ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 16, 2011

33

ಏನ್ ಇವಾಗ? ನಾವ್ ಇರೋದೇ ಹೀಗೆ…

‍ನಿಲುಮೆ ಮೂಲಕ

-ಸಾತ್ವಿಕ್ ಎನ್ ವಿ

ಒಮ್ಮೊಮ್ಮೆ ಇಂಥ ಪ್ರಸಂಗಗಳಿಗೆ ಹೇಗೆ ಪ್ರತಿಕ್ರಿಯಿಸುವುದೋ ತಿಳಿಯುವುದಿಲ್ಲ.  ನಿನ್ನೆ ನಮ್ಮ ಮೇಡಂ ಒಬ್ಬರು ಕಾಲ್ ಮಾಡಿ ’ಸಾತ್ವಿಕ್ ನಿಮ್ಮ ಕಡೆ ಯಾರಾದ್ರೂ ಹುಡುಗಿಯಿದ್ದರೆ ಹೇಳೋ ಅಂದ್ರು’. ಅದಕ್ಕೆ ತಮಾಷೆಯಿಂದ ’ನಾನು ಒಂದು ವಧುವರರ ಕೇಂದ್ರ ತೆಗೆದ್ರೆ ಒಳ್ಳೆ ಕಲೆಕ್ಷನ್ ಆಗಬಹುದು ಅಲ್ವಾ ಮೇಡಂ’ ಅಂದೆ. ಅವರು ತಮ್ಮ ಮಾತಿನಲ್ಲಿ ಗಂಭೀರತೆಯನ್ನು ಬಿಟ್ಟು ಕೊಡದೇ ’ಹಾಗಲ್ಲ, ನಿನಗೆ ಗೊತ್ತಲ್ಲ. ನಮ್ಮಲ್ಲಿ ಅಬಕ ಜಾತಿಯ ವಧುಗಳು ಸಿಗೋದು ಬಹಳ ಕಷ್ಟ ಆಗಿದೆ.  ಹಾಗಾಗಿ ಅನಿವಾರ್ಯವಾಗಿ ಬೇರೆ ಜಾತಿಯ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ’ ಅಂದ್ರು. ನನ್ನ ವಯಸ್ಸಿನ ಯೋಚನೆಗೆ ನಿಲುಕದ ವಿಷಯವಾದ ಕಾರಣ ’ಆಯ್ತು ಮೇಡಂ ಪ್ರಯತ್ನಿಸುತ್ತೇನೆ’ ಅಂತ ಹೇಳಿ ಮಾತನ್ನು ಮುಗಿಸಲು ನೋಡಿದೆ.

ಕುತೂಹಲಕ್ಕೆ ’ವರನ ಮನೆಯ ಕಡೆಯಿಂದ ಏನೇನು ನಿರೀಕ್ಷೆಗಳಿರುತ್ತವೆ’ ಅಂತ ಕೇಳಿದೆ. ’ಅಂಥ ವಿಶೇಷಗಳೇನು ಇಲ್ಲ. ಹುಡುಗಿ ತಕ್ಕ ಮಟ್ಟಿಗೆ ಓದಿದ್ದರೆ ಸಾಕು. ಆದರೆ ಆಕೆ ಹುಟ್ಟಿನಿಂದ ಸಸ್ಯಾಹಾರಿ ಕುಟುಂಬದ ಹುಡುಗಿ ಆಗಿರಬೇಕು. ಮದುವೆಯ ನಂತರ ತನ್ನ ತವರಿನ ಜೊತೆಗಿರುವ ಎಲ್ಲ ಸಂಬಂಧಗಳನ್ನು ಕಡಿದುಕೊಳ್ಳಬೇಕು. ಅಕೆಯ ಮನೆಯವರು ವರನ ಮನೆಗೆ ಬರುವುದಾಗಲಿ ಅಥವಾ ಸಂಪರ್ಕ ಇಟ್ಟುಕೊಳ್ಳುವುದಾಗಲಿ ಮಾಡಬಾರದು. ಇವು ಸದ್ಯ ವರನ ಮನೆಯವರು ನಿರೀಕ್ಷಿಸುತ್ತಿರುವ ಅಗತ್ಯಗಳು’ ಎಂದರು. ಎರಡನೆಯ ಸಂಗತಿಯನ್ನು ಕೇಳಿ ನನಗೆ ಸಖೇದಾಶ್ಚರ್ಯವಾಯಿತು.

ಹೆಣ್ಣು ಮಕ್ಕಳ ಕೊರತೆಯಿರುವ ಬೇರೊಂದು ಜಾತಿಯ ಹೆಣ್ಣು ಮಕ್ಕಳನ್ನು ಮದುವೆಯಾಗಬೇಕಾದ ಪರಿಸ್ಥಿತಿಯಿರುವ ಜನರಿಗೂ ಇಷ್ಟೊಂದು ಕರಾರು ಮತ್ತು ಆಯ್ಕೆಗಳಿರುತ್ತವೆಯೇ? ಕೊಡುವವರಿಗೆ ಆಯ್ಕೆಗಳಿರುತ್ತವೆ. ಆದರೆ ಕೇಳುವವರಿಗೆ?

ಇನ್ನೊಂದು ಸೋಜಿಗದ ವಿಷಯವೆಂದರೆ ಹೀಗೆ ಮದುವೆಯಾಗಲು ಒಪ್ಪುವ ಹೆಣ್ಣು ತನ್ನ ತವರಿನ ಎಲ್ಲ ಸಂಬಂಧಗಳನ್ನು ಕಡಿದುಕೊಳ್ಳಬೇಕು. ತವರಿನ ಬಗೆಗೆ ಹೆಣ್ಣಿಗೆ ಇರುವ ವ್ಯಾಮೋಹ ಎಂಥದ್ದು ಅಂತ ಸಾವಿರಾರು ಸಿನೆಮಾ, ಜನಪದ ಹಾಡುಗಳು ಬಂದು ಹೋಗಿವೆ. ಹೆಣ್ಣಿಗೆ ಎಷ್ಟೇ ವಯಸ್ಸಾಗಿದ್ದರೂ ತವರು ಮನೆಗೆ ಹೊಗುವ ಸಂಭ್ರಮವನ್ನು ನೋಡಿಯೇ ತಿಳಿಯಬೇಕು. ಗಂಡಿಗೆ ತಿಳಿಯದ ಅವಿನಾಭಾವ ಕಳ್ಳುಬಳ್ಳಿಯ ಸಂಬಂಧ ಹೆಣ್ಣಿಗಿರುತ್ತದೆ. ಇಂಥ ಸಂಬಂಧವನ್ನು ನಿರಾಕರಿಸುವ ಸಂಬಂಧವನ್ನು ಯಾವ ಹೆಣ್ಣು ತಾನೇ ಒಪ್ಪಿಯಾಳು? ಅಸಹಾಯಕತೆಯಿಂದ ಒಂದು ವೇಳೆ ಒಪ್ಪಿದರೂ ಅದು ಎಂಥ ಅಮಾನವೀಯ ಮತ್ತು ಪೈಶಾಚಿಕ ಕೃತ್ಯ. ತನ್ನ ಮನೆಯನ್ನು ಬೆಳೆಗಲು ಬರುತ್ತಿರುವ ಹೆಣ್ಣಿಗೆ ಗಂಡಿನ ಮನೆಯವರು ನೀಡುವ ಉಡುಗೊರೆಯೇ ಇದು?

ಅಲ್ಲದೇ ಇಂದು ಪರಂಪರೆಯ ಈ ಸಮುದಾಯ ಜನರ ಮನಸ್ಸಿನಲ್ಲಿ ಬಿತ್ತಿರುವ ಜಾತಿಯ ವಿಷ ಬೀಜ ಹೆಮ್ಮರವಾಗಿ ಬೆಳೆದು ನಿಂತಿದೆ. ಪ್ರತಿ ಜಾತಿಯಲ್ಲಿಯೂ ಜಾತಿಪ್ರಜ್ಞೆ ಜಾಗೃತವಾಗಿದೆ. ಹಾಗಾಗಿ ಬೇರೆ ಜಾತಿಯ ಹೆಣ್ಣು ಅಥವಾ ಹೆತ್ತವರು ಇಂಥ ವಿವಾಹಗಳಿಗೆ ಬಿಲ್‌ಕುಲ್ ಒಪ್ಪುವುದಿಲ್ಲ. ಮಗಳನ್ನು ಬಡವನಿಗೆ ಕೊಟ್ಟಾರೂ ಆದ್ರೆ ಅನ್ಯ ಜಾತಿಯ (ಮೇಲ್ವರ್ಗದವನಾದರೂ ಕೂಡ) ಶ್ರೀಮಂತನಿಗೆ ನೀಡಲಾರರು. ಇಂಥ ತವರು ವಿಯೋಗದ ಸುದ್ದಿ ಕೇಳಿದರಂತೂ ಕೆಂಡಮಂಡಲವಾದಾರೂ. ತನ್ನ ಮನೆಯನ್ನು ಉರಿಸಿಕೊಂಡು ಬೇರೆಯವರಿಗೆ ಚಳಿಕಾಯಿಸಿ  ಕೊಳ್ಳಲು ಹೇಳುವಷ್ಟು ದಡ್ಡರಾರೂ ಇಲ್ಲ.

ಇಲ್ಲಿ ಹೆಣ್ಣುಗಳು ಸಿಗದೇ ಇರುವುದು ಎಲ್ಲರಿಗೂ ಅಲ್ಲ. ಕೆಲವು ನಿರ್ದಿಷ್ಟ ಕೆಲಸ ನಿರ್ವಹಿಸುವವರಿಗೆ ಮಾತ್ರ. ಅದು ಒಂದು ಕಾಲಕ್ಕೆ ಶ್ರೇಷ್ಠ ಮತ್ತು ಮೌಲಿಕ ಎಂದು ಕರೆಸಿಕೊಳ್ಳುವ ಪೌರೋಹಿತ್ಯ ಮಾಡುವ ಹುಡುಗನಿಗೆ. ಅಬಕ ಜಾತಿಯ ಹೆಣ್ಣು ಮಕ್ಕಳು ಎಷ್ಟು ಜಾಣರು ಎಂದರೆ ತಾವು ಎಷ್ಟೇ ಕಡಿಮೆ ಕಲಿತರೂ ಪರವಾಗಿಲ್ಲ. ಅವರಿಗೂ ಕುಡಿದ ನೀರು ಅಲುಗದ ’ಸಾಫ್ಟ್’ ಕೆಲಸದ ವರನೇ ಬೇಕು. ಇದರಿಂದಾಗಿ ಅಡುಗೆಭಟ್ಟರು, ಅಡಿಕೆ ಕೃಷಿಕರಾದ ವರರಿಗೆ ವಧುಗಳು ಲಭ್ಯವಿಲ್ಲ.

ಆಧುನಿಕತೆಗೆ ತೆರೆದುಕೊಂಡ ಸಮುದಾಯವೊಂದು ಮುಂಜಾಗ್ರತೆಯಿಲ್ಲದೇ ಮಾಡಿದ ಕೃತ್ಯದಿಂದ ಇಷ್ಟೆಲ್ಲ ಅನಾಹುತ. ಗಂಡು ಮಗುವಿನ ಆಸೆಯಿಂದ ಹೆಣ್ಣು ಮಗುವಿಗೆ ಜನ್ಮ ನೀಡದೇ ಇರುವುದೇ ಈ ರೀತಿಯ ಅಸಮತೋಲನಕ್ಕೆ ಕಾರಣ ಎನ್ನುತ್ತದೆ ಒಂದು ಪತ್ರಿಕಾ ವರದಿ. ಮಾಡಿದ್ದುಣ್ಣೋ ಮಹಾರಾಯ.

ಇಷ್ಟೆಲ್ಲ ಆಗಿ ವರ್ಣಸಂಕರ ಆದಮೇಲು ತಮ್ಮದೇ ಮೇಲೆ ಎನ್ನುವ ಹಮ್ಮು ಯಾಕೆ? ಜಟ್ಟಿ ಮಣ್ಣಿಗೆ ಬಿದ್ರೂ ಮೂಗು ಮೇಲೆ ಅಂದ ಹಾಗೆ. ಎಲ್ಲ ಮನುಷ್ಯರ ನಡುವೆ ಮಾನವ ಸಂಬಂಧವನ್ನು ಬೆಳೆಸುವುದೇ ದೊಡ್ಡತನ ಅಲ್ಲವೇ? ಒಂದು ವೇಳೆ ಹೆಣ್ಣಿನ ಮನೆಯವರು ವರನು ಬೇರೆ ಮನೆ ಮಾಡಲಿ ನಾವು ಹೆಣ್ಣು ಕೊಡುತ್ತೇವೆ ಎಂದು ಅಹವಾಲು ಇಟ್ಟರೆ?

ಇಷ್ಟಲ್ಲದೇ ಹತ್ತು ಹಲವು ಸಂಗತಿಗಳು ಈ ವಿಷಯದ ಜೊತೆಗೆ ತಳುಕು ಹಾಕಿಕೊಂಡಿವೆ. ಇಲ್ಲಿ ಅವುಗಳನ್ನು ಪ್ರಸ್ತಾಪಿಸಿದರೆ ನನ್ನ ಮೇಲೆಯೇ ವೈಯಕ್ತಿಕವಾಗಿ ಹರಿಹಾಯುವ ಸಾಧ್ಯತೆ ಇರುವುದರಿಂದ ಯಾವುದೇ ಜಾತಿಯ ಅಥವಾ ಸಂದರ್ಭವನ್ನು ನೇರವಾಗಿ ಹೇಳಲು ಸಾಧ್ಯವಾಗಿಲ್ಲ. ವಿಷಯಗಳಲ್ಲಿ ತುಸು ಬದಲಾವಣೆಯಿರುವ ಪ್ರಸಂಗಗಳನ್ನು ನೀವು ಕೇಳಿರಬಹುದು ಇಲ್ಲವೇ ನೋಡಿರಬಹುದು. ನಮ್ಮೊಡನೆ ಹಂಚಿಕೊಳ್ಳಿ. ನನ್ನದೇ ಸೀಮಿತ ಜ್ಞಾನದ ಆಲೋಚನೆ ಎನಿಸಿದಲ್ಲಿ ಕ್ಷಮೆಯಿರಲಿ.

***************

minartravels.wordpress.com

33 ಟಿಪ್ಪಣಿಗಳು Post a comment
  1. Kumar's avatar
    Kumar
    ಡಿಸೆ 16 2011

    ಅಸಹಜವಾದ, ಅವೈಜ್ಞಾನಿಕವಾದ ಕುಟುಂಬ ಯೋಜನೆಯನ್ನು ಪಾಲಿಸುತ್ತಿರುವುದರ ಫಲವೇ
    ಇಂದು ನಾವು ಕಾಣುತ್ತಿರುವ ಅಸಮತೋಲನ.
    ಜಗತ್ತಿನ ಬೇರಾವ ದೇಶದವರೂ ಪಾಲಿಸದ ಕುಟುಂಬ ಯೋಜನೆ ನಮಗೇತಕ್ಕೆ?
    ಮತ್ತು ಈ ಯೋಜನೆಯ ಗಾಳಕ್ಕೆ ಬಿದ್ದಿರುವುದು ಹಿಂದು ಸಮಾಜ ಮಾತ್ರ – ಉಳಿದ ಸಮಾಜಗಳು ತಮ್ಮ ಸಂಖ್ಯೆ ಹೆಚ್ಚು ಮಾಡಿಕೊಳ್ಳುವುದರಲ್ಲೇ ಆಸಕ್ತಿ ತೋರಿಸುತ್ತಿವೆ.
    ಇದು ಹೀಗೇ ಮುಂದುವರೆದರೆ, ಹಿಂದು ಸಮಾಜಕ್ಕೆ ದೊಡ್ಡ ಗಂಡಾಂತರವೇ ಕಾದಿದೆ.

    ಉತ್ತರ
    • ಹೇಮ ಪವಾರ್'s avatar
      ಡಿಸೆ 16 2011

      ಯಾರ್ರೀ ಹೇಳಿದ್ದು ನಿಮಗೆ ಬೇರೆ ದೇಶದವರು ಕುಟುಂಬ ಯೋಜನೆ ಪಾಲಿಸುವುದಿಲ್ಲ ಅಂತ. ಅಲ್ಲದೇ ಕುಟುಂಬ ಯೋಜನೆ ಕೇವಲ ಹಿಂದುಗಳಿಗೆಂದು ಸರಕಾರ ನಿಯಮಿಸಿಲ್ಲ, ಎಲ್ಲ ಮತಧರ್ಮಭಾರತೀಯರಿಗೂ ಸಮಾನವಾಗಿ ಅನ್ವಯವಾಗುತ್ತದೆ. ಜನಸಂಖ್ಯೆಯನ್ನು ನಿಯಂತ್ರಿಸುವುದು ಅತಿಮುಖ್ಯವಾಗಿ ಮಾಡಬೇಕಾದ ಕೆಲಸ, ತಿಳಿಗೇಡಿಗಳಾಗಿ ಹೆಣ್ಣುಭ್ರೂಣ ಹತ್ಯೆ ಮಾಡಿಕೊಂಡದ್ದರ ಪರಿಣಾಮ ಇಲ್ಲಿ ಉಲ್ಲೇಖಿಸಿರುವುದು, ಇದಕ್ಕೂ ಕುಟುಂಬಯೋಜನೆಗು ತಳಕುಹಾಕಲು ಬರದು. ಹಿಂದೂ ಸಮಾಜವಷ್ಟೇ ಅಲ್ಲ ಯಾವ ಸಮಾಜವಾದರೂ ತಿನ್ನುವ ಬಾಯ್ಗಳು ಹೆಚ್ಚಿದರೆ ಸಂಪನ್ಮೂಲ ಕೊರತೆಯಿಂದಾಗಿ ಪ್ರಕೃತಿಯೇ ಜನಸಂಖ್ಯೆಯನ್ನು ಕಡಿಮೆಮಾಡುವಲ್ಲಿ ಮುಂದಾಗುತ್ತದೆ ತಿಳಿದಿರಲಿ. ಹಿಂದೂಗಳು ಅಥವಾ ಬೇರ್ಯಾವ ಧರ್ಮೀಯರು ಕಡಿಮೆಯಾದರೂ ಗಂಡಾಂತರ ಬರುಲ್ಲ, ಹೆಣ್ಣಿಲ್ಲದೇ ಗಂಡುಗಳಷ್ಟೇ ಉಳಿದರೆ ಗಂಡಾಂತರ ಬರುವುದು 🙂 ಗೇ ಮದುವೆ ಈಗ ಲೀಗಲೈಸ್ ಆಗಿರುವುದು ಆಗ ಕಂಪಲ್ಸಶನ್ ಆದೀತು ಎಚ್ಚರಾಗಿ, ಇನ್ನಾದರೂ ಹಿಂದೂ ಹುಡುಗಿ, ಬ್ರಾಹ್ಮಣ ಜಾತಿಯವಳೇ ಬೇಕು ಎಂಬ ಕಂಡೀಶನ್ ಗಳನ್ನು ಬಿಟ್ಟುಕೊಟ್ಟು, ಮಾನವೀಯತೆ ಇರುವ ಎಲ್ಲರೂ ಮನುಷ್ಯರೇ ಮತ್ತು ಎಲ್ಲರೂ ಸಮಾನ ಮನುಷ್ಯರೆಂದು ಒಪ್ಪಿಕೊಳ್ಳುವತ್ತ ಹೆಜ್ಜೆ ಹಾಕಬೇಕು.

      ಉತ್ತರ
      • Kumar's avatar
        Kumar
        ಡಿಸೆ 19 2011

        > ಯಾರ್ರೀ ಹೇಳಿದ್ದು ನಿಮಗೆ ಬೇರೆ ದೇಶದವರು ಕುಟುಂಬ ಯೋಜನೆ ಪಾಲಿಸುವುದಿಲ್ಲ ಅಂತ.
        ಹೇಳಿ, ಯಾವ ಯಾವ ದೇಶದವರು (ಭಾರತ ಮತ್ತು ಚೈನಾ ಬಿಟ್ಟೂ) ಕುಟುಂಬ ಯೋಜನೆ ಪಾಲಿಸುತ್ತಿದ್ದಾರೆ ಎಂದು?

        > ಇದಕ್ಕೂ ಕುಟುಂಬಯೋಜನೆಗು ತಳಕುಹಾಕಲು ಬರದು
        ಅದು ನಿಮ್ಮ ಭಾವನೆಯಷ್ಟೆ. ಸಮಸ್ಯೆಯ ವಿವಿಧ ಮಜಲುಗಳನ್ನು ತಿಳಿಯದೆ, ಸಮಸ್ಯೆಗೆ ಪರಿಹಾರ ಹುಡುಕಲು ಸಾಧ್ಯವಿಲ್ಲ.

        > ಹಿಂದೂ ಸಮಾಜವಷ್ಟೇ ಅಲ್ಲ ಯಾವ ಸಮಾಜವಾದರೂ ತಿನ್ನುವ ಬಾಯ್ಗಳು ಹೆಚ್ಚಿದರೆ ಸಂಪನ್ಮೂಲ ಕೊರತೆಯಿಂದಾಗಿ
        > ಪ್ರಕೃತಿಯೇ ಜನಸಂಖ್ಯೆಯನ್ನು ಕಡಿಮೆಮಾಡುವಲ್ಲಿ ಮುಂದಾಗುತ್ತದೆ ತಿಳಿದಿರಲಿ
        ತಿನ್ನುವ ಬಾಯ್ಗಳು ಹೆಚ್ಚಾಗುವುದನ್ನಷ್ಟೇ ಏಕೆ ನೋಡುತ್ತೀರಿ – ಒಂದು ಬಾಯಿಯ ಜೊತೆ ಎರಡು ಕೆಲಸ ಮಾಡುವ ಕೈಗಳೂ ಹೆಚ್ಚಾಗುವುದನ್ನು ಗಮನಿಸಿ.
        ಪ್ರಕೃತಿಯೇ ಪರಿಹಾರ ಹುಡುಕುವಾಗ, ನಾವೇಕೆ “ಒಂದೇ ಮಗು ಸಾಕು” ಎಂದು ಕೂಗಾಡಬೇಕು?

        > ಹಿಂದೂಗಳು ಅಥವಾ ಬೇರ್ಯಾವ ಧರ್ಮೀಯರು ಕಡಿಮೆಯಾದರೂ ಗಂಡಾಂತರ ಬರುಲ್ಲ
        ಹಿಂದುಗಳ ಸಂಖ್ಯೆ ಕಡಿಮೆಯಾದ ಆಫ಼್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶಗಳು ನಮ್ಮಿಂದ ಪ್ರತ್ಯೇಕವಾಗಿವೆ.
        ಹಿಂದುಗಳ ಸಂಖ್ಯೆ ಕಡಿಮೆಯಾಗಿದ್ದರಿಂದ ಕಾಶ್ಮೀರವು ಹತ್ತಿ ಉರಿಯುತ್ತಿದೆ. ಸಮಸ್ಯೆ ನಿಮ್ಮ ಊರಿಗಿನ್ನೂ ಬಂದಿಲ್ಲ ಅಷ್ಟೆ.
        ಭಾರತಕ್ಕೆ ಗಂಡಾಂತರ ಬರುತ್ತಿರುವುದೇ ಹಿಂದುಗಳ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ.

        ಉತ್ತರ
        • Ananda Prasad's avatar
          Ananda Prasad
          ಡಿಸೆ 19 2011

          ಭಾರತ, ಚೀನಾ ಮಾತ್ರವಲ್ಲದೆ ಹಲವು ದೇಶಗಳು ಕುಟುಂಬ ಯೋಜನೆ ಪಾಲಿಸುತ್ತಿವೆ. ಉದಾಹರಣೆಗೆ ಇರಾನ್, ಹಾಂಗ್ಕಾಂಗ್, ಅಮೆರಿಕ (ಯು.ಎಸ್. ಎ). ಯೂರೋಪಿನ ಹಲವು ದೇಶಗಳಲ್ಲಿ ಜನಸಂಖ್ಯೆ ನಿಯಂತ್ರಣದಲ್ಲಿರುವುದು ಕುಟುಂಬ ಯೋಜನೆ ಪಾಲಿಸಿದುದರಿಂದಲೇ ಹೊರತು ಬೇರೆ ಕಾರಣದಿಂದ ಅಲ್ಲ. ತಿನ್ನುವ ಬಾಯಿ ಹೆಚ್ಚಿದಂತೆ ದುಡಿಯುವ ಕೈಗಳೂ ಹೆಚ್ಚುತ್ತವೆ ಎಂಬುದು ಜನಸಂಖ್ಯೆ ಹೆಚ್ಚಿಸಲು ಸಕಾರಣವಾಗಲಾರದು. ವಿಷಯ ಅದಲ್ಲ, ಜನಸಂಖ್ಯೆ ಹೆಚ್ಚಿಂದಂತೆ ಭೂಮಿಯ ಪ್ರಮಾಣ ಹೆಚ್ಚುವುದಿಲ್ಲ ಹಾಗೂ ಪ್ರಾಕೃತಿಕ ಸಂಪನ್ಮೂಲಗಳ ಕೊರತೆ ಉಂಟಾಗುತ್ತದೆ ಹಾಗೂ ಮಾನವರ ಅವಶ್ಯಕತೆ ನೀಗಿಸಲು ಪ್ರಕೃತಿಯ ಮಾಲಿನ್ಯ ಮೇರೆ ಮೀರುತ್ತದೆ. ಈ ಕಾರಣದಿಂದಾಗಿ ಜನಸಂಖ್ಯೆ ನಿಯಂತ್ರಿಸಬೇಕಾದ ಅಗತ್ಯ ಇದೆ. ಹಿಂದೂಗಳ ಸಂಖ್ಯೆ ಕಡಿಮೆಯಾದದ್ದರಿಂದ ಪಾಕಿಸ್ಥಾನ, ಬಾಂಗ್ಲಾದೇಶಗಳು ನಮ್ಮಿಂದ ಬೇರೆಯಾದದ್ದಲ್ಲ, ಅದಕ್ಕೆ ಚಾರಿತ್ರಿಕ ಕಾರಣಗಳಿವೆ.

          ಉತ್ತರ
          • Kumar's avatar
            Kumar
            ಡಿಸೆ 19 2011

            > ಉದಾಹರಣೆಗೆ ಇರಾನ್, ಹಾಂಗ್ಕಾಂಗ್, ಅಮೆರಿಕ (ಯು.ಎಸ್. ಎ). ಯೂರೋಪಿನ ಹಲವು ದೇಶಗಳಲ್ಲಿ
            > ಜನಸಂಖ್ಯೆ ನಿಯಂತ್ರಣದಲ್ಲಿರುವುದು ಕುಟುಂಬ ಯೋಜನೆ ಪಾಲಿಸಿದುದರಿಂದಲೇ
            ನೀವು ತಿಳಿಸಿದ ಯಾವ ದೇಶಗಳಲ್ಲೂ ಕುಟುಂಬ ಯೋಜನೆ ಜಾರಿಯಲ್ಲಿಲ್ಲ.
            ಹಾಗೆ ನೋಡಿದರೆ, ಯೂರೋಪಿನ ಅನೇಕ ದೇಶಗಳಲ್ಲಿ ಹೆಚ್ಚು ಮಕ್ಕಳು ಹುಟ್ಟಿದಂತೆಲ್ಲ, ಹೆಚ್ಚೆಚ್ಚು ಸೌಲಭ್ಯಗಳನ್ನು ನೀಡಲಾಗುತ್ತದೆ.
            ಜನಸಂಖ್ಯೆ ಹೆಚ್ಚಿಸಲು ಉತ್ತೇಜನವಿದೆ – ಅಮೆರಿಕದ ಹೆಚ್ಚಿನ ಕುಟುಂಬಗಳಲ್ಲಿ ನಾಲ್ಕು ಇಲ್ಲವೇ ಐದು ಮಕ್ಕಳಿರುವುದು ಸಾಮಾನ್ಯ.

            > ಪ್ರಾಕೃತಿಕ ಸಂಪನ್ಮೂಲಗಳ ಕೊರತೆ ಉಂಟಾಗುತ್ತದೆ
            ಮನುಷ್ಯನ ಜನಸಂಖ್ಯೆಗಿಂತ ಎಷ್ಟೋ ಪಟ್ಟು ಹೆಚ್ಚು ಇತರ ಪ್ರಾಣಿಗಳ ಸಂಖ್ಯೆ ಇದೆ.
            ಇದರಿಂದ ಸೃಷ್ಟಿಯಲ್ಲಿ ಏರುಪೇರು ಆಗಿಲ್ಲ – ಪ್ರಕೃತಿಗೆ ಇದನ್ನು ತೂಗಿಕೊಳ್ಳುವ ಸಾಮರ್ಥ್ಯವಿದೆ.
            ಪ್ರಕೃತಿಗೆ ತನ್ನನ್ನು ತೂಗಿಸಿಕೊಳ್ಳಲು ಮನುಷ್ಯನ ಸಹಾಯ ಬೇಕೆಂದು ಯಾರಾದರು ತಿಳಿದರೆ, ಅವರಿಗೆ ಪ್ರಕೃತಿಯ ಸಾಮರ್ಥ್ಯದ ತಿಳುವಳಿಕೆ ಇಲ್ಲವೆಂದೇ ಹೇಳಬೇಕಾಗುತ್ತದೆ.

            > ಹಿಂದೂಗಳ ಸಂಖ್ಯೆ ಕಡಿಮೆಯಾದದ್ದರಿಂದ ಪಾಕಿಸ್ಥಾನ, ಬಾಂಗ್ಲಾದೇಶಗಳು ನಮ್ಮಿಂದ ಬೇರೆಯಾದದ್ದಲ್ಲ
            ಹಿಂದುಗಳ ಸಂಖ್ಯೆ ಹೆಚ್ಚಾಗಿದ್ದ ಭಾಗಗಳು ಭಾರತದಲ್ಲೇ ಉಳಿದಿರುವುದು ನಮ್ಮ ಕಣ್ಣ ಮುಂದೆಯೇ ಇದೆ.
            ಮತ್ತು ಹಿಂದುಗಳ ಸಂಖ್ಯೆ ಕಡಿಮೆಯಾದ ಕಾಶ್ಮೀರದ ಸಮಸ್ಯೆಯೂ ನಾವು ನೋಡುತ್ತಿದ್ದೇವೆ.
            ಕೇವಲ ಕಾಶ್ಮೀರವೇಕೆ, ಕರ್ನಾಟಕದ ಭಟ್ಕಳವನ್ನೇ ನೋಡಿ – ಹಿಂದುಗಳ ಸಂಖ್ಯೆ ಕಡಿಮೆಯಿರುವುದರಿಂದಲೇ ಅಲ್ಲಿ ಸಮಸ್ಯೆ ಇರುವುದು.
            ಹಿಂದುಗಳ ಸಂಖ್ಯೆ ಕಡಿಮೆಯಾಗಿರುವ ಪೂರ್ವಭಾರತದಲ್ಲೂ ಪ್ರತ್ಯೇಕತಾವಾದದ ಕೂಗು ಹೆಚ್ಚಿರುವುದು ಕಾಣುತ್ತಲೇ ಇದೆ.

            ಉತ್ತರ
            • Ananda Prasad's avatar
              Ananda Prasad
              ಡಿಸೆ 19 2011

              ಯುರೋಪ್ ದೇಶಗಳಲ್ಲಿ ಹಾಗೂ ಅಮೆರಿಕಾಗಳಲ್ಲಿ ಕುಟುಂಬ ಯೋಜನೆ ಇಲ್ಲದಿದ್ದರೆ ಅವರ ಜನಸಂಖ್ಯೆ ನಮ್ಮ ಜನಸಂಖ್ಯೆಗಿಂತ ಹೆಚ್ಚಾಗಿರಬೇಕಗಿತ್ತಲ್ಲವೇ? ಆದರೆ ಭಾರತಕ್ಕಿಂತ ದೊಡ್ಡ ದೇಶವಾಗಿರುವ ಅಮೇರಿಕಾದಲ್ಲಿ ಜನಸಂಖ್ಯೆ ೩೦ ಕೋಟಿ ಆಸುಪಾಸು ಇದೆಯಷ್ಟೇ. ಅಲ್ಲಿ ಜನಸಂಖ್ಯೆಯನ್ನು ನಿಯಂತ್ರಿಸಲಾಗಿದೆ ಮಾತ್ರವಲ್ಲ ಈಗೀಗ ಅಲ್ಲಿ ವೃದ್ಧರ ಸಂಖ್ಯೆ ಹೆಚ್ಚುತ್ತಿರುವುದರಿಂದ ಹೆಚ್ಚು ಮಕ್ಕಳನ್ನು ಹುಟ್ಟಿಸಲು ಪ್ರೋತ್ಸಾಹ ಕೊಡಲಾಗುತ್ತಿರಬಹುದು. ಪ್ರಾಣಿಗಳ ಸಂಖ್ಯೆ ಮನುಷ್ಯರ ಸಂಖ್ಯೆಗಿಂತ ಹೆಚ್ಚಾಗಿದೆ ನಿಜ ಆದರೆ ಪ್ರಾಣಿಗಳ ಸಂಖ್ಯೆ ಯಾವತ್ತೂ ಈ ಭೂಮಿಯಲ್ಲಿ ಎಂದೆಂದೂ ಹೆಚ್ಚಾಗಿಯೇ ಇತ್ತು ಮತ್ತು ಅವುಗಳ ಸಂಖ್ಯೆ ನಿಸರ್ಗ ನಿಯಮಗಳಿಗೆ ಅನುಗುಣವಾಗಿ ನಿಯಂತ್ರಿತವಾಗುತ್ತಿದೆ. ಮಾನವನ ವಿಷಯದಲ್ಲಿ ಹಾಗಾಗುತ್ತಿಲ್ಲ. ವೈದ್ಯಕೀಯ ಸೌಲಭ್ಯದಿಂದಾಗಿ ಮಾನವರ ಆಯಸ್ಸು ಹೆಚ್ಚಾಗಿದೆ ಹಾಗೂ ಸಾವಿನ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಭಾರತಂದಂಥ ಜನನಿಬಿಡ ದೇಶದಲ್ಲಿ ಕುಟುಂಬ ಯೋಜನೆ ಅನಿವಾರ್ಯ. ಇದು ಎಲ್ಲಿಯವರೆಗೆ ಅನಿವಾರ್ಯ ಎಂದರೆ ಜನಸಂಖ್ಯೆ ನಿಯಂತ್ರಣಕ್ಕೆ ಬರುವಲ್ಲಿವರೆಗೆ. ಪ್ರಕೃತಿ ತನ್ನನ್ನು ತಾನು ನಿಯಂತ್ರಿಸಿಕೊಳ್ಳಲು ಶಕ್ಯವಿದ್ದರೆ ಈಗ ಉಂಟಾಗುತ್ತಿರುವ ಭೂ ತಾಪಮಾನ ಹೆಚ್ಚಳದ ಬಗ್ಗೆ ಯಾಕೆ ಜಗತ್ತಿನಾದ್ಯಂತ ಕಳವಳ ವ್ಯಕ್ತವಾಗುತ್ತಿದೆ? ಇದು ಮಾನವ ಚಟುವಟಿಕೆಯಿಂದಲ್ಲವೇ ಹೆಚ್ಚುತ್ತಿರುವುದು? ಪಾಕಿಸ್ಥಾನ ವಿಭಜನೆ ಆದದ್ದು ಮುಸ್ಲಿಮರ ಸಂಖ್ಯೆ ಹೆಚ್ಚಾಗಿದ್ದ ಕಾರಣದಿಂದ ಅಲ್ಲ, ಮುಸ್ಲಿಮರಿಗೆ ಹಿಂದೂಗಳ ಅಡಿಯ ಆಡಳಿತ ಬೇಡ, ಪ್ರತ್ಯೇಕ ಆಡಳಿತ ಬೇಕು ಎಂದು ಅವರು ರಚ್ಚೆ ಹಿಡಿದದ್ದರಿಂದ ಅಲ್ಲವೇ? ಕೆಲವು ಇತಿಹಾಸಿಕ ಕಾರಣಗಳಿಂದ ನಮ್ಮ ದೇಶದ ಕೆಲವು ಭಾಗಗಳಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚು ಇದೆಯೇ ಹೊರತು ಈಗ ಆದ ಹೆಚ್ಚಳ ಅದಲ್ಲ. ಹೀಗಾಗಿ ಮುಸ್ಲಿಮರು ಹೆಚ್ಚಾಗಿದ್ದಾರೆ ಎಂದು ಹಿಂದುಗಳೂ ಸಂಖ್ಯೆಯಲ್ಲಿ ಹೆಚ್ಚಳ ಮಾಡಿ ರಾಷ್ಟ್ರದ ಸಮಸ್ಯೆಯನ್ನು ಹೆಚ್ಚು ಮಾಡುವುದು ವಿವೇಕವಾಗುತ್ತದೆಯೇ?

              ಉತ್ತರ
        • ಹೇಮ ಪವಾರ್'s avatar
          ಡಿಸೆ 19 2011

          ಭಾರತ, ಪಾಕಿಸ್ತಾನ, ನೈಜೀರಿಯ, ಬಾಂಗ್ಲಾದೇಶ, ಉಗಾಂಡ, ಅಮೇರಿಕ, ಇತಿಯೋಪಿಯ, ಚೈನಾ ಮುಂತಾದ ರಾಷ್ಟ್ರಗಳು ಜನಸಂಖ್ಯೆ ನಿಯಂತ್ರಣ ಕ್ರಮಗಳನ್ನನುಸರಿಸುತ್ತಿವೆ. ಹೆಚ್ಚಿನ ಮಾಹಿತಿಗೆ ನೀವು ವಿಕಿಪಿಡಿಯಾ ನೋಡಬಹುದು. ಸಮಸ್ಯೆಯ ವಿವಿಧ ಮಜಲುಗಳನ್ನು ನೋಡಬೇಕೆನ್ನುವ ನೀವೆ, ಸಮಸ್ಯೆ ಇದರಿಂದಲೇ ಎಂದು ಜನರಲೈಸ್ ಮಾಡಿ ಹೇಳಿರುವುದು ಗಮನಿಸಿ.

          ಜನಸಂಖ್ಯೆ ಹೆಚ್ಚಾದರೆ ಸಂಪನ್ಮೂಲ ಹೆಚ್ಚು ಬಳಕೆಯಾಗುತ್ತದೆ. ಬಳಕೆಯಾದಷ್ಟೇ ಪ್ರಮಾಣದಲ್ಲಿ ನೀವು ಹೆಸರಿಸಿದ ‘ದುಡಿಯುವ ಕೈಗಳು’ ಮತ್ತೆ ಬೆಳೆಯಲಾರವು. ಇದು ಬೇಸಿಕ್ ಮಾಹಿತಿ. ಪ್ರಕೃತಿ ಪರಿಹಾರ ಹುಡುಕುತ್ತದೆ ಎಂದು ನಾನು ಹೇಳಿಲ್ಲ, ಸಂಪನ್ಮೂಲ ಅಸಮತೋಲನ ಭರಿಸಲಾಗದೆ ಪ್ರಕೃತಿ ವಿಕೋಪಗಳುಂಟಾಗಿ ಜನ ಸಾಯುತ್ತಾರೆ. ಇದು ಪರಿಹಾರವಲ್ಲ, ಜನಸಂಖ್ಯೆ ಹೆಚ್ಚಾದ್ದರಿಂದ ಉಂಟಾಗುವ ಪರಿಣಾಮ. ಜನ ಸತ್ತರೆ ಸಾಯಲಿ ಬಿಡಿ, ಮತ್ತೂ ಹುಟ್ಟಿಸುತ್ತೇವೆ ಎಂಬುದು ನಿಮ್ಮಭಿಪ್ರಾಯವಾದರೆ, ನಾನು ಮಾತು ಬೆಳೆಸಲಿಚ್ಛಿಸುವುದಿಲ್ಲ.

          ಇನ್ನೂ ಹಿಂದುಗಳ ಸಂಖ್ಯೆ ಕಡಿಮೆಯಾಗುವುದರ ಬಗ್ಗೆ ನಿಮ್ಮ ಮಾತುಗಳು ನಿಜಕ್ಕೂ ನಗು ತರಿಸಿದವು. ಹಿಂದು-ಮುಸ್ಲಿಮ್ ದಂಪತಿಗೆ ಹುಟ್ಟಿದ ಮಗುವನ್ನು ನೀವು ಯಾವ ಧರ್ಮದವನು ಎಂದು ಗುರುತಿಸುತ್ತೀರಿ? ಕಾಶ್ಮೀರದಲ್ಲಿರುವ ಮುಸ್ಲೀಮರನ್ನೆಲ್ಲ ಓಡಿಸಿ ಹಿಂದುಗಳನ್ನು ಪ್ರತಿಷ್ಟಾಪಿಸಿಬಿಟ್ಟರೆ ಸಮಸ್ಯೆಯೇ ಇರುವುದಿಲ್ಲ ಎಂಬುದು ನಿಮ್ಮ ಮಾತುಗಳಲ್ಲಿ ಧ್ವನಿಸುತ್ತಿದೆ. ನಮ್ಮ ದೇಶದ ಹಿಂದುಗಳು ಸುಖವಾಗಿದ್ದರೆ ಸಾಕು ಬೇರೆಯವರ ಕಷ್ಟ ನಮಗೇಕೆ ಎಂದುಕೊಂಡರೆ ನಿಮಗೊಂದು ಮಾತು, ಭಾರತ ಬರೀ ಹಿಂದೂಗಳದ್ದಷ್ಟೇ ಅಲ್ಲ, ಎಲ್ಲ ಧರ್ಮಗಳನ್ನು, ಜಾತಿಗಳನ್ನು ಒಂದೇ ಎಂದು ಭಾವಿಸುವ ಎಲ್ಲರಿಗೂ ಸಮಾನ ಹಕ್ಕನ್ನು ಕಲ್ಪಿಸಿಕೊಟ್ಟು ಮಾದರಿಯಾಗಿರುವ ದೇಶ.

          ನನ್ನೂರಿಗೆ ಸಮಸ್ಯೆ ಇನ್ನು ಕಾಲಿಡದೇ ಇರಬಹುದು, ಆದರೆ ನಿಮ್ಮದೇ ರೀತಿಯ ಮನಸ್ಥಿತಿಯ ಜನರಿರುವಾಗ ಇಂತಹ ಸಮಸ್ಯೆ ನನ್ನೂರಿಗೂ ಕಾಲಿಡುವ ದಿನ ದೂರವಿಲ್ಲವೆಂದು ಮನವರಿಕೆಯಾಗುತ್ತಿದೆ.

          ಉತ್ತರ
  2. Kumar's avatar
    Kumar
    ಡಿಸೆ 16 2011

    Good Analysis.

    ಉತ್ತರ
  3. ಅರವಿಂದ್'s avatar
    ಡಿಸೆ 16 2011

    ಸಾತ್ವಿಕ್,

    ಈಗಿನ ಕಾಲದ ಹೆಣ್ಣುಮಕ್ಕಳ, ಅದರಲ್ಲೂ ಅವರ ತಂದೆತಾಯಿಗಳ ಆಲೋಚನೆಯ ಬಗ್ಗೆ, ನನ್ನದೇ ಒಂದು ಸ್ವಾನುಭವ ನೆನಪಾಯ್ತು. ನನ್ನ ಭಾವಮ್ಯೆದುನನಿಗೆ ಕೆಲವು ದಿನಗಳ ಹಿಂದೆ ವಿವಾಹ ಸಂಘದ ಏಜೆಂಟರಿಂದ ಒಂದು ಹುಡುಗಿ ನೋಡಿದೆವು, ಮಾತುಕತೆಗೆ ಅಂತ ನಾನು ನನ್ನ ಮಡದಿ ಮತ್ತು ಕೆಲವು ಹಿರಿಯರು ಅವರ ಮನೆಗೆ ಹೋಗಿದ್ದೆವು. ಜಾತಕ ಮೊದಲೇ ಹೊಂದಿದ್ದರಿಂದ ಆ ವಿಚಾರವಾಗಿ ಹೆಚ್ಛಿನ ಚರ್ಚೆ ಇರಲಿಲ್ಲ. ಮಾತು ಹೀಗೆ ಮುಂದುವರೆಯುತಲೇ…. ಹುಡುಗಿಯ ತಾಯಿ ಕೇಳಿದ್ದು ಏನು ಗೊತ್ತಾ ? ಹುಡುಗನಿಗೆ ತಂದೆ ತಾಯಿ ಇದ್ದಾರ ಅಂತ ? ಆಶ್ಚರ್ಯವಾಗಿ……. ನಮ್ಮ ಹುಡುಗ ಉದ್ಭವಮೂರ್ತಿಯಲ್ಲ ಮೇಡಂ ಅಂದೆ. ಹಾಗಲ್ಲ ತಂದೆ ತಾಯಿ ಇರೋ ಹುಡುಗ ನಮಗೆ ಅಷ್ಟು ಸರಿ ಹೋಗಲ್ಲ, ಅಂದ್ಳು ಆ ಮಹಾತಾಯಿ…..

    ಸರಿ ಹಾಗಾದ್ರೆ, ಅವರಿಗೆ ವಿಷ ಹಾಕಿ ಸಾಯ್ಸಿ ಬಿಡ್ತಿವಿ… ನಿಮ್ಮ ಹುಡುಗಿ ನಮಗೆ ಓಕೆ ಅಂದೆ :-), ಆಕೆ ಮರುಮಾತಾಡಲಿಲ್ಲ. ಅಲ್ಲಿಗೆ ಆಕೆಯನ್ನು ಚರ್ಚೆಯಿಂದ ಹೊರಹಾಕಿದ್ದಾಯಿತು. ಆ ಹುಡುಗಿಯ ಬಗ್ಗೆ ಮುಂದೆ ಮಾತಾಡುವ ಗೊಡವೆಗೂ ಹೋಗಲಿಲ್ಲ. ಬಿಡಿ.

    ಅರವಿಂದ್

    ಉತ್ತರ
  4. ಗಿರೀಶ್'s avatar
    ಗಿರೀಶ್
    ಡಿಸೆ 16 2011

    ಹರ್ಯಾಣ ಪಂಜಾಬ್ ಮತ್ತು ಗುಜರಾತ್ ರಾಜ್ಯಗಳಲ್ಲಿ ಈಗಾಗಲೆ ಈ ಪ್ರಕ್ರಿಯೆ ಆರಂಭಾವಾಗಿದೆ. ಅಲ್ಲಿನ ಬುಡಕಟ್ಟು ಜನಾಂಗಕ್ಕೆ ಸೇರಿದ ಹುಡುಗಿಯರನ್ನು ಮದುವೆ ಮಾಡಿಕೊಳ್ಳುವ ಮುನ್ನ ಕಾರಾರು ಮಾಡಿ ಕೊಳ್ಳಲಾಗುತ್ತಿದೆ ವಧುದಕ್ಷಿಣೆ ಕೊಟ್ಟನ್ನು ಹೆಣ್ಣನ್ನು ಶಾಶ್ವತವಾಗಿ ಆ ಮನೆಯಿಂದ ಕರೆತರಲಾಗುತ್ತದೆ. ಏಕೆಂದರೆ ಈ ರಾಜ್ಯಗಳಲ್ಲಿ ಹೆಣ್ಣು ಗಂಡಿನ ಜನನ ಅನುಪಾತ ತುಂಬಾ ಕೆಟ್ಟದಾಗಿದೆ.

    ಉತ್ತರ
  5. Balachandra's avatar
    Balachandra
    ಡಿಸೆ 16 2011

    ನೀವು ಹೇಳಿದ ವಿಷಯದಲ್ಲಿ ನನಗೆ ಯಾವುದೇ ಸಮಸ್ಯೆಯೇ ಇದ್ದಂತೆ ಕಾಣಿಸುತ್ತಿಲ್ಲ. ವರನ ಕಡೆಯವರಿಗಾಗಲೀ ಅಥವಾ ವಧುವಿನ ಕಡೆಯವರಿಗಾಗಲೀ ಬೇಕಾದಷ್ಟು ಧೂರ್ತ ಆಸೆ ಆಲೋಚನೆ ಇರಬಹುದು. ಹಾಗೆಂದ ಮಾತ್ರಕ್ಕೆ ಇನ್ನೊಂದು ಕಡೆಯವರು ಒಪ್ಪಿಕೊಳ್ಳಬೇಕೆಂದಿಲ್ಲವಲ್ಲ. ಇಲ್ಲಿ ನೀವು ಹೇಳಿದ ವಿಷಯದಲ್ಲಿ ವಧುವಿನ ಕಡೆಯವರು ಒಪ್ಪಿಕೊಳ್ಳದಿದ್ದರೆ ಆಯ್ತು ಅಷ್ಟೇ. ಅಲ್ಲಿ ಸಮಸ್ಯೆಯೇ ಇರುವದಿಲ್ಲ. ಒಪ್ಪಿಕೊಳ್ಳಬೇಕು ಎಂದು ಯಾರೂ ಒತ್ತಾಯ ಕೂಡ ಮಾಡಲಾರರು. ಸುಮ್ನೆ ನೀವ್ಯಾಕೆ ಇಷ್ಟುದ್ದ ಬರೆಯುವ ಶ್ರಮ ತಗೊಂಡ್ರಿ ಅಂತ ಗೊತ್ತಾಗ್ಲಿಲ್ಲ.

    ಉತ್ತರ
    • ಸಾತ್ವಿಕ್'s avatar
      ಸಾತ್ವಿಕ್
      ಡಿಸೆ 16 2011

      ಜನರು ಹೇಗೆಲ್ಲಾ ಯೋಚಿಸುತ್ತಾರೆ ಅಂತ ಹೇಳೋಕೆ.ಒಂದು ಕೆಟ್ಟ ಯೋಚನೆಯೂ ಕೂಡ ಸಮಾಜಕ್ಕೆ ಹಾನಿ ತರಬಲ್ಲುದು. ನೀವು ಗ್ರಹಿಸಿದಂತೆ ಸಮಸ್ಯೆಯು ಅಷ್ಟು ಸರಳ ರೇಖಾತ್ಮಕವಾಗಿದ್ದರೆ ಲೇಖನದ ಕೊನೆಯ ಸಾಲು ಹೇಗೂ ಉಂಟಲ್ಲ. 🙂
      ಸಾತ್ವಿಕ್

      ಉತ್ತರ
    • ಅರವಿಂದ್'s avatar
      ಡಿಸೆ 16 2011

      ಬಾಲಚಂದ್ರರವರೇ,,
      ನೀವು ಯಾಕೋ ಪ್ರತಿಕ್ರಿಯೆಗೆ ತುಂಬಾ ಶ್ರಮ ತಗೋಂಡ್ರಿ ಅನ್ಸೋಲ್ವೆ.

      🙂

      ಅರವಿಂದ್

      ಉತ್ತರ
    • Bindu's avatar
      ಡಿಸೆ 16 2011

      ಈ ಲೇಖನ ಓದಿ, ಅನಿಸಿಕೆಗಳನ್ನು ಓದಿ, ಈ ರೀತಿಯ ವಿಚಾರ ಹೊಂದಿರುವುವರು ಸ್ವಲ್ಪ ಆತ್ಮಾವಲೋಕನ ಮಾಡಲಿ ಎಂದು. ನಿಮಗೆ ಬೇಡದಿದ್ದರೆ ಬಿಡಿ, ನಾವು ಇದ್ದೀವಿ ಓದಿ ಪ್ರತಿಕ್ರಯಿಸಲು. ಸುಮ್ಮನೆ ಐದು ಸಾಲು ಬರೆದು, ನಿಮ್ಮ ಸಮಯ ಏಕೆ ವ್ಯರ್ಥ ಮಾಡಿದಿರಿ?

      ಉತ್ತರ
      • Balachandra's avatar
        Balachandra
        ಡಿಸೆ 19 2011

        @Bindu,
        ನಾನೂ ನನ್ನ ಅನಿಸಿಕೆ ಹೇಳ್ದೆ ಅಷ್ಟೇ. 🙂 …ಅಂತವರು ಯಾವತ್ತೂ ಆತ್ಮಾವಲೋಕನ ಮಾಡಿಕೊಳ್ಳಲಾರರು. ಅವರ ಬೇಡಿಕೆಗಳಿಗೆ ಸೊಪ್ಪು ಹಾಕದಿದ್ದರೆ, ಯಾರೂ ಹೆಣ್ಣು ಕೊಡದಿದ್ರೆ ತಾನಾಗಿಯೇ ಸುಮ್ಮನಾಗುತ್ತಾರೆ. ಇನ್ನು ಅಂತಹ ಬೇಡಿಕೆಗಳನ್ನು ಗೊತ್ತಿದ್ದೂ ಹೆನ್ನುಕೊಡುತ್ತಾರೆಂದರೆ ಅವರಲ್ಲಿ ಇನ್ನೇನೋ ಸ್ವಾರ್ಥ ಇರಬಹುದು, ಅಥವ ನ್ಯೂನ್ಯತೆ ಇದೆ ಎಂದು ಅರ್ಥ.

        ಉತ್ತರ
  6. abhi082941@gmail.com's avatar
    ಡಿಸೆ 16 2011

    ಸಮಸ್ಯೆ ಬಾಲಚ೦ದ್ರರವರಿಗೆ ಹೆಣ್ಣು ಮಗು ಹುಟ್ಟಿದರೆ ಗೊತ್ತಾಗುತ್ತೆ, ಆಗ ಅವರೆ ಒ೦ದು ಲೇಖನ ಬರಿಯಬಹುದು!

    ಉತ್ತರ
    • Balachandra's avatar
      Balachandra
      ಡಿಸೆ 19 2011

      @abhi082941,
      ಸ್ವಾಮೀ ನಮಗೆ ಹೆಣ್ಣು ಮಗುವಿದ್ರೆ ಇಂತಹ ಬೇಡಿಕೆದಾರರ ಬಗ್ಗೆ ಆಲೋಚಿಸಿ, ಚರ್ಚಿಸಿ ನಮ್ಮ ಸಮಯವನ್ನು ವ್ಯರ್ಥ ಮಾಡ್ಕೋತಾನೆ ಇರಲಿಲ್ಲ. ಅದನ್ನೇ ಇಲ್ಲಿ ಹೇಳ್ದೆ ಅಷ್ಟೇ.

      ಉತ್ತರ
  7. kiran's avatar
    kiran
    ಡಿಸೆ 16 2011

    ನೀವು ಹೇಳಿರುವ ಮಾತಿನಲ್ಲಿ ಹೆಚ್ಚಿನ ಭಾಗದಲ್ಲಿ ನೀವು ಹೆಣ್ಣಿಗೆ ಪೂರಕವಾಗಿ ಮಾತನಾಡಿದ್ದೀರಿ. ಆದರೆ ಗಂಡಿನ ಮನೆಯವರ ಮತ್ತು ಸ್ವತ ಗಂಡಿನ ಪರಿಸ್ಥಿತಿ ಅರಿತುಕೊಳ್ಳದೆ ಹೇಳಿದಂತಿದೆ. ಉ.ದಾ: “ಇದರಿಂದಾಗಿ ಅಡುಗೆಭಟ್ಟರು, ಅಡಿಕೆ ಕೃಷಿಕರಾದ ವರರಿಗೆ ವಧುಗಳು ಲಭ್ಯವಿಲ್ಲ” ಇದು ನಿಜ. ಆದರೆ ಇದು “ಒಂದು ವೇಳೆ ಹೆಣ್ಣಿನ ಮನೆಯವರು ವರನು ಬೇರೆ ಮನೆ ಮಾಡಲಿ ನಾವು ಹೆಣ್ಣು ಕೊಡುತ್ತೇವೆ ಎಂದು ಅಹವಾಲು ಇಟ್ಟರೆ?” ಇದು ಈಗಾಗಲೇ ಚಾಲ್ತಿಯಲ್ಲಿದೆ. ಹೆಣ್ಣಿನ ಕಡೆಯವರು ಈಗ ಮನಸ್ಸಿಗೆ ಬಂದಂತೆ ಆಟ ಆಡುತ್ತಿದ್ದಾರೆ. ಬಹುಶ ಪರಿಸ್ಥಿತಿಯ ಉಪಯೋಗ (ದುರುಪಯೋಗ) ಪಡೆಯುವ ಹುನ್ನಾರ ಇರಬಹುದು. ನಾನು ಕೇಳಿದಂತೆ ಹೆಣ್ಣಿನ ಕಡೆಯವರ ಒಂದು ಡೈಲೋಗ್ ಹೀಗಿತ್ತು “ಹುಡುಗನ ಮನೇಲಿ ರಾಹು ಕೇತು ಇಲ್ಲದಿದ್ದಲ್ಲಿ ತುಂಬಾ ಒಳ್ಳೆಯದು”, (ಅಂದರೆ ಹುಡುಗನಿಗೆ ತಂದೆ ತಾಯಿ ಇಲ್ಲದಿದ್ದಲ್ಲಿ ತುಂಬಾ ಒಳ್ಳೆಯದು ಎಂದು). ಇಂತಹ ಕ್ರೂರ ಮನಸ್ಥಿತಿ ಹೆಣ್ಣಿನ ಕಡೆಯವರಿಗೆ ಬರಬಾರದು. ನಿಜ ಒಂದು ಸಮಯದಲ್ಲಿ ಹೆಣ್ಣು ಹೆತ್ತವರ ಗೋಳು ಕೇಳುವವರಿರಲಿಲ್ಲ, (ಈಗ ಆ ಪರಿಸ್ಥಿತಿ ಗಂಡು ಹೆತ್ತವರದ್ದಾಗಿದೆ), ಈಗ ಹೆಣ್ಣಿನವರಿಗೆ ಅಂತಹ ಪರಿಸ್ಥಿತಿ ಇಲ್ಲ, ಅದರ ಅರ್ಥ ಇರುವ ಖಟಿಣ ಸ್ಥಿತಿಯ ದುರುಪಯೋಗ ಮಾಡಿಕೊಳ್ಳುವುದಲ್ಲ. ನಿಜ ಹೇಳಬೇಕೆಂದರೆ ಬೇರೆಯವರ ಮನೆ ಉರಿಸಿ ತಾನು ಚಳಿ ಕಾಯಿಸಿಕೊಳ್ಳುವ ಮನಸ್ಥಿತಿ ಹೆಣ್ಣಿನವರಿಗೆ ಬಂದಿದೆ ಎಂದರೆ ತಪ್ಪಾಗಲಾರದು.

    ಉತ್ತರ
    • kiran's avatar
      kiran
      ಡಿಸೆ 16 2011

      ಅರವಿಂದ್ ಕೂಡ ಇದರಬಗ್ಗೆ ಮೇಲೆ ಹೇಳಿದ್ದಾರೆ. ಅರವಿಂದ್ ನೀವು ಕೇಳಿದ ಡೈಲೋಗ್ ನ ಇನ್ನೊಂದು ವರ್ಷನ್ ನಾನೂ ಕೇಳಿದ್ದೇನೆ.

      ಉತ್ತರ
    • ಸಾತ್ವಿಕ್'s avatar
      ಡಿಸೆ 16 2011

      ಕಿರಣ್,
      ನಾನು ಅಂತರಜಾತಿಯ ವಿವಾಹಗಳಲ್ಲಿನ ಪರಿಸ್ಥಿತಿಯನ್ನು ಮಾತ್ರ ವಿವರಿಸುವ ಪ್ರಯತ್ನ ಮಾಡಿದ್ದೇನೆ. ಸಾಮಾನ್ಯ ಮದುವೆಗಳ ವಧುವರರ ಅವರ ಮನೆಯವರ ಮನೋಭಾವವನ್ನು ಇಲ್ಲಿ ಚಿತ್ರಿಸುವ ಪ್ರಯತ್ನ ಮಾಡಿಲ್ಲ
      ಸಾತ್ವಿಕ್

      ಉತ್ತರ
  8. Ananda Prasad's avatar
    Ananda Prasad
    ಡಿಸೆ 16 2011

    ಬೇರೆ ಜಾತಿಯ ಹೆಣ್ಣನ್ನು ಮದುವೆಯಾಗಲು “ಅಬಕ” ಜಾತಿಯವರು ಹೆಣ್ಣು ತನ್ನ ತವರಿನ ಸಂಬಂದವನ್ನು ಶಾಶ್ವತವಾಗಿ ಕಡಿದುಕೊಳ್ಳಬೇಕು ಎಂಬ ಷರತ್ತು ವಿಧಿಸುವುದು ಸಮನ್ಜಸವೇನೂ ಅಲ್ಲ. ಹೀಗೆ ಷರತ್ತು ವಿಧಿಸಿದರೆ ಅದನ್ನು ಬಡತನದ ಕಾರಣ ಹಾಗೂ ಹಣಕ್ಕಾಗಿ ಕೆಲವರು ಒಪ್ಪಲೂಬಹುದು, ಆದರೆ ಇದು ಮಾನವೀಯ ಎನಿಸಿಕೊಳ್ಳುವುದಿಲ್ಲ. ಇಲ್ಲಿ ಕೆಲಸ ಮಾಡುತ್ತಿರುವುದು ಜಾತಿಯ ಮೇಲರಿಮೆ. ಕುಟುಂಬ ಯೋಜನೆ ನಮ್ಮ ರಾಷ್ಟ್ರದಲ್ಲಿ ಮಾತ್ರ ಇರುವುದಲ್ಲ, ಹಲವು ದೇಶಗಳಲ್ಲಿ ಇದೆ. ಇದನ್ನು ನಿಸರ್ಗಕ್ಕೆ ವಿರೋಧ ಎನ್ನಬಹುದಾದರೆ ಔಷಧ ಹಾಗೂ ವೈದ್ಯಕೀಯ ಸೌಲಭ್ಯದಿಂದ ಆಯಸ್ಸು ಹೆಚ್ಚಿಸಿಕೊಂಡಿರುವುದೂ ನಿಸರ್ಗಕ್ಕೆ ವಿರೋಧವಾಗಿದೆ ಎಂದು ಹೇಳಬೇಕಾಗುತ್ತದೆ. ಹೀಗಾಗಿಯೇ ಅಲ್ಲವೇ ಜನಸಂಖ್ಯೆ ಹೆಚ್ಚಾಗಿರುವುದು. ಇಲ್ಲದೆ ಹೋದರೆ ನಿಸರ್ಗ ನಿಯಮಗಳಿಗೆ ಅನುಗುಣವಾಗಿ ಜನಸಂಖ್ಯೆಯೂ ನಿಯಂತ್ರಣದಲ್ಲಿ ಇರುತ್ತಿತ್ತು. ಇಂಥ ಪರಿಸ್ಥಿತಿಗಳಿಂದಾಗಿ ಜಾತಿ ಸಂಕಿರಣ ನಡೆಯಲೇ ಬೇಕಾದ ಅನಿವಾರ್ಯತೆ ಇಂದು ತಲೆದೋರುತ್ತಿದೆ. ಇದನ್ನು “ಅಬಕ” ಜಾತಿಯವರು ಒಪ್ಪಿಕೊಳ್ಳದೇ ಹೋದರೆ ಆ ಜಾತಿಯೇ ನಿಧಾನವಾಗಿ ನಶಿಸಿ ಹೋಗಲಿದೆ.

    ಉತ್ತರ
  9. Bindu's avatar
    ಡಿಸೆ 16 2011

    ಮದುವೆ ವಿಷಯದಲ್ಲಿ ಎಲ್ಲ ಲೆಕ್ಕಗಳೂ ತಲೆಕೆಳಗಾಗುತ್ತವೆ. ಪರಸ್ಪರ ಸ್ನೇಹ ಗೌರವ ಇದ್ದರೆ ಎಲ್ಲವೂ ಸರಿಯಾಗುತ್ತದೆ. ಇಂತಹವರಿಗೆ ಎಲ್ಲಾದಕ್ಕೂ ಓ ಕೆ ಎಂದು, ನಂತರ ಗಂಡನ್ನೂ ತವರಿಗೆ ಕರೆದುಕೊಂಡು ಹೋಗುವಂತಹ ಹೆಣ್ಣೇ ಸಿಗುವುದು.

    ಉತ್ತರ
    • ಸಾತ್ವಿಕ್'s avatar
      ಸಾತ್ವಿಕ್
      ಡಿಸೆ 19 2011

      ಗಂಡು ಹೆಣ್ಣು ಪರಸ್ಪರ ಒಂದು ನಂಬಿಕೆಯ ತಳಹದಿಯ ಮೇಲೆ ನಿಂತು ಬದುಕುವುದಷ್ಟೇ ಮುಖ್ಯ. ಅದು ಹೊರತು ಮದುವೆ ಮೊದಲೆ ಕರಾರುಗಳನ್ನು ಜಾರಿಗೊಳಿಸುವುದು ಬಹುಶ: ಹಿಂದು ಧರ್ಮದಲ್ಲಿ ಇಲ್ಲ ಅನ್ನಿಸುತ್ತದೆ.
      ಸಾತ್ವಿಕ್

      ಉತ್ತರ
      • Balachandra's avatar
        Balachandra
        ಡಿಸೆ 19 2011

        Satvik,
        ಮೊದಲೇ ಕರಾರು ಮಾಡುವದು ನನಗೆ ಬಹಳ ಸೂಕ್ತವಾದ ವಿಚಾರ ಎನಿಸುತ್ತದೆ(ಅದು ಯಾವುದೇ ಧರ್ಮವಾದರೂ). ಯಾಕೆಂದರೆ ಕರಾರನ್ನು ಒಪ್ಪಿಕೊಳ್ಳುವಾಗ ಯೋಚನೆ ಮಾಡಿಯೇ ಒಪ್ಪಿಕೊಳ್ಳುತ್ತಾರೆ. ಮದುವೆಯ ನಂತರ ಹಾಗಿರಬೇಕು, ಹೀಗಿರಬೇಕು ಎಂದರೆ ಎರಡೂ ಕಡೆಯವರಿಗೂ ತೊಂದರೆ. ಇನ್ನು arranged marriage ಬಗ್ಗೆ ಹೇಳಬೇಕೆಂದರೆ ಅದು ಒಂಥರಾ ವ್ಯವಹಾರ ಅಥವಾ ವ್ಯಾಪಾರದಂತೆಯೇ. ಅಲ್ಲಿ ಎಲ್ಲರೂ materialist ಗಳು.ಕೆಲವೊಂದು ಸಲ love marriage ಗಳೂ ಸಹ.

        ಉತ್ತರ
  10. Balachandra's avatar
    Balachandra
    ಡಿಸೆ 19 2011

    ಇಲ್ಲ ಬಿಡಿ. ನಾವೇನೂ ಶ್ರಮ ತಗೊಂಡಿಲ್ಲ. ಧೂರ್ತ, ಸ್ವಾರ್ಥ ಆಲೋಚನೆ ಎಲ್ಲರಲ್ಲೂ ಇದ್ದೆ ಇರತ್ತೆ. ಮಾಡುವೆ ಮುಂಚೆನೆ ಹೇಳಿದ್ರೆ ಅನುಕೂಲ. ಮಾಡುವೆ ಆದ್ಮೇಲೆ ಈತರ ವರಾತ ತೆಗೆದರೆ ಕಷ್ಟ ಅಷ್ಟೇ. ಆಗ matter ನ್ನು ಸೀರಿಯಸ್ ಆಗಿ ತಗೊಬಹ್ದು. ಅಲ್ದಿದ್ರೆ ignore ಮಾಡಬಹುದು ಅಂದೆ ಅಷ್ಟೇ. ಮದ್ವೆ ಮುಂಚೆನೇ ಹೇಳಿದ್ರೆ ಯಾವ ಸಮಸ್ಯೆನೂ ಇರಲ್ಲ.

    ಉತ್ತರ
  11. ಸಾತ್ವಿಕ್'s avatar
    ಸಾತ್ವಿಕ್
    ಡಿಸೆ 19 2011

    ನಾನು ಲೇಖನ ಬರೆದ ಉದ್ದೇಶವು ಸಂತಾನಹರಣಗೊಂಡು ಇದೀಗ ಅವಶ್ಯವಲ್ಲದ ಕಾರಣಗಳಿಗಾಗಿ ಕಾಮೆಂಟ್ಸ್ ಗಳನ್ನು ಪಡೆಯುತ್ತಿದ್ದೆ. ಹೆಣ್ಣು ಮಕ್ಕಳು ಹೇಗೆ ಜಾತಿಯ ಕಾರಣದಿಂದ ತಮ್ಮ ಆಸೆಗಳನ್ನು ಒತ್ತಿಟ್ಟೂಕೊಳ್ಳಬೇಕಾಗುತ್ತದೆ ಎಂಬುದು ನನ್ನ ಲೇಖನದ ಧ್ಯೇಯವಾಗಿತ್ತು 🙂
    ಸಾತ್ವಿಕ್

    ಉತ್ತರ
    • Balachandra's avatar
      Balachandra
      ಡಿಸೆ 20 2011

      ಸಾತ್ವಿಕ್,
      ನಿಮ್ಮ ಲೇಖನದ ಧ್ಯೇಯ ನನಗೆ ಅರ್ಥ ಆಗ್ಲಿಲ್ಲ. ಯಾರು ಹೆಣ್ಣುಮಕ್ಕಳ ಆಸೆಗಳನ್ನು ಒತ್ತಿ ಇಟ್ಟುಕೊಳ್ಳುವಂತೆ ಹೇಳಿದವರು? ಯಾರೋ ಹುಚ್ಚರು ಅಂತಹ ಲಜ್ಜೆಗೇಡಿ ಕರಾರನ್ನು ಮುಂದಿಟ್ಟರೆ ಯಾರಾದರೂ ಯಾಕೆ ಒಪ್ಪಿಕೊಳ್ಳಬೇಕು ಹೇಳಿ?ಹಾಗೊಂದುವೇಳೆ ಒಪ್ಪಿಕೊಂಡರೆಂದರೆ ಅದೂ ಸಹಿತ ಇನ್ನೊದು ಯಾವುದೋ ಸ್ವಾರ್ಥದ ಕಾರಣದಿಂದಲೇ ಆಗಿರುತ್ತದೆ ಅಷ್ಟೇ. ಇನ್ನು ಒಂದುವೇಳೆ ಮದುವೆಯ ನಂತರ ಆ ಕರಾರನ್ನು ವಿಧಿಸಿದರೆ(ಮೊದಲು ತಿಳಿಸದೇ) ನಿಮ್ಮ ಲೇಖನದ ಧ್ಯೇಯ ಅರ್ಥಪೂರ್ಣವೆನಿಸುವದು ನಿಜ. ಯಾರೋ ಒಬ್ಬ 5 ರುಪಾಯಿ ಬೆಲೆಬಾಳುವ ಕಳಪೆ ವಸ್ತುವಿಗೆ 500 ಎಂದು ಹೇಳುತ್ತಾನೆ. ಹಾಗಂತ ನಾವು ನಮ್ಮ ಆಸೆಗಳನ್ನು ಬದಿಗೊತ್ತಿ 500 ಕೊಟ್ಟು ಆ ಕಳಪೆ ವಸ್ತುವನ್ನು ಕೊಂಡುಕೊಳ್ಳಬೇಕಾಗಿಲ್ಲ. ಪ್ರಪಂಚ ವಿಶಾಲವಾಗಿದೆ ಅಲ್ವ?

      ಉತ್ತರ
  12. ಸಾತ್ವಿಕ್'s avatar
    ಸಾತ್ವಿಕ್
    ಡಿಸೆ 20 2011

    ಬಾಲಚಂದ್ರ ಅವರೆ,
    ನಿಮ್ಮ ಮಾತುಗಳು ಕೆಲವು ಸಲ ಬಹಳ ಸರಳವಾಗಿ ವಿಷಯವನ್ನು ಪರಿಗಣಿಸಿ ಹೇಳುತ್ತಿದ್ದಿರೇನೋ ಎಂಬ ಭಾವನೆಯನ್ನು ತರಿಸುತ್ತವೆ.
    <>
    ಇಲ್ಲಿ ನೀವು ಹೇಳುವಂತೆ ಹೆಣ್ಣೊಬ್ಬಳು ತನಗೆ ಎಲ್ಲ ನಿರ್ಧಾರಗಳನ್ನು ತಾನೇ ತೆಗೆದುಕೊಳ್ಳುವಷ್ಟು ಸ್ವತಂತ್ರಳಾಗಿದ್ದಾಳೆ ಎನಿಸುತ್ತದೆಯೇ? ಬರಿ ದುಡಿಯುವ ಹೆಣ್ಣಿನ ಬಗ್ಗೆ ಯೋಚಿಸಬೇಡಿ. (ದುಡಿಯುವ ಹೆಣ್ಣಿಗೂ ನೂರಾರು ಬಂಧನಗಳಿವೆ)ಮನೆಯಲ್ಲಿಯೇ ಇರುವ ಸಾಕಷ್ಟು ಕಲಿಯುವ ಅವಕಾಶ ಸಿಗದ, ಯಾವುದೇ ರೀತಿಯಿಂದಲೂ ಸಮಾಜವನ್ನು ಎದುರಿಸಲು ಆಗದ ಹೆಣ್ಣು ಮಕ್ಕಳ ಬಗ್ಗ್ಗೆ ಯೋಚಿಸಿ. ನಗರದ ಹೆಣ್ಣು ಮಕ್ಕಳಿಗೂ ಹಳ್ಳಿಯ ಹೆಣ್ಣು ಮಕ್ಕಳಿಗೂ ಸಾಕಷ್ಟು ಭಿನ್ನತೆಇರುತ್ತದೆ.
    ಸಾತ್ವಿಕ್

    ಉತ್ತರ
    • Balachandra's avatar
      Balachandra
      ಡಿಸೆ 20 2011

      ನಿಜ. ಹಳ್ಳಿಗಳಲ್ಲಿ ಆ ಪರಿಸ್ಥಿತಿ ಈಗಲೂ ಇದ್ದಿರಬಹುದು. ಆದರೆ ಮದುವೆಯನ್ನು ತಂದೆ ತಾಯಂದಿರೇ ನಿರ್ಧಾರ ಮಾಡುತ್ತಾರೆ ಎಂದಿಟ್ಟುಕೊಳ್ಳೋಣ. ಅವರಾದರೂ ಯಾಕೆ ತಮ್ಮ ಮಗಳನ್ನು ತಾವೇ ದೂರ ಮಾಡಿಕೊಳ್ಳುತ್ತಾರೆ?ಅಥವಾ ಇನ್ಯಾವುದಾದರೂ ಆಸೆಗೆ ಗಂಟು ಬಿದ್ದು ತಮ್ಮ ಮಗಳನ್ನು ಅಂತಹ ಬಾಣಲೆಗೆ ದೂಡುತ್ತಾರ?ಹಾಗೆ ಮಾಡಿದ್ರೆ ತಪ್ಪು ಯಾರದು?ಒಂದು ವೇಳೆ ಅವರವರ community ಲಿ ಇರುವ ವರದಕ್ಷಿಣೆಯಿಂದ ಪಾರಾಗಲು ಅಸಹಾಯಕ ತಂದೆ ತಾಯಿಗಳು ಈ ದಾರಿಯನ್ನು ಕಂಡುಕೊಂಡರೆ ಸಮಸ್ಯೆಯ ನಿಜವಾದ ರೂಪವನ್ನು ಇನ್ನೊಂದು dimension ನಿಂದ ನೋಡಬೇಕಾಗುತ್ತದೆ. ಅಂದರೆ ಸಮಸ್ಯೆ ಇರುವದು ‘ವರದಕ್ಷಿಣೆ’ಯ ರೂಪದಲ್ಲಿ ಎಂದರ್ಥ. ಅಂದರೆ, ತಂದೆ-ತಾಯಂದಿರು ಅಂತಹ ಕರಾರುಗಳನ್ನು ಒಪ್ಪಿಕೊಂಡು ತಮ್ಮ ಮಕ್ಕಳನ್ನು ಶಾಶ್ವತವಾಗಿಯೂ ದೂರ ಇಡಲು ಸಿದ್ಧರಿದ್ದಾರೆ ಎಂದರೆ ಆ ಸಮಸ್ಯೆಯ ಆಳವನ್ನು ಅವಲೋಕಿಸಬಹುದು. ವರದಕ್ಷಿಣೆ ಒಂದು ಉದಾಹರಣೆ ಅಷ್ಟೇ. ಇಂತಹ ಕರಾರು ವಿಧಿಸುವವರು ಇಂತಹ ಸಮಸ್ಯೆಗಳನ್ನು ತಂತಮ್ಮ ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳುತ್ತಾರೆ. ಯಾವಾಗ ಸಮಸ್ಯೆಗಳು ನಾಶವಾಗುತ್ತದೆಯೋ ಆಗ ಈ ಕರಾರು ವಿಧಿಸುವ ಬಾಲಗಳೂ ಮುಚ್ಚಿಕೊಳ್ಳುತ್ತವೆ. ಇನ್ನು ಸ್ವಾರ್ಥಕ್ಕೋಸ್ಕರ ತಮ್ಮ ಹೆಣ್ಣುಮಕ್ಕಳನ್ನು ಬಲಿ ಕೊಟ್ರೆ ತಂದೆ-ತಾಯಿಗಳಲ್ಲದೆ ಇನ್ನು ಯಾರು ಹೊಣೆ?ಅಂತಹ ಪಾಲಕರ ಜೊತೆ ಹೆಣ್ಣುಮಕ್ಕಳು ಸಂಬಂಧ ಕಡಿದುಕೊಲ್ಲುವದೆ ಸರಿ. ಯಾಕೆಂದರೆ ಮದುವೆಯ ಆಯ್ಕೆಯನ್ನು ಮಕ್ಕಳಿಗೆ ಕೊಡದಿರುವದು ಮೊದಲನೇ ತಪ್ಪು. ತಮ್ಮ ಸ್ವಾರ್ಥಕ್ಕೆ ಮಕ್ಕಳನ್ನು ಉಪಯೋಗಿಸಿಕೊಳ್ಳುವದು ಎರಡನೇ ತಪ್ಪು.

      ಉತ್ತರ
  13. ಸಾತ್ವಿಕ್'s avatar
    ಸಾತ್ವಿಕ್
    ಡಿಸೆ 20 2011

    ಬಾಲಚಂದ್ರ,
    ನಿಮ್ಮ ವಾದ ನಾನು ಮೇಲೆ ಹೇಳಿದ ಸಮಸ್ಯೆಯೇ ಅಲ್ಲವೆಂದೇ ಹೇಳುವುದಾಗಿದೆಯೇ? ನೀವು ಪರೋಕ್ಷವಾಗಿ ಇಂಥ ಕೃತ್ಯಗಳನ್ನು ಬೆಂಬಲಿಸುತ್ತಿದ್ದೀರಿ ಎನಿಸುತ್ತಿದೆ. ನೀವು ಹೇಳಿದಂತೆ ವರದಕ್ಷಿಣೆಯ ಸಮಸ್ಯೆಯಿಂದ ಹೆಣ್ಣುಮಕ್ಕಳು ಮದುವೆಯಾಗದೇ ಉಳಿದರೆ ಅದು ಬೇರೆ ರೀತಿಯ ಸಮಸ್ಯೆಯಾಗುತ್ತದೆ. ಅದರ ಬಗ್ಗೆ ಬೇರೊಂದು ಲೇಖನದಲ್ಲಿ ಬರೆಯುವೆ. ಆದರೆ ಇಲ್ಲಿ ನೀವು ಅಮಾನವೀಯ ಕೃತ್ಯದ ಫಲವನ್ನು ಸಂತ್ರಾಸ್ತರ ತಲೆಗೆ ಕಟ್ಟುವ ಪ್ರಯತ್ನ ಮಾಡುತ್ತಿದ್ದೀರಿ. ಯಾವುದೇ ಕಾರಣಕ್ಕಾಗಿ ಆಗಲಿ ಅದು ಅಮಾನವೀಯ ಕೃತ್ಯವೇ ಎಂಬುದು ನನ್ನ ನಂಬಿಕೆ.
    ಸಾತ್ವಿಕ್

    ಉತ್ತರ
    • Balachandra's avatar
      Balachandra
      ಡಿಸೆ 20 2011

      ನಾನು ಅಂತಹ ಕ್ರತ್ಯಗಳನ್ನ ಬೆಂಬಲಿಸುತ್ತಿದ್ದೇನ?ಯಾವ ಆಧಾರದ ಮೇಲೆ ಹೇಳ್ತಿದ್ದೀರ?ನಾನು ತಾರ್ಕಿಕವಾಗಿ ಸಮಸ್ಯೆಯ ಬೇರನ್ನು ಹುಡುಕುತ್ತಿದ್ದೇನೆ ವಿನಃ ಯಾವುದನ್ನೇ ಆಗಲಿ ಬೆಂಬಲಿಸುವ ಪ್ರಯತ್ನ ಮಾಡಿಲ್ಲ. ಇಲ್ಲಿ ವರದಕ್ಷಿಣೆಯೇ ಒಂದು ಸಮಸ್ಯೆ ಎಂದು ಹೇಳಿಲ್ಲ. ಆದರೆ ಈ ಸಂಪೂರ್ಣ ಅಸಹಜ ಸಾಮಾಜಿಕ ಬೆಳವಣಿಗೆಗೆ(ಅಂತಹ ಅಮಾನವೀಯ ಕರಾರು ವಿಧಿಸುವಿಕೆ) ಮೂಲ ಕಾರಣ ಹೆಣ್ಣಿನ ತಂದೆ ತಾಯಂದಿರ ಸ್ವಾರ್ಥವೋ ಅಥವಾ ಅವರಲ್ಲಿನ ಅಸಹಾಯಕತೆಯೋ ಇರುತ್ತದೆ. ಈ ಮೂಲ ಕಾರಣವೇ ಸಮಸ್ಯೆಯ ಕೇಂದ್ರ ಬಿಂದು. ತಾರ್ಕಿಕವಾಗಿ ವಿಶ್ಲೇಷಿಸಿದಾಗ ನಾವು ಸಮಸ್ಯೆಯನ್ನು ಬಗೆಹರಿಸಲು ಅದರ ಮೂಲ ಬಿಂದುವನ್ನು ತೊಡೆದು ಹಾಕಲು ಪ್ರಯತ್ನಿಸಬೇಕೆ ವಿನಃ ಉಳಿದವು objective ಎನಿಸಿಕೊಳ್ಳುವದಿಲ್ಲ. ಯಾಕೆಂದರೆ ಅವು ಯಾವುದೋ ಒಂದು cause ನ effect ಆಗಿರುತ್ತದೆ. ಇಲ್ಲಿ ತಂದೆ ತಾಯಿಗಳು ಯಾವ ಕಾರಣದಿಂದ ತಮ್ಮ ಮಗಳನ್ನು ಅಂತಹ ಜನರಿಗೆ ಕೊಡುತ್ತಾರೆ ಎಂಬುದೇ ಮುಖ್ಯ. ಇನ್ನು ತಂದೆ ತಾಯಿಗಳ ತಲೆ ಮೇಲೆ ಕಟ್ಟುತ್ತಿದ್ದೇನೆ ಎಂದು ಹೇಳುತ್ತೀರಾ. ಹೌದು ಅಂತಹ ತಂದೆ ತಾಯಿಗಳ ಮೇಲೆ ಕಟ್ಟಾ ಬೇಕಾದ್ದೇ. ಅವರೇ ಅದಕ್ಕೆ ಹೊಣೆ. ಕಾರಣವನ್ನೂ ನೀಡಿದ್ದೇನೆ.ಒಂದು ಸಣ್ಣ ಉದಾರಣೆ ಕೊಡುತ್ತೇನೆ. ಡೆಲ್ಲಿಯಲ್ಲಿ ಇತ್ತೀಚೆಗೆ Maruthi Omini ಯನ್ನು ನಿಷೇದಿಸುವಂತೆ ತೀರ್ಮಾನಿಸಲಾಯಿತು(ಆನಂತರ ನಿಷೆಧಿಸಿದರೋ ಇಲ್ಲವೋ ಗೊತ್ತಿಲ್ಲ).ಯಾಕೆಂದರೆ Maruthi Omini ಕಿಡ್ನಾಪ್ ಮಾಡಲು ಬಹಳ ಸಹಕಾರಿ, ಇದರಿಂದ ಕಿಡ್ನಾಪ್ ಘಟನೆಗಳು ಬಹಳ ಜರುಗಬಹುದು ಎಂದು. ಇದನ್ನು ಓದಿ ನಂಗೆ ನಗುವುದೋ ಅಳುವುದೋ ಗೊತ್ತಾಗಲಿಲ್ಲ. ಯಾಕೆಂದರೆ ಕಿಡ್ನಾಪ್ ಘಟನೆಯನ್ನು ತಡೆಯಲು ಸೆಕ್ಯೂರಿಟಿ ಬಗ್ಗೆ ಗಮನ ಹರಿಸಬೇಕೆಂದಾಗಲೀ, ಅಥವಾ ಇನ್ನಿತರ ಕಾರ್ಯಾಚರಣೆಯ ಬಗೆಗೆ ಆಲೋಚಿಸದೆ ಇಂತಹ ಹುಚ್ಚು ನಿರ್ಧಾರ ನೋಡಿ ನಮ್ಮ ರಾಜಕಾರಣಿಗಳ logical analysis ಬಗ್ಗೆ ಆಶ್ಚರ್ಯ ಉಂಟಾಯಿತು.ಯಾಕೆಂದರೆ Maruthi Omini ban ಮಾಡಿದರೆ ಕಿಡ್ನಾಪ್ ಮಾಡುವವನು ಬೇರೆ ವಿಧಾನ ಅನುಸರಿಸುತ್ತಾನೆ. ಹಾಗೆ. ಇಲ್ಲಿಯೂ ಸಹ.

      ಉತ್ತರ
  14. mahendra's avatar
    mahendra
    ಡಿಸೆ 20 2011

    good satvik

    ಉತ್ತರ

Leave a reply to Ananda Prasad ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments