ವಿಷಯದ ವಿವರಗಳಿಗೆ ದಾಟಿರಿ

ಮೇ 15, 2011

2

ನನಗೂ ಸ್ವಲ್ಪ ಕೊಡಿ…

‍ನಿಲುಮೆ ಮೂಲಕ

– ಚೇತನ್ ಕೋಡುವಳ್ಳಿ

ಮಾರ್ಚ್ ತಿಂಗಳ ಎಲ್ಲ ವೀಕೆಂಡಲ್ಲೂ ಊರಿಗೆ ಹೋಗಿದ್ದೆ. ಊರಲ್ಲಿ ಮಳೆಗಾಗಿ ಕಾಯ್ತಿದ್ರು. ಈಸಲನಾದ್ರೂ ಚೆನ್ನಾಗಿ ಮಳೆ ಬಂದು ಕಾಫಿ ಚೆನ್ನಾಗಿ ಹೂ ಬಿಡ್ಲಿ ಅಂತಿದ್ರು. ನಾನೂ ಹೋದಾಗಲೆಲ್ಲ ಮಳೆಗೆ ಕಾಯ್ತಿದ್ದೆ, ಜೊತೆಗೆ ಕಾಫಿಯ ಹೂವಿಗೆ ಸಹ. ಹೂವಿನಿದ ತುಂಬಿಕಂಗೊಳಿಸುವ ತೋಟವನ್ನ ನೋಡೋದೇ ಕಣ್ಣಿಗೆ ಹಬ್ಬ, ಎಲ್ಲಿ ಕಣ್ಣು  ಹಾಯಿಸಿದರೂ  ಬಿಳೀಹೂಗಳದ್ದೇ  ರಾಶಿ,  ಅಲ್ಲದೆ ಆ ಹೂವಿನ ಘಮಲು, ಆಹಾ ಏನು ಪರಿಮಳ, ದಿನಾ ಪೂರ್ತಿ ಅಲ್ಲೇಕುಳಿತಿರೋಣ ಎಂದನ್ನಿಸುತ್ತದೆ.೨ ವರ್ಷ ಆ ಸೌಭಾಗ್ಯ ಸಿಕ್ಕಿರ್ಲಿಲ್ಲ  ಯಾಕಂದ್ರೆ ಹೂವು ಆಗಿದ್ದು ವಾರದ ಮಧ್ಯದಲ್ಲಿ 😦 ವೀಕೆಂಡ್ ಬರೋ ಹೊತ್ತಿಗೆ ಎಲ್ಲ ಹೂವು ಉದುರಿ ಹೋಗಿರ್ತಿತ್ತು.

ಒಂದಿನ  ಮೋಡ ಆದ ಹಾಗೆ ಆಗ್ತಿತ್ತು, ದೂರದ ಗಿರಿಯಲ್ಲಿ ಕಪ್ಪನೆಯ ಮೋಡ, ಸ್ವಲ್ಪ ಹೊತ್ತಾದಮೇಲೆ ಮಳೆ. ಇತ್ತ ಕಡೆ ಗಾಳಿ ಬೀಸುತ್ತಿತ್ತು, ಮಳೆಯೂ ಬರುತ್ತಿರುವ ಹಾಗನ್ನಿಸುತ್ತಿತ್ತು. ಎಲ್ಲೋದೂರದ ಆಸೆ, ಇನ್ನೇನು ಕಾಲು ಘಂಟೆಯಲ್ಲಿ ಇಲ್ಲಿಗೆ ಬರತ್ತೆ, ಹೋಗಿ ನೆನೆಯಬಹುದು ಅಂತ.ಆಮೇಲೆ ಮಳೆ ಬಂದ್ರೆ ೩-೪ ದಿನ ಆದ್ಮೇಲೆ ಚಿಗುರು ಬಿಟ್ಟು ಹೂವು ಆಗೋ  ಹೊತ್ತಿಗೆ  ೧ ವಾರಆಗತ್ತೆ, ಮುಂದಿನ ವಾರ ಬರಬಹುದು ಅಂತ ದೂರದ ಆಸೆ. ದೂರದಲ್ಲಿ ಜೋರಾಗಿಸುರಿಯುತ್ತಿದ್ದ ಮಳೆ ಗಾಳಿ ಬೀಸುತ್ತಿದ್ದಂತೆ ಇತ್ತ ಕಡೆ ಬರ್ತಾ ಇತ್ತು. ಅಲ್ಲೇ ಕಣದಲಿ  ನಿಂತುನೋಡುತ್ತಿದ್ದ ನನಗೆ, ಪಕ್ಕದ ಊರಲ್ಲಿ ಹನಿಗಳು ಬಿದ್ದಾಗ ಆದ ಸಂತಸ ಅಷ್ಟಿಷ್ಟಲ್ಲ. ಆದರೆ ಸ್ವಲ್ಪಹೊತ್ತಾದ ಮೇಲೆ ಅಲ್ಲಿ ಬೀಳುವುದೂ ಕಡಿಮೆಯಾಯ್ತು. ಕಾಯುತ್ತಿದ್ದ ನಾನು ಸಪ್ಪೆ  ಮೊರೆಹಾಕಿಕೊಂಡು ಮನೆ ಒಳಗೆ ಹೋದೆ.

ಬೆಂಗಳೂರಿಗೆ ಬಂದ ಮಾರನೇ ದಿನ ಅಮ್ಮ ಫೋನ್ ಮಾಡಿ ಮಳೆ ಬಂತು ಅಂದಾಗ ಮೊದಲಿಗೆ ಸ್ವಲ್ಪ ದುಃಖ ಆದರೆ ಮರುಕ್ಷಣವೇ ಖುಷಿ. ಮುಂದಿನ ವಾರ ಹೇಗಿದ್ದರೂ ಯುಗಾದಿಗೆ ಊರಿಗೆಹೋಗಬೇಕು ಆಗ ಇಡೀ ತೋಟ ಸುತ್ತಾಡಿ  ಅಲ್ಲಿಯ ಸೊಬಗನ್ನು, ಜೊತೆಗೆ ಸುವಾಸನೆಯನ್ನೂ ಸವಿಯಬಹುದಲ್ಲ ಎಂದೆನಿಸಿತು.

ಯಾವಾಗ ಶುಕ್ರವಾರ ಆಗತ್ತೋ ಅಂತ ಕಾಯ್ತಿದ್ದೆ. ಅಂತೂ ಬಂತು, ರಾತ್ರಿ ಹೊರಟು ಬೆಳಗ್ಗೆಚಿಕ್ಕಮಗಳೂರು ತಲುಪಿ ಊರಿನ ಬಸ್ ಹತ್ತಿದಾಗ ತಲೆಯಲ್ಲಿದ್ದದ್ದು ಒಂದೇ ಯೋಚನೆ,ಹೂವು ಹೂವು ಹೂವು. ಅರ್ಧ ಘಂಟೆ ಪ್ರಯಾಣದ ನಂತರ ಊರು ತಲುಪಿ ಬಸ್ಸಿನಿಂದಇಳಿದು ತೋಟದ ಹಾದಿಯಲ್ಲಿ ಮನೆಯ ಕಡೆ ಹೆಜ್ಜೆ ಹಾಕುವಾಗ ಸ್ವರ್ಗದಲ್ಲಿದ್ದೆನೇನೋ ಅನ್ನೋ ಅನುಭವ.

ಕಾದು ಕೆಂಪಾಗಿದ್ದ ಇಳೆಯನ್ನು
ಆಗಸವು ವರ್ಷಧಾರೆಯ ಸುರಿಸಿ
ಹನಿಯಿಂದ ಚುಂಬಿಸಿ
ಎಲ್ಲೆಡೆ ಹಸಿರನ್ನು ಪಸರಿಸಿದೆ

ಆ ದಿನ ಪೂರ್ತಿ ನಾನು ನನ್ನ ಬಹುತೇಕ ಸಮಯವನ್ನು ತೋಟದಲ್ಲೇ ಕಳೆದಿದ್ದೆ.
………………………………………….

ಯುಗಾದಿಯ ದಿನ ನನ್ನ ಕೆಲಸ ಮುಗಿಸಿ, ಅಂದರೆ ತೋಟಕ್ಕೆ ಹೋಗಿ ಮಾವಿನ ಎಲೆ,ಹಲಸಿನ ಎಲೆ ತಂದು ತೋರಣ ಮಾಡಿ ಕಟ್ಟಿದ್ದಾಯ್ತು. ಇನ್ನೇನಿದ್ದರೂ ದೇವರಿಗೆ ಆರತಿಮಾಡಿ ಹೊಟ್ಟೆಗೆ ಕೆಲಸ. ಅದಕ್ಕೆ ಇನ್ನೂ ಸಮಯವಿದ್ದುದ್ದರಿಂದ ಅವತ್ತಿನ ಪೇಪರ್ ತಂದುಅಂಗಳದಲ್ಲಿ ಕುಳಿತೆ. ಬಿಸಿಲು ತುಂಬಾ ಇತ್ತು. ಪೇಪರ್ ಹರಡಿಕೊಂಡು ಏನೋ ಓದುತ್ತಿದ್ದೆ, ಸಡನ್ನಾಗಿ ಮೋತಿ (ಮನೆಯ ನಾಯಿ)  ಓಡಿಬಂದು ನನ್ನನ್ನ ನೋಡಿ ಬಾಲ ಅಲ್ಲಾಡಿಸಿ ಲಾನಲ್ಲಿದ್ದಹೂವಿನ ಪಾಟಿನ ಹತ್ತಿರ ಹೋಗಿ ನೀರಿಗೆ ತನ್ನ ನಾಲಿಗೆ ಚಾಚಿ ನೀರನ್ನು ಹೀರತೊಡಗಿತು. ಅಲ್ಲಿ ಅದಕ್ಕೆ ಇದ್ದ ಒಂದೇ ಒಂದು ನೀರಿನ ಮೂಲ ಅಂದರೆ ಅದೇ 😦 ನೀರು ಕುಡಿದು ನನ್ನ ಪಕ್ಕಬಂದು ಮಲಗಿತು.

ಹಾಗೆ ಸ್ವಲ್ಪ ಹೊತ್ತು ಅಲ್ಲೇ ಕುಳಿತಿದ್ದೆ, ಆಗ ಪಾರಿವಾಳವೊಂದು ಬಂದು ಪಾಟಿನ ಹತ್ತಿರ ಕುಳಿತುಅತ್ತ ಇತ್ತ ಹಲವಾರು ಬಾರಿ ನೋಡಿ ಆಮೇಲೆ ನೀರಿಗೆ ತನ್ನ ಕೊಕ್ಕನ್ನು ಹಾಕಿತು. ಮಾಡುವುದಕ್ಕೆ ಬೇರೆ ಕೆಲಸ ಇರಲಿಲ್ಲವಾದುದರಿಂದ ಅಲ್ಲೇ  ಕುಳಿತು ಇನ್ನೂ ಯಾವ್ಯಾವ ಹಕ್ಕಿಗಳು ಬರಬಹುದು ಅಂತ ಕಾಯ್ತಿದ್ದೆ. ಕಾಗೆ, ಮಡಿವಾಳಹಕ್ಕಿ, ನನಗೆ ಹೆಸರು ಗೊತ್ತಿಲ್ಲದ ಹಲವು ಹಕ್ಕಿಗಳು ಬಂದು ನನ್ನನ್ನು ನೋಡಿ, ಕೆಳಗೆ ಮಲಗಿದ್ದ ಮೋತಿಯನ್ನೊಮ್ಮೆ ನೋಡಿ ಯಾರೂ ತೊಂದರೆ ಮಾಡುವುದಿಲ್ಲ ಎಂದರಿತು ನೀರನ್ನು ಕುಡಿದುಹೋಗುತ್ತಿದ್ದವು. ಲಾನ್ ಮಾಡಿ ಪಾಟಲ್ಲಿ  ನೀರು ಇಟ್ಟದ್ದು ಹೀಗಾದರೂ ಉಪಯೋಗಕ್ಕೆ ಬಂದಿತ್ತು.

……………………………………………………………………

ರಾತ್ರಿ ಹೊರಟು ಬೆಳಗ್ಗೆ ಬೆಂಗಳೂರಿಗೆ ಬಂದೆ, ನಮ್ಮ ಮನೆಯ (ಬೆಂಗಳೂರಿನಲ್ಲಿಯ ಬಾಡಿಗೆಮನೆ) ವರಾಂಡ ಅಗಲವಿತ್ತು, ಆಫೀಸಿಗೆ ಹೊರಡುವ ಮುನ್ನ ಒಂದು ಪ್ಲಾಸ್ಟಿಕ್ ಡಬ್ಬದಲ್ಲಿ ನೀರನ್ನುಇಟ್ಟು ಹೋಗಿದ್ದೆ. ಕೆಲಸ ಮುಗಿಸಿ ಸಂಜೆ ವಾಪಸ್ ಬರೋ ಹೊತ್ತಿಗೆ ಕಾಲು ಭಾಗ ನೀರುಖಾಲಿಯಾಗಿತ್ತು, ಅಬ್ಬ ಯಾವ್ದೋ ಹಕ್ಕಿಗಳು ಕುಡಿದಿರಬಹುದು ಅಂತ ಅಂದ್ಕೊಂಡೆ.

ಸಂಜೆ ಬಂದ ಮೀಟರ್, ‘ಏನಪ್ಪಾ ನೀರು ಇಟ್ಟಿದೀಯ’ .
‘ಹ್ಞೂ, ಬಾಯಾರಿಕೆ ಆದಾಗ ಹೀಗೆ ಯಾವ್ದಾದ್ರೂ ಹಕ್ಕಿಗಳು ಕುಡಿಯಲಿ ಅಂತ’
‘ಅದೇನು ಹಕ್ಕಿ ಕುಡಿದು ಖಾಲಿಯಾಗಿರೋದು ಅಂದ್ಕೊಂಡ್ಯ?’
‘ಹ್ಞೂ, ಮತ್ತೆ ಇನ್ಹೇಗೆ ಖಾಲಿಯಾಗತ್ತೆ?’
‘ಬಿಸಿಲಿಗೆ ಡಬ್ಬ ಕಾದು ನೀರು ಖಾಲಿಯಾಗಿರೋದು’

ನಂಗೆ ಬೇಜಾರಾಯ್ತು. ಛೆ, ಹೀಗಾಯ್ತಲ್ಲ ಅಂತ. ಆದರೂ ಆ ವಾರ ಪೂರ್ತಿ ನೀರು ತುಂಬಿಸಿ ಹೋಗ್ತಿದ್ದೆ, ಸಂಜೆ ಹೊತ್ತಿಗೆ ಕಾಲು ಭಾಗ ಖಾಲಿಯಾಗಿರ್ತಿತ್ತು. ಆದ್ರೆ ಹೇಗೆ ಅನ್ನೋದು ಇನ್ನೂನಿಗೂನಿಗೂಢವಾಗಿತ್ತು. ಆಗಲಿ ವೀಕೆಂಡ್ನಲ್ಲಿ ಚೆಕ್ ಮಾಡೋಣ ಅಂದ್ಕೊಂಡೆ.

ಶನಿವಾರ ನೀರು ಹಾಕಿ ಚಾವಡಿಯಲ್ಲಿ ಬಂದು ಪೇಪರ್ ಓದುತ್ತಾ ಅಲ್ಲಿ ಆಗಾಗ ನೋಡುತ್ತಾ ಕುಳಿತೆ. ಅರ್ಧ ಘಂಟೆ ಆದರೂ ಯಾವುದರ ಸುಳಿವಿರಲಿಲ್ಲ. ಮೀಟರ್ ಹೇಳಿದ್ದೇ  ಸರಿ ಅಂದ್ಕೊಂಡೆ. ಇನ್ನು ಅಲ್ಲಿಟ್ಟು ಪ್ರಯೋಜನವಿಲ್ಲ, ಸಂಜೆ ಅದನ್ನ ಎಸೆದು ಬಿಡೋಣ ಅಂದ್ಕೊಂಡೆ. ಒಳಗೆ ಹೋಗಿ ಕಾಫಿ ಮಾಡ್ಕೊಂಡು ಬಂದು ಮತ್ತೆ ಪೇಪರ್ ಓದ್ತಾ ಕೂತೆ. ಹಾಗೆ ಅತ್ತ ಕಡೆ ಕಣ್ಣು ಹಾಯಿಸಿದೆ, ಅಳಿಲೊಂದು ಬಂದು ಡಬ್ಬನ ಆಕಡೆ ಈಕಡೆ ಮೂಸಿ, ಒಳಗೆ ನೀರಿರುವುದನ್ನುನೋಡಿ ಕುಡಿದು ಓಡಿಹೋಯ್ತು.  ಅಬ್ಬ, ಆಗ ಸಮಾಧಾನವಾಯ್ತು. ಆಮೇಲೆ ಆಗಾಗ ಕಾಗೆ, ಪಾರಿವಾಳಗಳು ಬಂದು ನೀರು ಕುಡಿದು ಹೋಗುತ್ತಿದ್ದವು.

ಅಂದಿನಿಂದ ಡಬ್ಬದಲ್ಲಿ ನೀರು ತುಂಬಿ ಆಫೀಸಿಗೆ ಹೊರಡುವುದಾಗಿದೆ.

2 ಟಿಪ್ಪಣಿಗಳು Post a comment
  1. shimladkaumesh's avatar
    ಮೇ 15 2011

    nice…. 🙂

    ಉತ್ತರ
  2. Ravi Murnad's avatar
    ಮೇ 16 2011

    ಚೆನ್ನಾಗಿದೆ ಬರಹ.ಧನ್ಯವಾದಗಳು.

    ಉತ್ತರ

Leave a reply to shimladkaumesh ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments