ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 7, 2017

‘ಆರ್ ಅಂಕುಸ(ರ?)ವಿಟ್ಟೊಡಂ’: ಒಂದು ಪರಿಶೀಲನೆ

‍ನಿಲುಮೆ ಮೂಲಕ

– ಡಾ.ಶ್ರೀಪಾದ ಭಟ್
ಸಹಾಯಕ ಪ್ರಾಧ್ಯಾಪಕರು,
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ,
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

ಪಂಪ ವಿರಚಿತ ವಿಕ್ರಮಾರ್ಜುನ ವಿಜಯ (ಕ್ರಿ.ಶ.942) ಕೃತಿಯಲ್ಲಿನ ಬನವಾಸಿ ವರ್ಣನೆಯನ್ನು ಮಾಡುವ ಚತುರ್ಥಾಶ್ವಾಸದ 28 ರಿಂದ 32ನೆಯ ಪದ್ಯಗಳು ಸಾಕಷ್ಟು ಚರ್ಚಿತವಾದವು. ಇಂದಿಗೂ ಈ ಪದ್ಯಗಳನ್ನು ಕುರಿತು ಚರ್ಚೆ ನಡೆಯುತ್ತಲೇ ಇದೆ. ಇವುಗಳಲ್ಲಿ ಒಂದು ಪದ್ಯ:

ತೆಂಕಣಗಾಳಿ ಸೋಂಕಿದೊಡಮೊಳ್ನುಡಿಗೇಳ್ದೊಡಮಿಂಪನಾಳ್ದ ಗೇ
ಯಂ ಕಿವಿವೊಕ್ಕಡಂ ಬಿರಿದಮಲ್ಲಿಗೆಗಂಡೊಡಮಾದ ಕೆಂದಲಂ
ಪಂ ಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆನಾ
ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿದೇಶಮಂ1 (4-32)

ಈ ಪದ್ಯವನ್ನು ಕುರಿತು ಪ್ರಾಯಃ ಡಿ ಎಲ್ ನರಸಿಂಹಾಚಾರ್ ಅವರ ಪಂಪಭಾರತ ದೀಪಿಕೆ2 ಪ್ರಕಟವಾದಾಗಿನಿಂದ ಪಂಪನ ನಾಡು ನುಡಿಯ ಪ್ರೀತಿಯ ಹಿನ್ನೆಲೆಯಲ್ಲಿಯೇ ಗಮನಿಸಲಾಗುತ್ತಿದೆ. ಇಲ್ಲಿ ಈ ಪದ್ಯಕ್ಕೆ ಅನ್ಯ ವಿವರಣೆಯ ಸಾಧ್ಯತೆಯನ್ನು ಪರಿಶೀಲಿಸಲಾಗಿದೆ. ವಿದ್ಯಾರ್ಥಿ ದೆಸೆಯಿಂದಲೂ ಪಂಪಭಾರತವನ್ನು ಓದುವಾಗಲೆಲ್ಲ ಆತ ಬನವಾಸಿ ಪರಿಸರ ಕುರಿತು ಬರೆದ ಪದ್ಯಗಳು ತುಂಬ ಮೆಚ್ಚುಗೆಯಾಗಿದ್ದವು. ಬನವಾಸಿ ನನ್ನ ಪರಿಸರ ಎಂಬುದೂ ಇದಕ್ಕೆ ಕಾರಣ. ಆದರೆ ‘ತೆಂಕಣ ಗಾಳಿ…’ ಪದ್ಯವನ್ನು ಓದಿ ಅರ್ಥಮಾಡಿಕೊಳ್ಳುವಾಗ ನೆರವಿಗೆ ಬಂದ ಎಲ್ಲ ವಿವರಣೆಗಳು ಕೊನೆಯ ಸಾಲು ‘ಏನನೆಂಬೆನಾರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ’ ಎಂಬುದಕ್ಕೆ ಡಿ ಎಲ್ ಎನ್ ಅವರು ಹೇಳುವ ‘ಏನನೆಂಬೆಂ-ಏನೆಂದು ಹೇಳಬಲ್ಲೆ, ಎನ್ನಮನಂ-ನನ್ನ ಮನವು, ವನವಾಸಿ ದೇಶಮಂ-ಬನವಾಸಿಯ ಪ್ರಾಂತ್ಯವನ್ನು, ಆರಂಕುಸಮಿಟ್ಟೊಡಂ-ಯಾರು ಅಂಕುಶ ಹಾಕಿದರೂ ಎಂದರೆ ತಡೆದರೂ, ನೆನೆವುದು-ನೆನೆದುಕೊಳ್ಳುತ್ತದೆ’ ಎಂಬ ವಿವರವನ್ನೇ ನೀಡುತ್ತಿದ್ದವು. ಇದು ಯಾಕೋ ಸರಿ ಇಲ್ಲ ಎನ್ನುವ ಕೊರತೆ ಮನಸ್ಸಿನಲ್ಲಿತ್ತು. ಕಳೆದ ಕೆಲವು ವರ್ಷಗಳಿಂದ ಇದು ಮತ್ತಷ್ಟು ತೀವ್ರವಾಯ್ತು. ಒಮ್ಮೆ ಪ್ರೊ. ಪರಮಶಿವಮೂರ್ತಿಯವರಲ್ಲಿ ಈ ಬಗ್ಗೆ ಹೇಳಿದೆ. ‘ಅದು ಸರಿ. ಆರ ಅಂದರೆ ಒಂದು ಮರ ನೋಡ್ರಿ. ಹಿರಿಯ ಸಂಶೋಧಕರಾದ ಮಹಾದೇವಪ್ಪನವರು ಒಮ್ಮೆ ಹೇಳಿದ್ದರು ಅಂದರು. ಆ ಹಿನ್ನೆಯಲ್ಲಿ ಅರ್ಥ ಹುಡುಕಿ’ ಅಂದರು. ಸರಿ ಎಂದು ಶೋಧನೆಗೆ ಇಳಿದೆ. ಹಿರಿಯರೂ ಪಂಪನ ಕೃತಿ ಕುರಿತು ವಿಶೇಷ ಕೆಲಸ ಮಾಡಿದವರೂ ಆದ ಪ್ರೊ. ಪಿ ವಿ ನಾರಾಯಣ ಅವರಲ್ಲಿ ನನ್ನ ಶಂಕೆಯನ್ನು ನಿವೇದಿಸಿದೆ. ಅವರೂ ನಿಮ್ಮ ಯೋಚನೆಯ ದಾರಿ ಸರಿ ಇದ್ದಂತಿದೆ ಎಂದರು. ಒಂದು ದಿನ ಪಿ ವಿ ನಾರಾಯಣ ‘ಕಿಟ್ಟೆಲ್ ಕೋಶದಲ್ಲಿ ಆರ ಎನ್ನುವುದಕ್ಕೆ ಇರುವ ಅರ್ಥವನ್ನು, ಆ ಮರದ ಇಂಗ್ಲಿಷ್/ಲ್ಯಾಟಿನ್ ಹೆಸರುಗಳನ್ನು ಕೊಡಲಾಗಿದೆ… ವೆಬ್ ಸೈಟಿನಲ್ಲಿ ಈ ಮರದ ಎಲ್ಲ ವಿವರ ಲಭ್ಯ’ ಅಂದರು. ‘ಅದನ್ನು ನಾನೂ ನೋಡಿದ್ದೇನೆ. ಅದಕ್ಕೆ ನಿಚುಳ ವೃಕ್ಷ ಎಂದಿದ್ದಾರೆ, ಲ್ಯಾಟಿನ್ ಪದ ಹಿಡಿದು ಮುಂದೆ ಹೋಗಬೇಕಿದೆ’ ಅಂದೆ.

ಇಷ್ಟಾದ ಮೇಲೆ ಬೆಳ್ಳಾವೆ ವೆಂಕಟನಾರಾಯಣಪ್ಪನವರು ಸಂಪಾದಿಸಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮೊದಲು ಪ್ರಕಟವಾಗಿದ್ದ (1931), ಸದ್ಯ ಮೈಸೂರು ವಿಶ್ವವಿದ್ಯಾನಿಲಯ ಮರು ಮುದ್ರಿಸಿರುವ ಪಂಪಭಾರತಂ ಎಂಬ ವಿಕ್ರಮಾರ್ಜುನ ವಿಜಯಂ ಕೃತಿಯನ್ನು ಮತ್ತೆ ಕೈಗೆತ್ತಿಕೊಂಡೆ. ದೀರ್ಘವೂ ಉಪಯುಕ್ತವೂ ಆದ ಅದರ ಉಪೋದ್ಘಾತದಲ್ಲಿ ಬೆಳ್ಳಾವೆಯವರು ಪಂಪ ಭಾರತದ ಸಮಗ್ರ ಇತಿಹಾಸವನ್ನೂ ಹಸ್ತಪ್ರತಿಗಳ ಪೂರ್ವಾಪರಗಳನ್ನೂ ದಾಖಲಿಸಿದ್ದಾರೆ. ಅದರಲ್ಲಿ 1898ರಲ್ಲಿ ರೈಸ್ ಅವರು ಮೊದಲು ಇದನ್ನು ಸಂಪಾದಿಸಿ ಪ್ರಕಟಿಸಿದ್ದನ್ನು ‘ಕ’ ಪ್ರತಿಯೆಂದೂ ಮೈಸೂರು ಅರಮನೆಯ ಸರಸ್ವತೀ ಭಂಡಾರದ ತಾಳೆಯೋಲೆಯನ್ನು ‘ಖ’ ಪ್ರತಿಯೆಂದೂ ಪುಣೆಯ ಭಂಡಾರ್ಕರ್ ಓರೆಯಂಟಲ್ ರೀಸರ್ಚ್ ಇನ್ಸ್ ಟಿಟ್ಯೂಟ್‍ನ ತಾಳೆಯೋಲೆಯನ್ನು ‘ಗ’ ಪ್ರತಿಯೆಂದೂ ಅರಾ ಸೆಂಟ್ರಲ್ ಜೈನ್ ಓರಿಯೆಂಟಲ್ ಲೈಬ್ರರಿಯ ಪ್ರತಿಯನ್ನು ‘ಘ’ ಪ್ರತಿಯೆಂದೂ ಗುರುತಿಸಿರುವುದಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ರೈಸ್ ಅವರು ಸಂಪಾದಿಸಿದ ಕೃತಿಯನ್ನು ಪ್ರಧಾನವಾಗಿ ಆಧರಿಸಿ, ಉಳಿದ ಎಲ್ಲ ಲಭ್ಯ ಹಸ್ತಪ್ರತಿಗಳನ್ನು ಆಮೂಲಾಗ್ರವಾಗಿ ಪರಿಶೀಲಿಸಿದ ವಿದ್ವಾಂಸರ ನೆರವಿನಿಂದ ಬೆಳ್ಳಾವೆಯವರು ಪಂಪಭಾರತವನ್ನು ಸಂಪಾದಿಸಿ ಕೊಟ್ಟಿದ್ದಾರೆ. ಡಿ ಎಲ್ ನರಸಿಂಹಾಚಾರ್ ಅವರು ಕೂಡ ಬೆಳ್ಳಾವೆಯವರ ಪಾಠವನ್ನೇ ಅನುಸರಿಸಿ ಪಂಪ ಭಾರತ ದೀಪಿಕೆಯನ್ನು ಬರೆದಿದ್ದಾರೆ. ಒಟ್ಟಿನಲ್ಲಿ ಪಂಪಭಾರತದ ಅಧಿಕೃತ ಸದ್ಯದ ಪ್ರತಿ ಎಂದರೆ ಬೆಳ್ಳಾವೆಯವರದೇ.

ಈ ಕೃತಿಯಲ್ಲಿಯೇ ಲಭ್ಯ ಹಸ್ತಪ್ರತಿಗಳ ಗೊಂದಲಗಳನ್ನು ವಿವರಿಸುತ್ತ, ಮೊದಲನೆಯ ಆಶ್ವಾಸದ ‘ಅಸುದತಿಯ ಮೃದುಪದವಿನ್ಯಾಸ…’ (124) ಎಂಬ ಕಂದಪದ್ಯವನ್ನು ಉದಹರಿಸಲಾಗಿದೆ. ಇಂಥ ಅನೇಕ ನಿದರ್ಶನಗಳನ್ನು ನೀಡುತ್ತ ‘ಖ’ ‘ಗ’ ಪ್ರತಿಗಳೆರಡರಲ್ಲಿಯೂ ಲೇಖಕರಿಂದುಂಟಾದ ತಪ್ಪುಗಳೂ ಇತರ ತಪ್ಪುಗಳೂ ಗ್ರಂಥಪಾತಗಳೂ ಬಹಳವಾಗಿವೆ, ಅರಾ ಪ್ರತಿ ‘ಘ’ ದಲ್ಲಿಯೂ ಲೇಖಕಜನ್ಯವಾದ ತಪ್ಪುಗಳೂ ಇತರ ತಪ್ಪುಗಳೂ ಗ್ರಂಥಪಾತಗಳೂ ತಕ್ಕಮಟ್ಟಿಗಿವೆ ಎಂದಿದ್ದಾರೆ. ಒಟ್ಟಿನಲ್ಲಿ ಪಂಪಭಾರತದ ಲಭ್ಯ ನಾಲ್ಕು ಹಸ್ತಪ್ರತಿಗಳಲ್ಲಿ ಯಾವುದೇ ಒಂದು ಪ್ರತಿ ಸಂಪೂರ್ಣ ನಂಬಲರ್ಹವಾಗಿಲ್ಲ. ಇವನ್ನೆಲ್ಲ ಒಟ್ಟು ಸೇರಿಸಿ ತುಂಬ ಶ್ರಮವಹಿಸಿ ಉತ್ತಮ ಪಾಠವನ್ನು ಒದಗಿಸಿದ್ದಾಗಿ ಬೆಳ್ಳಾವೆಯವರು ಸಾಧಾರವಾಗಿ ನಿರೂಪಿಸಿದ್ದಾರೆ.

ಪ್ರಕೃತ ಪ್ರತಿಯಲ್ಲಿ ಸದ್ಯ ಎತ್ತಿಕೊಂಡ ‘ತೆಂಕಣಗಾಳಿ ಸೋಂಕಿದೊಡಂ…’ ಪದ್ಯದಲ್ಲಿ ‘ಏನನೆಂಬೆನಾರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ’ ಎಂದಿದ್ದು, ಇದನ್ನೇ ಇಲ್ಲಿ ಚರ್ಚಿಸಲಾಗಿದೆ. ಈ ಪದ್ಯಕ್ಕೆ ಯಾವುದೇ ಪಾಠಾಂತರಗಳನ್ನು ಬೆಳ್ಳಾವೆಯವರಾಗಲೀ ಡಿ ಎಲ್ ಎನ್ ಅವರಾಗಲೀ ತೋರಿಸಿಲ್ಲ. ಅನಂತರ ಪಂಪನನ್ನು ಕುರಿತು ವಿಶೇಷ ಕೆಲಸ ಮಾಡಿದ ವಿದ್ವಾಂಸರೆಲ್ಲ ಇದೇ ವಿವರಣೆಯನ್ನು ಒಪ್ಪಿಕೊಂಡಿದ್ದಾರೆ.

ಡಿ ಎಲ್ ನರಸಿಂಹಾಚಾರ್ ಅವರು ಪಂಪಭಾರತ ದೀಪಿಕೆಯಲ್ಲಿ ಈ ಪದ್ಯಕ್ಕೆ ನೀಡುವ ವಿವರಣೆ ಹೀಗಿದೆ: ‘ಪಂಪನ ದೇಶಪ್ರೇಮ ಭಾವಗೀತೆಯಾಗಿ ಹರಿದಿದೆ ಈ ಪದ್ಯಗಳಲ್ಲಿ: ತೆಂಕಣಗಾಳಿ ಸೋಂಕಿದೊಡಂ-ದಕ್ಷಿಣದ ಗಾಳಿ ಮೈಮುಟ್ಟಿದರೂ, ಒಳ್ನುಡಿಗೇಳ್ದೊಡಂ-ಒಳ್ಳೆಯ ಮಾತನ್ನು ಕೇಳಿದರೂ, ಇಂಪನಾಳ್ದಗೇಯಂ- ಇಂಪಿನಿಂದ ಕೂಡಿದ ಸಂಗೀತವು, ಕಿವಿವೊಕ್ಕಡಂ-ಕಿವಿಗೆ ಕೇಳಿಸಿದರೂ, ಬಿರಿದ ಮಲ್ಲಿಗೆಗಂಡೊಡಂ-ಅರಳಿದ ಮಲ್ಲಿಗೆಯನ್ನು ನೋಡಿದರೂ, ಆದ ಕೆಂದು-ಉಂಟಾದ ನಿದ್ದೆ, ಅಲಂಪಂ-ಸುಖವನ್ನು, ಗೆಡೆಗೊಂಡೊಡಂ-ಜೊತೆಗೂಡಿದರೂ, ಮಧುಮಹೋತ್ಸವಮಾದೊಡಂ-ವಸಂತಕಾಲದ ಮಹೋತ್ಸವ ನಡೆದರೂ, ಏನನೆಂಬೆಂ-ಏನೆಂದು ಹೇಳಬಲ್ಲೆ, ಎನ್ನಮನಂ-ನನ್ನ ಮನವು, ವನವಾಸಿ ದೇಶಮಂ-ಬನವಾಸಿ ಪ್ರಾಂತ್ಯವನ್ನು, ಆರಂಕುಸಮಿಟ್ಟೊಡಂ-ಯಾರು ಅಂಕುಶ ಹಾಕಿದರೂ ಎಂದರೆ ತಡೆದರೂ ನೆನೆವುದು-ನೆನೆದುಕೊಳ್ಳುತ್ತದೆ’.

ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಎನ್ ಅನಂತರಂಗಾಚಾರ್ ಅವರ ಪಂಪಭಾರತದ ಗದ್ಯಾನುವಾದದಲ್ಲಿ ಪ್ರಸ್ತುತ ಪದ್ಯವನ್ನು ಹೀಗೆ ವಿವರಿಸಿದೆ: ‘(ಅತಿಸುಖ ಹೇತುಗಳಾದ) ದಕ್ಷಿಣ ದಿಕ್ಕಿನ ತಂಪಾದ ಗಾಳಿಯ ಸ್ಪರ್ಶವಾದರೂ ಒಳ್ಳೆಯ ಮಾತನ್ನು ಕೇಳಿದರೂ ಇಂಪಾದ ಗಾನವು ಕಿವಿಯನ್ನು ಪ್ರವೇಶಿಸಿದರೂ ಅರಳಿದ ಮಲ್ಲಿಗೆ ಹೂವನ್ನು ಕಂಡರೂ ನಿದ್ರಾಮುದ್ರಿತವಾದ ರತಿಸೌಖ್ಯಕ್ಕೆ ಪಾತ್ರವಾದರೂ ವಸಂತೋತ್ಸವ ಪ್ರಾಪ್ತವಾದರೂ ಏನು ಹೇಳಲಿ ಯಾರು (ಬೇಡವೆಂದು ತಡೆದು) ಅಂಕುಶದಿಂದ ತಿವಿದರೂ ನನ್ನ ಮನಸ್ಸು ಬನವಾಸಿ ದೇಶವನ್ನು ನೆನೆಯುತ್ತದೆ’.

ಅರ್ಥೈಸಿಕೊಳ್ಳುವಲ್ಲಿ ಈ ಪದ್ಯ ವಿದ್ವಾಂಸರಿಗೆ ಸವಾಲು ಎಸೆದಿರುವುದಂತೂ ನಿಜ. ‘ಅಲಂಪಂಗೆಡೆಗೊಂಡೊಡಂ’ ಹಾಗೂ ‘ಮಧುಮಹೋತ್ಸವಮಾದೊಡಂ’ ಎಂಬುದನ್ನು ಡಿ ಎಲ್ ಎನ್ ಅವರು ಅಲಂಪಂ-ಸುಖವನ್ನು, ಗೆಡೆಗೊಂಡೊಡಂ-ಜೊತೆಗೂಡಿದರೂ, ಮಧುಮಹೋತ್ಸವಮಾದೊಡಂ-ವಸಂತಕಾಲದ ಮಹೋತ್ಸವ ನಡೆದರೂ ಎಂದು ಅರ್ಥ ಮಾಡಿದ್ದರೆ, ಅನಂತರಂಗಾಚಾರ್ ಅವರು ನಿದ್ರಾಮುದ್ರಿತವಾದ ರತಿಸೌಖ್ಯಕ್ಕೆ ಪಾತ್ರವಾದರೂ ವಸಂತೋತ್ಸವ ಪ್ರಾಪ್ತವಾದರೂ ಎಂದಿದ್ದಾರೆ. ‘ಆರಂಕುಸವಿಟ್ಟೊಡಂ’ ಎಂಬುದಕ್ಕೆ ಇಬ್ಬರೂ ಒಂದೇ ರೀತಿ ಅರ್ಥ ಕಲ್ಪಿಸಿದ್ದಾರೆ.

ಈ ಪದ್ಯವನ್ನು ಕುರಿತು ಎನ್ ಎಸ್ ತಾರಾನಾಥ್ ಅವರು ಈ ಅರ್ಥಗಳಿಗಿಂತಲೂ ಬೇರೆಯದೇ ಆದ ಒಂದು ಹೊಸ ಒಳನೋಟವನ್ನು ನೀಡಿದ್ದಾರೆ. ‘ಪಂಪನ ಬನವಾಸಿಯ ವರ್ಣನೆ ನಾಲ್ಕು ವೃತ್ತಗಳಲ್ಲಿದೆ. ಈ ಪದ್ಯಗಳಲ್ಲಿ ಮೊದನೆಯದು ಬನವಾಸಿಯ ನಂದನವನ, ಎರಡನೆಯದು ಅಲ್ಲಿಯ ಜನ, ಮೂರನೆಯದು ಇಂದ್ರಿಯಗಳ ಮೂಲಕ ಬನವಾಸಿಯ ಸೊಬಗಿನ ಆಸ್ವಾದ, ನಾಲ್ಕನೆಯದು ಅಲ್ಲಿ ಕಂಡ ಚಟುವಟಿಕೆ ಬಣ್ಣಿಸುತ್ತದೆ. ಇದು ಬನವಾಸಿಯ ವರ್ಣನೆಯೇ. ಇವನ್ನು ಬಿಡಿಯಾಗಿ ನೋಡುವುದಕ್ಕಿಂತ ಇಡಿಯಾಗಿ, ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಇದು ಒಂದು ಸಂದರ್ಭ ಅಥವಾ ಉತ್ಸವದ ಹಿನ್ನೆಲೆಯ ವರ್ಣನೆ ಎಂಬ ಸಂದೇಹ ಮೂಡಿಸುವಂತಿದೆ; ಒಮ್ಮೆ ನೋಡಿದ ದೃಶ್ಯ ಮನದಲ್ಲಿ ಉಳಿದು ಮರುಕಳಿಸಿರುವಂತಿದೆ ಈ ಬಣ್ಣನೆ. ಹಣ್ಣುಬಿಟ್ಟ ಮಾವಿನ ಮರ, ದಟ್ಟವಾದ ವೀಳ್ಯದೆಲೆಬಳ್ಳಿ, ಹೂ ಬಿಟ್ಟ ಸಂಪಿಗೆ, ಕುಕಿಲ್ವ ಕೋಗಿಲೆ, ಹಾಡುವ ದುಂಬಿ, ಕೂಡುವ ನಲ್ಲರು-ಈ ಎಲ್ಲವೂ ವಸಂತಾಗಮನ ಸೂಚಿಸುತ್ತವೆ. ಹಣ್ಣುಬಿಟ್ಟ ಮಾವಿನ ಮರ ನೋಡಿಯೋ ಅದರ ಮೇಲೆ ಕುಳಿತೋ ಕೋಗಿಲೆ ಕುಕಿಲ್ವುದು ವಸಂತಕ್ಕೆ ಸ್ವಲ್ಪ ಮುಂಚೆ ಅಥವಾ ವಸಂತಕಾಲದಲ್ಲಿಯೇ. ಮುಂದಿನ ಪದ್ಯದಲ್ಲಿ ಬನವಾಸಿಯ ಮಾನಿಸರನ್ನು ಹೊಗಳುತ್ತ ಬನವಾಸಿಯ ನಂದನವನದಲ್ಲಿ ಮರಿದುಂಬಿಯಾಗಿ ಅಥವಾ ಕೋಗಿಲೆಯಾಗಿ ಹುಟ್ಟುವಂತಾಗಲಿ ಎಂಬ ಕವಿಯ ಹಾರೈಕೆ ಇದಕ್ಕೆ ಒತ್ತಾಸೆಯಾಗಿದೆ. ತೆಂಕಣಗಾಳಿಯ ಸೋಂಕು, ಒಳ್ಳೆಯ ಮಾತಿನ ಆಲಿಸುವಿಕೆ, ಇಂಪಾದ ಹಾಡಿನ ಶ್ರವಣ ಸುಖ, ಬಿರಿದ ಮಲ್ಲಿಗೆಯ ನೋಟ (ರತಿ), ಸುಖದ ಜೋಂಪು ಹೇಳುತ್ತ ಮಧು ಮಹೋತ್ಸವ ಮಾದೊಡಂ ಏನನೆಂಬೆನ್ ಆರ್ ಅಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ ಎಂಬಲ್ಲಿ ಇದು ಉತ್ಸವದ ಸಂದರ್ಭವೆಂಬುದು ಸ್ಪ‍‍ಷ್ಟಭಿವ್ಯಕ್ತಿ ಪಡೆದಿದೆ. ಮಧುಮಹೋತ್ಸವವೆಂದರೆ ವಸಂತೋತ್ಸವವೇ. ಗಾಯನಗೋಷ್ಠಿ, ವಿದ್ವದ್ ಗೋಷ್ಠಿ, ಚರ್ಚಾ ಗೋಷ್ಠಿಗಳು ಈ ಉತ್ಸವದ ಅಂಗವಾಗಿ ಬನವಾಸಿಯಂಥ ಸಾಂಸ್ಕೃತಿಕ ಕೇಂದ್ರದಲ್ಲಿ ಜರುಗುತ್ತಿದ್ದಿರಬೇಕು. ಫಾಲ್ಗುಣ ಶುದ್ಧ ಹುಣ್ಣಿಮೆಯ ಸಮಯದಲ್ಲಿ ಜರಗುವ ವಸಂತೋತ್ಸವ ಹೋಳಿ ಹಬ್ಬವಾದರೂ ಈ ಸಂದರ್ಭಕ್ಕೆ ಹೊಂದುವ ಸಮಯವಾಗಿದೆ. ಹಾಗಾಗಿ ಇದು ಮಧುಮಹೋತ್ಸವ ಸಂದರ್ಭದ ಪ್ರಕೃತಿ ಸೌಂದರ್ಯ ವರ್ಣನೆ ಎನಿಸುತ್ತದೆ. ಇದಕ್ಕೆ ಒಂದು ಶಾಸನದ ಬೆಂಬಲವೂ ಇದೆ’.
ಪ್ರೊ. ಸಿ ಮಹಾದೇವಪ್ಪನವರು ಹೇಳುವ ಅರ್ಥ ಹೀಗಿದೆ: ‘ಆ ಪದ್ಯದ ಬಿಂದು ಪದಮಧ್ಯ ಬಿಂದುವಾಗಿಯೇ ಕಾಣಿಸಿಕೊಂಡು ‘ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ’ ಎಂದೇ ಓದಿಸಿಕೊಂಡು ಆರ್-ಯಾರು, ಅಂಕುಸವಿಟ್ಟೊಡಂ-(ಆನೆಯನ್ನು ಹತೋಟಿಯಲ್ಲಿಡಲು ಬಳಸುವ) ಅಂಕುಶದಿಂದ ತಿವಿದರೂ ನನ್ನ ಮನಸ್ಸು ಆ ಬನವಾಸಿಯನ್ನು ನೆನೆವುದು ಎಂದೇ ಅರ್ಥೈಸಿಕೊಂಡಿತು. ಕವಿಯ ಪದದ ನಿರ್ದಿಷ್ಟರ್ಥದಂತೆ ‘ಆರಂ ಕುಸಮಿಟ್ಟೊಡಂ’ ಎಂದರೆ ಆರ ಮರವು, ನೀಪ ಜಾತಿಯ ಕದಂಬ ವೃಕ್ಷವು ಹೂಗೊಂಚಲನ್ನು ಬಿಟ್ಟರೂ ಆ ಹೂವಿನ ಸುಗಂಧವು ಮೂಗಿಗೆ ಮುಟ್ಟಿ ಸೊಗಸುವುದು ಎಂಬ ಭಾವವನ್ನು ಪದ್ಯವು ಮನಗಾಣಿಸುತ್ತದೆ. ಆರಂಕುಸಮಿಟ್ಟೊಡಂ ಎಂಬುದನ್ನು ಪದಮಧ್ಯ ಬಿಂದುವಾಗಿ ಓದಿದಾಗ ಅದು ಭಿನ್ನಾರ್ಥಕ್ಕೆಡೆಗೊಡುತ್ತದೆ’.

ಹೀಗೆ ‘ಆರಂಕುಸವಿಟ್ಟೊಡಂ’ ಎಂಬಲ್ಲಿನ ಬಿಂದುವನ್ನು ಪದಾಂತ್ಯ ಬಿಂದುವಾಗಿ ಆರಂ ಎಂದೂ ‘ಕುಸಮಿಟ್ಟೊಡಂ’ ಎಂದೂ ಓದಿಕೊಳ್ಳಬೇಕೆಂದು ಮಹಾದೇವಪ್ಪನವರು ಹೇಳುತ್ತಾರೆ. ಮಲ್ಲಿಕಾರ್ಜುನನ ಸೂಕ್ತಿ ಸುಧಾರ್ಣವದ (ಕ್ರಿ.ಶ. 1235) ‘ಆರಂ ಕಂಪು ಮೂಗಿಂಗೆ’ ಎಂಬ ಉಕ್ತಿಯನ್ನೂ ನೀಡಿದ್ದಾರೆ. ಆದರೆ ಆರಂ ಎಂದರೆ ಕದಂಬವೃಕ್ಷವೆಂದು ಊಹಿಸುತ್ತಾರೆ. ಕುಸಮಿಡು ಅಂದರೆ ಕುಸುಮಿಸು (ಕ್ರಿ) ಎಂದು ಅರ್ಥೈಸುತ್ತಾ, ಇಡೀ ಪದ್ಯವನ್ನು ಹೀಗೆ ವಿವರಿಸುತ್ತಾರೆ: ‘ಯಾವ ಯಾವ ಸನ್ನಿವೇಶಗಳಲ್ಲಿ ತನಗೆ ಆ ಬನವಾಸಿಯ ನೆನಪಾಗುವುದು ಎಂಬುದರ ಕವಿಯ ವಿವರಣೆಯ ನಿರೂಪಣೆಯಿದು:
1. ದಕ್ಷಿಣ ದಿಕ್ಕಿನ ಮಲಯಾಚಲದ ತಂಗಾಳಿಯ ತಂಪು ಮೈಯ ಚರ್ಮಕ್ಕೆ ಅತಿಹಿತ
2. ಮೃದುವಾದ ಮಾತು, ಇಂಪಾದ ಗಾನ ಸುಧೆಯ ಸವಿ ಕಿವಿಗೆ
3. ಅರಳಿದ ದುಂಡು ಮಲ್ಲಿಗೆಯ ಅಂದದ ನೋಟ ಕಣ್ಗೆ ಬಲು ಆನಂದ
4. ವಸಂತ ಸಮಯದ ಶಯನ ಸುಖದ ಜಿಹ್ಯೋಪಸ್ಥ ಕೆಳೆತನದ ಸವಿ ರಸನೆಗೆ
5. ‘ಆರ’ ಮರ ಇಲ್ಲವೇ ಕದಂಬ ವೃಕ್ಷ ಬಿಡುವ ಹೂಗೊಂಚಲ ಸುವಾಸನೆಯ ಸುಖ ನಾಸಿಕಕೆ’

ಆರ ಎಂಬುದಕ್ಕೆ ಕದಂಬ ವೃಕ್ಷ ಎಂದು ಯಾವ ಆಧಾರದಲ್ಲಿ ಊಹಿಸಲಾಗಿದೆಯೋ ತಿಳಿಯದು. ಪಂಪನ ಪದಪ್ರಯೋಗ ಕೋಶದಲ್ಲೂ ‘ಅಂಕುಸವಿಡು’ ಎಂಬುದಕ್ಕೆ ಅಡ್ಡಿಮಾಡು (ಕ್ರಿ) ಎಂದು ಅರ್ಥ ನೀಡುತ್ತ ‘ಆರಂಕುಸವಿಟ್ಟೊಡಂ’ ಎಂಬ ಸಾಲನ್ನು ಉಲ್ಲೇಖಿಸಲಾಗಿದೆ. ಆದರೆ ಇದರಲ್ಲಿ ಆರ್ ಅಥವಾ ಆರ ಎಂಬುದಕ್ಕೆ ಯಾವುದೇ ವೃಕ್ಷದ ಅರ್ಥ ಕೊಡಲಾಗಿಲ್ಲ.
ಇದು ಕದಂಬವೇ (Anthocephalus cadamba) ಆಗಿದ್ದರೆ ಅದರ ಹೂವು ಬಿಡುವುದು ಮೇ-ಜುಲೈನಲ್ಲಿ. ಸುವಾಸನೆಯುಳ್ಳ ಸಣ್ಣ ಕಿತ್ತಳೆ ಬಣ್ಣದ ಹೂ ಬಿಡುತ್ತದೆ. ಆದರೆ ವಸಂತ ಕಾಲದ ವರ್ಣನೆಯಲ್ಲಿ, ಅದಕ್ಕೆ ಸಂಬಂಧಪಡದ ಹಾಗೂ ಅಷ್ಟೇನೂ ಆಕರ್ಷಕವಲ್ಲದ ಈ ಹೂವನ್ನು ಪಂಪ ವರ್ಣಿಸಿರುವ ಸಾಧ್ಯತೆ ಬಹಳ ಕಡಿಮೆ. ಮಹಾದೇವಪ್ಪನವರು ಹೇಳುವಂತೆ ಆರ್+ಅಂಕುಸವಿಟ್ಟೊಡಂ ಎನ್ನುವುದರ ಬದಲಾಗಿ ಪದಾಂತ್ಯ ಬಿಂದುವಾಗಿ ಆರಂ+ಕುಸಮಿಟ್ಟೊಡಂ ಎಂದು ಓದಿಕೊಂಡರೆ ಆರಂ-ಆರ್ (ನೀರುಕಣಗಿಲೆ) ಮರವು ಕುಸಮಿಟ್ಟೊಡಂ-ಹೂಬಿಡುತ್ತಿದ್ದಂತೆ ಎಂದು ಅನ್ವಯಮಾಡಿಕೊಳ್ಳಬಹುದು.

ಈ ಎರಡು ಅನ್ವಯ ಅರ್ಥವನ್ನೇ ತುಸು ಮುಂದುವರೆಸಿ ಈ ಪದ್ಯದ ಸಾಲನ್ನು ಇನ್ನೊಂದು ದೃಷ್ಟಿಯಲ್ಲಿ ಗಮನಿಸಬಹುದು. ಇಂದ್ರಿಯಾನುಭವದ ಮೂಲಕ ಬನವಾಸಿಯನ್ನು ನೆನಪಿಸಿಕೊಳ್ಳುತ್ತಿರುವ ಪಂಪ, ಪದ್ಯದ ಕೊನೆಯಲ್ಲಿ ಇದ್ದಕ್ಕಿದ್ದಂತೆಯೇ ಯಾರಾದರೂ ತನ್ನನ್ನು ನಿಗ್ರಹಿಸುವ ಮಾತನ್ನೇಕೆ ತರುತ್ತಾನೆ? ಬನವಾಸಿ ವರ್ಣಿಸುವ ಆತನ ಹಿಂದಿನ ಯಾವ ಪದ್ಯಭಾಗದಲ್ಲೂ ಕನ್ನಡವನ್ನೋ ಬನವಾಸಿಯನ್ನೋ ತಾನು ನೆನೆದರೆ ಎಚ್ಚರಿಸುವ ಜನರಾಗಲೀ ನೆನೆಯದಂತೆ ಆಗ್ರಹಿಸುವವರಾಗಲೀ ಇದ್ದಾರೆನ್ನುವ ಉಲ್ಲೇಖವಿಲ್ಲ. ಯಾವ ಯಾವ ಸಂದರ್ಭಗಳಲ್ಲಿ ತನಗೆ ಬನವಾಸಿ ನೆನಪಾಗುತ್ತದೆ ಎಂಬುದನ್ನು ಮಾತ್ರವೇ ಪಂಪ ಇಲ್ಲಿ ಹೇಳಿದ್ದಾನೆ.

ಈಗಾಗಲೇ ಗಮನಿಸಿದಂತೆ ಪಂಪಭಾರತಕ್ಕೆ ಸಂಬಂಧಿಸಿದ ಯಾವುದೇ ಮೂಲ ಹಸ್ತಪ್ರತಿಯೂ ವಿಶ್ವಾಸಾರ್ಹವಾಗಿಲ್ಲ. ಪಂಪಭಾರತದ ಮೊದಲ ವಿಶ್ವಾಸಾರ್ಹ ಪ್ರತಿ ತಯಾರಿಸಿದ್ದು ಎಂಥ ಸಾಹಸದ ಕೆಲಸವಾಯಿತು ಎಂಬುದನ್ನು ಬೆಳ್ಳಾವೆಯವರು ದಾಖಲಿಸಿದ್ದಾರೆ. ಇಂಥ ಸನ್ನಿವೇಶದಲ್ಲಿ ಪ್ರಕೃತ ಪದ್ಯ ಸಾಲಿನಲ್ಲಿ ‘ಅಂಕುಸ’ದ ಬದಲಾಗಿ ‘… ಏನನೆಂಬೆನಾರಂಕುರವಿಟ್ಟೊಡಂ’ ಎಂದಿರುವ ಸಾಧ್ಯತೆ ಇರಬಹುದಲ್ಲ ಎಂಬ ಶಂಕೆ ಉಂಟಾಗುತ್ತದೆ.

ಕಿಟ್ಟೆಲ್ಲರು ಆರ ಎಂಬುದಕ್ಕೆ ನಿಚುಳ ವೃಕ್ಷ ಎಂದಿದ್ದಾರೆ. ಇದರ ಲ್ಯಾಟಿನ್ ಹೆಸರನ್ನು Barringtonia acutangula ಎಂದಿದ್ದಾರೆ. ಸಾಹಿತ್ಯ ಪರಿಷತ್ತಿನ ನಿಘಂಟಿನಲ್ಲೂ ಇತರೆಡೆಯಲ್ಲೂ ನಿಚುಳ ಎಂಬ ಅರ್ಥವಿದೆ. ಈ ಬ್ಯಾರಿಂಗ್ಟೋನಿಯ ಆಕುಟಾಂಗುಲ ಅಂದರೆ ಕನ್ನಡದಲ್ಲಿ ನೀರುಗಣಗಿಲೆ ಎಂದೂ ಹೊಳೆಕೋವೆ ಮರವೆಂದೂ ಹೇಳಲಾಗಿದೆ. ತಮಿಳಿನಲ್ಲಿ ಇದನ್ನು ಕರಂಬು, ಕಡಪೈ ಎಂದೂ ತೆಲುಗಿನಲ್ಲಿ ಕುರ್ಪ ಎಂದೂ ಹಿಂದಿಯಲ್ಲಿ ಹಿಜ್ಜಲ, ಸಮುದ್ರಫಲ ಎಂದೂ ಹೇಳಲಾಗುತ್ತದೆ.

ನೀರುಗಣಗಿಲೆ (ಆರ) ಮರ:

ಚಿತ್ರಕೃಪೆ: http://indiabiodiversity.org/species/show/228867 ದಿನಾಂಕ: 04-12-2016 ರಾತ್ರಿ 8.33

‘ಆರಂಕುರವಿಟ್ಟ’ ಚಿತ್ರ:

ಚಿತ್ರಕೃಪೆ: http://indiabiodiversity.org/species/show/228867 ದಿನಾಂಕ: 04-12-2016 ರಾತ್ರಿ 8.35

ಇದು ಜೌಗು ಹಾಗೂ ನೀರು ಸದಾ ಹರಿಯುವ ಜಾಗದಲ್ಲಿ ಸಹಜವಾಗಿ ಬೆಳೆಯುತ್ತದೆ. ಇದರ ಹೂವು ಮತ್ತು ಬೀಜಗಳನ್ನು ಕೆಲವೆಡೆ ಆಹಾರವಾಗಿಯೂ ಬಳಸುತ್ತಾರೆ. ಇದರ ತೊಗಟೆ, ಎಲೆ, ಬೀಜಗಳನ್ನು ಚರ್ಮ ಕಾಯಿಲೆಗೆ ಔಷಧವಾಗಿ ಬಳಸಲಾಗುತ್ತದೆ. ಫೆಬ್ರವರಿಯಿಂದ ಮಾರ್ಚ್ ಅವಧಿಯಲ್ಲಿ ಇದು ಹೂ ಬಿಡುತ್ತದೆ. ಅಂದರೆ ಈ ಅವಧಿ ವಸಂತಕಾಲವೇ. ಸಂಜೆಯಿಂದ ನಸುಕು ಹರಿಯುವ ಅವಧಿವರೆಗೆ ಮಾತ್ರ ಅರಳುವ ಹೂವು ಬೆಳಕು ಹರಿಯುತ್ತಿದ್ದಂತೆಯೇ ಬಿದ್ದುಹೋಗುತ್ತದೆ. ಕೆಂಪು ಬಿಳಿ, ತುಸು ಹಳದಿ ಮಿಶ್ರಿತ ಅತ್ಯಂತ ಆಕರ್ಷಕವಾದ ಸುವಾಸಿತವೂ ಸಿಹಿ ಮಕರಂದವನ್ನೂ ಹೊಂದಿದ ಈ ಹೂವಿಗೆ ಜೇನು, ದುಂಬಿಗಳು ಆಕರ್ಷಿತವಾಗಿ ಬರುತ್ತವೆ.

ಈ ವೃಕ್ಷ ಸಹ್ಯಾದ್ರಿ ಕಾಡುಗಳಲ್ಲಿ ಸಹಜವಾಗಿದೆ. ಈ ಹೂವನ್ನು ಬನವಾಸಿ ಸುತ್ತುಮುತ್ತಲಿನ ಪರಿಸರದ ಸಾಕಷ್ಟು ಪರಿಚಯವಿದ್ದ ಪಂಪ ನೋಡಿರಲು ಸಾಕು. ಜೊತೆಗೆ ಪಂಪ ಭಾರತದ ಗ್ರಂಥಾಪಾತವುಳ್ಳ ಹಸ್ತಪ್ರತಿಗಳಲ್ಲಿ ‘ಅಂಕುರ’ದ ಬದಲು ‘ಅಂಕುಸ’ ಎಂದು ಓದಿಕೊಳ್ಳಲಾಗಿದ್ದು, ಗ್ರಂಥ ಸಂಪಾದಕರು ಇದನ್ನು ಹೀಗೇ ದಾಖಲಿಸಿ, ‘ಆರ’ ಎನ್ನುವುದನ್ನು ‘ಯಾರು’ ಎನ್ನುವಂತೆ ಓದಿಕೊಂಡಿದ್ದಾರೆಂದು ಭಾವಿಸಬಹುದು. ಆರ್ ಎಂಬುದಕ್ಕೆ ಯಾರು ಎಂಬ ಅರ್ಥವಿದ್ದರೂ ಇಲ್ಲಿ ಆ ಅರ್ಥ ಉಚಿತವೆನಿಸದು. ಅಲ್ಲದೇ ‘ಅಂಕುಸ’ ವನ್ನು ಅಂಕುಶದ ತದ್ಭವವಾಗಿ ಪರಿಗಣಿಸಿಕೊಳ್ಳಲಾಗಿದೆ. ‘ಅಂಕುಸವಿಟ್ಟೊಡಂ’ ಎಂಬ ಪದದ ಆಧಾರದಲ್ಲಿ ಆರ ಎಂಬುದನ್ನು ಆರ್;ಯಾರ್ ಎಂದು ಅನ್ವಯಿಸಿ ನೋಡುವುದು ಈ ಪದ್ಯದ ಮಿಕ್ಕ ವಿವರಣೆಗಳ ಹಿನ್ನೆಲೆಯಲ್ಲಿ ತೀರ ಅಸಮಂಜಸ ಅನಿಸುತ್ತದೆ. ಅಂಕುರವಡೆ, ಅಂಕುರವಿಡು ವ್ಯಾಕರಣಾತ್ಮಕವಾಗಿ ಸ್ವೀಕಾರಾರ್ಹವೇ ಆಗಿದೆ. ಹೀಗಾಗಿ ‘ಅಂಕುಸ’ ವನ್ನು ‘ಅಂಕುರ’ ವಿರಬಹುದೆಂದು ಬಗೆದಾಗ ಛಂದೋರೂಪಕ್ಕೂ ಧಕ್ಕೆ ಒದಗುವುದಿಲ್ಲ.

ಈ ಮಾತಿಗೆ ಪಿ ವಿ ನಾರಾಯಣ ಅವರ ಅಭಿಪ್ರಾಯವೂ ಪೂರಕವಾಗಿದೆ. ‘ಈ ಪದ್ಯದಲ್ಲಿ ಸೂಚಿತವಾದ ಆಶಯವೆಂದರೆ, ಯಾವುದೇ ಸುಂದರ ಇಂದ್ರಿಯಾನುಭವವಾದಾಗಲೂ ಅದು ತನ್ನ ಮನಸ್ಸು ಬನವಾಸಿಯನ್ನು ನೆನಪಿಸುವ ಮೀಟುಗೋಲಾಗುತ್ತದೆ: ದಕ್ಷಿಣದಿಂದ ಬೀಸಿಬಂದ ಗಾಳಿ, ಒಳ್ಳೆಯ ಮಾತುಗಳು, ಇಂಪಾದ ಗಾಯನ, ರತಿಸುಖ, ವಸಂತೋತ್ಸವ-ಇದರಲ್ಲಿ ಯಾವುದನ್ನೇ ಎದುರಾದರೂ ಮನಸ್ಸಿನಲ್ಲಿ ಬನವಾಸಿ ನೆನಪಿಗೆ ಬರುತ್ತದೆ. ಅಷ್ಟೇ ಏಕೆ, “ಆರಂಕುಸವಿಟ್ಟೊಡಂ ನೆನವುದೆನ್ನ ಮನಂ ಬನವಾಸಿ ದೇಶಮಂ” ಅಂದರೆ ಈ ವಾಕ್ಯದಲ್ಲಿ ಇದುವರೆಗೆ ಪಂಡಿತರು ಅರ್ಥೈಸಿರುವಂತೆ ಯಾರಾದರೂ ನೆನಪಿಗೆ ಅಂಕುಶವಿಡುವ ಪ್ರಮೇಯ ಯಾಕೆ ಬರುತ್ತದೆ? ಹೀಗಾಗಿ ಆರ್ ಎಂಬುದು ಸರ್ವನಾಮವಾಗಿರದೇ ಅದು ಆ ಹೆಸರಿನ ಮರವೊಂದನ್ನು ಸೂಚಿಸುತ್ತದೆ; ಜೊತೆಗೆ ‘ಆರಂಕುಸವಿಟ್ಟೊಡಂ’ ಎಂಬುದನ್ನು “ಆರಂಕುರವಿಟ್ಟೊಡಂ” ಎಂದು ಊಹಾಪಾಠ ಮಾಡಿಕೊಂಡರೆ, ಆರ್ ಎಂದು ಸುಂದರವಾದ ಹೂ ಬರುವ ಮರವು ಚಿಗುರಿದಾಗ (ಅಂಕುರವಿಡು) ಸಹ ತನ್ನ ಮನಸ್ಸು ಬನವಾಸಿಯನ್ನು ನೆನಪಿಸಿಕೊಳ್ಳುತ್ತದೆ-ಎನ್ನುವಲ್ಲಿ ಯಾವುದೇ ಸುಂದರ ಸನ್ನಿವೇಶ ಬನವಾಸಿಯ ನೆನಪಿನ ಮೀಟುಗೋಲಾಗುತ್ತದೆ ಎಂಬ ಅರ್ಥ ಬರುತ್ತದೆ’.

ಇಷ್ಟಲ್ಲದೇ ಪಂಪ ರಚಿಸುತ್ತಿರುವುದು ವಸ್ತುಕ ಕಾವ್ಯವನ್ನು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಗೊಂದಲಕ್ಕೆ ಇಲ್ಲಿ ಅವಕಾಶವಿಲ್ಲ. ‘ಆರ್’ ಎಂಬ ಆತನ ಪ್ರಯೋಗವನ್ನು ಸರ್ವನಾಮವಾಗಿ ಪರಿಗಣಿಸಿದಾಗ ಯಾರು? ಯಾಕೆ? ಎಂಬ ಪ್ರಶ್ನೆಗಳು ಸಹಜವಾಗಿ ಮೂಡುತ್ತವೆ. ದೇಶಪ್ರೇಮ, ನಾಡಪ್ರೇಮಗಳಿಗೆ ಸಂಬಂಧಿಸಿದಂತೆ ನಾವು ಇಂದು ಕಾಣುವ ಅಥವಾ ಬಯಸುವ ಅಭಿಮಾನ, ಪರಾಕಾಷ್ಠೆ ಪಂಪನ ಕಾಲದಲ್ಲಿ ಅಪ್ರಸ್ತುತವಾಗಿತ್ತು. ಹಾಗೇನಾದರೂ ಇದ್ದಿದ್ದರೆ ತನ್ನ ವಸ್ತುಕ ಕಾವ್ಯದಲ್ಲಿ ಆತ ತನ್ನ ನಾಡಪ್ರೇಮವನ್ನು ನಿಗ್ರಹಿಸುತ್ತಿರುವವರನ್ನು ನೇರವಾಗಿಯೇ ಹೇಳಿರುತ್ತಿದ್ದ. ಅಂಥ ಸೂಚನೆಗಳೇ ಕಾವ್ಯದಲ್ಲಿ ಕಾಣದಿರುವುದರಿಂದ ನಾವು ನಮ್ಮ ಇಂದಿನ ರಾಷ್ಟ್ರ ಪ್ರೇಮ, ನಾಡಪ್ರೇಮಗಳ ಹಿನ್ನೆಲೆಯಲ್ಲಿ ಪಂಪನ ಈ ಸಾಲನ್ನು ‘ನಮಗೆ ಪ್ರಿಯ ಎನಿಸುವ’ ಅರ್ಥದಲ್ಲಿ ನೋಡುವುದು ಅಸಮಂಜಸವೇ ಸರಿ.

ನವೋದಯದ ಹಿನ್ನೆಲೆಯಲ್ಲಿ ಕಾಣಿಸಿದ ಕರ್ನಾಟಕ ಏಕೀಕರಣ ಚಳವಳಿ, ನಾಡುನುಡಿಯ ಪ್ರಜ್ಞೆಗಳಿಂದ ಪಂಪನ ಈ ಸಾಲು ನಾಡ ಪ್ರೇಮವನ್ನು ಎತ್ತಿಹಿಡಿಯುವಂತೆ ಕಾಣಿಸಿದ್ದರಲ್ಲಿ ಅಚ್ಚರಿಯೇನೂ ಇಲ್ಲ. ಅಷ್ಟಕ್ಕೂ ಆ ಸಾಲು ಕಾಣಿಸುವ ಪದ್ಯದಲ್ಲಾಗಲೀ ಹಿಂದಿನ ಮೂರು ಪದ್ಯಗಳಲ್ಲಾಗಲೀ ಪಂಪನ ಬನವಾಸಿ ಪ್ರೇಮವನ್ನು ಪ್ರಶ್ನಿಸುವ ಅಥವಾ ನಿಗ್ರಹಿಸುವ ಮಾತಾಗಲೀ ಸಂದರ್ಭವಾಗಲೀ ಕಾಣಿಸದಿರುವುದನ್ನು ಗಮನಿಸಿದರೆ ನಿಚ್ಚಳವಾಗಿ ಈ ಸಾಲು ನಿಚುಳ ವೃಕ್ಷದ ಚಿಗುರುವಿಕೆ ಅಥವಾ ಅದು ಹೂ ಬಿಡುವಿಕೆಗೆ ಸಂಬಂಧಿಸಿದೆ ಎನ್ನಲು ಅಡ್ಡಿಯಿಲ್ಲ. ಹೀಗಾಗಿ ‘ಏನನೆಂಬೆನಾರಂಕುರವಿಟ್ಟೊಡಂ…’ ಎಂದೇ ಪಂಪ ದಾಖಲಿಸಿರುವ ಸಂಭವ ಹೆಚ್ಚೆಂದು ತೋರುತ್ತದೆ. ಹೀಗಾದಾಗ ‘ಆರ-ನಿಚುಳವೃಕ್ಷ (ನೀರುಗಣಗಿಲೆ), ಅಂಕುರವಿಟ್ಟೊಡಂ- ಅಂಕುರಿಸಿದಾಗ/ಚಿಗುರಿದಾಗ/ಹೂಬಿಟ್ಟಾಗ’ ಎಂದು ಅನ್ವಯಾರ್ಥವನ್ನು ಮಾಡಿಕೊಳ್ಳಲು ಸಾಧ್ಯ. ಹೀಗಾದಾಗ ಇಡೀ ಪದ್ಯದ ಅನ್ವಯಾರ್ಥದಲ್ಲಿ ಯಾವುದೇ ಆಭಾಸ ಉಂಟಾಗುವುದಿಲ್ಲ ಮಾತ್ರವಲ್ಲ, ಇಡೀ ಪದ್ಯದಲ್ಲಿ ಪಂಪ ನೀಡಿದ ವಸಂತಾಗಮನದ ವರ್ಣನೆ ಪರಿಪೂರ್ಣವೂ ಉಚಿತವೂ ಆಗುತ್ತದೆ. ಆದ್ದರಿಂದ ಪ್ರಸ್ತುತ ಪದ್ಯ ಸಾಲನ್ನು ಒಂದೋ ‘ಆರ್ ಅಂಕುಸ(ರ)ವಿಟ್ಟೊಡಂ’ ಎಂದೋ ಅಥವಾ ‘ಆರಂ ಕುಸವಿ(ಮಿ)ಟ್ಟೊಡಂ’ ಎಂದೋ ಪಾಠಾಂತರದಲ್ಲಿ ಓದಿಕೊಳ್ಳುವುದೇ ಹೆಚ್ಚು ಸೂಕ್ತ ಎನಿಸುತ್ತದೆ.

ಕೊನೆಯ ಟಿಪ್ಪಣಿಗಳು:

1. ಬೆಳ್ಳಾವೆ ವೆಂಕಟನಾರಾಯಣಪ್ಪ (ಸಂ) ಪಂಪಭಾರತಂ ಎಂಬ ವಿಕ್ರಮಾರ್ಜುನ ವಿಜಯಂ, ಮೈಸೂರು ವಿಶ್ವವಿದ್ಯಾನಿಲಯ, 2013, ಪು. 98.
2. ಡಾ. ಡಿ ಎಲ್ ನರಸಿಂಹಾಚಾರ್, ಪಂಪಭಾರತ ದೀಪಿಕೆ, ಮೊದಲ ಮುದ್ರಣ 1971, ಡಿ ವಿ ಕೆ ಮೂರ್ತಿ ಪ್ರಕಾಶನ, ಮೈಸೂರು, ನಾಲ್ಕನೆಯ ಮುದ್ರಣ 2012
3. ಅದೇ. ಪುಟ 15
4. ಅದೇ. ಪುಟ 143.
5. ಎನ್ ಅನಂತರಂಗಾಚಾರ್, ಪಂಪ ಮಹಾಕವಿ ವಿರಚಿತ ಪಂಪಭಾರತಂ, ಕನ್ನಡ ಸಾಹಿತ್ಯ ಪರಿಷತ್ತು, ಮರು ಮುದ್ರಣ 2013, ಪುಟ 221
6. ಎನ್ ಎಸ್ ತಾರಾನಾಥ್, ಅರುಹು-ಕುರುಹು, ಸಂಪುಟ 8, ಸಂಚಿಕೆ 31, ಅಕ್ಟೋಬರ್-ಡಿಸೆಂಬರ್ 2016, ಐಎಸ್‍ಎಸ್‍ಎನ್ :2347-5048, ಪುಟ 21
7. ಪ್ರೊ. ಸಿ ಮಹಾದೇವಪ್ಪ, ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆಯ ಪುನಾರಚಿತ ಪಠ್ಯಗ್ರಂಥ, ಬೆಂಗಳೂರು ಸಂಶೋಧನ ಕೋಟಿ, ವೈಯಾಲಿಕಾವಲ್, ಬೆಂಗಳೂರು, 2013, ಪುಟ 13
8. ಅದೇ, ಪುಟ 15
9. ಡಾ. ಪಿ ವಿ ನಾರಾಯಣ, ಪಂಪನ ನುಡಿಗಣಿ, ಕಾಮಧೇನು ಪುಸ್ತಕ ಭವನ, ಬೆಂಗಳೂರು, 2013
10. ಡಾ. ಪಿ ವಿ ನಾರಾಯಣ, ಹೊಂಗನಸು, ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನದ ವಾರ್ತಾಪತ್ರ ಸಂಪುಟ 03, ಸಂಚಿಕೆ-9, ಡಿಸೆಂಬರ್ 2016

ಈ ಲೇಖನಕ್ಕೆ ಪೂರಕವಾದ ಬ್ಯಾರಿಂಗ್ಟೋನಿಯದ ವಿವರ ಹಾಗೂ ಚಿತ್ರಗಳನ್ನು ಒದಗಿಸಿದ ಪರಿಸರ ವಿಜ್ಞಾನಿ ಎಂ ಎಸ್ ಚೈತ್ರ, ನಿರ್ದೇಶಕರು, ಆರೋಹಿ, ಬೆಂಗಳೂರು, ಇವರಿಗೆ ಕೃತಜ್ಞನಾಗಿದ್ದೇನೆ.

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments