ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 27, 2017

ಜನರಕ್ಷಾಯಾತ್ರೆ : ಕಮ್ಯುನಿಸ್ಟ್ ರಕ್ತಚರಿತ್ರೆಯ ಅಂತ್ಯದ ಆರಂಭ

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

True Strength is in the Soul and Spirit. Not in Muscles ಅಂತೊಂದು ಮಾತಿದೆ. ಕೇರಳದ ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಮತ್ತು ಸಂಘಟನೆಗೆ ಅನ್ವಯವಾಗುವ ಮಾತಿದು. ಕಮ್ಯುನಿಸ್ಟರ 48 ವರ್ಷಗಳ ನಿರಂತರ ರಕ್ತಪಾತ,300ಕ್ಕೂ ಹೆಚ್ಚು ಸ್ವಯಂ ಸೇವಕರ ಹತ್ಯೆಗಳು,ಮಾರಣಾಂತಿಕ ಹಲ್ಲೆಗಳ ನಂತರವೂ, ಪ್ರಸ್ತುತ ನಡೆಯುತ್ತಿರುವ ಜನರಕ್ಷಾಯಾತ್ರೆಯಲ್ಲಿ ಸಾವಿರಾರು ಜನರು ಸ್ವಯಂ ಸ್ಫೂರ್ತಿ, ಮತ್ತು ಧೈರ್ಯದಿಂದ ಪಾಲ್ಗೊಳ್ಳುವುದನ್ನು ನೋಡಿದರೆ, ಕೇರಳದ ಜನತೆ, ಅನ್ಯಾಯ,ಹಿಂಸಾಚಾರವನ್ನು ಪ್ರತಿಪಾದಿಸುವ ಸರ್ವಾಧಿಕಾರಿ ಕಮ್ಯುನಿಸ್ಟ್ ಪಕ್ಷದ ಆಡಳಿತ ಕೊನೆಯಾಗಲೇಬೇಕೆಂದು ಆಶಿಸುತ್ತಿರುವ ಸ್ಪಷ್ಟ ಸಂದೇಶದಂತಿದೆ.

ಅಕ್ಟೊಬರ್ 3ಕ್ಕೆ ಪಯ್ಯನೂರಿನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರಿಂದ ಆರಂಭವಾಗಿ, 15 ದಿನಗಳ ಕಾಲ ಕೇರಳಾದಾದ್ಯಂತ ಸಂಚರಿಸಿ, ಅಕ್ಟೊಬರ್ 17ಕ್ಕೆ ಅಮಿತ್ ಷಾ ಅವರಿಂದಲೇ ತಿರುವನಂತಪುರಂನಲ್ಲಿ ಯಾತ್ರೆ ಕೊನೆಗೊಂಡಿದೆ.ಯಾತ್ರೆ ಆರಂಭವಾದ ದಿನ ಕಮ್ಯುನಿಸ್ಟರ ರಾಜಕೀಯ ಹಿಂಸಾಚಾರದ ಮೂಲಸ್ಥಾನ (ಕೇರಳದ ಇಂದಿನ ಮುಖ್ಯಮಂತ್ರಿಯ ತವರು) ಕಣ್ಣೂರಿನ 84 ಬಲಿದಾನಿಗಳ ಕುಟುಂಬದವರು ಪಾಲ್ಗೊಳ್ಳುವ ಮೂಲಕ ಶುರುವಾದ ಯಾತ್ರೆ, ಕಣ್ಣೂರು ಅದರಲ್ಲೂ ಮುಖ್ಯವಾಗಿ ಪಿಣರಾಯಿಯಂತಹ ಕಮ್ಯುನಿಸ್ಟ್ ನಟೋರಿಯಸ್ ಪಾರ್ಟಿ ವಿಲೇಜುಗಳನ್ನು ಹಾದು ಹೋಗಿದೆ. ಮುಖ್ಯಮಂತ್ರಿಯ ಪಿಣರಾಯಿಯನ್ನೇಕೆ ನಟೋರಿಯಸ್ ಎನ್ನುತ್ತಿದ್ದೇನೆ ಎಂದು ತಿಳಿದುಕೊಳ್ಳಬೇಕೆಂದರೆ ಕಮ್ಯುನಿಸ್ಟ್ ಪಾರ್ಟಿ ವಿಲೇಜುಗಳ ಬಗ್ಗೆ ತಿಳಿದುಕೊಳ್ಳಬೇಕು.

ಈ ಪಾರ್ಟಿ ವಿಲೇಜುಗಳಲ್ಲಿ ಕಮ್ಯುನಿಸ್ಟ್ ಪಕ್ಷದ ಅಣತಿಯಿಲ್ಲದೆ ಏನೊಂದು ನಡೆಯುವಂತಿಲ್ಲ. ಏನೊಂದು ಎಂದರೆ ಅದು ಆ ಗ್ರಾಮದ ರೇಷನ್ ಕಾರ್ಡಿನಿಂದ ಹಿಡಿದು ಮದುವೆಯವರೆಗೂ ಸಾಗುತ್ತದೆ. ಕಮ್ಯುನಿಸ್ಟ್ ವಿಲೇಜಿನ ಮನೆಯಿಂದ ನೀವು ಬೇರೊಂದು ಪಕ್ಷದ ಮನೆಗೆ (ಅದರಲ್ಲೂ ಮುಖ್ಯವಾಗಿ ಆರೆಸ್ಸೆಸ್) ಮದುವೆ ಮಾಡಿಕೊಡುವುದು ಕಷ್ಟವೇ. ಒಂದು ವೇಳೆ ಆರೆಸ್ಸಿಗನೊಬ್ಬ ತನ್ನ ಮಗಳನ್ನು ಯಾವುದೋ ಕಮ್ಯುನಿಸ್ಟ್ ವಿಲೇಜಿನವರೊಬ್ಬರಿಗೆ ಮದುವೆ ಮಾಡಿಕೊಟ್ಟರು ಆತ ಆ ಗ್ರಾಮಕ್ಕೆ ಕಾಲಿಡುವಂತಿಲ್ಲ. ಗ್ರಾಮದ ಆರಂಭದಲ್ಲೇ ಇದು ಕಮ್ಯುನಿಸ್ಟ್ ಗ್ರಾಮ, ಇಲ್ಲಿ ಆರೆಸ್ಸಸಿಗರಿಗೆ ಪ್ರವೇಶವಿಲ್ಲವೆಂದು ಬೋರ್ಡುಗಳನ್ನು ನೋಡಬಹುದು. ಆ ಗ್ರಾಮದಲ್ಲಿ ಕಮ್ಯುನಿಸ್ಟ್ ಪಕ್ಷದ ಚಟುವಟಿಕೆ ಬಿಟ್ಟು ಬೇರೆ ಇನ್ಯಾವುದೇ ಪಕ್ಷದ,ಸಂಘಟನೆಯ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿರುತ್ತದೆ.ಹಾಗೊಮ್ಮೆ ಯಾರಾದರೂ ಅವರನ್ನು ಧಿಕ್ಕರಿಸಿ ನಿಂತವರ ಹೆಣ ಉರುಳಿಸುತ್ತಾರೆ ಅಥವಾ ಕೈ-ಕಾಲು ಕತ್ತರಿಸುತ್ತಾರೆ.

ಹದಿನೇಳು ವರ್ಷಗಳ ಹಿಂದೆ ರಿಜೇಶ್ ಎಂಬ ಸ್ವಯಂ ಸೇವಕ ಪಿಣರಾಯಿಯಲ್ಲಿ ಆರೆಸ್ಸೆಸ್ ಶಾಖೆ ಶುರು ಮಾಡಿದ ತಪ್ಪಿಗೆ ಸಂಘದ ಸ್ಥಾನದಲ್ಲೇ ಅವರ ಮೇಲೆ ಮಾರಣಾಂತಿಕ ಹಲ್ಲೆಯಾಯಿತು,ಅವರ ಎರಡೂ ಕೈಗಳು ಸ್ವಾಧೀನವಿಲ್ಲದಂತೆ ಮಾಡಿದರು ಕ್ರೂರಿ ಕಮ್ಯುನಿಸ್ಟರು. ಪ್ರಾಣ ಉಳಿಸಿದ್ದೇವೆ ಊರು ಬಿಡು ಎಂದು ಅವರನ್ನು ಊರು ಬಿಡಿಸಿದ್ದರು,ಇಂದಿಗೂ ರಿಜೇಶ್ ಪಿಣರಾಯಿಗೆ ಹಿಂತಿರುಗಿಲ್ಲ .ಅಂದ ಹಾಗೆ ಈ ರಿಜೇಶ್ ಮನೆಯಿದ್ದಿದ್ದು ಈಗ ಮುಖ್ಯಮಂತ್ರಿಯಾಗಿರುವ ಪಿಣರಾಯಿ ವಿಜಯನ್ ಮನೆಯ ಅಕ್ಕ-ಪಕ್ಕದಲ್ಲೇ. ವಿಜಯನ್ಗೆ ತಿಳಿಯದೆ ಆ ಗ್ರಾಮದಲ್ಲಿ ಇಂತವೆಲ್ಲ ಆಗಿರಲು ಸಾಧ್ಯವೇ? ಗ್ರಾಮವನ್ನೇ ಈ ಪರಿ ನರಕ ಮಾಡಿದ ವ್ಯಕ್ತಿಯ ಕೈಗೆ ರಾಜ್ಯ ಸಿಕ್ಕರೆ ಏನಾಗಬಹುದು ಹೇಳಿ?

ವಿಜಯನ್ ಅಧಿಕಾರಕ್ಕೆ ಬಂದ 16 ತಿಂಗಳಲ್ಲಿ 13 ರಾಜಕೀಯ ಹತ್ಯೆಗಳಾಗಿವೆ. ಸಂಘ-ಬಿಜೆಪಿ ಕಾರ್ಯಕರ್ತರ ಮೇಲಿನ ದಾಳಿಗಳು ಪ್ರತಿನಿತ್ಯದ ಸಂಗತಿ. ಕೇರಳದಲ್ಲಿ ಕಾನೂನು ಸುವ್ಯವಸ್ಥೆ ಎನ್ನುವುದೇ ಇಲ್ಲ,ಇದ್ದರೂ ಅದು ಸಿಪಿಎಂ ಪಕ್ಷಕ್ಕೆ ಅನ್ವಯಿಸುವುದಿಲ್ಲ. ಜನರಕ್ಷಾ ಯಾತ್ರೆ ನಡೆಯುವಾಗಲೇ ಸಂಘದ ಕಾರ್ಯಕರ್ತನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆಯಾಯಿತು.ಬಿಜೆಪಿಯ ಕಚೇರಿಯ ಮೇಲೆ ಬಾಂಬು ಹಾಕಿದರು.ಗೃಹ ಖಾತೆಯನ್ನು ತನ್ನ ಬಳಿಯೇ ಇಟ್ಟುಕೊಂಡಿರುವ ಮುಖ್ಯಮಂತ್ರಿ ವಿಜಯನ್ ಬಾಯಿಬಿಡಲಿಲ್ಲ. ಬಾಯಿಬಿಡುವುದಾದರೂ ಹೇಗೆ ಹೇಳಿ? ಕೇರಳದಲ್ಲಿ ನಡೆದ ಮೊದಲ ರಾಜಕೀಯ ಹತ್ಯೆ ವಡಿಕ್ಕಲ್ ರಾಮಕೃಷ್ಣ ಅವರದ್ದು.ವೃತ್ತಿಯಿಂದ ಟೈಲರ್ ಆಗಿದ್ದ ಯುವಕ ರಾಮಕೃಷ್ಣ ಮದುವೆಯಾಗಿ ಇನ್ನೂ ತಿಂಗಳಾಗಿರಲಿಲ್ಲ. ಆಗಲೇ ಅವರನ್ನು ಕಮ್ಯುನಿಸ್ಟ್ ರಕ್ಕಸರು ಭೀಕರವಾಗಿ ಕತ್ತರಿಸಿದ್ದರು. ಆ ಕೇಸಿನಲ್ಲಿ ಇದೇ ಪಿಣರಾಯಿ ವಿಜಯನ್ ಹೆಸರು ಸಹ ಆರೋಪಿಗಳ ಲಿಸ್ಟಿನಲ್ಲಿತ್ತು ಎಂದು ಆರೆಸ್ಸೆಸ್ ಹೇಳಿತ್ತು. ಇದಕ್ಕೆ ಪುರಾವೆ ಎಂಬಂತೆ ಮೊನ್ನೆ ಮೊನ್ನೆ ಜನಂ ಟೀವಿಗೆ ಉಮೇಶ್ ಮತ್ತು ಬಾಲಕೃಷ್ಣನ್ ಅವರು ನೀಡಿರುವ ಹೇಳಿಕೆಯಲ್ಲಿ, ಕೊ ಲೆಯನ್ನು ಕಂಡ ಪ್ರತ್ಯಕ್ಷದರ್ಶಿಗಳೆಂದು ಮತ್ತು ವಿಜಯನ್ ಕೂಡ ಅದರಲ್ಲಿ ಪಾಲ್ಗೊಂಡಿದ್ದರು ಎಂದಿದ್ದಾರೆ. ಆಶ್ಚರ್ಯವೆಂದರೇ ಯಾವುದೇ ಬ್ರೇಕಿಂಗ್ ನ್ಯೂಸ್ ಚಾನೆಲ್ಲುಗಳನ್ನು ಇದನ್ನು ಪರಿಗಣಿಸದೇ ಇರುವುದು…!

ಕೇರಳದ ರಾಜಕೀಯ ಹತ್ಯೆಗಳ ಇತಿಹಾಸದಲ್ಲಿ ಮಹತ್ವವಾದ ತಿರುವು ನೀಡಿದ್ದು 2014ರಲ್ಲಿ ನಡೆದಿದ್ದ ಆರೆಸ್ಸೆಸ್ಸಿನ ಈ.ಮನೋಜ್ ಅವರ ಹತ್ಯೆ.ಈ ಹತ್ಯೆಯ ಪ್ರಮುಖ ಆರೋಪಿಯೆಂದು ಸಿಪಿಎಂ ಕಣ್ಣೂರಿನ ಜಿಲ್ಲಾ ಸೆಕ್ರೆಟರಿ ಪಿ. ಜಯರಾಜನ್ ಅವರ ಮೇಲೆ ಸಿಬಿಐ 2017ರ ಆಗಸ್ಟಿನಲ್ಲಿ ಚಾರ್ಜ್ ಶೀಟ್ ದಾಖಲಿಸಿದೆ.ವಡಿಕ್ಕಲ್ ರಾಮಕೃಷ್ಣ ಅವರ ಹತ್ಯೆಯಿಂದ ಹಿಡಿದು 2017ರಲ್ಲಿ ಆಗಿರುವ ಹತ್ಯೆಗಳಲ್ಲಿ ಸಿಕ್ಕಿ ಬಿದ್ದವರು ಆಜ್ಞೆ ಪಾಲಿಸಿದವರೇ ಹೊರತು ಮಾಸ್ಟರ್ ಮೈಂಡ್ ಗಳಲ್ಲ. ಜಯರಾಜನ್ ಗೆ ಶಿಕ್ಷೆಯಾದರೇ, ಇದುವರೆಗೂ ಕಮ್ಯುನಿಸ್ಟರಿಗೆ ಬಲಿಯಾದ ಕುಟುಂಬಗಳಿಗೆ ಆತ್ಮವಿಶ್ವಾಸ ಮೂಡುವ ಮೊದಲ ಹೆಜ್ಜೆಯಾಗುತ್ತದೆ.

ಇದರ ಜೊತೆಗೆ ವಡಿಕ್ಕಲ್ ರಾಮಕೃಷ್ಣ ಅವರ ಮಡದಿಯೂ ಸಹ ತನ್ನ ಪತಿಯನ್ನು ಕೊಂದವರ ಬಗ್ಗೆ ಮರು ತನಿಖೆಯಾಗಬೇಕೆಂದು ಆಗ್ರಹಿಸಿದ್ದಾರೆ. ಅದೂ ಆಗಬಹುದೇ? ಆಗಬಹುದೆಂಬ ನಂಬಿಕೆ ನನ್ನದು.ಏಕೆ ಗೊತ್ತೇ? ತೀರಾ ಒಂದೆರಡು ವರ್ಷಗಳ ಹಿಂದಿನವರೆಗೂ ಕೇರಳದಲ್ಲಿ ನಡೆಯುತ್ತಿರುವ ಈ ಭೀಕರ ರಾಜಕೀಯ ಹತ್ಯೆಗಳು ಕಮ್ಯುನಿಸ್ಟರ ತೆಕ್ಕೆಯಲ್ಲಿದ್ದ ರಾಜ್ಯದ ಪತ್ರಿಕೆಗಳಲ್ಲಿಯೂ ಕಾಲಂ ಸುದ್ದಿಯಾದರೆ ಆಯಿತು ಇಲ್ಲವಾದರೆ ಇಲ್ಲವೆಂಬಂತಿತ್ತು.ಸಾಮಾಜಿಕ ಜಾಲತಾಣವೆನ್ನುವ ಕ್ರಾಂತಿಯೊಂದು ಸಂಭವಿಸದೇ ಇದ್ದಿದ್ದರೆ ನಮ್ಮ ಪಕ್ಕದ ರಾಜ್ಯದಲ್ಲೇನಾಗುತ್ತಿದೆ ಎನ್ನುವುದು ಕರ್ನಾಟಕದವರಾದ ನಮಗೂ ಗೊತ್ತಿರಲಿಲ್ಲ ಮತ್ತು ಗೊತ್ತಾಗುತ್ತಲೂ ಇರಲಿಲ್ಲ. Haindava Keralam ಎಂಬ ವೆಬ್ಸೈಟಿನ ಮೂಲಕ ಕಮ್ಯುನಿಸ್ಟ್ ಹತ್ಯಾಕಾಂಡದ ಇತಿಹಾಸಗಳನ್ನು,ದೌರ್ಜನ್ಯವನ್ನು ಬಿನು,ವಿನೀತ್,ಸಂಜು ಎಂಬ ಯುವಕರು ಮತ್ತವರ ತಂಡ ಸೇರಿಕೊಂಡು ಸತ್ಯವನ್ನು ಬಯಲು ಮಾಡಲು ಶುರು ಮಾಡಿದ್ದರು.ಅದರ ಜೊತೆಗೆ ಕೇರಳಕ್ಕಾಗಿ ವಿಶೇಷವಾಗಿ ಸಮಯ ಮೀಸಲಿಡುತ್ತಿರುವ ಬಿಜೆಪಿಯ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್ ಬಿಎಲ್ ಮತ್ತು ಕೇರಳ ಉಸ್ತುವಾರಿಗಳಾಗಿ ಹೋದ ನಳಿನ್ ಕುಮಾರ್ ಕಟೀಲ್ ಅವರು ಕಮ್ಯುನಿಸ್ಟ್ ಹತ್ಯಾಕಾಂಡಗಳ ಕುರಿತು ದನಿಯೆತ್ತುವ ಕೆಲಸಕ್ಕೆ ಹೆಚ್ಚು ಒತ್ತು ಕೊಡಲಾರಂಭಿಸಿದ್ದರು. ಅದರ ಫಲವಾಗಿಯೇ ಕಳೆದ ವರ್ಷ, ಕಮ್ಯುನಿಸ್ಟ್ ಮತ್ತು ಮುಸ್ಲಿಂ ಲೀಗಿನ ಮೂಲಭೂತವಾದಿಗಳಿಗೆ ಬಲಿಯಾದ ಆರೆಸ್ಸೆಸ್ ಕಾರ್ಯಕರ್ತರ ಬಗ್ಗೆ ‘ಆಹುತಿ’ ಎಂಬ ಪುಸ್ತಕ ಬಿಡುಗಡೆಯಾಯಿತು.

ಖುದ್ಧು ಪ್ರಧಾನಿ ನರೇಂದ್ರ ಮೋದಿಯವರೇ ಇದನ್ನು ಬಿಡುಗಡೆ ಮಾಡಿದ್ದರು.ಮೊದಲ ಬಾರಿಗೆ ಕೇರಳದ ಕಮ್ಯುನಿಸ್ಟರ ರಕ್ತಪಿಪಾಸುತನ ರಾಷ್ಟ್ರ ರಾಜಧಾನಿಯವರೆಗೂ ತಲುಪಿತ್ತು.ಆ ಕಾರ್ಯಕ್ರಮ ಕರ್ನಾಟಕದಲ್ಲೂ ನಡೆದಿತ್ತು.ಕನ್ನಡದಲ್ಲಿ ಸುವರ್ಣ ನ್ಯೂಸ್ ಚಾನೆಲ್ ಮಾತ್ರ ಈ ವಿಷಯದ ಗಂಭೀರತೆಯನ್ನು ಅರಿತುಕೊಂಡು ‘ಕಮ್ಯುನಿಸ್ಟ್ ಕಗ್ಗೊಲೆಗಳು’ ಎಂಬ ಸರಣಿ ಕಾರ್ಯಕ್ರಮವನ್ನು ಮಾಡಿತ್ತು. 5 ಭಾಗಗಳಲ್ಲಿ ಪ್ರಸಾರವಾದ ಈ ಸರಣಿಯಲ್ಲಿ ಆರೆಸ್ಸೆಸ್ಸಿನ ರಾಷ್ಟ್ರೀಯ ಸಹ-ಪ್ರಚಾರ ಪ್ರಮುಖ್ ಜೆ.ನಂದಕುಮಾರ್ ,ಖ್ಯಾತ ವಾಗ್ಮಿಗಳಾದ ಚಕ್ರವರ್ತಿ ಸೂಲಿಬೆಲೆ ಮತ್ತು ನಾನು ಪಾಲ್ಗೊಂಡಿದ್ದೆ. ಆ ಕಾರ್ಯಕ್ರಮಕ್ಕಾಗಿ ಕಮ್ಯುನಿಸ್ಟರು ನಡೆಸಿರುವ ಹತ್ಯೆಗಳನ್ನು ವಿವರಿಸಿ, ಕಾರ್ಯಕ್ರಮ ಮುಗಿಸುವಾಗ, ನನ್ನ ಮೈ-ಕೈಗಳೂ ರಕ್ತಸಿಕ್ತವಾಗಿವೆಯೇನೋ ಎನ್ನುವಷ್ಟು ಹಿಂಸೆ ಕಾಡುತಿತ್ತು… !

ಅಮ್ಮ ಚುನಾವಣೆಗೆ ನಿಂತಳೆಂದು ಏಳು ವರ್ಷದ ಪುಟ್ಟ ಮಗನ ಕೈ ಮುರಿದಿದ್ದು.ಇವರಿಂದ ಭೀಕರವಾಗಿ ಹಲ್ಲೆಗೀಡಾಗಿ ಅರೆ ಜೀವ ಉಳಿಸಿಕೊಂಡು ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದವರನ್ನು ಆಸ್ಪತ್ರೆಯೊಳಗೇ ನುಗ್ಗಿ ಕೊಂದಿದ್ದು, ಈ ರಾಕ್ಷಸರಿಂದ ತಪ್ಪಿಸಿಕೊಂಡು ದೇವಸ್ಥಾನದೊಳಗೆ ಓಡಿ ಹೋದವನನ್ನು ದೇವಳದ ಪ್ರಾಂಗಣದೊಳಗೆ ಕತ್ತರಿಸಿದ್ದು, ಮಹಿಳೆಯೊಬ್ಬರನ್ನು ಜೀವಂತ ಸುಟ್ಟು ಹಾಕಿದ್ದು ಮಹಿಳೆಯ ತಲೆ ಬೋಳಿಸಿದ್ದು,ಕುಡಿಯುವ ನೀರಿನ ಬಾವಿಗೆ ಕೂದಲುಗಳ ಮೂಟೆ ತಂದು ಸುರಿದಿದ್ದು, ಪಕ್ಷ ಬಿಟ್ಟನೆಂಬ ಕಾರಣಕ್ಕೆ ತನ್ನದೇ ಕಾರ್ಯಕರ್ತನಾಗಿದ್ದವ ನಡೆಸುತ್ತಿದ್ದ ಹಾವಿನ ಪಾರ್ಕಿಗೆ ಬೆಂಕಿ ಇಟ್ಟಿದ್ದು… ಅಬ್ಬಾ! ಈ ಕಮ್ಯುನಿಸ್ಟರದು ಎಂತ ಕ್ರೌರ್ಯ,ಭೀಕರತೆ. ಹೀಗೆ ಕೇರಳದ ಸಂಘದ ಕಾರ್ಯಕರ್ತರ ವ್ಯಥೆ-ಕತೆಯನ್ನು ವಿವರಿಸುವಾಗಲೇ ನಮಗೆ ಇಷ್ಟು ಹಿಂಸೆಯಾಗುವಾಗ, ಖುದ್ದು ಕಮ್ಯುನಿಸ್ಟರ ರಾಜ್ಯದಲ್ಲಿ,ಅವರದ್ದೇ ಸರ್ಕಾರವನ್ನು ಎದುರು ಹಾಕಿಕೊಂಡು ಜೀವದ ಹಂಗು ತೊರೆದು ರಾಷ್ಟ್ರಕಾರ್ಯ ಮಾಡುತ್ತಿರುವ ಸ್ವಯಂಸೇವಕರ ಆತ್ಮಸ್ಥೈರ್ಯಕ್ಕೆ ಅವರೇ ಸಾಟಿ. ಅವರ ಆತ್ಮ ಸ್ಥೈರ್ಯಕ್ಕೆ ಉದಾಹರಣೆಯೇ ಮೊನ್ನೆ ಯಶಸ್ವಿಯಾಗಿ ಮುಗಿದ “ಜನ ರಕ್ಷಾ ಯಾತ್ರೆ”

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಾರ್ಗದರ್ಶನ, ರಾಜ್ಯಾಧ್ಯಕ್ಷ ರಾಜಶೇಖರ್ ಕುಮ್ಮನಮ್ ಅವರ ಜನಪ್ರಿಯತೆ,ಕೇರಳ ಪ್ರಭಾರಿ ನಳಿನ್ ಕುಮಾರ್ ಕಟೀಲ್ ಅವರ ಸಂಘಟನೆ, ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರ ಬುದ್ಧಿಮತ್ತೆ ಮತ್ತು ಸ್ಟಾಟರ್ಜಿಯ ಫಲವಾಗಿ ರೂಪುತಳೆದಿದ್ದೇ ಈ ಜನರಕ್ಷಾಯಾತ್ರೆ.

ಕೇರಳದ ರಾಜಕೀಯ ಹತ್ಯೆಯ ಮತ್ತು ಕಮ್ಯುನಿಸ್ಟರ ಕೇಂದ್ರ ಸ್ಥಾನ ಕಣ್ಣೂರು,ಮೂಲಭೂತವಾದಿಗಳ ಕೇಂದ್ ಸ್ಥಾನ ಮಲಪ್ಪುರಂ ಸೇರಿದಂತೆ,14 ದಿನಗಳ ಕಾಲ 11 ಜಿಲ್ಲೆಗಳಲ್ಲಿ ಸುಮಾರು 140 ಕಿ,ಮೀಯಷ್ಟು ನಡೆದ ಯಾತ್ರೆ ಪ್ರಮುಖವೆನಿಸುವುದು ಮುಖ್ಯವಾಗಿ ಈ ಕಾರಣಗಳಿಗಾಗಿ.

1. ಸಾಧಾರಣವಾಗಿ ಚುನಾವಣೆ ಕಾಲದಲ್ಲಿ ಯಾತ್ರೆಗಳನ್ನು ಶುರು ಮಾಡುವುದು ರಾಜಕೀಯ ಪಕ್ಷಗಳ ಸಂಪ್ರದಾಯ. ಆದರೆ ಜನರಕ್ಷಾಯಾತ್ರೆ ಹಿಂದಿನ ಎಲ್ಲಾ ಯಾತ್ರೆಗಳಿಗಿಂತ ಏಕೆ ಭಿನ್ನ ಮತ್ತು ವಿಶೇಷವೆನಿಸುತ್ತದೆಯೆಂದರೆ, ಕೇರಳದ ರಾಜಕೀಯದಲ್ಲಿ ಬಿಜೆಪಿ ಈಗಿನ್ನು ಅಕೌಂಟ್ ತೆಗೆಯುತ್ತಿದೆ, ಇರುವುದು ಒಬ್ಬ ಶಾಸಕರಷ್ಟೇ. ಆದರೆ ಲಾಭ-ನಷ್ಟಕ್ಕಿಂತ ಮುಖ್ಯವಾಗಿ Everyone has the Right to LIVE ಎಂಬ ಸ್ಲೋಗನ್ ಮೂಲಕ ಶುರುವಾದ ಯಾತ್ರೆಗೆ ಪಕ್ಷಾತೀತವಾಗಿ ಬೆಂಬಲ ಸಿಕ್ಕಿದೆ.ಕಾರಣವೇನೆಂದರೆ ಸಿಪಿಎಂನಿಂದ ನಡೆದಿರುವ ಹತ್ಯಾಕಾಂಡದ ಸಂತ್ರಸ್ತರು ಕೇವಲ ಆರೆಸ್ಸೆಸ್-ಬಿಜೆಪಿ ಕಾರ್ಯಕರ್ತರಲ್ಲ, ಕಾಂಗ್ರೆಸ್,ಸಿಪಿಐ,ಮುಸ್ಲಿಂ ಲೀಗಿನ ಕಾರ್ಯಕರ್ತರು ಇವರಲ್ಲಿ ಸೇರಿದ್ದಾರೆ. ಹೀಗಿದ್ದಾಗಲೂ ಇವರ ಬಗ್ಗೆ ದನಿಯೆತ್ತುವ ಮೂಲಕ ಭಯಭೀತ ಜನರಿಗೆ ನಾವಿದ್ದೇವೆ ಎಂಬ ಸಂದೇಶ ಕೊಟ್ಟಿದ್ದು ಬಿಜೆಪಿ ಮಾತ್ರವೇ. ಇದಕ್ಕೆ ಉದಾಹರಣೆ ಎಂಬಂತೆ ಕಾಂಗ್ರೆಸ್ಸಿನ ನಾಯಕ, ಸಮಾಜಸೇವಕರೆಲ್ಲ ಯಾತ್ರೆಯನ್ನು ಸ್ವಾಗತಿಸಿ, ಬೆಂಬಲಿಸಿದ್ದು.

2.ಯಾತ್ರೆ ಸಾಗುವ ಪಾರ್ಟಿ ವಿಲೇಜುಗಳಲ್ಲಿ ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿದ್ದ ಕಮ್ಯುನಿಸ್ಟರು ಯಾತ್ರೆಯಲ್ಲಿ ಪಾಲ್ಗೊಳ್ಳದಂತೆ ಮನೆ ಮನೆಗಳಿಗೆ ಹೋಗಿ ಎಚ್ಚರಿಕೆ ನೀಡಿ ಬಂದಿದ್ದರು. ಆದರೂ ಕಾರ್ಯಕರ್ತರು ಅದನ್ನು ಧಿಕ್ಕರಿಸಿ ಬಂದು ಯಾತ್ರೆಯಲ್ಲಿ ಸೇರಿಕೊಂಡಿದ್ದರು. ಕರ್ನಾಟಕದಂತಹ ರಾಜ್ಯಗಳಲ್ಲಿ ನಾವು ಆಳುವ ಸರ್ಕಾರವನ್ನೋ, ಇನ್ಯಾವುದೋ ಪಕ್ಷವನ್ನು ಟೀಕಿಸಿದ, ಎದುರಿಸಿ ನಿಂತರೇ ನಮ್ಮ ಪ್ರಾಣಕ್ಕೆ ಸಂಚಕಾರವೇನೂ ಆಗುವುದಿಲ್ಲ (ಸಿದ್ಧರಾಮಯ್ಯನವರ ಕಾಲದಲ್ಲಿ ಅದೂ ಬದಲಾಗಿದೆ. ನಾಲ್ಕೂವರೆ ವರ್ಷಗಳಲ್ಲಿ ಆರೆಸ್ಸೆಸ್-ಬಿಜೆಪಿ,ಜೆಡಿಎಸ್,ಪಿಎಫೈನ ೧೩ ಕಾರ್ಯಕರ್ತರ ಹತ್ಯೆಗಳಾಗಿವೆ). ಆದರೆ ಕೇರಳದಂತಹ ರಾಜ್ಯಗಳಲ್ಲಿ ಕಮ್ಯುನಿಸ್ಟರ ಕೆಂಗಣ್ಣಿಗೆ ಗುರಿಯಾಗುವ ಭಯವಿದ್ದಾಗಲೂ ಜನರು ಸಾಗರೋಪಾದಿಯಲ್ಲಿ ಯಾತ್ರೆಗೆ ಸಾಗಿ ಬಂದಿದ್ದು ಅದ್ಭುತವೇ ಸರಿ

3.ಸಂಘಟನೆ,ಪಕ್ಷದಿಂದ ಯಾವುದೇ ಲಾಭದ ಆಕಾಂಕ್ಷೆಯಿಲ್ಲದೇ ಕೇವಲ ತಾವು ನಂಬಿದ ಐಡಿಯಾಲಜಿಗಾಗಿ ಪ್ರಾಣಕೊಡಲು ತಯಾರಾಗಿರುವ ಕೇರಳದ ಸಂಘ-ಬಿಜೆಪಿ ಕಾರ್ಯಕರ್ತರು,ನಾಯಕರು ಉತ್ಸಾಹ,ಶಿಸ್ತು ಮತ್ತು ಈ ಯಾತ್ರೆಯಿಂದ ಅಧಿಕಾರ ಸಿಗುವ ಕನಸು ಇಲ್ಲದೆಯೂ ಇದನ್ನೊಂದು ಹೋರಾಟವೆಂದು ಪರಿಗಣಿಸಿರುವ ಅವರ ಕೆಚ್ಚು ಇತರೇ ರಾಜ್ಯದ ಬಿಜೆಪಿ ಪಕ್ಷಕ್ಕೆ ಮುಖ್ಯವಾಗಿ ಕರ್ನಾಟಕಕ್ಕೇ ಸ್ಫೂರ್ತಿ ನೀಡುವಂತದ್ದು.

4.ಯಾತ್ರೆಯಲ್ಲಿ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್,ಮನೋಹರ್ ಪರಿಕ್ಕರ್,ದೇವೇಂದ್ರ ಫಡ್ನವಿಸ್ ,ಶಿವರಾಜ್ ಸಿಂಗ್ ಚೌಹಾಣ್ ,ಕೇಂದ್ರ ಸಚಿವರ ದಂಡು,ಅಕ್ಕ-ಪಕ್ಕದ ರಾಜ್ಯದ ಬಿಜೆಪಿಯ ಸ್ಟಾರ್ ನಾಯಕರುಗಳು,ಕಾರ್ಯಕರ್ತರು ಪಾಲ್ಗೊಂಡಿದ್ದು ಅಲ್ಲದೆ ಕೇರಳದಲ್ಲಿ ಯಾತ್ರೆ ನಡೆಯುವಾಗಲೇ ದೇಶದ ಇತರೆಡೆಗಳಲ್ಲಿ ಕಮ್ಯುನಿಸ್ಟ್ ಕಚೇರಿಗಳಿಗೆ ಬಿಜೆಪಿ ಮುತ್ತಿಗೆ ಹಾಕುವ ಯೋಜನೆ ಮಾಸ್ಟರ್ ಸ್ಟ್ರೋಕಿನಂತೆ ಇತ್ತು. ಕೇರಳದ ಬಗ್ಗೆ ಮೌನವಾಗಿದ್ದ ಇಂಗ್ಲೀಷ್, ಹಿಂದಿ ಚಾನೆಲ್ಲುಗಳು ಈ ಬಗ್ಗೆ ಮಾತನಾಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಆ ಮೂಲಕ ಕಮ್ಯುನಿಸ್ಟರ ಪ್ರಜಾಪ್ರಭುತ್ವವಿರೋಧಿ ರಕ್ತಪಿಪಾಸುತನ ಜಗಜ್ಜಾಹೀರಾಯಿತು.

5. ದೇಶವನ್ನೇ ಬೆಚ್ಚಿಬೀಳಿಸಿ ಇತ್ತೀಚಿಗೆ ನ್ಯಾಯಾಲಯವೇ ಖುದ್ದು NIAಗೆ ತನಿಖೆ ನಡೆಸುವಂತೆ ವಹಿಸಿರುವ ಕೇರಳದ ಲವ್ ಜಿಹಾದ್ ಪ್ರಕರಣಗಳ ಸಂತ್ರಸ್ತರು ಕೇವಲ ಹಿಂದೂಗಳಲ್ಲ. ಕ್ರೈಸ್ತರು ಇದ್ದಾರೆ. Vote Bank ರಾಜಕಾರಣಕ್ಕಾಗಿ ಕಾಕ (ಕಾಂಗಿ+ಕಮ್ಯುನಿಸ್ಟ್)ಗಳು ಮೌನವಾಗಿರುವಾಗ, ನೊಂದ ಕುಟುಂಬಗಳಿಗೆ ಬೆಂಬಲವಾಗಿ ನಿಂತಿದ್ದು ಇದೇ ಜನರಕ್ಷಾಯಾತ್ರೆ.

ಜನರಕ್ಷಾ ಯಾತ್ರೆಯೇನೋ ಯಶಸ್ವಿಯಾಗಿ ಮುಗಿದಿದೆ. ಅದರ ಫಲಾಫಲವೇನು ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.ಭಯೋತ್ಪಾದನೆ ಮತ್ತು ವ್ಯಾಪಕ ಚುನಾವಣಾ ಅಕ್ರಮ,ಹಿಂಸಾಚಾರದ ಮೂಲಕ ಚುನಾವಣೆ ಗೆಲ್ಲುವ ಕಮ್ಯುನಿಸ್ಟರ ನಡುವೆ ಧಿಡೀರನೆ ಲಾಭದ ನಿರೀಕ್ಷೆಯೂ ವಾಸ್ತವವಲ್ಲ.ಚುನಾವಣಾ ಲಾಭ ನಷ್ಟಕ್ಕಿಂತ ಮುಖ್ಯವಾಗಿ ರಕ್ತಸಿಕ್ತ ಕೆಂಪು ಸಾಗರೋಲ್ಲಂಘನ ಮಾಡಿ ಕೇರಳದ ಕಮ್ಯುನಿಸ್ಟರ ಕೋಟೆಗೆ ಕೇಸರಿಪಡೆ ಲಗ್ಗೆಯಿಟ್ಟು ರಣಕಹಳೆ ಮೊಳಗಿಸಿದೆ. ಸಾಗರೋಲ್ಲಂಘನವಾದ ನಂತರ ವಿಜಯದಶಮಿಯ ದಿನಗಳು ಬರಲೇಬೇಕಲ್ಲ! ಅಂತಹ ದಿನಗಳು ಕೇರಳದಲ್ಲಿ ಆದಷ್ಟು ಬೇಗ ಬರಲಿ. ದುಷ್ಟಶಕ್ತಿಗಳು ಅಳಿದು,ಹತ್ಯಾಕಾಂಡದ ರೂವಾರಿಗಳು ಜೈಲು ಸೇರಿ ದೇವರ ನಾಡಲ್ಲಿ ಮತ್ತು ಸಂತೋಷದ ದಿನಗಳು ಮೂಡಲಿ ಎನ್ನುವುದೇ ಆಶಯ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments