆ ಸೇರಿದ ಮೂವರು ಹೆಂಗಸರನ್ನು ಕೂಡ ತನ್ನ ಜನಾನದಲ್ಲಿ ಇಟ್ಟುಕೊಂಡಿದ್ದ ಎಂದು ಮ್ಯಾರಿಯೆಟ್ ದಾಖಲಿಸಿದ್ದಾನೆ.

1792ರಲ್ಲಿ ತನ್ನ ಇಬ್ಬರು ಮಕ್ಕಳನ್ನು ಬ್ರಿಟಿಷರಲ್ಲಿ ಒತ್ತೆ ಇಡಬೇಕಾಗಿ ಬಂದ ಮೇಲೆ, ಟಿಪ್ಪು ತನ್ನ ಹೆಚ್ಚಿನ ವಿರಾಮ ಸಮಯವನ್ನು ಜನಾನದಲ್ಲೇ ಕಳೆಯತೊಡಗಿದ. ಮಕ್ಕಳನ್ನು ಹಡೆದ ಪತ್ನಿಯರೆಂದರೆ ಅವನಿಗೆ ಪ್ರೀತಿ. ಆದರೆ ಮೂರ್ನಾಲ್ಕು ವರ್ಷಗಳಾದರೂ ಗರ್ಭ ಧರಿಸದ ಹೆಂಗಸರನ್ನು ತುಚ್ಛವಾಗಿ ಕಾಣಲಾಗುತ್ತಿತ್ತು. ಬಂಜೆ ಎನ್ನುತ್ತ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲಾಗುತ್ತಿತ್ತು. ಟಿಪ್ಪು ಅಧಿಕೃತವಾಗಿ ಮದುವೆಯಾದದ್ದು 1774ರಲ್ಲಿ; ತನ್ನ 24ನೇ ವಯಸ್ಸಿನಲ್ಲಿ. ಅವನ ಕೊನೆಯ ಮದುವೆ 1796ರಲ್ಲಿ; 46ನೇ ವಯಸ್ಸಿನಲ್ಲಿ ನಡೆಯಿತು. ಅವೆರಡರ ನಡುವೆ ಅವನು ಅದೆಷ್ಟು ಮದುವೆಯಾದ; ಎಷ್ಟು ಮಕ್ಕಳ ತಂದೆಯಾದ ಎಂಬುದಕ್ಕೆ ಸರಿಯಾದ ದಾಖಲೆ ಸಿಗುವುದಿಲ್ಲ. ಹದಿನಾರು ಗಂಡು ಮತ್ತು 8 ಹೆಣ್ಣುಮಕ್ಕಳ ದಾಖಲೆಯಷ್ಟೇ ನಮಗೆ ಇತಿಹಾಸಕಾರರ ಪುಸ್ತಕಗಳಲ್ಲಿ ಸಿಗುತ್ತದೆ. ಹೈದರಾಬಾದಿನ ನಿಜಾಮ; ತನ್ನ ಅರಮನೆಯ ಕೊಳದಲ್ಲಿ ಈಜಾಡುವ ಹೆಂಗಸರ ಮೇಲೆ ಕರ್ಚೀಫು ಹಾಕಿ, ಅವರನ್ನು ತನ್ನ ಸಂಜೆಯ ಕಾಮಕೇಳಿಗೆ ಕರೆಯುತ್ತಿದ್ದನಂತೆ. ಆದರೆ ಟಿಪ್ಪು ಅಂಥ ಕ್ರಮ ಅನುಸರಿಸುತ್ತಿರಲಿಲ್ಲ. ರಾತ್ರಿ ತಾನು ಯಾವ ಹೆಂಗಸಿನೊಡನೆ ಕಳೆಯಬೇಕೆಂಬುದನ್ನು ತಿಳಿಸಲಿಕ್ಕೆಂದೇ ಒಂದು ಅಂತಃಪುರದ ಅಧಿಕಾರಿಯನ್ನು ಆತ ನೇಮಿಸಿಕೊಂಡಿದ್ದ. ಟಿಪ್ಪುವಿನ ಮರಣಾನಂತರ ಜನಾನದಲ್ಲಿದ್ದ ಹೆಂಗಸರು ಏನಾದರು; ಅವರ ಮಕ್ಕಳು ಎಲ್ಲಿಗೆ ಹೋದರು ಎಂಬುದನ್ನೇ ತನ್ನ ಸಂಶೋಧನೆಯ ವಿಷಯವಾಗಿ ಆಯ್ದುಕೊಂಡು ಕೇಟ್ ಬ್ರಿಟಲ್‍ಬ್ಯಾಂಕ್ ಎಂಬಾಕೆ “ಟಿಪ್ಪು ಸುಲ್ತಾನ್’ಸ್ ಸರ್ಚ್ ಫಾರ್ ಲೆಜಿಟಿಮಸಿ” ಎಂಬ ಪುಸ್ತಕ ಬರೆದಿದ್ದಾಳೆ.

ಟಿಪ್ಪಣಿ 2: ಜಯಂತಿಗಳ ಔಚಿತ್ಯ ಏನು?
ಟಿಪ್ಪುವಿನ ಜಯಂತಿಯನ್ನು ನವೆಂಬರ್ ಹತ್ತರಂದು ಸರಕಾರ ಆಚರಿಸಿತು. ಆದರೆ, ಆತನ ಹುಟ್ಟಿದ ದಿನ ನವೆಂಬರ್ 20 ಎಂದು ಇತಿಹಾಸ ಹೇಳುತ್ತದೆ! ಎಲ್ಲಾ ಆಕರಗ್ರಂಥಗಳನ್ನೂ ಪರಾಮರ್ಶೆ ಮಾಡಿ ವಿಕಿಪೀಡಿಯದಲ್ಲೂ ನವೆಂಬರ್ 20 ಆತನ ಹುಟ್ಟಿದ ದಿನ ಎಂದೇ ನಮೂದಿಸಲಾಗಿದೆ. ಹಾಗಿರುವಾಗ, ಸರಕಾರವೇಕೆ ನವೆಂಬರ್ 10ನ್ನು ಆರಿಸಿಕೊಂಡಿತು ಎನ್ನುವುದೊಂದು ಪ್ರಶ್ನೆ! ಹಿಂದೂಗಳು ಆಚರಿಸುವ ದೀಪಾವಳಿಯ ಮೊದಲ ದಿನದಂದೇ ಟಿಪ್ಪು ಜಯಂತಿಯನ್ನು ಆಚರಿಸಲು ಏನು ಕಾರಣ? ಅದೇ ದಿನ ಟಿಪ್ಪು ಮೇಲುಕೋಟೆಯ 800 ಕುಟುಂಬಗಳನ್ನು ನಾಶ ಮಾಡಿದ್ದನೆನ್ನುವುದು ಸರಕಾರದ ಅಧಿಕಾರಿಗಳಿಗೆ ತಿಳಿದಿರಲಿಲ್ಲವೆ? ಇನ್ನು ಜಯಂತಿ ಎಂಬ ಆಚರಣೆಯ ಕಲ್ಪನೆಯೇ ಇಸ್ಲಾಂ ಮತದಲ್ಲಿಲ್ಲ. ಯಾವುದೇ ವ್ಯಕ್ತಿಯ ಹುಟ್ಟುಹಬ್ಬವನ್ನು ಆಚರಿಸುವುದು ಇಸ್ಲಾಂ ತತ್ವಗಳಿಗೆ ವಿರುದ್ಧವಾದದ್ದು. ಸ್ವತಃ ಪ್ರವಾದಿ ಮುಹಮ್ಮದರ ಹುಟ್ಟುಹಬ್ಬವನ್ನೂ ಇಸ್ಲಾಂನಲ್ಲಿ ಆಚರಿಸುವ ಪದ್ಧತಿ ಇಲ್ಲ. ಹಾಗಿರುವಾಗ ಟಿಪ್ಪುವಿನ ಜಯಂತಿಯನ್ನು ಹಮ್ಮಿಕೊಂಡು ಸರಕಾರ ಕಟ್ಟಾಮುಸಲ್ಮಾನನಾಗಿದ್ದ ಟಿಪ್ಪುವಿಗೂ ಮತ್ತು ಇಸ್ಲಾಂ ಮತಕ್ಕೂ ಅಪಚಾರ ಮಾಡಿದೆಯಲ್ಲವೆ – ಎಂಬ ಮಾತುಗಳೂ ಕೇಳಿಬರುತ್ತಿವೆ. ಇನ್ನೊಂದು ವಾದದ ಪ್ರಕಾರ ಟಿಪ್ಪುವನ್ನು ವೈಭವೀಕರಿಸುವುದಕ್ಕಿಂತ ನಮ್ಮ ರಾಜ್ಯದಲ್ಲಿ ಆಗಿಹೋದ ಅನೇಕ ಹೋರಾಟಗಾರರ ಹುಟ್ಟುಹಬ್ಬವನ್ನು ಆಚರಿಸಬಹುದಿತ್ತು. ರಾಣಿಯರಾದ ಕಿತ್ತೂರು ಚೆನ್ನಮ್ಮ, ಕೆಳದಿ ಚೆನ್ನಮ್ಮ, ಅಬ್ಬಕ್ಕ ಮುಂತಾದವರ ನೆನಪಿನಲ್ಲಿ ಹಬ್ಬ ಮಾಡಬಹುದಿತ್ತು. ಅಥವಾ ಮೈಸೂರುರಾಜ ಕೃಷ್ಣರಾಜ ಒಡೆಯರು, ಸಂಗೊಳ್ಳಿ ರಾಯಣ್ಣ, ಮದಕರಿ ನಾಯಕ ಮುಂತಾದವರೂ ಇದ್ದರು. ಮೈಸೂರಿನ ಮುಸ್ಲಿಮನೇ ಬೇಕೆಂದರೆ ಮಿರ್ಜಾ ಇಸ್ಮಾಯಿಲ್‍ರಂಥ ವ್ಯಕ್ತಿಗಳಿದ್ದರು. ಅಥವಾ ಅಬ್ದುಲ್ ಕಲಾಂರಂಥ ಮಾನವತಾವಾದಿಯ ಹುಟ್ಟಿದ ದಿನವನ್ನು ಆಚರಿಸಬಹುದಿತ್ತು. ಇವೆಲ್ಲಾ ಹೆಸರುಗಳನ್ನು ಬಿಟ್ಟು ಪ್ರಶ್ನಾರ್ಹ ವ್ಯಕ್ತಿತ್ವವಾದ ಟಿಪ್ಪುವನ್ನು ತಲೆ ಮೇಲೆ ಹೊರಬೇಕಿತ್ತೆ? ಇನ್ನೂ ಕೆಲವರು, ಹೀಗೆ ವರ್ಷವರ್ಷವೂ ಒಬ್ಬೊಬ್ಬರ ಜಯಂತಿಯನ್ನು ಆಚರಿಸುತ್ತ ಹೋದರೆ ಕೊನೆಗೊಂದು ದಿನ ಜಯಂತಿಗಳದ್ದೇ ಸಾಲುಸಾಲು ಕಾಣಿಸಿಕೊಳ್ಳಬಹುದು. ಅದರ ಬದಲು, ನಮ್ಮ ರಾಜ್ಯಕ್ಕಾಗಿ ದುಡಿದ, ಮಡಿದ ಎಲ್ಲಾ ಪುಣ್ಯಪುರುಷರನ್ನು ನೆನೆಯಲು ಒಂದು ದಿನವನ್ನು ಮೀಸಲಿಡುವುದು ಯುಕ್ತ ಎಂಬ ಸಲಹೆಯನ್ನು ನೀಡುತ್ತಿದ್ದಾರೆ. ಒಟ್ಟಾರೆ, ಈ ಜಯಂತಿಯನ್ನು ನಡೆಸುವ ಮೂಲಕ ಸರಕಾರ ಒಂದು ಸಾರ್ವಜನಿಕ ಚರ್ಚೆಯನ್ನು ಹುಟ್ಟುಹಾಕಿದೆ ಎನ್ನಬಹುದು.

ಟಿಪ್ಪಣಿ 3: ಒಕ್ಕಲಿಗರು ಮತ್ತು ಟಿಪ್ಪು
ಟಿಪ್ಪು ಬ್ರಿಟಿಷರ ಜೊತೆ ಹೋರಾಡುತ್ತ ವೀರಮರಣವನ್ನಪ್ಪಿದ ಎಂಬ ಮಾಹಿತಿಯನ್ನು ನಮ್ಮ ಶಾಲಾ ಪಠ್ಯಗಳು ಕೊಡುತ್ತವೆ. ಆದರೆ, ಮೈಸೂರಿನ ಇತಿಹಾಸ ಹೇಳುವ ಪುಸ್ತಕಗಳು ಬೇರೆಯೇ ಕತೆ ಹೇಳುತ್ತವೆ. ಮೊತ್ತಮೊದಲಾಗಿ ಹೇಳುವುದಾದರೆ ಟಿಪ್ಪುವಾಗಲೀ ಅವನ ತಂದೆ ಹೈದರಾಲಿಯಾಗಲೀ ರಾಜವಂಶದ ಹಿನ್ನೆಲೆಯವರಲ್ಲ. 1749ರಲ್ಲಿ ಮೈಸೂರು ಸಂಸ್ಥಾನದ ಸೈನ್ಯದಲ್ಲಿ ಒಬ್ಬ ಸಾಮಾನ್ಯ ಸೈನಿಕನಾಗಿ ಸೇರುವ ಹೈದರ್ ಅಲಿ, ಮುಂದೆ ಸೇನಾಧಿಪತಿಯ ಮಟ್ಟಕ್ಕೆ ಬೆಳೆದು ಕೊನೆಗೆ 1761ರಲ್ಲಿ ಮೈಸೂರು ಅರಸ ಎರಡನೇ ಕೃಷ್ಣರಾಜ ಒಡೆಯರನ್ನು ಗೃಹಬಂಧನದಲ್ಲಿಡುತ್ತಾನೆ. ಸರ್ವಾಧಿಕಾರಿಯಾಗಿ ಆಳುತ್ತಿದ್ದರೂ ಹೊರಗಿನ ಜಗತ್ತಿಗೆ ತಾನು “ಮಹಾರಾಜರ ಪ್ರತಿನಿಧಿ” ಎಂದೇ ಬಿಂಬಿಸಿಕೊಳ್ಳುತ್ತಾನೆ. ಈ ರೀತಿಯಲ್ಲಿ ಅವನು ಅರಸರನ್ನು ಒತ್ತೆಯಿಟ್ಟುಕೊಂಡು 21 ವರ್ಷ ರಾಜ್ಯಭಾರ ಮಾಡಿದ. ಹೈದರ್ ಅಲಿ, ಯುದ್ಧವೊಂದರಲ್ಲಿ ಸಾವಿಗೀಡಾದಾಗ 1782ರಲ್ಲಿ ಅವನ ಮಗ ಟಿಪ್ಪು ಪಟ್ಟಕ್ಕೆ ಬಂದ. ಮೈಸೂರು ಅರಸರಿಂದ ದೂರವಾಗಿ ಶ್ರೀರಂಗಪಟ್ಟಣವನ್ನು ತನ್ನ ರಾಜಧಾನಿಯಾಗಿ ಆಯ್ದುಕೊಂಡ. ಹೈದರಾಲಿಯ ನಿಧನದ ನಂತರ ಮೈಸೂರನ್ನು ತನ್ನ ಕೈಯಲ್ಲಿ ಉಳಿಸಿಕೊಳ್ಳಲು ರಾಜಮಾತೆ ಲಕ್ಷ್ಮೀ ಅಮ್ಮಣ್ಣಿಯವರು ಪ್ರಯತ್ನಿಸಿದಾಗ ಟಿಪ್ಪು ಪ್ರತಿರೋಧ ಒಡ್ಡಿದ. ಅವರಿಗೆ ಸಹಾಯ ಮಾಡುತ್ತಿದ್ದ ಎಲ್ಲರನ್ನೂ ನಿರ್ದಯವಾಗಿ ಪರಿಹರಿಸಿ ರಾಜಮಾತೆಯನ್ನು ಒಂಟಿಯಾಗಿಸಿದ. ಹೇಗಾದರೂ ಮಾಡಿ ತನ್ನ ಸಂಸ್ಥಾನವನ್ನು ಉಳಿಸಿಕೊಳ್ಳಲೇಬೇಕೆಂಬ ಹಠಕ್ಕೆ ಬಿದ್ದ ರಾಜಮಾತೆ, ಅದಕ್ಕಾಗಿ ತಿರುಮಲೈ ಅಯ್ಯಂಗಾರರ ಮೂಲಕ ಬ್ರಿಟಿಷರ ಸಹಾಯ ಕೋರಿದರು. ಆಗಿನ ವೈಸರಾಯ್ ಆಗಿದ್ದ ಲಾರ್ಡ್ ವೆಲ್ಲೆಸ್ಲಿ, ಮೈಸೂರಿನಲ್ಲಿ ಟಿಪ್ಪುವನ್ನು ಸೋಲಿಸಲು ಜನರಲ್ ಹ್ಯಾರಿಸ್ ಎಂಬಾತನಿಗೆ ನಾಯಕತ್ವ ಕೊಟ್ಟ. ಅದೇ ಸಮಯದಲ್ಲಿ ಮಳವಳ್ಳಿಯಲ್ಲಿದ್ದ ದೊಡ್ಡ ನಂಜೇಗೌಡ ಮತ್ತು ಉರಿಗೌಡ ಎಂಬ ಇಬ್ಬರು ಒಡೆಯರ್ ನಿಷ್ಠ ಸೇನಾನಿಗಳೂ ಬ್ರಿಟಿಷರ ಜೊತೆ ಸೇರಿ ಟಿಪ್ಪುವನ್ನು ಮಣಿಸಲು ಶಪಥ ತೊಟ್ಟರು. 1799ರ ಮಾರ್ಚ್ 27ರಂದು ಇನ್ನೇನು ಕೈಗೆ ಸಿಕ್ಕೇಬಿಟ್ಟನೆಂಬಂತೆ ಸನಿಹ ಬಂದಿದ್ದ ಟಿಪ್ಪು, ಇವರೆಲ್ಲರ ಕೈಯಿಂದ ತಪ್ಪಿಸಿಕೊಂಡು ಶ್ರೀರಂಗಪಟ್ಟಣದ ಕೋಟೆ ಸೇರಿಕೊಂಡ. ಅದೇ ವರ್ಷದ ಮೇ 4ರಂದು ಬ್ರಿಟಿಷರು ಕೋಟೆಯನ್ನು ಮುತ್ತಿಗೆ ಹಾಕಿ, ಒಳಬರುವುದು ಖಚಿತವಾದಾಗ ಟಿಪ್ಪು ಜನಸಾಮಾನ್ಯರಂತೆ ವೇಷ ಧರಿಸಿ ಪಲಾಯನ ಮಾಡಲು ಯತ್ನಿಸಿದ. ಆದರೆ, ಕೋಟೆಯ ಒಳಗಿದ್ದವರನ್ನೆಲ್ಲ ಬ್ರಿಟಿಷರು ಸಾಯಿಸಿದ್ದರಿಂದ, ಅವರ ನಡುವಲ್ಲಿದ್ದ ಟಿಪ್ಪು ಕೂಡ ಸತ್ತುಬಿದ್ದ. ಆತ ಸತ್ತುಬಿದ್ದಿದ್ದಾನೆನ್ನುವುದು ಮೊದಲು ಬ್ರಿಟಿಷರಿಗೆ ತಿಳಿಯಲಿಲ್ಲ. ಕೊನೆಗೆ, ಶವಗಳ ಪರಿಶೀಲನೆ ನಡೆಸಿ, ಹೆಣಗಳ ಮಧ್ಯದಲ್ಲಿ ಟಿಪ್ಪುವನ್ನು ಗುರುತಿಸಲಾಯಿತು. ಟಿಪ್ಪುವಿನ ಶವ ಸಿಕ್ಕ ಜಾಗವನ್ನು ಇಂದಿಗೂ ಶ್ರೀರಂಗಪಟ್ಟಣದಲ್ಲಿ ನೋಡಬಹುದು. ಟಿಪ್ಪುವಿನ ಮರಣಾನಂತರ ಮೈಸೂರು ಮತ್ತು ಶ್ರೀರಂಗಪಟ್ಟಣ ಮತ್ತೆ ಒಡೆಯರ ಆಡಳಿತಕ್ಕೆ ಒಳಪಟ್ಟಿತು.

(2015ರಲ್ಲಿ ಕರ್ನಾಟಕ ಸರಕಾರ ಟಿಪ್ಪು ಜಯಂತಿ ಆಚರಿಸಿ ಮೂವರು ಅಮಾಯಕ ವ್ಯಕ್ತಿಗಳ ಸಾವಿಗೆ ಕಾರಣವಾದಾಗ “ಕರ್ಮವೀರ” ಪತ್ರಿಕೆಯಲ್ಲಿ ಪ್ರಕಟವಾದ ಬರಹ)

11 ಟಿಪ್ಪಣಿಗಳು Post a comment
  1. Goutham
    ಆಕ್ಟೋ 31 2016

    ಮಂಗಳೂರಿನ ಕ್ರಿಶ್ಚಿಯನ್ನರ ವಿನಃ ತನ್ನ ಆಳುವಿಕೆಯಲ್ಲಿದ್ದ ಬೇರಾವುದೇ ಪ್ರದೇಶದ ಕ್ರಿಶ್ಚಿಯನ್ನರನ್ನು ಟಿಪ್ಪು ಹಿಂಸಿಸಿಲ್ಲ ಎನ್ನುವುದನ್ನು ಎಲ್ಲಾ ಇತಿಹಾಸಕಾರರು ಒಪ್ಪುತ್ತಾರೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿನ ಅನೇಕರಂತೆ ಬಹಳಷ್ಟು ಒಕ್ಕಲಿಗರು ಇಂದಿಗೂ ಸಹ ಟಿಪ್ಪು ಆಮದು ಮಾಡಿಕೊ೦ಡು ಅಭಿವೃದ್ಧಿಗೊಳಿಸಿದ ರೇಷ್ಮೆ ಉದ್ದಿಮೆಯನ್ನು ತಮ್ಮ ಜೀವನೋಪಾಯಕ್ಕಾಗಿ ಅವಲಂಬಿಸಿದ್ದಾರೆ. ಅಂದಿನ ಎಲ್ಲಾ ರಾಜಮಹಾರಾಜರುಗಳಂತೆ ಟಿಪ್ಪು ಸಹ ತನ್ನ ವಿರುದ್ಧ ಸಂಚು ಮಾಡಿದವರನ್ನು ಹಿಂಸಿಸಿದ್ದಾನೆ೦ದು ಕೆಲ ಇತಿಹಾಸಕಾರರು ಹೇಳುತ್ತರಾದರೂ, ನಂಜುಂಡೇಶ್ವರ ದೇವಸ್ಥಾನ ಮತ್ತು ಶೃಂಗೇರಿಯ ಘಟನೆಗಳ ಬಗ್ಗೆ ಓದಿದ ನಂತರ ಈತ ಸೈತಾನ್ ಎನ್ನುವುದು ಸರಿಯಾಗಲಾರದು.

    ಉತ್ತರ
    • ಶೆಟ್ಟಿನಾಗ ಶೇ.
      ನವೆಂ 2 2016

      ಸುಲ್ತಾನರು ಪರಮ ದೈವಭಕ್ತರಾಗಿದ್ದರು ಎಂಬ ಸತ್ಯ ಟಿಪ್ಪು ಸಾಹೇಬ್ ಅವರನ್ನು ಸೈತಾನ ಎಂದು ಕರೆಯುವ ಜನರಿಗೆ ತಿಳಿದಿಲ್ಲ ಅಂತ ಕಾಣುತ್ತದೆ. ಸುಲ್ತಾನರು ತಾವು ಕಂಡ ಕನಸುಗಳನ್ನು ದಾಖಲಿಸಿದ್ದಾರೆ. ಅವುಗಳನ್ನು ಓದಿದರೆ ಅವರ ದೈವಭಕ್ತಿ ಪ್ರಾಮಾಣಿಕವಾದುದು ಹಾಗೂ ಅತ್ಯುನ್ನತವಾದುದು ಎಂದು ತಿಳಿಯುತ್ತದೆ. ಅಂತಹವರು ಸೈತಾನನ ವೈರಿಯೇ ಹೊರತು ಸೈತಾನನಲ್ಲ. ಸುಲ್ತಾನರ ಬಗ್ಗೆ ಆಂಗ್ಲರು ಉದ್ದೇಶ ಪೂರ್ವಕವಾಗಿ ಸುಳ್ಳನ್ನೇ ಸತ್ಯವೆಂದರು – ಆತ ಕ್ರೂರಿ ಮತ್ತು ಲಂಪಟ ಅಂತ. ಕಾಲೋನಿಯಲ್ ಕಾನ್ಷಿಯಸ್ ಕಾರಣದಿಂದ ಹಿಂದುತ್ವವಾದಿಗಳು ಆಂಗ್ಲರು ಹೇಳಿದ್ದನ್ನು ಪರಮಸತ್ಯ ಎಂದು ಭಾವಿಸಿ ಸುಲ್ತಾನರ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ.

      ಉತ್ತರ
  2. ನವೆಂ 8 2016

    Reblogged this on ಕರಾವಳಿ ಕನ್ನಡಿಗ and commented:
    ಆತ ಸ್ವ-ತಂತ್ರ ಹೋರಾಟಗಾರನೇ ಹೊರತು ಸ್ವಾತಂತ್ರ್ಯ ಹೋರಾಟಗಾರನಲ್ಲಾ.!!
    #BanTippuJayanthi

    ಉತ್ತರ
  3. Salam Bava
    ನವೆಂ 8 2016

    If Tippu Sultan were a Shaiva king and he had done same things with ShriVaishnava and Christian communities, these Shettys, Raos and their ilk would have sung peons of him!

    ಉತ್ತರ
  4. WITIAN
    ನವೆಂ 8 2016

    Oh I see! Being a Muslim it is fair game for haram bawas of the world to praise tippe sultan to hilt!

    ಉತ್ತರ
    • Salam Bava
      ನವೆಂ 9 2016

      WitIan you are a Third rate troll (Chakrateertha in disguise?) not worthy of my time. Yet with faintest hope of dawning sense in you I ask you to read this scholarly piece by a great historian of our times: _http://bangaloremirror.indiatimes.com/bangalore/others/Tipu-Sultan-Tiger-or-tyrant/articleshow/55319328.cms

      ಉತ್ತರ
  5. WITIAN
    ನವೆಂ 8 2016

    And for someone who is not sure of his origin, Shit Naaga is confused as usual. I have never seen somebody take the name of tippe sultan with reverence (ಸುಲ್ತಾನರು)

    ಉತ್ತರ
  6. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

    ಉತ್ತರ
  7. Sachidananda
    ನವೆಂ 24 2022

    Tippu was Not sultaan he was saitaan and his histrory was written by those who are part of Gazwa e hind from the time of Moulana abul kalam azaad now taken care by this Sonia sena, this lady some how want to break india

    ಉತ್ತರ
  8. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ jayakumarcsj@gmail.com

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments