ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 14, 2017

ಅಂಬೇಡ್ಕರ್ ಅವರ ಮತಪರಿವರ್ತನೆ ಮತ್ತು ಸಮಕಾಲಿನ ಸವಾಲುಗಳು

‍ನಿಲುಮೆ ಮೂಲಕ

– ರಘು.ಎಸ್,ಸಂಶೋಧನಾ ವಿದ್ಯಾರ್ಥಿ,

ಕುವೆಂಪು ವಿಶ್ವವಿದ್ಯಾನಿಲಯ,ಜ್ಞಾನ ಸಹ್ಯಾದ್ರಿ ಶಂಕರಘಟ್ಟ.

ಕೆಲವು ದಿನಗಳ ಹಿಂದೆ ಯಾವುದೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಂಬೇಡ್ಕರ್ ಅವರ ಮೊಮ್ಮೊಗರಾದ ಪ್ರಕಾಶ್ ಯಶವಂತ್ ಅಂಬೇಡ್ಕರ್ ಅವರು ಸಾರ್ವಜನಿಕವಾಗಿ ದಲಿತರೆಲ್ಲರೂ ಮತಾಂತರವಾಗಬೇಕು ಎಂದು ಕರೆ ನೀಡುತ್ತಾರೆ. ಇದು ಕೇವಲ ಅಂಬೇಡ್ಕರ್ ಮೊಮ್ಮೊಗ ಅವರ ಕರೆ ಮಾತ್ರ ಅಲ್ಲ. ಇಂದು ದಲಿತ ಸಮಸ್ಯೆಯ ಕುರಿತು ಮಾತನಾಡುವ ಬಹುತೇಕ ಚಿಂತಕರು ತಮ್ಮ ಭಾಷಣಗಳಲ್ಲಿ ಹಾಗೂ ಬರವಣಿಗೆಗಳಲ್ಲಿ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಇದಕ್ಕೆ ಕಾರಣವೇನು? ಅಥವಾ ದಲಿತರು ಏಕೆ ಹಿಂದೂಧರ್ಮವನ್ನು ಬಿಟ್ಟು ಬೇರೆ ರಿಲಿಜನ್ನುಗಳಿಗೆ ಮತಾಂತರವಾಗಬೇಕು? ಎಂದು ಕೇಳಿದರೆ ಅಂಬೇಡ್ಕರ್ ಅವರ ವಾದದ ಹೊರತಾಗಿ ಯಾವ ಹೊಸ ಅಂಶವನ್ನು ಇವರ ಉತ್ತರದಲ್ಲಿ ಗುರುತಿಸಲು ಸಾಧ್ಯವಾಗುವುದಿಲ್ಲ.

ಅಂದರೆ “ಭಾರತದಲ್ಲಿ ಹಿಂದೂಯಿಸಂನ ಅವಿಭಾಜ್ಯ ಅಂಗವಾಗಿರುವ ಜಾತಿವ್ಯವಸ್ಥೆಯು ಶ್ರೇಣಿಕರಣಗೊಂಡಿದ್ದು, ಈ ಶ್ರೇಣಿಕರಣದಲ್ಲಿ ಬ್ರಾಹ್ಮಣ ಪುರೋಹಿತಶಾಹಿಗಳು ಮೇಲ್ವರ್ಗದವರಾದರೆ ದಲಿತರು ಕೆಳವರ್ಗದವರಾಗಿದ್ದಾರೆ. ಈ ಹಿನ್ನಲೆಯಲ್ಲಿ ಭಾರತದಲ್ಲಿ ಸಾವಿರಾರು ವರ್ಷಗಳಿಂದಲೂ ಬ್ರಾಹ್ಮಣ ಪುರೋಹಿತಶಾಹಿಗಳು ಹಾಗೂ ದಲಿತರ ನಡುವೆ ವರ್ಗ ಸಂಘರ್ಷ ನಡೆಯುತ್ತಿದೆ. ಈ ವರ್ಗ ಸಂಘರ್ಷದಲ್ಲಿ ದಲಿತರು ಬದುಕುಳಿಯಲು ಸಾಧ್ಯವಿಲ್ಲ. ಕಾರಣ ದಲಿತರಿಗೆ ಹಣಬಲವಾಗಲಿ, ಜನಬಲವಾಗಲಿ ಅಥವಾ ಬುದ್ಧಿಬಲವಾಗಲಿ ಇಲ್ಲ. ಈ ಕಾರಣಕ್ಕೆ ದಲಿತರು ಹಿಂದೂಯಿಸಂ ಗೆ ಹೊರತಾದ ಬೇರೊಂದು ರಿಲಿಜನ್ನಿಗೆ ಮತಾಂತರವಾಗದ ಹೊರತು ಹಿಂದೂಗಳ ದಬ್ಬಾಳಿಕೆಯಿಂದ ಮುಕ್ತವಾಗಲು ಸಾಧ್ಯವಿಲ್ಲ”ಎನ್ನುವುದು ಅಂಬೇಡ್ಕರ್ ಅವರ ವಾದ. ಇಂದು ಮತಾಂತರದ ಪರವಾಗಿ ಮಾತನಾಡುವ ಚಿಂತಕರು ಕೂಡ ಅಂಬೇಡ್ಕರ್ ಅವರ ಮೇಲಿನ ವಾದವನ್ನೇ ಪುನರುಚ್ಚರಿಸುವುದು ಕಂಡುಬರುತ್ತದೆ. ಆದರೆ ಅಂಬೇಡ್ಕರ್ ಅವರ ವಾದವನ್ನು ಮುಂದೊತ್ತುತ್ತಿದ್ದೇವೆ ಎನ್ನುವ ಪ್ರಸ್ತುತ ಚಿಂತಕರು ತಮಗೆ ಅರಿವಿಲ್ಲದೇ ಅಂಬೇಡ್ಕರ್ ಅವರಿಗೆ ವಿರುದ್ಧವಾಗಿ ನಿಲ್ಲುತ್ತಾರೆ. ಪ್ರಸ್ತುತ ಲೇಖನದಲ್ಲಿ ಇದನ್ನು ಪರಿಶೀಲಿಸಲಾಗುವುದು.

ಭಾರತದಲ್ಲಿ ಹಿಂದೂಯಿಸಂ ಹಾಗೂ ಜಾತಿವ್ಯವಸ್ಥೆಯ ಕಾರಣದಿಂದಾಗಿ ದಲಿತರು ಅನೇಕ ರೀತಿಯ ಸಮಸ್ಯೆಗಳಿಗೆ ಒಳಗಾಗಿದ್ದಾರೆ ಎಂದು ಹೇಳುವ ಅಂಬೇಡ್ಕರ್ ಅವರು, ಹಿಂದೂಯಿಸಂ ಅನ್ನು ತೊರೆಯುವುದೇ ದಲಿತರ ಸಮಸ್ಯೆ ನಿವಾರಣೆಯಾಗಲು ಸೂಕ್ತ ಪರಿಹಾರ ಎಂದು ಹೇಳುತ್ತಾರೆ ಎನ್ನುವುದೇನೋ ನಿಜ. ಆದರೆ ಈ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಪೂರ್ವಭಾವಿಯಾಗಿ ಸಾಕಷ್ಟು ಅಧ್ಯಯನವನ್ನು ನಡೆಸುರುತ್ತಾರೆ. 1935ರಲ್ಲಿ “ಹಿಂದೂವಾಗಿ ಹುಟ್ಟಿದ್ದೇನೆ ಆದರೆ ಹಿಂದೂವಾಗಿ ಸಾಯಲಾರೆ”ಎಂದು ಹೇಳುವ ಅಂಬೇಡ್ಕರ್ ಅವರು ಅಂತಿಮವಾಗಿ 1956ರಲ್ಲಿ ತಮ್ಮ ಲಕ್ಷಾಂತರ ಅನುಯಾಯಿಗಳ ಜೊತೆ ಬೌದ್ಧ ಧರ್ಮವನ್ನು ಸ್ವೀಕರಿಸುತ್ತಾರೆ. ಬೌದ್ಧ ಧರ್ಮವನ್ನೇ ಏಕೆ ಸ್ವೀಕರಿಸಿದರು? ಬಹುಶಃ ಮತಾಂತರದ ಪರವಾಗಿ ಮಾತನಾಡುವ ಪ್ರಸ್ತುತ ಚಿಂತಕರಿಗೆ ಈ ಪ್ರಶ್ನೆ ಹೊಳೆದಿರಲಿಕ್ಕಿಲ್ಲ. ಆದರೆ ಅಂಬೇಡ್ಕರ್ ಅವರ ಬರವಣಿಗೆಗಳ ಕಡೆ ಕಣ್ಣು ಹಾಯಿಸಿದರೆ ಇದಕ್ಕೆ ಸ್ಪಷ್ಟವಾದ ಉತ್ತರ ಸಿಗುತ್ತದೆ. ಅಂದರೆ ದಲಿತರ ಸಮಸ್ಯೆಗೆ ಮತಾಂತರವೇ ಅಂತಿಮ ಪರಿಹಾರ ಎಂದು ಹೇಳುವ ಅಂಬೇಡ್ಕರ್ ಅವರು ಯಾವ ಮತಕ್ಕೆ ಹೋದರೆ ದಲಿತರ ಸಮಸ್ಯೆ ಬಗೆಹರಿಯಲು ಸಾಧ್ಯ ಎನ್ನುವುದರ ಕುರಿತೂ ಚಿಂತನೆ ನಡೆಸುತ್ತಾರೆ.

ಮೊದಲನೆಯದಾಗಿ, ಕ್ರಿಶ್ಚಿಯನ್ ರಿಲಿಜನ್ನಿಗೆ ಮತಾಂತರಗೊಳ್ಳುವುದರಿಂದ ದಲಿತರ ಸಮಸ್ಯೆ ನಿವಾರಣೆಯಾಗುತ್ತದೆಯೇ ಎನ್ನುವ ಪ್ರಶ್ನೆಯನ್ನು ಕೈಗೆತ್ತಿಕೊಳ್ಳುವ ಅಂಬೇಡ್ಕರ್ ಅವರಿಗೆ ನಕಾರಾತ್ಮಕ ಉತ್ತರವು ದೊರೆಯುತ್ತದೆ. ಅಂದರೆ ಕ್ರಿಶ್ಚಿಯಾನಿಟಿಯು ಭಾರತದಲ್ಲಿ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ್ದರೂ ಕೂಡ ಮತಾಂತರಗೊಂಡ ದಲಿತರ ವಾಸ್ತವ ಪರಿಸ್ಥಿತಿಯನ್ನು ಬದಲಾಯಿಸಲು ವಿಫಲವಾಗಿದೆ. ದಲಿತರು ಮತಾಂತರ ಪೂರ್ವದಲ್ಲಿ ಯಾವ ಯಾವ ಸಮಸ್ಯೆಗಳನ್ನು ಎದುರಿಸುತ್ತಿದ್ದರೋ ಅವೇ ಸಮಸ್ಯೆಗಳು ಮತಾಂತರದ ನಂತರವು ಕೂಡ ಮುಂದುವರೆದುಕೊಂಡು ಬರುತ್ತಿವೆ. ಅಲ್ಲಿಯೂ ಕೂಡ ಅವರನ್ನು ಮಾಹರ್ ಕ್ರೈಸ್ತರು, ಮಾಂಗ ಕ್ರೈಸ್ತರು ಹಾಗೂ ಭಂಗಿ ಕ್ರೈಸ್ತರು ಎಂದು ತಮ್ಮ ಹಿಂದಿನ ಜಾತಿಯನ್ನು ಹಿಡಿದೇ ಕರೆಯಲಾಗುತ್ತಿದೆ. ಹಿಂದೂಧರ್ಮದಲ್ಲಿ ಮೇಲ್ಜಾತಿಯವರು ಹೇಗೆ ದಲಿತರೊಂದಿಗೆ ಮದುವೆ ಸಂಬಂಧವನ್ನು ಬೆಳೆಸುತ್ತಿರಲಿಲ್ಲವೋ ಅದೇ ರೀತಿ ಕ್ರಿಶ್ಚಿಯನ್ ಜಾತಿವಾದಿಗಳು ಮತಾಂತರಗೊಂಡ ದಲಿತರೊಂದಿಗೆ ಸಂಬಂಧ ಬೆಳೆಸುವುದಿಲ್ಲ. ಚರ್ಚ್‍ಗಳಲ್ಲಿಯೂ ಕೂಡ ಮತಾಂತರಗೊಂಡವರಿಗೆಂದೇ ಪ್ರತ್ಯೇಕವಾದ ಆಸನನದ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕೆ ಕಾರಣವೇನು? ಕ್ರೈಸ್ತರು ದಲಿತರನ್ನು ಮತಾಂತರ ಮಾಡಲು ತೋರಿಸುವ ಉತ್ಸಾಹವನ್ನು ಮತಾಂತರಗೊಂಡ ನಂತರ ದಲಿತರ ಸಾಮಾಜಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಲು ತೋರಿಸುವುದಿಲ್ಲ”(ಬಿ.ಆರ್.ಅಂಬೇಡ್ಕರ್, 2015: 464) ಎನ್ನುವುದು ಅಂಬೇಡ್ಕರ್ ಅವರ ಸ್ಪಷ್ಟ ಉತ್ತರ.

ಇನ್ನೂ ಇಸ್ಲಾಂನ ವಿಷಯಕ್ಕೆ ಬಂದರೆ “ಅಲ್ಲಿಯೂ ಕೂಡ ಹಿಂದೂ ಧರ್ಮದಂತೆ ಜಾತಿ ಪದ್ಧತಿಯನ್ನು ಗುರುತಿಸಬಹುದು. ಹಿಂದೂ ಧರ್ಮದಿಂದ ಮತಾಂತರಗೊಂಡ ದಲಿತರನ್ನು ಅಜ್ ಲಾಫ್ ಅಥವಾ ದರಿದ್ರರು ಅಥವಾ ಕೀಳು ಜನ ಎಂದು ಪರಿಗಣಿಸುತ್ತಾರೆ. ಅವರೊಂದಿಗೆ ಯಾವ ಮಹಮದೀಯರು ಬೆರೆಯುವುದಿಲ್ಲ. ಮದುವೆ ಸಂಬಂಧ ಮಾಡುವುದಿಲ್ಲ. ಸಾರ್ವಜನಿಕ ಸ್ಮಶಾನ ಬಳಕೆಯನ್ನು ಅವರಿಗೆ ನಿಷೇಧಿಸಲಾಗುತ್ತದೆ. ಮುಸಲ್ಮಾನರು ಜಾತ್ಯಾಂದರು ಮಾತ್ರವಲ್ಲ ಅಸ್ಪೃಶ್ಯತೆಯನ್ನು ಆಚರಣೆಯಲ್ಲಿಟ್ಟುಕೊಂಡಿದ್ದಾರೆ. ಹೀಗೆ ಭಾರತದಲ್ಲಿ ಹಿಂದೂಧರ್ಮದಲ್ಲಿನ ಜಾತಿ ಪದ್ಧತಿಗೂ ಹಾಗೂ ಇಸ್ಲಾಂನಲ್ಲಿರುವ ಜಾತಿಪದ್ಧತಿಗೂ ಅಂತಹ ಯಾವ ವ್ಯತ್ಯಾಸವಿಲ್ಲ. ಹಾಗೆ ನೋಡಿದರೆ ಹಿಂದೂಧರ್ಮಕ್ಕಿಂತ ಹೆಚ್ಚಾಗಿ ಇಸ್ಲಾಂನಲ್ಲಿಯೇ ಪರ್ದಾ ಪದ್ಧತಿಗಳಂತಹ ಸಾಮಾಜಿಕ ಪಿಡುಗುಗಳಿವೆ ಹಾಗೂ ಇಂಥ ಪಿಡುಗುಗಳನ್ನು ಮುಸಲ್ಮಾನರು ಎಂದಿಗೂ ತೊಡೆದುಹಾಕಲು ಪ್ರಯತ್ನಿಸದಿರುವುದು ವಿಷಾದದ ಸಂಗತಿ. ಈ ಹಿನ್ನಲೆಯಲ್ಲಿ ನೋಡಿದರೆ ಇಸ್ಲಾಂಗಿಂತ ಹಿಂದೂಧರ್ಮವೇ ಉತ್ತಮ ಎನ್ನಬಹುದು. ಏಕೆಂದರೆ ಹಿಂದೂಧರ್ಮದಲ್ಲಿ ಕೆಲವರಾದರೂ ಇಲ್ಲಿನ ಅನಿಷ್ಟ ಪದ್ಧತಿಯನ್ನು ವಿರೋಧಿಸಿರುವ ಉದಾಹರಣೆಗಳಿವೆ”ಎನ್ನುವುದು ಅಂಬೇಡ್ಕರ್ ಅವರ ವಾದ (ಬಿ.ಆರ್.ಅಂಬೇಡ್ಕರ್, 2015: 585). ದಲಿತರು ಯಾವ ಮತಕ್ಕೆ ಹೋದರೆ ಸಮಸ್ಯೆಯಿಂದ ಮುಕ್ತವಾಗಲು ಸಾಧ್ಯ?

“ಜಗತ್ತಿನಲ್ಲಿರುವ ಎಲ್ಲಾ ಧರ್ಮಗಳಿಗೆ ಹೊಲಿಸಿದರೆ ಬೌದ್ಧ ಧರ್ಮ ಮಾತ್ರ ಸ್ವಾರ್ಥ ರಹಿತವಾದ ಧರ್ಮವಾಗಿದೆ. ಉದಾಹರಣೆಗೆ, ಜೀಸಸ್ ತಾನು ದೇವರ ಮಗನೆಂದು ಹಾಗೂ ತನ್ನನ್ನು ಹಾಗೇ ನಂಬದವರು ದೇವರ ರಾಜ್ಯವನ್ನು ಪ್ರವೇಶಿಸಲು ಸಾಧ್ಯವಿಲ್ಲ ಎನ್ನುತ್ತಾನೆ. ಜೀಸಸ್ ಗಿಂತ ಒಂದು ಹೆಜ್ಜೆ ಮುಂದೆ ಹೋಗುವ ಮಹಮ್ಮದ್ದನು ತಾನು ದೇವರ ಮಗ ಆಷ್ಟೇ ಅಲ್ಲ, ನಾನೇ ಕೊನೆಯ ದೇವದೂತ ಎಂದು ಸಾರಿಕೊಳ್ಳುತ್ತಾನೆ. ಇನ್ನು ಕೃಷ್ಣನ ವಿಷಯಕ್ಕೆ ಬಂದರೆ ಕೃಷ್ಣನು ನಾನೇ ದೇವರೆಂದು ಹೇಳಿಕೊಳ್ಳುತ್ತಾನೆ. ಈ ಮೂವರು ತಾವು ಹೇಳುವುದೇ ಅಂತಿಮ ಹಾಗೂ ಅದನ್ನು ಜನರು ನಂಬಲೇ ಬೇಕು ಎನ್ನುತ್ತಾನೆ. ಆದರೆ ಬುದ್ಧನು ಕೇವಲ ಮಾರ್ಗದಾತನಾಗಿದ್ದಾನೆ. ತನ್ನ ಭೋದನೆಗಳನ್ನು ತನ್ನ ಅನುಯಾಯಿಗಳಿಗೆ ಸನ್ನಿವೇಶಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವ ಸ್ವತಂತ್ರ ನೀಡಿದ್ದಾನೆ. ಹಿಂದೂಧರ್ಮದಲ್ಲಿ ಶೂದ್ರರಾಗಲೀ. ಸ್ತ್ರೀಯರಾಗಲೀ ಧರ್ಮೋಪದೇಶಕರಾಗುವ, ಸನ್ಯಾಸವನ್ನು ಸ್ವೀಕರಿಸುವ ಮತ್ತು ತನ್ಮೂಲಕ ದೇವರನ್ನು ಪಡೆಯುವ ಅವಕಾಶವಿರಲಿಲ್ಲ. ಆದರೆ ಬುದ್ಧನು ತನ್ನ ಬಿಕ್ಕುಗಳ ಸಂಘಕ್ಕೆ ಶೂದ್ರರು, ಸ್ತ್ರೀಯರನ್ನು ಬಿಕ್ಕುಗಳನ್ನಾಗಿ ಸೇರಿಸಿಕೊಂಡು ಆ ಮೂಲಕ ವರ್ಣಾಶ್ರಮ ಪದ್ಧತಿಯ ವಿರೋಧಿಸಿ ಸಮಾನತೆಯ ತತ್ವವನ್ನು ಭೋದಿಸುತ್ತಾನೆ. ಬೌದ್ಧ ಧರ್ಮದಲ್ಲಿ ದೇವರ ಕಲ್ಪನೆಯಿಲ್ಲ. ಇಲ್ಲಿ ದೇವರ ಸ್ಥಾನದಲ್ಲಿ ನೈತಿಕತೆ ಇದೆ. ಯಾವುದೇ ಧರ್ಮವಾದರೂ ಕೂಡ ನೈತಿಕ ಅಥವಾ ವೈಚಾರಿಕ ತಳಹದಿಯ ಮೇಲೆ ನಿಂತಿರಬೇಕು. ಆ ಧರ್ಮವು ಸ್ವತಂತ್ರ ಸಮಾನತೆ ಹಾಗೂ ಸೋದರತೆಯ ಗುಣಗಳನ್ನು ಹೊಂದಿರಬೇಕು. ಬಡತನವನ್ನು ಉನ್ನತೀಕರಿಸುವ ಮೌಲ್ಯಗಳನ್ನು ಹೊಂದಿರಬಾರದು. ಒಂದೊಮ್ಮೆ ಯಾವುದೇ ಧರ್ಮವು ಬಡತನವನ್ನು ಅಗತ್ಯವಾದ ದಿವ್ಯಸ್ಥಿತಿ ಎಂದು ಭೋದಿಸುವುದಾದರೆ ಅದು ಕ್ರೌರ್ಯ ಮತ್ತು ಅಪರಾಧಗಳನ್ನು ಅಮರವನ್ನಾಗಿಸುತ್ತದೆ ಮತ್ತು ಭೂಮಿಯನ್ನು ನರಕವನ್ನಾಗಿಸುತ್ತದೆ. ಹೀಗೆ ಮೇಲಿನ ಎಲ್ಲಾ ಗುಣಗಳನ್ನು ಅವಲೋಕಿಸಿದಾಗ ಬೌದ್ಧ ಧರ್ಮ ಮಾತ್ರ ವಿಶ್ವವು ಸ್ವೀಕರಿಸಲು ಆರ್ಹವಾದ ಏಕೈಕ ಧರ್ಮ ಎಂದು ಸಂಶಯಾತೀತವಾಗಿ ಒಪ್ಪಿಕೊಳ್ಳಬಹುದು” (ಬಿ.ಆರ್.ಅಂಬೇಡ್ಕರ್, 2015: 491) ಎನ್ನುವುದು ಅಂಬೇಡ್ಕರ್ ಅವರ ವಾದ. ಬೌದ್ಧಮತ ಸ್ವೀಕರಿಸಿರುವ ದಲಿತರ ವಾಸ್ತವದಲ್ಲಿ ಬದಲಾವಣೆಯಾಗಿದೆಯಾ?

ನವಬೌದ್ಧರ ಕುರಿತ ಇತ್ತೀಚಿನ ವಾದಗಳನ್ನು ಪರಿಶೀಲಿಸಿದಲ್ಲಿ ಮೇಲಿನ ಪ್ರಶ್ನೆಗೆ ನಕಾರತ್ಮಕವಾಗಿ ಉತ್ತರಿಸದೇ ವಿಧಿಯಿಲ್ಲ. ಅಂದರೆ . ಇತ್ತೀಚಿನ ದಿನಗಳಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ದಲಿತರ ವಾಸ್ತವ ಸ್ಥಿತಿಯಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ಹಾಗೂ ಮೇಲ್ಜಾತಿಯ ದಬ್ಬಾಳಿಕೆಯಿಂದ ಬಿಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಬೌದ್ಧ ಧರ್ಮದಲ್ಲಿಯೂ ಕೂಡ ದಲಿತ ಬೌದ್ಧರು ಎನ್ನುವ ಪಂಗಡವನ್ನು ಮಾಡಿ ಮತಾಂತರಗೊಂಡ ದಲಿತರನ್ನು ಪ್ರತ್ಯೇಕವಾಗಿಡಲಾಗುತ್ತಿದೆ. ಬೌದ್ಧಧರ್ಮವು ಕೂಡ ಹಿಂದೂಧರ್ಮದ ಪುರೋಹಿತಶಾಹಿ ವಿನ್ಯಾಸಗಳನ್ನು ತನ್ನಲ್ಲಿ ಅಳವಡಿಸಿಕೊಂಡಿದೆ (Yoginder Sikand, 2004: 75) ಎಂದು ವಾದಿಸಲಾಗುತ್ತಿದೆ.

ಎಲ್ಲಾ ಧರ್ಮಗಳ ಕುರಿತು ಅಧ್ಯಯನ ಮಾಡುವ ಅಂಬೇಡ್ಕರ್ ಅವರು ಬೌದ್ಧಧರ್ಮಕ್ಕೆ ಹೊರತಾದ ಧರ್ಮಗಳೆಲ್ಲವೂ ಕೂಡ ಸ್ವಾರ್ಥಸಾಧನೆಯ ಗುಣಗಳನ್ನು ಹೊಂದಿವೆ. ಈ ನಿಟ್ಟಿನಲ್ಲಿ ನೋಡಿದರೆ ಬೌದ್ಧ ಧರ್ಮವೊಂದೆ ದಲಿತ ಸಮಸ್ಯೆಯನ್ನು ನಿವಾರಿಸುವ ಏಕೈಕ ಮಾರ್ಗ ಎಂಬ ಅಂಶವನ್ನು ಕಂಡುಕೊಳ್ಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ದಲಿತರ ವಾಸ್ತವವು ಮೂಲ ದಲಿತರಿಗಿಂತ ಭಿನ್ನವಾಗಿಲ್ಲ ಎನ್ನುವುದನ್ನು ಹಲವರು ಸ್ಪಷ್ಟಪಡಿಸುತ್ತಾರೆ. ಒಂದೊಮ್ಮೆ ಅಂಬೇಡ್ಕರ್ ಅವರು ತಮ್ಮ ಅಧ್ಯಯನದಲ್ಲಿ ಬೌದ್ಧ ಧರ್ಮದಿಂದಲೂ ದಲಿತ ಸಮಸ್ಯೆ ನಿವಾರಣೆಯಾಗಲು ಸಾಧ್ಯವಿಲ್ಲ ಎನ್ನುವ ಅಂಶವನ್ನು ಕಂಡುಕೊಂಡಿದ್ದೇ ಆದರೆ ಮತಾಂತರವನ್ನು ದಲಿತ ಸಮಸ್ಯೆ ನಿವಾರಣೆಗೆ ಇರುವ ಮಾರ್ಗ ಎಂದು ಪರಿಗಣಿಸುತ್ತಿರಲಿಲ್ಲ ಎಂದು ಊಹಿಸಬಹುದು. ಅಂದರೆ ಯಾವ ಧರ್ಮವು ದಲಿತ ಸಮಸ್ಯೆಯ ನಿವಾರಿಸಲು ಸಮರ್ಥವಾಗಿದೆ ಎಂಬ ಶೋಧನೆಯಲ್ಲಿ ತೊಡಗುವ ಅಂಬೇಡ್ಕರ್ ಅವರು ದಲಿತ ಸಮಸ್ಯೆಯನ್ನು ಹೋಗಲಾಡಿಸಲು ಸಾಧ್ಯವಿಲ್ಲ ಎಂದು ಕಂಡುಬಂದ ಧರ್ಮವನ್ನು ಯಾವುದೇ ಮುಲಾಜಿಲ್ಲದೇ ತಿರಸ್ಕರಿಸುತ್ತಾರೆ. ಒಂದೊಮ್ಮೆ ಬೌದ್ಧ ಧರ್ಮದಿಂದಲೂ ಕೂಡ ದಲಿತರಿಗೆ ಯಾವುದೇ ಪ್ರಯೋಜನವಿಲ್ಲ ಎನ್ನುವುದನ್ನು ಕಂಡುಕೊಂಡಿದ್ದೇ ಆಗಿದ್ದರೆ ಖಂಡಿತವಾಗಿಯೂ ಅವರು ಮತಾಂತರವನ್ನು ದಲಿತ ಸಮಸ್ಯೆಯ ನಿವಾರಣೆಗೆ ಇರುವ ಅಂತಿಮ ಮಾರ್ಗ ಎಂಬ ನಿರ್ಣಯಕ್ಕೆ ಬರದೇ ದಲಿತರ ಸಮಸ್ಯೆಯನ್ನು ನಿವಾರಿಸಲು ಇರುವ ಪರ್ಯಾಯ ಮಾರ್ಗದ ಕುರಿತು ಚಿಂತಿಸುತ್ತಿದ್ದರು ಎನ್ನುವುದನ್ನು ಯಾರಾದರೂ ಊಹಿಸಬಹುದು.

ಆದರೆ ಇತ್ತೀಚಿಗೆ ಮತಾಂತರದ ಪರವಾಗಿ ಮಾತನಾಡುವ ಚಿಂತಕರು ಹೇಳುವುದೇನು? ಕ್ರಿಶ್ಚಿಯಾನಿಟಿ, ಇಸ್ಲಾಂ ಹಾಗೂ ಬೌದ್ಧ ಧರ್ಮಗಳಿಂದ ದಲಿತರ ಸಮಸ್ಯೆಗಳನ್ನು ಹೋಗಲಾಡಿಸಲು ಸಾಧ್ಯವಿಲ್ಲ ಎನ್ನುವ ವಾಸ್ತವವು ನಮ್ಮ ಕಣ್ಣೆದುರಿಗಿದೆ. ಆದರೆ ಚಿಂತಕರು ಇಂದಿಗೂ ಮತಾಂತರವೇ ದಲಿತ ಸಮಸ್ಯೆಯ ನಿವಾರಣೆಗೆ ಇರುವ ಅತ್ಯುತ್ತಮ ಪರಿಹಾರ ಎಂದು ವಾದಿಸುತ್ತಾರೆ. ತಾವು ಹೋದಲ್ಲೆಲ್ಲ ಇದನ್ನೇ ಸಾರುತ್ತಾರೆ. ವಿಪರ್ಯಾಸವೆಂದರೆ ತಾವು ಅಂಬೇಡ್ಕರ್ ವಾದವನ್ನು ಮುಂದೊತ್ತುವವರು ಎಂದು ಹೇಳಿಕೊಳ್ಳುವ ಪ್ರಸ್ತುತ ಚಿಂತಕರು ಕನಿಷ್ಟ ಪಕ್ಷ ಕ್ರಿಶ್ಚಿಯಾನಿಟಿ ಹಾಗೂ ಇಸ್ಲಾಂ ಧರ್ಮಗಳಿಂದ ದಲಿತ ಸಮಸ್ಯೆ ನಿವಾರಣೆ ಸಾಧ್ಯವಿಲ್ಲ ಎನ್ನುವ ಅಂಬೇಡ್ಕರ್ ಅವರ ವಾದವನ್ನು ಮುಂದೊತ್ತುವ ಬದಲಾಗಿ ಇಂದಿಗೂ ಕ್ರಿಶ್ಚಿಯಾನಿಟಿ ಹಾಗೂ ಇಸ್ಲಾಂ ಧರ್ಮಗಳು ದಲಿತರಿಗೆ ಪುನರುಜ್ಜೀವನ ನೀಡುತ್ತವೆ ಎಂದು ಸಾರುತ್ತಾರೆ. ಒಂದೊಮ್ಮೆ ಚಿಂತಕರು ಹೇಳುವಂತೆ ಮತಾಂತರದಿಂತ ಅಸ್ಪೃಶ್ಯತೆ ನಿವಾರಣೆಯಾಗಿದೆ ಎನ್ನುವುದಾದರೆ ಅದನ್ನು ಅಂಕಿಅಂಶಗಳ ಮೂಲಕ ಸಾಭೀತು ಮಾಡಬೇಕಾಗುತ್ತದೆ. ಹೀಗೆ ಮಾಡಿದ್ದೇ ಆದಲ್ಲಿ ದಲಿತರಿಗೆ ತಮ್ಮ ಸಮಸ್ಯೆಯನ್ನು ನಿವಾರಿಸಿಕೊಳ್ಳುವ ಒಂದು ದಾರಿ ಇದೆ ಎನ್ನುವ ಆಶಾಕಿರಣವೂ ಮೂಡುತ್ತದೆ. ಆದರೆ ಕೇವಲ ಹಿಂದೂಧರ್ಮವನ್ನು ಅಥವಾ ಯಾವುದೋ ಜಾತಿಯನ್ನು ವಿರೋಧಿಸಲು ಮಾತ್ರ ಮತಾಂತರವಾಗಬೇಕು ಎಂದು ಹೇಳುವುದು ದಲಿತರಿಗೆ ಮಾಡುವ ಅನ್ಯಾಯವಾಗುತ್ತದೆ.  ಹೀಗೆ ಮೇಲಿನ ಎಲ್ಲಾ ಅಂಶಗಳನ್ನು ಹಿನ್ನಲೆಯಾಗಿಟ್ಟುಕೊಂಡು ನೋಡಿದರೆ ದಲಿತ ಸಮಸ್ಯೆಯನ್ನು ನಿವಾರಿಸಬೇಕೆನ್ನುವ ಅಂಬೇಡ್ಕರ್ ಅವರ ಕಾಳಜಿ ಪ್ರಸ್ತುತ ಚಿಂತಕರಿಗೆ ಇಲ್ಲ ಎಂದು ಹೇಳಬೇಕಾಗುತ್ತದೆ. ಹಾಗಾಗಿ ಅಂಬೇಡ್ಕರ್‍ರ ನಿಜವಾದ ಕಾಳಜಿಗೆ ಪೂರಕವಾಗಿ ಅವರ ವಿಚಾರಗಳನ್ನು ಮುಂದೊತ್ತುವುದು; ಮಿತಿಗಳಿದ್ದರೆ ಸರಿಪಡಿಸುವುದು ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಲಿದೆ.

ಆಧಾರ ಗ್ರಂಥಗಳು:-

  • ಅಂಬೇಡ್ಕರ್.ಬಿ.ಆರ್. 2015. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳು ಸಂಪುಟ-4. ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
  • ಅಂಬೇಡ್ಕರ್.ಬಿ.ಆರ್. 2015. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳು ಸಂಪುಟ-6. ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
  • ಅಂಬೇಡ್ಕರ್.ಬಿ.ಆರ್. 2015. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳು ಸಂಪುಟ-11. ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
  • ಅಂಬೇಡ್ಕರ್.ಬಿ.ಆರ್. 2015. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳು ಸಂಪುಟ-17. ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
  • ಮುನಿವೆಂಕಟಪ್ಪ.ವಿ. 2000. ಮತಾಂತರ ಮತ್ತು ಇತರ ಲೇಖನಗಳು. ಮೈಸೂರು: ವಿಚಾರವಾದಿ ಪ್ರಕಾಶನ.
  • ಗಣೇಶ್ ಮೊಗಳ್ಳಿ, 2006, ದಲಿತ ಕಥನ, ಹಂಪಿ: ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ.
  • Sikand Yoginder. 2004. Islam, Cast and Dalit-Muslim Relations in India. Delhi: Global Media Publications.

 

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments