ಪ್ರತಿಷ್ಠೆ ಮತ್ತು ಅನುಕಂಪದ ಸುಳಿಯಲ್ಲಿ ಉಪಚುನಾವಣೆಗಳು
– ಗೋಪಾಲಕೃಷ್ಣ
‘ಸೋ-ಕಾಲ್ಡ್ ಸ್ವಾಭಿಮಾನ’ಕ್ಕೆ ನಡೆದದ್ದು ನಂಜನಗೂಡು ಉಪಚುನಾವಣೆ, ಗೆದ್ದದ್ದು ಮಾತ್ರ ಸಿದ್ದರಾಮಯ್ಯನವರ ‘ಪ್ರತಿಷ್ಠೆ’. ‘ಪ್ರಜಾತಂತ್ರದ ಮೂಲ ಉದ್ದೇಶ’ಕ್ಕೆ ಕೊಡಲಿ ಪೆಟ್ಟು ಕೊಟ್ಟು ಗುಂಡ್ಲುಪೇಟೆಯಲ್ಲಿ ‘ಅನುಕಂಪ’ ಗೆಲುವಿನ ನಗೆ ಬೀರಿತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ಒಂದು ದೇಶ, ಒಂದು ಚುನಾವಣೆ’ಯ ಬಗ್ಗೆ ಚರ್ಚೆ ಹುಟ್ಟು ಹಾಕುತ್ತಿರುವಾಗ ಹಾಗೂ ಇದಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರೂ ದನಿಗೂಡಿಸಿರುವ ಈ ಸಂಧರ್ಭದಲ್ಲಿ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಗಳ ಅವಲೋಕನ ನಡೆಯಬೇಕಾದ ಅಗತ್ಯವಿದೆ. ಪ್ರಜಾಪ್ರಭುತ್ವದ ‘ಜನಸೇವೆ’ ಎಂಬ ಹಣೆಪಟ್ಟಿ ಕಳಚಿಕೊಂಡಿರುವುದಕ್ಕೆ ಈ ಎರಡೂ ಉಪಚುನಾವಣೆಗಳೇ ತಾಜಾ ನಿದರ್ಶನ. ತತ್ವ ಸಿದ್ಧಾಂತದ ಮಾತು ಅತ್ತಗಿರಲಿ, ಮಂತ್ರಿಗಿರಿಯಿಂದ ಕೈಬಿಟ್ಟರು ಎಂಬ ಕಾರಣಕ್ಕೆ ಶ್ರೀನಿವಾಸ ಪ್ರಸಾದ್ ತಮ್ಮ ‘ಶಾಸಕಗಿರಿ’ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅದಕ್ಕೆ ನೀಡಿದ ಕಾರಣ ‘ಸ್ವಾಭಿಮಾನಕ್ಕೆ ಧಕ್ಕೆ’. ಈ ಸೋಕಾಲ್ಡ್ ಸ್ವಾಭಿಮಾನಕ್ಕೂ ಜನಸೇವೆಗೂ ಸಂಬಂಧವಾದರೂ ಇದೆಯಾ? ಐದು ವರ್ಷಗಳ ಅವಧಿಗೆ ಜನರು ತಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡುವುದು ಯಾಕಾಗಿ? ‘ನನ್ನನ್ನು ಆಯ್ಕೆ ಮಾಡಿ ಕ್ಷೇತ್ರದ ಕೆಲಸ ಮಾಡಿಕೊಂಡು ಹೋಗುತ್ತೇನೆ’ ಎಂದು ಮತ ಕೇಳುವವರಿಗೆ ಸ್ವಾಭಿಮಾನದ ಹಂಗ್ಯಾಕೆ? ಕ್ಷೇತ್ರದ ಜನರಿಗೆ ಅವಮಾನವಾದರೂ, ಕ್ಷೇತ್ರದ ಜನರಿಗೆ ಏನೇ ತೊಂದರೆಯಾದರೂ ರಾಜೀನಾಮೆ ನೀಡದೆ ವಿಧಾನಸೌಧದಲ್ಲಿ ಜನರ ಪ್ರತಿನಿಧಿಯಾಗಿರಬೇಕಾಗಿದ್ದ ಶ್ರೀನಿವಾಸ ಪ್ರಸಾದ್‍ರ ಸೋಕಾಲ್ಡ್ ಸ್ವಾಭಿಮಾನ ಮತ್ತು ರಾಜೀನಾಮೆಯ ಪ್ರಹಸನಗಳ ಅಗತ್ಯವಿತ್ತೇ? ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ, ಈ ಸಂಧರ್ಭದಲ್ಲಿ ನಂಜನಗೂಡು ಕ್ಷೇತ್ರಕ್ಕೆ ಆದಷ್ಟು ಅನುದಾನ ತಂದು ಅಭಿವೃದ್ಧಿ ಕೆಲಸಗಳಿಗೆ ಮತ್ತು ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಿದ್ದಿದ್ದರೆ, 2018ರಲ್ಲಿ ಜನರೇ ಮರಳಿ ಆಯ್ಕೆ ಮಾಡುತ್ತಿದ್ದರು.
ಎಲ್ಲಕ್ಕೂ ಮೊದಲು ಮಂತ್ರಿಗಿರಿಯಿಂದ ಕೈಬಿಟ್ಟ ಕಾರಣಕ್ಕಾಗಿ ಸ್ವಾಭಿಮಾನಕ್ಕೇ ಧಕ್ಕೆ ಬರುವುದಾದರೆ ಜನಪ್ರತಿನಿಧಿಗಳಿಗೆ ತಮ್ಮ ‘ಪ್ರತಿಷ್ಠೆ’ಯೇ ಮುಖ್ಯ ಎಂದಾಯಿತು. ಇರಲಿ, ಇತ್ತೀಚಿಗೆ ಇದು ಸಾಮಾನ್ಯ ವಿಷಯ ಎಂದುಕೊಳ್ಳೋಣ. ಆದರೆ ಆ ‘ಪ್ರತಿಷ್ಠೆ’ ಗೆದ್ದಿತೇ? ಗೆದ್ದದ್ದು ಸಿದ್ದರಾಮಯ್ಯನವರ ‘ಪ್ರತಿಷ್ಠೆ’, ಸೋತಿದ್ದು ಮಾತ್ರ ಕರ್ನಾಟಕದ ಅಷ್ಟೂ ಜನರು. ಬರಗಾಲ ಆವರಿಸಿ, ಕುಡಿಯುವ ನೀರಿಗೂ ಸಮಸ್ಯೆಯಾಗಿರುವಾಗ ಸರ್ಕಾರಕ್ಕೆ ಸರ್ಕಾರವೇ 15-20 ದಿನ ಎರಡು ಕ್ಷೇತ್ರಗಳಲ್ಲಿ ಠಿಕಾಣಿ ಹೂಡಿತು. ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿ, ಆದಷ್ಟು ಬರಪರಿಸ್ಥಿತಿಯನ್ನು ನಿಯಂತ್ರಿಸಿ, ಜನರೊಂದಿಗೆ ನಿಲ್ಲಬೇಕಾಗಿದ್ದ ಸಂಧರ್ಭದಲ್ಲಿ ಆಡಳಿತ ಪಕ್ಷ ಚುನಾವಣೆಯನ್ನು ‘ಪ್ರತಿಷ್ಠೆ’ಯಾಗಿ ತೆಗೆದುಕೊಂಡಿದ್ದು ದುರ್ದೈವ. ಇನ್ನು ‘ನೆರಳಿನ ಸರ್ಕಾರ’ವಾಗಿರುವ ವಿರೋಧ ಪಕ್ಷವಾದರೂ ಬರಪರಿಸ್ಥಿತಿಯ ಬಗ್ಗೆ ಮಾತನಾಡಿತೆ ಎಂದರೆ, ಆ ವಿರೋಧ ಪಕ್ಷವೂ ಶಾಮಿಯಾನ ಹಾಕಿಕೊಂಡು ನಂಜನಗೂಡು, ಗುಂಡ್ಲುಪೇಟೆಯಲ್ಲಿ ಠಿಕಾಣಿ ಹೂಡಿತು. ಸಿದ್ದರಾಮಯ್ಯನವರೇನೋ ರಾಜಕೀಯವಾಗಿ ಗೆದ್ದರು, ಸೋತವರು ಮಾತ್ರ ಕರ್ನಾಟಕದ ಜನ. ಇದಕ್ಕೆ ಕಾರಣವಾಗಿದ್ದು ಶ್ರೀನಿವಾಸಪ್ರಸಾದ್‍ರವರ ‘ಸೋಕಾಲ್ಡ್ ಸ್ವಾಭಿಮಾನ’ದ ರಾಜೀನಾಮೆ.
‘ಒಂದು ದೇಶ ಒಂದು ಚುನಾವಣೆ’ ಚರ್ಚೆ ನಡೆಯುತ್ತಿರುವ ಸಂಧರ್ಭದಲ್ಲಿ ನಂಜನಗೂಡು ಕ್ಷೇತ್ರದ ಉಪಚುನಾವಣೆಯಂತಹ ಸ್ವಾರ್ಥದ ನಾಟಕಗಳು ನಿಲ್ಲಬೇಕಾದರೆ, ಸ್ವ-ಇಚ್ಛೆಯಿಂದ ರಾಜೀನಾಮೆ ನೀಡಿದವರು ಮರಳಿ 2-3 ವರ್ಷಗಳವರೆಗೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ನಿಯಮ ಜಾರಿಗೆ ತರಬೇಕು. ಆಗ ಮಂತ್ರಿಗಿರಿಯಿಂದ ಕೈಬಿಟ್ಟದ್ದಕ್ಕೆ, ಮಂತ್ರಿಸ್ಥಾನದ ಆಸೆಗೋ, ದುಡ್ಡಿನ ಆಸೆಗೋ ಅಥವಾ ಇನ್ನಾವುದೋ ಸ್ವಾರ್ಥಕ್ಕೋ ಅವಧಿಗೂ ಮುನ್ನವೇ ರಾಜೀನಾಮೆ ನೀಡುವುದನ್ನು ತಪ್ಪಿಸಬಹುದು. ಅಪರಾಧ ಸಾಬೀತಾದವರು 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ನಿಯಮವಿದೆಯಲ್ಲ ಹಾಗೆ. ಇಲ್ಲದಿದ್ದರೆ ಈ ಉಪಚುನಾವಣೆಗಳಿಗೆ ಕಡಿವಾಣ ಹಾಕುವುದು ಸಾಧ್ಯವಾಗುವುದಿಲ್ಲ.
ಇನ್ನು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಮತ್ತದೆ ಅನುಕಂಪದ ಅಬ್ಬರ. ಇಲ್ಲಿ ಗುಂಡ್ಲುಪೇಟೆ ತಾಜಾ ಉದಾಹರಣೆಯಷ್ಟೇ. ಆದರೆ ಹಲವು ದಶಕಗಳಿಂದ ಅದರಲ್ಲೂ ಕಳೆದೊಂದು ದಶಕದಿಂದ ಸಾಮಾನ್ಯ ವಿಷಯದಂತಾಗಿರುವ ‘ಅನುಕಂಪದ ಅಲೆ’ಯ ಗೆಲುವಿಗೆ ಅರ್ಥವಾದರೂ ಇದೆಯಾ? 31 ಅಕ್ಟೋಬರ್ 1984ರಲ್ಲಿ ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿಯವರು ಕೊಲೆಯಾದ ನಂತರ ನಡೆದ ಚುನಾವಣೆಯಲ್ಲಿ, ಅವರ ಪುತ್ರ ರಾಜೀವ್ ಗಾಂಧಿ ನೇತೃತ್ವಕ್ಕೆ ರಾಕ್ಷಸ ಬಹುಮತವೆನ್ನುವಂತೆ 543ರಲ್ಲಿ 404 ಸ್ಥಾನಗಳು ದೊರೆತಿದ್ದವು. ಆ ಚುನಾವಣೆಯಲ್ಲಿ ಇಂದಿರಾ ಗಾಂಧಿಯವರ ಸಾವಿನ ಅನುಕಂಪ ಆ ಪ್ರಮಾಣದಲ್ಲಿ ಕೆಲಸ ಮಾಡಿತ್ತು. ಆ ನಂತರದ ದಿನಗಳಲ್ಲಿ ಶಾಸಕರೋ, ಲೋಕಸಭಾ ಸದಸ್ಯರೋ ಅಕಾಲಿಕ ಮರಣಕ್ಕೆ ತುತ್ತಾದರೆ ಅವರ ಕುಟುಂಬ ಸದಸ್ಯರನ್ನೇ ಚುನಾವಣಾ ಕಣಕ್ಕಿಳಿಸಿ, ಸಾವಿನ ಅನುಕಂಪದಲ್ಲಿ ಗೆಲ್ಲಿಸಿಕೊಂಡು ಬರುವ ಪರಿಪಾಠ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸರ್ಕಾರಿ ನೌಕರಿಯಲ್ಲಿದ್ದವರು ಸಾವನ್ನಪ್ಪಿದರೆ, ಅವರ ಕುಟುಂಬ ಸದಸ್ಯರಿಗೆ ‘ಅನುಕಂಪದ ಆಧಾರ’ದಲ್ಲಿ ಸರ್ಕಾರಿ ಉದ್ಯೋಗ ಕೊಡುವುದರಲ್ಲಿ ಒಂದು ಅರ್ಥವಿದೆ. ಆ ಕುಟುಂಬಕ್ಕೆ ಆಧಾರವಾಗಿರಲಿ ಎನ್ನುವ ಕಾರಣಕ್ಕೆ. ಆದರೆ ತಂದೆ, ತಾಯಿ, ಗಂಡ, ಹೆಂಡತಿ ಇಂತಹವರ ಸಾವಿನ ಅನುಕಂಪದಲ್ಲಿ ಚುನಾವಣೆಗಳು ನಡೆಯುವುದು ಎಷ್ಟರಮಟ್ಟಿಗೆ ಸರಿ? ಅವರ ಕುಟುಂಬದವರಲ್ಲದಿದ್ದರೆ, ಮತ್ತೊಬ್ಬರು ಚುನಾವಣೆ ಎದುರಿಸಬಹುದು. ತಮ್ಮ ಕುಟುಂಬದವರು ಪ್ರತಿನಿಧಿಸುತ್ತಿದ್ದರು ಎನ್ನುವ ಕಾರಣಕ್ಕೆ ಸಾವಿನ ಮನೆಯಲ್ಲಿದ್ದವರು ಚುನಾವಣೆ ಎದುರಿಸುತ್ತಾರೆಂದರೆ, ಕೌಟುಂಬಿಕ ಹಿಡಿತವನ್ನು ಬಿಟ್ಟುಕೊಡಲು ಇಷ್ಟವಿಲ್ಲದಿರುವುದೇ ಕಾರಣ. ಒಂದು ರಾಜಕೀಯ ಪಕ್ಷ ತನ್ನ ಇನ್ನಿತರ ಕಾರ್ಯಕರ್ತರಿಗೋ ಅಥವಾ ನಾಯಕರಿಗೋ ಬಿ-ಫಾರಂ ನೀಡಿ ಬೇರೆಯವರಿಗೂ ಅವಕಾಶ ಮಾಡಿಕೊಡಬಹುದು. ಆದರೆ ‘ಸಾವಿನ ಅನುಕಂಪ’ವೂ ರಾಜಕೀಯದ ಬಂಡವಾಳವಾದಾಗ ಗುಂಡ್ಲುಪೇಟೆಯಂತಹ ಗೆಲುವು ಸಲೀಸಾಗುತ್ತದೆ.
‘ಒಂದು ದೇಶ ಒಂದು ಚುನಾವಣೆ’ ಚರ್ಚೆಗೆ ಅನುಗುಣವಾಗಿ ಗುಂಡ್ಲುಪೇಟೆ ಉಪಚುನಾವಣೆಯನ್ನು ಅವಲೋಕಿಸಬಹುದಾದರೆ, ಅಭ್ಯರ್ಥಿಗಳು ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ತಾವೇನಾದರೂ ಅಕಾಲಿಕ ಮರಣಕ್ಕೆ ತುತ್ತಾದರೆ, ಉಳಿದ ಅವಧಿಗೆ ನಡೆಯುವ ಉಪಚುನಾವಣೆಯಲ್ಲಿ, ತಮ್ಮ ಕುಟುಂಬದ ಯಾವ ಸದಸ್ಯರೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬ ಪ್ರಮಾಣ ಪತ್ರ ಸಲ್ಲಿಸುವಂತಾಗಬೇಕು. ಅದಕ್ಕೆ ಒಪ್ಪಿಗೆ ಸೂಚಿಸಿರುವ ಕುಟುಂಬ ಸದಸ್ಯರ ಪ್ರಮಾಣ ಪತ್ರವೂ ಸಲ್ಲಿಕೆಯಾಗುವಂತಾಗಬೇಕು. ಆಗ ಈ ಅನುಕಂಪದ ಆಟಕ್ಕೆ ಬ್ರೇಕ್ ಬೀಳಲಿದೆ. ಪ್ರತಿನಿಧಿಗಳ ಅಕಾಲಿಕ ಮರಣಕ್ಕೆ ನಡೆಯುವ ಉಪಚುನಾವಣೆಯನ್ನು ಯಾರೂ ತಡೆಯಲಾಗುವುದಿಲ್ಲ ನಿಜ, ಆದರೆ ಜನಸೇವೆಗೂ, ಸಾವಿನ ಅನುಕಂಪಕ್ಕೂ ಎತ್ತಣಿದೆತ್ತ ಸಂಬಂಧ.
ಸೋಕಾಲ್ಡ್ ಸ್ವಾಭಿಮಾನಕ್ಕೆ, ಸ್ವಾರ್ಥದಾಸೆಗೆ, ಪ್ರತಿನಿಧಿಗಳ ಅಕಾಲಿಕ ಮರಣಕ್ಕೆ ಆಗಾಗ ಎದುರಾಗುವ ಈ ಉಪಚುನಾವಣೆಗಳೂ ನಡೆಯುವ ರೀತಿಯಾದರೂ ಹೇಗೆ? ಸರ್ಕಾರಕ್ಕೆ ಸರ್ಕಾರವೇ ಠಿಕಾಣಿ ಹೂಡುವುದು, ಅಭಿವೃದ್ಧಿ ಕಾರ್ಯಗಳಿಗೆ ಯಾವ ಮಟ್ಟಿಗೆ ಆಡಳಿತ ಯಂತ್ರ ಬಳಕೆಯಾಗುತ್ತದೋ! ಆದರೆ ಉಪಚುನಾವಣೆಗಳಲ್ಲಿ ಮಾತ್ರ ಆಡಳಿತ ಪಕ್ಷ ಸಮರ್ಥವಾಗಿ ಆಡಳಿತ ಯಂತ್ರವನ್ನು ಬಳಕೆ ಮಾಡಿಕೊಳ್ಳುತ್ತದೆ. ಅದೂ ಬಿಜೆಪಿ ಇರಲಿ, ಕಾಂಗ್ರೆಸ್ ಇರಲಿ ಅಥವಾ ಇನ್ನಾವುದೇ ಪಕ್ಷ ಆಡಳಿತದಲ್ಲಿರಲಿ. ಸದ್ಯ ‘ಒಂದು ದೇಶ ಒಂದು ಚುನಾವಣೆ’ ಎಂಬ ಚರ್ಚೆಯನ್ನು ಹುಟ್ಟು ಹಾಕುವ ಧೈರ್ಯ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಅವಧಿಯಲ್ಲೇ ಇದಕ್ಕೊಂದು ಸ್ಪಷ್ಟ ರೂಪ ನೀಡುವ ಕಾರ್ಯಕ್ಕೆ ಮುಂದಾಗಬೇಕಿದೆ. ರಾಷ್ಟ್ರಪತಿಯವರೂ ದನಿಗೂಡಿಸಿರುವುದರಿಂದ, ಸದ್ಯ ಇದರ ಜವಾಬ್ದಾರಿ ಹೊರಬೇಕಾಗಿರುವುದು ಚುನಾವಣಾ ಆಯೋಗ. ಚುನಾವಣಾ ಆಯೋಗ ದೇಶದ ಮೂಲೆ ಮೂಲೆಗಳಲ್ಲಿ ಚರ್ಚೆಗಳನ್ನು ನಡೆಸಿ, ಜನರ, ತಜ್ಞರ ಅಭಿಪ್ರಾಯ ಸಂಗ್ರಹಿಸಿ, ಮುಂದಡಿ ಇಟ್ಟರೆ ‘ಒಂದು ದೇಶ ಒಂದು ಚುನಾವಣೆ’ ಎಂಬ ಕಲ್ಪನೆಯನ್ನು ನೈಜವಾಗಿಸಬಹುದು. ಇಲ್ಲವಾದಲ್ಲಿ ಪ್ರತಿನಿಧಿಗಳ ಸ್ವ-ಪ್ರತಿಷ್ಠೆಯ ಆಟದಲ್ಲಿ ಸಾಮಾನ್ಯ ಜನರೂ ಹಾಗೂ ಅವರು ನಂಬಿರುವ ಪ್ರಜಾಪ್ರಭುತ್ವವೂ ಪದೆಪದೇ ಸೋಲುತ್ತಿರಬೇಕಾಗುತ್ತದೆ.
ಚಿತ್ರ ಕೃಪೆ – ಒನ್ ಇಂಡಿಯಾ.ಕಾಮ್
As far as my concern, After the assassination of Smt. Indira Gandhi in 1984, Mr. Rajiv Gandhi got 425 seats out of 543. As you mentioned not 404 out of 543.
Naveen Achar avare http://eci.nic.in/eci_main1/ElectionStatistics.aspx
Ee link nalli 1984 volume-I page no. 81 nalli Congress padedaddu 404 seats antide. Adu election commission website….